Friday, October 26, 2007

ಆದರ್ಶ ಸಮಾಜದ ಬೆನ್ನೇರಿ ಹೊರಟವರು....ಇತ್ತೀಚೆಗೆ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರ ಸಹೋದರ, ನಟ ಪವನ್ ಕಲ್ಯಾಣ್ ಅವರು ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ತಮ್ಮ ರಿವಾಲ್ವರ್ ಅನ್ನು ನೀಡಿದ ಬಳಿಕ, ತಾನು ಬಡಜನರ ರಕ್ಷಣೆಗಾಗಿ 'ಜನಸಾಮಾನ್ಯರ ರಕ್ಷಣಾ ಸಂಘಟನೆ'ಯನ್ನು ಹುಟ್ಟು ಹಾಕುತ್ತಿರುವುದಾಗಿ ಘೋಷಿಸಿದ್ದರು.

ನೂರಾರು ಬೆಂಬಲಿಗರೊಂದಿಗೆ ಹೈದರಾಬಾದ್ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ಆಗಮಿಸಿದ್ದ ಪವನ್ ಕಲ್ಯಾಣ್ ತುಂಬಾ ನಾಟಕೀಯವಾಗಿ ತನ್ನ ರಿವಾಲ್ವರ್, ಅದಕ್ಕೆ ಸಂಬಂಧಪಟ್ಟ ದಾಖಲಾತಿಯನ್ನು ಆರಕ್ಷಕರ ವಶ ಒಪ್ಪಿಸಿ ತನ್ನ ನಿಲುವಿನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದರು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಇಂತಹ ಸಂಘಟನೆಯನ್ನು ಸ್ಥಾಪಿಸುತ್ತಿದ್ದು, ಅದಕ್ಕಾಗಿ ಒಂದು ಕೋಟಿ ರೂಪಾಯಿ ವಂತಿಗೆ ನೀಡುತ್ತಿರುವುದಾಗಿ ತಿಳಿಸಿದ್ದರು.

ಮದರಾಸ್ ರೈಫಲ್ ಕ್ಲಬ್ ಸದಸ್ಯರಾಗಿರುವ ಪವನ್ ಕಲ್ಯಾಣ್, 1998ರಲ್ಲಿ ರಿವಾಲ್ವರ್ ಲೆಸೆನ್ಸ್ ಪಡೆದಿದ್ದರು.ಇದೀಗ ತನಗೆ ಅದರ ಅಗತ್ಯ ಇಲ್ಲ ಎಂದು ಹೇಳಿದ್ದರು.ಪವನ್ ಕಲ್ಯಾಣ್ ಅವರ ಹೇಳಿಕೆಯನ್ನು ಗಮನಿಸಿದ ಬಳಿಕ, ನೆನಪಿಗೆ ಬಂದಿದ್ದೆ ಕರ್ನಾಟಕದಲ್ಲಿ ಬಾಂಬ್ ಎಸೈ ಎಂದೇ ಹೆಸರು ಪಡೆದ ಗಿರೀಶ್‌ ಲೋಕನಾಥ್‌ ಮಟ್ಟೆಣ್ಣವರ್‌.

ಪವನ್ ನಟರಾದರೇ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಟ್ಟೆಣ್ಣ , ಭ್ರಷ್ಟಾಚಾರದ ವಿರುದ್ಧ, ಜನರ ಹಿತರಕ್ಷಣೆಗಾಗಿ ಶಾಸಕರ ಭವನದಲ್ಲಿ ಬಾಂಬ್ ಇಡುವ ಮೂಲಕ ಕರ್ನಾಟಕದಾದ್ಯಂತ ಒಂದೇ ದಿನದಲ್ಲಿ ಮನೆಮಾತಾಗಿದ್ದರು. ಆ ಸಂದರ್ಭದಲ್ಲಿ ಹಾಯ್ ಬೆಂಗಳೂರ್ ಪತ್ರಿಕೆ ಆತನಿಗೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಬಳಿಕ ಮಟ್ಟೆಣ್ಣ ಭ್ರಷ್ಟಾಚಾರ ವಿರೋಧಿ ವೇದಿಕೆ ಅಂತ ಮಾಡಿಕೊಂಡು ಊರನ್ನ ಸುತ್ತ ತೊಡಗಿದರು, ಹಾಗೆ ಅವರು ಭಾರತೀಯ ಜನತಾ ಪಕ್ಷ ಸೇರುವುದಾಗಿ ಘೋಷಿಸಿದ್ದರು.

ಕ್ರಾಂತಿ ಮಾಡಲು ಹೊರಟ ಮಟ್ಟೆಣ್ಣ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ರಾಜಕಾರಣ, ರಾಜಕೀಯ ನಾಯಕರು ಅದೆಷ್ಟು ಪರಿಶುದ್ಧರಾಗಿದ್ದಾರೆ ಎಂಬುದನ್ನು ವಿವರಿಸಬೇಕಾದ ಅಗತ್ಯ ಇಲ್ಲ. ಅವರು ಪಕ್ಷ ಮೂಲಕ ಅದ್ಯಾವ ಕ್ರಾಂತಿ ಮಾಡುತ್ತಾರೋ. ಅದೇ ರೀತಿ ಆಂಧ್ರದಲ್ಲಿ ಪವನ್ ಕಲ್ಯಾಣ್ ಕೂಡ ಅಂತಹ ನಿರ್ಧಾರಕ್ಕೆ ಗಂಟು ಬಿದ್ದಿದ್ದಾರೆ. ತೆಲುಗು ಸಿನಿಮಾ ರಂಗದಲ್ಲಿ ಕಳೆದ 30 ವರ್ಷಗಳಿಂದ ಅಭಿನಯಿಸಿ ಖ್ಯಾತಿ ಗಳಿಸಿದ ಚಿರಂಜೀವಿ ಹಣ, ಯಶಸ್ವಿ ಎಲ್ಲವೂ ಗಳಿಸಿದ್ದಾರೆ.

ಆದರೆ ಸಹೋದರ ಪವನ್ ನಟರಾಗಿ, ಸಾಮಾಜಿಕ ಸೇವಕನಾಗಿ ಆಗಲಿ ಮುಂಚೂಣಿಯಲ್ಲಿದ್ದ ವ್ಯಕ್ತಿಯಾಗಿರಲಿಲ್ಲ. ಇದೀಗ ದಿಢೀರನೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಟೊಂಕ ಕಟ್ಟಿ ನಿಲ್ಲುವುದಾಗಿ ಘೋಷಿಸಿದ್ದಾರೆ.ಪ್ರಪಂಚದಲ್ಲಿ ಕ್ರಾಂತಿಗಳಿಗೆ ಯಾವುದೇ ಬರ ಇಲ್ಲ. ಕರ್ನಾಟಕದಲ್ಲಿ 12ನೇ ಶತಮಾನದ ಬಸವಣ್ಣನವರ ಕ್ರಾಂತಿಯೇ ಐತಿಹಾಸಿಕವಾಗಿ ಪ್ರಮುಖವಾದದ್ದು. ಅದರ ಬಳಿಕ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿನ ಚಳವಳಿಗಳು ಯಶಸ್ವಿಯಾಗಿದ್ದವು.

ಆದರೆ ನಂತರದ ಲೋಹಿಯಾ, ಜೈಪ್ರಕಾಶ್ ನಾರಾಯಣ್, ಮಾವೋವಾದಿ, ರೈತ, ದಲಿತ, ನಕ್ಸಲ್ ಚಳವಳಿಗಳೆಲ್ಲ ಇಂದು ಏನಾಗಿವೆ ಎಂಬುದು ನಮ್ಮ ಕಣ್ಣ ಮುಂದಿದೆ. ಹಾಗೇ ಜನರ ಕಲ್ಯಾಣಕ್ಕಾಗಿ ಹುಟ್ಟಿಕೊಂಡ ಚಳವಳಿಗಳ ಸಂಘಟನೆಗಳೇ ಇವತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಒಡೆದು ಬೇರೆ, ಬೇರೆ ಹೆಸರಿನ ಸಂಘಟನೆಗಳಾಗಿ ಜನ್ಮ ತಳೆದಿವೆ.....

5 comments:

kalyanakirana.com said...

ಚೆನ್ನಾಗಿ ಮೂಡಿಬಂದಿದೆ, ನಿಮ್ಮ ವಿಷಯ ಗ್ರಹಣ ಶಕ್ತಿ ಚೆನ್ನಾಗಿದೆ. ಆದರೆ, ಓದುತ್ತಾ ಓದುತ್ತಾ ಹಠಾತ್ ಮುಗಿದುಬಿಡುತ್ದೆ. ಅಂದರೆ, ಸಡನ್ ಆಗಿ ಎಂಡ್ ಮಾಡಿಬಿಟ್ಟಿದ್ದೀರಾ. ಇನ್ನಷ್ಟು ವಿವರಣೆ ಅಗತ್ಯವಿತ್ತು.

Unknown said...

ಆತ್ಮಿಯ
ನಿಮ್ಮ ಲೇಖನದಲ್ಲಿ ಸಮಾಜದ ಬಗ್ಗೆ ನಿಮಗಿರುವ ಕಳಕಳಿ, ಅಕ್ರೋಶ, ಅನುಕರಣೀಯ. ಆದರೆ ಬಂಡವಾಳಶಾಹಿಗಳ ಸಾಮ್ರಾಜ್ಯದಲ್ಲಿ ಇನ್ನೆನು ನಿರೀಕ್ಷಸಲು ಸಾಧ್ಯ.ಬಡವ ಬಡವನಾಗಿ ಉಳಿಯುತ್ತಿದ್ದು, ಶ್ರೀಮಂತ ಶ್ರೀಮಂತನಾಗಿ ಉಳಿಯುತ್ತಿದ್ದಾನೆ. ಸಮಾಜ ಸೇವಕ ಮುಖವಾಡದಲ್ಲಿ ಶ್ರೀಮಂತರು ತೋರುವ ನಾಟಕವನ್ನು ಚೆನ್ನಾಗಿ ವಿಶ್ಲೆಷಿಸಿದ್ದೀರಿ. ಮುಂದೆಯೂ ಸಾಗಲಿ ನಿಮ್ಮ ಬರವಣಿಗೆಯ ನೌಕೆ ನಿಲ್ಲದೆ...

ಬ್ರಹ್ಮಾನಂದ ಎನ್.ಹಡಗಲಿ said...

ವಿಷಯ ವಸ್ತುವಿನ ಹಿಂದಿರುವ ಸಂದೇಶವನ್ನು ನಿಮ್ಮ ಬರವಣಿಗೆ ಮೂಲಕ ತುಂಬಾ ಚೆನ್ನಾಗಿ ವ್ಯಕ್ತಪಡಿಸಿದ್ದೀರಿ. ಸಮಾಜಕ್ಕೆ ಏನಾದರೂ ಮಾಡುತ್ತೇನೆ ಅಂತ ಹೊರಟವ್ರು, ಅದನ್ನೇ ಮಾಡಬೇಕು. ಆದರೆ, ರಾಜಕೀಯಕ್ಕೆ ಆಮಿಷಕ್ಕೆ ಒಳಗಾಗಿ ಅದಕ್ಕೆ ಬಲಿಪಶುವಾಗಬಾರದು ಎಂಬ ಅಪ್ರತ್ಯಕ್ಷ ಸಂದೇಶ ನಿಮ್ಮ ಲೇಖನದಲ್ಲಿ ತಿಳಿಸಿದ್ದಕ್ಕೆ ಧನ್ಯವಾದ.

ಬ್ರಹ್ಮಾನಂದ

ಸತೀಶ್ said...

ಸಮಾಜದ ಕುರಿತು ಸಮಾಜ ಸುಧಾರಣೆ ಎಂದು ಹೆಣಗಿದವರೆಲ್ಲ ಇಂದು ಎನಾಗಿದ್ದಾರೆ ಎಂಬುದು ತಿಳಿಯದ ಸಂಗತಿ ಎನಲ್ಲ. ಸಮಾಜ ಎನ್ನುವುದು ವಿಕಸನ ಸಿದ್ದಾಂತದ ಪ್ರತಿಬಿಂಬ ಅಲ್ಲಿ ಕ್ರಾಂತಿಗೆ ಅವಕಾಶವೇ ಇಲ್ಲ. ಕ್ರಾಂತಿ ಮತ್ತು ವಿಕಸನವಾದಗಳು ವಿರುದ್ದ ದಿಕ್ಕಿನಲ್ಲಿ ಇರುವ ಎರಡು ಅಪರೂಪದ ಸಂಗತಿಗಳು.
ಸಾಮಾಜೀಕ ಕ್ರಾಂತಿ ಎನ್ನುವುದು ಒಂದು ವ್ಯವಸ್ಥೆಯನ್ನು ಅಡಿಮೇಲು ಮಾಡಿ ನೂತನವಾದ ಸಾಮಾಜೀಕ ವ್ಯವಸ್ಥೆಯನ್ನು ಹುಟ್ಟುಹಾಕುವುದು ಎಂಬುದು ನನ್ನ ಅನಿಸಿಕೆ. ಇದೇ ಕ್ರಾಂತಿಯಲ್ಲಿ ಸಾಗಿದ ಬುಧ್ದ, ಮತ್ತು ಬಸವಣ್ಣನವರ ತತ್ಪಗಳು ಇಂದು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತಗೊಂಡಿವೆ. ಸಾಮಾಜೀಕ ಬದಲಾವಣೆಯ ವಿಚಾರಗಳು ವಿಶ್ವವ್ಯಾಪಿಯಾಗಬೇಕಾದಲ್ಲಿ ವಿಕಸನವಾದದ ಹಾದಿಯಲ್ಲಿ ಸಾಗಬೇಕು. ಒಟ್ಟಾರೆ ಹೇಳುವುದು ಸಮಾಜ ಸುಧಾರಣೆ ಎಂದು ಬಾಯಿ ಬಡಿದುಕೊಂಡವರೆಲ್ಲ ಮಾಡುವುದು ಒಂದೇ ಕೆಲಸ ಸಮಾಜದ ವಿಘಟನೆ ಸಮಾಜವನ್ನು ತನ್ನ ಪಾಡಿಗೆ ತಾನು ಬಿಟ್ಟಲ್ಲಿ ಅದು ತನ್ನ ಪಾಡಿಗೆ ತಾನು ಸುಧಾರಣೆಯ ಹಾದಿಯಲ್ಲಿ ಸಾಗುತ್ತದೆ..

ಕಿತಾಪತಿ

jomon varghese said...

ಚಿಂತನೆಗೆ ಹಚ್ಚಿದ ಲೇಖನ.. ಲೇಖನ ಓದಿದ ನಂತರ ಒಂದು ಗಾದೆ ನೆನಪಿಗೆ ಬಂತು "ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ" "ಆದರ್ಶ ಸಮಾಜದ ಬೆನ್ನೇರಿ ಹೊರಟವರು" ಇದನ್ನು ಮಾತ್ರ ಶಿರಸಾವಹಿಸಿ ಪಾಲಿಸುತ್ತಿದ್ದಾರೆ.