Wednesday, January 16, 2008

ಗೋಡ್ಸೆ ಎಂಬ ಹೀರೋ !!!



ಸಾಗರದ ಹೆಗ್ಗೋಡಿನ ಶಿಲ್ಪಿ ಹಿರಿಯರಾದ ದಿ.ಕೆ.ವಿ.ಸುಬ್ಬಣ್ಣನವರು ಸಮಾಜ ಮತ್ತು ಜನತಂತ್ರದ ಕುರಿತು ಬರೆದ ಲೇಖನದಲ್ಲಿ, ಗಾಂಧಿ ನಾಯಕತ್ವದ ಪ್ರಸ್ತುತ ಸ್ವಾತಂತ್ರ್ಯ ಹೋರಾಟದ 30 ವರ್ಷಗಳು ಇತಿಹಾಸದ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ಅವಧಿಯಾಗಿದೆ. ಪ್ರಾಚೀನ ಹಾಗೂ ಆಧುನಿಕತೆ ಬಹು ಭದ್ರವಾಗಿ ಬೆಸೆದುಕೊಂಡಿರುವ ಕೊಂಡಿಕಾಲ ಅದು.

ಆ ಕಾಲದಲ್ಲಿ ಗಾಂಧಿ ಮಾರ್ಗದರ್ಶನ ದೊರೆಯದೆ ಹೋಗಿದ್ದರೆ ಈ ದೇಶ ಈಗಿರುವ ಹಾಗೆ ಉಳಿಯುತ್ತಿರಲಿಲ್ಲ. ನಿಶ್ಚಿತವಾಗಿ ಒಂದೋ ಪಾಕಿಸ್ತಾನ ಮಾದರಿಯಂತೆ ಭಾರತ ಹಿಂದೂ ರಾಷ್ಟ್ರವಾಗಿರುತ್ತಿತ್ತು, ಅಥವಾ ಆಧುನಿಕ ಚೀನಾದ ಹಾಗೆ, ತನ್ನ ಪೂರ್ತಿ ಪರಂಪರೆಗಳನ್ನು ಪೂರ್ಣ ತುಂಡರಸಿ ಆಧುನಿಕವನ್ನಪ್ಪಿಕೊಂಡಿರುತ್ತಿತ್ತು. ಆದರೆ ಭಾರತ ಹಾಗಾಗದೆ ಎರಡೂ ದಾರಿ ಬಿಟ್ಟು ತನ್ನದೆ ಹಾದಿಯಲ್ಲಿ ಬೆಳೆದು ನಿಂತಿರುವುದು ಮಹತ್ವವಾದ ಅಂಶವಾಗಿದೆ.


ಈ ಮಾತನ್ನು ಪ್ರಸ್ತಾಪಿಸಲು ಪ್ರಮುಖ ಕಾರಣ ಇಂದು ಗಾಂಧಿಯ ತತ್ವಗಳಾಗಲಿ, ಗ್ರಾಮಸ್ವರಾಜ್ಯದ ಕಲ್ಪನೆಯಾಗಲಿ ಯಾವುದೂ ಯಾರಿಗೂ ಬೇಕಾಗಿಲ್ಲ. ಅದರಲ್ಲೂ ಗಾಂಧಿ,ಗಾಂಧಿ ಎಂದು ಜಪಿಸುತ್ತಿದ್ದ ಕಾಂಗ್ರೆಸ್ಸೂ ಕೂಡ ನೈತಿಕ ಬಲವನ್ನು ಕಳೆದುಕೊಂಡಿದೆ. ಶಾಂತಿಮಂತ್ರ ಜಪಿಸಿದ್ದ ಗಾಂಧಿ ನಾಡು ಗುಜರಾತ್‌‌ನಲ್ಲಿ ರಕ್ತದೋಕುಳಿ ಹರಿದಿದೆ.

