Saturday, March 22, 2008

ಭಗತ್‌‌ಗೊಂದು 'ಸಲಾಂ'


ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿ ಉರಿಯುತ್ತಿದ್ದ ಸಂದರ್ಭ ಗಾಂಧಿ ಅಹಿಂಸೆಯ ಅಸ್ತ್ರದೊಂದಿಗೆ ಹೋರಾ ಡುತ್ತಿದ್ದರೆ, ಭಗತ್‌‌ನಂತಹ ತರುಣರು ಮಾಡು ಇಲ್ಲವೇ ಮಡಿ ಎನ್ನುವಂತಹ ಹೋರಾಟಕ್ಕೆ ಇಳಿದುಬಿಟ್ಟಿದ್ದರು. ಅದರ ಪರಿಣಾಮ ಎಂಬಂತೆ 1929 ಏಪ್ರಿಲ್ 9ರಂದು ಬ್ರಿಟಿಷ್ ಅಸೆಂಬ್ಲಿಯ ಒಳಗೆ ಎರಡು ಕಚ್ಛಾ ಬಾಂಬ್‌‌ಗಳನ್ನು ಎಸೆಯುತ್ತಾರೆ, ಹಾಗೆ ಬಾಂಬ್ ಎಸೆದವರು ಕಾಲಿಗೆ ಬುದ್ಧಿ ಹೇಳಿ ಓಡಿ ಹೋಗಿಲ್ಲ, ಬಿ.ಕೆ.ದತ್ತಾ ಮತ್ತು ಭಗತ್ ಸದನದ ಕುರ್ಚಿಯಲ್ಲಿ ಕುಳಿತು, ಬನ್ನಿ ನಮ್ಮನ್ನು ಬಂಧಿಸಿ ಅಂತ ಪೊಲೀಸರನ್ನೇ ಆಹ್ವಾನಿಸುತ್ತಾರೆ, ಬಂಧಿಸುವಾಗಲೂ ಯಾವುದೇ ಪ್ರತಿರೋಧವನ್ನು ಒಡ್ಡಿಲ್ಲ!!.

ದೇಶದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಚರಿತ್ರೆಯಲ್ಲಿ ಭಗತ್‌‌ ಸಿಂಗ್‌ನದ್ದು ಚಿರಸ್ಥಾಯಿಯಾದ ಹೆಸರು, ಭಾರತ ಸಂಗ್ರಾಮದ ಕ್ರಾಂತಿಕಾರಿ ಹಾಗೂ ಭಾರತದ ಪ್ರಥಮ ಮಾರ್ಕಿಸ್ಟ್‌‌ಗಳಲ್ಲಿ ಭಗತ್ ಒಬ್ಬರಾಗಿದ್ದರು. ಭಗತ್ 1907 ಸೆಪ್ಟೆಂಬರ್ 27ರಂದು ಪಂಜಾಬಿನ ಲಾಯಲ್‌‌ಪುರ ಎಂಬ ಜಿಲ್ಲೆಯ ಬಾಂಗಾ ಎಂಬ ಹಳ್ಳಿಯ ಸಿಖ್ ಸಮುದಾಯದ ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿ ದಂಪತಿಗಳ ಪುತ್ರನಾಗಿ ಜನಿಸಿದ್ದರು.

ಜಲಿಯನ್ ವಾಲಾ ಬಾಗ್ ದುರಂತದಿಂದ ಪ್ರಭಾವಿತರಾದ ಇವರು ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿದರು. ನಾವು ಇವತ್ತು ಭಗತ್,ರಾಜಗುರು, ಸುಖ್‌‌ದೇವ್‌‌ ಅವರನ್ನ ನೆನಪಿಸಿಕೊಳ್ಳಬೇಕು, ಒಂದೆಡೆ ಗಾಂಧಿ ಹಾಗೂ ಅಹಿಂಸಾ ಚಳವಳಿಯಲ್ಲಿ ತೊಡಗಿಕೊಂಡವರ ಹಿರಿಯರ ಗುಂಪಿನ ಮೇಲೆ ಅಪಾರ ಗೌರವ ಇದ್ದಿದ್ದರೂ ಕೂಡ, ಬ್ರಿಟಿಷರನ್ನು ಬಗ್ಗು ಬಡಿಯಲು ಅಹಿಂಸಾ ಮಾರ್ಗವೊಂದೇ ಪರಿಣಾಮಕಾರಿಯಾಗಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಈ ಯುವಪಡೆ ದಿಟ್ಟ ಹೋರಾಟಕ್ಕೆ ಧುಮುಕಿದ್ದವು. ಆಜಾದ್, ದತ್, ಪಡ್ಕೆ, ಚಾಪೇಕರ್ ಸಹೋದ ರರು ಹೀಗೆ ನೂರಾರು ಯುವಪಡೆ ಸ್ವಾತಂತ್ರ್ಯ ಹೋರಾಟದಲ್ಲಿ ನಿಸ್ವಾರ್ಥದಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು.

ಆ ನೆಲೆಯಲ್ಲಿ ಭಗತ್‌‌ನಂತಹವರು 23ರ ಹರೆಯದಲ್ಲಿ ಅವರಲ್ಲಿ ಉಕ್ಕುತ್ತಿದ್ದ ದೇಶಪ್ರೇಮ, ಬ್ರಿಟಿಷರೆಡೆಗೆ ಇದ್ದ ಆಕ್ರೋಶ, ವಿಚಾರಧಾರೆ ಗಂಭೀರವಾಗಿದ್ದವು. ಮಾ.22ರ ದಿ ಹಿಂದೂ ಆಂಗ್ಲ ಪತ್ರಿಕೆಯಲ್ಲಿ ಎಸ್.ಇರ್ಫಾನ್ ಹಬೀಬ್ ಅವರು(Bhagat singh as seen by Ramasami Periyar) ಭಗತ್ ಬಗ್ಗೆ ಬರೆಯುತ್ತಾ, ಭಗತ್‌‌ ವಿಚಾರಧಾರೆಗೆ ತಮಿಳುನಾಡಿನ ಇ.ವಿ.ರಾಮಸ್ವಾಮಿ ಪೆರಿಯಾರ್ ಅವರು ತಮ್ಮ ತಮಿಳು ವಾರಪತ್ರಿಕೆಯಾದ ಕುಡಿ ಅರಸುವಿನಲ್ಲಿ ಬರೆದ ಸಂಪಾದಕೀಯ ಹಾಗೂ ಪೆರಿಯಾರರಿಗೆ ಭಗತ್‌‌ನೆಡೆಗೆ ಇದ್ದ ಅಭಿಮಾನದ ಕುರಿತು ಉಲ್ಲೇಖಿಸಿದ್ದಾರೆ.

ಗಾಂಧಿ ಮತ್ತು ಕಾಂಗ್ರೆಸ್ ಭಗತ್‌‌ನನ್ನು ನೇಣುಕುಣಿಕೆಯಿಂದ ತಪ್ಪಿಸಲು ವಿಫಲರಾದರು, ಅಲ್ಲದೇ ಯಾರೊ ಬ್ಬರು ಭಗತ್‌‌ನನ್ನು ಗಲ್ಲಿಗೇರಿಸಿದ ಬಗ್ಗೆ ಸಂತಾಪ ಸೂಚಿಸಿಲ್ಲ, ಆದರೆ ಭಗತ್ ರಾಷ್ಟ್ರದ ಸ್ವಾಭಿಮಾನಿ ಪ್ರಜೆಗಳ ದೃಷ್ಟಿಯಲ್ಲಿ ಹೀರೋ ಆಗಿ ನೆಲೆಗೊಂಡಿದ್ದ ಎಂಬುದಾಗಿ ಸಂಪಾದಕೀಯದಲ್ಲಿ ಸ್ವಾಮಿ ಬರೆದಿದ್ದರು.

ಭಗತ್ ಕೇವಲ ಕೋಮುವಾರು ಅಷ್ಟೇ ಅಲ್ಲ, ಒಡಕಿನ ರಾಜಕೀಯ ನೀತಿಯನ್ನೂ ವಿರೋಧಿಸುತ್ತಿದ್ದ, ಭಾರತೀ ಯ ಜಾತಿ ಪದ್ಧತಿಯನ್ನೂ ದ್ವೇಷಿಸುತ್ತಿದ್ದ, ಮನುಷ್ಯರ ಹುಟ್ಟನ್ನು ಜಾತಿ ಆಧಾರದ ಮೇಲೆ ಪರಿಗಣಿಸಿ ಅಸ್ಪ್ರಶ್ಯ ತೆಯಿಂದ ನೋಡುತ್ತಿರುವ ಭಾವನೆಯ ವಿರುದ್ಧ ಸಿಡಿದೇಳುವ ಮನೋಭಾವದ ಬಗ್ಗೆ, ಕುರುಡು ನಂಬಿಕೆಯನ್ನು ವಿರೋಧಿಸುತ್ತಿದ್ದ ಸಿಂಗ್‌‌ನ ನಾನೇಕೆ ನಾಸ್ತಿಕ ಎಂಬ ವಿಚಾರಲಹರಿಗಳು ಪೆರಿಯಾರರ ಸಂಪಾದಕೀಯದಲ್ಲಿ ಢಾಳಾಗಿ ಬಳಸಿಕೊಂಡಿರುವುದನ್ನು ಹಬೀಬ್ ವಿವರಿಸಿದ್ದಾರೆ.

ಇಂಕಿಲಾಬ್ - ಜಿಂದಾಬಾದ್ ಘೋಷಣೆಯೊಂದಿಗೆ ಅವರ ಧಮನಿಧಮನಿಗಳಲ್ಲಿ ಹರಿಯುತ್ತಿದ್ದ ಸ್ವಾತಂತ್ರ್ಯದ ಕಿಚ್ಚು ಬರೇ ಬೂಟಾಟಿಕೆಯದ್ದಾಗಿರಲಿಲ್ಲ. ಅವರ ಹೋರಾಟ, ಕೆಚ್ಚು ಹೋರಾಟಗಾರರಿಗೆ, ಯುವಪೀಳಿಗೆಗೆ ಮಾದರಿಯಾಗಿದ್ದವು. ದೇಶದ ಸ್ವಾತಂತ್ರ್ಯಕ್ಕಾಗಿ ಮಾರ್ಚ್ ೨೩, ೧೯೩೧ ರಂದು ನಗುನಗುತ್ತಾ ನೇಣುಕುಣಿಕೆಗೆ ಕೊರಳನೊಡ್ಡಿದ ಭಗತ್, ರಾಜ್‌‌ಗುರು, ಸುಖ್‌‌ದೇವ್ ಅವರ ಬಲಿದಾನಕ್ಕೊಂದು ಹೃತ್ಪೂರ್ವಕ ನಮನ...

ಪುಸ್ತಕ ಬಿಡುಗಡೆ: 'Shaheed Bhagat Singh's Jail Diary' ಎಂಬ 400 ಪುಟಗಳ ಆಂಗ್ಲ ಭಾಷೆಯ ಪುಸ್ತಕವನ್ನು ದೆಹಲಿಯ ಹೋಪ್‌ ಇಂಡಿಯಾ ಭಗತ್‌ ಸಿಂಗ್‌ ಹುತಾತ್ಮರಾದ ದಿನವಾದ (ಇಂದು) ಮಾ.23 ರಂದು ಪುಸ್ತಕ ಬಿಡುಗಡೆಗೊಳಿಸುತ್ತಿದೆ.

5 comments:

chetana said...

ಬ್ಲಾಗಿನಲ್ಲಿ ಭಗತ್ ಸಿಂಗನನ್ನು ನೋಡಿ ಖುಶಿಯಾಯ್ತು. ಇವತ್ತು ಶಹೀದ್ ದಿನವಲ್ಲವೇ? ಸುಖದೇವ್, ರಾಜಗುರು ಮತ್ತು ಭಗತರಿಗೆ ನನ್ನದೂ ಒಂದು ಸಲಾಮ್. ಬ್ಲಾಗ್ ಜಗತ್ತಿನಲ್ಲಿ ಇದು ಭಗತನ ಬಗ್ಗೆ ಎರಡನೆ ಬರಹ. ಇದು ಹೀಗೇ ಮುಂದುವರೆಯಲೆಂದು ಆಶಿಸುವೆ.
- ಚೇತನಾ

ಬ್ರಹ್ಮಾನಂದ ಎನ್.ಹಡಗಲಿ said...

ದೇಶದ ಸ್ವಾತಂತ್ರ್ಯಕ್ಕಾಗಿ ನೇಣುಕುಣಿಕೆಗೆ ಕೊರಳನೊಡ್ಡಿದ ಭಗತ್, ರಾಜ್‌‌ಗುರು, ಸುಖ್‌‌ದೇವ್ ಅವರಿಗೆ ನನ್ನದು ಒಂದು ನಮನವಿರಲಿ. ಅಂಥ ಧೀರ ಸೇನಾನಿಗಳು ಮತ್ತೊಮ್ಮೆ ಈ ದೇಶದಲ್ಲಿ ಹುಟ್ಟಿ ಬರಲಿ ಎಂದು ಆಶಿಶುವೆ. ಭಗತ್ ಸಿಂಗ್ ಬಗ್ಗೆ ಬರೆದ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

Nagendra Trasi said...

ಚೇತನಾ

ಬರಹಕ್ಕೆ ನೀಡಿದ ಪ್ರತಿಕ್ರಿಯೆಗೆ ಮತ್ತು ಹಾರೈಕೆಗೆ ಹೃತ್ಪೂರ್ವಕ ಧನ್ಯವಾದಗಳು.

ನಾಗೇಂದ್ರ ತ್ರಾಸಿ

Nagendra Trasi said...

ಹಾಯ್ ಬ್ರಹ್ಮಾ,

ಆಗಾಗ ಬಹುಮುಖಿಯೊಳಗೆ ಇಣುಕಿ,ಪ್ರತಿಕ್ರಿಯಿಸುತ್ತಿರುವುದಕ್ಕೆ ಅಭಿನಂದನೆಗಳು.

ನಾಗೇಂದ್ರ ತ್ರಾಸಿ.

Nagendra Trasi said...

ಚೇತನಾ

ಬರಹಕ್ಕೆ ನೀಡಿದ ಪ್ರತಿಕ್ರಿಯೆಗೆ ಮತ್ತು ಹಾರೈಕೆಗೆ ಹೃತ್ಪೂರ್ವಕ ಧನ್ಯವಾದಗಳು.

ನಾಗೇಂದ್ರ ತ್ರಾಸಿ