Tuesday, October 30, 2007

ತೆಹಲ್ಕಾ ಸೃಷ್ಟಿಸಿದ ಕೋಲಾಹಲ



ಏನ್ ಸಾರ್ ಈ ರೀತಿ ಕೋಮುಗಲಭೆ, ಲೂಟಿ, ಅನಾಚಾರ ನಡೆಯುತ್ತಿದ್ದರೆ ಮುಂದಿನ ಕಥೆ ಏನು ಅಂದರೆ ಸಾಕು, ಆ ನನ್ಮಕ್ಕಳನ್ನ ಮೊದಲು ಗುಂಡಿಟ್ಟು ಸಾಯಿಸಬೇಕು.ಮುಸ್ಲಿಮರಿಂದಾಗಿ ಇಲ್ಲಿನ ನೆಮ್ಮದಿ ಹಾಳಾಗುತ್ತಿದೆ ಎಂಬ ಮಾತುಗಳು ಪುಂಖಾನುಪುಂಖವಾಗಿ ಹರಿದು ಬರುತ್ತದೆ.ಬಹುತೇಕ ಹಿರಿಯರು-ಕಿರಿಯರು ಎನ್ನದೆ ಇಂತಹದ್ದೇ ಆಕ್ರೋಶದ ಮಾತುಗಳನ್ನ ಆಡುತ್ತಿರುತ್ತಾರೆ. ಸಮಾಜದಲ್ಲಿ ಮತ್ತೆ,ಮತ್ತೆ ಹಿಂದೂ-ಮುಸ್ಲಿಂ ಸಂಘರ್ಷಗಳು ಆಗಾಗ ಎದುರಾಗುತ್ತಲೇ ಇವೆ.ಹೀಗೆ ಆದಾಗಲೆಲ್ಲ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇರುತ್ತದೆ.

ಆದರೆ ನಮ್ಮ ಬಹುಮುಖಿ ಸಂಸ್ಕೃತಿಯಲ್ಲಿ ಕೇವಲ ಹಿಂದೂ-ಮುಸ್ಲಿಂರ ಘರ್ಷಣೆಯಂತೆಯೇ, ಹಿಂದೂ-ಜೈನ್, ಹಿಂದೂ-ಬುದ್ಧಿಸ್ಟ್, ಹಿಂದೂ-ಕ್ರಿಶ್ಚಿಯನ್, ಹಿಂದೂ-ಸಿಖ್ ನಡುವೆ ಘರ್ಷಣೆ ನಡೆ(ಯುತ್ತಿದೆ)ದಿದೆ. ಯಾವಾಗ ಆಳುವ ವರ್ಗಕ್ಕೆ ಓಟ್ ಬ್ಯಾಂಕ್ ರಾಜಕಾರಣಕ್ಕೊಂದು ಅಸ್ತ್ರ ಬೇಕಾಯಿತೋ ಆಗ ಇಂತಹ ಕುತಂತ್ರ ರಾಜಕಾರಣ, ಓಲೈಕೆ, ಹಿಂದೂತ್ವದಂತಹ ವಿಚಾರಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ಪರಿಣಾಮ ಹಿಂದೂ-ಮುಸ್ಲಿಂರ ನಡುವಿನ ಅಂತರ ಮತ್ತಷ್ಟು ದೂರವಾಗತೊಡಗಿತು. ಹಾಗಂತ ನಾನು ಕೂಡ ಇಲ್ಲಿ ಮುಸ್ಲಿಂ ಪರವಾಗಿ ವಾದಿಸುತ್ತಿಲ್ಲ.

ಗೋದ್ರಾ ಘಟನೆಯನ್ನು ಖಂಡಿಸುವ ಬುದ್ಧಿಜೀವಿಗಳು, ಎಡಪಂಥದವರಿಗೆ, ಕೋಮು ಸಾಮರಸ್ಯ ಸಾರುವ ಮಂದಿಗೆ ಹಿಂದೂಗಳ ಮೇಲಾಗುವ ದಬ್ಬಾಳಿಕೆ, ಹತ್ಯೆಗಳು ಯಾಕೆ ಕಾಣಿಸುತ್ತಿಲ್ಲ ಎಂಬ ವಾದವೂ ಇದೆ. ಆದರೆ ಇದರಲ್ಲಿ ಸಂಘಪರಿವಾರದ ಪ್ರವೀಣ್ ಭಾಯ್ ತೊಗಾಡಿಯಾ, ಪ್ರಮೋದ್ ಮುತಾಲಿಕ್‌ ಅವರಂತಹವರ ಮೋಡಿಯ ಮಾತು ಹಾಗೂ ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸ ದ್ವೇಷದ ದಳ್ಳುರಿಯನ್ನು ಸದಾ ಉರಿಯುವಂತೆ ಮಾಡಿರುವುದಂತು ಸತ್ಯ.

ಕಾಂಗ್ರೆಸ್ಸಿಗೆ ಮುಸ್ಲಿಂ ಓಲೈಕೆ, ಬಿಜೆಪಿಗೆ ಹಿಂದೂತ್ವ, ಎಡಪಕ್ಷಗಳಿಗೆ ಮುಸ್ಲಿಂ ಪರ ಇರುವುದೇ ಪ್ರಮುಖ
ಬಂಡವಾಳವಾಗಿದೆ. ಇಂತಹ ಸಂರ್ಭದಲ್ಲಿ ತೆಹಲ್ಕಾ ಪತ್ರಿಕೆ ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಹಿಂಸಾಚಾರದ ತನಿಖಾ ವರದಿಯನ್ನು ಮಾಡುವ ಜರೂರತ್ತು ಇತ್ತೇ ಎಂಬ ಪ್ರಶ್ನೆ ಕೇಳಿಬಂದಿದೆ. ಅಲ್ಲದೇ ಪ್ರಮುಖ ಚಾನೆಲ್‌ಗಳಾದ ಸಿಎನ್‌ಎನ್, ಐಬಿಎನ್7, ಆಜ್‌ತಕ್ ವರದಿಯನ್ನು ಪ್ರಸಾರ ಮಾಡದಂತೆ ರಾಜ್ಯ ಸರಕಾರ ಆ ದಿನ ನಿಷೇಧ ಹೇರಿತ್ತು.

ತೆಹಲ್ಕಾ ನಡೆಸಿದ ಆಪರೇಶನ್ ಕಳಂಕ್ ಹೆಸರಿನ ಈ ತನಿಖಾ ವರದಿ ಗೋದ್ರಾ ನಂತರ ನಡೆದ ಹತ್ಯಾಕಾಂಡ ಭೀಕರ ಸ್ವರೂಪದ ಚಿತ್ರಣದ ಬಗ್ಗೆ ಬಿಜೆಪಿಯ ರಾಜಕಾರಣಿಗಳು, ವಕೀಲರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದನ್ನು ತನ್ನ ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದಿತ್ತು. ಸುಮಾರು ಆರು ತಿಂಗಳ ಕಾಲ ಪತ್ರಕರ್ತ ಆಶೀಶ್ ಚೇತನ್ ತನಿಖೆ ನಡೆಸಿ ಸಿದ್ಧಪಡಿಸಿದ ವರದಿ ಇದಾಗಿದೆ.ಆದರೆ ಇದೀಗ ಪ್ರಶ್ನೆ ಎದುರಾಗಿರುವುದು ಈ ಸಮಯದಲ್ಲಿ ಕೋಮುಗಲಭೆಗೆ ಸಂಬಂಧಿಸಿದ ವರದಿಯ ಅಗತ್ಯ ಏನಿತ್ತು.

ತೆಹಲ್ಕಾ ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಡಿಸೆಂಬರ್‌ನಲ್ಲಿ
ಗುಜರಾತ್‌ನಲ್ಲಿ ಚುನಾವಣೆ ನಡೆಯುತ್ತಿದ್ದು, ಆ ನೆಲೆಯಲ್ಲಿ ಮೋದಿ ವಿರುದ್ಧವಾಗಿ ಆಪರೇಶನ್ ಕಳಂಕ್ ಹೆಸರಿನಲ್ಲಿ ವರದಿ ಮಾಡಲಾಗಿದೆ ಎಂದು ದೂರಲಾಯಿತು. ಏನೇ ಆದರೂ ತೆಹಲ್ಕಾ ಮಹತ್ತರವಾದದ್ದನ್ನು ಸಾಧಿಸದೆ ಇರಬಹುದು. ಯಾಕೆಂದರೆ ಕೋಮು ಹಿಂಸಾಚಾರದ ಕುರಿತು ತನಿಖೆ ನಡೆಸಿ ನಾನಾವತಿ ಆಯೋಗ ವರದಿ ಸಲ್ಲಿಸಿತ್ತು. ಅದರಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೂಡ ವಿವರವಾದ ವರದಿ ಸಲ್ಲಿಸಿತ್ತು. ತೆಹಲ್ಕಾ ಘಟನೆಯಲ್ಲಿ ಭಾಗಿಯಾದ ಆಡಳಿತರೂಢ ಜನಪ್ರತಿನಿಧಿಗಳ ಬಾಯಿಂದಲೇ ಸತ್ಯ ಹೊರಡಿಸಿರುವುದು ಇಲ್ಲಿನ ಹೈಲೈಟ್ ಮತ್ತು ತನಿಖೆಗೆ ಸರಕಾರ ನೇಮಿಸಿದ ನಾನಾವತಿ ಆಯೋಗದ ಜಸ್ಟೀಸ್ ನಾನಾವತಿ ಮತ್ತು ಕೆ.ಜಿ.ಶಾ ಅವರು ಹಣ ಪಡೆದಿದ್ದಾರೆ ಎಂಬುದಾಗಿ ಸರಕಾರಿ ವಕೀಲ ಅರವಿಂದ ಪಾಂಡ್ಯ ತೆಹಲ್ಕಾದ ರಹಸ್ಯ ಕ್ಯಾಮೆರಾದ ಮುಂದೆ ಬಾಯ್ಬಿಟ್ಟಿರುವುದು ಆಘಾತಕಾರಿ ವಿಷಯವಾಗಿದೆ.

ಹಿಂದುತ್ವದ ವಿಷಯವನ್ನು ಬದಿಗೆ ಸರಿಸಿ, ಪತ್ರಕರ್ತರಾದವರು,ನಿಜಾಂಶ ತಿಳಿಯುವ ಕುತೂಹಲ ಇದ್ದವರು ತೆಹಲ್ಕಾ ವಿಶೇಷವಾಗಿ ಹೊರತಂದ 106ಪುಟಗಳ ದಿ.ಟ್ರೂಥ್ ಗುಜರಾತ್ 2002 ಸಂಚಿಕೆಯನ್ನು ಓದಬೇಕು. ಹಾಗಂತ ಅದನ್ನೆ ಒಪ್ಪಬೇಕಂತ ಅಲ್ಲ. ತನಿಖಾ ಪತ್ರಿಕೋದ್ಯಮ ಎಷ್ಟು ಪರಿಣಾಮಕಾರಿ ಎನ್ನುವುದು ತಿಳಿಯುತ್ತದೆ. ಈ ವರದಿ ಅದಾಗಲೇ ಸಾಕಷ್ಟು ಗೊಂದಲ ಸೃಷ್ಟಿಸಿರುವುದಂತೂ ನಿಜ. ಈ ಬಗ್ಗೆ ಸ್ವತಃ ನಾನಾವತಿಯವರೇ ಕೂಲಂಕಷ ತನಿಖೆ ನಡೆಸಿ ತೆಹಲ್ಕಾದ ಸತ್ಯಾಸತ್ಯತೆಯನ್ನು ಪರಾಮರ್ಶಿಸಲಾಗುವುದು ಎಂದು ಹೇಳಿದ್ದಾರೆ. ಹಾಗಾದರೆ ಕೋಮುಹಿಂಸಾಚಾರ - ಮೋದಿ ಇವೆರಡು ವಿಚಾರಗಳಲ್ಲಿ ಪತ್ರಿಕೆ ಬಯಲಿಗೆಳೆದ ವಿಷಯಗಳನ್ನ ನಂಬಬೇಕೋ ಅಥವಾ ಹಿಂದುತ್ವಕ್ಕೆ ಕಟ್ಟುಬಿದ್ದು ಮೋದಿಗೆ ಜೈಕಾರ ಹಾಕಬೇಕೋ ಎಂಬುದೀಗ ಪ್ರಶ್ನೆ...

ಅತೃಪ್ತ ಮುಸ್ಲಿಂ ಗುಂಪಿನ ಅಟ್ಟಹಾಸದಿಂದಾಗಿ 2002 ರ ಫೆ.27ರಂದು ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ಪರಿಣಾಮ 58 ಮಂದಿ ಕರಸೇವಕರು ಜೀವಂತ ದಹನವಾಗಿ ಹೋಗಿದ್ದರು. ಆ ನಂತರ ಗೋದ್ರಾದಲ್ಲಿ ನಡೆದದ್ದು ಇತಿಹಾಸದಲ್ಲಿ ನಡೆಯದೇ ಇದ್ದಂತಹ ಬರ್ಭರ ಜನಾಂಗೀಯ ಹತ್ಯೆ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಗಲಭೆಯಲ್ಲಿ 790 ಮುಸ್ಲಿಮರು, 254 ಹಿಂದೂಗಳು ಬಲಿಯಾಗಿದ್ದರು. 223 ಮಂದಿ ಕಾಣೆಯಾಗಿದ್ದರು, 919 ಮಹಿಳೆಯರು ವಿಧವೆಯರಾಗಿ, 606 ಮಕ್ಕಳು ಅನಾಥರಾಗಿದ್ದರು.

ಅನಧಿಕೃತ ಅಂಕಿ ಅಂಶಗಳ ಪ್ರಕಾರ ಎರಡು ಸಾವಿರಕ್ಕೂ ಅಧಿಕ ಮಂದಿ ಕೊಲೆಯಾಗಿ,9000 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ.ಇದು ಮೋದಿ ಅವರನ್ನು ಪರಮೋಚ್ಛ ನಾಯಕನನ್ನಾಗಿ ಮಾಡಿದರೆ, ಮತ್ತೊಂದೆಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಆಧುನಿಕ ಹಿಟ್ಲರ್ ಎಂಬ ಅಪಖ್ಯಾತಿಗೆ ಒಳಗಾದರು. ಅಧಿಕಾರದ ಗದ್ದುಗೆ ಏರಿದ ಮೋದಿ ನಂತರದಲ್ಲಿ "ನಿಮಗೆ ಸಹಾಯ ಬೇಕೆ ? ಹಾಗಾದರೆ ಮೋದಿಗೆ ನೇರವಾಗಿ ದೂರವಾಣಿ ಕರೆ ಮಾಡಿ ಎಂಬ ದೊಡ್ಡ ನಾಮಫಲಕಗಳು ಗುಜರಾತ್‌ನಲ್ಲಿ ರಾರಾಜಿಸತೊಡಗಿದವು.

ನೀವು ಆ ದೂರವಾಣಿ ಸಂಖ್ಯೆಗೆ ಕರೆ ಮಾಡಿದಲ್ಲಿ ಆ ಕಡೆಯಿಂದ ನಮಸ್ಕಾರ ನಾ, ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ ನಿಮ್ಮ ತೊಂದರೆಗಳನ್ನು ನನ್ನ ಬಳಿ ಹೇಳಿಕೊಳ್ಳಿ ,ನಾನು ಖಂಡಿತ ನಿಮ್ಮ ತೊಂದರೆಗಳನ್ನು ಪರಿಹರಿಸುವ ಯತ್ನ ಮಾಡುತ್ತೇನೆ ಎಂಬ ಭರವಸೆ ನೀಡುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು. ಇದು ಮೋದಿಯವರ ಮತ್ತೊಂದು ಮುಖ. ಇದೀಗ ಸಂಘಪರಿವಾರವೇ ತಮ್ಮ ನಾಯಕನ ಬಗ್ಗೆ ಅಪಸ್ವರ ಎತ್ತಿವೆ. ಮೋದಿ ಹಿಂದುಗಳಿಗೆ ಹಾಗೂ ಹಿಂದುತ್ವಕ್ಕೆ ಏನೂ ಮಾಡಿಲ್ಲ ಎಂದು ಒಳಗೊಳಗೆ ಕತ್ತಿ ಮಸೆಯುತ್ತಿವೆ.

ಅಂದರೆ ಒಂದಿಡಿ ಜನಾಂಗವನ್ನೇ ನಾಶ ಮಾಡಬೇಕು ಅನ್ನುವುದರಲ್ಲಿ ಯಾವ ಪುರುಷಾರ್ಥ ಇದೆ. ಗುಜರಾತ್‌ನಲ್ಲಿ ನಡೆದಂತೆ ವಿದೇಶಗಳಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರು ಹಿಂದೂಗಳ ಮಾರಣಹೋಮ ನಡೆಸಿದರೆ ಅದು ಎಷ್ಟು ಅಮಾಯಕ, ಅಪದ್ಧವೋ , ಅದೇ ರೀತಿ ಮತಾಂಧರು, ಮೂಲಭೂತವಾದಿಗಳು ನಡೆಸಿದ ಅನಾಹುತಕ್ಕೆ ಒಂದಿಡಿ ಜನಾಂಗದ ವಿರುದ್ಧ ಸೇಡು ತೀರಿಸಿಕೊಳ್ಳುವುದರಲ್ಲಿ ಅರ್ಥ ಇದೆಯಾ?. ಅಂತಹ ಜನಾಂಗಕ್ಕೆ ದೇಶದಲ್ಲಿ ಬದುಕಲು ಹಕ್ಕು ಇಲ್ಲ ಎಂಬುದು ನ್ಯಾಯವೇ ಎಂಬ ಬಗ್ಗೆ ಆಲೋಚಿಸಬೇಕಾಗಿದೆ...

3 comments:

ಮಲ್ಲಿಕಾಜು೯ನ ತಿಪ್ಪಾರ said...

Chennagi vishleshishiddiriii. Aadar Poorvagrahpeeditaaragidiri anta nimm baravanigeying melnotakke tiliyuttede.. Any way Nice one

ಸತೀಶ್ said...

ಅಲ್ಲರಿ ತ್ರಾಸಿಯವರೇ
ಯಾವುದೇ ಮನುಷ್ಯನನ್ನು ಹೋಗಲಿ ಒಂದು ಜೀವಿಯನ್ನು ಕೊಲ್ಲುವುದು ತಪ್ಪು. ನಮ್ಮ ಗುರುಗಳು ಒಂದು ಮಾತು ಹೇಳುತ್ತಿದ್ದರು ನಿನ್ನ ಕೈಯಿಂದ ಒಂದು ನಿರ್ಮಾಣ ಮಾಡಲಿಕ್ಕೆ ಸಾಧ್ಯವಾಗದ ಹೊರತು ಮತ್ತೊಂದು ಜೀವಿಯ ವಿನಾಶ ಮಾಡುವ ಹಕ್ಕು ನಿನಗಿಲ್ಲ.

ಸರಿ ಮನುಷ್ಯ ಎಂದ ಮೇಲೆ ಪ್ರಾಣಿಗಳಿಗಿಂತ ಹೆಚ್ಚಾಗಿ ಭಾವನೆಗಳು ಇವೆ. ಮನುಷ್ಯ ಹೃದಯಾಳದಿಂದ ವಿಚಾರ ಮಾಡದೇ ಬುದ್ದಿಯಿಂದ ವಿಚಾರ ಮಾಡಿದಾಗ ಇಂತಹ ಅವಘಡ ಆಗುತ್ತದೆ. ಗೋಧ್ರಾ ಹತ್ಯಾಕಾಂಡದಲ್ಲಿ ಮೋದಿಯದು ಯಾವ ತಪ್ಪಪ. ಸರ್ ಐಸಾಕ್ ನ್ಯೂಟನ್ ನಿಯಮ ಗೋತ್ತಿದ್ದರೆ ಮುಸ್ಲಿಂರು ಇಂತಹ ಕರಸೇವಕರ ಸಜೀವ ದಹನಕ್ಕೆ ಮುಂದಾಗುತ್ತಿರಲಿಲ್ಲ. ಗೋಧ್ರಾ ನಂತರದದ್ದು ಪ್ರತಿಕ್ರಿಯೆ ಮಾತ್ರ.

ಇನ್ನು ತನಿಖಾ ಪತ್ರಿಕೋದ್ಯಮದ ಕುರಿತು ಹೇಳಿದ್ದಿರಿ ಮಾಡಿದ ತನಿಖೆ ಸಮಾಜಕ್ಕೆ ಉಪಯೋಗಕಾರಿಯಾಗಬೇಕು ಎನ್ನುವುದು ಪತ್ರಕರ್ತನ ಮೂಲ ಕರ್ತವ್ಯಗಳಲ್ಲಿ ಒಂದಾಗಬೇಕು. ಗುಜರಾತ್ ವಿಧಾನ ಸಭೆಗೆ ಚುನಾವಣಾ ದಿನಾಂಕ ಪ್ರಕಟವಾದ ನಂತರ ತನಿಖಾ ವರದಿಯನ್ನು ಪ್ರಕಟಿಸುವ ಅಗತ್ಯ ಏನು ಇತ್ತು. ಆರು ತಿಂಗಳಿನಿಂದ ನಡೆಸಿರುವ ತನಿಖೆಯನ್ನು ಆಗಲೇ ಪ್ರಕಟಿಸಬಹುದಿತ್ತಲ್ಲ. ಪ್ರಜಾಪ್ರಭುತ್ವದ ಒಂದು ಅಂಗವಾಗಿ ಕಾರ್ಯನಿರ್ವಹಿಸಬೇಕಾದ ಮಾದ್ಯಮ ಒಂದು ಪಕ್ಷದ ಓಲೈಕೆಗೆ ಮಾತ್ರ ಸೀಮಿತವಾಗುತ್ತಿರುವುದು ಮಾದ್ಯಮ ರಂಗದ ದುರಾದೃಷ್ಟ

nagendra said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,

ಆದರೆ ಒಬ್ಬ ಪತ್ರಕರ್ತನಾಗಿ ಸರ್ ಐಸಾಕ್ ನ್ಯೂಟನ್‌ನ ತತ್ವವನ್ನು ತೆಗೆದುಕೊಂಡರೆ ಏನಾಗುತ್ತದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.ಹಾಗೇ ಕ್ರಿಯೆಗೆ,ಪ್ರತಿಕ್ರಿಯೆ ನಡೆಯುತ್ತಾ ಹೋದರೆ ಮನುಷ್ಯ ಜನಾಂಗ ದ್ವೇಷದ ದಳ್ಳುರಿಯಿಂದ ಬೆಂದು ಹೋಗಬಹುದು.

ಎರಡನೆಯದಾಗಿ ತೆಹಲ್ಕಾ ಬಗ್ಗೆ ನಾನು ಪ್ರಸ್ತಾಪಿಸಿದ್ದು,ಕೇವಲ ತನಿಖಾ ವರದಿಯ ಕುರಿತಾಗಿ ಮಾತ್ರ.ಮಾಧ್ಯಮಗಳ ಕೆಲಸ ಸತ್ಯವನ್ನು ಬಯಲಿಗೆಳೆಯುವುದು ಮಾತ್ರ .ಅದರ ಸತ್ಯ-ಅಸತ್ಯ ದ ಚರ್ಚೆ ನಂತರದ್ದು.ಮಾಧ್ಯಮಗಳು ಒಂದು ಪಕ್ಷದ ಒಲೈಕೆ ಮಾಡುತ್ರಿರುವುದು ದುರಂತ ಅಂತ ಹೇಳಿದ ನೀವೇ ಒಂದು ಸಮುದಾಯದ ಕಡೆಗೆ ಆಲೋಚಿಸುವುದು ಸರಿಯೇ ?

ನಾಗೇಂದ್ರ ತ್ರಾಸಿ.