ಯಾವ ಹಿಂದು-ಮುಸ್ಲಿಂರ ಏಕತೆಗಾಗಿ ಹೋರಾಡಿ ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದರೊ, ಅಂತಹ ಗಾಂಧಿಯ ಅಹಿಂಸಾ ತತ್ವ ಗುಜರಾತ್‌‌ನಲ್ಲಿ ಗಾಳಿಗೆ ತೂರಿಹೋಗಿದೆ. ಗಾಂಧಿಯ ಒಂದೇ ಒಂದು ಕರೆಗೆ ಲಕ್ಷಾಂತರ ಜನ ಒಗೊಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ್ದರು, ದೇಶಾದ್ಯಂತ ಸಂಚರಿಸಿ ಪ್ರತಿಯೊಂದು ಸ್ಥಿತಿಗತಿಯ ಕುರಿತು ಕೂಲಂಕಷ ಅಧ್ಯಯನ ನಡೆಸಿದ್ದ ಗಾಂಧಿ ಇಂದು ಯುವ ಮನಸ್ಸಿನಿಂದ ದೂರವಾಗಿದ್ದಾರೆ.

ಗಾಂಧಿ ನುಡಿದಂತೆ ಬದುಕಿನಲ್ಲಿ ನಡೆದ ಸಾಧಕ, ಆದರೆ ನಮ್ಮ ರಾಜಕೀಯ ಪುಡಾರಿಗಳಿಗೆ ಅಂತಹ ಮನೋಬಲ ಇದೆಯೇ, ಕೇವಲ ಅಧಿಕಾರದ ಗದ್ದುಗೆಗಾಗಿ ಗಾಂಧಿ, ಅಹಿಂಸೆ, ಜಾತ್ಯತೀತ ಎಂದೆಲ್ಲ ಬೊಗಳೆ ಬಿಟ್ಟು ಕುರ್ಚಿಯನ್ನು ಹಿಡಿದರೆ ವಿನಃ ಬೇರೆನೂ ಆಗಿಲ್ಲ. ಇತ್ತೀಚೆಗೆ ಆಂಧ್ರದ ತಾಡಂಪಲ್ಲಿಗುಡಂ ಪಟ್ಟಣದ ಬಿಜೆಪಿ ಮುಖಂಡ ಆರ್‌‌ಎಸ್‌‌ಎಸ್ ನಾಯಕ ಶ್ಯಾಂಪ್ರಸಾದ್ ಮುಖರ್ಜಿ ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು ಸ್ಥಾಪಿಸಿರುವುದು ಗಾಂಧಿ ಬಗ್ಗೆ ಇಷ್ಟೆಲ್ಲಾ ಪೀಠಿಕೆಗೆ ಕಾರಣ.

ಕೋಮುದ್ವೇಷದ ಜ್ವಾಲಾಗ್ನಿ ಮಹಾತ್ಮ ಗಾಂಧಿಯನ್ನು ನಾಥೂರಾಂ ಗೋಡ್ಸೆಯ ಮೂಲಕ ಬಲಿ ತೆಗೆದುಕೊಂಡಿತ್ತು. ಇಂದು ಯಾರು ಆದರ್ಶವಾಗಬೇಕಿತ್ತು. ಅವರಾರು ಮಾದರಿಯಾಗುತ್ತಿಲ್ಲ. ಭಯೋತ್ಪಾದಕ, ಪಂಜಾಬ್ ಪ್ರತ್ಯೇಕತವಾದಿ ಖಾಲ್ಸಾ ಉಗ್ರಗಾಮಿ ಸಂಘಟನೆಯ ಬಿಂದ್ರನ್‌‌ವಾಲೆಯನ್ನು ಸಿಖ್ ಸಮುದಾಯ ವೀರತ್ವ ಏರಿಸಿದೆ, ಅದರಂತೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಂತಕರಾದ ಸತ್ವಂತ್ ಸಿಂಗ್ ಮತ್ತು ಕೇಹರ್ ಸಿಂಗ್‌‌ಗೂ ಕೂಡ ಸಿಖ್ ಸಮುದಾಯ ವೀರಪುರುಷರು ಎಂಬ ಪಟ್ಟ ನೀಡಿ ಉನ್ನತ ಮಟ್ಟಕ್ಕೇರಿಸಿದೆ.

ಅದೇ ತೆರನಾಗಿ ಪೆರಿಯಾರ್, ದ್ರಾವಿಡ್ ಚಳವಳಿ ಎಂದೆಲ್ಲ ಕ್ರಾಂತಿ ಎಬ್ಬಿಸಿದ್ದ ತಮಿಳುನಾಡಿನ ಜನ ಚಿತ್ರನಟಿ ಖುಷ್ಬೂ, ಜಯಲಲಿತಾ ಅವರಂತವರಿಗೆ ದೇವಾಲಯ ಕಟ್ಟಿವೆ. ವಿಪರ್ಯಾಸ ಎಂಬಂತೆ ತಮಿಳುನಾಡಿನ ಜನರಿಂದ ಆರಾಧಿಸಲ್ಪಟ್ಟ ಖುಷ್ಬೂಗೆ, ಲೈಂಗಿಕತೆ ಬಗ್ಗೆ ಹೇಳಿಕೆ ನೀಡಿದ್ದಕ್ಕೆ, ದೇವಾಲಯದಲ್ಲಿ ಪಾದರಕ್ಷೆ ಹಾಕಿ ಪ್ರವೇಶಿಸಿದ್ದಕ್ಕೆ ಕೋರ್ಟ್ ಮೆಟ್ಟಿಲು ಹತ್ತಿಸಿದ್ದಾರೆ.ಎರಡು ದಶಕಗಳ ಕಾಲ ಕಾಡಿನ ರಾಜನಾಗಿ ಮೆರೆದ ನರಹಂತಕ ವೀರಪ್ಪನ್‌‌ನ್ನು ಗೋಪಿನಾಥಂನಲ್ಲಿ ಪ್ರತಿಮೆ ಪೂಜಿಸುತ್ತಿದ್ದಾರೆ.

ಬಹುಶಃ ಇನ್ನು ಮುಂದೆ ಈ ಪಟ್ಟಿಯಲ್ಲಿ ಉಗ್ರಗಾಮಿ ಸಂಘಟನೆಯ ಒಸಾಮ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ, ಎಲ್‌‌ಟಿಟಿಇಯ ಪ್ರಭಾಕರನ್....ಹೀಗೆ ಎಂಥೆಂತಹ ಮಹಾನುಭಾವರ ಸೇರ್ಪಡೆಯಾಗಲಿಕ್ಕಿದೆಯೋ ಹೇ ರಾಮ್.....!!!....

1 comment:

click4nothing said...

ನೀವು ಬರೆದಿರೋದು ನಿಜಾನೇ....... ಒಳ್ಳೆ ಉದಾಹರಣೆಗಳನ್ನು ಕೊಟ್ಟಿದ್ದೀರ..... ಆದರೆ ತೀರ ಇತ್ತೀಚೆಗೆ ಗಾಂಧಿವಾದ ಬೆಳಕಿಗೆ ಬರ್ತಿದೆ ಅನ್ನೋದನ್ನೂ ನಾವು ಮರೆಯಬಾರರದು...... ಅದು ಸ್ವಲ್ಪ ಮಟ್ಟದಲ್ಲಿಯೇ ಇದ್ರೂ ಸಹ..! ಇತ್ತಿಚಿನ ಉದಾಹರಣೆಗಳು ಅಂದ್ರೆ ಪಾಕಿಸ್ತಾನದ ಕಾಲೇಜು ವಿದ್ಯಾರ್ಥಿಗಳು ಪರ್ವೇಜ್ ಮುಷರಫ್‌ಗೆ ಹೂಗುಚ್ಛ ನೀಡಲು ಮುಂದಾಗಿದ್ದು.... ಗುಜರಾತ್‌ನಲ್ಲಿ (ಸರಿಯಾಗಿ ತಿಳಿದಿಲ್ಲ) ಟ್ರಾಫಿಕ್ ರೂಲ್ ಬ್ರೆಕ್ ಮಾಡಿದವರಿಗೆ ಹೂ ನೀಡಿ ಸತ್ಕರಿಸಿದ್ದು...... ಎಲ್ಲದಕ್ಕಿಂತ ಮುಖ್ಯವಾಗಿ ಈಗಲೂ ಪ್ರತಿಭಟನೆ ಅಂತ ಮುಂದಾದಾಗ ಉಪವಾಸ ಸತ್ಯಾಗ್ರಹ ಮಾಡೋದು..... ಗಾಂಧಿವಾದ ಸಂಪೂರ್ಣವಾಗಿ ಮರೆಯಾಗದೇ ಉಳಿದಿರೋದಕ್ಕೆ ಸಾಕ್ಷಿ ಇವು......