Tuesday, January 27, 2009

ಶ್ರೀರಾಮಸೇನೆಯ 'ತಾಲಿಬಾನ್' ಸಂಸ್ಕೃತಿ...

ಮಂಗಳೂರಿನ ಎಮ್ನೇಶಿಯ ಪಬ್‌‌ನಲ್ಲಿ ಅಶ್ಲೀಲ ನರ್ತನ ಮಾಡುತ್ತಿದ್ದರು, ಅನೈತಿಕ ಚಟುವಟಿಕೆ ನಡೆಸುತ್ತಿದ್ದರು, ಇದು ದೇಶದ ಸಂಸ್ಕೃತಿಗೆ ಆದ ಅಪಚಾರ ಎಂದು ಆರೋಪಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಇದೀಗ ದೇಶವ್ಯಾಪಿ ಚರ್ಚೆಗೆ ಒಳಗಾಗಿದೆ. ಹೌದು, ಪಬ್‌ನಲ್ಲಿ ನರ್ತನ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ್ದು ಸರಿ ಎಂಬುದು ಹಲವರ ವಾದವಾದರೆ, ದೇಶದ ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲು ಅವರಿಗೆ ಅಧಿಕಾರ ಕೊಟ್ಟವರಾರು ಎಂದೂ ಮಹಿಳಾ ಸಂಘಟನೆಗಳು ಕಟುವಾಗಿ ಪ್ರಶ್ನಿಸಿವೆ. ಇದು ತಾಲಿಬಾನ್ ಸಂಸ್ಕೃತಿಯ ಪ್ರತಿರೂಪ ಎಂದು ಕೇಂದ್ರ ಸಚಿವ ರೇಣುಕ ಚೌಧುರಿ ಗಂಭೀರವಾಗಿ ಆರೋಪಿಸಿದ್ದಾರೆ.

ಪಬ್‌ನಲ್ಲಿ ಅಶ್ಲೀಲವಾಗಿ ನರ್ತಿಸುತ್ತಿದ್ದರು, ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಬರುತ್ತದೆ. ಈ ರೀತಿ ಮಾಡುವುದರಿಂದ ಯುವ ಪೀಳಿಗೆಗೆ ಎಚ್ಚರಿಕೆಯ ಸಂದೇಶ ಹೋಗುತ್ತದೆ. ಮತ್ತು ಇಂತಹ ಹೋರಾಟವನ್ನು ಮುಂದುವರಿಸುವುದಾಗಿಯೂ ಸೇನೆಯ 'ದಂಡಾಧಿಕಾರಿ' ಪ್ರಮೋದ್ ಮುತಾಲಿಕ್ ಸ್ಪಷ್ಟನೆಯನ್ನೂ ನೀಡಿದ್ದಾರೆ. ನಿಜಕ್ಕೂ ಪಬ್ ಮೇಲೆ ದಾಳಿ ಮಾಡುವುದರಿಂದ ಸಂಸ್ಕೃತಿಯ ರಕ್ಷಣೆ ಸಾಧ್ಯವೆ?ಅಲ್ಲಿ ಅರೆಬೆತ್ತಲೆ ನರ್ತನ ಮಾಡುತ್ತಿದ್ದರು ಇದರಿಂದ ನಮ್ಮ ಸಂಸ್ಕೃತಿಯೇ ಎಕ್ಕುಟ್ಟಿ ಹೋಗುತ್ತಿದೆ ಅಂತ ಲಬೋ, ಲಬೋ ಅಂತ ಬಡಿದುಕೊಳ್ಳುವುದರಲ್ಲಿ ಅರ್ಥವಿದೆಯಾ ?

ಮಂಗಳೂರಿನ ಪಬ್‌ನಲ್ಲಿ ಅರೆಬೆತ್ತಲೆ ನರ್ತನ ಮಾಡುತ್ತಿರುವುದರಿಂದ ಸಂಸ್ಕೃತಿ ಹಾಳಾಗುತ್ತದೆ ಎಂದು ಬೊಬ್ಬೆ ಹೊಡೆಯುತ್ತಿರುವ ಶ್ರೀರಾಮಸೇನೆ (ಇದನ್ನು ಸಂಘ-ಪರಿವಾರ ಕೂಡ ಅದನ್ನೇ ಮಾಡಿದೆ, ಈಗ ಬಿಜೆಪಿಯಿಂದ ಮುನಿಸಿಕೊಂಡು ಶ್ರೀರಾಮಸೇನೆ ಕಟ್ಟಿರುವ ಮುತಾಲಿಕ್ ಮೇಲೆ ಅಸಮಾಧಾನ ಇರುವುದರಿಂದಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ಗಟ್ಟಿಧ್ವನಿಯಲ್ಲಿ ಹೇಳಿದ್ದಾರೆ. ಅದೇ ಬಿಜೆಪಿ ಅಂಗಸಂಸ್ಥೆಗಳು ಮಾಡಿದ್ದರೆ ಅಂತಹ ಕ್ರಮಕ್ಕೆ ಶೀಘ್ರವೇ ಮುಂದಾಗುತ್ತಿದ್ದರೆ ಎಂಬುದು ಬೇರೆ ಪ್ರಶ್ನೆ. ಚರ್ಚ್ ದಾಳಿ ಪ್ರಕರಣದಲ್ಲಿ ಬಜರಂಗದಳದ ಮಹೇಂದ್ರ ಕುಮಾರ್ ಮಾಧ್ಯಮದಲ್ಲಿ ಘಟನೆಯ ಹೊಣೆ ಹೊತ್ತುಕೊಂಡು ಹೇಳಿಕೆ ನೀಡಿದ್ದರಿಂದ ಅವರು ತಲೆದಂಡ ಕೊಡಬೇಕಾಯಿತು ಅಷ್ಟೇ.)

ಇಂದು ಹಿಂದಿ, ತಮಿಳು, ಕನ್ನಡ ಸಿನಿಮಾಗಳಲ್ಲಿ ತೋರಿಸುವ ಅರೆನಗ್ನ ದೃಶ್ಯಗಳನ್ನು ನೋಡಿ ಯುವ ಪೀಳಿಗೆ ಹಳ್ಳಹಿಡಿದು ಹೋಗುವುದಿಲ್ಲವಾ?ಪ್ರತಿ ತಾಲೂಕುಗಳಲ್ಲಿ 'ಎ' (ಹೆಚ್ಚಾಗಿ ಮಲಯಾಳಂ ಭಾಷೆಯ) ಸಿನಿಮಾಗಳು ಪ್ರದರ್ಶನಗೊಳ್ಳುತ್ತದೆ, ಅಲ್ಲೆಲ್ಲ ಸಾಲು,ಸಾಲಾಗಿ ನಿಂತು ಸಿನಿಮಾ ನೋಡಿ ಬರುತ್ತಾರಲ್ಲ, ಅದರಿಂದ ಸಂಸ್ಕೃತಿಗೆ ಧಕ್ಕೆ ಬರುವುದಿಲ್ಲವಾ? ಹೋಗಲಿ ಹಿಂದಿ, ಇಂಗ್ಲಿಷ್ ಕೆಲವು ಸಿನಿಮಾಗಳಲ್ಲಿ ಮೈಮೇಲೆ ಬಟ್ಟೆ ಎಲ್ಲಿದೆ ಎಂದು ಹುಡುಕಬೇಕಾಗುತ್ತೆ.... ಅದನ್ನು ಬಾಯಿ ಚಪ್ಪರಿಸಿಕೊಂಡು, ಸಿಳ್ಳೆ ಹಾಕಿ ನೋಡುವ ನಾವು ಅದರಿಂದ ಸಂಸ್ಕೃತಿಗೆ ಅಪಚಾರ ಅಗುವುದಿಲ್ಲವಾ? ಇವತ್ತು ಸೈಬರ್ ಸೆಂಟರ್‌ಗಳಲ್ಲಿ ನಡೆಯುತ್ತಿರುವ ಸೈಬರ್ ಸೆಕ್ಸ್ ಬಗ್ಗೆ ನೀವ್ಯಾಕೆ ಸುಮ್ಮನಿದ್ದೀರಿ ಸೇನೆಯವರೇ ? ಪಬ್‌ಗೆ ಹೋಗುವುದರಿಂದ, ಅವರನ್ನು ನೋಡುವುದರಿಂದ ಉಳಿದವರು ಹಾಳಾಗುತ್ತಾರೆಂಬ ಧೋರಣೆ ಇದೆಯಲ್ಲ ಅದೇ ದೊಡ್ಡ ವಿಪರ್ಯಾಸದ್ದು. ನಾವು ನೆಟ್ಟಗಿದ್ದರೆ ಅದ್ಯಾಕೆ ಹಾಗಾಗುತ್ತೆ, ಹೋಗಲಿ ಒಬ್ಬರನ್ನು ನೋಡಿ ಹಾಳಾಗುವುದು, ಹೇಳಿದ್ದನ್ನು ಕೇಳಿ ಹಾಳಾಗುವುದು,ಒಳ್ಳೆಯದಾಗುವುದು ಅಂತ ಆದರೆ... ರಾಮಾಯಣ, ಮಹಾಭಾರತ ಸಿರಿಯಲ್ ನೋಡಿ ಅದೆಷ್ಟು ಮಂದಿ ಶ್ರೀರಾಮ, ಧರ್ಮರಾಯ ಆಗಬೇಕಿತ್ತು. ಯಾರು ಆಗಿಲ್ವಲ್ಲಾ.

ಧರ್ಮದ ರಕ್ಷಣೆ, ಸಂಸ್ಕೃತಿಯ ರಕ್ಷಣೆ ಮಾಡಲು ಶ್ರೀರಾಮಸೇನೆಗೆ ಗುತ್ತಿಗೆ ನೀಡಿದ್ದಾರಾ? ಹೋಗಲಿ ಸಾಹಿತ್ಯಗಳಲ್ಲಿ ಎಷ್ಟು ಅಶ್ಲೀಲ ಇಲ್ಲ, ಅವೆಲ್ಲ ಓದಿದವನು ಹಾಳಾಗಬೇಕಲ್ಲ....ಹಾಗಾದರೆ ತಾಲಿಬಾನ್ ಹುಡುಗಿಯರಿಗೆ ಶಾಲೆಗೆ ಹೋಗಬೇಡಿ, ಪುರುಷರು ಗಡ್ಡ ಬೋಳಿಸಿಕೊಳ್ಳಬೇಡಿ ಎಚ್ಚರ ಎಂದು ಫರ್ಮಾನು ಹೊರಡಿಸುತ್ತೆ....ಅದು ಮಾಡುವುದು ಸಂಸ್ಕೃತಿ ಮತ್ತು ಧರ್ಮದ ಹೆಸರಲ್ಲಿ. ನೀವು ಕೂಡ ಅದನ್ನೇ ಮಾಡುತ್ತೀರಲ್ಲ ಏನಾದರು ವ್ಯತ್ಯಾಸ ಇದೆ ಅನ್ನಿಸುತ್ತಾ ?ನೀವು ಧರ್ಮದ ರಕ್ಷಣೆ....ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಮಾಡುತ್ತೀರಿ ಎಂದು ಸಮರ್ಥನೆ ನೀಡುತ್ತೀರಿ ಎಂದಾದರೆ...ತಾಲಿಬಾನಿಗಳು ಅದನ್ನೇ ಹೇಳುತ್ತಾರಲ್ಲ. ಅವರ ದೃಷ್ಟಿಯಲ್ಲಿ ಅದು ಪವಿತ್ರ ಕೆಲಸ !! ಪಬ್ ಸಂಸ್ಕೃತಿಯಿಂದ ಯುವ ಪೀಳಿಗೆ ಕೆಟ್ಟ ಹಾದಿ ಹಿಡಿಯುತ್ತೆ, ಅದನ್ನು ನಾವು ನಿಲ್ಲಿಸುತ್ತೇವೆ ಸಂಸ್ಕೃತಿಯನ್ನು ರಕ್ಷಿಸುತ್ತೇವೆ ಎಂಬ ವಾದ ಇದೆಯಲ್ಲ.... ಸಿನಿಮಾದಲ್ಲಿ ಹೀರೋ ನೂರು ಜನರನ್ನು ಹೊಡೆದು ಸಮಾಜದ ಉದ್ದಾರಕ್ಕೆ ಹೊರಟ ಹಾಗೇ...ಅಷ್ಟೇ ಬಾಲಿಶವಾದದ್ದು......

ಬೆಳಗಾವಿ ಅಧಿವೇಶನದ ವಿಪರ್ಯಾಸ....

ಬೆಳಗಾವಿಯಲ್ಲಿ ನಡೆದ ಎರಡನೇ ಬಾರಿಯ ಐತಿಹಾಸಿಕ ಅಧಿವೇಶನ ಮುಕ್ತಾಯ ಕಂಡಿದೆ. ಆದರೆ ಉತ್ತರಕರ್ನಾಟಕ ಅಭಿವೃದ್ದಿಯ ಕೂಗು, ಗಡಿ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳ ಚರ್ಚೆಗಿಂತ ಅಧಿಕವಾಗಿ ಅಕ್ರಮ ಗಣಿಗಾರಿಕೆ ಅನುರಣಿಸುವ ಮೂಲಕ ಯಾಕಾಗಿ ಈ ಅಧಿವೇಶನ....ಅಧಿವೇನದಲ್ಲಿನ ಹೆಚ್ಚಿನ ಸಮಯ ಹಾಳಾಗುವಂತಾಗಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ ಪ್ರತಿಪಕ್ಷ ಮತ್ತು ಆಡಳಿತಾರೂಢ ಪಕ್ಷಗಳು ನಡೆದುಕೊಂಡ ರೀತಿ ಮಾತ್ರ ನಾಚಿಕೆ ಹುಟ್ಟಿಸುವಂತಾಗಿದ್ದು ಮಾತ್ರ ವಿಪರ್ಯಾಸ. ಅಧಿವೇಶನದ ಆರಂಭವಾದ (ಜ.16) ದಿನದಿಂದ ಆರಂಭಿಸಿ ಸೋಮವಾರದವರೆಗೂ ಸದನದಲ್ಲಿ ಗಂಭೀರ ಚರ್ಚೆಗಳೇ ನಡೆಯಲಿಲ್ಲ. ಅಧಿವೇಶನದ ಕೊನೆಯ ಎರಡು ದಿನಗಳಲ್ಲಿ ಗಣಿ ಚರ್ಚೆಗೆ ವಿದಾಯ ಹೇಳಿ, ಉತ್ತರ ಕರ್ನಾಟಕ ಅಭಿವೃದ್ದಿ ಚರ್ಚೆಗಾಗಿಯೇ ಮೀಸಲಿಟ್ಟಿದ್ದು ಶ್ಲಾಘನೀಯ.

ಆದರೆ ಸದನದಲ್ಲಿ ಗಣಿ ಕುರಿತ ಚರ್ಚೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸಿಬಿಐ ತನಿಖೆಗೆ ಪಟ್ಟು ಹಿಡಿದು ಕೋಲಾಹಲ ಎಬ್ಬಿಸಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಜನಾರ್ದನ ರೆಡ್ಡಿಯವರು ಇಡೀ ಸದನದ ಕಲಾಪಗಳನ್ನು ವೈಯಕ್ತಿಕ ಪ್ರತಿಷ್ಠೆಯ ಕಣವನ್ನಾಗಿ ಮಾಡಿಕೊಂಡು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದ್ದು ನಾಚಿಕೆಗೇಡಿನ ವಿಷಯ.

ಕೊನೆಗೂ ಅಕ್ರಮ ಗಣಿಗಾರಿಕೆಯನ್ನು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ ಮೇಲೆ ಪ್ರತಿಪಕ್ಷಗಳು ತಮ್ಮ ಕೂಗಾಟವನ್ನು ನಿಲ್ಲಿಸಿದ್ದವು. ಆಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆಯವರು ನೀಡಿದ ವರದಿಯಲ್ಲಿ, ಬಿಜೆಪಿಯ ಸಚಿವ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಕಾಂಗ್ರೆಸ್‌ನ ಧರಂಸಿಂಗ್ ಅವರ ಬಗ್ಗೆಯೂ ಸಾಕಷ್ಟು ದಾಖಲೆಗಳನ್ನು ನೀಡಿ ಅವರ ವಿರುದ್ಧ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂಬುದಾಗಿಯೂ ತಿಳಿಸಿದ್ದರು. ಹಾಗಾದರೆ ಅಧಿವೇಶನದ ಕಲಾಪದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದು ಕೂಡ ಲೋಕಾಯುಕ್ತರ ವರದಿ ಬಗ್ಗೆ ಗಟ್ಟಿಯಾಗಿ ಮಾತನಾಡಲೇ ಇಲ್ಲ !

