Sunday, June 29, 2008

ರಜನೀಶ್‌‌ರ ಶೂನ್ಯ ನಾವೆ.....

ಓಶೋ ರಜನೀಶ್ ಮಾತು ಎಷ್ಟು ಸುಂದರವೋ, ಅವರ ತರ್ಕಬದ್ದವಾದ ಬರಹವೂ ಅಷ್ಟೇ ಆಪ್ತವಾಗುತ್ತವೆ. ಆದರೆ ರಜನೀಶ್ ಬಗ್ಗೆ ಒಂದು ವರ್ಗ ತೀವ್ರವಾಗಿ ವಿರೋಧಿಸುತ್ತದೆ, ಆತ ಸೆಕ್ಸ್ ಗುರು, ಲೈಂಗಿಕತೆ ಬಗ್ಗೆ ಮಾತನಾಡುತ್ತಾನೆ ಹೀಗೆ ಆರೋಪಗಳು ಪುಂಖಾನುಪುಂಖವಾಗಿ ಹೊರಬೀಳುತ್ತವೆ. ಆದರೆ ರಜನೀಶ್ ರಾಜಕಾರಣಿ, ಪಂಡಿತ, ಪುರೋಹಿತ, ಮುಲ್ಲಾ, ಪಾದ್ರಿ ಹೀಗೆ ಎಲ್ಲದರ ಬಗ್ಗೆಯೂ ಟೀಕಿಸಿ ಮಾತನಾಡಿದ್ದಾರೆ.

ಯಾವುದೇ ಕಟ್ಟುಪಾಡಿಗೆ ಒಳಗಾಗಿ ಮತಾಂಧರಂತೆ, ಒಂದು ವರ್ಗದ ವಕ್ತಾರರಂತೆ ಅವರು ಮಾತನಾಡಿಲ್ಲ ಆ ಕಾರಣಕ್ಕಾಗಿಯೇ ಅವರು ಇಷ್ಟವಾಗುತ್ತಾರೆ. ರಜನೀಶ್ ಚಾಂಗ್ ತ್ಸು ಅವರ ಹಿನ್ನೆಲೆಯನ್ನಿಟ್ಟುಕೊಂಡು ಮಾತನಾಡಿದ ಶೂನ್ಯ ನಾವೆಯಲ್ಲಿನ ಒಂದು ಅಂಶವನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಯಾಕೆಂದರೆ ರಜನೀಶ್ ಯಾವುದರ ಬಗ್ಗೆಯೇ ಮಾತನಾಡಲಿ, ಅದು ನಮ್ಮನ್ನು ಅಷ್ಟು ಆಕರ್ಷಿಸುತ್ತದೆ. ಇವತ್ತಿನ ಸ್ಥಿತಿಗತಿ, ನಮ್ಮ ಕಾರ್ಯದ ಒತ್ತಡ, ನಾವು ಆ ಸನ್ನಿವೇಶದ ನಡುವೆ ಸಿಕ್ಕಿಬೀಳುತ್ತಿರುವುದನ್ನು ನೋಡಿದರೆ, ರಜನೀಶ್ ಅವರು ಈ ಮಾತು ಸತ್ಯ ಎನ್ನಿಸುತ್ತದೆ....

ಅವರ ಪ್ರಕಾರ ಮನುಷ್ಯ ಅನುಪಯುಕ್ತನಾಗಿರಬೇಕು, ಅರೇ ಇದೇನಪ್ಪಾ, ಎಲ್ಲರೂ ಕ್ರಿಯಾಶೀಲರಾಗಿ ಅಂದರೆ ಈತ ರಜನೀಶರ ಅನುಪಯುಕ್ತರಾಗಿರಿಯನ್ನೇ ಬಹಳ ಖುಷಿಕೊಡುವ ವಿಚಾರ ಎಂದು ಬರೆಯುತ್ತಿದ್ದಾರಲ್ಲಪ್ಪ ಅಂತ ಹುಬ್ಬುಗಟ್ಟಿಕ್ಕಬೇಡಿ. ಅದನ್ನು ಅವರು ಒಂದು ಕಥೆಯ ಮೂಲಕ ವಿವರಿಸುತ್ತಾರೆ. ಒಂದು ನಗರದಲ್ಲಿನ ಯುವಕರನ್ನು ಬಲಾತ್ಕಾರವಾಗಿ ಸೇನೆಗೆ ಸೇರಿಸಲ್ಪಟ್ಟಿದ್ದರಂತೆ. ಏಕೆಂದರೆ ಅವರೆಲ್ಲರೂ ಉಪಯುಕ್ತರು. ಆದರೆ ಒಬ್ಬ ಗೂನು ಬೆನ್ನಿನವನನ್ನು ಮಾತ್ರ ಸೇರಿಸಿಕೊಂಡಿಲ್ಲ.

ಈತ ಅನುಪಯುಕ್ತ ಎಂದು ಬಿಟ್ಟುಬಿಟ್ಟಿದ್ದರು. ನೀವು ಗೂನು ಬೆನ್ನಿನವನಂತಿರಿ, ಏಕೆಂದರೆ ಇವರ ದೃಷ್ಟಿಯಲ್ಲಿ ಉಪಯುಕ್ತರು ಸದಾ ಗೊಂದಲಕ್ಕೆ ಒಳಗಾಗುವವರು. ಜಗತ್ತು ನಿಮ್ಮನ್ನು ಬಳಸಿಕೊಳ್ಳುವುದು, ಪ್ರತಿಯೊಬ್ಬರು ನಿಮ್ಮನ್ನು ಉಪಯೋಗಿಸಲು ಸಿದ್ದರಾಗಿರುವರು, ಹಸ್ತಕ್ಷೇಪ ಮಾಡುತ್ತಲೇ ಇರುತ್ತಾರೆ, ನಿಮ್ಮನ್ನಾಳಲು ಸದಾ ಸಿದ್ದರಾಗಿರುತ್ತಾರೆ. ನೀವು ಅಪ್ರಯೋಜಕರಾಗಿದ್ದಾಗ ನಿಮ್ಮನ್ನು ಜನ ಮರೆತೇ ಬಿಡುತ್ತಾರೆ.

ನಿಮ್ಮನ್ನು ನಿಮ್ಮ ಮೌನದಲ್ಲಿರಲು ಬಿಡುವರು. ಅವರು ನಿಮ್ಮ ಬಗ್ಗೆ ಚಿಂತೆ ಮಾಡುವುದಿಲ್ಲ. ಆ ಕಾರಣಕ್ಕಾಗಿಯೇ ರಜನೀಶ್ ಆ ಮಾತನ್ನು ಬಹಳ ಒತ್ತಿ ಹೇಳಿದ್ದಾರೆ. ಎಚ್ಚರಿಕೆಯಿಂದಿರಿ ಮತ್ತು ಬಲು ಉಪಯುಕ್ತರಾಗದಿರಿ. ಹೀಗಿರದಿದ್ದರೆ ಎಲ್ಲರೂ ನಿಮ್ಮನ್ನು ಶೋಷಣೆ ಮಾಡುವರು. ನಂತರ ಇವರು ನಿಮ್ಮನ್ನು ನಿರ್ವಹಿಸುವರು, ನಿಯಂತ್ರಿಸುವರು, ಮತ್ತಾಗ ನೀವು ಗೊಂದಲಕ್ಕೆ ಒಳಗಾಗುವಿರಿ.

ಯಾಕೆಂದರೆ ನೀವೀಗ ರಾಜಕೀಯದಲ್ಲಿನ ದೊಂಬರಾಟವನ್ನು ಗಮನಿಸಿ ರಜನೀಶ್ ಮಾತುಗಳು ಸತ್ಯ ಎನಿಸುತ್ತದೆ. ಅಲ್ಲಿ 20-30ವರ್ಷ ಕತ್ತೆ (? ) ದುಡಿದ ಹಾಗೇ ದುಡಿದು ತಮಗೆ ಉನ್ನತ ಹುದ್ದೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತಾರೆ, ಆದರೆ ಕೊನೆಗೆ ಅವರನ್ನು ಹೇಳದೇ ಕೇಳದೆ ಒಂದೋ (ಸಿಂಧ್ಯಾ ತರ, ಅವರೇನೂ ಬಿಎಸ್ಪಿಗಾಗಿ ಹೆಚ್ಚು ದುಡಿಯಲಿಲ್ಲ ಬಿಡಿ) ಮೂಲೆಗುಂಪು ಮಾಡುತ್ತಾರೆ, ಇಲ್ಲ ಕಿತ್ತೊಗೆಯುತ್ತಾರೆ.

ಜೆಡಿಎಸ್‌, ಕಾಂಗ್ರೆಸ್, ಬಿಜೆಪಿ ಹೀಗೆ ಮೂಲೆಗುಂಪು ಮಾಡಿದ ಉದಾಹರಣೆ ಬಹಳಷ್ಟಿದೆ. ಆದರೆ ನಿರುಪಯುಕ್ತತೆಯಲ್ಲಿ ಅದರದ್ದೇ ಆದ ಉಪಯುಕ್ತತತೆ ಇದೆ ಎಂಬುದು ರಜನೀಶ್ ಅಭಿಮತ. ಇದೊಂದು ಜೀವಂತ ಅಂಶ ನೀವಿದನ್ನು ಪೂರ್ಣವಾಗಿ ಬಿಟ್ಟು ಬಿಟ್ಟರೆ ಆಗ ಯಾವುದೂ ಸಹ ಉಪಯುಕ್ತವಲ್ಲ, ನಿಷ್ಪ್ರಯೋಜಕ ವಸ್ತುಗಳು ಇರುವುದರಿಂದಲೇ ಉಪಯುಕ್ತ ವಸ್ತುಗಳು ಇರುವುದು.ಆದರೆ ಜಗತ್ತಿನಲ್ಲಿ ಏನಾಗುತ್ತಿದೆ ನೋಡಿ, ವಿನೋದದ ಎಲ್ಲಾ ಚಟುವಟಿಕೆಗಳನ್ನೂ ನಾವು ಇಲ್ಲವಾಗಿಸಿದ್ದೇವೆ.

ಏಕೆಂದರೆ ನಮ್ಮ ಅನಿಸಿಕೆ, ಆಗ ನಮ್ಮಲ್ಲಿಯ ಶಕ್ತಿಯನ್ನು ಪೂರ್ತಿ ಉಪಯೋಗಕರವಾದುದಕ್ಕೆ ವಿನಿಯೋಗಿಸಬಹುದು ಎಂದು. ಆದರೆ ಕೆಲಸವಿಂದು ಬೇಸರ ತರುವಂತಾಗಿದೆ, ನಾವಿಂದು ವಿರುದ್ಧ ಧ್ರುವದೆಡೆಗೆ ಸಾಗಲೇಬೇಕಾಗಿದೆ...ನಿಮ್ಮ ಸುತ್ತಲಿನ ಯಶಸ್ವಿ ವ್ಯಕ್ತಿಗಳನ್ನು ನೋಡಿ, ರಾಜಕಾರಣಿಗಳು, ಧನವಂತರು, ಬೃಹತ್ ಕೈಗಾರಿಕೋದ್ಯಮಿಗಳನ್ನು ಏನಾಗುತ್ತಿದೆ ಅವರಿಗೆ? ಅವರು ಸಂಗ್ರಹಿಸಿರುವ ವಸ್ತುಗಳನ್ನು ನೋಡಬೇಡಿ, ನೇರವಾಗಿ ಅವರನ್ನು ನೋಡಿ.

ನೀವೇನಾದರು ಅವರ ಬಳಿ ಇರುವ ವಸ್ತುಗಳನ್ನು ನೋಡಿದರೆ ಮೋಸ ಹೋಗುವಿರಿ, ವಸ್ತುಗಳಿಗೆ ಅಲ್ಸರ್ ಬರುವುದಿಲ್ಲ, ಕಾರುಗ ಳಿಗೆ ಹೃದಯಾಘಾತವಾಗುವುದಿಲ್ಲ, ಮನೆಗಳನ್ನು ಆಸ್ಪತ್ರೆಗೆ ಸೇರಿಸುವುದಿಲ್ಲ. ಅದಕ್ಕೆ ನೀವು ವಸ್ತುಗಳನ್ನು ನೋಡಬೇಡಿ ಎನ್ನುವ ರಜನೀಶ್, ಈ ವಸ್ತುಗಳ ಮಧ್ಯೆ ಇರುವ ಮನುಷ್ಯನನ್ನು ನೋಡಿ ಎಂದೆನ್ನುತ್ತಾರೆ, ಯಾಕೆಂದರೆ ಆಗ ನಿಮಗೆ ಕಾಣುವುದು ಆತನ ಮತ್ಸರ, ಬಡತನ, ಮುಖವಾಡದ ಬದುಕು, ಆಗ ಭಿಕ್ಷುಕ ಕೂಡ ಈತನಿಗಿಂತ ಮೇಲಾಗಿ ಕಾಣಿಸುತ್ತಾನೆ. ಈತನಿಗಿಂತ ಶ್ರೀಮಂತ ಆತನಾಗುತ್ತಾನೆ. ಬಡವನ ಜೀವನ ಶ್ರೀಮಂತನ ಜೀವನಕ್ಕಿಂತ ಶ್ರೀಮಂತವಾಗಿರುತ್ತದೆ.... ಈಗ ಹೇಳಿ ರಜನೀಶ್ ಮಾತು ಎಲ್ಲೋ ಒಂದೆಡೆ ನಿಜವೆನಿಸುವುದಿಲ್ಲವೇ......

4 comments:

Supreeth.K.S said...

ನರೇಂದ್ರರೇ ಸೊಗಸಾದ ಬರಹವಿದು.
ನೀವು ಅನುಮತಿಸಿದರೆ ಇದನ್ನು ನಮ್ಮ ಬ್ಲಾಗಿಗೆ (http://oshohakki.wordpress.com/) ಹಾಕುವೆ. ನಿಮಗಿಷ್ಟವಿದ್ದರೆ ಮಾತ್ರ.
ಯಾವುದಕ್ಕೂ ಒಮ್ಮೆ ಪತ್ರಿಸಿ : ನನ್ನ ಐಡಿ supreeth.student@gmail.com

Nagendra Trasi said...

ಸುಪ್ರೀತ್ ಪ್ರತಿಕ್ರಿಯೆಗೆ ಧನ್ಯವಾದಗಳು, ನನ್ನ ಈ ಬರಹವನ್ನು ನೀವು ಧಾರಾಳವಾಗಿ ಬಳಸಿಕೊಳ್ಳಬಹುದು.

ನಾಗೇಂದ್ರ ತ್ರಾಸಿ.

jomon varghese said...

ತ್ರಾಸಿ ಸರ್,

ಸೊಗಸಾದ ಲೇಖನ

Nagendra Trasi said...

ಪ್ರತಿಕ್ರಿಯೆಗೆ ಧನ್ಯವಾದಗಳು ಜೋಮನ್

ನಾಗೇಂದ್ರ ತ್ರಾಸಿ.