Wednesday, December 5, 2007

'ನೇತ್ರಾಣಿ' ಕಡಲ ಧ್ಯಾನ


ಪ್ರವಾಸ, ಚಾರಣ ಎಂದರೆ ಮೊದಲಿನಿಂದಲೂ ಹುಮ್ಮಸ್ಸು, ಆದರೆ ಪತ್ರಿಕೋದ್ಯಮದ ಜಂಜಡಗಳ ನಡುವೆ ಸಮಯದ ಅಭಾವವೇ ಹೆಚ್ಚಾಗಿರುವುದರಿಂದ ಹೋಗಬೇಕಾದ ಸ್ಥಳಗಳಿಗೆ (ಚೆನ್ನೈಗೆ ಬರುವ ಮುನ್ನ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳಕ್ಕೆ ಹೋಗಲು ಎಲ್ಲಾ ತಯಾರಿ ಮಾಡಿಕೊಂಡಿದ್ದರೂ, ಕೊನೆ ಕ್ಷಣದಲ್ಲಿ ಆ ಅವಕಾಶ ಕೈತಪ್ಪಿ ಹೋಗಿತ್ತು.) ಹೋಗಲಾರದೆ ಬಹಳಷ್ಷು ಸಂಕಟ ಅನುಭವಿಸಿದ್ದಿದೆ.

ಆದರೂ ಕೆಲವೊಮ್ಮೆ ಬಿಡುವು ಮಾಡಿಕೊಂಡು ಅಂತಹ ಸ್ಥಳಗಳಿಗೆ ಹೋಗುವುದೆಂದರೆ ಕಷ್ಟದ ಕೆಲಸವೇ. ಹಾಗೆ ಬೆಂಗಳೂರಿನಿಂದ ರಜೆಯಲ್ಲಿ ಊರಿಗೆ ಬಂದಿದ್ದಾಗ ಆಕಸ್ಮಿಕವಾಗಿ ಸಿಕ್ಕ ಗೆಳೆಯರು ಈ ಬಾರಿ ನೇತ್ರಾಣಿಗೆ ಹೋಗುತ್ತಿದ್ದೇವೆ ಭಾನುವಾರ ರೆಡಿಯಾಗಿ ಎಂದು ಹೇಳಿ ಹೋಗಿದ್ದರು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಮುದ್ರದ ನಡುಗಡ್ಡೆಯೇ ನೇತ್ರಾಣಿ ಪ್ರದೇಶ. ಅಲ್ಲಿಗೆ ಒಮ್ಮೆ ಭೇಟಿ ನೀಡಬೇಕು ಎಂಬುದು ಹಲವು ದಿನಗಳ ಕನಸಾಗಿತ್ತು.ಆದರೆ ಜಲಪಾತ, ಬೆಟ್ಟ - ಗುಡ್ಡವಾಗಿದ್ದರೆ ಒಂದಿಬ್ಬರ ಸಂಗಡ ಹೊರಟು ಬಿಡಬಹುದಾಗಿತ್ತು. ಇದು ಸಮುದ್ರದ ಮಧ್ಯಭಾಗದಲ್ಲಿ ಇರುವುದು, ಅಲ್ಲದೇ ಅಲ್ಲಿಗೆ ಹೋಗಲು ಬೋಟ್ ಬೇಕು. ಅಂತೂ 2004ರ ಮೇ ತಿಂಗಳಿನಲ್ಲಿ ನೇತ್ರಾಣಿ ಪ್ರಯಾಣ ಸಾಗಿತ್ತು. ಬೆಳಿಗ್ಗೆ ನಾನು, ಸಹೋದರ ರಾಜೇಂದ್ರ, ಪತ್ರಕರ್ತ ಮಿತ್ರ ಗಣೇಶ್, ಗೆಳೆಯ ದಿವಾಕರ್, ಸಂತೋಷ್ ತ್ರಾಸಿಯಿಂದ ಕಾರಿನಲ್ಲಿ ಭಟ್ಕಳ ಬಂದರು ತಲುಪಿದ್ದೇವು.

ಅಲ್ಲಿ ಮೀನುಗಾರ ಮಿತ್ರರ ದೊಡ್ಡ ಬೋಟ್ ಸಮುದ್ರದ ಅಲೆಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿತ್ತು. ಪೂಜಾ ಸಾಮಗ್ರಿ, ಪುರೋಹಿತರು ಸೇರಿದಂತೆ ಸುಮಾರು 40 ಜನರ ತಂಡ ಬೋಟ್ ಏರಿದ್ದೇವು. ಜೊತೆಗೆ ಒಂದು ಕುರಿ, ಕೋಳಿ. ಅರೆ ಮನುಷ್ಯರ ಜತೆ ಪ್ರಾಣಿಗಳು ಯಾಕೆ ಅಂತ ಅಲ್ವಾ,ನೇತ್ರಾಣಿ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ನೇತ್ರ ಹೈಗುಳಿ ಸೇರಿದಂತೆ ಅನೇಕ ದೇವರುಗಳಿವೆ. ಸಮುದ್ರದಲ್ಲಿ ತಮಗೆ ಅಪಾಯವಾಗದಿರಲಿ, ದುಡಿಮೆ ಚೆನ್ನಾಗಿರಲಿ ಅಂತ ನೇತ್ರಾಣಿ ದೇವರಿಗೆ ಹರಕೆ ಹೊತ್ತಿರುತ್ತಾರೆ. ಅಲ್ಲಿ ದೇವರಿಗೆ ಕುರಿ, ಕೋಳಿ, ಆಡುಗಳನ್ನು ಹರಕೆ ಬಿಡುವುದು ವಾಡಿಕೆ. ಭಟ್ಕಳ ಬಂದರು ಪ್ರದೇಶದಿಂದ ಸುಮಾರು 10 ನಾಟಿಕಲ್ ಮೈಲ್ ದೂರದಲ್ಲಿರುವ ನೇತ್ರಾಣಿಯತ್ತ ಬೋಟ್ ನಿಧಾನಕ್ಕೆ ಚಲಿಸತೊಡಗಿತ್ತು.

ಸಮುದ್ರದಲ್ಲಿ ನನ್ನ ಮೊತ್ತ ಮೊದಲ ಪ್ರಯಾಣ ಅದಾಗಿತ್ತು.ಸಮುದ್ರದ ಬಗ್ಗೆ ನನಗೆ ಮೊದಲಿನಿಂದಲೂ ಭಯ. ಪ್ರವಾಸದ ಹುಚ್ಚು ನನ್ನನ್ನ ಅಷ್ಟು ದೂರಕ್ಕೆ ಎಳೆದೊಯ್ಯಿದಿತ್ತು.ಎರಡು ಗಂಟೆಗಳ ಕಾಲ ಬಳುಕುತ್ತ - ಓಲಾಡುತ್ತ ಸಾಗಿದ ಹಡಗು ಗುಡ್ಡದಿಂದ 20ಅಡಿ ದೂರದಲ್ಲಿ ಲಂಗರು ಹಾಕಿತ್ತು. ಇದೇನ್ ಕಥೆಯಪ್ಪಾ ನಮ್ಮನ್ನ ನಡು ನೀರಿನಲ್ಲಿ ಕೈಬಿಟ್ಟರಾ ಹೇಗೆ, ರಸ್ತೆಯಲ್ಲಿ ನಡೆದಾಡುವುದೇ ನಮಗೆ ಕಷ್ಟ,ಇನ್ನು ಈಜು ಮೊದಲೇ ಬರುವುದಿಲ್ಲ.

ಹಡಗಿನಿಂದ ಇಣುಕಿ ಕೆಳಗೆ ನೋಡಿದರೆ ಎದೆ ಬಡಿತ ಹೆಚ್ಚಾಗಿತ್ತು.ಬೋಟ್‌ನಲ್ಲಿದ್ದ ಎರಡು ಚಿಕ್ಕ ಡಿಂಗಿ (ಲೈಫ್ ಬೋಟ್) ಗಳನ್ನು ಇಳಿಬಿಟ್ಟು ನಾಲ್ಕಾರು ಮಂದಿ ಈಜು ಪರಿಣತರು ಅದರಲ್ಲೆ ಸೇರಿ ಗುಡ್ಡದತ್ತ ಸಾಗಿದರು. ಅದರಲ್ಲಿ ನಾಲ್ಕು ಮಂದಿ ಈಜಿ ಗುಡ್ಡ ಸೇರಿದರು. ಎರಡು ಲೈಫ್ ಬೋಟ್‌ಗಳು ನಮ್ಮತ್ತ ಬಂದು ಎಂಟು ಮಂದಿಯಂತೆ ಎರಡು ಡಿಂಗಿಯಲ್ಲಿ ಹತ್ತಿಸಿಕೊಂಡು ಅಲೆಗಳ ಮೇಲೆ ಸಾಗುತ್ತಿರುವಾಗ ನಾನಂತೂ ಅಕ್ಷರಶಃ ಕಣ್ಣುಮುಚ್ಚಿಕೊಂಡಿದ್ದೆ.

ಸ್ವಲ್ಪ ಆಯ ತಪ್ಪಿದರೂ ಸಾವು ನಿಶ್ಚಿತವಾಗಿತ್ತು. ಬಲವಾದ ಗಾಳಿಗೆ ಅಲೆಗಳು ಆಳೆತ್ತರಕ್ಕೆ ಬಂದಪ್ಪಳಿಸುತ್ತಿತ್ತು. ಅಂತಹ ಅಲೆಗಳ ಆರ್ಭಟಕ್ಕೆ ಸಿಕ್ಕ ನಮ್ಮ ಲೈಫ್ ಬೋಟ್ ಮುಂದಕ್ಕೂ ಸಾಗದೇ ಅತಂತ್ರವಾದಾಗ ನಮ್ಮ ಲೈಫ್ ಬಗ್ಗೆನೇ ಅನುಮಾನ ಮೂಡತೊಡಗಿತ್ತು. ಈ ಹುಚ್ಚಾಟ ಬೇಡಾಗಿತ್ತು ಅಂತ ಅನಿಸತೊಡಗಿತ್ತು.

ಅದಾಗಲೇ ಐಸ್ ಲಾಂಬೆ ಅಂತ ರೋಪ್‌ನಿಂದ ಎಳೆದು ಗುಡ್ಡದ ತಳಭಾಗದಲ್ಲಿನ ಕಲ್ಲಿನಪಾಯದ ಮೇಲೆ ಡಿಂಗಿ ಬಂದು ಕುಳಿತಾಗ ನಾವೆಲ್ಲ ಒಂದೇ ನೆಗೆತಕ್ಕೆ ಗುಡ್ಡಕ್ಕೆ ಪಾದಸ್ಪರ್ಶ ಮಾಡಿ ಬದುಕಿದೆಯ ಬಡ ಜೀವವೇ ಅಂತ ಉಸಿರು ಬಿಟ್ಟಿದ್ದೇವು. ಹೀಗೆ ಗಂಟೆಗಳ ಕಾಲ ಅಲೆಗಳೊಂದಿಗೆ ಸರ್ಕಸ್ ನಡೆಸಿ 40 ಮಂದಿ ನೇತ್ರಾಣಿ ಗುಡ್ಡ ಏರತೊಡಗಿದ್ದೇವು.ಅದಾಗಲೇ ಸೂರ್ಯ ನಡುನೆತ್ತಿಗೆ ಬಂದಿದ್ದ. 25ನಿಮಿಷಗಳ ನಡಿಗೆಯ ನಂತರ ಗುಡ್ಡದ ತಲೆಮೇಲೆ ನಿಂತಿದ್ದೆವು.

ಸುತ್ತಲೂ ಆವರಿಸಿರುವ ಅರಬ್ಬಿ ಸಮುದ್ರ, ಮಧ್ಯೆಗುಡ್ಡದಲ್ಲಿ ನಾವು ಅಬ್ಬಾ ನೆನೆಸಿಕೊಂಡರೆ ರೋಮಾಂಚ ನವಾಗುತ್ತೆ. ಮನುಷ್ಯರ ವಾಸನೆ ಬಡಿಯುತ್ತಲೇ ಹಿಂಡುಗಟ್ಟಲೇ ತುಂಬಿಕೊಂಡಿದ್ದ ಕೋಳಿ, ಆಡುಗಳೆಲ್ಲ ದಿಕ್ಕಾಪಾಲಾಗಿ ಒಡತೊಡಗಿದವು. ಶತ್ರುಗಳ ಮೇಲೆ ಆಕ್ರಮಣ ಮಾಡಲು ಬಂದಂತಹ ಸೈನಿಕರಂತೆ ನಾವು ಸಾಗುತ್ತಿದ್ದರೆ, ಅವುಗಳು ಅಡಗುತಾಣವನ್ನರಸುತ್ತ ಶತ್ರುಗಳಂತೆ ತಲೆಮರೆಸಿಕೊಂಡು ಬಿಟ್ಟವು.

