Saturday, December 15, 2007

ಧರ್ಮ ಬೆಳಕು ನೀಡಬೇಕು, ಹಿಂಸೆಯನ್ನಲ್ಲ

ಉತ್ತರಕರ್ನಾಟಕ ಜನರ ಪ್ರೀತಿ, ಅಲ್ಲಿನ ಪ್ರಾಕೃತಿಕ ಸೌಂದರ್ಯ ಇವುಗಳೆಲ್ಲವೂ ಮರೆಯಲಾರದ ನೆನಪುಗಳಾಗಿವೆ. ಆಗಾಗ ಉತ್ತರ ಕರ್ನಾಟಕಕ್ಕೆ ಭೇಟಿ ನೀಡುವುದೊಂದು ಅಭ್ಯಾಸವಾಗಿತ್ತು. ಹಾಗೆ ಧಾರವಾಡಕ್ಕೆ ಭೇಟಿ ನೀಡಿದ ಪ್ರತಿ ಸಂದರ್ಭದಲ್ಲೂ ಎನ್.ಕೆ. ಕುಲಕರ್ಣಿ, ಕಣವಿ, ಪ್ರೊ.ನಾರಾಯಣಾಚಾರ್ಯ ಮುಂತಾದ ಹಿರಿಯರನ್ನ ಮಾತನಾಡಿಸಿ ಬರುತ್ತಿದ್ದೆ.

ಸಾಹಿತ್ಯ ಕ್ಷೇತ್ರದಲ್ಲಿನ ಬೆಳವಣಿಗೆಗಳು, ಸಾಹಿತ್ಯ ಕ್ಷೇತ್ರ ಹಿಡಿದಿರುವ ಹಾದಿಗಗಳು, ಕನ್ನಡದ ಮನಸ್ಸು, ಧರ್ಮದ ಕುರಿತಾಗಿ ಮುಕ್ತ ಮನಸ್ಸಿನಿಂದ ಹರಟಿದ ನಗುಮೊಗದ ಚೆಂಬೆಳಕಿನ ಕವಿ ಚೆನ್ನವೀರ ಕಣವಿಯೊಂದಿಗಿನ ಕಿರು ಸಂದರ್ಶನದ ಭಾಗ ಇಲ್ಲಿದೆ.

ಪ್ರಶ್ನೆ: ನಿಮಗೆ ಸಾಹಿತ್ಯದ ಒಲವು ಮೂಡಿದ ಬಗೆ ?

ಕಣವಿ: ಗದಗ ತಾಲೂಕಿನ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಲಿಯುತ್ತಿರುವಾಗಲೇ ಸಾಹಿತ್ಯದ ಕುರಿತು ಒಲವು ಮೂಡಿದ್ದು, ಶಾಲಾ ಶಿಕ್ಷಕರಾಗಿದ್ದ ನನ್ನ ತಂದೆ ಸಕ್ರಪ್ಪನವರ ಪ್ರಭಾವವೂ ಕಾರಣವಾಗಿದೆ.

ಪ್ರಶ್ನೆ: ಇಂದಿನ ಸಾಹಿತ್ಯ ವಲಯದ ಕುರಿತು..

ಕಣವಿ: ಹೊಸಗನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆದು ಬಂದಿದೆ. ಕನ್ನಡದ ಪ್ರಾಚೀನ ಪರಂಪರೆಗೆ ಪಂಪನಂತಹ ಶ್ರೇಷ್ಠ ಕವಿಗಳು ದೊರೆತರೆ, ಆಧುನಿಕ ಕನ್ನಡ ಸಾಹಿತ್ಯಕ್ಕೂ ಕೂಡ ನವೋದಯದ ಕೆಲವು ಹಿರಿಯರಾದ ಮಾಸ್ತಿ, ಕಾರಂತ, ಕುವೆಂಪು, ಬೇಂದ್ರೆ, ಡಿವಿಜಿಯಂತಹವರು ಪ್ರಮುಖರು. ಹಿಂಸೆ, ಕ್ರೌರ್ಯ, ಸಾಮಾಜಿಕ ವ್ಯತ್ಯಾಸಗಳಿಗೆ ವಿರುದ್ಧವಾಗಿ ಪ್ರತಿಭಟನೆ, ಸಮಾನತೆ ತರಲು ಬರವಣಿಗೆ ಸಾಧನವಲ್ಲ. ಇದು ಕಾಲದಿಂದ ಕಾಲಕ್ಕೆ ಆದ ಬೆಳವಣಿಗೆಯೇ ಸಾಹಿತ್ಯದ ವೈಶಿಷ್ಟ್ಯ.

ಪ್ರಶ್ನೆ: ಸಾಹಿತ್ಯ ಜನತೆಗೆ ಎಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿ ಪರಿಣಮಿಸಿದೆ..

ಕಣವಿ: ಸಾಹಿತ್ಯದಿಂದ ಜನರ ಮನಸ್ಸಿನ ಮೇಲೆ ಉತ್ತಮ ಸಂಸ್ಕಾರ ಆಗುತ್ತದೆ. ಆದರೆ ಶೀಘ್ರವಾಗಿ ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದನ್ನು ನಿರೀಕ್ಷಿಸುವಂತಿಲ್ಲ. ಸಾಹಿತ್ಯ ಒಳ್ಳೆಯ ಪ್ರೇರಣೆ ಕೊಡಬಹುದು. ಅದರಿಂದ ಕ್ರಾಂತಿ ನಡೆಯಲಾರದು. ಬದುಕಿಗೆ ಒಂದು ನೆಮ್ಮದಿಯ ದಾರಿಯನ್ನು ತೋರಿಸಿಕೊಡುವಲ್ಲಿ ಸಾಹಿತ್ಯ ಬೆಳೆದು ನಿಂತಿದೆ ಎನ್ನಬಹುದು.

ಪ್ರಶ್ನೆ: ಭಾಷೆ, ರಾಜ್ಯ, ಧರ್ಮಾಂಧತೆ ಬಗ್ಗೆ...

ಕಣವಿ: ತಮ್ಮ,ತಮ್ಮ ಮಾತೃ ಭಾಷೆಯನ್ನು ಪ್ರೀತಿಸುತ್ತ, ರಾಜ್ಯ ಭಾಷೆಯ ಬಗ್ಗೆ ಅಭಿಮಾನವಿಟ್ಟುಕೊಂಡು, ರಾಷ್ಟ್ರೀಯ ಪ್ರವಾಹದಲ್ಲಿ ಸಮರಸರಾದರೆ ಯಾವ ಗೊಂದಲವೂ ಉಂಟಾಗದು. ಭಾಷೆಯೊಡನೆ ಸಾಹಿತ್ಯ, ಸಂಸ್ಕೃತಿಯೂ ಮೇಳೈಸಿರುವುದರಿಂದ ಉತ್ತಮ ಸಂಸ್ಕಾರಕ್ಕೂ ಅದು ಮಾರ್ಗದರ್ಶಿಯಾಗುತ್ತದೆ. ಬೇರೆ ಭಾಷೆಯನ್ನು ಕಲಿಯುತ್ತ ಅವುಗಳೊಡನೆ ಮೈತ್ರಿಯನ್ನು ಬೆಳೆಸಿಕೊಂಡಷ್ಟು ನಾವು ದೊಡ್ಡವರಾಗುತ್ತೇವೆ.

ಅದೇ ರೀತಿ ಧರ್ಮ ಬೆಳಕನ್ನು ಬೀರಬೇಕಲ್ಲದೆ, ಅದನ್ನು ಸಂಕುಚಿತಾರ್ಥದಲ್ಲಿ ಸ್ವಾರ್ಥ, ಮೋಸ, ದ್ವೇಷ, ಹಿಂಸೆಗಳಿಗೆ ಬಳಸಿದರೆ ಅದರಂತಹ ಅಪಾಯ ಬೇರೊಂದಿಲ್ಲ. ದಯೆಯೇ ಇಲ್ಲದಿದ್ದರೆ ಅದನ್ನು ಧರ್ಮವೆಂದು ಏಕೆ ಕರೆಯಬೇಕು?, ಅದಕ್ಕಾಗಿಯೆ ಬಸವಣ್ಣ ಹೇಳಿದ್ದು ದಯೆಯೇ ಧರ್ಮದ ಮೂಲವೆಂದು, ಧರ್ಮ ಖಾಸಗಿಯಾದದ್ದು ಎಂಬುದನ್ನು ಮರೆಯಬಾರದು.

ಎಲ್ಲದಕ್ಕೂ ಮಿಗಿಲಾದದ್ದು ಮಾನವ ಧರ್ಮ. ಅದಕ್ಕೆ ಸಾವಿರ ವರ್ಷಗಳ ಹಿಂದೆ ಮಹಾಕವಿ ಪಂಪ ಮನುಷ್ಯ ಜಾತಿ ತಾನೊಂದೆವಲಂ ಎಂದು ಸಾರಿದ್ದ.

ಪ್ರಶ್ನೆ: ಸಾಹಿತ್ಯ ಜನಸಾಮಾನ್ಯರಿಂದ ದೂರವಾಗುತ್ತಿದೆಯೇ..

ಕಣವಿ: ಹಾಗೇನಿಲ್ಲ, ಹಿಂದಿಗಿಂತ ಈಗ ಜನಸಾಮಾನ್ಯರು ಅಕ್ಷರಸ್ಥರಾಗುತ್ತಿರುವುದರಿಂದ ಸಾಹಿತ್ಯ ಸಾಮಾನ್ಯರಿಗೂ ಹತ್ತಿರವಾಗುತ್ತಿದೆ. ಅನಕ್ಷರತೆ ಕಡಿಮೆಯಾದಂತೆ ಇನ್ನೂ ಹೆಚ್ಚಿನ ಪರಿಣಾಮಕಾರಿ ಆಗಬಹುದು.

No comments: