Wednesday, January 23, 2008

ಉತ್ತರಿಸಲಾಗದ ಪ್ರಶ್ನೆ !!



1958-59 ರಲ್ಲಿ ನಡೆದ ಘಟನೆ ಇದು, ಬೆಳ್ತಂಗಡಿ ತಾಲೂಕಿನ ಜಮೀನ್ದಾರರೊಬ್ಬರ ಮನೆಯನ್ನು ಮುರಿದು ಬೆಲೆಬಾಳುವ ಬಂಗಾ ರ, ಬೆಳ್ಳಿ ಸೇರಿದಂತೆ ನಗದನ್ನು ಅಪಹರಿಸಲಾಗಿತ್ತು.ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಅದಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಬಂಧಿಸಿದ್ದರು. ಕಳವು ಮಾಡಿದ ಚಿನ್ನಾಭರಣಗಳನ್ನು ಊರಿನ ಪಟೇಲರು ಹಣ ಕೊಟ್ಟು ಖರೀದಿಸಿರುವುದಾಗಿ ಬಾಯ್ಬಿಟ್ಟಿದ್ದರು. ನಂತರದಲ್ಲಿ ಪಟೇಲರಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ 4ಮಂದಿಯ ಮೇಲೆ ದೂರು ದಾಖಲಿಸಿ, ಅವರನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಯಿತು. ನಾನಾಗ ಅಲ್ಲಿನ ಮ್ಯಾಜಿಸ್ಟ್ರೇಟ್ ಆಗಿದ್ದೆ. ಪ್ರಕರಣದ ವಿಚಾರಣೆ ನಡೆಸಿ ಪಟೇಲರಿಗೆ ಜಾಮೀನು ನೀಡಿ, ಉಳಿದ ಮೂವರಿಗೆ ಜೈಲು ಶಿಕ್ಷೆ ವಿಧಿಸಿದ್ದೆ. ಅವರನ್ನು ಕೋರ್ಟ್ ಹಿಂಭಾಗದಲ್ಲಿ ಇದ್ದ ಜೈಲು ಕಂಬಿಯ ಹಿಂದೆ ತಳ್ಳಲಾಯಿತು. ಆದರೆ ಕೆಲವೆ ದಿನಗಳಲ್ಲಿ ಈ ಕಳ್ಳರು ಜೈಲಿನ ಸರಳುಗಳನ್ನು ಎಕ್ಸೋ ಬ್ಲೇಡ್‌‌ನಿಂದ ಕತ್ತರಿಸಿ ಪರಾರಿಯಾಗಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರ ಕೈಗೆ ಇಬ್ಬರು ಮತ್ತೆ ಸಿಕ್ಕಿಬಿದ್ದಿದ್ದರು. ಒಬ್ಬ ಮಾತ್ರ ತಲೆತಪ್ಪಿಸಿಕೊಂಡಿದ್ದ. ಇದರಿಂದಾಗಿ 2-3ಬಾರಿ ವಿಚಾರಣೆಯನ್ನು ಮುಂದೂಡಲಾಯಿತು.ಸ್ವಲ್ಪ ಸಮಯದ ಬಳಿಕ ಮೂರನೇ ಕಳ್ಳನನ್ನೂ ಸೆರೆಹಿಡಿದು,ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ವಿಚಾರಣೆ ಬಳಿಕ ಅವರವರ ಹಿನ್ನೆಲೆ ತಿಳಿದುಕೊಂಡು ಇಬ್ಬರಿಗೆ ಜಾಮೀನು ನೀಡಿ, ಮೂರನೇ ವ್ಯಕ್ತಿಗೆ ಜಾಮೀನು ತಿರಸ್ಕರಿಸಲಾಯಿತು.

ಆ ಸಂದರ್ಭದಲ್ಲಿ ಕಟಕಟೆಯಲ್ಲಿ ನಿಂತಿದ್ದ ಮೂರನೇ ಆರೋಪಿ, ಕಾನೂನು ಬಡವ-ಶ್ರೀಮಂತರಿಗೆ ಒಂದೇ ರೀತಿಯಾಗಿರಬೇಕು, ಪಟೇಲರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದೀರಿ, ಅವರಿಗೂ ಜಾಮೀನು ನಿರಾಕರಿಸಬೇಕಿತ್ತು ಎಂದು ವಕಾಲತ್ತು ಮಾಡಿದ್ದ. ಆಗ ನನ್ನ ತಾಳ್ಮೆ ಕೆಟ್ಟು ಹೋಗಿ ಸಿಟ್ಟಿನಿಂದ ಕೂಗಿ, ಸಾಕೋ ನಿನ್ನ ಕಾನೂನು, ನಿನ್ನನ್ನು ಜಾಮೀನಿನ ಮೇಲೆ ಬಿಡಲಾಗುವುದಿಲ್ಲ ಎಂದೆ.ಆಗ ಆತ, ಸರ್....ಕೋರ್ಟ್‌‌ನಲ್ಲಿ ಕಾನೂನು ಮಾತನಾಡದೇ ಬೇರೆ ಎಲ್ಲಿ ಸಾರ್ ಕಾನೂನು ಮಾತಾಡಬೇಕು ? (If I cannot speak law in the court where else can i) ಎಂದು ಪ್ರಶ್ನಿಸಿದ್ದ !!.

ಇದು ಆದೂರು ವೆಂಕಟ ರಾವ್ ಅವರ "Memoirs of judge" ಪುಸ್ತಕದಲ್ಲಿನ ಒಂದು (The unanswerable Question) ಅಧ್ಯಾಯದ ಕಥನ, ಹೀಗೆ 30 ಅಧ್ಯಾಯಗಳ ಈ ಪುಸ್ತಕದಲ್ಲಿ ರಾವ್ ಅವರು, ನ್ಯಾಯಾಧೀಶರಾಗಿದ್ದ ಸಂದರ್ಭ ನಡೆದ ಮರೆಯಲಾರದ ಘಟನೆಗಳನ್ನು ಚಿಕ್ಕ-ಚೊಕ್ಕದಾಗಿ ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟಿದ್ದಾರೆ.

ನಿಮಗೆಲ್ಲಾದರು ಈ ಪುಸ್ತಕ ಕಣ್ಣಿಗೆ ಕಾಣಿಸಿದರೆ ಓದಿ, ಇದರಲ್ಲಿ ನಿಟ್ಟೂರು ಶ್ರೀನಿವಾಸರಾಯರು, ನ್ಯಾಯಮೂರ್ತಿ ಮಳಿಮಠ, ಮುಖ್ಯನ್ಯಾಯಮೂರ್ತಿ ಕೆ.ಗೋವಿಂದ ಭಟ್, ಲೋಕಾಯುಕ್ತದಲ್ಲಿ ಹೆಸರುಗಳಿಸಿದ ವೆಂಕಟಾಚಲಯ್ಯ, ಜಗನ್ನಾಥ್ ಶೆಟ್ಟಿ, ಚಂದ್ರ ಚೂಡಾ ಮುಂತಾದವರೊಂದಿಗಿನ ಸ್ಮರಣಿ ಗಳಿಗೆಗಳನ್ನು, ಅವರ ಔದಾರ್ಯವನ್ನು ಬರಹದಲ್ಲಿ ಅನಾವರಣಗೊಳಿಸಿದ್ದಾರೆ.ಲೇಖರ ಪರಿಚಯ: ಆದೂರು ವೆಂಕಟ ರಾವ್ ಅವರು 1926ರಲ್ಲಿ ತಂಜಾವೂರಲ್ಲಿ ಜನಿಸಿದ್ದರು.

ಇವರ ತಂದೆ-ತಾಯಿ ದಕ್ಷಿಣ ಕನ್ನಡ ಮೂಲದವರು. ಎಸ್‌‌ಎಸ್‌‌ಎಲ್‌‌ಸಿ ಹಾಗೂ ಬಿಎಸ್ಸಿ ಪದವಿಗಳನ್ನು ಮಂಗಳೂರಿನಲ್ಲಿ ಪಡೆದಿದ್ದ ಅವರು, ಕಾನೂನು ಪದವಿಯನ್ನು ಮದ್ರಾಸ್‌‌ ಯೂನಿರ್ವಸಿಟಿಯಲ್ಲಿ ಪಡೆದಿದ್ದರು. 1954ರಿಂದ ಮಂಗಳೂರು, ಕುಂದಾಪುರ, ಬಿ.ಸಿ.ರೋಡ್, ಪುತ್ತೂರು,ಕೊಳ್ಳೇಗಾಲ, ಚಾಮರಾಜನಗರ, ವೀರಾಜಪೇಟೆ, ಮೈಸೂರು ಮುಂತಾದೆಡೆ ನ್ಯಾಯಾಧೀಶರಾಗಿದ್ದರು. 1981ರಲ್ಲಿ ನಿವೃತ್ತರಾಗಿದ್ದರು.

1 comment:

click4nothing said...

ಮೊದಮೊದಲು ಓದ್ತಾ ಇದ್ಯಾರೋ ರಿಟೈರ್‍ಡ್‌ ಜಡ್ಜ್‌ ಬರೆದಿರೋದು ಅಂದ್ಕೊಂಡೆ.... ನಂತರ ತಿಳಿತು ಅದು ಪುಸ್ತಕದ ಒಂದು ಭಾಗ ಅಂತ..... ತುಂಬ ಚೆನ್ನಾಗಿದೆ....

ಒಂದೊಳ್ಲೆ ಪುಸ್ತಕದ ಪರಿಚಯ ಮಾಡಿಕೊಟ್ಟಿದ್ದೀರ ಧನ್ಯವಾದಗಳು...


ವೆಬ್‌ ದುನಿಯಾದಲ್ಲಿದ್ದೀರ ಅಂತ ತಿಳಿಯಿತು.... ನಾನು ಕೂಡ ಮೀಡಿಯಾ ಪರ್ಸನ್ನೇ.......