Saturday, March 15, 2008

ಚಂಡೆ - ಮದ್ದಳೆ ಗುಂಗಿನಲ್ಲಿ....


ಆ ದಿನಗಳಲ್ಲಿ ರಿಕ್ಷಾದಲ್ಲಿ ಮೈಕ್ ಕಟ್ಟಿಕೊಂಡು, ಇಂದು ರಾತ್ರಿ ಒಂಬತ್ತುವರೆಗೆ ಸರಿಯಾಗಿ ಒಂದೇ ಒಂದು ಆಟ (ಯಕ್ಷಗಾನ), ಪ್ರಿಯ ಯಕ್ಷಗಾನ ಪ್ರೇಮಿಗಳೇ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ ಎಂದು ಕೂಗುತ್ತ, ಸಾಗುವ ರಿಕ್ಷಾದ ಹಿಂದೆ, ಆತ ಬಿಸಾಕುವ ಪ್ಯಾಂಪ್ಲೆಟ್ ಹೆಕ್ಕಲು ಓಡುತ್ತಿದ್ದೆವು.


ಹೀಗೆ ಕೂಗುತ್ತ ಸಾಗುವಾಗಲೇ, ಮನೆಯಲ್ಲಿ ಅಡುಗೆ, ಬೇರೆ, ಬೇರೆ ಕೆಲಸಗಳೆಲ್ಲ ಜಟಾಪಟಾ ಮುಗಿಯುತ್ತಿ ದ್ದವು, ಯಾಕೆಂದರೆ ಒಂಬತ್ತುವರೆಗೆ ಸರಿಯಾಗಿ ಯಕ್ಷಗಾನ ನೋಡಲು ಹೋಗಬೇಕಲ್ಲ ಅದಕ್ಕೆ. ಯಕ್ಷಗಾನದ ಚೌಕಿಯಿಂದ ಕರಿಮುಖದವಗೆ ಗಣಾಧಿಪತಿ....ಎಂದು ಗಣಪತಿ ಪೂಜೆ ಆರಂಭಗೊಂಡು ಚಂಡೆ-ಮದ್ದಳೆ ಸದ್ದು ಕಿವಿಗೆ ಬೀಳುವ ಮುನ್ನ ಹರುಕು-ಮುರುಕು ಚಾಪೆಯೊಂದಿಗೆ ಪಸ್ಟ್ ಕ್ಲಾಸ್ ( ರಂಗಸ್ಥಳದ ಎದುರುಭಾಗದ ನೆಲ)ನಲ್ಲಿ ಕುಳಿತಿರುತ್ತಿದ್ದೆವು.


ಜಾತ್ರೆ ಎಂಬಂತೆ ಜನ ಹಿಂಡು, ಹಿಂಡಾಗಿ ಬಂದು ಕೂರುತ್ತಿದ್ದರು. ಮಕ್ಕಳು, ಹೆಂಗಸರು, ಮುದುಕರು, ಎಲ್ಲರೂ ಬಂದು ಚಾಪೆ, ವಸ್ತ್ರ ಹಾಕಿಕೊಂಡು ಕಣ್ಣಲ್ಲಿ, ಕಣ್ಣಿಟ್ಟು ಯಕ್ಷಗಾನ ವೀಕ್ಷಿಸುತ್ತಿದ್ದರು. ನಮಗೆ ಆರಂಭದಲ್ಲಿ ಭಾರೀ ಉತ್ಸಾಹ, ಸುಮಾರು 11 ಗಂಟೆ ಸುಮಾರಿಗೆ ನಮ್ಮ ಗಾಡಿ ಪ್ಯಾಚ್ (ನಿದ್ರೆ) ಆಗಿರುತ್ತಿತ್ತು.

ಮಧ್ಯರಾತ್ರಿ 12ರ ನಂತರ ರಂಗಸ್ಥಳ ಪ್ರವೇಶಿಸುವ ರಾಕ್ಷಸ, ಒಡ್ಡೋಲಗ ಪ್ರವೇಶದ ಸಂದ ರ್ಭದಲ್ಲಿ ಚಂಡೆಯ ಹೊಡೆತದ ಅಬ್ಬರ, ಭಾಗವತರ ಆರ್ಭಟ, ರಾಕ್ಷಸನ ಕಿರುಚಾಟ, ಬೆಳಕಿನ ಸರ್ಕಸ್‌‌ ಆರಂಭಗೊಂಡ ಕೂಡಲೇ ಮನೆಯಿಂದ ಬಂದಿದ್ದ ಹಿರಿಯರು, ಏಯ್ ಮಕ್ಕಳೇ ಏಳಿ, ಏಳಿ, ರಾಕ್ಷಸ, ರಾಕ್ಷಸ ಅಂತ ಇವರೂ ಬೊಬ್ಬೆ ಹೊಡೆಯುವುದರಿಂದ ನಾವು ದಿಗಿಲುಗೊಂಡು ನಿದ್ದೆಗಣ್ಣಲ್ಲೇ ಎದ್ದು ಕೂರುತ್ತಿದ್ದೇವು.

ಮತ್ತೆ ಯಕ್ಷಗಾನ ವೀಕ್ಷಣೆ. ಅಷ್ಟು ವೇಳೆಗೆ ನಮಗೆ ಒಂದು ಸುತ್ತಿನ ನಿದ್ದೆ ಆಗಿರುತ್ತದೆ. ಆದರೆ ನಮ್ಮಂತೆ ಬರುವ ಉಳಿದ ಹುಡುಗರು ಪಾಳಿ ಎಂಬಂತೆ ಅವರು ನಿದ್ದೆಗೆ ಶರಣಾಗಿರುತ್ತಿದ್ದರು. ಆಗ ನಾವು ಅವರ ಬಾಯಿಗೆ ಕಾಗದವನ್ನು ಬೀಡಿಯಂತೆ ಸುರುಳಿ ಸುತ್ತಿ ಇಡುತ್ತಿದ್ದೇವು. ಕೆಲವೊಮ್ಮೆ ಬೆಂಕಿ ಹಚ್ಚಿ ನಂದಿಸಿ, ಬಾಯಿಗೆ ಇಟ್ಟಾಗ ಅದು ಬೀಡಿಯಂತೆ ಹೊಗೆಯುಳುತ್ತಿತ್ತು. ಅಲ್ಲಿ ಯಕ್ಷಗಾನ ನಡೆಯುತ್ತಿದ್ದರೆ, ಇಲ್ಲಿ ನಮ್ಮದೇ ಒಂದು ಮೇಳ. ಕೆಲ ಸಂದರ್ಭದಲ್ಲಿ ದೊಡ್ಡವರಿಂದ ಬಾಯಿಗೆ ಬಂದಂತೆ ಬೈಗುಳ ತಿಂದದ್ದು (!!) ಇದೆ.

ಮಧ್ಯರಾತ್ರಿಯಲ್ಲಿ ಚಂಡೆ ಮದ್ದಳೆ ಸದ್ದಿನೊಂದಿಗೆ, ಮಲಗಿದವರಿಂದಲೂ ''ಸದ್ದು'' ಹೊರಡುತ್ತಿದ್ದು, ಆದರೆ ಅದು ಚಂಡೆ ಸದ್ದಿನೊಂದಿಗೆ ಮಿಳಿತವಾಗಿ ಹೋಗುತ್ತಿತ್ತು...... !! ದೇವಿ ಮಹಾತ್ಮೆ, ರಾಮಾಯಣ, ಮಹಾಭಾರತ, ಗದಾಯುದ್ಧ, ಭೀಷ್ಮ ವಿಜಯ, ರತಿ ಕಲ್ಯಾಣ, ಮಹಾಮಂತ್ರಿ ದುಷ್ಟಬುದ್ಧಿ, ನಳದಮಯಂತಿ, ಶಬರಿಮಲೆ ಅಯ್ಯಪ್ಪ, ಸಂಪೂರ್ಣ ಕುರುಕ್ಷೇತ್ರ, ವಿಜಯಶ್ರೀ, ರಾಮ ನಿರ್ಯಾಣ, ಶರಸೇತು ಬಂಧನ, ವಿಭೀಷಣ ನೀತಿ, ಲಂಕಾ ದಹನ, ಲವ-ಕುಶ ಕಾಳಗ, ಕೃಷ್ಣಾರ್ಜುನ, ಕೃಷ್ಣಗಾರುಡಿ, ಸುಭದ್ರೆ ಕಲ್ಯಾಣ, ಸೀತಾ ಕಲ್ಯಾಣ ಹೀಗೆ ಸಾಲು,ಸಾಲು ಯಕ್ಷಗಾನ ನೋಡುತ್ತಿದ್ದೆವು.

ಹಳ್ಳಿಗರಿಗಂತೂ ಯಕ್ಷಗಾನದ ಮೂಲಕವೇ ಎಲ್ಲಾ ಪುರಾಣ ಕಥೆಗಳು ಬಾಯಿಪಾಠವಾಗುವಷ್ಟರ ಮಟ್ಟಿಗೆ ಯಕ್ಷಗಾನದ ಪ್ರಸಂಗಗಳು ಚಿರಪರಿಚಿತವಾಗಿದ್ದವು. ಒಮ್ಮೆ ನಮ್ಮೂರ ಸಮೀಪದ ಅರಾಟೆ ಎಂಬಲ್ಲಿ ಬಯಲಾಟ ನಡೆಯುತ್ತಿದ್ದಾಗ, 1 ಗಂಟೆ ರಂಗಸ್ಥಳ ಪ್ರವೇಶಿಸಿದ ರಾಜನ ವೇಷಧಾರಿ ಇದೇನಾಶ್ಚರ್ಯ ಎಂದು ಗಂಭೀರವಾಗಿ ನುಡಿದಾಗ, ಎದುರು ಸಾಲಿನಲ್ಲಿ ಕುಳಿತು ನಿದ್ದೆಗಣ್ಣಲ್ಲಿದ್ದ ವ್ಯಕ್ತಿಯೊಬ್ಬರು ದಡಬಡಿಸಿ, ಏನಿಲ್ಲಾ ಸುಮ್ಮನೆ ಒಂದು ಗಳಿಗೆ ಆಟ ನೋಡಿಕೊಂಡು ಹೋಗುವಾ ಅಂತ ಬಂದೆ ಅಂದಾಗ,ಪಕ್ಕದಲ್ಲೇ ಕುಳಿತಿದ್ದವರು,

ಆಯ್ಯೋ ಆಚಾರ್ಯರೆ (ವೃತ್ತಿಯಲ್ಲಿ ಅವರು ಬಡಗಿ ನಮ್ಮಲ್ಲಿ ಆಚಾರ್ಯರು ಎನ್ನುತ್ತೇವೆ,ಯಕ್ಷಗಾನದಲ್ಲಿ ಇದೇನು ಆಶ್ಚರ್ಯ ಎಂದಿದ್ದು, ಇವರಿಗೆ ಏನು ಆಚಾರ್ರೇ ಎಂದು ಕೇಳಿಸಿತ್ತು!!!) ಅವರು ನಿಮ್ಮನ್ನು ಕರೆದ್ದಲ್ಲ, ಸ್ವಲ್ಪ ಕಣ್ಣು ಬಿಟ್ಟು ನೋಡಿ ಎಂದಾಗ ನಕ್ಕಿದ್ದೇ, ನಕ್ಕಿದ್ದು.

ಇದು ಸುಮಾರು 20 ವರ್ಷಗಳ ಹಿಂದಿನ ಕಥೆ. ಆ ಸಂದರ್ಭಗಳಲ್ಲಿ ಮಂದರ್ತಿ ಮೇಳ, ಸಾಲಿಗ್ರಾಮ, ಧರ್ಮ ಸ್ಥಳ, ಕಟೀಲು, ಮಾರಣಕಟ್ಟೆ, ಸಿಗಂಧೂರೇಶ್ವರಿ, ಮಂಗಳಾದೇವಿ, ಗರಡಿ-ಮೇಳ ಪ್ರಸಿದ್ಧವಾಗಿದ್ದವು. ಕಾಳಿಂಗ ನಾವಡ, ಸುಬ್ರಹ್ಮಣ್ಯ ಧಾರೇಶ್ವರ, ದಿನೇಶ್ ಅಮ್ಮಣ್ಣಾಯ, ನೆಬ್ಬೂರ್, ಕಡತೋಕರ ಭಾಗವತಿಕೆ ಕೇಳುವುದೇ ಒಂದು ವಿಶಿಷ್ಟ ಅನುಭವ ನೀಡುತ್ತಿತ್ತು.

ಕುಂಬ್ಳೆ ಸುಂದರ ರಾವ್, ಮಲ್ಪೆ ರಾಮದಾಸ ಸಾಮಗರು, ವಾಸುದೇವ ಸಾಮಗ, ದೇರಾಜೆ ಸೀತಾರಾಮಯ್ಯ, ಗೋವಿಂದ ಭಟ್, ನಾರಾಯಣ ಹೆಗ್ಡೆ, ಶೇಣಿ ಗೋಪಾಲಕೃಷ್ಣ ಮುಂತಾದ ಹಿರಿಯರ ಅರ್ಥಗರ್ಭಿತ ಮಾತು ಗಳು ಇಂದಿಗೂ ಚಿರಸ್ಮರಣೀಯ.ಇತ್ತೀಚೆಗೆ ಊರಿನಲ್ಲಿ ಯಕ್ಷಗಾನ ನೋಡುವ ಅವಕಾಶ ಬಂದೊದಗಿತ್ತು.

ನಮ್ಮ ಮನೆಯ ಸಮೀಪವೇ ಯಕ್ಷಗಾನ ಬಯಲಾಟ ಇದ್ದಿತ್ತು. 10ಗಂಟೆ ಸುಮಾರಿಗೆ ಯಕ್ಷಗಾನದತ್ತ ಹೆಜ್ಜೆ ಹಾಕಿದ್ದೆ, ರಂಗಸ್ಥಳದ ಮುಂಭಾಗದಲ್ಲಿ ಬೆರಳೆಣಿಕೆಯ ಜನ ನಿಂತಿದ್ದರು. 12ಗಂಟೆಯಾಗುವ ಹೊತ್ತಿಗೆ ಒಬ್ಬೊ ಬ್ಬರೆ ಮನೆಯತ್ತ ದಾಪುಗಾಲು ಹಾಕತೊಡಗಿದ್ದರು. ಕೊನೆಗೆ ಉಳಿದದ್ದು ರಂಗಸ್ಥಳದಲ್ಲಿ ಕುಣಿಯುವವರು ಮತ್ತು ಚೌಕಿಯಲ್ಲಿದ್ದವರು ಮಾತ್ರ. ಆಗ ನನಗೆ ಹಳೆಯ ನೆನಪುಗಳೆಲ್ಲ ಕಾಡಿದವು.

ಆ ಸಂದರ್ಭದಲ್ಲಿ ಯಕ್ಷಗಾನಕ್ಕೆ ಜನಜಾತ್ರೆ, ರಾತ್ರಿಯಿಂದ ಬೆಳಿಗ್ಗಿನ ಜಾವದವರೆಗೆ ಯಾರೂ ಕದಲುತ್ತಿರಲಿಲ್ಲ, ಅಷ್ಟು ಆಸಕ್ತಿಯಿಂದ ನೋಡುತ್ತಿದ್ದರು. ಹಾಗಂತ ಇತ್ತೀಚೆಗೆ ಸಿನಿಮಾ ಕಥೆ ಆಧಾರಿತ ಯಕ್ಷಗಾನ ಪ್ರಸಂಗಗಳು ಟೆಂಟ್ ಮೇಳಗಳಲ್ಲಿ ಯಶಸ್ವಿ ನೂರನೇ ಪ್ರಯೋಗ ಅಂತ ಕಾಣುತ್ತೇವೆ ಹಾಗೂ ಮಂದರ್ತಿ, ಕಟೀಲು, ಧರ್ಮಸ್ಥಳ ಮೇಳಗಳನ್ನು ಹರಕೆ ರೂಪದಲ್ಲಿ ಆಡಿಸುತ್ತಾರೆ.

ಮಂದರ್ತಿಯ ನಾಲ್ಕು ಮೇಳಗಳೂ 2017ರವರೆಗೂ ಬುಕ್ಕಿಂಗ್ ಆಗಿದೆ. ಇದನ್ನು ಕೂಡ ಹರಕೆ ಹೊತ್ತ ಮನೆ ಮಂದಿ, ನೆಂಟರು ನೋಡಬೇಕಷ್ಟೇ ವಿನಃ ಈ ಹಿಂದಿನ ಆಸಕ್ತಿ, ಕುತೂಹಲ ಇಂದು ಜನರಲ್ಲಿ ಉಳಿದಿಲ್ಲ ಎನ್ನುವುದಂತೂ ಸತ್ಯ..



9 comments:

ಸತೀಶ್ said...

ನಮಗಂತೂ ಯಕ್ಷಗಾನದ ಪರಿಚಯ ಹೋಗಲಿ,ನೋಡಿದ್ದೂ ಇಲ್ಲ ಸ್ವಾಮಿ. ನಮ್ಮ ಉತ್ತರ ಕರ್ನಾಟಕದಲ್ಲಿ ಇರುವ ದೊಡ್ಡಾಟ ಮತ್ತು ಸಣ್ಣಾಟಗಳು ಇದೇ ಪರಿಸ್ಥಿತಿಯನ್ನು ಇಂದು ಎದುರಿಸುತ್ತಿವೆ. ಶ್ರೀ ಕೃಷ್ಣ ಪಾರಿಜಾತ ನೋಡುವುದು ಇಂದು ಸಾದ್ಯವಿಲ್ಲ.ಯಾಕೆಂದರೆ ಶ್ರೀಕೃಷ್ಣ ಪಾರಿಜಾತಗಳು ಇಂದು ನಡೆಯವುದೇ ಇಲ್ಲ. ಪ್ರತಿ ಶನಿವಾರ ಸಾಯಂಕಾಲ ಆರು ಗಂಟೆಗೆ ಧಾರವಾಡ ಆಕಾಶವಾಣಿಯಲ್ಲಿ ಪ್ರಸಾರವಾಗುವ ರೈತರಿಗಾಗಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಪಾರಿಜಾತ ಕೇಳಬಹುದು.

ಸತೀಶ್ said...

ಸಾಗಲಿ ನಿಮ್ಮ ರಥ ಮುಂದೆ ಹೀಗೆ.....ನಿಲ್ಲದಿರಲಿ ಎಂದೂ ಎಡರು ತೋಡರುಗಳ ನಡುವೆ...
ಸಾಗಲಿ ನಿಮ್ಮ ಲೇಖನದ ವೈಭವ..ತರುತಿದೆ ನಮಗೆ ನಿತ್ಯ ಹರುಷವ.
ಒಳ್ಳೆಯ ಲೇಖನ ಚೆನ್ನಾಗಿ ಮೂಡಿ ಬಂದಿದೆ.

ಹೀಗೆ ಸಾಗಲಿ ನಿಮ್ಮ ಲೇಖನ ಚಂಡೆ ಬಾರಿಸಿದಂತೆ....ಡಣ್ ಡಣಾ ಡಣ್

Unknown said...

ಸಾಗಲಿ ನಿಮ್ಮ ರಥ ಮುಂದೆ ಹೀಗೆ.....ನಿಲ್ಲದಿರಲಿ ಎಂದೂ ಎಡರು ತೋಡರುಗಳ ನಡುವೆ...
ಸಾಗಲಿ ನಿಮ್ಮ ಲೇಖನದ ವೈಭವ..ತರುತಿದೆ ನಮಗೆ ನಿತ್ಯ ಹರುಷವ.
ಒಳ್ಳೆಯ ಲೇಖನ ಚೆನ್ನಾಗಿ ಮೂಡಿ ಬಂದಿದೆ.

ಹೀಗೆ ಸಾಗಲಿ ನಿಮ್ಮ ಲೇಖನ ಚಂಡೆ ಬಾರಿಸಿದಂತೆ....ಡಣ್ ಡಣಾ ಡಣ್

ಬ್ರಹ್ಮಾನಂದ ಎನ್.ಹಡಗಲಿ said...

ನಿಮ್ಮ ಯಕ್ಷಗಾನದ ಅನುಭವ ನಿಜಕ್ಕೂ ಅದ್ಭುತ್. ಯಕ್ಷಗಾನ ನನಗೆ ತಿಳಿಯದ ವಿಚಾರ. ಆದರೂ ನೀವು ಅದರ ಹಿಂದಿನ ಸಮೀಪ್ಯತೆಯನ್ನು ನೀಡಿದ್ದಿರಿ. ಲೇಖನ ಮನ ಮುತತುವಂತಿದೆ.
ಬ್ರಹ್ಮನಂದ್

jomon varghese said...

ನಮಸ್ಕಾರ.

ಚಂಡೆ ಮದ್ದಳೆ ಗುಂಗಿನಲ್ಲಿ ಬರೆದ ಲೇಖನ ಯಕ್ಷಗಾನದ ಪುಟ್ಟದೊಂದು ರಂಗಪ್ರವೇಶದಂತಿತ್ತು. ನಮ್ಮ ಪರಿಚಯದವರು ಪಾತ್ರಹಾಕಿ ವೇದಿಕೆಗೆ ಬರುವಾಗ ಆಗುವ ಸೋಜಿಗವೇ ಬೇರೆ. ಹಳೆಯ ಪಾತ್ರಗಳನ್ನೂ, ಪ್ರೀತಿಯ ಆಚಾರ್ಯರನ್ನೂ ನೆನಪಿಟ್ಟುಕೊಂಡು ಪರಿಚಯಿಸಿದ ರೀತಿ ಸೊಗಸಾಗಿತ್ತು. ಮುಂದಿನ ಬಾರಿ ಯಕ್ಷಗಾನ ನೋಡಲು ಹೋಗುವಾಗ ನಮ್ಮನ್ನೂ ಕರೆದುಕೊಂಡು ಹೋಗಿ.

ಧನ್ಯವಾದಗಳು.

ಜೋಮನ್ ವರ್ಗೀಸ್.

Nagendra Trasi said...

ನಮಸ್ತೆ,

ಕಿತಾಪತಿಯವರ ಪ್ರತಿಕ್ರಿಯೆಗೆ ಧನ್ಯವಾದಗಳು, ದ.ಕ.ದಂತೆ ಉತ್ತರ ಕರ್ನಾಟಕದ ಭಾಗದಲ್ಲೂ ಅದೇ ಸ್ಥಿತಿ ಇದೆ ಎಂಬುದಾಗಿ ತಿಳಿಸಿದ್ದಕ್ಕೆ ಕೃತಜ್ಞತೆ.

ನಾಗೇಂದ್ರ ತ್ರಾಸಿ.

Nagendra Trasi said...

ಲೋವಿಶ್‌‌ರೆ,

ಬಹುಮುಖಿ ತಾಣಕ್ಕೆ ಭೇಟಿ ನೀಡಿ,ಪ್ರತಿಕ್ರಿಯಿಸಿದ್ದಕ್ಕೆ ನಿಮಗಿದೋ ಪ್ರೀತಿಯ ಕೃತಜ್ಞತೆಯೊಂದಿಗೆ..

ನಾಗೇಂದ್ರ ತ್ರಾಸಿ.

Nagendra Trasi said...

ಹಾಯ್ ,

ಬ್ರಹ್ಮಾನಂದರ ಆತ್ಮೀಯ ನುಡಿಗಳಿಗೆ ಧನ್ಯವಾದಗಳು.

ಮಿತ್ರ ಜೋಮನ್ ವರ್ಗಿಸ್‌‌ಗೂ ಕೂಡ ಪ್ರೀತಿಯ ನಮನದೊಂದಿ ಗೆ, ಮುಂದೆ ಅವಕಾಶ ಸಿಕ್ಕಲ್ಲಿ ಖಂಡಿತವಾಗಿಯೂ ಯಕ್ಷಗಾನಕ್ಕೆ ಕರೆದೊಯ್ಯುವೆ...

ನಾಗೇಂದ್ರ ತ್ರಾಸಿ.

Anonymous said...

See here or here