Wednesday, January 16, 2008

ಶಾಸಕರೊಬ್ಬರ ಅಜ್ಞಾತವಾಸ ಕಥನ....

ಇದು ಜನಪ್ರತಿನಿಧಿಯೊಬ್ಬರ ಬದುಕಿನ ಚಿತ್ರಣ. ಅಧಿಕಾರ, ರಾಜಕೀಯ ,ಮೋಹ ಎಷ್ಟರಮಟ್ಟಿಗೆ ಅವರ ಜೀವನದಲ್ಲಿ ಹಾಸು ಹೊಕ್ಕಾಗಿರುತ್ತದೆ ಎನ್ನುವುದಕ್ಕೆ ಇಲ್ಲಿರುವ ಮಾಜಿ ಶಾಸಕ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯರೊಬ್ಬರ ಬದಕಿನ ಚಿತ್ರಣನ್ನ ಓದಿ....ಕುಂದಾಪುರ ತಾಲೂಕಿನ ಹೈಕಾಡಿಯಲ್ಲಿ ಇರುವ ಹಾಲಿ ವಿಧಾನ ಪರಿಷತ್ ಸದಸ್ಯ, ಮಾಜಿ ಶಾಸಕ ಪ್ರತಾಪ್ ಚಂದ್ರ ಶೆಟ್ಟಿ ಅವರ ಮನೆಗೆ ಕಾಲಿಟ್ಟಾಗ ಗೌಜಿ, ಗದ್ದಲಗಳಿಲ್ಲದೆ ಪ್ರಶಾಂತವಾಗಿತ್ತು.

ಅಲ್ಲಿ ಮೊದಲಿನಂತೆ ದಂಡು ಇರಲಿಲ್ಲ, ಅರ್ಧ ತಾಸಿನ ಬಳಿಕ ನಿದ್ದೆಯಿಂದ ಎದ್ದು ಬಂದ ಅವರು ಏನು ಎಂದು ವಿಚಾರಿಸಿದಾಗ, ವಿಷಯ ತಿಳಿಸಿ ವಿವರಕ್ಕಾಗಿ ಕಾದರೆ ಯಾವ ಮಾತನ್ನೂ ಆಡಲೂ ಅವರು ಸಿದ್ದರಿರಲಿಲ್ಲ. ಇದು ಕಳೆದ ಐದಾರು ವರ್ಷಗಳ ಕಠಿಣ ವೃತವೇನೋ ಎಂಬಂತೆ ಪಾಲಿಸಿಕೊಂಡು ಬಂದಿದ್ದಾರೆ. ಹಾಗಂತ ಆಪ್ತ ಕಾರ್ಯಕರ್ತರಲ್ಲಿ ಸಮಾಲೋಚನೆ, ಮಾತುಕತೆ ನಡೆಸುತ್ತಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌‌ನ ಭದ್ರಕೋಟೆಯಾಗಿತ್ತು.

ಈ ಕ್ಷೇತ್ರವನ್ನು ಸುಮಾರು 16ವರ್ಷಗಳ ಕಾಲ ಆಳಿದವರು ಕೊಳ್ಕೆಬೈಲ್ ಪ್ರತಾಪ್‌‌ಚಂದ್ರ ಶೆಟ್ಟಿಯವರು. 1983ರಲ್ಲಿ ರಾಜಕೀಯ ರಂಗ ಪ್ರವೇಶಿಸಿದ್ದ ಪ್ರತಾಪರು ಸಹಜವಾಗಿಯೇ ತನ್ನ ಪ್ರತಾಪವನ್ನು ತೋರ್ಪಡಿಸಿದ್ದರು. ಇವರ ಹಿಂದೆ ಕಾರ್ಯಕರ್ತರ ದಂಡೆ ನೆರೆದಿರುತ್ತಿತ್ತು. ರಾಜಕೀಯದಲ್ಲಿ ಚಾಣಾಕ್ಷ ಎಂಬ ಬಿರುದು ಇತ್ತು. ಎಲ್ಲವನ್ನೂ ಕುಳಿತಲ್ಲೇ ಮಾಡಿಸಿಕೊಳ್ಳಬಲ್ಲ ತಾಕತ್ತು ಅವರಿಗಿದ್ದಿತ್ತು. ಅದೇ ರೀತಿಯಾಗಿ ವಿಧಾನಸಭೆಯಲ್ಲೂ ಅವರ ಧ್ವನಿಗೆ ಬೆಲೆಯೂ ಇದ್ದಿತ್ತು.

ಆದರೆ ಅವರಿಗೆ ಕಾರ್ಯಕರ್ತರೆಡೆಗಿದ್ದ ಕುರುಡು ವ್ಯಾಮೋಹ ಅವರನ್ನು 1999ರಲ್ಲಿ ನಡೆದ ಚುನಾವಣೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಕೇವಲ ಒಂದು ಸಾವಿರ ಮತಗಳ ಅಂತರದಿಂದ ಅವರದ್ದೇ ಊರಿನ ದಾಯಾದಿ, ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಎದುರು ಪರಾಜಯ ಹೊಂದಿದ್ದರು.1999ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ಸಚಿವರಾಗುತ್ತಿದ್ದರು. ಅದು ಕೊನೆಗೂ ಈಡೇರಲಿಲ್ಲ. ಈ ವಿಷಯದಲ್ಲಿ ತಾಲೂಕಿಗೆ ಸಚಿವ ಸ್ಥಾನದ ಅದೃಷ್ಟವೇ ಇಲ್ಲ ಎಂಬಂತಾಗಿ ಬಿಟ್ಟಿದೆ.

ಬಹುಶಃ ಯಾವ ಶಾಸಕರೂ ಈ ಪರಿಯಲ್ಲಿ ನೊಂದುಕೊಂಡ ಇತಿಹಾಸ ಇರಲಿಕ್ಕಿಲ್ಲ. ಆದರೆ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ತನ್ನನ್ನು ಗೆಲ್ಲಬಲ್ಲ ಇನ್ನೊಬ್ಬ ವ್ಯಕ್ತಿ ಕ್ಷೇತ್ರದಲ್ಲಿ ಯಾರಿದ್ದಾರೆ ಎಂಬ ಬಲವಾದ ನಂಬಿಕೆಯಲ್ಲಿದ್ದ ಅವರಿಗೆ ಈ ಸೋಲು ಯಾವ ಪರಿ ಅಜ್ಞಾತವಾಸಕ್ಕೆ ನೂಕಿ ಬಿಟ್ಟಿತ್ತೆಂದರೆ, ಆ ಸಂದರ್ಭದಲ್ಲಿ ಮೌನಕ್ಕೆ ಶರಣಾದ ಅವರಲ್ಲಿ ಹಿಂದಿನ ಗೆಟಪ್ಪು ಹೊರಟು ಹೋಗಿತ್ತು. ಅತೀ ಆತ್ಮೀಯರಷ್ಟೇ ಅವರಲ್ಲಿಗೆ ಬಂದು ಹೋಗುತ್ತಿದ್ದದ್ದು ಬಿಟ್ಟರೆ, ಪಕ್ಷದ ಕಾರ್ಯಕರ್ತರನ್ನು ದೂರವಿಟ್ಟರು.

ದೂರವಾಣಿ ಕರೆಗಳಿಗೂ ಅವರು ಮನೆಯಲ್ಲಿ ಇದ್ದೂ ಇಲ್ಲ ಎಂಬ ಉತ್ತರ ಸಿಗುತ್ತಿತ್ತು. ಸಾರ್ವಜನಿಕವಾಗಿ ಕಾಣಿಸುವುದೇ ಅಪರೂ ಪವಾಯಿತು. ಗಾಢ ಆಲೋಚನೆಯಲ್ಲಿ ಮಗ್ನರಾಗತೊಡಗಿದ ಪ್ರತಾಪರನ್ನು 2003ರಲ್ಲಿ ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.ಆದರೂ ಮಾಜಿ ಶಾಸಕ ಎಂಬ ಶಾಕ್‌ನಿಂದ ಆವಾಗಲೂ ಹೊರಬರಲು ಸಿದ್ಧರಿರಲಿಲ್ಲ.

ಇತ್ತೀಚೆಗಷ್ಟೇ ಕೆಲವು ಸಮಾರಂಭಗಳಲ್ಲಿ ಅವರ ಮುಖ ಕಾಣಿಸತೊಡಗಿದೆ.ಪದವಿ ಶಿಕ್ಷಣ ಮುಗಿದ ಬಳಿಕ ಪ್ರತಾಪರು ಆಯ್ದು ಕೊಂಡ ಕ್ಷೇತ್ರ ಬ್ಯಾಂಕಿಂಗ್. ತಂದೆ ಹುಯ್ಯಾರು ಹಿರಿಯಣ್ಣ ಪಟೇಲ್ ನಿಧನರಾದ ಬಳಿಕ ಮೈಸೂರಿನ ಬ್ಯಾಂಕಿ (ಆ ಸಂದರ್ಭದಲ್ಲಿ ಈಗಿನ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಕೂಡ ಬ್ಯಾಂಕ್‌‌ ಕೆಲಸದಲ್ಲಿ ಜತೆಗಿದ್ದರು)ನಲ್ಲಿ ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಹಾಲಾಡಿಗೆ ಬಂದಿದ್ದರು.

1983ರಲ್ಲಿ ಪ್ರತಾಪರು ಜನತಾದಳದ ಮಾಣಿಗೋಪಾಲ್ ಅವರನ್ನು ಸೋಲಿಸುವ ಮೂಲಕ ಪ್ರಥಮಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆ ನಂತರದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಂತವರು ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್. ಇಂದಿಗೂ ಪ್ರತಾಪ್‌‌ಗೆ ಬಲಗೈಯಾಗಿರುವವರು ಆಸ್ಕರ್ ಮಾತ್ರ1985 ರಲ್ಲಿ ಅಪ್ಪಣ್ಣ ಹೆಗ್ಡೆ, 1989ರಲ್ಲಿ ಗೋವರ್ಧನ್, 1994ರಲ್ಲಿ ಎ.ಜಿ.ಕೊಡ್ಗಿ ವಿರುದ್ಧ ಜಯಗಳಿಸಿದ್ದರು.

1999ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರ ಎದುರು ಪರಾಭವ ಹೊಂದಿದ್ದರು. ಇದೀಗ ಆಧ್ಯಾತ್ಮಿಕ ಹಾಗೂ ಕೃಷಿ ಪುಸ್ತಕಗಳನ್ನು ಆಳವಾಗಿ ಓದುವುದರಲ್ಲಿ ಮಗ್ನರಾಗಿದ್ದಾರೆ. ಯೋಗದ ಬಗ್ಗೆ ಒಲವು ಹೊಂದಿದ್ದು ಮುಂದಿನ ರಾಜಕೀಯ ತಂತ್ರಗಾರಿಕೆಯಲ್ಲಿ ಮಗ್ನರಾಗಿದ್ದಾರೆ....

1 comment:

jomon varghese said...

ಈ ಬಾರಿಯ ಪೋಸ್ಟಿಂಗ್ ಕುತೂಹಲಕರವಾಗಿದೆ.ವಿಷಯ ಆಯ್ಕೆಯಲ್ಲಿ ಹಾಗೂ ಮಂಡನೆಯಲ್ಲಿ ಜಾಣ್ಮೆ ತೋರಿಸಿದ್ದೀರಿ.ತುಂಬಾ ಇಷ್ಟವಾಯಿತು.ನಮ್ಮ ಸಾಗರದಲ್ಲೂ ಹೀಗೊಬ್ಬರು ಶಾಸಕರು ಅಜ್ಞಾತವಾಸದಲ್ಲಿದ್ದಾರೆ.ಮತದಾರರು ಬ್ಯಾಟರಿ ಹಚ್ಚಿ ಹುಡುಕುತ್ತಿದ್ದಾರೆ!

ಧನ್ಯವಾದಗಳು.
ಜೋಮನ್