Wednesday, February 27, 2008

ಬಾವಡಿ ಜಲಪಾತಕ್ಕೊಂದು ಸುತ್ತು...

ಮನಸ್ಸು ಒಮ್ಮೊಮ್ಮೆ ಲಂಗು ಲಗಾಮಿಲ್ಲದೆ ಓಡತೊಡಗಲು ಆರಂಭಿಸಿದಾಗ ಅದಕ್ಕೊಂದು ಬ್ರೇಕ್ ನೀಡಲು ಆಗಾಗ ಚಾರಣ, ಪಿಕ್‌‌ನಿಕ್ ಅಂತ ಸುತ್ತಾಡುತ್ತಿರುವುದೇ ತುಂಬಾ ಖುಷಿಯ ವಿಷಯವಾಗಿತ್ತು. ಕೊಲ್ಲೂರಿನ ಅರಸಿನ ಗುಂಡಿ ಜಲಪಾತ, ಬೆಳ್ಕಲ್‌ನ ಗೋವಿಂದ ತೀರ್ಥ, ಕೊಡಚಾದ್ರಿ ಬೆಟ್ಟ ಏರಿ ಇಳಿದು, ಕುಣಿದು ಕುಪ್ಪಳಿಸುತ್ತಿದ್ದೆವು.

ಜಲಪಾತಗಳಿಗೆ ಹಲವು ಬಾರಿ ಭೇಟಿ ಕೊಟ್ಟಾಗಲು ಆದೊಂದು ಥರ ದಿವ್ಯ ಆನಂದ ದೊರೆಯುತ್ತಿತ್ತು. ಕೊಲ್ಲೂರು ಸುತ್ತಮುತ್ತ ಪ್ರದೇಶವೇ ತುಂಬಾ ಆಹ್ಲಾದಕರವಾದದ್ದು. ಹೀಗೆ ನಾನು ಮತ್ತು ಕಿರಿಯ ಪತ್ರಕರ್ತ ಮಿತ್ರ ರಾಘವೇಂದ್ರ ಪಡುಕೋಣೆ ಕೊಲ್ಲೂರು ಭೇಟಿ ನಿರಂತರವಾಗಿದ್ದ ಸಂದರ್ಭದಲ್ಲಿ, ಅಲ್ಲಿನ ಸ್ಥಳೀಯ ರಮೇಶ್ ಗಾಣಿಗರು ಒಂದು ದಿನ ನೀವು ಅರಸಿನ ಗುಂಡಿ, ಬೆಳ್ಕಲ್ ಅಂತ ಪದೇ, ಪದೇ ಸುತ್ತಿದ್ದಲ್ಲೇ ಸುತ್ತುತ್ತೀರಿ, ಇಲ್ಲಿಯೇ ಮತ್ತೊಂದು ಜಲಪಾತ ಇದೆ ಅದನ್ನ ನೋಡಿದಿರಾ ಅಂತ ಪ್ರಶ್ನಿಸಿದ್ದರು.

ಅರೆ, ಇದ್ಯಾವುದಪ್ಪಾ ನಮ್ಮ ಲಿಸ್ಟ್‌‌ನಿಂದ ಜಾರಿಕೊಂಡ ಜಲಪಾತ ಅಂತ ಎಷ್ಟೇ ಭಾಗಾಕಾರ ಗುಣಕಾರ ಮಾಡಿದರೂ ಉತ್ತರ ದೊರೆಯದಿದ್ದಾಗ ,ಕೊನೆಗೆ ಅವರು, ಮಾಸ್ತಿಕಟ್ಟೆ ಸಮೀಪವೇ ಮಣ್ಣುರಸ್ತೆ ಇದೆಯಲ್ಲ ಅಲ್ಲಿಂದ ನೇರಕ್ಕೆ ಹೋದರೆ ನಿಮಗೆ ಬಾವಡಿ ಅಂತ ಊರು ಸಿಗುತ್ತೆ ಅಲ್ಲೇ ಒಂದೊಳ್ಳೆ ಜಲಪಾತ ಇದೆ ಒಮ್ಮೆ ಹೋಗುವ ಅಂತ ಹೇಳಿದ್ದರು.


ಗಾಣಿಗರು ಆ ವಿಚಾರ ಹೇಳಿದ ಮೇಲೆ ತಲೆಯಲ್ಲಿ ಜಲಪಾತ ನೋಡುವ ಹಂಬಲ ಜಾಸ್ತಿಯಾಗತೊಡಗಿತ್ತು. ನಮ್ಮ,ನಮ್ಮ ಕೆಲಸದ ಒತ್ತಡ ಅಲ್ಲಿಗೆ ಹೋಗಲು ಕಾಲ ಕೂಡಿ ಬರಲೇ ಇಲ್ಲ.

ಆದರೆ ನನ್ನ ಮನದೊಳಗೆ ಅದು ಕಾಡುತ್ತಲೇ ಇತ್ತು. ಕೊನೆಗೊಂದು ದಿನ ಹಿರಿಯರು, ಪತ್ರಕರ್ತ ಮಿತ್ರರಾದ ಶ್ರೀಪತಿ ಹಕ್ಲಾಡಿ ಇಬ್ಬರೆ ಸೇರಿ ಕೊಲ್ಲೂರಿನ (ದೇವಾಲಯಕ್ಕಿಂತ 1ಕಿ.ಮಿ.ಮೊದಲೇ ಈ ನಿಲ್ದಾಣ ಇದೆ) ಮಾಸ್ತಿಕಟ್ಟೆಯಲ್ಲಿ ಇಳಿದು ಕಾಲಿಗೆ ಚಕ್ರಕಟ್ಟಿಕೊಂಡವರ ಥರ ನಡೆಯತೊಡಗಿದೆವು, ಮುಂದೆ, ಮುಂದೆ ಹೋದಾಗ ದಟ್ಟಾರಣ್ಯದಲ್ಲಿ ಮರಗಳನ್ನು ಬಿಟ್ಟರೆ ಮನುಷ್ಯರೆಲ್ಲೂ ಕಾಣಿಸುತ್ತಲೆ ಇಲ್ಲ, ದಾರಿ ಮೊದಲೇ ಗೊತ್ತಿಲ್ಲ, ಯಾರಲ್ಲಿ ಕೇಳುವುದು, ಅಲ್ಲೊಂದು ದನ ಮೇಯುತ್ತಿತ್ತಾದರೂ ಅದಕ್ಕೆ ಮಾತು ಬರುವುದಿಲ್ಲವಲ್ಲ ಅಂತ ತಮಾಷೆ ಮಾಡುತ್ತ ಅಂದಾಜಿಗೆ ಗುಂಡು ಹೊಡೆದಂತೆ ನಡೆಯುತ್ತಾ ಸಾಗಿದೆವು.

ಸುಮಾರು ಏಳೆಂಟು ಕಿ.ಮಿ.ಕ್ರಮಿಸಿದ ನಂತರ ಆ ಅಭಯಾರಣ್ಯದೊಳಗೊಂದು ಮನೆ ಕಾಣಿಸಿತು, ಅಯ್ಯಬ್ಬಾ ಅಂತ ನಿಟ್ಟುಸಿರು ಬಿಟ್ಟು ಆ ಪ್ರದೇಶಕ್ಕೆ ತಲುಪಿದೆವು, (ಅಲ್ಲಿ ನಾಲ್ಕಾರು ಮನೆಗಳಿದ್ದವು, ನಮಗೆ ಆಶ್ಚರ್ಯ ವಾಗಿದ್ದು ಯಾವುದೆಂದರೆ, ಈ ಅಭಯಾರಣ್ಯದಲ್ಲಿ ಇವರು ಇಷ್ಟು ವರ್ಷ ಹೇಗೆ ಕಳೆದಿರಬಹುದು ಅಂತ, ಅವರ ಜೀವನದ ಬಗ್ಗೆ, ಅಕ್ಕಿ,ಸಾಮಾನು ಖರೀದಿ ಕುರಿತು ವಿಚಾರಿಸಿದಾಗ ಹೇಳಿದರು, ಏನೇ ಬೇಕಿದ್ದರೂ ಹತ್ತು ಕಿ.ಮಿ.ನಡೆದು ಕೊಲ್ಲೂರಿಗೆ ಬರಬೇಕಂತೆ.

ಆ ಕಾರಣಕ್ಕಾಗಿಯೇ ಮಕ್ಕಳು ಅರ್ಧಂಬರ್ಧ ಓದು ಮುಗಿಸಿ, ಹೋಟೆಲುಗಳಲ್ಲಿ ದುಡಿಯುತ್ತಿರುವುದಾಗಿ ತಿಳಿಸಿದರು. ರಾತ್ರಿ ಆನೆ, ಹುಲಿಗಳ ಕಾಟ ಜೀವ ಕೈಯಲ್ಲಿ ಹಿಡಿದು ಬದುಕು ಸಾಗಿಸಬೇಕು ಎಂದು ಸಂಕ್ಷಿಪ್ತ ವಿವರ ನೀಡಿದ್ದರು) ಆದಾಗಲೇ ಮಧ್ನಾಹ್ನ 2ಗಂಟೆ ದಾಟಿತ್ತು. ಮನೆಯಲ್ಲಿದ್ದವರು ಗಂಜಿ ಊಟ ಪೂರೈಸಿ, ಎಲೆ ಅಡಿಕೆ ತಿನ್ನುತ್ತಿದ್ದರು.

ನಾವು ಹೋಗುತ್ತಲೇ ಆತ್ಮೀಯತೆಯಿಂದ ನಮ್ಮನ್ನು ಬರಮಾಡಿಕೊಂಡು ವಿಚಾರಿಸತೊಡಗಿದರು. (ಆ ಸಂದ ರ್ಭದಲ್ಲಿ ನಕ್ಸಲೀಯರ ಹಾವಳಿ, ಓಡಾಟ ಆರಂಭವಾಗಿದ್ದರಿಂದ ನಮ್ಮನ್ನು ಅನುಮಾನದ ಮೇಲೆ ಮಾತನಾಡಿ ಸಿತೊಡಗಿದ್ದರು) ನಂತರ ಅವರಲ್ಲಿ ಈ ಊರಿಗೆ ಏನು ಹೆಸರು ಅಂತ ಕೇಳಿದೆವು, ಇದು ಬಾವಡಿ ಅಂದಾಗ, ಓಹ್ ಸರಿಯಾದ ಜಾಗಕ್ಕೆ ಬಂದಿದ್ದೆವು ಅಂತ ಒಳಗೊಳಗೆ ಖುಷಿಪಟ್ಟೆವು.

ಜಲಪಾತ (ಆದರೆ ಅವರಿಗೆ ಜಲಪಾತ ಅಂದರೆ ಪಕ್ಕನೆ ತಿಳಿಯಬೇಕಲ್ಲ, ನೀರು ಬೀಳುತ್ತದೆಯಂತಲ್ಲ ಅಂತ ಕೇಳಿದ್ದೇವು) ಇದೆಯಲ್ಲ ಎಲ್ಲಿ ಎಂದಾಗ, ನಮ್ಮ ಮನೆಯಿಂದ ಸ್ವಲ್ಪವೇ ದೂರದಲ್ಲಿ ನಾನೇ ನಿಮಗೆ ತೋರಿಸು ತ್ತೇನೆ ಎಂದು ನಮ್ಮ ಜತೆ ಬಂದಿದ್ದರು. ಹದಿನೈದು-ಇಪ್ಪತ್ತು ನಿಮಿಷಗಳ ಬಳಿಕ ನೋಡಿ ಇದೆ ಬಾವಡಿ ಜಲಪಾತ ಎಂದು ತೋರಿಸಿ, ನೋಡಿ ಇನ್ನು ನೀವುಂಟು ಜತೆಗೆ ಜಲಪಾತ ಇದೆ ಅಂತ ಹೊರಟು ಹೋಗಿದ್ದರು.

ತಿಂಗಳಾಗಿದ್ದರಿಂದ ಜಲಧಾರೆಯ ರಭಸ ಕಡಿಮೆ ಇದ್ದಿದ್ದರೂ ಕೂಡ ನಮಗೆ ತುಂಬಾ ಸಂತೋಷವಾಗಿತ್ತು, ಬೃಹದಾಕಾರದ ಬಂಡೆಯ ಎಡೆಯಿಂದ ಬಳಕುತ್ತ ನೆಲಕ್ಕೆ ಬಂದಪ್ಪಳಿಸುವ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಂಡಿದ್ದೆವು, ಸಂಜೆ ಅಲ್ಲಿಂದ ಹೊರಟು ಮನೆಯವರಿಗೆ ಕೃತಜ್ಞತೆ ಹೇಳಿ ಊರಿನತ್ತ ಪ್ರಯಾಣ ಬೆಳೆಸಿದ್ದೆವು...



5 comments:

ರಾಜೇಶ್ ನಾಯ್ಕ said...

ನಾಗೇಂದ್ರ,

ವಿಜಯ ಕರ್ನಾಟಕದಲ್ಲಿ ೨ ವರ್ಷಗಳ ಹಿಂದೆ ಬಾವುಡಿಯ ಬಗ್ಗೆ ಲೇಖನ ಬಂದಿತ್ತು. ಅಲ್ಲಿನ ಜನರ ಜೀವನದ ಕಷ್ಟ ಕಾರ್ಪಣ್ಯಗಳ ಬಗ್ಗೆ ಈ ಲೇಖನದಲ್ಲಿ ಬರೆಯಲಾಗಿತ್ತು. ಹಾಗೆಯೇ ಇಲ್ಲಿ ಜಲಪಾತವೊಂದಿದೆ ಎಂದು ಬರೆಯಲಾಗಿತ್ತು. ಆ ಲೇಖನವನ್ನು ಇಟ್ಟುಕೊಂಡಿದ್ದೇನೆ. ಆ ಲೇಖನವನ್ನು ಓದಿದ ಬಳಿಕ ಹಲವಾರು ಬಾರಿ ಕೊಲ್ಲೂರಿನ ದಾರಿಯಲ್ಲಿ ಹೋಗಿದ್ದೇನೆ. ಪ್ರತಿ ಸಲವೂ ಮಾಸ್ತಿಕಟ್ಟೆ ಬಳಿ 'ಬಾವುಡಿ' ಎಂದು ಹಾಕಿರುವ ಫಲಕವನ್ನೂ ನೋಡಿದ್ದೇನೆ. ಆದರೆ ಇನ್ನೂ ಭೇಟಿ ನೀಡಲು ಆಗಿಲ್ಲ. ಈ ಮಳೆಗಾಲ ಮುಗಿದ ಮೇಲೆ ಭೇಟಿ ನೀಡಲೇಬೇಕು.

ರಾಜೇಶ್ ನಾಯ್ಕ said...

ಮತ್ತೊಂದು ವಿಶಯ ಮರೆತೆ. ನಿಮ್ಮೊಂದಿಗೆ ಬಾವದಿಗೆ ಹೋಗಿದ್ದರಲ್ಲ...ಶ್ರೀಪತಿ ಹಕ್ಲಾಡಿಯವರು. ಅವರೇ ಬರೆದ ಲೇಖನ ನನ್ನ ಬಳಿ ಇರುವುದು. ಮೊನ್ನೆ ನವೆಂಬರ್-ನಲ್ಲಿ ವಿಜಯ ಕರ್ನಾಟಕದಲ್ಲಿರುವ ಗೆಳೆಯರ ಮೂಲಕ ಹಕ್ಲಾಡಿಯವರ ದೂರವಾಣಿ ಸಂಖ್ಯೆ ಪಡೆಯುವ ವಿಫಲ ಪ್ರಯತ್ನ ಮಾಡಿದೆ. ಬಾವುಡಿಗೆ ತೆರಳಲು ಸೂಕ್ತ ಸಮಯ ಯಾವುದೆಂದು ಅವರಲ್ಲಿ ಕೇಳಿ ತಿಳಿಯಬೇಕಿತ್ತು. ನಾಗೇಂದ್ರರೆ, ಈಗ ದಯವಿಟ್ಟು ನೀವೇ ತಿಳಿಸುತ್ತೀರಾ?

Nagendra Trasi said...

ರಾಜೇಶ್

ಪ್ರತಿಕ್ರಿಯೆಗೆ ಧನ್ಯವಾದಗಳು, ನೀವು ಬಾವಡಿಗೆ ಜನವರಿಯಿಂದ ಏಪ್ರಿಲ್‌‌ ನಡುವೆ ಯಾವಾಗ ಬೇಕಾದರೂ ಹೋಗಬಹುದು. ಆದರೆ ಏಪ್ರಿಲ್‌‌ನಲ್ಲಿ ನೀರು ಕಡಿಮೆಯಾಗಿರುತ್ತದೆ.

ನಾಗೇಂದ್ರ ತ್ರಾಸಿ.

Unknown said...

ಮತ್ತೆ ಯಾವಾಗ ಬಾವಡಿಗೆ..

Unknown said...

ಮತ್ತೆ ಯಾವಾಗ ಬಾವಡಿಗೆ..