Sunday, June 29, 2008

ಎಡಪಕ್ಷಗಳ ''ಎಡ''ಬಿಡಂಗಿತನ....


ಕಾರ್ಮಿಕರ, ರೈತರ, ಶೋಷಿತರ ಧ್ವನಿಯಾಗಿದ್ದ ಕಮ್ಯೂನಿಷ್ಟ್ ಪಕ್ಷ ಯಾವ ಹಾದಿ ಹಿಡಿದಿದೆ. ಅಧಿಕಾರದ ಗದ್ದುಗೆ ಏರಲು ಎಲ್ಲಾ ಪಕ್ಷಗಳಿಗೂ ಒಂದೊಂದು ಅಜೆಂಡಾ ಇದ್ದಂತೆ, ಎಡಪಕ್ಷಗಳು ಕಾರ್ಮಿಕ, ರೈತ ಸಮಸ್ಯೆಗಳ ಅಜೆಂಡಾ ಮುಂದಿಟ್ಟು ಅಧಿಕಾರ ಪಡೆದು ಅದು ಸಾಧಿಸಿದ್ದಾದರು ಏನನ್ನು?. ಸತತವಾಗಿ ಕೆಂಪುಕೋಟೆಯನ್ನು ಭದ್ರಪಡಿಸಿ ಕೊಂಡಿರುವ ಪಶ್ಚಿಮಬಂಗಾಲದಲ್ಲಿ ರೈತರ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಗಮನ ಹರಿಸಿದರೆ, ಎಡಪಕ್ಷಗಳ ತತ್ವ ಸಿದ್ದಾಂತಗಳು ಗಾಳಿಗೆ ತೂರಿ ಹೋಗಿದೆ ಎಂಬುದರಲ್ಲಿ ಯಾವ ಅನುಮಾನವಿಲ್ಲ.
ಜಾಗತೀಕರಣದ ಪ್ರಬಲ ವಿರೋಧಿಯಾಗಿರುವ ಎಡಪಕ್ಷದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಆಧುನಿ ಕತೆಯ ಹರಿಕಾರರಾಗಲು ಹೊರಟಿದ್ದಾರೆ. ತಾವು ಅಭಿವೃದ್ದಿ ವಿರೋಧಿಗಳಲ್ಲ, ಹಳೇ ಸಿದ್ದಾಂತಕ್ಕೆ ಜೋತು ಬಿದ್ದರೆ ಪ್ರಗತಿ ಸಾಧ್ಯವಿಲ್ಲ ಎಂದು ವಿಶ್ಲೇಷಣೆಗಿಳಿದ ಬುದ್ಧದೇವ್, ಪ್ರಗತಿಯ ಹರಿಕಾರರಾಗಲು ಹೋಗಿ ರೈತರ ಜನಸಾಮಾನ್ಯರ ಬದುಕನ್ನು ಬೀದಿಪಾಲು ಮಾಡಿಬಿಟ್ಟಿದ್ದಾರೆ.
ಪಶ್ಚಿಮಬಂಗಾಳದಲ್ಲಿ 1947 ರಿಂದ 2000ವರೆಗೆ ಅಭಿವೃದ್ಧಿ ಹೆಸರಿನಲ್ಲಿ 47ಲಕ್ಷ ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಇದ ರಿಂದ ಸುಮಾರು 70 ಲಕ್ಷ ಜನರು ತೊಂದರೆ ಅನುಭವಿಸುವಂತಾಗಿದೆ. ಇದರಲ್ಲಿ 36ಲಕ್ಷ ಜನ ವಾಸಿಸಲು ಜಾಗವಿಲ್ಲದೆ ಪರದಾಡುವಂತಾದರೆ, 34 ಲಕ್ಷ ಜನ ಹೊಟ್ಟೆಪಾಡಿಗಾಗಿ ಇದ್ದ ಸಾಗುವಳಿ ಭೂಮಿಯನ್ನೂ ಕಿತ್ತುಕೊಂಡಿದ್ದರು! ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಈ ರೀತಿ ಕೈಗಾರಿಕಾ ಹೆಸರಿನಲ್ಲಿ ಭೂಮಿ ಕಳೆದುಕೊಂಡವರು ಸರಾಸರಿ 60ಮಿಲಿಯನ್ ಮಂದಿ!
ಅದರಲ್ಲಿ ಶೇ.10ರಷ್ಟು ಭಾಗ ಪಶ್ಚಿಮಬಂಗಾಳದ ರೈತರು. ಹೀಗೆ ಭೂಮಿ ಕಳೆದುಕೊಂಡವರಲ್ಲಿ ಶೇ.20 ಬುಡಕಟ್ಟು ಜನಾಂಗ, ಶೇ.30 ದಲಿತರು, ಇನ್ನುಳಿದ ಶೇ.20 ಅತ್ಯಂತ ಕಡು ಬಡವರು, ಮೀನು ಹಿಡಿಯುವವರು ಮತ್ತು ಕೂಲಿ ಕಾರ್ಮಿಕರು. ಇವರಾರು ಧ್ವನಿ ಎತ್ತಲು ಶಕ್ತರಾಗದ ಜನ!!
1951-1955ರವರೆಗೆ ನಡೆದ ಅಭಿವೃದ್ದಿ ಕಾರ್ಯದಲ್ಲಿ ಭೂರಹಿತವಾದ ಶೇ.28ರಷ್ಟು ಜನರಿಗೆ ಪುನರ್ವಸತಿ ಕಲ್ಪಿಸಿಕೊಡಲಾಗಿತ್ತು. ಅದರಂತೆ ಒರಿಸ್ಸಾ ಶೇ.33ರಷ್ಟು, ಗೋವಾ ಶೇ.34, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪುನರ್ವಸತಿ ಕಲ್ಪಿಸಿಕೊಟ್ಟ ರಾಜ್ಯ ಪಶ್ಚಿಮಬಂಗಾಳ(ಕೇವಲ ಶೇ.9), ಮತ್ತೊಂದು ರಾಜ್ಯ ಕೇರಳ(ಶೇ.13), ಇವೆರಡೂ ರಾಜ್ಯಗಳು ರೈತರ ಮತ್ತು ಕಾರ್ಮಿಕರ ಪರ ಎಂದು ಅಧಿಕಾರದ ಗದ್ದುಗೆ ಏರಿದ್ದರೂ ಸಹ ಇವರು ರೈತರ ಬಗ್ಗೆ ತೋರಿದ ಕಾಳಜಿ ಎಷ್ಟರ ಮಟ್ಟಿಗೆ ಇದೆ ಎಂಬುದು ಈ ಅಂಕಿ-ಅಂಶಗಳಿಂದ ಸಾಬೀತಾಗುತ್ತದೆ.!! ರೈತರ ಬದುಕಿನ ಬಗ್ಗೆ, ಅವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಪಶ್ಚಿಮಬಂಗಾಳದಲ್ಲಿ ಒತ್ತಡ ಬಿದ್ದಿದ್ದರೆ ಅದು ಮಾನವ ಹಕ್ಕುಗಳ ಕಾರ್ಯಕರ್ತರಿಂದ.
ಸಿಂಗೂರ್‌ನಲ್ಲಿ ಭೂಮಿ ಕಳೆದುಕೊಂಡವರ ರೈತರಿಗೆ ಪುನರ್ವಸತಿ ಕಲ್ಪಿಸಿಕೊಡುವ ಬಗ್ಗೆ ಪಶ್ಚಿಮಬಂಗಾಳ ಸರಕಾರ ಆಶ್ವಾಸನೆ ನೀಡಿದೆ. ಆದರೆ 70 ಲಕ್ಷ ಜನರಿಂದ ಜಾಗ ಕಿತ್ತುಕೊಂಡಿದ್ದರೂ ಸಹ ಅವರ ಹೊಟ್ಟೆಪಾಡಿಗಾಗಲಿ, ಪುನರ್ವಸತಿ ಕುರಿತಾಗಲಿ ಸರಕಾರ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ!.ಪಶ್ಚಿಮಬಂಗಾಳ ಹೆಚ್ಚಿನ ಭೂಮಿಯನ್ನು ವಶಪಡಿಸಿಕೊಳ್ಳುವ ಮೂಲಕ ಖಾಸಗಿ ಬಂಡವಾಳ ಹೂಡಿಕೆದಾರರಿಗೆ ಅವಕಾಶ ಮಾಡಿಕೊಡುತ್ತಿದೆ ವಿನಃ ಜನಸಾಮಾನ್ಯರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಸುಮಾರು 250 ರೈತರು ಬೆಳೆದಿರುವ 997 ಹೆಕ್ಟೇರ್ ಕೃಷಿ ಭೂಮಿಯನ್ನು ಸಿಂಗೂರ್‌ನಲ್ಲಿ ವಶಪಡಿಸಿಕೊಂಡಿತ್ತು. ಆದರೆ ಆ ಭೂಮಿಯನ್ನು ನೋಂದಾಯಿಸಿರಲಿಲ್ಲ, ಆ ನಿಟ್ಟಿನಲ್ಲಿ ಅವರಾರಿಗೂ ಪರಿಹಾರವೂ ಇಲ್ಲ, ಪುನರ್ವಸತಿಗೆ ಅವಕಾಶವೂ ಇಲ್ಲ. ಹೀಗೆ ಕೃಷಿ ಭೂಮಿ ಕಳೆದುಕೊಂಡ ಒಂದು ಸಾವಿರ ಕುಟುಂಬಗಳು ವಿವಿಧ ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದೆ. ಕೃಷಿ ಮಾಡುತ್ತಿರುವ ರೈತರು ದಿನದ ಸಂಬಳಕ್ಕಾಗಿ ದುಡಿಯುವವರು, ಶೇ.50ಕ್ಕಿಂತಲೂ ಹೆಚ್ಚಿನ ಜನರಿಗೆ ಕೆಲಸವಿಲ್ಲ. ಅವರೆಲ್ಲ ಬಡತನ ರೇಖೆಗಿಂತ ಕೆಳಗಿರುವವರು.
ಹೆಚ್ಚಿನವರು ತಮ್ಮ ಮಕ್ಕಳನ್ನು ಶಾಲೆಯಿಂದ ಬಲವಂತವಾಗಿ ಬಿಡಿಸಿ, ಕೆಲಸ ಮಾಡಲು ಕಳುಹಿಸುತ್ತಿದ್ದಾರೆ. ಅದಕ್ಕಿಂತಲೂ ಆಘಾತಕಾರಿ ಅಂಶ ಆದಾಯ ಗಳಿಕೆಗಾಗಿ ಹೆಚ್ಚಿನವರು ಪಾತಕ ಕೃತ್ಯ ಮತ್ತು ವೇಶ್ಯಾವಾಟಿಕೆಗೆ ಇಳಿದುಬಿಟ್ಟಿದ್ದಾರೆ!! ಇವೆಲ್ಲದರ ಪರಿಣಾಮ ಪಶ್ಚಿಮಬಂಗಾಳ ಸರಕಾರ ಈಗ ಕರಾಳ ನೋವನ್ನು ಅನುಭವಿಸುತ್ತಿದೆ. ಇತ್ತೀಚೆಗಷ್ಟೇ ಪಶ್ಚಿಮಬಂಗಾಳದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನ ಎಡಪಕ್ಷಗಳನ್ನು ತಿರಸ್ಕರಿಸಿದ್ದಾರೆ.
ಜೂನ್ 29ರ ಟೈಮ್ಸ್ ಆಫ್ ಇಂಡಿಯಾದಲ್ಲಿ ಖ್ಯಾತ ಲೇಖಕಿ ಮಹಾಶ್ವೇತ ದೇವಿಯವರು ಕಾರೋಲ್ ಅಂದ್ರಾದೆ ಅವರಿಗೆ ನೀಡಿದ ಸಂದರ್ಶನದಲ್ಲಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಅವರು ಗುಜರಾತ್‌ನ ನರೇಂದ್ರ ಮೋದಿಗಿಂತ ಕಡೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತ್ಯತೀತ, ರೈತ ಪರ ಮುಖವಾಡದ ಎಡಪಕ್ಷ ಮೂಲಭೂತವಾದಿಗಳ ಒತ್ತಡಕ್ಕೆ ಮಣಿದೇ ತಸ್ಲೀಮಾ ನಸ್ರೀನ್‌ಳಿಗೆ ರಕ್ಷಣೆ ನೀಡಲಾಗದೆ ಕೋಲ್ಕತಾದಿಂದ ಹೊರಗಟ್ಟಿದೆ.
ಪಶ್ಚಿಮಬಂಗಾಳದ ನಂದಿಗ್ರಾಮದಲ್ಲಿ ನಡೆದ ಹಿಂಸೆ, ಅತ್ಯಾಚಾರ ಭಯಾನಕ ಹುಟ್ಟಿಸುವಂತಾದದ್ದು, ಆ ಕಾರಣಕ್ಕಾಗಿಯೇ ಪಶ್ಚಿಮಬಂಗಾಳದ ಹೃದಯಭಾಗದಂತಿರುವ ನಂದಿಗ್ರಾಮ ಮತ್ತು ಸಿಂಗೂರ್‌ನಲ್ಲಿ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಎಡಪಕ್ಷವನ್ನು ಜನ ತಿರಸ್ಕರಿಸಿದ್ದಾರೆ.
ನಿಜಕ್ಕೂ ಪಶ್ಚಿಮಬಂಗಾಳ ಸರಕಾರಕ್ಕೆ ಆಡಳಿತದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಹಾಶ್ವೇತ ದೇವಿ ಹೇಳಿರುವ ಮಾತಿನಲ್ಲಿ ಯಾವುದೇ ಹುರುಳಿಲ್ಲದಿಲ್ಲ. ಅಲ್ಲದೇ ಗುಜರಾತ್‌ನಲ್ಲಿ ಕೋಮು ಹಿಂಸಾಚಾರ ನಡೆದ ಬಳಿಕ ತಾನು ಅಹಮದಾಬಾದ್, ಬರೋಡಾ ಮತ್ತು ಸೂರತ್‌ಗೆ ಭೇಟಿ ನೀಡಿದ್ದೆ, ಅಲ್ಲಿ ಉತ್ತಮವಾದ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿದೆ, ವಿದ್ಯುತ್ ವ್ಯವಸ್ಥೆ ಮಾದರಿಯಾಗಿದೆ. ಅದೇ ಪಶ್ಚಿಮಬಂಗಾಳವನ್ನು ಒಮ್ಮೆ ನೋಡಿ, ರಸ್ತೆ ಇಲ್ಲ, ಆರೋಗ್ಯ ಕೇಂದ್ರ, ವಿದ್ಯುತ್ ಏನೂಂದ್ರೆ ಏನೂ ಇಲ್ಲ ಇಲ್ಲಿ ಎಂದು ದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಅಣುಒಪ್ಪಂದದಲ್ಲಿಯೂ ಖ್ಯಾತೆ ತೆಗೆಯುತ್ತಿರುವ ಎಡಪಕ್ಷಗಳು ಯಾವ, ಸಿದ್ದಾಂತ, ತಾತ್ವಿಕ ನೆಲೆಗಟ್ಟಿನ ಮೇಲೆ ಹೋರಾಟ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದೇ ಜನರಲ್ಲಿ ಗೊಂದಲ ಹುಟ್ಟಿಸುತ್ತಿದ್ದರೆ, ಮತ್ತೊಂದೆಡೆ ಎಡಪಕ್ಷಗಳ ಧೋರಣೆ ಕಾರ್ಮಿಕ ವರ್ಗ ಸೇರಿದಂತೆ ಜನಸಾಮಾನ್ಯರಲ್ಲೂ ರೇಜಿಗೆ ಹುಟ್ಟಿಸಿದೆ. ಎಡಪಕ್ಷಗಳು ಎತ್ತ ಸಾಗುತ್ತಿವೆ.....

No comments: