Saturday, December 15, 2007

ಧರ್ಮ ಬೆಳಕು ನೀಡಬೇಕು, ಹಿಂಸೆಯನ್ನಲ್ಲ

ಉತ್ತರಕರ್ನಾಟಕ ಜನರ ಪ್ರೀತಿ, ಅಲ್ಲಿನ ಪ್ರಾಕೃತಿಕ ಸೌಂದರ್ಯ ಇವುಗಳೆಲ್ಲವೂ ಮರೆಯಲಾರದ ನೆನಪುಗಳಾಗಿವೆ. ಆಗಾಗ ಉತ್ತರ ಕರ್ನಾಟಕಕ್ಕೆ ಭೇಟಿ ನೀಡುವುದೊಂದು ಅಭ್ಯಾಸವಾಗಿತ್ತು. ಹಾಗೆ ಧಾರವಾಡಕ್ಕೆ ಭೇಟಿ ನೀಡಿದ ಪ್ರತಿ ಸಂದರ್ಭದಲ್ಲೂ ಎನ್.ಕೆ. ಕುಲಕರ್ಣಿ, ಕಣವಿ, ಪ್ರೊ.ನಾರಾಯಣಾಚಾರ್ಯ ಮುಂತಾದ ಹಿರಿಯರನ್ನ ಮಾತನಾಡಿಸಿ ಬರುತ್ತಿದ್ದೆ.

ಸಾಹಿತ್ಯ ಕ್ಷೇತ್ರದಲ್ಲಿನ ಬೆಳವಣಿಗೆಗಳು, ಸಾಹಿತ್ಯ ಕ್ಷೇತ್ರ ಹಿಡಿದಿರುವ ಹಾದಿಗಗಳು, ಕನ್ನಡದ ಮನಸ್ಸು, ಧರ್ಮದ ಕುರಿತಾಗಿ ಮುಕ್ತ ಮನಸ್ಸಿನಿಂದ ಹರಟಿದ ನಗುಮೊಗದ ಚೆಂಬೆಳಕಿನ ಕವಿ ಚೆನ್ನವೀರ ಕಣವಿಯೊಂದಿಗಿನ ಕಿರು ಸಂದರ್ಶನದ ಭಾಗ ಇಲ್ಲಿದೆ.

ಪ್ರಶ್ನೆ: ನಿಮಗೆ ಸಾಹಿತ್ಯದ ಒಲವು ಮೂಡಿದ ಬಗೆ ?

ಕಣವಿ: ಗದಗ ತಾಲೂಕಿನ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಲಿಯುತ್ತಿರುವಾಗಲೇ ಸಾಹಿತ್ಯದ ಕುರಿತು ಒಲವು ಮೂಡಿದ್ದು, ಶಾಲಾ ಶಿಕ್ಷಕರಾಗಿದ್ದ ನನ್ನ ತಂದೆ ಸಕ್ರಪ್ಪನವರ ಪ್ರಭಾವವೂ ಕಾರಣವಾಗಿದೆ.

ಪ್ರಶ್ನೆ: ಇಂದಿನ ಸಾಹಿತ್ಯ ವಲಯದ ಕುರಿತು..

ಕಣವಿ: ಹೊಸಗನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆದು ಬಂದಿದೆ. ಕನ್ನಡದ ಪ್ರಾಚೀನ ಪರಂಪರೆಗೆ ಪಂಪನಂತಹ ಶ್ರೇಷ್ಠ ಕವಿಗಳು ದೊರೆತರೆ, ಆಧುನಿಕ ಕನ್ನಡ ಸಾಹಿತ್ಯಕ್ಕೂ ಕೂಡ ನವೋದಯದ ಕೆಲವು ಹಿರಿಯರಾದ ಮಾಸ್ತಿ, ಕಾರಂತ, ಕುವೆಂಪು, ಬೇಂದ್ರೆ, ಡಿವಿಜಿಯಂತಹವರು ಪ್ರಮುಖರು. ಹಿಂಸೆ, ಕ್ರೌರ್ಯ, ಸಾಮಾಜಿಕ ವ್ಯತ್ಯಾಸಗಳಿಗೆ ವಿರುದ್ಧವಾಗಿ ಪ್ರತಿಭಟನೆ, ಸಮಾನತೆ ತರಲು ಬರವಣಿಗೆ ಸಾಧನವಲ್ಲ. ಇದು ಕಾಲದಿಂದ ಕಾಲಕ್ಕೆ ಆದ ಬೆಳವಣಿಗೆಯೇ ಸಾಹಿತ್ಯದ ವೈಶಿಷ್ಟ್ಯ.

ಪ್ರಶ್ನೆ: ಸಾಹಿತ್ಯ ಜನತೆಗೆ ಎಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿ ಪರಿಣಮಿಸಿದೆ..

ಕಣವಿ: ಸಾಹಿತ್ಯದಿಂದ ಜನರ ಮನಸ್ಸಿನ ಮೇಲೆ ಉತ್ತಮ ಸಂಸ್ಕಾರ ಆಗುತ್ತದೆ. ಆದರೆ ಶೀಘ್ರವಾಗಿ ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದನ್ನು ನಿರೀಕ್ಷಿಸುವಂತಿಲ್ಲ. ಸಾಹಿತ್ಯ ಒಳ್ಳೆಯ ಪ್ರೇರಣೆ ಕೊಡಬಹುದು. ಅದರಿಂದ ಕ್ರಾಂತಿ ನಡೆಯಲಾರದು. ಬದುಕಿಗೆ ಒಂದು ನೆಮ್ಮದಿಯ ದಾರಿಯನ್ನು ತೋರಿಸಿಕೊಡುವಲ್ಲಿ ಸಾಹಿತ್ಯ ಬೆಳೆದು ನಿಂತಿದೆ ಎನ್ನಬಹುದು.

ಪ್ರಶ್ನೆ: ಭಾಷೆ, ರಾಜ್ಯ, ಧರ್ಮಾಂಧತೆ ಬಗ್ಗೆ...

ಕಣವಿ: ತಮ್ಮ,ತಮ್ಮ ಮಾತೃ ಭಾಷೆಯನ್ನು ಪ್ರೀತಿಸುತ್ತ, ರಾಜ್ಯ ಭಾಷೆಯ ಬಗ್ಗೆ ಅಭಿಮಾನವಿಟ್ಟುಕೊಂಡು, ರಾಷ್ಟ್ರೀಯ ಪ್ರವಾಹದಲ್ಲಿ ಸಮರಸರಾದರೆ ಯಾವ ಗೊಂದಲವೂ ಉಂಟಾಗದು. ಭಾಷೆಯೊಡನೆ ಸಾಹಿತ್ಯ, ಸಂಸ್ಕೃತಿಯೂ ಮೇಳೈಸಿರುವುದರಿಂದ ಉತ್ತಮ ಸಂಸ್ಕಾರಕ್ಕೂ ಅದು ಮಾರ್ಗದರ್ಶಿಯಾಗುತ್ತದೆ. ಬೇರೆ ಭಾಷೆಯನ್ನು ಕಲಿಯುತ್ತ ಅವುಗಳೊಡನೆ ಮೈತ್ರಿಯನ್ನು ಬೆಳೆಸಿಕೊಂಡಷ್ಟು ನಾವು ದೊಡ್ಡವರಾಗುತ್ತೇವೆ.

ಅದೇ ರೀತಿ ಧರ್ಮ ಬೆಳಕನ್ನು ಬೀರಬೇಕಲ್ಲದೆ, ಅದನ್ನು ಸಂಕುಚಿತಾರ್ಥದಲ್ಲಿ ಸ್ವಾರ್ಥ, ಮೋಸ, ದ್ವೇಷ, ಹಿಂಸೆಗಳಿಗೆ ಬಳಸಿದರೆ ಅದರಂತಹ ಅಪಾಯ ಬೇರೊಂದಿಲ್ಲ. ದಯೆಯೇ ಇಲ್ಲದಿದ್ದರೆ ಅದನ್ನು ಧರ್ಮವೆಂದು ಏಕೆ ಕರೆಯಬೇಕು?, ಅದಕ್ಕಾಗಿಯೆ ಬಸವಣ್ಣ ಹೇಳಿದ್ದು ದಯೆಯೇ ಧರ್ಮದ ಮೂಲವೆಂದು, ಧರ್ಮ ಖಾಸಗಿಯಾದದ್ದು ಎಂಬುದನ್ನು ಮರೆಯಬಾರದು.

ಎಲ್ಲದಕ್ಕೂ ಮಿಗಿಲಾದದ್ದು ಮಾನವ ಧರ್ಮ. ಅದಕ್ಕೆ ಸಾವಿರ ವರ್ಷಗಳ ಹಿಂದೆ ಮಹಾಕವಿ ಪಂಪ ಮನುಷ್ಯ ಜಾತಿ ತಾನೊಂದೆವಲಂ ಎಂದು ಸಾರಿದ್ದ.

ಪ್ರಶ್ನೆ: ಸಾಹಿತ್ಯ ಜನಸಾಮಾನ್ಯರಿಂದ ದೂರವಾಗುತ್ತಿದೆಯೇ..

ಕಣವಿ: ಹಾಗೇನಿಲ್ಲ, ಹಿಂದಿಗಿಂತ ಈಗ ಜನಸಾಮಾನ್ಯರು ಅಕ್ಷರಸ್ಥರಾಗುತ್ತಿರುವುದರಿಂದ ಸಾಹಿತ್ಯ ಸಾಮಾನ್ಯರಿಗೂ ಹತ್ತಿರವಾಗುತ್ತಿದೆ. ಅನಕ್ಷರತೆ ಕಡಿಮೆಯಾದಂತೆ ಇನ್ನೂ ಹೆಚ್ಚಿನ ಪರಿಣಾಮಕಾರಿ ಆಗಬಹುದು.

Wednesday, December 5, 2007

'ನೇತ್ರಾಣಿ' ಕಡಲ ಧ್ಯಾನ


ಪ್ರವಾಸ, ಚಾರಣ ಎಂದರೆ ಮೊದಲಿನಿಂದಲೂ ಹುಮ್ಮಸ್ಸು, ಆದರೆ ಪತ್ರಿಕೋದ್ಯಮದ ಜಂಜಡಗಳ ನಡುವೆ ಸಮಯದ ಅಭಾವವೇ ಹೆಚ್ಚಾಗಿರುವುದರಿಂದ ಹೋಗಬೇಕಾದ ಸ್ಥಳಗಳಿಗೆ (ಚೆನ್ನೈಗೆ ಬರುವ ಮುನ್ನ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳಕ್ಕೆ ಹೋಗಲು ಎಲ್ಲಾ ತಯಾರಿ ಮಾಡಿಕೊಂಡಿದ್ದರೂ, ಕೊನೆ ಕ್ಷಣದಲ್ಲಿ ಆ ಅವಕಾಶ ಕೈತಪ್ಪಿ ಹೋಗಿತ್ತು.) ಹೋಗಲಾರದೆ ಬಹಳಷ್ಷು ಸಂಕಟ ಅನುಭವಿಸಿದ್ದಿದೆ.

ಆದರೂ ಕೆಲವೊಮ್ಮೆ ಬಿಡುವು ಮಾಡಿಕೊಂಡು ಅಂತಹ ಸ್ಥಳಗಳಿಗೆ ಹೋಗುವುದೆಂದರೆ ಕಷ್ಟದ ಕೆಲಸವೇ. ಹಾಗೆ ಬೆಂಗಳೂರಿನಿಂದ ರಜೆಯಲ್ಲಿ ಊರಿಗೆ ಬಂದಿದ್ದಾಗ ಆಕಸ್ಮಿಕವಾಗಿ ಸಿಕ್ಕ ಗೆಳೆಯರು ಈ ಬಾರಿ ನೇತ್ರಾಣಿಗೆ ಹೋಗುತ್ತಿದ್ದೇವೆ ಭಾನುವಾರ ರೆಡಿಯಾಗಿ ಎಂದು ಹೇಳಿ ಹೋಗಿದ್ದರು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಮುದ್ರದ ನಡುಗಡ್ಡೆಯೇ ನೇತ್ರಾಣಿ ಪ್ರದೇಶ. ಅಲ್ಲಿಗೆ ಒಮ್ಮೆ ಭೇಟಿ ನೀಡಬೇಕು ಎಂಬುದು ಹಲವು ದಿನಗಳ ಕನಸಾಗಿತ್ತು.ಆದರೆ ಜಲಪಾತ, ಬೆಟ್ಟ - ಗುಡ್ಡವಾಗಿದ್ದರೆ ಒಂದಿಬ್ಬರ ಸಂಗಡ ಹೊರಟು ಬಿಡಬಹುದಾಗಿತ್ತು. ಇದು ಸಮುದ್ರದ ಮಧ್ಯಭಾಗದಲ್ಲಿ ಇರುವುದು, ಅಲ್ಲದೇ ಅಲ್ಲಿಗೆ ಹೋಗಲು ಬೋಟ್ ಬೇಕು. ಅಂತೂ 2004ರ ಮೇ ತಿಂಗಳಿನಲ್ಲಿ ನೇತ್ರಾಣಿ ಪ್ರಯಾಣ ಸಾಗಿತ್ತು. ಬೆಳಿಗ್ಗೆ ನಾನು, ಸಹೋದರ ರಾಜೇಂದ್ರ, ಪತ್ರಕರ್ತ ಮಿತ್ರ ಗಣೇಶ್, ಗೆಳೆಯ ದಿವಾಕರ್, ಸಂತೋಷ್ ತ್ರಾಸಿಯಿಂದ ಕಾರಿನಲ್ಲಿ ಭಟ್ಕಳ ಬಂದರು ತಲುಪಿದ್ದೇವು.

ಅಲ್ಲಿ ಮೀನುಗಾರ ಮಿತ್ರರ ದೊಡ್ಡ ಬೋಟ್ ಸಮುದ್ರದ ಅಲೆಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿತ್ತು. ಪೂಜಾ ಸಾಮಗ್ರಿ, ಪುರೋಹಿತರು ಸೇರಿದಂತೆ ಸುಮಾರು 40 ಜನರ ತಂಡ ಬೋಟ್ ಏರಿದ್ದೇವು. ಜೊತೆಗೆ ಒಂದು ಕುರಿ, ಕೋಳಿ. ಅರೆ ಮನುಷ್ಯರ ಜತೆ ಪ್ರಾಣಿಗಳು ಯಾಕೆ ಅಂತ ಅಲ್ವಾ,ನೇತ್ರಾಣಿ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ನೇತ್ರ ಹೈಗುಳಿ ಸೇರಿದಂತೆ ಅನೇಕ ದೇವರುಗಳಿವೆ. ಸಮುದ್ರದಲ್ಲಿ ತಮಗೆ ಅಪಾಯವಾಗದಿರಲಿ, ದುಡಿಮೆ ಚೆನ್ನಾಗಿರಲಿ ಅಂತ ನೇತ್ರಾಣಿ ದೇವರಿಗೆ ಹರಕೆ ಹೊತ್ತಿರುತ್ತಾರೆ. ಅಲ್ಲಿ ದೇವರಿಗೆ ಕುರಿ, ಕೋಳಿ, ಆಡುಗಳನ್ನು ಹರಕೆ ಬಿಡುವುದು ವಾಡಿಕೆ. ಭಟ್ಕಳ ಬಂದರು ಪ್ರದೇಶದಿಂದ ಸುಮಾರು 10 ನಾಟಿಕಲ್ ಮೈಲ್ ದೂರದಲ್ಲಿರುವ ನೇತ್ರಾಣಿಯತ್ತ ಬೋಟ್ ನಿಧಾನಕ್ಕೆ ಚಲಿಸತೊಡಗಿತ್ತು.

ಸಮುದ್ರದಲ್ಲಿ ನನ್ನ ಮೊತ್ತ ಮೊದಲ ಪ್ರಯಾಣ ಅದಾಗಿತ್ತು.ಸಮುದ್ರದ ಬಗ್ಗೆ ನನಗೆ ಮೊದಲಿನಿಂದಲೂ ಭಯ. ಪ್ರವಾಸದ ಹುಚ್ಚು ನನ್ನನ್ನ ಅಷ್ಟು ದೂರಕ್ಕೆ ಎಳೆದೊಯ್ಯಿದಿತ್ತು.ಎರಡು ಗಂಟೆಗಳ ಕಾಲ ಬಳುಕುತ್ತ - ಓಲಾಡುತ್ತ ಸಾಗಿದ ಹಡಗು ಗುಡ್ಡದಿಂದ 20ಅಡಿ ದೂರದಲ್ಲಿ ಲಂಗರು ಹಾಕಿತ್ತು. ಇದೇನ್ ಕಥೆಯಪ್ಪಾ ನಮ್ಮನ್ನ ನಡು ನೀರಿನಲ್ಲಿ ಕೈಬಿಟ್ಟರಾ ಹೇಗೆ, ರಸ್ತೆಯಲ್ಲಿ ನಡೆದಾಡುವುದೇ ನಮಗೆ ಕಷ್ಟ,ಇನ್ನು ಈಜು ಮೊದಲೇ ಬರುವುದಿಲ್ಲ.

ಹಡಗಿನಿಂದ ಇಣುಕಿ ಕೆಳಗೆ ನೋಡಿದರೆ ಎದೆ ಬಡಿತ ಹೆಚ್ಚಾಗಿತ್ತು.ಬೋಟ್‌ನಲ್ಲಿದ್ದ ಎರಡು ಚಿಕ್ಕ ಡಿಂಗಿ (ಲೈಫ್ ಬೋಟ್) ಗಳನ್ನು ಇಳಿಬಿಟ್ಟು ನಾಲ್ಕಾರು ಮಂದಿ ಈಜು ಪರಿಣತರು ಅದರಲ್ಲೆ ಸೇರಿ ಗುಡ್ಡದತ್ತ ಸಾಗಿದರು. ಅದರಲ್ಲಿ ನಾಲ್ಕು ಮಂದಿ ಈಜಿ ಗುಡ್ಡ ಸೇರಿದರು. ಎರಡು ಲೈಫ್ ಬೋಟ್‌ಗಳು ನಮ್ಮತ್ತ ಬಂದು ಎಂಟು ಮಂದಿಯಂತೆ ಎರಡು ಡಿಂಗಿಯಲ್ಲಿ ಹತ್ತಿಸಿಕೊಂಡು ಅಲೆಗಳ ಮೇಲೆ ಸಾಗುತ್ತಿರುವಾಗ ನಾನಂತೂ ಅಕ್ಷರಶಃ ಕಣ್ಣುಮುಚ್ಚಿಕೊಂಡಿದ್ದೆ.

ಸ್ವಲ್ಪ ಆಯ ತಪ್ಪಿದರೂ ಸಾವು ನಿಶ್ಚಿತವಾಗಿತ್ತು. ಬಲವಾದ ಗಾಳಿಗೆ ಅಲೆಗಳು ಆಳೆತ್ತರಕ್ಕೆ ಬಂದಪ್ಪಳಿಸುತ್ತಿತ್ತು. ಅಂತಹ ಅಲೆಗಳ ಆರ್ಭಟಕ್ಕೆ ಸಿಕ್ಕ ನಮ್ಮ ಲೈಫ್ ಬೋಟ್ ಮುಂದಕ್ಕೂ ಸಾಗದೇ ಅತಂತ್ರವಾದಾಗ ನಮ್ಮ ಲೈಫ್ ಬಗ್ಗೆನೇ ಅನುಮಾನ ಮೂಡತೊಡಗಿತ್ತು. ಈ ಹುಚ್ಚಾಟ ಬೇಡಾಗಿತ್ತು ಅಂತ ಅನಿಸತೊಡಗಿತ್ತು.

ಅದಾಗಲೇ ಐಸ್ ಲಾಂಬೆ ಅಂತ ರೋಪ್‌ನಿಂದ ಎಳೆದು ಗುಡ್ಡದ ತಳಭಾಗದಲ್ಲಿನ ಕಲ್ಲಿನಪಾಯದ ಮೇಲೆ ಡಿಂಗಿ ಬಂದು ಕುಳಿತಾಗ ನಾವೆಲ್ಲ ಒಂದೇ ನೆಗೆತಕ್ಕೆ ಗುಡ್ಡಕ್ಕೆ ಪಾದಸ್ಪರ್ಶ ಮಾಡಿ ಬದುಕಿದೆಯ ಬಡ ಜೀವವೇ ಅಂತ ಉಸಿರು ಬಿಟ್ಟಿದ್ದೇವು. ಹೀಗೆ ಗಂಟೆಗಳ ಕಾಲ ಅಲೆಗಳೊಂದಿಗೆ ಸರ್ಕಸ್ ನಡೆಸಿ 40 ಮಂದಿ ನೇತ್ರಾಣಿ ಗುಡ್ಡ ಏರತೊಡಗಿದ್ದೇವು.ಅದಾಗಲೇ ಸೂರ್ಯ ನಡುನೆತ್ತಿಗೆ ಬಂದಿದ್ದ. 25ನಿಮಿಷಗಳ ನಡಿಗೆಯ ನಂತರ ಗುಡ್ಡದ ತಲೆಮೇಲೆ ನಿಂತಿದ್ದೆವು.

ಸುತ್ತಲೂ ಆವರಿಸಿರುವ ಅರಬ್ಬಿ ಸಮುದ್ರ, ಮಧ್ಯೆಗುಡ್ಡದಲ್ಲಿ ನಾವು ಅಬ್ಬಾ ನೆನೆಸಿಕೊಂಡರೆ ರೋಮಾಂಚ ನವಾಗುತ್ತೆ. ಮನುಷ್ಯರ ವಾಸನೆ ಬಡಿಯುತ್ತಲೇ ಹಿಂಡುಗಟ್ಟಲೇ ತುಂಬಿಕೊಂಡಿದ್ದ ಕೋಳಿ, ಆಡುಗಳೆಲ್ಲ ದಿಕ್ಕಾಪಾಲಾಗಿ ಒಡತೊಡಗಿದವು. ಶತ್ರುಗಳ ಮೇಲೆ ಆಕ್ರಮಣ ಮಾಡಲು ಬಂದಂತಹ ಸೈನಿಕರಂತೆ ನಾವು ಸಾಗುತ್ತಿದ್ದರೆ, ಅವುಗಳು ಅಡಗುತಾಣವನ್ನರಸುತ್ತ ಶತ್ರುಗಳಂತೆ ತಲೆಮರೆಸಿಕೊಂಡು ಬಿಟ್ಟವು.

ಬೆಟ್ಟದ ಮೇಲೆ ನಾಲ್ಕಾರು ಕರಿಕಲ್ಲಿನ ದೇವರ ಮೂರ್ತಿಗಳು, ಅಷ್ಟೇ ಅಲ್ಲ , ಹೀಗೆ ನಮ್ಮಂತೆ ಅಲ್ಲಿಗೆ ಭೇಟಿ ನೀಡಿದ್ದ ಪ್ರವಾಸಿಗರು ಸುಮ್ಮನೆ ಇದ್ದಿಲ್ಲ. ಯೇಸುವಿನ ಶಿಲುಬೆ, ಗೋರಿಗಳನ್ನು ಕೃತವಾಗಿ ಸೃಷ್ಟಿಸುವ ಮೂಲಕ ಅದನ್ನೊಂದು ಧಾರ್ಮಿಕ ಸಮನ್ವಯ ತಾಣವನ್ನಾಗಿ ಮಾಡಿದ್ದರು. ನಮ್ಮೊಂದಿಗೆ ಬಂದಿದ್ದ ಪುರೋಹಿತರು ದೇವರಿಗೆ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಿದರು. ಆಡನ್ನು ಅಲ್ಲಿಯೇ ದೇವರಿಗೆ ಬಿಡಲಾಯಿತು.

ಪೂರ್ವ ಜನ್ಮದ ವಾಸನಾಬಲದ ನೆನಪು ಮರುಕಳಿಸಿದ ಪರಿಣಾಮ ಕೆಲವರು ಅದಾಗಲೇ ಭೇಟೆಯಾಡ ತೊಡಗಿದ್ದರು, (ಇಲ್ಲಿಗೆ ಬರುವ ಪ್ರವಾಸಿಗರಿಗೆ ಅದೊಂದು ಖಯಾಲಿ, ಈ ಮೊದಲು ಬಂದ ಭಕ್ತರು ಹರಕೆ ಸಲ್ಲಿಸಿ ಬಿಟ್ಟು ಹೋಗಿದ್ದ ಕೋಳಿಗಳನ್ನು ಪದಾರ್ಥ ಮಾಡಿ ತಿನ್ನುವುದೊಂದು ರೂಢಿ) ನೋಡ, ನೋಡುತ್ತಿದ್ದಂತೆಯೇ ಎಂಟತ್ತು ಕೋಳಿಗಳ ಸಂಹಾರ ಆಗಿತ್ತು.

ಅಲ್ಲಿಯೇ ರಾಶಿ ಬಿದ್ದಿದ್ದ ಕಟ್ಟಿಗೆಗಳನ್ನು ಒಟ್ಟು ಮಾಡಿ, ಬೆಂಕಿ ಹಚ್ಚಿ ಅದರಲ್ಲೇ ಕೋಳಿಗಳು ಸುಟ್ಟು ಕರಕಲಾಗಿ ಹದವಾಗಿದ್ದವು.ಮಿತ್ರ ಗಣೇಶ್ ಅವುಗಳನ್ನು ಕತ್ತರಿಸಿ, ತಿನ್ನತೊಡಗಿದ ಜತೆಗೆ ನನ್ನನ್ನು ಗುಂಪಿಗೆ ಸೇರಿಸತೊಡಗಿದಾಗ ನನಗ್ಯಾಕೋ ಅದು ಸಹ್ಯವಾಗಲಿಲ್ಲ. ಅಂತೂ ಬಕಾಸುರರೆಲ್ಲ ಕುಕ್ಕಟಗಳ ಸಂಹಾರ ಮುಗಿಸಿ, ಸಂಚಾರಕ್ಕೆ ಹೊರಡಲು ಅಣಿಯಾದರು.

ನೇತ್ರಾಣಿ ಸುಮಾರು ಎರಡು ಕಿ.ಮಿ. ಸುತ್ತಳತೆಯ ಗುಡ್ಡ. ಗಿಡ-ಮರಗಳಿಂದ ಆವೃತ್ತವಾಗಿರುವ ಗುಡ್ಡದಲ್ಲಿ ದೇವರೆ ಪ್ರಮುಖ ಆಕರ್ಷಣೆ ಕೇಂದ್ರ ಬಿಂದು. ತಂಪಾಗಿ ಬೀಸುವ ತಂಗಾಳಿ, ನೀಲಿ ಬಣ್ಣದಿಂದ ಕಂಗೊಳಿಸುವ ಸಮುದ್ರದ ತಳಭಾಗದಲ್ಲಿ ಮಿರ, ಮಿರನೆ ಮಿಂಚುವ ವಿವಿಧ ಜಾತಿ ಮೀನುಗಳನ್ನು ನೋಡುವುದೇ ಒಂದು ಖುಷಿ. ಮತ್ತೊಂದು ಭಾಗದಲ್ಲಿ ಬೃಹತ್ ಗುಹೆಯೊಂದಿದೆ, ಅಲ್ಲಿಗೆ ತೆರಳಬೇಕೆಂಬ ನಮ್ಮ ದುಸ್ಸಾಹಸಕ್ಕೆ ಕೆಲವು ಹಿರಿಯರು ತಣ್ಣೇರೆರಚಿದರು.

ಹಾಗೆ ಬೆಟ್ಟದ ಮೇಲೆ ನಿಂತು ಸುತ್ತಲೂ ವೀಕ್ಷಣೆ ನಡೆಸುತ್ತಿದ್ದಾಗ, ಮತ್ತೊಂದು ಗುಂಪು ಕಲ್ಲೆಸುವ ಪಂದ್ಯದಲ್ಲಿ ನಿರತರಾಗಿದ್ದವು. ಬೆಟ್ಟದ ಮೇಲೆ ನಿಂತು ಎಷ್ಟೇ ಬಲಯುತವಾಗಿ ಸಮುದ್ರಕ್ಕೆ ಕಲ್ಲು ಬಿಸಾಕಿದರೂ ಅದು ಅಲ್ಲಿಗೆ ತಲುಪುವುದಿಲ್ಲ ಎಂಬುದಾಗಿ ಕೆಲವು ಗೆಳೆಯರು ವಿವರಣೆ ನೀಡಿದರು. ನಾವು ಕೆಲವು ಕಲ್ಲುಗಳನ್ನೆತ್ತಿ ಪ್ರಯೋಗ ಮಾಡಿದೆವು ಊಹುಂ, ಅದು ಸಮುದ್ರದಕ್ಕೆ ತಾಗಲೇ ಇಲ್ಲ. ಅಷ್ಟರಲ್ಲಾಗಲೇ ಗಂಟೆ ಮೂರು ದಾಟತೊಡಗಿತ್ತು.

ಸಂಜೆಯಾದರೆ,ತೂಫಾನ್ ಜಾಸ್ತಿಯಾಗಿಬಿಟ್ಟರೆ ಹರಹರಾ ಗೋವಿಂದ ಎನ್ನಬೇಕಾಗುತ್ತೆ ಎಂಬ ಎಚ್ಚರಿಕೆಯಿಂದ ವಾಪಸು ಹೊರಟೆವು.ಮತ್ತೆ ಡಿಂಗಿ ಮೂಲಕ ಸಾಗಿ ಬೋಟ್ ಏರಿಕೊಂಡೆವು.ಆ ಹೊತ್ತಿಗೆ ಅಡುಗೆಯಾಳುಗಳು ಊಟ ತಯಾರಿ ಮಾಡಿ, ಎಲ್ಲರಿಗೂ ಅನ್ನ ಬಡಿಸತೊಡಗಿದರು. ನಿಧಾನಕ್ಕೆ ಹಡಗು ಚಲಿಸುತ್ತಿದ್ದಂತೆ, ನಮ್ಮ ಕೈಗಳು ಅನ್ನದ ಬಟ್ಟಲಿನತ್ತ ಜಾರತೊಡಗಿತ್ತು...

(ಇತ್ತೀಚೆಗಷ್ಟೇ ನೇತ್ರಾಣಿ ಗುಡ್ಡದಲ್ಲಿ ಶಸ್ತ್ರಾಸ್ತ್ರ ತರಬೇತಿಗೆ ಪರಿಸರವಾದಿಗಳಿಂದ ವಿರೋಧ ಎಂಬ ವರದಿ ಪ್ರಕಟವಾಗಿತ್ತು.ಅದನ್ನು ಓದಿದಾಗ ಯಾಕೋ ನೇತ್ರಾಣಿ ನೆನಪು ಮತ್ತೆ ಮರುಕಳಿಸಿತ್ತು. ಅಲ್ಲಿ ನೌಕಾ ನೆಲೆಯವರು ಪ್ರತಿವರ್ಷ ಈ ಗುಡ್ಡದ ಮೇಲೆಯೇ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಾರೆ. ನಾವು ಭೇಟಿ ನೀಡಿದಾಗ ಹಾಗೆ ತರಬೇತಿ ನಡೆಸುತ್ತಿದ್ದಾಗ ಸ್ಫೋಟಗೊಳ್ಳದ ಎರಡು ಬಾಂಬ್‌ಗಳು ಅಲ್ಲಿದ್ದವು. ಆ ಸಂದರ್ಭದಲ್ಲಿ ಸಮುದ್ರದಲ್ಲಿ ಇಂದು ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ ಎಂಬ ಪ್ರಕಟಣೆ ನೀಡಲಾಗುತ್ತದೆ.)

Thursday, November 1, 2007

ಭಾವುಕ ಜೀವಿ ಕಥೆಗಾರ ವ್ಯಾಸಕನ್ನಡ ಸಾಹಿತ್ಯಲೋಕದಲ್ಲಿ ನಾನು ಇಷ್ಟಪಡುವ ಕೆಲವೇ ಕೆಲವು ಪ್ರಮುಖರಲ್ಲಿ ಸಾಹಿತಿ, ಕಥೆಗಾರ ಎಂ.ವ್ಯಾಸರು ಒಬ್ಬರಾಗಿದ್ದಾರೆ. ಅವರು ಕನ್ನಡ ಸಾಹಿತ್ಯಲೋಕದಲ್ಲಿ ತೆರೆಮರೆಯಲ್ಲಿದ್ದರೂ ಕೂಡ, ಅಪಾರ ಅಭಿಮಾನಿಗಳನ್ನು ಪಡೆದುಕೊಂಡವರು. ತಮ್ಮ ವಿಭಿನ್ನ ಶೈಲಿಯ ಕಥೆಗಳ ಮೂಲಕ ಸಾಹಿತ್ಯ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದವರು ವ್ಯಾಸರು. ಕನ್ನಡದ ದೈನಿಕಗಳಾದ ಪ್ರಜಾವಾಣಿ, ಕನ್ನಡಪ್ರಭ , ಉದಯವಾಣಿ, ವಿಜಯಕರ್ನಾಟಕ ಸೇರಿದಂತೆ ಹೆಚ್ಚಿನ ಪತ್ರಿಕೆ, ವಾರ ಪತ್ರಿಕೆ, ಮಾಸಿಕಗಳಲ್ಲಿ ಅವರ ಕಥೆಗಳು ಆಗಾಗ ಪ್ರಕಟವಾಗುತ್ತಿರುತ್ತದೆ.

ನಾನು ಕೂಡ ಅವರ ಅಭಿಮಾನಿಯಾಗಿದ್ದೆ. ಉಷಾಕಿರಣ ಪತ್ರಿಕೆಯಲ್ಲಿದ್ದಾಗ ಬೆಂಗಳೂರಿನಿಂದ ಮಂಗಳೂರಿಗೆ ನಾನು ವರ್ಗಾವಣೆಗೊಂಡಿದ್ದೆ. ಆ ಸಂದರ್ಭದಲ್ಲಿ ಕಾಸರಗೋಡಿನ (ರೂಮ್‌ಮೇಟ್) ಪತ್ರಕರ್ತ ಮಿತ್ರ ಬಾಲಮುರಳಿ ಒತ್ತಾಯದ ಮೂಲಕ ವ್ಯಾಸರು ಲೇಖನ ಬರೆಯಲು ಆರಂಭಿಸಿದ್ದರು. ಅವರ ಬರಹ ಮತ್ತು ಕಥೆಗಳೆರಡೂ ಕೂಡ ವಿಭಿನ್ನ ಶೈಲಿಯವು. ಆಳವಾದ ಚಿಂತನೆಯ ಬರಹಗಳನ್ನು ವ್ಯಾಸರು ತಮ್ಮದೇ ರೂಪದಲ್ಲಿ ಅಕ್ಷರಕ್ಕಿಳಿಸುತ್ತಾರೆ. ಕಾಸರಗೋಡಿನ ಮಣ್ಣಿಪ್ಪಾಡಿಯ ಪ್ರಶಾಂತವಾದ ವಾತಾವರಣದ ತೋಟದಲ್ಲಿನ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುವ ವ್ಯಾಸರು ತುಂಬಾ ಮೌನಿ, ಏಕಾಂತ ಜೀವಿ.

ಅವರು ಎಲ್ಲಾ ಪತ್ರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ, ಯುವ ಬರಹಗಾರರ ಲೇಖನ ಓದಿ, ಅವರನ್ನು ಪ್ರೋತ್ಸಾಹಿಸುವ ವ್ಯಾಸರು ಕನ್ನಡ ಸಾಹಿತ್ಯ ವಲಯದ ಅಪರೂಪದ ವ್ಯಕ್ತಿ. ಈಗಾಗಲೇ ಸುಮಾರು 300 ಕ್ಕಿಂತಲೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಹೆಚ್ಚಿನ ಸಾಹಿತಿಗಳು ಪ್ರಶಸ್ತಿ, ಸನ್ಮಾನ ಅಂತ ರಾಜಕಾರಣಿಗಳ ಚುಂಗು ಹಿಡಿದು ಓಡಾಡುತ್ತಿದ್ದರೆ, ವ್ಯಾಸರು ಮಾತ್ರ ಅದ್ಯಾವ ಗೊಡವೆಗೂ ಹೋಗದವರು. ಈವರೆಗೂ ಅವರನ್ನು ಕನ್ನಡ ಸಾಹಿತ್ಯಲೋಕ ಗಂಭೀರವಾಗಿ ಪರಿಗಣಿಸದೆ ಇರುವುದು ವಿಪರ್ಯಾಸ. ವೇದಿಕೆ, ಹಾರ, ಸನ್ಮಾನ ಅಂದರೆ ಮಾರು ದೂರ ಸರಿಯುವ ವ್ಯಾಸರಿಗೆ ಯುವ ಬರಹಗಾರರು, ಮಿತ್ರರೆಂದರೆ ಪಂಚಪ್ರಾಣ.

ತುಂಬಾ ಭಾವುಕ ಸ್ವಭಾವದ ಅವರು ತಮ್ಮ ಕಥೆಗಳ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಕಂಬನಿ, ಕೃತ ಅವರ ಕಥಾ ಸಂಕಲನಗಳು, ಸುಳಿ, ಕ್ಷೇತ್ರ ಅವರ ಕವನ ಸಂಕಲನಗಳಾಗಿವೆ.ವ್ಯಾಸರ ಕಥೆಗಳ ಚುಂಬಕ ಶಕ್ತಿಯ ಶೈಲಿ ಹೇಗಿರುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ಮಯೂರದಲ್ಲಿ ಪ್ರಕಟವಾದ "ಕೆಂಡ'' ಕಥೆಯ ಕೆಲವು ಸಾಲುಗಳನ್ನು ಓದಿ. ಮೌನದಲ್ಲೇ ಮಾತುಗಳು ಹುಟ್ಟುತ್ತವೆ. ಅದನ್ನು ನಿನ್ನ ಮಾವ ಧ್ಯಾನ ಅನ್ನುತ್ತಿದ್ದರು.

ಕಥೆಯೊಂದು ಮನಸ್ಸಿನಲ್ಲಿ ಹುಟ್ಟಿಕೊಂಡರೆ ಸಾಕು,

ಮೌನ ಮುನಿಯಂತಾಗಿ ಬಿಡುತ್ತಿದ್ದರು.

ದಿನಗಟ್ಟಲೆ ಅವರು ವರ್ತಮಾನದಿಂದ ಅದೃಶ್ಯರಾಗಿ ಬಿಡುತ್ತಿದ್ದರು.

ನನಗೆ ಮೌನ ಅಭ್ಯಾಸವಾಗಿ ಬಿಟ್ಟಿತ್ತು.

ಧ್ಯಾನದ ಮೌನವಲ್ಲ, ಶವದ ಮೌನ. ಸ್ಮಶಾನ ಮೌನ.


ನೀನು ಈ ಗೂಡಿನಲ್ಲಿ ಹೇಗಿದ್ದೆ ? ಬಹಳ ತಡವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ.

ಈವರೆಗೆ ಪ್ರಕಟವಾಗಿರುವ ವ್ಯಾಸರ ಕಥೆ, ಕವನಗಳೆಲ್ಲವೂ ಮೂರಕ್ಷರದ್ದು, ಅದು ಅವರ ವಿಶೇಷತೆ. ಮಿತ್ರ ಮುರಳಿಯೊಂದಿಗೆ ಅವರನ್ನು ಭೇಟಿಯಾಗಿ ಬಂದ ಮೇಲೆ ಊರಿಗೆ ಹೋದಾಗಲೆಲ್ಲ, ಹಿರಿಯ ಜೀವದೊಂದಿಗೆ ಒಂದಿಷ್ಟು ಹೊತ್ತು ಕಳೆದು ಬರುವುದು ರೂಢಿ. ಅವರೊಂದಿಗೆ ಮಾತನಾಡುವಾಗೆಲ್ಲ ನನಗೆ ತೇಜಸ್ವಿ, ಖಾಸನೀಸರ ನೆನಪು ಆಗಾಗ ಕಾಡುತ್ತಿರುತ್ತೆ. ತೇಜಸ್ವಿಯೂ ಪ್ರಶಸ್ತಿ, ಸನ್ಮಾನಗಳಿಂದ ದೂರ ಉಳಿದವರು, ಖಾಸನೀಸರಂತೂ ಹದಿನೇಳು ವರ್ಷಗಳ ಕಾಲ ಪಾರ್ಕಿನ್‌ಸನ್ ಖಾಯಿಲೆಯಲ್ಲಿ ನರಳಿ ಇಹಲೋಕ ತ್ಯಜಿಸಿದ್ದರು. ಆದರೆ ಅವರ ಕಥೆಗಳಲ್ಲಿ ಮಾತ್ರ ಖಾಸನೀಸ ಇನ್ನೂ ಜೀವಂತವಾಗಿದ್ದಾರೆ.

ಇತ್ತೀಚೆಗೆ ಮತ್ತೊಬ್ಬ ಪತ್ರಕರ್ತ ಮಿತ್ರ ಹರೀಶ್ ಆದೂರ್ ಸಂದೇಶವೊಂದನ್ನು ಕಳುಹಿಸಿದ್ದ, ಮೂಡುಬಿದಿರೆಯ ತಮ್ಮ ಮನೆಯಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಇಟ್ಟುಕೊಂಡಿದ್ದೇನೆ. ಕಾರ್ಯಕ್ರಮದಲ್ಲಿ ವ್ಯಾಸರು ಭಾಗವಹಿಸುತ್ತಿದ್ದಾರೆ ಅಗತ್ಯವಾಗಿ ಬರಬೇಕೆಂದು ವಿನಂತಿಸಿಕೊಂಡಿದ್ದ. ಅನಿವಾರ್ಯ ಕಾರಣಗಳಿಂದ ಹೋಗಲಾಗಿಲ್ಲ. ಸಭೆ, ಸಮಾರಂಭದಿಂದ ದೂರ ಉಳಿಯುವ ವ್ಯಾಸರು ಯುವ ಬರಹಗಾರನ ಒತ್ತಾಯಕ್ಕೆ ಮಣಿದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ತುಂಬಾ ಸಂತೋಷ ನೀಡಿತ್ತು. ಜತೆಗೆ ಆದೂರ್‌ನಂತಹ ಮಿತ್ರರ ಸಾಹಿತ್ಯ ಚಟುವಟಿಕೆಗಳು ಶ್ಲಾಘನೀಯ.

ಆ ನೆಲೆಯಲ್ಲಿ ತಮ್ಮ ಪಾಡಿಗೆ ತಾವು ಕೃಷಿಯೊಂದಿಗೆ, ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಮೌನ ಹಕ್ಕಿ ವ್ಯಾಸರಿಗೆ ಅಕ್ಷರಗಳ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಕೋರುವೆ.


Tuesday, October 30, 2007

ತೆಹಲ್ಕಾ ಸೃಷ್ಟಿಸಿದ ಕೋಲಾಹಲಏನ್ ಸಾರ್ ಈ ರೀತಿ ಕೋಮುಗಲಭೆ, ಲೂಟಿ, ಅನಾಚಾರ ನಡೆಯುತ್ತಿದ್ದರೆ ಮುಂದಿನ ಕಥೆ ಏನು ಅಂದರೆ ಸಾಕು, ಆ ನನ್ಮಕ್ಕಳನ್ನ ಮೊದಲು ಗುಂಡಿಟ್ಟು ಸಾಯಿಸಬೇಕು.ಮುಸ್ಲಿಮರಿಂದಾಗಿ ಇಲ್ಲಿನ ನೆಮ್ಮದಿ ಹಾಳಾಗುತ್ತಿದೆ ಎಂಬ ಮಾತುಗಳು ಪುಂಖಾನುಪುಂಖವಾಗಿ ಹರಿದು ಬರುತ್ತದೆ.ಬಹುತೇಕ ಹಿರಿಯರು-ಕಿರಿಯರು ಎನ್ನದೆ ಇಂತಹದ್ದೇ ಆಕ್ರೋಶದ ಮಾತುಗಳನ್ನ ಆಡುತ್ತಿರುತ್ತಾರೆ. ಸಮಾಜದಲ್ಲಿ ಮತ್ತೆ,ಮತ್ತೆ ಹಿಂದೂ-ಮುಸ್ಲಿಂ ಸಂಘರ್ಷಗಳು ಆಗಾಗ ಎದುರಾಗುತ್ತಲೇ ಇವೆ.ಹೀಗೆ ಆದಾಗಲೆಲ್ಲ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇರುತ್ತದೆ.

ಆದರೆ ನಮ್ಮ ಬಹುಮುಖಿ ಸಂಸ್ಕೃತಿಯಲ್ಲಿ ಕೇವಲ ಹಿಂದೂ-ಮುಸ್ಲಿಂರ ಘರ್ಷಣೆಯಂತೆಯೇ, ಹಿಂದೂ-ಜೈನ್, ಹಿಂದೂ-ಬುದ್ಧಿಸ್ಟ್, ಹಿಂದೂ-ಕ್ರಿಶ್ಚಿಯನ್, ಹಿಂದೂ-ಸಿಖ್ ನಡುವೆ ಘರ್ಷಣೆ ನಡೆ(ಯುತ್ತಿದೆ)ದಿದೆ. ಯಾವಾಗ ಆಳುವ ವರ್ಗಕ್ಕೆ ಓಟ್ ಬ್ಯಾಂಕ್ ರಾಜಕಾರಣಕ್ಕೊಂದು ಅಸ್ತ್ರ ಬೇಕಾಯಿತೋ ಆಗ ಇಂತಹ ಕುತಂತ್ರ ರಾಜಕಾರಣ, ಓಲೈಕೆ, ಹಿಂದೂತ್ವದಂತಹ ವಿಚಾರಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ಪರಿಣಾಮ ಹಿಂದೂ-ಮುಸ್ಲಿಂರ ನಡುವಿನ ಅಂತರ ಮತ್ತಷ್ಟು ದೂರವಾಗತೊಡಗಿತು. ಹಾಗಂತ ನಾನು ಕೂಡ ಇಲ್ಲಿ ಮುಸ್ಲಿಂ ಪರವಾಗಿ ವಾದಿಸುತ್ತಿಲ್ಲ.

ಗೋದ್ರಾ ಘಟನೆಯನ್ನು ಖಂಡಿಸುವ ಬುದ್ಧಿಜೀವಿಗಳು, ಎಡಪಂಥದವರಿಗೆ, ಕೋಮು ಸಾಮರಸ್ಯ ಸಾರುವ ಮಂದಿಗೆ ಹಿಂದೂಗಳ ಮೇಲಾಗುವ ದಬ್ಬಾಳಿಕೆ, ಹತ್ಯೆಗಳು ಯಾಕೆ ಕಾಣಿಸುತ್ತಿಲ್ಲ ಎಂಬ ವಾದವೂ ಇದೆ. ಆದರೆ ಇದರಲ್ಲಿ ಸಂಘಪರಿವಾರದ ಪ್ರವೀಣ್ ಭಾಯ್ ತೊಗಾಡಿಯಾ, ಪ್ರಮೋದ್ ಮುತಾಲಿಕ್‌ ಅವರಂತಹವರ ಮೋಡಿಯ ಮಾತು ಹಾಗೂ ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸ ದ್ವೇಷದ ದಳ್ಳುರಿಯನ್ನು ಸದಾ ಉರಿಯುವಂತೆ ಮಾಡಿರುವುದಂತು ಸತ್ಯ.

ಕಾಂಗ್ರೆಸ್ಸಿಗೆ ಮುಸ್ಲಿಂ ಓಲೈಕೆ, ಬಿಜೆಪಿಗೆ ಹಿಂದೂತ್ವ, ಎಡಪಕ್ಷಗಳಿಗೆ ಮುಸ್ಲಿಂ ಪರ ಇರುವುದೇ ಪ್ರಮುಖ
ಬಂಡವಾಳವಾಗಿದೆ. ಇಂತಹ ಸಂರ್ಭದಲ್ಲಿ ತೆಹಲ್ಕಾ ಪತ್ರಿಕೆ ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಹಿಂಸಾಚಾರದ ತನಿಖಾ ವರದಿಯನ್ನು ಮಾಡುವ ಜರೂರತ್ತು ಇತ್ತೇ ಎಂಬ ಪ್ರಶ್ನೆ ಕೇಳಿಬಂದಿದೆ. ಅಲ್ಲದೇ ಪ್ರಮುಖ ಚಾನೆಲ್‌ಗಳಾದ ಸಿಎನ್‌ಎನ್, ಐಬಿಎನ್7, ಆಜ್‌ತಕ್ ವರದಿಯನ್ನು ಪ್ರಸಾರ ಮಾಡದಂತೆ ರಾಜ್ಯ ಸರಕಾರ ಆ ದಿನ ನಿಷೇಧ ಹೇರಿತ್ತು.

ತೆಹಲ್ಕಾ ನಡೆಸಿದ ಆಪರೇಶನ್ ಕಳಂಕ್ ಹೆಸರಿನ ಈ ತನಿಖಾ ವರದಿ ಗೋದ್ರಾ ನಂತರ ನಡೆದ ಹತ್ಯಾಕಾಂಡ ಭೀಕರ ಸ್ವರೂಪದ ಚಿತ್ರಣದ ಬಗ್ಗೆ ಬಿಜೆಪಿಯ ರಾಜಕಾರಣಿಗಳು, ವಕೀಲರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದನ್ನು ತನ್ನ ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದಿತ್ತು. ಸುಮಾರು ಆರು ತಿಂಗಳ ಕಾಲ ಪತ್ರಕರ್ತ ಆಶೀಶ್ ಚೇತನ್ ತನಿಖೆ ನಡೆಸಿ ಸಿದ್ಧಪಡಿಸಿದ ವರದಿ ಇದಾಗಿದೆ.ಆದರೆ ಇದೀಗ ಪ್ರಶ್ನೆ ಎದುರಾಗಿರುವುದು ಈ ಸಮಯದಲ್ಲಿ ಕೋಮುಗಲಭೆಗೆ ಸಂಬಂಧಿಸಿದ ವರದಿಯ ಅಗತ್ಯ ಏನಿತ್ತು.

ತೆಹಲ್ಕಾ ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಡಿಸೆಂಬರ್‌ನಲ್ಲಿ
ಗುಜರಾತ್‌ನಲ್ಲಿ ಚುನಾವಣೆ ನಡೆಯುತ್ತಿದ್ದು, ಆ ನೆಲೆಯಲ್ಲಿ ಮೋದಿ ವಿರುದ್ಧವಾಗಿ ಆಪರೇಶನ್ ಕಳಂಕ್ ಹೆಸರಿನಲ್ಲಿ ವರದಿ ಮಾಡಲಾಗಿದೆ ಎಂದು ದೂರಲಾಯಿತು. ಏನೇ ಆದರೂ ತೆಹಲ್ಕಾ ಮಹತ್ತರವಾದದ್ದನ್ನು ಸಾಧಿಸದೆ ಇರಬಹುದು. ಯಾಕೆಂದರೆ ಕೋಮು ಹಿಂಸಾಚಾರದ ಕುರಿತು ತನಿಖೆ ನಡೆಸಿ ನಾನಾವತಿ ಆಯೋಗ ವರದಿ ಸಲ್ಲಿಸಿತ್ತು. ಅದರಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೂಡ ವಿವರವಾದ ವರದಿ ಸಲ್ಲಿಸಿತ್ತು. ತೆಹಲ್ಕಾ ಘಟನೆಯಲ್ಲಿ ಭಾಗಿಯಾದ ಆಡಳಿತರೂಢ ಜನಪ್ರತಿನಿಧಿಗಳ ಬಾಯಿಂದಲೇ ಸತ್ಯ ಹೊರಡಿಸಿರುವುದು ಇಲ್ಲಿನ ಹೈಲೈಟ್ ಮತ್ತು ತನಿಖೆಗೆ ಸರಕಾರ ನೇಮಿಸಿದ ನಾನಾವತಿ ಆಯೋಗದ ಜಸ್ಟೀಸ್ ನಾನಾವತಿ ಮತ್ತು ಕೆ.ಜಿ.ಶಾ ಅವರು ಹಣ ಪಡೆದಿದ್ದಾರೆ ಎಂಬುದಾಗಿ ಸರಕಾರಿ ವಕೀಲ ಅರವಿಂದ ಪಾಂಡ್ಯ ತೆಹಲ್ಕಾದ ರಹಸ್ಯ ಕ್ಯಾಮೆರಾದ ಮುಂದೆ ಬಾಯ್ಬಿಟ್ಟಿರುವುದು ಆಘಾತಕಾರಿ ವಿಷಯವಾಗಿದೆ.

ಹಿಂದುತ್ವದ ವಿಷಯವನ್ನು ಬದಿಗೆ ಸರಿಸಿ, ಪತ್ರಕರ್ತರಾದವರು,ನಿಜಾಂಶ ತಿಳಿಯುವ ಕುತೂಹಲ ಇದ್ದವರು ತೆಹಲ್ಕಾ ವಿಶೇಷವಾಗಿ ಹೊರತಂದ 106ಪುಟಗಳ ದಿ.ಟ್ರೂಥ್ ಗುಜರಾತ್ 2002 ಸಂಚಿಕೆಯನ್ನು ಓದಬೇಕು. ಹಾಗಂತ ಅದನ್ನೆ ಒಪ್ಪಬೇಕಂತ ಅಲ್ಲ. ತನಿಖಾ ಪತ್ರಿಕೋದ್ಯಮ ಎಷ್ಟು ಪರಿಣಾಮಕಾರಿ ಎನ್ನುವುದು ತಿಳಿಯುತ್ತದೆ. ಈ ವರದಿ ಅದಾಗಲೇ ಸಾಕಷ್ಟು ಗೊಂದಲ ಸೃಷ್ಟಿಸಿರುವುದಂತೂ ನಿಜ. ಈ ಬಗ್ಗೆ ಸ್ವತಃ ನಾನಾವತಿಯವರೇ ಕೂಲಂಕಷ ತನಿಖೆ ನಡೆಸಿ ತೆಹಲ್ಕಾದ ಸತ್ಯಾಸತ್ಯತೆಯನ್ನು ಪರಾಮರ್ಶಿಸಲಾಗುವುದು ಎಂದು ಹೇಳಿದ್ದಾರೆ. ಹಾಗಾದರೆ ಕೋಮುಹಿಂಸಾಚಾರ - ಮೋದಿ ಇವೆರಡು ವಿಚಾರಗಳಲ್ಲಿ ಪತ್ರಿಕೆ ಬಯಲಿಗೆಳೆದ ವಿಷಯಗಳನ್ನ ನಂಬಬೇಕೋ ಅಥವಾ ಹಿಂದುತ್ವಕ್ಕೆ ಕಟ್ಟುಬಿದ್ದು ಮೋದಿಗೆ ಜೈಕಾರ ಹಾಕಬೇಕೋ ಎಂಬುದೀಗ ಪ್ರಶ್ನೆ...

ಅತೃಪ್ತ ಮುಸ್ಲಿಂ ಗುಂಪಿನ ಅಟ್ಟಹಾಸದಿಂದಾಗಿ 2002 ರ ಫೆ.27ರಂದು ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ಪರಿಣಾಮ 58 ಮಂದಿ ಕರಸೇವಕರು ಜೀವಂತ ದಹನವಾಗಿ ಹೋಗಿದ್ದರು. ಆ ನಂತರ ಗೋದ್ರಾದಲ್ಲಿ ನಡೆದದ್ದು ಇತಿಹಾಸದಲ್ಲಿ ನಡೆಯದೇ ಇದ್ದಂತಹ ಬರ್ಭರ ಜನಾಂಗೀಯ ಹತ್ಯೆ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಗಲಭೆಯಲ್ಲಿ 790 ಮುಸ್ಲಿಮರು, 254 ಹಿಂದೂಗಳು ಬಲಿಯಾಗಿದ್ದರು. 223 ಮಂದಿ ಕಾಣೆಯಾಗಿದ್ದರು, 919 ಮಹಿಳೆಯರು ವಿಧವೆಯರಾಗಿ, 606 ಮಕ್ಕಳು ಅನಾಥರಾಗಿದ್ದರು.

ಅನಧಿಕೃತ ಅಂಕಿ ಅಂಶಗಳ ಪ್ರಕಾರ ಎರಡು ಸಾವಿರಕ್ಕೂ ಅಧಿಕ ಮಂದಿ ಕೊಲೆಯಾಗಿ,9000 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ.ಇದು ಮೋದಿ ಅವರನ್ನು ಪರಮೋಚ್ಛ ನಾಯಕನನ್ನಾಗಿ ಮಾಡಿದರೆ, ಮತ್ತೊಂದೆಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಆಧುನಿಕ ಹಿಟ್ಲರ್ ಎಂಬ ಅಪಖ್ಯಾತಿಗೆ ಒಳಗಾದರು. ಅಧಿಕಾರದ ಗದ್ದುಗೆ ಏರಿದ ಮೋದಿ ನಂತರದಲ್ಲಿ "ನಿಮಗೆ ಸಹಾಯ ಬೇಕೆ ? ಹಾಗಾದರೆ ಮೋದಿಗೆ ನೇರವಾಗಿ ದೂರವಾಣಿ ಕರೆ ಮಾಡಿ ಎಂಬ ದೊಡ್ಡ ನಾಮಫಲಕಗಳು ಗುಜರಾತ್‌ನಲ್ಲಿ ರಾರಾಜಿಸತೊಡಗಿದವು.

ನೀವು ಆ ದೂರವಾಣಿ ಸಂಖ್ಯೆಗೆ ಕರೆ ಮಾಡಿದಲ್ಲಿ ಆ ಕಡೆಯಿಂದ ನಮಸ್ಕಾರ ನಾ, ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ ನಿಮ್ಮ ತೊಂದರೆಗಳನ್ನು ನನ್ನ ಬಳಿ ಹೇಳಿಕೊಳ್ಳಿ ,ನಾನು ಖಂಡಿತ ನಿಮ್ಮ ತೊಂದರೆಗಳನ್ನು ಪರಿಹರಿಸುವ ಯತ್ನ ಮಾಡುತ್ತೇನೆ ಎಂಬ ಭರವಸೆ ನೀಡುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು. ಇದು ಮೋದಿಯವರ ಮತ್ತೊಂದು ಮುಖ. ಇದೀಗ ಸಂಘಪರಿವಾರವೇ ತಮ್ಮ ನಾಯಕನ ಬಗ್ಗೆ ಅಪಸ್ವರ ಎತ್ತಿವೆ. ಮೋದಿ ಹಿಂದುಗಳಿಗೆ ಹಾಗೂ ಹಿಂದುತ್ವಕ್ಕೆ ಏನೂ ಮಾಡಿಲ್ಲ ಎಂದು ಒಳಗೊಳಗೆ ಕತ್ತಿ ಮಸೆಯುತ್ತಿವೆ.

ಅಂದರೆ ಒಂದಿಡಿ ಜನಾಂಗವನ್ನೇ ನಾಶ ಮಾಡಬೇಕು ಅನ್ನುವುದರಲ್ಲಿ ಯಾವ ಪುರುಷಾರ್ಥ ಇದೆ. ಗುಜರಾತ್‌ನಲ್ಲಿ ನಡೆದಂತೆ ವಿದೇಶಗಳಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರು ಹಿಂದೂಗಳ ಮಾರಣಹೋಮ ನಡೆಸಿದರೆ ಅದು ಎಷ್ಟು ಅಮಾಯಕ, ಅಪದ್ಧವೋ , ಅದೇ ರೀತಿ ಮತಾಂಧರು, ಮೂಲಭೂತವಾದಿಗಳು ನಡೆಸಿದ ಅನಾಹುತಕ್ಕೆ ಒಂದಿಡಿ ಜನಾಂಗದ ವಿರುದ್ಧ ಸೇಡು ತೀರಿಸಿಕೊಳ್ಳುವುದರಲ್ಲಿ ಅರ್ಥ ಇದೆಯಾ?. ಅಂತಹ ಜನಾಂಗಕ್ಕೆ ದೇಶದಲ್ಲಿ ಬದುಕಲು ಹಕ್ಕು ಇಲ್ಲ ಎಂಬುದು ನ್ಯಾಯವೇ ಎಂಬ ಬಗ್ಗೆ ಆಲೋಚಿಸಬೇಕಾಗಿದೆ...

Friday, October 26, 2007

ಆದರ್ಶ ಸಮಾಜದ ಬೆನ್ನೇರಿ ಹೊರಟವರು....ಇತ್ತೀಚೆಗೆ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರ ಸಹೋದರ, ನಟ ಪವನ್ ಕಲ್ಯಾಣ್ ಅವರು ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ತಮ್ಮ ರಿವಾಲ್ವರ್ ಅನ್ನು ನೀಡಿದ ಬಳಿಕ, ತಾನು ಬಡಜನರ ರಕ್ಷಣೆಗಾಗಿ 'ಜನಸಾಮಾನ್ಯರ ರಕ್ಷಣಾ ಸಂಘಟನೆ'ಯನ್ನು ಹುಟ್ಟು ಹಾಕುತ್ತಿರುವುದಾಗಿ ಘೋಷಿಸಿದ್ದರು.

ನೂರಾರು ಬೆಂಬಲಿಗರೊಂದಿಗೆ ಹೈದರಾಬಾದ್ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ಆಗಮಿಸಿದ್ದ ಪವನ್ ಕಲ್ಯಾಣ್ ತುಂಬಾ ನಾಟಕೀಯವಾಗಿ ತನ್ನ ರಿವಾಲ್ವರ್, ಅದಕ್ಕೆ ಸಂಬಂಧಪಟ್ಟ ದಾಖಲಾತಿಯನ್ನು ಆರಕ್ಷಕರ ವಶ ಒಪ್ಪಿಸಿ ತನ್ನ ನಿಲುವಿನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದರು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಇಂತಹ ಸಂಘಟನೆಯನ್ನು ಸ್ಥಾಪಿಸುತ್ತಿದ್ದು, ಅದಕ್ಕಾಗಿ ಒಂದು ಕೋಟಿ ರೂಪಾಯಿ ವಂತಿಗೆ ನೀಡುತ್ತಿರುವುದಾಗಿ ತಿಳಿಸಿದ್ದರು.

ಮದರಾಸ್ ರೈಫಲ್ ಕ್ಲಬ್ ಸದಸ್ಯರಾಗಿರುವ ಪವನ್ ಕಲ್ಯಾಣ್, 1998ರಲ್ಲಿ ರಿವಾಲ್ವರ್ ಲೆಸೆನ್ಸ್ ಪಡೆದಿದ್ದರು.ಇದೀಗ ತನಗೆ ಅದರ ಅಗತ್ಯ ಇಲ್ಲ ಎಂದು ಹೇಳಿದ್ದರು.ಪವನ್ ಕಲ್ಯಾಣ್ ಅವರ ಹೇಳಿಕೆಯನ್ನು ಗಮನಿಸಿದ ಬಳಿಕ, ನೆನಪಿಗೆ ಬಂದಿದ್ದೆ ಕರ್ನಾಟಕದಲ್ಲಿ ಬಾಂಬ್ ಎಸೈ ಎಂದೇ ಹೆಸರು ಪಡೆದ ಗಿರೀಶ್‌ ಲೋಕನಾಥ್‌ ಮಟ್ಟೆಣ್ಣವರ್‌.

ಪವನ್ ನಟರಾದರೇ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಟ್ಟೆಣ್ಣ , ಭ್ರಷ್ಟಾಚಾರದ ವಿರುದ್ಧ, ಜನರ ಹಿತರಕ್ಷಣೆಗಾಗಿ ಶಾಸಕರ ಭವನದಲ್ಲಿ ಬಾಂಬ್ ಇಡುವ ಮೂಲಕ ಕರ್ನಾಟಕದಾದ್ಯಂತ ಒಂದೇ ದಿನದಲ್ಲಿ ಮನೆಮಾತಾಗಿದ್ದರು. ಆ ಸಂದರ್ಭದಲ್ಲಿ ಹಾಯ್ ಬೆಂಗಳೂರ್ ಪತ್ರಿಕೆ ಆತನಿಗೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಬಳಿಕ ಮಟ್ಟೆಣ್ಣ ಭ್ರಷ್ಟಾಚಾರ ವಿರೋಧಿ ವೇದಿಕೆ ಅಂತ ಮಾಡಿಕೊಂಡು ಊರನ್ನ ಸುತ್ತ ತೊಡಗಿದರು, ಹಾಗೆ ಅವರು ಭಾರತೀಯ ಜನತಾ ಪಕ್ಷ ಸೇರುವುದಾಗಿ ಘೋಷಿಸಿದ್ದರು.

ಕ್ರಾಂತಿ ಮಾಡಲು ಹೊರಟ ಮಟ್ಟೆಣ್ಣ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ರಾಜಕಾರಣ, ರಾಜಕೀಯ ನಾಯಕರು ಅದೆಷ್ಟು ಪರಿಶುದ್ಧರಾಗಿದ್ದಾರೆ ಎಂಬುದನ್ನು ವಿವರಿಸಬೇಕಾದ ಅಗತ್ಯ ಇಲ್ಲ. ಅವರು ಪಕ್ಷ ಮೂಲಕ ಅದ್ಯಾವ ಕ್ರಾಂತಿ ಮಾಡುತ್ತಾರೋ. ಅದೇ ರೀತಿ ಆಂಧ್ರದಲ್ಲಿ ಪವನ್ ಕಲ್ಯಾಣ್ ಕೂಡ ಅಂತಹ ನಿರ್ಧಾರಕ್ಕೆ ಗಂಟು ಬಿದ್ದಿದ್ದಾರೆ. ತೆಲುಗು ಸಿನಿಮಾ ರಂಗದಲ್ಲಿ ಕಳೆದ 30 ವರ್ಷಗಳಿಂದ ಅಭಿನಯಿಸಿ ಖ್ಯಾತಿ ಗಳಿಸಿದ ಚಿರಂಜೀವಿ ಹಣ, ಯಶಸ್ವಿ ಎಲ್ಲವೂ ಗಳಿಸಿದ್ದಾರೆ.

ಆದರೆ ಸಹೋದರ ಪವನ್ ನಟರಾಗಿ, ಸಾಮಾಜಿಕ ಸೇವಕನಾಗಿ ಆಗಲಿ ಮುಂಚೂಣಿಯಲ್ಲಿದ್ದ ವ್ಯಕ್ತಿಯಾಗಿರಲಿಲ್ಲ. ಇದೀಗ ದಿಢೀರನೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಟೊಂಕ ಕಟ್ಟಿ ನಿಲ್ಲುವುದಾಗಿ ಘೋಷಿಸಿದ್ದಾರೆ.ಪ್ರಪಂಚದಲ್ಲಿ ಕ್ರಾಂತಿಗಳಿಗೆ ಯಾವುದೇ ಬರ ಇಲ್ಲ. ಕರ್ನಾಟಕದಲ್ಲಿ 12ನೇ ಶತಮಾನದ ಬಸವಣ್ಣನವರ ಕ್ರಾಂತಿಯೇ ಐತಿಹಾಸಿಕವಾಗಿ ಪ್ರಮುಖವಾದದ್ದು. ಅದರ ಬಳಿಕ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿನ ಚಳವಳಿಗಳು ಯಶಸ್ವಿಯಾಗಿದ್ದವು.

ಆದರೆ ನಂತರದ ಲೋಹಿಯಾ, ಜೈಪ್ರಕಾಶ್ ನಾರಾಯಣ್, ಮಾವೋವಾದಿ, ರೈತ, ದಲಿತ, ನಕ್ಸಲ್ ಚಳವಳಿಗಳೆಲ್ಲ ಇಂದು ಏನಾಗಿವೆ ಎಂಬುದು ನಮ್ಮ ಕಣ್ಣ ಮುಂದಿದೆ. ಹಾಗೇ ಜನರ ಕಲ್ಯಾಣಕ್ಕಾಗಿ ಹುಟ್ಟಿಕೊಂಡ ಚಳವಳಿಗಳ ಸಂಘಟನೆಗಳೇ ಇವತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಒಡೆದು ಬೇರೆ, ಬೇರೆ ಹೆಸರಿನ ಸಂಘಟನೆಗಳಾಗಿ ಜನ್ಮ ತಳೆದಿವೆ.....

Sunday, October 21, 2007

ದತ್ತ ಪೀಠ ವಿವಾದದ ಸುತ್ತ


ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯಲ್ಲಿ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಸೇರಿದಂತೆ ಸಂಘ ಪರಿವಾರ ಮತ್ತೆ ಬಿಗುಪಟ್ಟು ಹಿಡಿದಿದೆ.ಆದರೆ ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡಬಾರದು ಎಂದು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ಫರ್ಮಾನು ಹೊರಡಿಸಿದ್ದಾರೆ.

ದೇಶದ ಶ್ರದ್ಧಾ ಕೇಂದ್ರಗಳು, ಜಾತಿ, ಒಲೈಕೆ, ಹಿಂದುತ್ವದಂತಹ ವಿಷಯಗಳು 'ರಾಜಕೀಯ ಪಕ್ಷ' ಗಳ ಓಟ್ ಬ್ಯಾಂಕ್‌ನ ಪ್ರಮುಖ 'ದಾಳ' ವಾಗಿ ಬಿಟ್ಟಿವೆ ಎನ್ನುವುದಕ್ಕೆ ನಡೆಯುತ್ತಿರುವ ಘಟನೆಗಳು ಮತ್ತಷ್ಟು ಪುಷ್ಠಿ ನೀಡುತ್ತಿವೆ. ಬಾಬಾಬುಡನ್ ಗಿರಿ ಬಡ ಹಿಂದು ಮತ್ತು ಮುಸ್ಲಿಮರ ಧಾರ್ಮಿಕ ಕೇಂದ್ರವಾಗಿತ್ತು.ಹಿಂದು ಧರ್ಮದ ಕಂದಾಚಾರಗಳ ವಿರುದ್ಧ ಸಿಡಿದೆದ್ದ ಚಾರುವಾಕರಂತೆ,ಮುಸ್ಲಿಂ ಕಂದಾಚಾರಗಳನ್ನು ವಿರೋಧಿಸಿದ ಸೂಫಿ ಪಂಥದ ಸಮಾಗಮ ಕ್ಷೇತ್ರ ಇದಾಗಿತ್ತು.

ಇದನ್ನು ಬಡ ಹಿಂದು-ಮುಸ್ಲಿಮರು ಬೇರೆ, ಬೇರೆ ಹೆಸರಲ್ಲಿ ಆರಾಧಿಸುತ್ತಾ,ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ನಿರಾತಂಕವಾಗಿ ಪೂಜೆ,ವಿಧಿವಿಧಾನಗಳು ನಡೆಯುತ್ತಿದ್ದವು.ಮುಸ್ಲಿಮರು ನಾಸಿರುದ್ದೀನ್ ಎಂದು ಅಡ್ಡಬಿದ್ದರೆ, ಹಿಂದುಗಳು ನಾಗನಾಥ ಎಂದು ಆರಾಧಿಸುತ್ತಿದ್ದರು, ಹಿಂದು-ಮುಸ್ಲಿಂ ಎರಡರಲ್ಲೂ ಭೇದ-ಭಾವ,ಕಂದಾಚಾರಾ, ಅಸ್ಪ್ರಶ್ಯತೆಗಳಿಂದ ಕಂಗೆಟ್ಟ ಜಾತಿಗಳಾಗಿದ್ದವು.

ಅಂತಹ ಸಂದರ್ಭದಲ್ಲಿ ಸಹಬಾಳ್ವೆಯನ್ನು ಕಲಿಸಿಕೊಟ್ಟಿದ್ದ ಸೂಫಿ ಪಂಥ 12ನೇ ಶತಮಾನದ ಬಸವಣ್ಣನವರ ಶರಣ ಸಂಪ್ರದಾಯದಂತೆ, ಬಡ ಜನತೆ, ಜಾತಿ-ಧರ್ಮಗಳನ್ನು ಮೀರಿ ಬಾಬಾ ಬುಡನ್‌ಗಿರಿಯಲ್ಲಿ ನೆಲೆಸಿದ್ದ ದಾದಾ ಹಯಾತ್ ಮೀರ್ ಖಲಂದರ್‌ನನ್ನು ದತ್ತಾತ್ತ್ರೇಯನೆಂದೂ, ಬಾಬಾ ಬುಡನ್ ಎಂದೂ ನಂಬಿಕೊಂಡು ಪೂಜಿಸುತ್ತಿದ್ದರು.ಆತ ಮರಣವನ್ನಪ್ಪಿದ ಮೇಲೂ ಅದೇ ಸಂಪ್ರದಾಯ ಮುಂದುವರಿಯಿತು.

ಸುಮಾರು 90ರ ದಶಕದವರೆಗೆ ಈ ಶ್ರದ್ಧಾ ಕೇಂದ್ರಗಳ ಬಗೆಗಿನ ವಿವಾದದ ಪ್ರಮಾಣ ಕಡಿಮೆಯಾಗಿತ್ತು. 1992ರ ಬಾಬರ್ v/s ರಾಮನ ವಿವಾದ ಮತ್ತು ಮಸೀದಿ ಧ್ವಂಸದ ಘಟನೆ ಎಲ್ಲಾ ಅನಾಹುತಗಳಿಗೂ ಮೂಲವಾಯಿತು. ಅವೆಲ್ಲ ರಾಜಕೀಯಗೊಂಡ ಮೇಲೆ ಚುನಾವಣಾ ವಿಷಯಗಳಾಗಿ ಜನರ ಸೌಹಾರ್ದತೆಯನ್ನೇ ಬಲಿ ತೆಗೆದುಕೊಂಡು ಬಿಟ್ಟವು. ಕೋಮು ವಿಷ ಜ್ವಾಲೆ, ಓಲೈಕೆಯ ರಾಜಕಾರಣದಿಂದಾಗಿ ಇಂದು ಮಧುರಾ, ಕಾಶಿ, ಅಯೋಧ್ಯೆ, ತಾಜ್ ಮಹಲ್, ಕುತುಬ್ ಮಿನಾರ್ ಸೇರಿದಂತೆ ಐತಿಹಾಸಿಕ, ಧಾರ್ಮಿಕ ತಾಣಗಳೆಲ್ಲವೂ ವಿವಾದದ ಕೇಂದ್ರಗಳಾಗಿವೆ.

ದತ್ತ ಪೀಠದ ವಿವಾದವೀಗ ಮತ್ತೆ ಚುನಾವಣೆಯ ಅಜೆಂಡವಾದಂತಿದೆ. ಕಳೆದ ಚುನಾವಣೆಯಲ್ಲಿ ದತ್ತ ದೇವರ ಕೃಪೆಯಿಂದ ಬಿಜೆಪಿ ಅಧಿಕ ಸೀಟುಗಳನ್ನು ಪಡೆಯುವಲ್ಲಿ ಸಹಕಾರಿಯಾಗಿತ್ತು. ಜಾತಿ-ಮತ, ಭೇದ-ಭಾವ ತೊಡೆದು ಸೌಹಾರ್ದತೆಯ ಕೇಂದ್ರವಾಗಿದ್ದ ಬಾಬಾಬುಡನ್ ಗಿರಿಯ ಸುತ್ತ ಈಗ ಪೊಲೀಸ್ ಸರ್ಪಗಾವಲು. ನಿರಾತಂಕವಾಗಿ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದ ಬಡ ಹಿಂದು - ಮುಸ್ಲಿಂ ಭಕ್ತರಲ್ಲಿ ಇದೀಗ ತುಂಬಿರುವುದು ಆತಂಕ ಮಾತ್ರ.

Saturday, October 20, 2007

ದೇಶ ವಿಭಜನೆ ಮತ್ತು ಸಾದತ್ ಮಂಟೋಭಾರತ - ಪಾಕಿಸ್ತಾನ ದೇಶ ವಿಭಜನೆ ಹಾಗೂ ಆ ಸಂದರ್ಭದಲ್ಲಿನ ವಿಪ್ಲವ, ಹಿಂಸಾಚಾರ, ಸಾವು, ನೋವುಗಳು ಎರಡೂ ದೇಶಗಳ ನಡುವಿನ ಬಾಂಧವ್ಯಕ್ಕೆ ಕೊಳ್ಳಿ ಇಟ್ಟಿತ್ತು. ಆ ನೋವಿನ, ದ್ವೇಷ, ಅಸಹನೆಯ ನಡುವೆ ಈಗಲೂ ನಮ್ಮನ್ನು ಕಾಡುತ್ತಿರುವವ ಭಾರತದಲ್ಲಿ ಮುಸ್ಲಿಮನಾಗಿ ಹುಟ್ಟಿ, ಪಾಕಿಸ್ತಾನದಲ್ಲಿ ಮೃತ್ಯುವಶವಾದ ಲೇಖಕ ಸಾದತ್ ಹಸನ್ ಮಂಟೋ ಆತನ ಕುರಿತ ಜೀವನ ಯಾತ್ರೆಯ ತುಣುಕು ಇಲ್ಲಿದೆ......

ದೇಶ ವಿಭಜನೆಯ ನಂತರ ಲಾಹೋರ್ ಮಂಟೋಗೆ ಜೀವನ ನಡೆಸುವ ಅವಕಾಶವನ್ನೇ ನೀಡಲಿಲ್ಲ. ಹೆಂಡತಿ, ಮೂರು ಮಂದಿ ಹೆಣ್ಣು ಮಕ್ಕಳ ಸಂಸಾರ ರಥ ನಡೆಯಬೇಕಿತ್ತು. ಇಂತಹ ಜಂಜಡಗಳ ನಡುವೆ ಸಾದತ್ ಕುಡಿತದ ದಾಸನಾಗಿಬಿಟ್ಟಿದ್ದ. ಆತನಿಗೆ ಬದುಕಲು ತಿಳಿದಿರುವ ಏಕೈಕ ಕೆಲಸವೆಂದರೆ ಬರವಣಿಗೆ ಮಾತ್ರ. ಬದುಕಲು ಕೊನೆಗೂ ಆತ ಹಗಲು ರಾತ್ರಿ ಬರೆಯತೊಡಗಿದ.

ಹೀಗೆ ಅನೇಕ ಕಥೆ, ನಾಟಕ, ಕಾದಂಬರಿ, ಪ್ರಬಂಧಗಳನ್ನು ಬರೆದ. ಕೆಲವೊಮ್ಮೆ ಪತ್ರಿಕಾ ಕಚೇರಿಯಲ್ಲಿ ಕುಳಿತೆ ಬರೆದು ಕೊಡುತ್ತಿದ್ದ ಸಾದತ್‌ಗೆ ದೊರೆಯುತ್ತಿದ್ದ ಸಂಭಾವನೆ 30 ರೂಪಾಯಿ. ಆದರೆ ಆ ಹಣ ಆತನ ಕುಡಿತಕ್ಕೆ ಸಾಲುತ್ತಿರಲಿಲ್ಲವಾಗಿತ್ತು. ವರ್ಷಗಳ ಕಾಲ ಇದೇ ರೀತಿ ಎರಡು ತುಂಡು ಬ್ರೆಡ್ ಮತ್ತು ಕುಡಿತ, ಬರಹಗಳಲ್ಲಿ ಜೀವಿಸತೊಡಗಿದ ಮಂಟೋಗೆ ಆಘಾತ ಕಾಡಿತ್ತು.

ಆತ ಬರೆದ ಕಥೆಗಳಲ್ಲಿ ಪ್ರೇಮ, ಲೈಂಗಿಕತೆ, ಸೂಳೆಗಾರಿಕೆಯ ಅಂಶಗಳಿವೆ ಎಂಬುದಾಗಿ ಆರೋಪಿಸಿ ಒಂದರ ಮೇಲೊಂದರಂತೆ 5 ಕೇಸುಗಳನ್ನು ದಾಖಲಿಸಲಾಯಿತು. ಇದರಿಂದ ಮಂಟೋ ಅಕ್ಷರಶಃ ಮಾನಸಿಕವಾಗಿ ರೋಸಿ ಹೋಗಿದ್ದ. 1955 ಜನವರಿ 18 ರಂದು ಮುಂಜಾನೆ ಸಾದತ್ ಮೂಗಿನಿಂದ ರಕ್ತಸ್ರಾವವಾಗ ತೊಡಗಿತ್ತು. ಆ ಸಂದರ್ಭದಲ್ಲಿ ಆತ ಶರಾಬಿಗಾಗಿ ಅಂಗಲಾಚುತ್ತಿದ್ದ.ಮಂಟೋ ತೀರಿಹೋದಾಗ ಆತನ ವಯಸ್ಸು 44. ಅವನು ಭಾರತ ಬಿಟ್ಟು ಹೋದ ಮೇಲೆ ಲಾಹೋರಿನಲ್ಲಿ ಏಳು ವರ್ಷ ಕಳೆದಿದ್ದ.

ಆ ಏಳು ವರ್ಷಗಳು ಆತನ ಪಾಲಿಗೆ ಹಾವು - ಏಣಿಯಂತೆ ಜೀವಿತಾವಧಿ ಕಳೆದಿದ್ದ. ಮಂಟೋ ಪ್ರತಿಭೆಗೆ ಮನ್ನಣೆ ನೀಡಿದ್ದು ಮುಂಬೈ ಹಿಂದಿ ಚಿತ್ರರಂಗ. ಶಿಸ್ತಿನ ಸಿಪಾಯಿಯಂತಿದ್ದ ತಂದೆಯ 2ನೇ ಹೆಂಡತಿಯ ಕೊನೆಯ ಮಗನಾಗಿ 1912ರಲ್ಲಿ ಪಂಜಾಬ್‌ ಲೂಧಿಯಾನದ ಸಾಮ್ರಾಲದಲ್ಲಿ ಜನಿಸಿದ್ದ. ಈತನಿಗೆ 11 ಜನ ಸಹೋದರ, ಸಹೋದರಿಯರು. ಮಲತಾಯಿಯ ಪ್ರೀತಿರಹಿತ ಕುಟುಂಬದಲ್ಲಿ, ತಂದೆಯ ಭಯದಲ್ಲಿಯೇ ಮಂಟೋ ಬೆಳೆದಿದ್ದ. ಮಂಟೋ ಅಮೃತಸರದ ರಾತ್ರಿಗಳನ್ನು ಪೋಲಿಗಳ ಸಹವಾಸದಲ್ಲೇ ಕಳೆಯುತ್ತಾ ಮೆಟ್ರಿಕ್‌ನಲ್ಲಿ 2ಬಾರಿ ನಪಾಸಾಗಿ, 3ನೇ ಸಲ ಉತ್ತೀರ್ಣನಾದರೂ, ಆ ಸೋಲು ಆತನನ್ನು ಕೊನೆಯವರೆಗೂ ಬಿಟ್ಟಿರಲಿಲ್ಲ.1937ರಲ್ಲಿ ಸಿನಿಮಾ ಮಾಸಿಕವೊಂದರ ಪತ್ರಕರ್ತನಾಗಿ ಮುಂಬೈಗೆ ಬಂದ ಸಾದತ್, ತಾರೆಯರ, ಚೆಲುವೆಯರ, ಸೂಳೆಯರ ಮತ್ತು ವಂಚಕರಿಂದ ತುಂಬಿದ್ದ ಚಿತ್ರಲೋಕವನ್ನು ಕಂಡ.

ಆ ಬಳಿಕ ಸುಮಾರು ಎಂಟು ಸಿನಿಮಾ ಕಥೆ ಬರೆದ. ಮುಂದಕ್ಕೆ 2ನೇ ವಿಶ್ವಯುದ್ಧದ ಸಮಯದಲ್ಲಿ ದೆಹಲಿ ಆಕಾಶವಾಣಿ ಬರಹಗಾರನಾಗಿ ದುಡಿದು ಅಲ್ಲಿಂದ ಹೊರಬಿದ್ದಿದ್ದ. ಚಿತ್ರರಂಗ ಸಾದತ್‌ಗೆ ಹಣ, ಕೀರ್ತಿ, ಹೆಸರು ತಂದುಕೊಟ್ಟಿತ್ತಾದರೂ, ಪ್ರೀತಿಯಿಲ್ಲದೆ ಕಳೆದ ಅವನ ತಳಮಳ ಮಾತ್ರ ಮುಂದುವರಿದೇ ಇತ್ತು. ಇಂತಹ ಸಂದರ್ಭದಲ್ಲಿ ಬಾಂಬೆ ಟಾಕೀಸಿನಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಮುಸ್ಲಿಂ ಪ್ರತಿಭೆಗಳ ವಿರುದ್ಧ ಅಶೋಕ್ ಕುಮಾರ್ (ಬಾಂಬೆ ಟಾಕೀಸಿನ ದಾದಾಮೋನಿ ಅಶೋಕ್)ಗೆ ಬೆದರಿಕೆ ಪತ್ರಗಳು ಬರತೊಡಗಿದವು.

ಆ ಬಳಿಕ ಮಂಟೋ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿದ. ಅಶೋಕ್‌ ಹಾಗೂ ಆತನ ಮುಂಬೈ ಸ್ನೇಹಿತರು ಬಹಳಷ್ಟು ಒತ್ತಾಯ ಮಾಡಿದರೂ ಕೂಡ ಮಂಟೋ ಲಾಹೋರಿನತ್ತ ಪ್ರಯಾಣಿಸುತ್ತಾನೆ. 1948ರ ಜನವರಿಯಲ್ಲಿ, ಅದಾಗಲೇ ಹೆಂಡತಿ, 3ಹೆಣ್ಣು ಮಕ್ಕಳು ಲಾಹೋರಿಗೆ ಹೋಗಿ ನೆಲೆಸಿದ್ದರು. ಆ ಸಮಯದಲ್ಲಿ ಅದು ಪಾಕಿಸ್ತಾನವಾಗಿರಲಿಲ್ಲ. ಸಾದತ್ ಕೊನೆಯವರೆಗೂ ಮುಂಬೈ ಸೆಳೆತದಿಂದ ಹೊರಬಂದಿರಲಿಲ್ಲ. ಲಾಹೋರ್ - ಪಾಕಿಸ್ತಾನ ಅವನಿಗೆಂದೂ ಸ್ವಂತ ನೆಲ ಅನಿಸಲೇ ಇಲ್ಲ. ತ್ರಿಶಂಕು ಮನಸ್ಥಿತಿಯಲ್ಲೇ ಆತ ಕೊನೆಯುಸಿರೆಳೆದಿದ್ದ.......

Friday, October 12, 2007

ಬನ್ನಿ ಅಭಯಾರಣ್ಯಕ್ಕೆ....!


ಬೆಂಗಳೂರಿನಿಂದ ಸುಮಾರು 500ಕಿ.ಮೀ.ದೂರದಲ್ಲಿರುವ ಉಡುಪಿ ಜಿಲ್ಲೆಯಲ್ಲಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ಕೊಲ್ಲೂರು. ಈ ಕ್ಷೇತ್ರ ಕೇರಳ, ತಮಿಳುನಾಡು ಸೇರಿದಂತೆ ಅನೇಕ ಭಾಗದ ಸಹಸ್ರಾರು ಭಕ್ತರನ್ನು ಹೊಂದಿದೆ. ಪ್ರತಿನಿತ್ಯ ಬೇರೆ, ಬೇರೆ ರಾಜ್ಯದ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಕೊಲ್ಲೂರು ಮೂಕಾಂಬಿಕೆ ಭಕ್ತರಿಂದಾಗಿ ಸಾಕಷ್ಟು ಖ್ಯಾತಿ ಪಡೆದಿದ್ದಾಳೆ. ಆದರೆ ಧಾರ್ಮಿಕವಾಗಿ ಹೆಸರು ಗಳಿಸಿರುವ ಈ ಕ್ಷೇತ್ರ, ಪ್ರವಾಸೋದ್ಯಮದ ದೃಷ್ಟಿಯಲ್ಲಿ ಇದೊಂದು ಸುಂದರ ತಾಣ ಎಂಬುದನ್ನು ಗಮನಿಸಬೇಕು.


ಅಭಯಾರಣ್ಯದಿಂದ ಆವೃತ್ತವಾಗಿರುವ ಕೊಲ್ಲೂರು ದಟ್ಟ ಹಸಿರಿನಿಂದ ನೋಡುಗರ ಮನಸೆಳೆಯಬಲ್ಲ ಊರು ಇದಾಗಿದೆ. ದಾರಿಯುದ್ದಕ್ಕೂ ಹಾವಿನಂತೆ ಮುಂದಕ್ಕೆ ಸಾಗುವ ರಸ್ತೆಯಲ್ಲಿ ಎಡ - ಬಲದಲ್ಲಿ ಕಣ್ಣು ಹಾಯಿಸಿದರೆ ಕಾಣ ಸಿಗುವುದು ಹಚ್ಚಹಸುರಿನ ಅಭಯಾರಣ್ಯ, ರಾತ್ರಿ ಸಮಯದಲ್ಲಂತೂ ಇಲ್ಲಿನ ಪ್ರಯಾಣ ಹೆದರಿಕೆ ಹುಟ್ಟಿಸುತ್ತೆ, ಒಮ್ಮೊಮ್ಮೆ ರಸ್ತೆಯಲ್ಲೇ ಕಾಡೆಮ್ಮೆಗಳು ಠಿಕಾಣಿ ಹೂಡಿರುತ್ತವೆ. ಹುಲಿ, ಚಿರತೆಗಳ ದರ್ಶನ ಆಗಾಗ ಆಗುತ್ತಿರುತ್ತದೆ.


ಕೊಲ್ಲೂರು ಧಾರ್ಮಿಕವಾಗಿ ಹೆಸರು ಗಳಿಸಿದಷ್ಟು, ಪ್ರವಾಸಿ ತಾಣವಾಗಿ ಇನ್ನೂ ರೂಪುಗೊಂಡಿಲ್ಲ ಎನ್ನಬಹುದಾಗಿದೆ. ಇಲ್ಲಿನ ಆನೆಝರಿ ಹಾಗೆ ಮುಂದಕ್ಕೆ ಸಾಗಿ ಎಡಕ್ಕೆ ತಿರುಗಿ 10ಕಿ.ಮೀ.ಸಾಗಿದರೆ ಕಾಡಿನ ಮಧ್ಯೆ ಸಿಗುವ ಬಾವ್ಡಿ ಎಂಬ ಊರು. ಅಲ್ಲಿರುವುದೇ ನಾಲ್ಕಾರು ಮನೆ. ಅಲ್ಲಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಅದ್ಭುತವಾದ ಜಲಪಾತ ನಮ್ಮ ಮನಸೂರೆಗೊಳ್ಳುತ್ತದೆ. ಅದರಂತೆ ಕೊಲ್ಲೂರು ದೇವಳ ಸಮೀಪದ ಎಡಭಾಗದ ರಸ್ತೆಯಿಂದ ಮುಂದಕ್ಕೆ ಸಾಗಿದರೆ ಅಭಯಾರಣ್ಯದ ಹೊರಕ್ಕೆ ದೊಡ್ಡದಾಗಿ ಫಲಕವೊಂದು ಕಾಣಿಸುತ್ತದೆ, ಅರಸಿನಗುಂಡಿಗೆ ಹೋಗುವ ದಾರಿ ಅಂತ, ಅದರಲ್ಲಿ ಸಾಗಿ ಆ ಜಲಪಾತದ ವೈಭವವನ್ನು ಅನುಭವಿಸಿಯೇ ನೋಡಬೇಕು. ಹಾಗೆ ಟ್ರಕ್ಕಿಂಗ್ ಮಾಡುತ್ತ ಹೋದರೆ ಕೊಡಚಾದ್ರಿ ಬೆಟ್ಟಕ್ಕೆ ಹೋಗಬಹುದಾಗಿದೆ. ಅಲ್ಲಿ ಸೂರ್ಯಾಸ್ತ, ಸೂರ್ಯೋದಯದ ದೃಶ್ಯವಂತೂ ಮರೆಯಲಾರದ್ದು. ಹಾಗೆ ಇಲ್ಲಿನ ಮುದೂರಿನಲ್ಲಿರುವ ಬೆಳ್ಕಲ್ ಜಲಪಾತವೂ ಕೂಡ ಆಕರ್ಷಕವಾಗಿದೆ.


ಕೊಲ್ಲೂರಿಗೆ ದಿನಬೆಳಗಾದರೆ ಸಾವಿರಾರು ಭಕ್ತರು ಆಗಮಿಸುತ್ತಾರೆ, ಆದರೆ ಅವರಿಗೆ ಈ ತಾಣಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದ್ದರೂ ಕೆಲವರಿಗೆ ಅದು ಬೇಕಾಗಿಲ್ಲ. ಬೇಕಾದವರಿಗೆ ಮಾಹಿತಿ ತಿಳಿದಿಲ್ಲ ಎಂಬಂತಾಗಿದೆ. ಆ ನೆಲೆಯಲ್ಲಿ ಹಚ್ಚ ಹಸುರಿನ ಕೊಲ್ಲೂರು ಸುಂದರವಾದ ಪ್ರವಾಸಿ ತಾಣ ಹೌದೋ ಅಲ್ಲವೊ ಎಂಬ ಅನುಮಾನವಿದ್ದರೆ ಒಮ್ಮೆ ಬಿಡುವು ಮಾಡಿಕೊಂಡು ಬನ್ನಿ.......