ಬೆಟ್ಟದ ಮೇಲೆ ನಾಲ್ಕಾರು ಕರಿಕಲ್ಲಿನ ದೇವರ ಮೂರ್ತಿಗಳು, ಅಷ್ಟೇ ಅಲ್ಲ , ಹೀಗೆ ನಮ್ಮಂತೆ ಅಲ್ಲಿಗೆ ಭೇಟಿ ನೀಡಿದ್ದ ಪ್ರವಾಸಿಗರು ಸುಮ್ಮನೆ ಇದ್ದಿಲ್ಲ. ಯೇಸುವಿನ ಶಿಲುಬೆ, ಗೋರಿಗಳನ್ನು ಕೃತವಾಗಿ ಸೃಷ್ಟಿಸುವ ಮೂಲಕ ಅದನ್ನೊಂದು ಧಾರ್ಮಿಕ ಸಮನ್ವಯ ತಾಣವನ್ನಾಗಿ ಮಾಡಿದ್ದರು. ನಮ್ಮೊಂದಿಗೆ ಬಂದಿದ್ದ ಪುರೋಹಿತರು ದೇವರಿಗೆ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಿದರು. ಆಡನ್ನು ಅಲ್ಲಿಯೇ ದೇವರಿಗೆ ಬಿಡಲಾಯಿತು.

ಪೂರ್ವ ಜನ್ಮದ ವಾಸನಾಬಲದ ನೆನಪು ಮರುಕಳಿಸಿದ ಪರಿಣಾಮ ಕೆಲವರು ಅದಾಗಲೇ ಭೇಟೆಯಾಡ ತೊಡಗಿದ್ದರು, (ಇಲ್ಲಿಗೆ ಬರುವ ಪ್ರವಾಸಿಗರಿಗೆ ಅದೊಂದು ಖಯಾಲಿ, ಈ ಮೊದಲು ಬಂದ ಭಕ್ತರು ಹರಕೆ ಸಲ್ಲಿಸಿ ಬಿಟ್ಟು ಹೋಗಿದ್ದ ಕೋಳಿಗಳನ್ನು ಪದಾರ್ಥ ಮಾಡಿ ತಿನ್ನುವುದೊಂದು ರೂಢಿ) ನೋಡ, ನೋಡುತ್ತಿದ್ದಂತೆಯೇ ಎಂಟತ್ತು ಕೋಳಿಗಳ ಸಂಹಾರ ಆಗಿತ್ತು.

ಅಲ್ಲಿಯೇ ರಾಶಿ ಬಿದ್ದಿದ್ದ ಕಟ್ಟಿಗೆಗಳನ್ನು ಒಟ್ಟು ಮಾಡಿ, ಬೆಂಕಿ ಹಚ್ಚಿ ಅದರಲ್ಲೇ ಕೋಳಿಗಳು ಸುಟ್ಟು ಕರಕಲಾಗಿ ಹದವಾಗಿದ್ದವು.ಮಿತ್ರ ಗಣೇಶ್ ಅವುಗಳನ್ನು ಕತ್ತರಿಸಿ, ತಿನ್ನತೊಡಗಿದ ಜತೆಗೆ ನನ್ನನ್ನು ಗುಂಪಿಗೆ ಸೇರಿಸತೊಡಗಿದಾಗ ನನಗ್ಯಾಕೋ ಅದು ಸಹ್ಯವಾಗಲಿಲ್ಲ. ಅಂತೂ ಬಕಾಸುರರೆಲ್ಲ ಕುಕ್ಕಟಗಳ ಸಂಹಾರ ಮುಗಿಸಿ, ಸಂಚಾರಕ್ಕೆ ಹೊರಡಲು ಅಣಿಯಾದರು.

ನೇತ್ರಾಣಿ ಸುಮಾರು ಎರಡು ಕಿ.ಮಿ. ಸುತ್ತಳತೆಯ ಗುಡ್ಡ. ಗಿಡ-ಮರಗಳಿಂದ ಆವೃತ್ತವಾಗಿರುವ ಗುಡ್ಡದಲ್ಲಿ ದೇವರೆ ಪ್ರಮುಖ ಆಕರ್ಷಣೆ ಕೇಂದ್ರ ಬಿಂದು. ತಂಪಾಗಿ ಬೀಸುವ ತಂಗಾಳಿ, ನೀಲಿ ಬಣ್ಣದಿಂದ ಕಂಗೊಳಿಸುವ ಸಮುದ್ರದ ತಳಭಾಗದಲ್ಲಿ ಮಿರ, ಮಿರನೆ ಮಿಂಚುವ ವಿವಿಧ ಜಾತಿ ಮೀನುಗಳನ್ನು ನೋಡುವುದೇ ಒಂದು ಖುಷಿ. ಮತ್ತೊಂದು ಭಾಗದಲ್ಲಿ ಬೃಹತ್ ಗುಹೆಯೊಂದಿದೆ, ಅಲ್ಲಿಗೆ ತೆರಳಬೇಕೆಂಬ ನಮ್ಮ ದುಸ್ಸಾಹಸಕ್ಕೆ ಕೆಲವು ಹಿರಿಯರು ತಣ್ಣೇರೆರಚಿದರು.

ಹಾಗೆ ಬೆಟ್ಟದ ಮೇಲೆ ನಿಂತು ಸುತ್ತಲೂ ವೀಕ್ಷಣೆ ನಡೆಸುತ್ತಿದ್ದಾಗ, ಮತ್ತೊಂದು ಗುಂಪು ಕಲ್ಲೆಸುವ ಪಂದ್ಯದಲ್ಲಿ ನಿರತರಾಗಿದ್ದವು. ಬೆಟ್ಟದ ಮೇಲೆ ನಿಂತು ಎಷ್ಟೇ ಬಲಯುತವಾಗಿ ಸಮುದ್ರಕ್ಕೆ ಕಲ್ಲು ಬಿಸಾಕಿದರೂ ಅದು ಅಲ್ಲಿಗೆ ತಲುಪುವುದಿಲ್ಲ ಎಂಬುದಾಗಿ ಕೆಲವು ಗೆಳೆಯರು ವಿವರಣೆ ನೀಡಿದರು. ನಾವು ಕೆಲವು ಕಲ್ಲುಗಳನ್ನೆತ್ತಿ ಪ್ರಯೋಗ ಮಾಡಿದೆವು ಊಹುಂ, ಅದು ಸಮುದ್ರದಕ್ಕೆ ತಾಗಲೇ ಇಲ್ಲ. ಅಷ್ಟರಲ್ಲಾಗಲೇ ಗಂಟೆ ಮೂರು ದಾಟತೊಡಗಿತ್ತು.

ಸಂಜೆಯಾದರೆ,ತೂಫಾನ್ ಜಾಸ್ತಿಯಾಗಿಬಿಟ್ಟರೆ ಹರಹರಾ ಗೋವಿಂದ ಎನ್ನಬೇಕಾಗುತ್ತೆ ಎಂಬ ಎಚ್ಚರಿಕೆಯಿಂದ ವಾಪಸು ಹೊರಟೆವು.ಮತ್ತೆ ಡಿಂಗಿ ಮೂಲಕ ಸಾಗಿ ಬೋಟ್ ಏರಿಕೊಂಡೆವು.ಆ ಹೊತ್ತಿಗೆ ಅಡುಗೆಯಾಳುಗಳು ಊಟ ತಯಾರಿ ಮಾಡಿ, ಎಲ್ಲರಿಗೂ ಅನ್ನ ಬಡಿಸತೊಡಗಿದರು. ನಿಧಾನಕ್ಕೆ ಹಡಗು ಚಲಿಸುತ್ತಿದ್ದಂತೆ, ನಮ್ಮ ಕೈಗಳು ಅನ್ನದ ಬಟ್ಟಲಿನತ್ತ ಜಾರತೊಡಗಿತ್ತು...

(ಇತ್ತೀಚೆಗಷ್ಟೇ ನೇತ್ರಾಣಿ ಗುಡ್ಡದಲ್ಲಿ ಶಸ್ತ್ರಾಸ್ತ್ರ ತರಬೇತಿಗೆ ಪರಿಸರವಾದಿಗಳಿಂದ ವಿರೋಧ ಎಂಬ ವರದಿ ಪ್ರಕಟವಾಗಿತ್ತು.ಅದನ್ನು ಓದಿದಾಗ ಯಾಕೋ ನೇತ್ರಾಣಿ ನೆನಪು ಮತ್ತೆ ಮರುಕಳಿಸಿತ್ತು. ಅಲ್ಲಿ ನೌಕಾ ನೆಲೆಯವರು ಪ್ರತಿವರ್ಷ ಈ ಗುಡ್ಡದ ಮೇಲೆಯೇ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಾರೆ. ನಾವು ಭೇಟಿ ನೀಡಿದಾಗ ಹಾಗೆ ತರಬೇತಿ ನಡೆಸುತ್ತಿದ್ದಾಗ ಸ್ಫೋಟಗೊಳ್ಳದ ಎರಡು ಬಾಂಬ್‌ಗಳು ಅಲ್ಲಿದ್ದವು. ಆ ಸಂದರ್ಭದಲ್ಲಿ ಸಮುದ್ರದಲ್ಲಿ ಇಂದು ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ ಎಂಬ ಪ್ರಕಟಣೆ ನೀಡಲಾಗುತ್ತದೆ.)

No comments: