Thursday, February 21, 2008

ಜೋಧಾ ಯಾರು?


ಇತಿಹಾಸದಲ್ಲಿನ ವಿಷಯಗಳೇ ಹೆಚ್ಚು ಬಾರಿ ವಿವಾದಕ್ಕೆ ಒಳಗಾಗುವುದು, ಅದು ನಿರಂತರ, ಯಾಕೆಂದರೆ ಇತಿಹಾಸ ಅಂದರೆ ಇತಿ-ಹೀಗೆ, ಹಾಸ-ಆಗಿತ್ತು ಎಂಬುದಾಗಿ ಅರ್ಥ. ಆದರೆ ಭಾರತದ ಇತಿಹಾಸದಲ್ಲಿ ನೈಜ ಇತಿಹಾಸ ಕೂಡ ಸಮಾಧಿಯಾಗಿದೆ. ಎಡ ಪಂಥೀಯ, ಬಲುಪಂಥೀಯ ಇತಿಹಾಸಕಾರರ ದೃಷ್ಟಿಕೋನಗಳಿಂದ ಲಭ್ಯವಿರುವ ಇತಿಹಾಸಗಳು ಒಂದೊಂದು ಕಥೆ ಹೇಳುತ್ತವೆ, ನಾವು ಯಾವುದನ್ನು ನಂಬಬೇಕು ಎಂಬ ಗೊಂದಲ ಮಾತ್ರ ನಮಗೆ ಉಳಿಯುವಂತಾದ್ದು.

ರಾಮನೂ ಸುಳ್ಳು, ರಾಮಾಯಣನೂ ಸುಳ್ಳು, ರಾಮ ಸೇತು ಸುಳ್ಳು, ಟಿಪ್ಪು ಕನ್ನಡ ವಿರೋಧಿ, ಅಲ್ಲ ಆತ ಕನ್ನಡ ಪರ, ಕೃಷ್ಣ ದೇವರಾಯನ ಕಾಲದಲ್ಲಿ ಬೀದಿ, ಬೀದಿಗಳಲ್ಲಿ ಚಿನ್ನಾಭರಣ ಮಾರಲಾಗುತ್ತಿತ್ತು, ಇಲ್ಲ ಅವೆಲ್ಲ ಸುಳ್ಳು, ಅವರೆಲ್ಲ ಪುಕ್ಕಲು ರಾಜರಾಗಿ ದ್ದರು, ಪುಲಕೇಶಿ ಪುಕ್ಕಲು ರಾಜನಾಗಿದ್ದ, ತಾಜ್ ಮಹಲ್ ಹಿಂದೂಗಳ ಶಿವ ದೇವಾಲಯವಾಗಿತ್ತು....ಹೀಗೆ ಇತಿಹಾಸದ ಎಲ್ಲವೂ ವಾದ-ವಿವಾದಗಳಿಗೆ ಎಡೆಯಾಗುತ್ತಲೇ ಇರುತ್ತದೆ.

ಇದೀಗ ವಿವಾದಕ್ಕೆ ಗ್ರಾಸವಾಗಿರುವುದು ಜೋಧಾ-ಅಕ್ಬರ್ ಐತಿಹಾಸಿಕ ಕಥೆಯ ಸಿನಿಮಾ. ಈ ಚಿತ್ರದಲ್ಲಿ ಜೋಧಾಳನ್ನು ಅಕ್ಬರನ ಪತ್ನಿಯನ್ನಾಗಿ ಚಿತ್ರಿಸಲಾಗಿದೆ. ಆದರೆ ರಜಪೂತ ಕೆಲವು ಸಂಘಟನೆಗಳು, ಜೋಧಾ ಅಕ್ಬರನ ಪತ್ನಿಯಲ್ಲ, ಪುತ್ರ ಸಲೀಂ(ಜಹಾಂ ಗೀರ್)ನ ಪತ್ನಿ ಎಂಬುದಾಗಿ ಆರೋಪಿಸುತ್ತಿದ್ದಾರೆ.ಆದರೆ ಇತಿಹಾಸ ಪುಟಗಳಲ್ಲಿ ದಾಖಲಾಗಿರುವ ಅಂಶಗಳನ್ನ ಗಮನಿಸಿ:

1542 ಅಕ್ಟೋಬರ್ 1 ರಂದು ಅಂಬರದ ರಾಜ ಬಾರಾಮಲ್‌‌ನ ಪ್ರಥಮ ಪುತ್ರಿಯಾಗಿ ಜನಿಸಿದವಳು ಹೀರಾ ಕುನ್ವರಿ (ಜೋಧಾ) ಇದು ಆಕೆಯ ಮೊದಲ ಹೆಸರು. 1562 ಜನವರಿ 20ರಂದು ಮೊಗಲ್ ದೊರೆ ಅಕ್ಬರ್ ಜೈಪುರ್ ಸಮೀಪದ ಸಾಂಭಾರ್ ಎಂಬಲ್ಲಿ ಹೀರಾ ಕುನ್ವರ್‌‌ಳನ್ನು ಮದುವೆಯಾಗಿದ್ದ. ನಂತರ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ ಬಳಿಕ ಹಿರಾ ಹೆಸರನ್ನು ಮಾರಿಮ್ ಉಜ್ ಜಮಾನಿ ಎಂಬುದಾಗಿ ಬದಲಾಯಿಸಲಾಗಿತ್ತು.

ಈಕೆ ಅಕ್ಬರನ ಆಸ್ಥಾನಕವಿಗಳಲ್ಲಿ ಒಬ್ಬನಾಗಿದ್ದ ಭಗವಾನ್‌‌ದಾಸ್ ತಂಗಿ. ಜೋಧಾ ಅಕ್ಬರನ ಮೂವರು ರಾಣಿಯರಲ್ಲಿ ಒಬ್ಬಳಗಾ ಗಿದ್ದಳು, ಮತ್ತು ಪ್ರಥಮ ರಜಪೂತ ಪತ್ನಿಯಾಗಿದ್ದಳು. 1586ರಲ್ಲಿ ಜಮಾನಿ (ಜೋಧಾ) ಯುವರಾಜ ಸಲೀಂ (ನಂತರದ ಹೆಸರು ಜಹಾಂಗೀರ್) ಮದುವೆ ಏರ್ಪಾಡು ಮಾಡಿ, ಮಾನ್‌‌ಸಿಂಗ್‌‌ನ ತಂಗಿ ಮಾನ್ಮಥಿಯೊಂದಿಗೆ ವಿವಾಹ ನಡೆಸಲಾಗುತ್ತದೆ. ಹೀರಾ(ಜೋಧಾ) 1611ರಲ್ಲಿ ಸಾವನ್ನಪ್ಪಿದ್ದಳು.

ಆಕೆಗಾಗಿ ಜಹಾಂಗೀರ್ 1611ರಲ್ಲಿ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿ ಬಳಿಯ ಫತೆಪುರ್ ಸಿಕ್ರಿಯಲ್ಲಿ ಸ್ಮಾರಕವನ್ನು ಕಟ್ಟಿಸಿದ್ದ. ಆದರೆ ಗೊಂದಲ ಆರಂಭವಾಗಿದ್ದು, ಅಕ್ಬರನ ಜೀವನಚರಿತ್ರೆಯ ಅಕ್ಬರ್‌‌ನಾಮಾದಲ್ಲಾಗಲಿ, ಜಹಾಂಗೀರ್‌‌ನ ತುಜ್ಕ್ ಎ ಜಹಾಂಗೀರಿಯಲ್ಲಾಗಲಿ ಎಲ್ಲೂ ಜೋಧಾಬಾಯ್ ಎಂಬ ಹೆಸರು ನಮೂದಾಗಿಲ್ಲ, ಎಲ್ಲೆಡೆ ಮಾರಿಮ್ ಉಜ್ ಜಮಾನಿ ಅಂತಲೇ ಉಲ್ಲೇಖಿಸಲಾಗಿದೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಪ್ರೊ.ಶಿರನ್ ಮಾನ್ವಿ ಅವರ ಪ್ರಕಾರ, 18-19ನೇ ಶತಮಾನದ ಇತಿಹಾಸಕಾರರು ಪ್ರಥಮವಾಗಿ ಜೋಧಾಬಾಯ್ ಹೆಸರನ್ನು ನಮೂದಿಸಿದ್ದರು ಎನ್ನುತ್ತಾರೆ.

ಪಾಟ್ನಾ ಖುದಾ ಭಕ್ಷ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ, ಇತಿಹಾಸ ತಜ್ಞ ಇಮ್ತಿಯಾಜ್ ಅಹ್ಮದ್ ಅವರು, ಅಕ್ಬರನ ಪತ್ನಿ ಜೋಧಾ ಎಂಬುದಾಗಿ ಪ್ರಥಮವಾಗಿ ನೌಕಾಪಡೆಯ ಕಿರಿಯ ಅಧಿಕಾರಿ ಕರ್ನಲ್ ಜೆಮ್ಸ್ ಟೋಡ್ ಅವರು ಅನ್ನಾಲ್ಸ್ ಅಂಡ್ ಆಂಟಿಕ್ವಿಟಿಸ್ ಆಫ್ ರಾಜಸ್ಥಾನ್ ಪುಸ್ತಕದಲ್ಲಿ ಉಲ್ಲೇಖಿಸಿದ್ದರು. ಆದರೆ ಟೋಡ್ ಒಬ್ಬ ಇತಿಹಾಸಕಾರನಲ್ಲ, ಜನಪದ ಸಾಹಿತ್ಯದ ಅಂಶ ಪಡೆದು ದಾಖಲಿಸಿದ್ದಾನೆ ಎಂಬುದಾಗಿ ಹೇಳುತ್ತಾರೆ.

ಅಲ್ಲದೇ ಮೊಗಲ್ ಎ ಅಜಾಮ್ ಎಂಬ ಸಿನಿಮಾದ ಬಳಿಕ ಜೋಧಾ-ಅಕ್ಬರ್ ಹೆಸರು ಹೆಚ್ಚು ಜನಪ್ರಿಯವಾಯಿತು. ಜೋಧಾ ಬಾ ಯ್ ಎಂಬುದು ಅಕ್ಬರನ ರಜಪೂತ ರಾಣಿಯ ಹೆಸರಲ್ಲ, ಇದು ಜಹಾಂಗೀರನ ಪತ್ನಿಯ ಎಂಬುದು ಎಂ.ಎನ್.ಫಾರುಕಿ ವಾದ. ಜೋಧಾ ಬಾಯ್ ಅಥವಾ ಜೋಧಿ ಬೀಬಿ ಉದಯ ಸಿಂಗ್‌‌ನ ಪುತ್ರಿ ಮತ್ತು ಜಹಾಂಗೀರನ ಪತ್ನಿ ,ಖುರ್ರಮ್‌‌ನ (ಷಹಜಹಾನ್) ತಾ ಯಿ ಎಂಬುದು ಇತಿಹಾಸಕಾರ ಗೋಸಾಯ್ ವಿವರಣೆ.ಜಹಾಂಗೀರ್ ಜನಿಸಿದ್ದು 1569 ಅಗೋಸ್ಟ್ 31 ರಲ್ಲಿ, ಜೋಧಾ ಜನಿಸಿದ್ದು, 1542ರಲ್ಲಿ ಈ ಅಂಕಿ-ಅಂಶದ ಪ್ರಕಾರ ನೋಡಿದರೂ ಜೋಧಾ ಜಹಾಂಗೀರ್‌‌ಗಿಂತ 27ವರ್ಷ ಹಿರಿಯವಳು.

ಆದರೂ ಇತಿಹಾಸಕಾರರಲ್ಲಿ ಅನೇಕರೂ ಜೋಧಾಬಾಯ್ ಅಕ್ಬರನ ಪತ್ನಿ ಎಂಬುದಾಗಿಯೇ ದಾಖಲಿಸಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು ಎಂದು ನಿರ್ಧರಿಸುವುದು ಇನ್ನೂ ಗೊಂದಲದ ವಿಷಯವಾಗಿದೆ.

No comments: