Thursday, March 27, 2008

ಬದುಕಿದು ಜಟಕಾ ಬಂಡಿ...


ಮನುಷ್ಯನ ಬದುಕು ಹಾವು-ಏಣಿ ಆಟ ಇದ್ದ ಹಾಗೆ, ಆಸೆ, ಆಕಾಂಕ್ಷೆಗಳ ಬೆನ್ನತ್ತಿ ಹೋಗುತ್ತಿರುವಾಗಲೇ ಧುತ್ತನೆ ಎದುರಾಗುವ ಘಟನೆಗಳು ನಮ್ಮ ಜೀವನದ ಗತಿಯನ್ನೇ ಬದಲಿಸಿಬಿಡುತ್ತದೆ. ಅಂತಹ ನೂರಾರು ಘಟನೆಗಳು ನಮ್ಮ ಸುತ್ತ-ಮುತ್ತ ನಡೆಯುತ್ತಲೇ ಇರುತ್ತದೆ. ನಾನೀಗ ಹೇಳ ಹೊರಟಿರುವುದು ಮನಸ್ಸಿನ ತುಂಬಾ ಕನಸುಗಳನ್ನೆ ತುಂಬಿಕೊಂಡು ಸ್ವಪ್ನಲೋಕದಲ್ಲಿ ವಿಹರಿಸುತ್ತ ಇದ್ದ ಹೆಣ್ಣೊಬ್ಬಳ ಕಥಾನಕ..

ಆ ಮನೆಯಲ್ಲಿ ಒಂದು ತಿಂಗಳಿನಿಂದ ಸಂಭ್ರಮವೋ ಸಂಭ್ರಮ, ಯಾಕೆಂದರೆ ಆ ಮನೆಯಲ್ಲಿ ಮದುವೆ ಕಾರ್ಯ ಕ್ರಮ ನಡೆಯುವುದರಲ್ಲಿತ್ತು. ಆಮಂತ್ರಣ ಪತ್ರಿಕೆ ಹಂಚುವುದರಿಂದ ಹಿಡಿದು (ವರದಕ್ಷಿಣೆ, ಖರ್ಚು ವೆಚ್ಚಗಳ ತಲೆಬಿಸಿಯ ನಡುವೆಯೂ) ಪ್ರತಿಯೊಂದು ಕೆಲಸದಲ್ಲಿ ಮನೆಯ ಸದಸ್ಯರೆಲ್ಲ ತೊಡಗಿಕೊಂಡಿದ್ದರು. ಬಂಧು-ಮಿತ್ರರಿಗೆ, ಊರಿನವರಿಗೆ ಹೀಗೆ ಎಲ್ಲರಿಗೂ ಮದುವೆಗಾಗಿ ಆಮಂತ್ರಣ ಪತ್ರಿಕೆ ಹಂಚಲಾಗಿತ್ತು.

ಹಸೆಮಣೆ ಏರುವ ದಿನ ಹತ್ತಿರ ಬರುತ್ತಿದ್ದಂತೆಲ್ಲಾ, ಮನಸ್ಸಿನ ಮೂಸೆಯಲ್ಲಿ ಆಸೆಗಳು ಗರಿಗೆದರತೊಡಗಿದ್ದವು. (ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾಲ ಮಾಡಿ ಮದುವೆ ಮಾಡಿಸುವುದೇ ಹೆಚ್ಚು, ಅಲ್ಲದೆ ಮಗಳು ಗಂಡನ ಮನೆ ಸೇರಿ ಅಲ್ಲಿಯಾದರು ಸುಖದಿಂದ ಇರುತ್ತಾಳಲ್ಲ (!) ಎಂಬ ಸಂತೋಷ ಹುಡುಗಿಯ ತಂದೆ-ತಾಯಿ ಯರದ್ದು.) ನೋಡ, ನೋಡುತ್ತಿದ್ದಂತೆ ಮದುವೆ ದಿನ ಬಂದೆ ಬಿಟ್ಟಿತ್ತು, ದೂರದ ಬಂಧುಗಳು, ನೆಂಟರಿಷ್ಟರು ಬಂದು ಮನೆಯಲ್ಲಿ ಜಮಾಯಿಸಿದ್ದರು.

ಮರುದಿನ ಬೆಳಿಗ್ಗೆ ಮದುವೆ,ರಾತ್ರಿ ಇಡೀ ಹೆಣ್ಣಿನ ಹಾಗೂ ಗಂಡಿನ ಮನೆಯಲ್ಲಿ ತರಾತುರಿಯ ಕೆಲಸ. ಇತ್ತ ವರನ ಮನೆಯಲ್ಲಿ ಮನೆಯವರೆಲ್ಲ ಮನೆಯ ಚಾವಡಿಯ ಸಮೀಪ ನಿಂತು ಮಾತನಾಡುತ್ತಿದ್ದರು, ಆಗ ಸುಮಾರು 10ಗಂಟೆ ರಾತ್ರಿಯಾಗಿದ್ದಿರಬಹುದು, ಯಾರೋ ಹೇಳಿದ ಹಾಸ್ಯಕ್ಕೆ 'ಮದುಮಗ' ನಗುತ್ತಿದ್ದ. ಆ ಸಂದರ್ಭದಲ್ಲೇ ಮರೆಯಿಂದ ತೂರಿಬಂದ ಕಾಡತೂಸು ವರನ ಬೆನ್ನಿನ ಮೂಲಕ ಎದೆಯನ್ನ ಸೀಳಿ ಹಾಕಿತ್ತು.

ಮದುವೆ ಮನೆಯಾಗಿ ಶೃಂಗರಿಸಿದ್ದ ತುಳಸಿಕಟ್ಟೆ ಎದುರುಗಡೆನೆ ರಕ್ತದೋಕುಳಿಯಲ್ಲಿ ವರ ಬೋರಲಾಗಿ ಬಿದ್ದಿದ್ದ. ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು, ಇತ್ತ ಗುಂಡು ಹೊಡೆದ ಖದೀಮ ಕಾಡಿನ ದಾರಿಯ ಓಟ ಕಿತ್ತಿದ್ದ. ಬೆಳಗಿನ ಜಾವದಲ್ಲಿ ವಧುವಿನ ಮನೆಗೆ ಸುದ್ದಿ ತಲುಪಿದಾಗ ವಧುವಿನ ಮನೆಯಲ್ಲಿ ಸ್ಮಶಾನ ಮೌನ, ರೋಧನ, ನವದಾಂಪತ್ಯದ ಕನಸು ಕಟ್ಟಿಕೊಂಡಿದ್ದ ಯುವತಿಗೆ ಯಾವ ರೀತಿಯ ಸಾಂತ್ವಾನ ಹೇಳಲಿ....

(ಇದು ಕುಂದಾಪುರ ತಾಲೂಕಿನ ಸಿದ್ಧಾಪುರದ ಒಂದು ಕುಗ್ರಾಮದಲ್ಲಿ ನಡೆದ ಘಟನೆ, ಸುಮಾರು ಆರೇಳು ವರ್ಷವಾಗಿರಬೇಕು ನಾನು ವರದಿ ಮಾಡಲು ತೆರಳಿದಾಗ ಮದುವೆ ಮನೆಯಲ್ಲಿನ ದೃಶ್ಯ ನೋಡಿ ಆಘಾತಗೊಂಡಿದ್ದೆ. ಆ ಮೇಲೆ ಯುವತಿ ಬದುಕು ಏನಾಯಿತೋ ಗೊತ್ತಿಲ್ಲ. ಹಳೆ ದ್ವೇಷಕ್ಕಾಗಿ ಮನೆಯ ಸಂಬಂಧಿಯೊಬ್ಬ ನಾಡಕೋವಿಯಿಂದ ಗುಂಡು ಹೊಡೆದು ಸಾಯಿಸಿದ್ದ. ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎರಡು-ಮೂರು ವರ್ಷ ಕಾಡಿನಲ್ಲೆ ಅಲೆದಿದ್ದ, ಈಗಲೂ ಆತ ಪೊಲೀಸರ ಕೈಗೆ ಸಿಕ್ಕಿದಂತಿಲ್ಲ)