Saturday, March 15, 2008

ಚಂಡೆ - ಮದ್ದಳೆ ಗುಂಗಿನಲ್ಲಿ....


ಆ ದಿನಗಳಲ್ಲಿ ರಿಕ್ಷಾದಲ್ಲಿ ಮೈಕ್ ಕಟ್ಟಿಕೊಂಡು, ಇಂದು ರಾತ್ರಿ ಒಂಬತ್ತುವರೆಗೆ ಸರಿಯಾಗಿ ಒಂದೇ ಒಂದು ಆಟ (ಯಕ್ಷಗಾನ), ಪ್ರಿಯ ಯಕ್ಷಗಾನ ಪ್ರೇಮಿಗಳೇ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ ಎಂದು ಕೂಗುತ್ತ, ಸಾಗುವ ರಿಕ್ಷಾದ ಹಿಂದೆ, ಆತ ಬಿಸಾಕುವ ಪ್ಯಾಂಪ್ಲೆಟ್ ಹೆಕ್ಕಲು ಓಡುತ್ತಿದ್ದೆವು.


ಹೀಗೆ ಕೂಗುತ್ತ ಸಾಗುವಾಗಲೇ, ಮನೆಯಲ್ಲಿ ಅಡುಗೆ, ಬೇರೆ, ಬೇರೆ ಕೆಲಸಗಳೆಲ್ಲ ಜಟಾಪಟಾ ಮುಗಿಯುತ್ತಿ ದ್ದವು, ಯಾಕೆಂದರೆ ಒಂಬತ್ತುವರೆಗೆ ಸರಿಯಾಗಿ ಯಕ್ಷಗಾನ ನೋಡಲು ಹೋಗಬೇಕಲ್ಲ ಅದಕ್ಕೆ. ಯಕ್ಷಗಾನದ ಚೌಕಿಯಿಂದ ಕರಿಮುಖದವಗೆ ಗಣಾಧಿಪತಿ....ಎಂದು ಗಣಪತಿ ಪೂಜೆ ಆರಂಭಗೊಂಡು ಚಂಡೆ-ಮದ್ದಳೆ ಸದ್ದು ಕಿವಿಗೆ ಬೀಳುವ ಮುನ್ನ ಹರುಕು-ಮುರುಕು ಚಾಪೆಯೊಂದಿಗೆ ಪಸ್ಟ್ ಕ್ಲಾಸ್ ( ರಂಗಸ್ಥಳದ ಎದುರುಭಾಗದ ನೆಲ)ನಲ್ಲಿ ಕುಳಿತಿರುತ್ತಿದ್ದೆವು.


ಜಾತ್ರೆ ಎಂಬಂತೆ ಜನ ಹಿಂಡು, ಹಿಂಡಾಗಿ ಬಂದು ಕೂರುತ್ತಿದ್ದರು. ಮಕ್ಕಳು, ಹೆಂಗಸರು, ಮುದುಕರು, ಎಲ್ಲರೂ ಬಂದು ಚಾಪೆ, ವಸ್ತ್ರ ಹಾಕಿಕೊಂಡು ಕಣ್ಣಲ್ಲಿ, ಕಣ್ಣಿಟ್ಟು ಯಕ್ಷಗಾನ ವೀಕ್ಷಿಸುತ್ತಿದ್ದರು. ನಮಗೆ ಆರಂಭದಲ್ಲಿ ಭಾರೀ ಉತ್ಸಾಹ, ಸುಮಾರು 11 ಗಂಟೆ ಸುಮಾರಿಗೆ ನಮ್ಮ ಗಾಡಿ ಪ್ಯಾಚ್ (ನಿದ್ರೆ) ಆಗಿರುತ್ತಿತ್ತು.

ಮಧ್ಯರಾತ್ರಿ 12ರ ನಂತರ ರಂಗಸ್ಥಳ ಪ್ರವೇಶಿಸುವ ರಾಕ್ಷಸ, ಒಡ್ಡೋಲಗ ಪ್ರವೇಶದ ಸಂದ ರ್ಭದಲ್ಲಿ ಚಂಡೆಯ ಹೊಡೆತದ ಅಬ್ಬರ, ಭಾಗವತರ ಆರ್ಭಟ, ರಾಕ್ಷಸನ ಕಿರುಚಾಟ, ಬೆಳಕಿನ ಸರ್ಕಸ್‌‌ ಆರಂಭಗೊಂಡ ಕೂಡಲೇ ಮನೆಯಿಂದ ಬಂದಿದ್ದ ಹಿರಿಯರು, ಏಯ್ ಮಕ್ಕಳೇ ಏಳಿ, ಏಳಿ, ರಾಕ್ಷಸ, ರಾಕ್ಷಸ ಅಂತ ಇವರೂ ಬೊಬ್ಬೆ ಹೊಡೆಯುವುದರಿಂದ ನಾವು ದಿಗಿಲುಗೊಂಡು ನಿದ್ದೆಗಣ್ಣಲ್ಲೇ ಎದ್ದು ಕೂರುತ್ತಿದ್ದೇವು.

ಮತ್ತೆ ಯಕ್ಷಗಾನ ವೀಕ್ಷಣೆ. ಅಷ್ಟು ವೇಳೆಗೆ ನಮಗೆ ಒಂದು ಸುತ್ತಿನ ನಿದ್ದೆ ಆಗಿರುತ್ತದೆ. ಆದರೆ ನಮ್ಮಂತೆ ಬರುವ ಉಳಿದ ಹುಡುಗರು ಪಾಳಿ ಎಂಬಂತೆ ಅವರು ನಿದ್ದೆಗೆ ಶರಣಾಗಿರುತ್ತಿದ್ದರು. ಆಗ ನಾವು ಅವರ ಬಾಯಿಗೆ ಕಾಗದವನ್ನು ಬೀಡಿಯಂತೆ ಸುರುಳಿ ಸುತ್ತಿ ಇಡುತ್ತಿದ್ದೇವು. ಕೆಲವೊಮ್ಮೆ ಬೆಂಕಿ ಹಚ್ಚಿ ನಂದಿಸಿ, ಬಾಯಿಗೆ ಇಟ್ಟಾಗ ಅದು ಬೀಡಿಯಂತೆ ಹೊಗೆಯುಳುತ್ತಿತ್ತು. ಅಲ್ಲಿ ಯಕ್ಷಗಾನ ನಡೆಯುತ್ತಿದ್ದರೆ, ಇಲ್ಲಿ ನಮ್ಮದೇ ಒಂದು ಮೇಳ. ಕೆಲ ಸಂದರ್ಭದಲ್ಲಿ ದೊಡ್ಡವರಿಂದ ಬಾಯಿಗೆ ಬಂದಂತೆ ಬೈಗುಳ ತಿಂದದ್ದು (!!) ಇದೆ.

ಮಧ್ಯರಾತ್ರಿಯಲ್ಲಿ ಚಂಡೆ ಮದ್ದಳೆ ಸದ್ದಿನೊಂದಿಗೆ, ಮಲಗಿದವರಿಂದಲೂ ''ಸದ್ದು'' ಹೊರಡುತ್ತಿದ್ದು, ಆದರೆ ಅದು ಚಂಡೆ ಸದ್ದಿನೊಂದಿಗೆ ಮಿಳಿತವಾಗಿ ಹೋಗುತ್ತಿತ್ತು...... !! ದೇವಿ ಮಹಾತ್ಮೆ, ರಾಮಾಯಣ, ಮಹಾಭಾರತ, ಗದಾಯುದ್ಧ, ಭೀಷ್ಮ ವಿಜಯ, ರತಿ ಕಲ್ಯಾಣ, ಮಹಾಮಂತ್ರಿ ದುಷ್ಟಬುದ್ಧಿ, ನಳದಮಯಂತಿ, ಶಬರಿಮಲೆ ಅಯ್ಯಪ್ಪ, ಸಂಪೂರ್ಣ ಕುರುಕ್ಷೇತ್ರ, ವಿಜಯಶ್ರೀ, ರಾಮ ನಿರ್ಯಾಣ, ಶರಸೇತು ಬಂಧನ, ವಿಭೀಷಣ ನೀತಿ, ಲಂಕಾ ದಹನ, ಲವ-ಕುಶ ಕಾಳಗ, ಕೃಷ್ಣಾರ್ಜುನ, ಕೃಷ್ಣಗಾರುಡಿ, ಸುಭದ್ರೆ ಕಲ್ಯಾಣ, ಸೀತಾ ಕಲ್ಯಾಣ ಹೀಗೆ ಸಾಲು,ಸಾಲು ಯಕ್ಷಗಾನ ನೋಡುತ್ತಿದ್ದೆವು.

ಹಳ್ಳಿಗರಿಗಂತೂ ಯಕ್ಷಗಾನದ ಮೂಲಕವೇ ಎಲ್ಲಾ ಪುರಾಣ ಕಥೆಗಳು ಬಾಯಿಪಾಠವಾಗುವಷ್ಟರ ಮಟ್ಟಿಗೆ ಯಕ್ಷಗಾನದ ಪ್ರಸಂಗಗಳು ಚಿರಪರಿಚಿತವಾಗಿದ್ದವು. ಒಮ್ಮೆ ನಮ್ಮೂರ ಸಮೀಪದ ಅರಾಟೆ ಎಂಬಲ್ಲಿ ಬಯಲಾಟ ನಡೆಯುತ್ತಿದ್ದಾಗ, 1 ಗಂಟೆ ರಂಗಸ್ಥಳ ಪ್ರವೇಶಿಸಿದ ರಾಜನ ವೇಷಧಾರಿ ಇದೇನಾಶ್ಚರ್ಯ ಎಂದು ಗಂಭೀರವಾಗಿ ನುಡಿದಾಗ, ಎದುರು ಸಾಲಿನಲ್ಲಿ ಕುಳಿತು ನಿದ್ದೆಗಣ್ಣಲ್ಲಿದ್ದ ವ್ಯಕ್ತಿಯೊಬ್ಬರು ದಡಬಡಿಸಿ, ಏನಿಲ್ಲಾ ಸುಮ್ಮನೆ ಒಂದು ಗಳಿಗೆ ಆಟ ನೋಡಿಕೊಂಡು ಹೋಗುವಾ ಅಂತ ಬಂದೆ ಅಂದಾಗ,ಪಕ್ಕದಲ್ಲೇ ಕುಳಿತಿದ್ದವರು,

ಆಯ್ಯೋ ಆಚಾರ್ಯರೆ (ವೃತ್ತಿಯಲ್ಲಿ ಅವರು ಬಡಗಿ ನಮ್ಮಲ್ಲಿ ಆಚಾರ್ಯರು ಎನ್ನುತ್ತೇವೆ,ಯಕ್ಷಗಾನದಲ್ಲಿ ಇದೇನು ಆಶ್ಚರ್ಯ ಎಂದಿದ್ದು, ಇವರಿಗೆ ಏನು ಆಚಾರ್ರೇ ಎಂದು ಕೇಳಿಸಿತ್ತು!!!) ಅವರು ನಿಮ್ಮನ್ನು ಕರೆದ್ದಲ್ಲ, ಸ್ವಲ್ಪ ಕಣ್ಣು ಬಿಟ್ಟು ನೋಡಿ ಎಂದಾಗ ನಕ್ಕಿದ್ದೇ, ನಕ್ಕಿದ್ದು.

ಇದು ಸುಮಾರು 20 ವರ್ಷಗಳ ಹಿಂದಿನ ಕಥೆ. ಆ ಸಂದರ್ಭಗಳಲ್ಲಿ ಮಂದರ್ತಿ ಮೇಳ, ಸಾಲಿಗ್ರಾಮ, ಧರ್ಮ ಸ್ಥಳ, ಕಟೀಲು, ಮಾರಣಕಟ್ಟೆ, ಸಿಗಂಧೂರೇಶ್ವರಿ, ಮಂಗಳಾದೇವಿ, ಗರಡಿ-ಮೇಳ ಪ್ರಸಿದ್ಧವಾಗಿದ್ದವು. ಕಾಳಿಂಗ ನಾವಡ, ಸುಬ್ರಹ್ಮಣ್ಯ ಧಾರೇಶ್ವರ, ದಿನೇಶ್ ಅಮ್ಮಣ್ಣಾಯ, ನೆಬ್ಬೂರ್, ಕಡತೋಕರ ಭಾಗವತಿಕೆ ಕೇಳುವುದೇ ಒಂದು ವಿಶಿಷ್ಟ ಅನುಭವ ನೀಡುತ್ತಿತ್ತು.

ಕುಂಬ್ಳೆ ಸುಂದರ ರಾವ್, ಮಲ್ಪೆ ರಾಮದಾಸ ಸಾಮಗರು, ವಾಸುದೇವ ಸಾಮಗ, ದೇರಾಜೆ ಸೀತಾರಾಮಯ್ಯ, ಗೋವಿಂದ ಭಟ್, ನಾರಾಯಣ ಹೆಗ್ಡೆ, ಶೇಣಿ ಗೋಪಾಲಕೃಷ್ಣ ಮುಂತಾದ ಹಿರಿಯರ ಅರ್ಥಗರ್ಭಿತ ಮಾತು ಗಳು ಇಂದಿಗೂ ಚಿರಸ್ಮರಣೀಯ.ಇತ್ತೀಚೆಗೆ ಊರಿನಲ್ಲಿ ಯಕ್ಷಗಾನ ನೋಡುವ ಅವಕಾಶ ಬಂದೊದಗಿತ್ತು.

ನಮ್ಮ ಮನೆಯ ಸಮೀಪವೇ ಯಕ್ಷಗಾನ ಬಯಲಾಟ ಇದ್ದಿತ್ತು. 10ಗಂಟೆ ಸುಮಾರಿಗೆ ಯಕ್ಷಗಾನದತ್ತ ಹೆಜ್ಜೆ ಹಾಕಿದ್ದೆ, ರಂಗಸ್ಥಳದ ಮುಂಭಾಗದಲ್ಲಿ ಬೆರಳೆಣಿಕೆಯ ಜನ ನಿಂತಿದ್ದರು. 12ಗಂಟೆಯಾಗುವ ಹೊತ್ತಿಗೆ ಒಬ್ಬೊ ಬ್ಬರೆ ಮನೆಯತ್ತ ದಾಪುಗಾಲು ಹಾಕತೊಡಗಿದ್ದರು. ಕೊನೆಗೆ ಉಳಿದದ್ದು ರಂಗಸ್ಥಳದಲ್ಲಿ ಕುಣಿಯುವವರು ಮತ್ತು ಚೌಕಿಯಲ್ಲಿದ್ದವರು ಮಾತ್ರ. ಆಗ ನನಗೆ ಹಳೆಯ ನೆನಪುಗಳೆಲ್ಲ ಕಾಡಿದವು.

ಆ ಸಂದರ್ಭದಲ್ಲಿ ಯಕ್ಷಗಾನಕ್ಕೆ ಜನಜಾತ್ರೆ, ರಾತ್ರಿಯಿಂದ ಬೆಳಿಗ್ಗಿನ ಜಾವದವರೆಗೆ ಯಾರೂ ಕದಲುತ್ತಿರಲಿಲ್ಲ, ಅಷ್ಟು ಆಸಕ್ತಿಯಿಂದ ನೋಡುತ್ತಿದ್ದರು. ಹಾಗಂತ ಇತ್ತೀಚೆಗೆ ಸಿನಿಮಾ ಕಥೆ ಆಧಾರಿತ ಯಕ್ಷಗಾನ ಪ್ರಸಂಗಗಳು ಟೆಂಟ್ ಮೇಳಗಳಲ್ಲಿ ಯಶಸ್ವಿ ನೂರನೇ ಪ್ರಯೋಗ ಅಂತ ಕಾಣುತ್ತೇವೆ ಹಾಗೂ ಮಂದರ್ತಿ, ಕಟೀಲು, ಧರ್ಮಸ್ಥಳ ಮೇಳಗಳನ್ನು ಹರಕೆ ರೂಪದಲ್ಲಿ ಆಡಿಸುತ್ತಾರೆ.

ಮಂದರ್ತಿಯ ನಾಲ್ಕು ಮೇಳಗಳೂ 2017ರವರೆಗೂ ಬುಕ್ಕಿಂಗ್ ಆಗಿದೆ. ಇದನ್ನು ಕೂಡ ಹರಕೆ ಹೊತ್ತ ಮನೆ ಮಂದಿ, ನೆಂಟರು ನೋಡಬೇಕಷ್ಟೇ ವಿನಃ ಈ ಹಿಂದಿನ ಆಸಕ್ತಿ, ಕುತೂಹಲ ಇಂದು ಜನರಲ್ಲಿ ಉಳಿದಿಲ್ಲ ಎನ್ನುವುದಂತೂ ಸತ್ಯ..



ರಾಜ್ಯರಾಜಕೀಯದ 'ತ್ರಿಶಂಕು ಸ್ಥಿತಿ'


ಬೆಂಗಳೂರು: ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವುದು ಖಚಿತವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಾಜಕಾರಣದಲ್ಲೀಗ ಬಿರುಸಿನ ಚಟುವಟಿಕೆ ನಡೆಯತೊಡಗಿದೆ. ಎಲ್ಲವೂ ಸರಿಯಾಗಿದೆ ಎಂಬಷ್ಠರಲ್ಲಿ ಯೇ ಕಾಂಗ್ರೆಸ್ ಹೈಕಮಾಂಡ್ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರನ್ನು ರಾಜ್ಯ ರಾಜಕಾರಣದ ಪಡಸಾಲೆಗೆ ಎಳೆದುತಂದಿದೆ.

ಕೃಷ್ಣ ಅವರು ರಾಜ್ಯ ರಾಜಕೀಯ ಆಗಮಿಸುತ್ತಾರೆ ಎಂಬ ಸುದ್ದಿ ಹಬ್ಬುತ್ತಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅಸಮಾಧಾನ ವ್ಯಕ್ತಪಡಿಸಿದ್ದರು. ಡಿ.ಕೆ.ಶಿವಕುಮಾರ್ ಗುಂಪಿಗೆ ಕೃಷ್ಣರ ಆಗಮನ ಮಹತ್ವದೆನಿಸಿದ್ದರೂ ಕೂಡ ಕಾಂಗ್ರೆಸ್‌‌ನ ಬಹುತೇಕ ಮುಖಂಡರಿಗೆ ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಿದೆ. ಅದರ ಪರಿಣಾಮ ಎಂಬಂತೆ ಮೈಸೂರಿನಲ್ಲಿ ಖರ್ಗೆ ನೇತೃತ್ವದಲ್ಲಿ ನಡೆಯಲಿರುವ ರಾಜ್ಯದ ಉದ್ದಗಲಕ್ಕೂ ಜನಜಾಗೃತಿ ಮೂಡಿಸಲು ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆದರೆ ಎಸ್.ಎಂ.ಕೃಷ್ಣ ಅವರನ್ನು ಆಹ್ವಾನಿಸದೆ ಆಮಂತ್ರಣ ಪತ್ರದಿಂದ ಅವರ ಹೆಸರನ್ನು ಕೈ ಬಿಡಲಾಗಿದೆ. ಇದರಿಂದ ಕಾಂಗ್ರೆಸ್ ಗುಂಪುಗಾರಿಕೆ ಮತ್ತೊಮ್ಮೆ ಬಯಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ರಾಹುಲ್ ಗಾಂಧಿಯನ್ನು ಹೆಚ್ಚಾಗಿ ಪ್ರಚಾರಕ್ಕೆ ಬಳಸಿಕೊಳ್ಳತೊಡಗಿದೆ. ಅದರ ಫಲಿತಾಂಶ ಎಂಬಂತೆ ಗುಜರಾತ್, ಹಿಮಾಚಲ ಪ್ರದೇಶಗಳಲ್ಲಿ ರಾಹುಲ್ ರೋಡ್ ಶೋ ಯಾವುದೇ ಫಲ ಕೊಟ್ಟಿಲ್ಲ.

ಆದರೂ ಒರಿಸ್ಸಾದಿಂದ ಡಿಸ್ಕವರ್ ಇಂಡಿಯಾ ಪ್ರವಾಸ ಆರಂಭಿಸಿರುವ ರಾಹುಲ್ ಕರ್ನಾಟಕಕ್ಕೂ ಆಗಮಿಸು ತ್ತಿದ್ದಾರೆ. ಆದರೆ ಜನರು ರಾಹುಲ್‌‌ಗೆ ಹೆಚ್ಚಿನ ಮಹತ್ವ ನೀಡುವುದು ಅನುಮಾನವೇ, ಇಂದಿರಾ, ರಾಜೀವ್‌‌ಗಾಂಧಿ ರೋಡ್ ಶೋಗಳಿಗೆ ಜನ ಮುಗಿ ಬೀಳುತ್ತಿದ್ದರು, ಹಾಗೂ ನಿಮ್ಮದು ಯಾವುದಕ್ಕೆ ಮತ ಅಂತ ಕೇಳಿದರೆ 'ಕೈ'ಎನ್ನುತ್ತಿದ್ದರು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ!! ಕಾಂಗ್ರೆಸ್ ಪಕ್ಷಕ್ಕೆ ಸಿದ್ಧರಾಮಯ್ಯ, ಎಂ.ಪಿ.ಪ್ರಕಾಶ್‌‌ರಂತಹ ಘಟಾನುಘ ಟಿಗಳು ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್ ಬಲಶಾಲಿಯಾಗಿದೆ ಎಂಬ ಅಂಶ ಮೇಲ್ನೋಟಕ್ಕೆ ಕಂಡು ಬಂದರೂ ಕೂಡ, ರಾಜ್ಯ ರಾಜಕಾರಣದಲ್ಲಿನ ಸೂಕ್ಷ್ಯ ಎಳೆಗಳನ್ನು ಅವಲೋಕಿಸುತ್ತ ಹೋದರೆ, ಕಾಂಗ್ರೆಸ್‌‌ನಲ್ಲಿ ಒಗ್ಗಟ್ಟು ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಅಲ್ಲದೇ ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರ ಅಸ್ತು ಎಂದ ಮೇಲೆ ಕೆಲವು ಮುಖಂಡರಿಗೆ ದಿಕ್ಕೇ ತೋಚದಂತಾ ಗಿದೆ. ಈ ಸ್ಥಿತಿ ಕೇವಲ ಕಾಂಗ್ರೆಸ್‌‌ಗೆ ಮಾತ್ರವಲ್ಲ,ಬಹುತೇಕ ಪಕ್ಷದಲ್ಲಿನ ಮುಖಂಡರು ಹಲವು ವರ್ಷಗಳ ಕಾಲ ಒಂದೇ ಕ್ಷೇತ್ರದಲ್ಲಿ ಪಾಳೆಗಾರರಂತೆ ಸ್ಪರ್ಧಿಸಿ ಗೆಲ್ಲುತ್ತಿದ್ದರು. ಆ ಅವಕಾಶ ಈ ಬಾರಿ ಕೈ ತಪ್ಪಿ ಹೋಗುವ ಮೂಲಕ ಅವರ ಅಸ್ತಿತ್ವಕ್ಕೆ ಕೊಡಲಿಯೇಟು ಬಿದ್ದಂತಾಗಿರುವುದರಿಂದ ಈ ಬಾರಿಯ ಚುನಾವಣೆ ಅಖಾಡ ಮತ್ತಷ್ಟು ರಂಗೇರಲಿದೆ.

ಇನ್ನು ಭಾರತೀಯ ಜನತಾ ಪಕ್ಷ ಅನುಕಂಪ, ಹಿಂದುತ್ವದ ಅಜೆಂಡಾದ ಮೇಲೆ ಮುನ್ನುಗ್ಗಲು ಪ್ರಯತ್ನಿಸಿದರೂ ಕೂಡ ಯಾವುದೇ ಫಲ ನೀಡದ ಕಾರಣ ಇದೀಗ ಬಿಜೆಪಿ ತನ್ನ ವರಸೆಯನ್ನು ಬದಲಾಯಿಸಿ, ಗಲಭೆ, ದತ್ತ ಪೀಠಗಳೆಲ್ಲವನ್ನು ಬದಿಗೊತ್ತಿ-ರೈತಪರ, ಶಾಸ್ತ್ರೀಯ ಸ್ಥಾನಮಾನ, ಭ್ರಷ್ಠಾಚಾರ ಅಜೆಂಡಾವನ್ನು ಮುಂದಿಟ್ಟು ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧವಾಗಿದೆ.

ಜೆಡಿಎಸ್ ಕಾಂಗ್ರೆಸ್-ಬಿಜೆಪಿಯನ್ನು ಸಮಾನ ಶತ್ರುಗಳೆಂದು ದೂರ ಸರಿದಿದ್ದು (ಕೆಟ್ಟ ಮೇಲೆ ಬುದ್ಧ ಬಂತು ಎಂಬ ಗಾದಿ ಮಾತಿನಂತೆ)ತಮ್ಮ ಸರಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟು ಮತದಾರರ ಬಳಿ ಹೋಗುವುದಾಗಿ ಹೇಳಿದೆ. ಇನ್ನು ಬಿಎಸ್ಪಿ, ಸಮಾಜವಾದಿ,ಸಿಪಿಐಎಂ ಮುಂತಾದವುಗಳು ಕಣದಲ್ಲಿವೆ.

ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷವಾಗಲಿ,ಪ್ರಾದೇಶಿಕ ಪಕ್ಷದಲ್ಲಾಗಲಿ ಹೇಳಿಕೊಳ್ಳುವಂತಹ ಒಬ್ಬನೇ ಒಬ್ಬ ಡೈನಾಮಿಕ್ ರಾಜಕಾರಣಿ ಇದ್ದಾರೆಯೇ ಎಂಬುದು ಮತದಾರರ ಮುಂದಿರುವ ಪ್ರಶ್ನೆ. ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾ ವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಆದರೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಈ ಬಾರಿಯೂ ಯಾವ ಪಕ್ಷಕ್ಕೂ ಬಹುಮತ ದೊರೆಯಲಾರದು ಎಂಬ ಅಂಶ ನಿಚ್ಚಳವಾಗತೊಡಗಿದೆ....

ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರ ಸಚಿವ ಸಂಪುಟ ಅನಮೋದನೆ ನೀಡಿರುವ ಹಿನ್ನೆಲೆಯಲ್ಲಿ ಕ್ಷೇತ್ರಗಳನ್ನು ಕಳೆದುಕೊಳ್ಳಲಿರುವವರಲ್ಲಿ ಪ್ರಮುಖರಾಗಿ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(ಗುರುಮಿಠಕಲ್), ಎಂ.ಪಿ.ಪ್ರಕಾಶ್(ಹೂವಿನ ಹಡಗಲಿ), ಡಿ.ಕೆ.ಶಿವಕುಮಾರ್ (ಸಾತನೂರು), ಟಿ.ಬಿ.ಜಯಚಂದ್ರ (ಕಳ್ಳಂಬೆಳ್ಳ), ಡಾ.ಜಿ.ಪರಮೇಶ್ವರ(ಮಧುಗಿರಿ), ಎನ್.ಎಸ್. ಬೋಸರಾಜು (ಮಾನ್ವಿ),

ಗುರುಪಾದಪ್ಪ ನಾಗಮಾರಪಲ್ಲಿ (ಔರಾದ್), ಕೃಷ್ಣಬೈರೇಗೌಡ (ವೇಮಗಲ್). ಸಿ.ಚನ್ನಿಗಪ್ಪ (ಕೊರಟಗೇರಿ), ಡಿ.ಮಂಜುನಾಥ್ (ಹಿರಿಯೂರು), ಅಲಂಗೂರು ಶ್ರೀನಿವಾಸ್(ಮುಳಬಾಗಿಲು), ಕೆ.ಎನ್.ರಾಜಣ್ಣ (ಬೆ ಳ್ಳಾವಿ), ನಾಗರಾಜಯ್ಯ (ಹುಲಿಯೂರುದುರ್ಗ), ಸಂತೋಷ್ ಲಾಡ್ (ಸಂಡೂರು), ಅಮರೇಗೌಡ ಬಯ್ಯಾಪುರ (ಲಿಂಗಸೂರು), ವೈಜನಾಥ್ ಪಾಟೀಲ್(ಚಿಂಚೋಳಿ).

ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ (ಮಾಯಾಕೊಂಡ), ಪಕ್ಷೇತರ ಶಾಸಕರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ (ಬ್ರಹ್ಮಾವರ), ಎಚ್. ಆಂಜನೇಯ (ಭರಮಸಾಗರ), ನಾಗಮಣಿ ನಾಗೇಗೌಡ ಕಿರಗಾವಲ). ಅಲ್ಲದೇ, ದಾವಣಗೆರೆ, ರಾಯಚೂರು, ಬಳ್ಳಾರಿಯಲ್ಲಿ ತಲಾ ಒಂದೊಂದು ವಿಧಾನಸಭಾ ಕ್ಷೇತ್ರಗಳು ಜಾಸ್ತಿಯಾಗಲಿದ್ದು, ಮಂಗಳೂರು, ಚಿಕ್ಕಮಗಳೂರು, ಉಡುಪಿ, ಮಂಡ್ಯ, ಕೋಲಾರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಮಡಿಕೇರಿ, ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಒಂದೊಂದು ಹಾಗೂ ತುಮಕೂರು ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳು ಕಡಿಮೆ ಆಗಲಿದೆ.