Monday, August 17, 2009

ತಿರುವಳ್ಳುವರ್...ಸಾಕ್ರೆಟೀಸ್ ಮತ್ತು ನಮ್ಮ ಸ್ವಭಾವ

ಇದು ಸಾಮಾನ್ಯ ಎಂಬಂತೆ ನಾವೇ ಆಗಾಗ ಸಹೋದ್ಯೋಗಿಗಳಿಗೆ ಅಥವಾ ಹೆಚ್ಚಿನವರು ಒಂದಲ್ಲ ಒಂದು ಬಾರಿ ಇಂತಹ ಹೇಳಿಕೆಯನ್ನು ಕೇಳಿರುತ್ತೇವೆ ಇಲ್ಲ ನಾವೇ ಆಡಿರುತ್ತೇವೆ. ಯಾರಾದರೂ ಅವರ ಪಾಡಿಗೆ ಖುಷಿಯಿಂದ ಇದ್ದರೂ ಸಾಕು ಏನು...? ಬಹಳ ಖುಷಿಯಿಂದ ಇದ್ದ ಹಾಗೆ ಇದೆ...ಲಾಟರಿ ಏನಾದ್ರು ಬಂತಾ ಅಂತ . ಹಾಗಂತ ಜೋಲು ಮೋರೆ ಹಾಕಿ ಇರಿ...ಏನೋ ಆತ ಯಾವಾಗ್ಲೂ ಹಾಗೆ ತಲೆ ಮೇಲೆ ಆಕಾಶ ಬಿದ್ದವರ ತರ ಇರ್ತಾನೆ ಅಂದುಕೊಂಡು ಸುಮ್ಮನಾಗ್ತಾರೆ. ಮೂಲತಃ ಮನುಷ್ಯನ ಸ್ವಭಾವವೇ ತಿಕ್ಕಲುತನದ್ದು. ಯಾಕೆಂದರೆ ಜನ ಚಳವಳಿ ಮಾಡಿದರೂ ಟೀಕಿಸುತ್ತೇವೆ, ಮಾಡದಿದ್ದರೂ ವಟಗುಟ್ಟುತ್ತೇವೆ. ಅದಕ್ಕೆ ಇತ್ತೀಚೆಗೆ ತಿರುವಳ್ಳುವರ್-ಸರ್ವಜ್ಞ ಪ್ರತಿಮೆ ಸ್ಥಾಪನೆ ವೇಳೆ ಕನ್ನಡಪರ ಸಂಘಟೆಗಳು ವ್ಯಕ್ತಪಡಿಸಿದ ಪ್ರತಿಭಟನೆಗೆ ಪರ-ವಿರೋಧ ವ್ಯಕ್ತವಾಗಿದ್ದು ಕೂಡ ಒಂದು ಉದಾಹರಣೆ. ಡಿ.ಎಸ್.ನಾಗಭೂಷಣ್‌ರಂತವರು ಕೂಡ 'ಗಲಾಟೆ ಸಂಘಟನೆ'ಗಳು ಅಂತ ಹೇಳಿಕೆ ನೀಡಿದರು. ಪ್ರತಿ ನೆಲದಲ್ಲೂ ಹುಟ್ಟಿಕೊಂಡ ಚಳವಳಿಗಳು ಅವುಗಳು ಮೂಡಿಸಿದ್ದ ಛಾಪು ಕಡೆಗಣಿಸುವಂತಹದ್ದಲ್ಲ. ಈ ಬಗ್ಗೆ ಆತ್ಮೀಯರಾದ ದಿನೇಶ್ ಕುಮಾರ್ ಅವರು ತಮ್ಮ 'ದೇಸಿಮಾತು' ಬ್ಲಾಗ್‌ನಲ್ಲಿ ಉತ್ತಮವಾದ ಲೇಖನವೊಂದನ್ನು ಬರೆದಿದ್ದಾರೆ.

ಆದರೆ ನಾನು ಪರ-ವಿರೋಧದ ಹಿನ್ನೆಲೆ-ಮುನ್ನೆಲೆ ಬಗ್ಗೆ ಲೇಖನ ಮುಂದುವರಿಸಲಾರೆ. ಯಾಕೆಂದರೆ ಚೆನ್ನೈನಲ್ಲಿ ಪ್ರತಿಮೆ ಅನಾವರಣ ಸೇರಿದಂತೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ವೇಳೆ ಕೆಲವು ಮಾಧ್ಯಮಗಳು ಎಷ್ಟು ವಸ್ತುನಿಷ್ಠವಾಗಿ ವರದಿ ಮಾಡಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಮನುಷ್ಯ ಪ್ರತಿಯೊಂದಕ್ಕೂ ತಕರಾರು ತೆಗೆಯುತ್ತಿರುತ್ತಾನೆ, ಅದು ಹುಟ್ಟುಗುಣ ಎಂಬಂತೆ ಅದೊಂದು ಅಂಟು ಜಾಢ್ಯವಾಗಿದೆ. ಈ ಬಗ್ಗೆ ರಜನೀಶರ ಹಾಸ್ಯಮಿಶ್ರಿತ ಮಾತುಗಳಲ್ಲಿಯೇ ಹೇಳುವುದಾದರೆ.... ಬಾಲಿ ದ್ವೀಪದಲ್ಲಿ ಒಂದು ಪುರಾತನ ಗಾದೆ ಮಾತಿದೆಯಂತೆ, 'ನಿಮ್ಮ ಮನಸ್ಸು ಮುದದಿಂದ ಇದ್ದರೆ ನೀವು ಯಾವಾಗ ಬೇಕಾದರೂ ನೃತ್ಯವನ್ನು ಕಲಿಯಬಹುದು'.

ಆದರೆ ಮನುಷ್ಯ ಮೂಲತಃ ಮುದದಿಂದ ಇಲ್ಲ. ವಾಸ್ತವವಾಗಿ ದುಃಖವೆಂಬುದು ಒಂದು ಅಪವಾದದಂತಿರಬೇಕು, ಪ್ರಸನ್ನತೆ, ಪ್ರಫುಲ್ಲತೆ ಆತನ ಸಹಜ ಧರ್ಮವಾಗಿರಬೇಕು. ಅವನು ಯಾರೊಂದಿಗೂ 'ಇದೇನು ನೀವಿಂದು ಬಹಳ ಸಂತೋಷದಿಂದ ಇರುವಂತೆ ಕಾಣುತ್ತಿದೆಯಲ್ಲ?' ಎಂದು ಕೇಳುವ ಅಗತ್ಯ ಬರಬಾರದು ?ಆದರೆ ವಸ್ತು ಸ್ಥಿತಿ ಹಾಗಿಲ್ಲ. ಒಂದು ವೇಳೆ ನೀವು ನಿಮ್ಮಲ್ಲೇ ಹರ್ಷಿತರಾಗಿದ್ದರೆ, ಮುಗುಳು ನಗುತ್ತ, ಸಂತೋಷದಿಂದ ಇರುವಂತೆ ಕಂಡು ಬಂದರೆ...ಜನರು ನಿಮ್ಮನ್ನು ದುರುಗುಟ್ಟಿ ನೋಡುವರು. ನಿಮ್ಮಿಂದೇನೋ ತಪ್ಪಾಗಿ ಹೋಯಿತೆಂಬಂತೆ, ಏನಾಯಿತು...ಈತನಿಗೆ? ಅದೇಕೆ ಹಾಗೆ ನಗುತ್ತಾನೆ ? ಬಹಳ ಖುಷಿಯಿಂದ ಇದ್ದಿರುವಂತಿದೆ, ಕಾರಣವೇನೋ ತಿಳಿಯದು'?. ಆಗ, ಜನ ಕೇಳಿಯೇ ಕೇಳುತ್ತಾರೆ 'ಏನು ಸಮಚಾರ? ಬಹಳ ಖುಷಿಯಾಗಿದ್ದರಲ್ಲ ಅಂತ! ಸ್ವಸ್ಥವಾಗಿ, ಸುಖಿಯಾಗಿರಲು, ಅದಕ್ಕೆ ಕಾರಣ ಬೇರೆ ಬೇಕು. ಆದರೆ ದುಃಖಿತನಾಗಿ ಇರುವವನನ್ನು ಕಂಡಾಗ ಜನ ಹಾಗೆ ಕೇಳಲಾರರು. ಅಷ್ಟೇ ಅಲ್ಲ ಒಂದು ನಿಮಿಷ ನಿಂತು ಅವನ ಕಡೆ ನೋಡುವುದೂ ಇಲ್ಲ. ಅನ್ಯ ಮನಸ್ಕರಂತೆ ಇರುವುದು ನಮ್ಮ ಸಹಜ ಸ್ವಭಾವವೇನೋ ಎಂಬಂತೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡುತ್ತಾರೆ. ನಾವು ನಗುವುದನ್ನೇ ಮರೆತಿದ್ದೇವೆ, ನಮ್ಮ ಮುಗುಳ್ನಗು ಕಳೆದು ಹೋಗಿದೆ.

ಪ್ರತಿಯೊಂದು ಮಗುವು ಹುಟ್ಟುವಾಗ ತರುವ ಆ ಅನನ್ಯ ನಗು ಮಾಯವಾಗಿದೆ. ತಾನು ಸ್ವಸ್ಥನಾಗಿರಬೇಕಿದ್ದ ಆ ದಾರಿ ಮರೆತು ಹೋಗಿದೆ. ನಾವು ನಿರಾಸೆಯಿಂದ ಮೃತ್ಯುವಿನ ಕಡೆಗೆ ಮುಖ ಮಾಡಿಕೊಳ್ಳುವ ಸಂಕಲ್ಪ ಮಾಡಿರುತ್ತೇವೆ. ಏಕೆಂದರೆ ಹೀಗೆ ಮಾಡುವುದು ಅವರಿಗೆ ಬೇಕಿತ್ತು. ಅವರಿಗೆ ಇದರಿಂದ ಹಿತ. ಯಾವಾಗಲೂ ಜೋಲು ಮೋರೆಯಲ್ಲೇ ಇರುತ್ತೇವೆ. ವಿಧಾನ...ಕಾರ್ಯಗಳಲ್ಲಿ ನಮ್ಮ ವಾಸ್ತವಿಕ ರೂಪ ಒಂದು ನಕಲಿ ಮುಖವಾಡವನ್ನು ಧರಿಸಿರುತ್ತೇವೆ. ಸಮಾಜ ಕೂಡ ಅದನ್ನೇ ಅಪೇಕ್ಷಿಸುತ್ತದೆ. ನಾವು ಅತ್ಯಾನಂದದಿಂದ ರಸ್ತೆಯಲ್ಲಿ ಕುಣಿದಾಡುವುದನ್ನು ಯಾರೂ ಸಹಿಸಲಾರರು. ನೀವು ಹೃದಯ ತುಂಬಿ ನಗುವುದು ಯಾರಿಗೂ ಸಹಿಸದು. ಅಟ್ಟಹಾಸದಿಂದ ಗಹಗಹಿಸಿ ನಗುವುದನ್ನು ಯಾರೂ ಸೈರಿಸಲಾರರು. ನಿಮ್ಮ ಮನೆಯಲ್ಲೇ ನೀವು ಅಟ್ಟಹಾಸಗೈದರೂ ನೆರೆಹೊರೆಯವರು ಬಂದು ಬಾಗಿಲು ಬಡಿದು- ಇದೇನಿದು ಕೋಲಾಹಲ? ದಯವಿಟ್ಟು ನಿಲ್ಲಿಸಿ ನಾವೇನು ಇರಬೇಕೋ ಇಲ್ಲಾ ಮನೆಬಿಟ್ಟು ಹೋಗಬೇಕೋ..ನಿಮ್ಮ ಸಂಭ್ರಮದಲ್ಲಿ ನಮಗೆ ಮನೆಯಲ್ಲಿರಲು ಆಗುತ್ತಿಲ್ಲ' ಎಂದು ಆಕ್ಷೇಪಿಸುವರು.
ನೀವು ಜೋಲು ಮುಖದಿಂದ ಇದ್ದರೆ ಅವರಿಗೆ ಅಡ್ಡಿಯಿಲ್ಲ. ಜೋಲು ಮುಖದಿಂದ ಇರುವವರಿಗೆ ಜೋಲು ಮುಖದವರು ತುಂಬಾ ಇಷ್ಟ. ನಗುವವರನ್ನು ಕಂಡರೆ ಅವರಿಗೆ ಸಂಕಟವಾಗುತ್ತೆ. ಸಾಕ್ರೆಟೀಸ್‌ನಂತಹ ವ್ಯಕ್ತಿಗಳಿಗಿದ್ದ ತೊಂದರೆಯೇ ಇದು. ಅವರು ಅತ್ಯಂತ ಆನಂದದಿಂದ ಇರುವರು. ಮತ್ತು ಜನರಲ್ಲಿ ಎಚ್ಚರಿಕೆ ಮೂಡಿಸುತ್ತಿದ್ದರು. ಅವರ ಆನಂದ, ಎಚ್ಚರಿಕೆಯ ನಡೆ-ನುಡಿ ಕಂಡು ಜೋಲು ಮೋರೆಯವರ ಹೊಟ್ಟೆಯಲ್ಲಿ ಹಾಲಾಹಲ ಕಲಸಿದಂತಾಗುತ್ತಿತ್ತು. ಅವರ ಗುಂಪು, ಕೇಕೆ ಹಾಕುವವರನ್ನು ಸೈರಿಸಲಾಗದೆ. ಅವರನ್ನು ಕೊನೆಗಾಣಿಸಲೇಬೇಕಾಯಿತು!. ಏಕೆಂದರೆ ನಿಮ್ಮ ಮನದಲ್ಲಿ ಬಂಡಾಯದ ಸುಂಕನ್ನು ಹರಡುವರು, ನಾವೋ ಬಂಡಾಯವೆಂದರೆ ಹೆದರಿ ಸಾಯುವವರು! ಒಮ್ಮೆಯಾದರೂ ಒಬ್ಬ ವ್ಯಕ್ತಿ ವಿದ್ರೋಹದ ಪ್ರೇಮದಲ್ಲಿ ಬೀಳಬೇಕು. ಆಗ ಮಾತ್ರ ಅವನು ಸರಿಯಾದ ದಾರಿಗೆ ಬರಬಲ್ಲ.

ರಷ್ಯಾದ ಪುರಾತನ ಕಥೆಯೊಂದಿದೆ..ಚೇಮ್ ನಗರದ ಮಂದಿ ಯಾವಾಗಲೂ ಚಿಂತಾಕ್ರಾಂತರಾಗಿಯೇ ಇರುವವರಂತೆ. ಅವರಿಗೆ ಅದೇ ಅಭ್ಯಾಸ, ಅಷ್ಟೇ ಅಲ್ಲ ತಾವೇಕೆ ಇಷ್ಟು ಚಿಂತಿತರಾಗಿದ್ದೇವೆ ಎಂಬುದೇ ಅವರಿಗೆ ದೊಡ್ಡ ಚಿಂತೆಯಾಗಿತ್ತಂತೆ!. ಆಗ ನಗರದ ಅಧ್ಯಕ್ಷರಾಗಿದ್ದವರು ಚರ್ಚೆ ನಡೆಸಿ, ಕೊನೆಗೆ ಐರಾ ಎಂಬೊಬ್ಬ ತೀರ ಕಡುಬಡವನೊಬ್ಬನನ್ನು ಕರೆತಂದು ಅವನನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಯಿತಂತೆ. ಆತನಿಗೆ ಕೆಲಸ ಏನಪ್ಪಾ ಅಂದ್ರೆ...ಚೇಮ್ ನಗರ ವಾಸಿಗಳೆಲ್ಲರ ಪರವಾಗಿ ಆತನೊಬ್ಬನೇ ದಿನವಿಡೀ ಚಿಂತಿಸುವುದು...ಅದಕ್ಕೆ ಆತನಿಗೆ ವಾರಕ್ಕೆ 4ರೂಬಲ್ ಸಂಬಳ ಅಂತಲೂ ಘೋಷಿಸಲಾಯಿತು. ಆದರೆ ಈ ಯೋಜನೆ ತಲೆಕೆಳಗಾಯಿತು...!ಇಷ್ಟು ಕೇಳಿದ್ದೇ ತಡ ಐರಾನ ಸಂತೋಷಕ್ಕೆ ಪಾರವೇ ಇಲ್ಲ, ಆತ ತನ್ನ ಹುಟ್ಟೂರಾದ ರೂಥ್‌ಗೆ ಬಂದು ಬೀದಿ, ಬೀದಿ, ನೆಂಟರು, ನೆರೆಕೆರೆಯವರಿಗೆಲ್ಲ ತನಗೆ ಕೆಲಸ ಸಿಕ್ಕಿದ ಬಗ್ಗೆ ಖುಷಿಯಿಂದ ಹೇಳಿಕೊಂಡ. ಕೊನೆಗೆ ಅವನ ಬಾಯಿಂದ ಬಂದ ಮಾತೆಂದರೆ, 'ಇನ್ನು ನನಗೆ ಚಿಂತೆ ಇಲ್ಲ..ವಾರಕ್ಕೆ 4 ರೂಬಲ್ ಸಂಬಳ ಬರುತ್ತೆ'. ಆದರೆ ಆತನಿಗೆ ಕೊಟ್ಟ ಕೆಲಸ ಚಿಂತಿಸುವುದು...ಅದನ್ನೇ ಮರೆತು ಬಿಟ್ಟ!. ಈ ವಿಷಯ ಅಧ್ಯಕ್ಷರಿಗೆ ತಿಳಿಯುತ್ತಿದ್ದಂತೆಯೇ ಆತ ಕೆಲಸ ಕಳೆದುಕೊಂಡ!! ಅದೇ ರೀತಿ ನಮ್ಮ ಸ್ವಭಾವ ಕೂಡ...

Thursday, June 4, 2009

ತಮಿಳುನಾಡಿನಲ್ಲಿ ರಕ್ತಪಾತ ಆಗಲೇ ಇಲ್ಲಾ...!!

ರಾಜಪಕ್ಷೀಯಗಳು ಚುನಾವಣೆ ಸಂದರ್ಭದಲ್ಲಿ ತಮ್ಮ ಅನುಕೂಲ ಶಾಸ್ತ್ರಕ್ಕೆ ತಕ್ಕಂತೆ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆಂಬುದಕ್ಕೆ ತಮಿಳುನಾಡಿನಲ್ಲಿ ನಡೆದ ರಾಜಕೀಯ ಪ್ರಹಸನವೇ ಸಾಕ್ಷಿ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಅಂಡು ಸುಟ್ಟ ಬೆಕ್ಕಿನಂತಿದ್ದ ತಮಿಳುನಾಡಿನ ಪಕ್ಷಗಳು ನಂತರ ಮಾತ್ರ ಎಲ್‌ಟಿಟಿಇ ವಿಷಯದಲ್ಲಿ ಅವುಗಳು ನಡೆದುಕೊಂಡು ರೀತಿ ಮಾತ್ರ ಅಚ್ಚರಿ ಹುಟ್ಟಿಸುವಂಥದ್ದು. ಕಟ್ಟರ್ ಎಲ್‌ಟಿಟಿಇ ವಿರೋಧಿಯಾಗಿದ್ದ ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಕೂಡ, ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ರಾಜ್ಯ ಮಾತ್ರ ಏಕೈಕ ಪರಿಹಾರ ಮಾರ್ಗ ಎಂದು ಹೇಳಿಕೆ ನೀಡಿದರು. ಅದರ ಬೆನ್ನಲ್ಲೇ ಮತ್ತೊಂದು ಪ್ರಾದೇಶಿಕ ಪಕ್ಷವಾದ ಪಾಟಾಳ್ ಮಕ್ಕಳ್ ಕಚ್ಚಿ (ಪಿಎಂಕೆ)  ಸಹ ಪ್ರತ್ಯೇಕ ರಾಜ್ಯ ಹೇಳಿಕೆಗೆ ಬೆಂಬಲ ಸೂಚಿಸಿತು.

ಆದರೆ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಆಡಳಿತಾರೂಢ ಡಿಎಂಕೆಯ 'ಪೆರಿಯಾರ್' ಎಂ.ಕರುಣಾನಿಧಿಯವರು ಶ್ರೀಲಂಕಾದಲ್ಲಿ ಕದನ ವಿರಾಮ ಘೋಷಿಸುವಂತೆ ಲಂಕಾ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ತಮಿಳುನಾಡು ಬಂದ್‌ಗೆ ಕರೆ ನೀಡಿದರು. ನಂತರ ತರಾತುರಿಯಲ್ಲಿ ಗೋಪಾಲಪುರಂನ ಮನೆಯಲ್ಲಿ ಬೆಳ್ಳಂಬೆಳಗ್ಗೆ ನಾಲ್ಕಾರು ಎಸಿಯ ತಣ್ಣನೆಯ ಗಾಳಿಯ ನಡುವೆ ಉಪವಾಸ ಸತ್ಯಾಗ್ರಹಕ್ಕೆ ಕೂತರು. ಅದು ಕಾಕತಾಳಿಯ ಎಂಬಂತೆ ಲಂಕಾ ಸರ್ಕಾರ ಕದನವಿರಾಮ ಘೋಷಿಸಿರುವುದಾಗಿ ಹೇಳಿಕೆ ನೀಡಿರುವುದರಿಂದ 1 ಗಂಟೆಗೆ ಉಪವಾಸ ಮುಗಿಸಿ, ತನ್ನ ಸತ್ಯಾಗ್ರಹಕ್ಕೆ ಸಂದ ಜಯ ಅಂತ ಬೀಗಿದರು.

ಅವೆಲ್ಲಕ್ಕಿಂತ ಹೆಚ್ಚಾಗಿ ಫಯರ್ ಬ್ರ್ಯಾಂಡ್ ಎಂದೇ ಬಿರುದಾಂಕಿತರಾಗಿರುವ ಎಂಡಿಎಂಕೆಯ ಮುಖ್ಯಸ್ಥ ವೈಕೋ, ಬಹಿರಂಗಸಭೆಯಲ್ಲಿ ಮಾತನಾಡುತ್ತ, ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್‌ಗೆ ಏನೇ ಅಪಾಯವಾದರು ಕೂಡ ತಮಿಳುನಾಡು ಹೊತ್ತಿ ಉರಿಯುತ್ತೆ ಎಂದು ಎಚ್ಚರಿಕೆ ನೀಡಿದ್ದರು. ಅದಕ್ಕೆ ತಮಿಳುರಾಷ್ಟ್ರೀಯ ಚಳವಳಿ ಹೋರಾಟಗಾರ ಪಿ.ನೆಡುಮಾರನ್ ಕೂಡ ಸಾಥ್ ನೀಡಿದ್ದರು. 

ಆದರೆ ಪ್ರಭಾಕರನ್ ಸಾವಿನ ಸುದ್ದಿ ಟಿವಿ ಚಾನೆಲ್‌ಗಳಲ್ಲಿ ಬಿತ್ತರವಾಗುತ್ತಿದ್ದರೆ. ಚೆನ್ನೈನಲ್ಲಿದ್ದ ನಾವು ಮಧ್ನಾಹ್ನದ ಊಟಕ್ಕೂ ತತ್ವಾರ ಆಗಬಹುದು ಅಂತ ಹೆದರಿ ಕಂಗಾಲಾಗಿ ಅಂದು ಬೇಗ ಊಟಕ್ಕೆ ಹೋಗಿದ್ದೇವು. ಆದರೆ ಸಮೀಪದ ಐಸ್‌ಹೌಸ್ ಬಳಿ ಸ್ವಲ್ಪ ಗಲಾಟೆ ಆಗಿತ್ತು ಬಿಟ್ಟರೆ ಬೇರೇನೂ ಆಗಿರಲಿಲ್ಲವಾಗಿತ್ತು. ನಂತರ ಪ್ರಭಾಕರನ್ ಸಾವಿನ ಸುದ್ದಿಯನ್ನು ಶ್ರೀಲಂಕಾ ಸರ್ಕಾರ ಅಧಿಕೃತವಾಗಿ ಘೋಷಿದಾಗಲಂತೂ ನಾವೆಲ್ಲ ಗಾಬರಿಯಾಗಿ ಹೋಗಿದ್ದೇವು. ಆದರೆ ವೈಕೋ ಹೇಳಿಕೆಯ ರಕ್ತಪಾತವಾಗಲಿ, ಪುಟ್ಟ ಗಲಭೆಯೂ ನಡೆದಿರಲಿಲ್ಲ. ಆದರೆ ಕೆಲವು ಚಾನೆಲ್‌ಗಳಲ್ಲಿ ತಮಿಳುನಾಡು ಉದ್ವಿಗ್ನ ಅಂತ ಬ್ರೇಕಿಂಗ್ ನ್ಯೂಸ್ ಕೊಡುತ್ತಿದ್ದರೆ ಚೆನ್ನೈನಲ್ಲಿ ಸುದ್ದಿ ನೋಡುತ್ತಿದ್ದ ನಮಗೆ ನಗು ಬರುತ್ತಿತ್ತು. ಆದರೆ ಕಡಲೂರು ಸೇರಿದಂತೆ ಕೆಲವು ಕಡೆ ಸ್ವಲ್ಪ ಮಟ್ಟಿನ ಹಿಂಸಾಚಾರ ನಡೆದಿತ್ತು. ಅದನ್ನು ಹೊರತುಪಡಿಸಿದರೆ. ಎಲ್‌ಟಿಟಿಇ ಪ್ರಭಾಕರನ್ ಸಾವನ್ನಪ್ಪಿದರೆ ತಮಿಳುನಾಡು ಹೊತ್ತು ಉರಿಯುತ್ತೆ ಎಂಬ ರಾಜಕೀಯ ನಾಯಕರ ಹೇಳಿಕೆಯ ಹಿಂದಿನ ಸಂಚನ್ನು ಗಮನಿಸಬೇಕಾಗಿದೆ. 

ಯಾಕೆಂದರೆ ಚುನಾವಣೆ ನಡೆಯುವ ಮೊದಲು ಏನಾದ್ರು ಎಲ್‌ಟಿಟಿಇ ನಾಯಕ ಪ್ರಭಾಕರನ್ ಹತ್ಯೆಯಾಗಿದ್ದರೆ, ನಿಜಕ್ಕೂ ತಮಿಳುನಾಡು ಹೊತ್ತಿ ಉರಿಯುತ್ತಿತ್ತು ಎಂಬುದರಲ್ಲಿ ಯಾವುದೇ ಸಂಶಯವಿರಲಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾವುದಾದರೊಂದು ಇಶ್ಯೂ ಬೇಕಾಗುವುದು ಖದೀಮ ರಾಜಕಾರಣಿಗಳಿಗೆ ಮಾತ್ರ. ಲಂಕಾದಲ್ಲಿ ಕದನ ವಿರಾಮ ನಿಲ್ಲಿಸುವಂತೆ ಬಂದ್‌ಗೆ ಕರೆ ನೀಡಿದ ಡಿಎಂಕೆ ಆಗಲಿ, ಪ್ರತ್ಯೇಕ ರಾಜ್ಯಬೇಕು ತಮಿಳರಿಗೆ ಅಂತ ಬೊಬ್ಬಿರಿದ ಎಐಎಡಿಎಂಕೆ ಆಗಲಿ, ವೈಕೋ, ನೆಡುಮಾರನ್ ಯಾರೂ ಕೂಡ ಸೊಲ್ಲೆ ಎತ್ತಿಲ್ಲ. ವೈಕೋ, ನೆಡುಮಾರನ್ ಮಾತ್ರ ಈಗಲೂ ಪ್ರಭಾಕರನ್ ಬದುಕಿಯೇ ಇದ್ದಾನೆ ಅಂತ ಲಬೋ, ಲಬೋ ಅಂತಿದ್ದಾರೆ. 

ಕಳೆದ ಶನಿವಾರದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಕಾರ್ಯನಿರ್ವಾಹಕ ಸಂಪಾದಕ ಸುದರ್ಶನ್ ಅವರೊಂದಿಗೆ ಕಿಲ್ಲಿ ಎಂಬಾತನೊಂದಿಗೆ ನಡೆಸಿದ ಸಂದರ್ಶನದಲ್ಲಿ, ಎಲ್‌ಟಿಟಿಇಯ ವರಿಷ್ಠ ಪ್ರಭಾಕರನ್‌ಗೆ ವೈಕೋ ಮತ್ತು ನೆಡುಮಾರನ್‌ಗಿಂತ ದೊಡ್ಡ ಶತ್ರುವಿನ ಅಗತ್ಯವಿರಲಿಲ್ಲ ಅಂತ ಹೇಳಿದ್ದರು. ಅಲ್ಲದೇ ಎಲ್‌ಟಿಟಿಇಗೆ ಏನಾದ್ರೂ ಆದರೆ ತಮಿಳುನಾಡು ಹೊತ್ತಿ ಉರಿಯುತ್ತೆ, ಡಿಎಂಕೆ ನೆಲಕಚ್ಚುತ್ತೆ ಅಂತೆಲ್ಲಾ ಪ್ರಭಾಕರನ್ ಹಾಗೂ ನಟೇಶನ್‌ಗೆ ಸುಳ್ಳು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದ ಪ್ರಮುಖ ರೂವಾರಿಗಳೇ ಅವರಿಬ್ಬರು ಅಂತ ಆರೋಪಿಸಿದ್ದರು. 

ನಿಜಕ್ಕೂ ತಮಿಳುನಾಡಿನ ರಾಜಕೀಯ ಪಕ್ಷಗಳು ಶ್ರೀಲಂಕಾದಲ್ಲಿನ ತಮಿಳರ ರಕ್ಷಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂಬುದು ಅಕ್ಷರಶ ಸತ್ಯ. ಶ್ರೀಲಂಕಾದಲ್ಲಿನ ತಮಿಳರು ಅತ್ತ ಎಲ್‌ಟಿಟಿಇ ಹಾಗೂ ಲಂಕಾ ಸರ್ಕಾರ ಎರಡರಿಂದಲೂ ಅನ್ಯಾಯಕ್ಕೊಳಗಿದ್ದರು. ಅವರ ಬಗ್ಗೆ ಧ್ವನಿ ಎತ್ತಬೇಕಾಗಿದ್ದ ತಮಿಳುನಾಡಿನ ರಾಜಕೀಯ ಪಕ್ಷಗಳು ಮಾತ್ರ ರಾಜಕೀಯ ಬೇಳೆ ಬೇಯಿಸಿಕೊಂಡು, ಪ್ರಭಾಕರನ್‌ನನ್ನು ಹೀರೋವನ್ನಾಗಿ ಬಿಂಬಿಸಲು ಹೊರಟರೆ ವಿನಃ ಬೇರೇನೂ ಮಾಡಿಲ್ಲ ಎಂಬುದಕ್ಕೆ ಲಂಕಾದಲ್ಲಿನ ತಮಿಳರ ಸ್ಥಿತಿಗತಿಯೇ ಅದಕ್ಕೆ ಸಾಕ್ಷಿ. 

ರಾಜಕೀಯ ಮುಖಂಡರು,ಪಕ್ಷಗಳು ಸಂದರ್ಭಕ್ಕೆ ತಕ್ಕಂತೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದಕ್ಕೆ ತಮಿಳುನಾಡಿನ ರಾಜಕೀಯ ಪಕ್ಷ, ಮುಖಂಡರು ಇತ್ತೀಚಿಗಿನ ಜ್ವಲಂತ ಸಾಕ್ಷಿ. ಇದು ರಾಮಜನ್ಮಭೂಮಿ, ಸಿಖ್ ಹತ್ಯಾಕಾಂಡ, ಗೋದ್ರಾ ಹತ್ಯಾಕಾಂಡ, ನಂದಿಗ್ರಾಮ ಹಿಂಸಾರ, ಕೋಮುಗಲಭೆ ಇವೆಲ್ಲದರ ಹಿಂದೆ ಸೂಕ್ಷ್ಮವಾಗಿ ಗಮನಿಸಿ ರಾಜಕೀಯ ಢಾಳಾಗಿ ಕಾಣಿಸುತ್ತೆ....

Tuesday, January 27, 2009

ಶ್ರೀರಾಮಸೇನೆಯ 'ತಾಲಿಬಾನ್' ಸಂಸ್ಕೃತಿ...

ಮಂಗಳೂರಿನ ಎಮ್ನೇಶಿಯ ಪಬ್‌‌ನಲ್ಲಿ ಅಶ್ಲೀಲ ನರ್ತನ ಮಾಡುತ್ತಿದ್ದರು, ಅನೈತಿಕ ಚಟುವಟಿಕೆ ನಡೆಸುತ್ತಿದ್ದರು, ಇದು ದೇಶದ ಸಂಸ್ಕೃತಿಗೆ ಆದ ಅಪಚಾರ ಎಂದು ಆರೋಪಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಇದೀಗ ದೇಶವ್ಯಾಪಿ ಚರ್ಚೆಗೆ ಒಳಗಾಗಿದೆ. ಹೌದು, ಪಬ್‌ನಲ್ಲಿ ನರ್ತನ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ್ದು ಸರಿ ಎಂಬುದು ಹಲವರ ವಾದವಾದರೆ, ದೇಶದ ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲು ಅವರಿಗೆ ಅಧಿಕಾರ ಕೊಟ್ಟವರಾರು ಎಂದೂ ಮಹಿಳಾ ಸಂಘಟನೆಗಳು ಕಟುವಾಗಿ ಪ್ರಶ್ನಿಸಿವೆ. ಇದು ತಾಲಿಬಾನ್ ಸಂಸ್ಕೃತಿಯ ಪ್ರತಿರೂಪ ಎಂದು ಕೇಂದ್ರ ಸಚಿವ ರೇಣುಕ ಚೌಧುರಿ ಗಂಭೀರವಾಗಿ ಆರೋಪಿಸಿದ್ದಾರೆ.

ಪಬ್‌ನಲ್ಲಿ ಅಶ್ಲೀಲವಾಗಿ ನರ್ತಿಸುತ್ತಿದ್ದರು, ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಬರುತ್ತದೆ. ಈ ರೀತಿ ಮಾಡುವುದರಿಂದ ಯುವ ಪೀಳಿಗೆಗೆ ಎಚ್ಚರಿಕೆಯ ಸಂದೇಶ ಹೋಗುತ್ತದೆ. ಮತ್ತು ಇಂತಹ ಹೋರಾಟವನ್ನು ಮುಂದುವರಿಸುವುದಾಗಿಯೂ ಸೇನೆಯ 'ದಂಡಾಧಿಕಾರಿ' ಪ್ರಮೋದ್ ಮುತಾಲಿಕ್ ಸ್ಪಷ್ಟನೆಯನ್ನೂ ನೀಡಿದ್ದಾರೆ. ನಿಜಕ್ಕೂ ಪಬ್ ಮೇಲೆ ದಾಳಿ ಮಾಡುವುದರಿಂದ ಸಂಸ್ಕೃತಿಯ ರಕ್ಷಣೆ ಸಾಧ್ಯವೆ?ಅಲ್ಲಿ ಅರೆಬೆತ್ತಲೆ ನರ್ತನ ಮಾಡುತ್ತಿದ್ದರು ಇದರಿಂದ ನಮ್ಮ ಸಂಸ್ಕೃತಿಯೇ ಎಕ್ಕುಟ್ಟಿ ಹೋಗುತ್ತಿದೆ ಅಂತ ಲಬೋ, ಲಬೋ ಅಂತ ಬಡಿದುಕೊಳ್ಳುವುದರಲ್ಲಿ ಅರ್ಥವಿದೆಯಾ ?