ಅಷ್ಟೆಲ್ಲಾ ಬೊಂಬಡ ಬಜಾಯಿಸಿದ ಪ್ರತಿಪಕ್ಷಗಳು ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತರು ನೀಡಿದ ವರದಿ ಕುರಿತೇ ಗಂಭೀರವಾಗಿ ಚರ್ಚೆ ನಡೆಸಬೇಕಿತ್ತು, ಅದನ್ನು ಬಿಟ್ಟು ಮತ್ತೆ ಸಿಬಿಐ, ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವ ಅಗತ್ಯವಾದರೂ ಏನಿದೆ ? ಈಗಾಗಲೇ ತನಿಖೆ ನಡೆಸಿರುವ ವರದಿ ಲೆಕ್ಕಕ್ಕಿಲ್ಲ ಎಂದಾದ ಮೇಲೆ ಲೋಕಾಯುಕ್ತ ವರದಿಯ ಔಚಿತ್ಯವಾದರು ಏನು ? ಈಗಾಗಲೇ ಸರ್ಕಾರದ ಮುಂದೆ ಅದೆಷ್ಟು ಆಯೋಗದ ವರದಿಗಳಿವೆ, ಅವೆಲ್ಲ ಯಾಕಾಗಿ...ಕಣ್ಣೊರೆಸುವ ತಂತ್ರವೇ ?...

ಹೋಗಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆ, ಗಡಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಸಾಕಷ್ಟು ಗಲಾಟೆಗಳು ನಡೆದವು ಆ ಬಗ್ಗೆಯೂ ಮಹತ್ವದ ಚರ್ಚೆ ನಡೆಯಲೇ ಇಲ್ಲ. ಹೋದ ಪುಟ್ಟ...ಬಂದ ಪುಟ್ಟ ಎಂಬ ಗಾದೆಯಂತೆ ಉತ್ತರ ಕರ್ನಾಟಕ ಅಭಿವೃದ್ದಿಗೆ ಸರ್ಕಾರ ಬದ್ದ ಎಂಬುದಾಗಿ ಹೇಳಿ, 1,200 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿ, ನಂಜುಂಡಪ್ಪ ವರದಿ ಜಾರಿಗೂ ಬದ್ದ ಎಂದು ಹೇಳುವ ಮೂಲಕ ಅಧಿವೇಶನಕ್ಕೆ ತೆರೆ ಬಿದ್ದಿತ್ತು.

ಈಗಾಗಲೇ ಗಡಿಭಾಗದ ಸೊಲ್ಲಾಪುರ, ಅಕ್ಕಲಕೋಟೆ ಕನ್ನಡಿಗರು ಕೃಷಿಯನ್ನು ನೆರೆಯ ರಾಜ್ಯದ ಕೃಪಾಕಟಾಕ್ಷದಿಂದ ಲಾಭದಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಗಡಿಭಾಗದ ಸಮೀಪವೇ ಇರುವ ಮಹಾರಾಷ್ಟ್ರದ ರಸ್ತೆ,ಶಾಲೆಗಳು ಉತ್ತಮ ಸೌಲಭ್ಯ ಹೊಂದಿದೆ. ಆದರೆ ವಿಪರ್ಯಾಸವೆಂದರೆ ಗಡಿಯಂಚಿನ ಹಳ್ಳಿಯ ರಸ್ತೆಗಳು, ಶಾಲೆಗಳು ನರಕಸದೃಶವಾಗಿವೆ. ಗಡಿಭಾಗದ ಕಬ್ಬು ಬೆಳೆಗಾರರ ಉತ್ತಮ ಬೆಲೆಯನ್ನೇ ಈವರೆಗೂ ಪಡೆದಿಲ್ಲ. ಆ ಬೆಲೆ ಸಿಗಬೇಕಿದ್ದರೆ ಈ ರೈತರು ಮಹಾರಾಷ್ಟ್ರಕ್ಕೆ ಹೋಗಬೇಕು!!
ವೋಟ್ ಬ್ಯಾಂಕ್ ರಾಜಕಾರಣ ಮಾಡುವ ರಾಜಕಾರಣಿಗಳು ಮೊದಲು ಗಡಿಭಾಗದಲ್ಲಿನ ಜನರಿಗೆ ಮೂಲಭೂತ ಸೌಕರ್ಯ, ರೈತರಿಗೆ, ಅವರು ಬೆಳೆದ ಬೆಳೆಗಳ ಬಗ್ಗೆ ಮೊದಲ ಆದ್ಯತೆ ನೀಡಬೇಕು. ಕರ್ನಾಟಕದ ದೌರ್ಬಲ್ಯವನ್ನು ಚೆನ್ನಾಗಿ ಉಪಯೋಗಿಸಿಕೊಂಡಿರುವ ಎಂಇಎಸ್ ಇಲ್ಲಿನ ಮರಾಠಿಗರ ಮೇಲೆ ತನ್ನ ಹಿಡಿತ ಸಾಧಿಸಲು ಸಾಧ್ಯವಾಗಿದೆ.

ಕೇವಲ ಉತ್ತರಕರ್ನಾಟಕದ ಅಭಿವೃದ್ದಿಗಾಗಿ ಅಧಿವೇಶನ ನಡೆಸುತ್ತೇವೆ ಎಂದರೇ ಸಾಕೆ ? ಈಗ ವಿರೋಧಪಕ್ಷದಲ್ಲಿ ಕುಳಿತಿರುವ ಕಾಂಗ್ರೆಸ್ ಈ ಹಿಂದೆ ಮಾಡಿದ್ದಾದರೂ ಏನು ಎಂಬುದಕ್ಕೆ ರಾಜ್ಯದ ಗಡಿಭಾಗದ ಹಳ್ಳಿಗಳು ಜ್ವಲಂತ ಸಾಕ್ಷಿಯಾಗಿ ನಿಂತಿವೆ. ಆ ನೆಲೆಯಲ್ಲಿ ವಿರೋಧ ಪಕ್ಷ ಹಾಗೂ ಆಡಳಿತರೂಢ ಪಕ್ಷಗಳು ಉತ್ತರ ಕರ್ನಾಟಕ ಅಭಿವೃದ್ದಿ, ನೀರಾವರಿ, ರೈತರ ಬಗ್ಗೆ, ಭಯೋತ್ಪಾದನೆ ಬಗ್ಗೆ ತಲೆದೂಗುವಂತಹ ಚರ್ಚೆ ನಡೆಯಲೇ ಇಲ್ಲ. ಅದೇ ರೀತಿ ಕನ್ನಡ ನಾಡು,ನುಡಿ, ಜಲದ ಬಗ್ಗೆ ಮಾತನಾಡುವ ರಾಜಕಾರಣಿಗಳು, ಈವರೆಗೆ 74 ಸಾಹಿತ್ಯ ಸಮ್ಮೇಳನಗಳು ನಡೆದಿದ್ದು, ಆ ಸಂದರ್ಭದಲ್ಲಿ ಕೈಗೊಂಡ ನಿರ್ಣಯಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಆ ಬಗ್ಗೆ ಯಾವುದಾದರು ಚರ್ಚೆ ನಡೆಯಿತಾ ಅದೂ ಇಲ್ಲ. 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಎಲ್.ಬಸವರಾಜು ಅವರು ಇತ್ತೀಚೆಗೆ ಪಾಕ್ಷಿಕ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕಟ್ಟಡಗಳು ಧ್ವಂಸವಾದರೆ ಕಟ್ಟಬಹುದು, ಆದರೆ ನೆಲದ ಸಂಸ್ಕೃತಿ, ಪ್ರಜಾಪ್ರಭುತ್ವವೇ ನೆಲಕಚ್ಚಿದರೆ ಹೇಗೆ ಎಂಬ ಆತಂಕವನ್ನು ಹೊರಹಾಕಿದ್ದಾರೆ. ಈ ಬಗ್ಗೆಯೂ ರಾಜಕಾರಣಿಗಳು ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ.