Tuesday, May 27, 2008

ಹೂ ಕಿಲ್ಡ್ ಗಾಂಧಿ.....


ಸ್ವಾತಂತ್ರ್ಯ ಚಳವಳಿಗಾರರಲ್ಲಿ ನನ್ನನ್ನ ಬಹುವಾಗಿ ಕಾಡಿದ ವ್ಯಕ್ತಿ ''ವೀರ ಸಾವರ್‌‌ಕರ್'', ಪಿಯುಸಿಯಲ್ಲಿ ಇತಿಹಾಸ ಓದುವಾಗ ಸಾವರ್‌‌ಕರ್ ಹೋರಾಟದ ಬಗ್ಗೆ ಅಭಿಮಾನ, ಮೆಚ್ಚುಗೆ ತುಂಬಿತ್ತು. ಆ ಸಂದರ್ಭದಲ್ಲಿ ಆರ್‌ಎಸ್‌‌ಎಸ್‌ನ ಶಿವರಾಮು ಅವರು ಬರೆದ ''ಆತ್ಮಾಹುತಿ' ಪುಸ್ತಕ ಓದಿದ ಮೇಲಂತೂ ಎಂತಹ ವ್ಯಕ್ತಿಯಾದರು ಸಾವರ್‌ಕರ್ ದೇಶಪ್ರೇಮದ ಬಗ್ಗೆ ಅಪಸ್ವರ ಎತ್ತುವಂತಿಲ್ಲ. ಆದರೆ ಯಾವಾಗ ಅಟಲ್‌‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌‌ಡಿಎ ಸರಕಾರ ಸಂಸತ್ ಭವನದಲ್ಲಿ ಗಾಂಧಿ ಫೋಟೋದ ಮುಂಭಾಗ ಸಾವರ್‌‌ಕರ್ ಪೋಟೋ ತೂಗು ಹಾಕಿದರೋ ಆಗ ಪ್ರತಿಭಟನೆ ಭುಗಿಲೆದ್ದಿತು.
ಗಾಂಧಿ ಹತ್ಯೆ ಸಂಚು ರೂಪಿಸಿದ ಸಾವರ್‌‌ಕರ್‌‌ರಂತಹವರಿಗೆ ಅಲ್ಲಿ ಸ್ಥಾನ ನೀಡುವುದು ರಾಷ್ಟ್ರಪಿತನಿಗೆ ಮಾಡಿದ ಅವಮಾನ ಎಂಬುದಾಗಿ ಬಿಜೆಪಿಯನ್ನು ಹೊರತುಪಡಿಸಿ ಎಲ್ಲಾ ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ 50 ವರ್ಷಗಳ ಕಾಲ ಕರಿನೀರ ಶಿಕ್ಷೆಯನ್ನು ಅನುಭವಿಸಿದ ವೀರ ಸಾವರ್‌‌ಕರ್ ನಿಜಕ್ಕೂ ವೀರರೇ ? ಅವರು ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಬ್ರಿಟಿಷರಲ್ಲಿ ಗೋಗರೆದಿದ್ದರು....ಹೀಗೆ ಒಂದೊಂದೆ ಅಂಶಗಳು ತಿಳಿಯತೊಡಗಿದಾಗ ಸಾವರ್‌‌ಕರ್ ಕುರಿತ ಪರ-ವಿರೋಧದ ಪುಸ್ತಕಗಳನ್ನು ಜಾಲಾಡತೊಡಗಿದ್ದೆ.ಆ ನಿಟ್ಟಿನಲ್ಲಿ ಕನ್ನಡದ ಪ್ರಮುಖ ಲೇಖಕ, ಅನುವಾದದಲ್ಲಿ ಸಿದ್ಧಹಸ್ತರಾಗಿರುವ ರವಿ ಬೆಳೆಗೆರೆಯವರು ಇದೀಗ 95ರ ವಯೋವೃದ್ದ ಮನೋಹರ್ ಮಳಗಾಂವ್‌‌ಕರ್ ಅವರು ಬರೆದಿರುವ ''ಹೂ ಕಿಲ್ಡ್ ಗಾಂಧಿ'' ಪುಸ್ತಕದ ಅನುವಾದವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಬೆಳೆಗರೆಯವರು ಈ ಮೊದಲು ಬರೆದ ಗಾಂಧಿ ಮತ್ತು ಹತ್ಯೆ ಸಾಕಷ್ಟು ಚರ್ಚೆಗೆ ಈಡಾಗಿತ್ತು. ಇದೀಗ ಸಾವರ್‌ಕರ್‌‌ಗೆ ಸಂಬಂಧಿಸಿದ ಪುಸ್ತಕದ ಬಿಡುಗಡೆಗೆ ಮುನ್ನವೇ ಅವರು ಹಾಯ್‌‌ಬೆಂಗಳೂರು ಇತ್ತೀಚೆಗಿನ ಸಂಚಿಕೆಯಲ್ಲಿ, ತಾನು ಪುಸ್ತಕ ಅನುವಾದದಲ್ಲಿ ತೊಡಗಿದಾಗ, ನನಗೆ ಹೊಸದಾದ ಗೋಡ್ಸೆ, ಅಪ್ಟೆ ಕಾಣಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ.ಅದಕ್ಕೂ ಮೊದಲು ನಾನು ಉದಾಹರಿಸ ಹೊರಟಿರುವುದು ಕನ್ನಡದ ಹಿರಿಯ ಲೇಖಕರು ಆಗಿರುವ ಕೋ.ಚೆನ್ನಬಸಪ್ಪ ಅವರು ''ಗಾಂಧಿ ಹಂತಕರು ಯಾರು'' ಎಂಬ ಪುಸ್ತಕ ಕೂಡ ಈಗ ಮಾರುಕಟ್ಟೆಯಲ್ಲಿದೆ.ಚೆನ್ನಬಸಪ್ಪ ಅವರು ಗಾಂಧೀಜಿ ಹತ್ಯೆ ಸೇರಿದಂತೆ ಸಾವರ್‌‌ಕರ್ ಅವರು ದಯಾಭಿಕ್ಷೆ ಬೇಡಿದ ಪತ್ರದ ನಕಲನ್ನೂ ಕೂಡ ಪುಸ್ತಕದಲ್ಲಿ ದಾಖಲಿಸಿದ್ದಾರೆ.ಸಾವರ್‌‌ಕರ್‌‌ರನ್ನು ತನ್ನ ಗುರುವೆಂದೇ ನಂಬಿದ್ದ ಗೋಡ್ಸೆಯ ಮೇಲೆ ಅವರಿಗೆ ಅಪಾರ ಪ್ರೀತಿ, ಆದರೂ ಸಾವರ್‌‌ಕರ್ ಅವರು ಗಾಂಧಿ ಹತ್ಯೆಯ ವಿಚಾರಣೆ ವೇಳೆ ತನಗೆ ಗೋಡ್ಸೆ ಪರಿಚಯವೇ ಇಲ್ಲವೆಂಬಂತೆ ನಟಿಸುವ ಮೂಲಕ, ಚಾಣಾಕ್ಷತನದಿಂದ ತಮ್ಮ ಮೇಲಿನ ಆರೋಪದಿಂದ ಬಚಾವಾಗಿದ್ದರು ಎಂದು ಸಾಕ್ಷ್ಯಾಧಾರಗಳ ಸಹಿತ ವಿವರಿಸಿದ್ದಾರೆ.ಭಾಷಾಂತರದಲ್ಲಿ ಸಿದ್ಧಹಸ್ತರಾಗಿರುವ ರವಿಬೆಳೆಗೆರೆಯವರ ಪುಸ್ತಕ ಬಿಡುಗಡೆಯಾದ ಮೇಲೆ ಅದು ಪಡೆಯುವ ಪ್ರಚಾರ,ಚರ್ಚೆ ಬಹುಶಃ ಚೆನ್ನಬಸಪ್ಪ ಅವರ ಹೊತ್ತಗೆ ದೊರೆತಿಲ್ಲ ಎಂಬುದು ಸತ್ಯ.
ಆ ನಿಟ್ಟಿನಲ್ಲಿ ನಾನು ಕೂಡ ಮನೋಹರ್ ಮಳ್‌ಗಾಂವ್‌‌ಕರ್ ಅವರ ಇಂಗ್ಲಿಷ್ ಆವೃತ್ತಿಯನ್ನು ಬೆಳೆಗೆರೆ ಕನ್ನಡಕ್ಕೆ ತರ್ಜುಮೆ ಮಾಡಿ ಬಿಡುಗಡೆಗೊಳಿಸುವುದನ್ನು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ.ಆದರೂ ಮೇ 28ಕ್ಕೆ ಸಾವರ್‌‌ಕರ್ ಅವರ ಜನ್ಮ ಜಯಂತಿ ಆ ಹಿನ್ನೆಲೆಯಲ್ಲಿ ಚೆನ್ನಬಸಪ್ಪ ಅವರು ಬರೆದಿರುವ ಪುಸ್ತಕದ ಅಂಶವನ್ನು ದಾಖಲಿಸುತ್ತ ಗಾಂಧಿ ಹತ್ಯೆ ಬಗೆಗಿನ ಮತ್ತೊಂದು ಮುಖದ ಪರಿಚಯವಾಗುವ ನಿಟ್ಟಿನಲ್ಲಿ ಈ ಬರಹ....
ಮಹಾತ್ಮನ ಹತ್ಯಾಕಾಂಡ: ಗಾಂಧಿ ಹತ್ಯೆಗೆ ತಾನೊಬ್ಬನೆ ಕಾರಣ ಅದರಲ್ಲಿ ಮತ್ತ್ಯಾರೂ ಭಾಗಿಯಾಗಿಲ್ಲ ಎಂದು ನಾಥೂರಾಮ್ ನ್ಯಾಯಾಲಯದಲ್ಲಿ ''ಕೊನೆಯ''ವರೆಗೂ ವಾದಿಸಿದ್ದ. ಸಾವರ್‌‌ಕರರು ತಮಗೆ ನಾಥೂರಾಮ್ ಯಾರೆಂಬ ಬಗ್ಗೆ ಸರಿಯಾಗಿ ತಿಳಿದಿಲ್ಲ ಎಂದು ವಿಚಾರಣೆ ವೇಳೆ ವಾದಿಸಿದ್ದರು. ಅಲ್ಲದೇ ಗಾಂಧಿ ಹತ್ಯೆ ವಿಚಾರಣೆ ವೇಳೆ ಒಂದು ದಿನವೂ ನಾಥೂರಾಮನನ್ನು ಕಣ್ಣೆತ್ತಿ ನೋಡಿರಲಿಲ್ಲ!! 1930ರಿಂದ 1948ರವರೆಗಿನ ಗಳಸ್ಯ ಕಂಠಸ್ಯ ಗೆಳೆತನ ಈ ರೀತಿ ಅಪರಿಚಿತವಾಗಲು ಕಾರಣವೇನು ?.ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲೂ ಗಾಂಧಿ ಮೇಲೆ ನಾಲ್ಕೈದು ಬಾರಿ ಹತ್ಯಾ ಪ್ರಯತ್ನಗಳು ನಡೆದಿದ್ದವು.
ಆದರೆ ಆಫ್ರಿಕಾದ ''ಸ್ಮಟ್ಸ್'' ಆಡಳಿತ ಗಾಂಧಿ ಕೊಲೆಯನ್ನು ತಪ್ಪಿಸಿತ್ತು. ಭಾರತದಲ್ಲಿ ಆಗಿನ ಬ್ರಿಟಿಷ್ ಆಡಳಿತ ಗಾಂಧಿಗೆ ಪ್ರಾಣಾ ಪಾಯವಾಗದಂತೆ ರಕ್ಷಿಸಿಕೊಂಡು ಬಂದಿತ್ತು. ಆದರೆ ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯ ಬಂದ ಆರು ತಿಂಗಳಲ್ಲಿ ಅವರ ಪ್ರಾಣ ರಕ್ಷಣೆ ಮಾಡಲಾರದೆ ಹಿಂದೂಗಳ ಕೈಯಲ್ಲೇ ಹತರಾಗಿದ್ದರು. ಆಗ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕಡು ವಿರೋಧಿ ವಿನ್ಸೆಂಟ್ ಚರ್ಚಿಲ್ ಕೂಡ, ನಾವು ಗಾಂಧಿ ಪ್ರಾಣವನ್ನು 30ವರ್ಷ ರಕ್ಷಿಸಿದ್ದೇವು, ಸ್ವತಂತ್ರ (ಗಾಂಧಿ ಹತ್ಯೆ ನಡೆಯಲೇಬೇಕಾದದ್ದು ಎಂಬುದಕ್ಕೆ ಇಂದು ಬಹುತೇಕ ಸಹಮತ ಇದೆ!!) ಭಾರತ ಒಂದು ವರ್ಷ ಕೂಡ ಅವರನ್ನು ರಕ್ಷಿಸಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದರು.ನಾಥೂರಾಮ ಗೋಡ್ಸೆ ನಾನೇ ಗಾಂಧಿ ಹತ್ಯೆ ಮಾಡಿದ್ದ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆದರೂ ಮತ್ಯಾಕೆ ಗಾಂಧಿ ಹತ್ಯೆಯ ಕುರಿತು ಕೆದಕಬೇಕು ಎಂಬ ಪ್ರಶ್ನೆ ಉದ್ಭವಿಸಿಬಹುದು.
ಹೌದು, ಗಾಂಧಿ ಹತ್ಯೆಯನ್ನು ಮಾಡಿಸಿದವರು ಯಾರು?!ಯಾರು ಶಿಕ್ಷಾರ್ಹರು ಎಂಬುದು ನ್ಯಾಯಾಲಯದ ಮುಂದಿದ್ದ ಪ್ರಶ್ನೆ ಯಾಗಿತ್ತು. ಒಂದು ವೇಳೆ ನಾಥೂರಾಮ್ ಗೋಡ್ಸೆ ಒಬ್ಬನೇ ಆರೋಪಿತನಾಗಿದ್ದರೆ ದೋಷಾರೋಪಣೆಯನ್ನು ಓದಿ ಹೇಳಿ ಅವನ ತಪ್ಪೊಪ್ಪಿಗೆಯ ಹೇಳಿಕೆಯನ್ನು ನ್ಯಾಯಾಧೀಶರು ದಾಖಲಿಸಿ ಅವನು ದೋಷಿ ಎಂದು ತೀರ್ಪು ನೀಡುವುದಕ್ಕೆ ಯಾವ ಕಷ್ಟವೂ ಇರುತ್ತಿರಲಿಲ್ಲ.ಆದರೆ ಆ ಸಂದರ್ಭದಲ್ಲಿ ಸಂಗ್ರಹಿಸಿದ ದಾಖಲೆ, ಮಾಹಿತಿ ಆಧಾರದ ಮೇಲೆ ವೀರ ಸಾವರ್‌‌ಕರ್ ಗಾಂಧಿ ಹತ್ಯೆಯ ಪಿತೂರಿಯಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ನೆರವಾಗಿದ್ದರು ಎಂಬ ಅಂಶ ತನಿಖಾಧಿಕಾರಿ ನಗರವಾಲಾರಿಗೆ ಮನವರಿಕೆ ಆಗಿತ್ತು. ಹತ್ಯೆ ನಡೆಸಿದ ಆರೋಪಿಗಳೊಂದಿಗೆ ಅವರಿಗೆ ಸಂಪೂರ್ಣ ಸಂಪರ್ಕವಿತ್ತು.
ನಿಕಟ ಪರಿಚಯ, ಬೆಂಬಲ ಇತ್ತೆಂದು ಮಾಹಿತಿ ಸಂಗ್ರಹಿಸಿದ್ದರು.ಅವರನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಿ ಬಂಧಿಸುವುದೇ ಬೇಡವೇ ಎಂಬ ಬಗ್ಗೆ ಮುಂಬೈ ಗೃಹಮಂತ್ರಿ ಮೊರಾರ್ಜಿ ದೇಸಾಯಿ ಜತೆ ಸಮಾಲೋಚಿನೆ ನಡೆಸಿ, ಸಾವರ್‌‌ಕರರು ಕಳೆದ ಶತಮಾನದ ಆದಿಯಲ್ಲಿ ಅಪ್ರತಿಮ ಸಾಹಸ ಮಾಡಿದ್ದರು ಎಂಬುದರಲ್ಲಿ ಸಂಶಯ ಇಲ್ಲ, ಆ ಪ್ರಯತ್ನದಲ್ಲಿ ಅಂಡಮಾನ್ ದ್ವೀಪದಲ್ಲಿ ದೀರ್ಘಾವಧಿಯ ಸೆರೆಮನೆವಾಸ ಅನುಭವಿಸಿದ್ದರು. ಅವರು ಬರೆದ ಭಾರತೀಯ ಪ್ರಥಮ ಸ್ವಾತಂತ್ರ್ಯ ಸಮರ(1857) ಆಗ ಪ್ರಸಿದ್ಧವಾಗಿದ್ದು, ಸಾವಿರಾರು ದೇಶಪ್ರೇಮಿಗಳಿಗೆ ಸ್ಫೂರ್ತಿ ನೀಡಿತ್ತು.
ಈ ಹಿನ್ನೆಲೆಯಲ್ಲಿ ವೀರ ಸಾವರ್‌‌ಕರರು ಹಿಂದೆ ದೇಶಕ್ಕಾಗಿ ಬಹಳ ತ್ಯಾಗ ಮಾಡಿದ್ದಾರೆ ಅವರನ್ನು ವಿಚಾರಣೆಗೆ ಗುರಿ ಪಡಿಸುವದೇ ಎಂದು ನಗರವಾಲ್ ಕೇಳಿದ್ದರು. ಅದಕ್ಕೆ ಮೊರಾರ್ಜಿ ದೇಸಾಯಿ, ಅವರು ಈ ಹಿಂದೆ ಮಾಡಿದ ತ್ಯಾಗ ಇಂದು ಮಾಡಿರುವ ಕೃತ್ಯದಿಂದ ಅಳಿಸಿ ಹೋಗಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಮೊರಾರ್ಜಿ ಆದೇಶ ನೀಡಿದ್ದರು. ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಕೂಡ ವಿಚಾರಣೆಗೆ ಅನುಮತಿ ನೀಡಿದ್ದರು.1948 ಜನವರಿ 15 ಮತ್ತು 17ರಂದು ನಾಥೂರಾಮ್ ಗೋಡ್ಸೆ, ನಾರಾಯಣ ಅಪ್ಟೆ, ಬಡಗೆ ಸಾವರ್‌ಕರ್ ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಹೊರಬರುವ ಸಂದರ್ಭದಲ್ಲಿ ''ಯಶಸ್ವಿಯಾಗಿ ಹಿಂದಿರುಗಿ ಬನ್ನಿ''ಎಂದು ಸಾವರ್‌‌ಕರರು ಆಶೀರ್ವದಿಸಿದ್ದರು ಎಂದು ಸಾಕ್ಷ್ಯ ಹೇಳಲಾಗಿತ್ತು. ಆದರೆ ವಿಚಾರಣೆ ವೇಳೆ ಸಾವರ್‌‌ಕರರು ತರ್ಕಬದ್ಧವಾಗಿ ವಾದ ಮಂಡಿಸಿ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದರು.
ದೀರ್ಘ ವಿಚಾರಣೆಯ ನಂತರ ಅವರನ್ನು ಸಂಶಯದ ಸೌಲಭ್ಯ(Benefit of Doubt)ಆಧಾರದ ಮೇಲೆ ಖುಲಾಸೆ ಮಾಡಲಾ ಗಿತ್ತು.ಸಾವರ್‌ಕರ್ ಹೊರತಾಗಿ ಉಳಿದ ಐದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಗೋಡ್ಸೆ ಮತ್ತು ನಾರಾಯಣ ಅಪ್ಟೆಗೆ ಗಲ್ಲು ಶಿಕ್ಷೆ ವಿಧಿಸಿ, ರಾಮಕೃಷ್ಣ ಕರಕರೆ, ಮದನಲಾಲ ಪಹ್ವಾ, ಶಂಕರ ಕ್ರಿಸ್ಟಯ್ಯ, ಗೋಪಾಲ ಗೋಡ್ಸೆ,ಡಾ.ಪರಚುರೆಗೆ ಜೀವಾವಧಿ ಶಿಕ್ಷೆ ನೀಡಲಾಯಿತು.ಇದೀಗ ಮುಖ್ಯವಾದದ್ದೆಂದರೆ ಗಾಂಧಿ ಹತ್ಯೆಯ ಹಿಂದಿನ ಪ್ರೇರಣೆ ಯಾವುದು ? ಹಿಂದು-ಮುಸ್ಲಿಂ ಐಕ್ಯತೆ ಪ್ರಶ್ನೆ, ದೇಶ ವಿಭಜನೆಗೆ ಪ್ರಬಲ ವಿರೋಧಿಯಾಗಿದ್ದವರು ಗಾಂಧೀಜಿ.
ನನ್ನ ಹೆಣವನ್ನು ತುಳಿದು ದಾಟಿ ದೇಶವನ್ನು ವಿಭಜಿಸಬೇಕಾದೀತು ಎಂಬ ಗಾಂಧಿ ಮಾತಿನ ವಿರುದ್ಧ ಗೋಡ್ಸೆ ಕೆಂಡಮಂಡಲನಾಗಿ, ದೇಶ ಇಬ್ಭಾಗವಾದ ಬಳಿಕ ಗಾಂಧಿ ಇನ್ನು ಬದುಕಿರಬಾರದು, ಅವರಿನ್ನೂ ಬದಕಿಯೇ ಇದ್ದಾರೆ, ಅವರನ್ನು ಮುಗಿಸಬೇಕು ಎಂದು ಘೋಷಿಸಿದ್ದ. ಮತ ಧರ್ಮದ ಆಧಾರದ ಮೇಲೆ ರಾಷ್ಟ್ರ, ರಾಜ್ಯ ನಿರ್ಮಾಣ ಸಾಧುವಲ್ಲ ಎಂದು ವಾದಿಸಿದವರು ಗಾಂಧೀಜಿ.
ಆದರೆ ಮತೀಯ ಆಧಾರದ ಮೇಲೆ ದ್ವಿ ರಾಷ್ಟ್ರ ಸಿದ್ದಾಂತವನ್ನು ಪ್ರತಿಪಾದಿಸಿದವರು ಸಾವರ್‌ಕರ್ !!. ಅವರ ಈ ಸಿದ್ದಾಂತ ಅವ ಲಂಬಿಸಿಯೇ ಜಿನ್ನಾ ಪಾಕಿಸ್ತಾನದ ಹಕ್ಕು ಸಾಧಿಸಿದ್ದು, ಹಾಗಾದರೆ ಸಾವರ್‌‌ಕರ್, ಗೋಡ್ಸೆಯ ರಾಜಕೀಯ ಸಿದ್ದಾಂತ ಏನು?. ಸಾವರ್‌‌ಕರಿಸಂ ತತ್ವದ ಪ್ರಕಾರ ನಡೆಯುವ ವಧೆ, ಹತ್ಯೆ ಕ್ಷಮಾರ್ಹ ಅವರ ತತ್ವಕ್ಕೆ ಆಧಾರವಾಗಿ ಜರ್ಮನಿಯಲ್ಲಿ ಆರ್ಯರಿಗೂ, ಯಹೂದಿ ಜನಾಂಗದವರಿಗೂ ಆದ ನರಮೇಧ ಉದಾಹರಿಸುತ್ತಾರೆ, ಇದೇ ತತ್ವವನ್ನು ಡಾ.ಹೆಗ್ಡೆವಾರ್ ವಿರಚಿತ With Nation ಹಾಗೂ ಗುರೂಜಿ ಗೋಲ್ವಾಲ್ಕರ್ ಅವರು Bunch of Thought's ಅವರ ಪಾಲಿಗೆ ಗೀತೋಪದೇಶವಾಗಿದೆ. ಜರ್ಮನಿಯೇ ಅವರ ಆದರ್ಶ ದೇಶ, ಹಿಟ್ಲರನೇ ಅವರ ಆದರ್ಶ ನಾಯಕ!! ಇಂತಹ ಅಪಸವ್ಯಗಳೇ ಪಾಕಿಸ್ತಾನ ಸ್ಥಾಪನೆಗೆ ಕಾರಣ, ಈ ದ್ವೇಷದ ಜ್ವಾಲಾಗ್ನಿ ಗಾಂಧಿಯನ್ನು ಬಲಿತೆಗೆದುಕೊಂಡ ನಂತರ ಅದು ಅಲ್ಲಿಗೆ ಮುಗಿದು ಹೋಗಿಲ್ಲ...
ಇದು ಗುಜರಾತಿನಲ್ಲಿನ ನರಮೇಧ..ಬಾಬರಿ ಮಸೀದಿ ಧ್ವಂಸದೊಂದಿಗೆ ಮುಂದುವರಿದಿದೆ, ಸಾವರ್‌‌ಕರಿಸಂನ ಈ ತತ್ವ ಅನಾಹುತ ಕ್ಕೆ ಕಾರಣವಾಗಿದೆ, ಹಾಗಾದರೆ ಭಾರತದ ಇಬ್ಭಾಗಕ್ಕೆ ಕಾರಣ್ಯಾರು ಗಾಂಧಿ ಅಥವಾ ಸಾವರ್‌ಕರರೇ...?ನಾನೇಕೆ ಗಾಂಧಿಯನ್ನು ಕೊಂದೆ ಎಂಬ ಪುಸ್ತಕ ಓದಿದ ಬಹುತೇಕರು ಗಾಂಧಿ ದೇಶದ್ರೋಹಿಯಾಗಿ-ಗೋಡ್ಸೆ ಮಹಾನ್ ದೇಶಭಕ್ತ ಎಂದು ಬೊಬ್ಬಿರಿ ಯುವುದು ಹಾಸ್ಯಾಸ್ಪದ. ಧೀರ-ವೀರ ಎಂದು ಖ್ಯಾತಿ ಗಳಿಸಿದ ವಿನಾಯಕ ದಾಮೋದರ ಸಾವರ್‌ಕರ್ ಅಂಡಮಾನ್ ಜೈಲಿನಲ್ಲಿದ್ದಾಗ 1911ರಲ್ಲಿ ಭಾರತ ಸರಕಾರಕ್ಕೆ ಕ್ಷಮಾ ಯಾಚನಾ ಪತ್ರ ಕಳುಹಿಸಿದ್ದರು !!.
ಪತ್ರದ ಉಲ್ಲೇಖ- ''ಕೊನೆಯದಾಗಿ, 1911ರಲ್ಲಿ ನಾನು ಕಳುಹಿಸಿದ ಕ್ಷಮಾಯಾಚನಾ ಮನವಿ ಪತ್ರವನ್ನು ತಾವು ಪರಾಂಬರಿಸಿ ಕೊಂಡು ಇಂಡಿಯಾ ಸರಕಾರಕ್ಕೆ ಅದನ್ನು ಮಂಜೂರಾತಿಗಾಗಿ ಕಳುಹಿಸಿಕೊಡಬೇಕೆಂದು ಘನವೆತ್ತ ತಮಗೆ ನೆನಪು ಮಾಡ ಬಹು ದೇ?....ಹೀಗೆ ಸಾಗುವ ''ವೀರ''ಸಾವರ್‌‌ಕರರ ಪತ್ರ ನನ್ನ ಮುಂದಿನ ಭವಿಷ್ಯ ನಡತೆ ಪರಿವರ್ತನೆಯಾಗುತ್ತದೆ,ನನ್ನನ್ನು ಜೈಲಿನಲ್ಲಿ ಇಡುವುದರಿಂದ,ಬಿಡುವುದರಿಂದಾಗುವ ಯಾವ ಒಳಿದು ಆಗಲಾರದು. ಆದ್ದರಿಂದ ಉಡಾಳ ಮಗ ಸರಕಾರದ ಮಾತೃ ಮಂದಿರದ ಬಾಗಿಲಿಗಲ್ಲದೆ ಮತ್ತೆಲ್ಲಿಗೆ ಹೋದಾನು!! ತಾವು ಈ ಕೆಲವು ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುವಿರೆಂದು ನಂಬುತ್ತೇನೆ.
ಸಹಿ
ವಿ.ಡಿ.ಸಾವರ್‌‌ಕರ
ಬಳಿಕ 5-01-1924ರಲ್ಲಿ ಮುಂಬೈ ಸರಕಾರ, ವಿನಾಯಕ ದಾಮೋದರ ಸಾವರ್‌‌‌ಕರ್ ಅವರನ್ನು ಬಿಡುಗೊಳಿಸಲು ನಿರ್ಧರಿಸಿರು ವುದಾಗಿ ಪತ್ರ ಮುಖೇನ ತಿಳಿಸಿ, 1898ರ ಕ್ರಿಮಿನಲ್ ಪ್ರೊಸಿಜರ್ ಕೋಡ್ ಸೆಕ್ಷನ್ 401ರ ಪ್ರಕಾರ, ಆಡಳಿತ ಮಂಡಳಿಯ ಮುಖ್ಯ ಸ್ಥರಾದ ರಾಜ್ಯಪಾಲರು ದ್ವೀಪಾಂತರ ಶಿಕ್ಷೆಗೆ ಗುರಿಯಾಗಿರುವ ವಿ.ಡಿ.ಸಾವರ್‌‌ಕರ್‌‌ರ ಇನ್ನು ಉಳಿದಿರುವ ಶಿಕ್ಷೆಯನ್ನು ಮನ್ನಾ ಮಾಡಲಾಗಿದೆ ಎಂದು ಆದೇಶ ನೀಡಲಾಗಿದೆ.
ಶಿರಗಾಂವ 9ನೇ ಮೇ 1925.

2 comments:

Supreeth.K.S said...

ಇತಿಹಾಸದ ಒಂದು ಕಾಲ ಘಟ್ಟವನ್ನು ಈಗ ಕುಳಿತು ಕಾಣುವಾಗ ನಮಗೆ ಹಲವು ಅಡ್ಡಿಗಳು ಕಂಡುಬರುತ್ತವೆ. ಇತಿಹಾಸವನ್ನು ಓದಬಾರದು ಅಧ್ಯಯನ ಮಾಡಬೇಕು ಎಂಬುದು ನನ್ನ ಅನಿಸಿಕೆ. ಕಾರಣ ಇಷ್ಟೇ, ಒಂದು ಘಟನೆಯನ್ನು ಅದರ ಕಾಂಟೆಕ್ಸ್ಟ್ ನಿಂದ ಹೊರಗಿಟ್ಟು ನೋಡಿದರೆ ಬೇರೆಯದೇ ಆದ ಅರ್ಥವನ್ನು ಪಡೆಯುತ್ತದೆ.
ಸಾವರ್ಕರ ಸಿದ್ಧಾಂತದಿಂದಾಗಿ ಗೋಧ್ರಾ ನರಮೇಧ ನಡೆಯಿತು ಎಂದು ಹೇಳುತ್ತಲೇ ಬರುತ್ತಿರುವುದರ ಹಿಂದೆ ಇರುವ ಅಸೌಖ್ಯ ಮನಸ್ಥಿತಿಯನ್ನು ಮೊದಲು ಗುರುತಿಸಬೇಕು. ದೇಶದಲ್ಲಿ ನಡೆಯುವ ಪ್ರತಿ ಬಾಂಬ್ ಬ್ಲಾಸ್ಟಿನ ಹಿಂದೆ ನಿಮಗೆ ಕುರಾನಿನ ಸಿದ್ಧಾಂತ ಕಾಣುತ್ತದೆಯೇ? ದೇಶ ಒಡೆದ ಮಹಮ್ಮದ್ ಅಲಿ ಜಿನ್ನಾನ ತತ್ವ ಭಾರತದಲ್ಲಿರುವ ಇಸ್ಲಾಮಿಕ್ ಮೂಲಭೂತವಾದಿಗಳಲ್ಲಿ ಕಾಣಿಸುತ್ತದೆಯೇ? ಬಾಂಬೆಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ನಿಮಗೆ ಹಿಂದು ಮುಸ್ಲಿಮ್ ಗಲಭೆಯ ಪ್ರತ್ಯುತ್ತರವಾಗಿ ಕಾಣಿಸುತ್ತದೆ ಆದರೆ ಅದು ಗೋಧ್ರಾದಲ್ಲಿ ಕಾಣುವುದಿಲ್ಲ. ಇರಲಿ ಬಿಡಿ, ಇತಿಹಾಸವನ್ನು ಸಾದ್ಯಂತವಾಗಿ ಓದೋಣ. ತಿಳಿವು ಬರುವ ಮೊದಲೇ ಮೋಹನ ದಾಸ ಕರಮಚಂದ ಗಾಂಧಿಯನ್ನು ಮಹಾತ್ಮ ಎಂದು ಒಪ್ಪಿಕೊಂಡಾಗಿದೆ. ಸಾವರ್ಕರ ಬಗ್ಗೆ ಆ ತಪ್ಪನ್ನು ಮಾಡುವುದು ಬೇಡ. ಮಳಗಾಂವ್‌ಕರ್ ಏನು ಬರೆದಿದ್ದಾರೆ ಓದೋಣ...

ಜಾತ್ರೆ said...

Registration- Seminar on the occasion of kannadasaahithya.com 8th year Celebration

ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