ಮಂಗಳೂರಿನ ಪಬ್‌ನಲ್ಲಿ ಅರೆಬೆತ್ತಲೆ ನರ್ತನ ಮಾಡುತ್ತಿರುವುದರಿಂದ ಸಂಸ್ಕೃತಿ ಹಾಳಾಗುತ್ತದೆ ಎಂದು ಬೊಬ್ಬೆ ಹೊಡೆಯುತ್ತಿರುವ ಶ್ರೀರಾಮಸೇನೆ (ಇದನ್ನು ಸಂಘ-ಪರಿವಾರ ಕೂಡ ಅದನ್ನೇ ಮಾಡಿದೆ, ಈಗ ಬಿಜೆಪಿಯಿಂದ ಮುನಿಸಿಕೊಂಡು ಶ್ರೀರಾಮಸೇನೆ ಕಟ್ಟಿರುವ ಮುತಾಲಿಕ್ ಮೇಲೆ ಅಸಮಾಧಾನ ಇರುವುದರಿಂದಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ಗಟ್ಟಿಧ್ವನಿಯಲ್ಲಿ ಹೇಳಿದ್ದಾರೆ. ಅದೇ ಬಿಜೆಪಿ ಅಂಗಸಂಸ್ಥೆಗಳು ಮಾಡಿದ್ದರೆ ಅಂತಹ ಕ್ರಮಕ್ಕೆ ಶೀಘ್ರವೇ ಮುಂದಾಗುತ್ತಿದ್ದರೆ ಎಂಬುದು ಬೇರೆ ಪ್ರಶ್ನೆ. ಚರ್ಚ್ ದಾಳಿ ಪ್ರಕರಣದಲ್ಲಿ ಬಜರಂಗದಳದ ಮಹೇಂದ್ರ ಕುಮಾರ್ ಮಾಧ್ಯಮದಲ್ಲಿ ಘಟನೆಯ ಹೊಣೆ ಹೊತ್ತುಕೊಂಡು ಹೇಳಿಕೆ ನೀಡಿದ್ದರಿಂದ ಅವರು ತಲೆದಂಡ ಕೊಡಬೇಕಾಯಿತು ಅಷ್ಟೇ.)

ಇಂದು ಹಿಂದಿ, ತಮಿಳು, ಕನ್ನಡ ಸಿನಿಮಾಗಳಲ್ಲಿ ತೋರಿಸುವ ಅರೆನಗ್ನ ದೃಶ್ಯಗಳನ್ನು ನೋಡಿ ಯುವ ಪೀಳಿಗೆ ಹಳ್ಳಹಿಡಿದು ಹೋಗುವುದಿಲ್ಲವಾ?ಪ್ರತಿ ತಾಲೂಕುಗಳಲ್ಲಿ 'ಎ' (ಹೆಚ್ಚಾಗಿ ಮಲಯಾಳಂ ಭಾಷೆಯ) ಸಿನಿಮಾಗಳು ಪ್ರದರ್ಶನಗೊಳ್ಳುತ್ತದೆ, ಅಲ್ಲೆಲ್ಲ ಸಾಲು,ಸಾಲಾಗಿ ನಿಂತು ಸಿನಿಮಾ ನೋಡಿ ಬರುತ್ತಾರಲ್ಲ, ಅದರಿಂದ ಸಂಸ್ಕೃತಿಗೆ ಧಕ್ಕೆ ಬರುವುದಿಲ್ಲವಾ? ಹೋಗಲಿ ಹಿಂದಿ, ಇಂಗ್ಲಿಷ್ ಕೆಲವು ಸಿನಿಮಾಗಳಲ್ಲಿ ಮೈಮೇಲೆ ಬಟ್ಟೆ ಎಲ್ಲಿದೆ ಎಂದು ಹುಡುಕಬೇಕಾಗುತ್ತೆ.... ಅದನ್ನು ಬಾಯಿ ಚಪ್ಪರಿಸಿಕೊಂಡು, ಸಿಳ್ಳೆ ಹಾಕಿ ನೋಡುವ ನಾವು ಅದರಿಂದ ಸಂಸ್ಕೃತಿಗೆ ಅಪಚಾರ ಅಗುವುದಿಲ್ಲವಾ? ಇವತ್ತು ಸೈಬರ್ ಸೆಂಟರ್‌ಗಳಲ್ಲಿ ನಡೆಯುತ್ತಿರುವ ಸೈಬರ್ ಸೆಕ್ಸ್ ಬಗ್ಗೆ ನೀವ್ಯಾಕೆ ಸುಮ್ಮನಿದ್ದೀರಿ ಸೇನೆಯವರೇ ? ಪಬ್‌ಗೆ ಹೋಗುವುದರಿಂದ, ಅವರನ್ನು ನೋಡುವುದರಿಂದ ಉಳಿದವರು ಹಾಳಾಗುತ್ತಾರೆಂಬ ಧೋರಣೆ ಇದೆಯಲ್ಲ ಅದೇ ದೊಡ್ಡ ವಿಪರ್ಯಾಸದ್ದು. ನಾವು ನೆಟ್ಟಗಿದ್ದರೆ ಅದ್ಯಾಕೆ ಹಾಗಾಗುತ್ತೆ, ಹೋಗಲಿ ಒಬ್ಬರನ್ನು ನೋಡಿ ಹಾಳಾಗುವುದು, ಹೇಳಿದ್ದನ್ನು ಕೇಳಿ ಹಾಳಾಗುವುದು,ಒಳ್ಳೆಯದಾಗುವುದು ಅಂತ ಆದರೆ... ರಾಮಾಯಣ, ಮಹಾಭಾರತ ಸಿರಿಯಲ್ ನೋಡಿ ಅದೆಷ್ಟು ಮಂದಿ ಶ್ರೀರಾಮ, ಧರ್ಮರಾಯ ಆಗಬೇಕಿತ್ತು. ಯಾರು ಆಗಿಲ್ವಲ್ಲಾ.

ಧರ್ಮದ ರಕ್ಷಣೆ, ಸಂಸ್ಕೃತಿಯ ರಕ್ಷಣೆ ಮಾಡಲು ಶ್ರೀರಾಮಸೇನೆಗೆ ಗುತ್ತಿಗೆ ನೀಡಿದ್ದಾರಾ? ಹೋಗಲಿ ಸಾಹಿತ್ಯಗಳಲ್ಲಿ ಎಷ್ಟು ಅಶ್ಲೀಲ ಇಲ್ಲ, ಅವೆಲ್ಲ ಓದಿದವನು ಹಾಳಾಗಬೇಕಲ್ಲ....ಹಾಗಾದರೆ ತಾಲಿಬಾನ್ ಹುಡುಗಿಯರಿಗೆ ಶಾಲೆಗೆ ಹೋಗಬೇಡಿ, ಪುರುಷರು ಗಡ್ಡ ಬೋಳಿಸಿಕೊಳ್ಳಬೇಡಿ ಎಚ್ಚರ ಎಂದು ಫರ್ಮಾನು ಹೊರಡಿಸುತ್ತೆ....ಅದು ಮಾಡುವುದು ಸಂಸ್ಕೃತಿ ಮತ್ತು ಧರ್ಮದ ಹೆಸರಲ್ಲಿ. ನೀವು ಕೂಡ ಅದನ್ನೇ ಮಾಡುತ್ತೀರಲ್ಲ ಏನಾದರು ವ್ಯತ್ಯಾಸ ಇದೆ ಅನ್ನಿಸುತ್ತಾ ?ನೀವು ಧರ್ಮದ ರಕ್ಷಣೆ....ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಮಾಡುತ್ತೀರಿ ಎಂದು ಸಮರ್ಥನೆ ನೀಡುತ್ತೀರಿ ಎಂದಾದರೆ...ತಾಲಿಬಾನಿಗಳು ಅದನ್ನೇ ಹೇಳುತ್ತಾರಲ್ಲ. ಅವರ ದೃಷ್ಟಿಯಲ್ಲಿ ಅದು ಪವಿತ್ರ ಕೆಲಸ !! ಪಬ್ ಸಂಸ್ಕೃತಿಯಿಂದ ಯುವ ಪೀಳಿಗೆ ಕೆಟ್ಟ ಹಾದಿ ಹಿಡಿಯುತ್ತೆ, ಅದನ್ನು ನಾವು ನಿಲ್ಲಿಸುತ್ತೇವೆ ಸಂಸ್ಕೃತಿಯನ್ನು ರಕ್ಷಿಸುತ್ತೇವೆ ಎಂಬ ವಾದ ಇದೆಯಲ್ಲ.... ಸಿನಿಮಾದಲ್ಲಿ ಹೀರೋ ನೂರು ಜನರನ್ನು ಹೊಡೆದು ಸಮಾಜದ ಉದ್ದಾರಕ್ಕೆ ಹೊರಟ ಹಾಗೇ...ಅಷ್ಟೇ ಬಾಲಿಶವಾದದ್ದು......

ಬೆಳಗಾವಿ ಅಧಿವೇಶನದ ವಿಪರ್ಯಾಸ....

ಬೆಳಗಾವಿಯಲ್ಲಿ ನಡೆದ ಎರಡನೇ ಬಾರಿಯ ಐತಿಹಾಸಿಕ ಅಧಿವೇಶನ ಮುಕ್ತಾಯ ಕಂಡಿದೆ. ಆದರೆ ಉತ್ತರಕರ್ನಾಟಕ ಅಭಿವೃದ್ದಿಯ ಕೂಗು, ಗಡಿ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳ ಚರ್ಚೆಗಿಂತ ಅಧಿಕವಾಗಿ ಅಕ್ರಮ ಗಣಿಗಾರಿಕೆ ಅನುರಣಿಸುವ ಮೂಲಕ ಯಾಕಾಗಿ ಈ ಅಧಿವೇಶನ....ಅಧಿವೇನದಲ್ಲಿನ ಹೆಚ್ಚಿನ ಸಮಯ ಹಾಳಾಗುವಂತಾಗಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ ಪ್ರತಿಪಕ್ಷ ಮತ್ತು ಆಡಳಿತಾರೂಢ ಪಕ್ಷಗಳು ನಡೆದುಕೊಂಡ ರೀತಿ ಮಾತ್ರ ನಾಚಿಕೆ ಹುಟ್ಟಿಸುವಂತಾಗಿದ್ದು ಮಾತ್ರ ವಿಪರ್ಯಾಸ. ಅಧಿವೇಶನದ ಆರಂಭವಾದ (ಜ.16) ದಿನದಿಂದ ಆರಂಭಿಸಿ ಸೋಮವಾರದವರೆಗೂ ಸದನದಲ್ಲಿ ಗಂಭೀರ ಚರ್ಚೆಗಳೇ ನಡೆಯಲಿಲ್ಲ. ಅಧಿವೇಶನದ ಕೊನೆಯ ಎರಡು ದಿನಗಳಲ್ಲಿ ಗಣಿ ಚರ್ಚೆಗೆ ವಿದಾಯ ಹೇಳಿ, ಉತ್ತರ ಕರ್ನಾಟಕ ಅಭಿವೃದ್ದಿ ಚರ್ಚೆಗಾಗಿಯೇ ಮೀಸಲಿಟ್ಟಿದ್ದು ಶ್ಲಾಘನೀಯ.

ಆದರೆ ಸದನದಲ್ಲಿ ಗಣಿ ಕುರಿತ ಚರ್ಚೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸಿಬಿಐ ತನಿಖೆಗೆ ಪಟ್ಟು ಹಿಡಿದು ಕೋಲಾಹಲ ಎಬ್ಬಿಸಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಜನಾರ್ದನ ರೆಡ್ಡಿಯವರು ಇಡೀ ಸದನದ ಕಲಾಪಗಳನ್ನು ವೈಯಕ್ತಿಕ ಪ್ರತಿಷ್ಠೆಯ ಕಣವನ್ನಾಗಿ ಮಾಡಿಕೊಂಡು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದ್ದು ನಾಚಿಕೆಗೇಡಿನ ವಿಷಯ.

ಕೊನೆಗೂ ಅಕ್ರಮ ಗಣಿಗಾರಿಕೆಯನ್ನು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ ಮೇಲೆ ಪ್ರತಿಪಕ್ಷಗಳು ತಮ್ಮ ಕೂಗಾಟವನ್ನು ನಿಲ್ಲಿಸಿದ್ದವು. ಆಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆಯವರು ನೀಡಿದ ವರದಿಯಲ್ಲಿ, ಬಿಜೆಪಿಯ ಸಚಿವ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಕಾಂಗ್ರೆಸ್‌ನ ಧರಂಸಿಂಗ್ ಅವರ ಬಗ್ಗೆಯೂ ಸಾಕಷ್ಟು ದಾಖಲೆಗಳನ್ನು ನೀಡಿ ಅವರ ವಿರುದ್ಧ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂಬುದಾಗಿಯೂ ತಿಳಿಸಿದ್ದರು. ಹಾಗಾದರೆ ಅಧಿವೇಶನದ ಕಲಾಪದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದು ಕೂಡ ಲೋಕಾಯುಕ್ತರ ವರದಿ ಬಗ್ಗೆ ಗಟ್ಟಿಯಾಗಿ ಮಾತನಾಡಲೇ ಇಲ್ಲ !

ಅಷ್ಟೆಲ್ಲಾ ಬೊಂಬಡ ಬಜಾಯಿಸಿದ ಪ್ರತಿಪಕ್ಷಗಳು ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತರು ನೀಡಿದ ವರದಿ ಕುರಿತೇ ಗಂಭೀರವಾಗಿ ಚರ್ಚೆ ನಡೆಸಬೇಕಿತ್ತು, ಅದನ್ನು ಬಿಟ್ಟು ಮತ್ತೆ ಸಿಬಿಐ, ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವ ಅಗತ್ಯವಾದರೂ ಏನಿದೆ ? ಈಗಾಗಲೇ ತನಿಖೆ ನಡೆಸಿರುವ ವರದಿ ಲೆಕ್ಕಕ್ಕಿಲ್ಲ ಎಂದಾದ ಮೇಲೆ ಲೋಕಾಯುಕ್ತ ವರದಿಯ ಔಚಿತ್ಯವಾದರು ಏನು ? ಈಗಾಗಲೇ ಸರ್ಕಾರದ ಮುಂದೆ ಅದೆಷ್ಟು ಆಯೋಗದ ವರದಿಗಳಿವೆ, ಅವೆಲ್ಲ ಯಾಕಾಗಿ...ಕಣ್ಣೊರೆಸುವ ತಂತ್ರವೇ ?...

ಹೋಗಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆ, ಗಡಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಸಾಕಷ್ಟು ಗಲಾಟೆಗಳು ನಡೆದವು ಆ ಬಗ್ಗೆಯೂ ಮಹತ್ವದ ಚರ್ಚೆ ನಡೆಯಲೇ ಇಲ್ಲ. ಹೋದ ಪುಟ್ಟ...ಬಂದ ಪುಟ್ಟ ಎಂಬ ಗಾದೆಯಂತೆ ಉತ್ತರ ಕರ್ನಾಟಕ ಅಭಿವೃದ್ದಿಗೆ ಸರ್ಕಾರ ಬದ್ದ ಎಂಬುದಾಗಿ ಹೇಳಿ, 1,200 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿ, ನಂಜುಂಡಪ್ಪ ವರದಿ ಜಾರಿಗೂ ಬದ್ದ ಎಂದು ಹೇಳುವ ಮೂಲಕ ಅಧಿವೇಶನಕ್ಕೆ ತೆರೆ ಬಿದ್ದಿತ್ತು.

ಈಗಾಗಲೇ ಗಡಿಭಾಗದ ಸೊಲ್ಲಾಪುರ, ಅಕ್ಕಲಕೋಟೆ ಕನ್ನಡಿಗರು ಕೃಷಿಯನ್ನು ನೆರೆಯ ರಾಜ್ಯದ ಕೃಪಾಕಟಾಕ್ಷದಿಂದ ಲಾಭದಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಗಡಿಭಾಗದ ಸಮೀಪವೇ ಇರುವ ಮಹಾರಾಷ್ಟ್ರದ ರಸ್ತೆ,ಶಾಲೆಗಳು ಉತ್ತಮ ಸೌಲಭ್ಯ ಹೊಂದಿದೆ. ಆದರೆ ವಿಪರ್ಯಾಸವೆಂದರೆ ಗಡಿಯಂಚಿನ ಹಳ್ಳಿಯ ರಸ್ತೆಗಳು, ಶಾಲೆಗಳು ನರಕಸದೃಶವಾಗಿವೆ. ಗಡಿಭಾಗದ ಕಬ್ಬು ಬೆಳೆಗಾರರ ಉತ್ತಮ ಬೆಲೆಯನ್ನೇ ಈವರೆಗೂ ಪಡೆದಿಲ್ಲ. ಆ ಬೆಲೆ ಸಿಗಬೇಕಿದ್ದರೆ ಈ ರೈತರು ಮಹಾರಾಷ್ಟ್ರಕ್ಕೆ ಹೋಗಬೇಕು!!
ವೋಟ್ ಬ್ಯಾಂಕ್ ರಾಜಕಾರಣ ಮಾಡುವ ರಾಜಕಾರಣಿಗಳು ಮೊದಲು ಗಡಿಭಾಗದಲ್ಲಿನ ಜನರಿಗೆ ಮೂಲಭೂತ ಸೌಕರ್ಯ, ರೈತರಿಗೆ, ಅವರು ಬೆಳೆದ ಬೆಳೆಗಳ ಬಗ್ಗೆ ಮೊದಲ ಆದ್ಯತೆ ನೀಡಬೇಕು. ಕರ್ನಾಟಕದ ದೌರ್ಬಲ್ಯವನ್ನು ಚೆನ್ನಾಗಿ ಉಪಯೋಗಿಸಿಕೊಂಡಿರುವ ಎಂಇಎಸ್ ಇಲ್ಲಿನ ಮರಾಠಿಗರ ಮೇಲೆ ತನ್ನ ಹಿಡಿತ ಸಾಧಿಸಲು ಸಾಧ್ಯವಾಗಿದೆ.

ಕೇವಲ ಉತ್ತರಕರ್ನಾಟಕದ ಅಭಿವೃದ್ದಿಗಾಗಿ ಅಧಿವೇಶನ ನಡೆಸುತ್ತೇವೆ ಎಂದರೇ ಸಾಕೆ ? ಈಗ ವಿರೋಧಪಕ್ಷದಲ್ಲಿ ಕುಳಿತಿರುವ ಕಾಂಗ್ರೆಸ್ ಈ ಹಿಂದೆ ಮಾಡಿದ್ದಾದರೂ ಏನು ಎಂಬುದಕ್ಕೆ ರಾಜ್ಯದ ಗಡಿಭಾಗದ ಹಳ್ಳಿಗಳು ಜ್ವಲಂತ ಸಾಕ್ಷಿಯಾಗಿ ನಿಂತಿವೆ. ಆ ನೆಲೆಯಲ್ಲಿ ವಿರೋಧ ಪಕ್ಷ ಹಾಗೂ ಆಡಳಿತರೂಢ ಪಕ್ಷಗಳು ಉತ್ತರ ಕರ್ನಾಟಕ ಅಭಿವೃದ್ದಿ, ನೀರಾವರಿ, ರೈತರ ಬಗ್ಗೆ, ಭಯೋತ್ಪಾದನೆ ಬಗ್ಗೆ ತಲೆದೂಗುವಂತಹ ಚರ್ಚೆ ನಡೆಯಲೇ ಇಲ್ಲ. ಅದೇ ರೀತಿ ಕನ್ನಡ ನಾಡು,ನುಡಿ, ಜಲದ ಬಗ್ಗೆ ಮಾತನಾಡುವ ರಾಜಕಾರಣಿಗಳು, ಈವರೆಗೆ 74 ಸಾಹಿತ್ಯ ಸಮ್ಮೇಳನಗಳು ನಡೆದಿದ್ದು, ಆ ಸಂದರ್ಭದಲ್ಲಿ ಕೈಗೊಂಡ ನಿರ್ಣಯಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಆ ಬಗ್ಗೆ ಯಾವುದಾದರು ಚರ್ಚೆ ನಡೆಯಿತಾ ಅದೂ ಇಲ್ಲ. 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಎಲ್.ಬಸವರಾಜು ಅವರು ಇತ್ತೀಚೆಗೆ ಪಾಕ್ಷಿಕ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕಟ್ಟಡಗಳು ಧ್ವಂಸವಾದರೆ ಕಟ್ಟಬಹುದು, ಆದರೆ ನೆಲದ ಸಂಸ್ಕೃತಿ, ಪ್ರಜಾಪ್ರಭುತ್ವವೇ ನೆಲಕಚ್ಚಿದರೆ ಹೇಗೆ ಎಂಬ ಆತಂಕವನ್ನು ಹೊರಹಾಕಿದ್ದಾರೆ. ಈ ಬಗ್ಗೆಯೂ ರಾಜಕಾರಣಿಗಳು ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ.