Sunday, August 17, 2008

'ಚಿರಮೌನ'ಕ್ಕೆ ಜಾರಿದ ವ್ಯಾಸ

ಇತ್ತೀಚೆಗಷ್ಟೇ ವ್ಯಾಸರು ನನ್ನ ಮೊಬೈಲ್‌ಗೆ ಕರೆ ಮಾಡಿ, ಏನು ಊರಿಗೆ ಬರುವ ವಿಚಾರ ಏನಾದರು ಇದೆಯಾ ಅಂತ ಕ್ಷೇಮವನ್ನು ವಿಚಾರಿಸಿ, ಈ ಬಾರಿಯ ಮಯೂರದಲ್ಲಿ ಕಥೆ ಬರುತ್ತದೆ ಓದಿ ಎಂದಿದ್ದರು. ಪ್ರತಿ ಬಾರಿ ಊರಿಗೆ ಹೋದಾಗ ಕಾಸರಗೋಡಿನ ಮನ್ನಿಪ್ಪಾಡಿಗೆ ಹೋಗಿ ಅವರೊಂದಿಗೆ ಇದ್ದು ಹರಟಿ ಬರುವುದು ವಾಡಿಕೆ, ಆದರೆ ಈ ಬಾರಿ ಕೆಲಸದ ಒತ್ತಡದಿಂದ ಅವರನ್ನು ಮಾತನಾಡಿಸದೆ ಬಂದಿದ್ದೆ, ಹಿರಿಯ ಪತ್ರಕರ್ತ ಮಿತ್ರರಾದ ಕೆ.ತಿಮ್ಮಪ್ಪ ಅವರು ವ್ಯಾಸ ಇನ್ನಿಲ್ಲ ಎಂತ ಮೆಸೇಜ್ ಕಳುಹಿಸಿದ್ದರು. ಅದನ್ನು ನೋಡಿದವನಿಗೆ ನನ್ನಲ್ಲಿ ಅಪರಾಧಿ ಪ್ರಜ್ಞೆ ಮೂಡಿತ್ತು.

ಊರಿಗೆ ಹೋದವನು ಮಾತನಾಡಿ ಬಾರದಿದ್ದಕ್ಕೆ ಆಘಾತಗೊಂಡಿದ್ದೆ. ಚಿಕೂನ್ ಗುನ್ಯಾಕ್ಕೆ ಅವರು ಬಲಿಯಾಗಿರುವುದು ನನ್ನಿಂದ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ಪ್ರತಿಯೊಂದು ಪತ್ರಿಕೆಯ ಮೇಲೆ ಕಣ್ಣಾಡಿಸುವ ವ್ಯಾಸರು, ತನಗಿಂತ ಚಿಕ್ಕವರ ಕಥೆ, ಕವನ, ಲೇಖನಗಳನ್ನು ಓದಿ ಸಂತಸ ಪಡುತ್ತಿದ್ದರು ಮತ್ತು ಅಂತಹವರ ಹೆಸರನ್ನು ನೆನಪಿಟ್ಟುಕೊಂಡು, ನಮ್ಮಲ್ಲಿ ಮಾತನಾಡುವಾಗ, ಒಳ್ಳೇ ಬರೆಯುತ್ತಾರೆ ಮರಾಯ್ರೆ ಎನ್ನುತ್ತಿದ್ದರು.

ಸಹೃದಯಿಯಾಗಿದ್ದ ವ್ಯಾಸರು, ಎಲ್ಲರನ್ನೂ ತುಂಬಾ ಗೌರವದಿಂದ ಕಾಣುತ್ತಿದ್ದರು. ಅವರ ಕಥೆಗಳನ್ನು ಓದಿಕೊಂಡಿದ್ದವರು ಅವರ ಮನೆಗೆ ಆಗಾಗ ಬಂದು ಮಾತನಾಡಿಸಿ ಹೋಗುತ್ತಿದ್ದರು. ನಾವು ಅವರ ಮನೆಗೆ ಹೋದಾಗಲೆಲ್ಲ, ನೋಡಿ ತ್ರಾಸಿ ಇಂತವರು ಬಂದು ಮಾತನಾಡಿಸಿ ಹೋಗಿದ್ದಾರೆ, ಪತ್ರ ಕೂಡ ಬರೆದಿದ್ದಾರೆ ಎಂದೆಲ್ಲಾ ಹೇಳುತ್ತಿದ್ದರು. ವ್ಯಾಸರ ಎದುರು ಕುಳಿತಾಗ ನಾನು ಸುಮ್ಮನೆ ಕುಳಿತಿರುತ್ತಿದ್ದೆ, ಯಾಕೆಂದರೆ ಅವರು ಮಾತನಾಡುವುದೇ ಅಪರೂಪ, ಅದಕ್ಕೆ ಅವರು ಮಾತನಾಡುತ್ತಾರೆಂದರೆ ನಾನು ಬೆಪ್ಪನಂತೆ ಕೇಳಿಸಿಕೊಳ್ಳುತ್ತಿದ್ದೆ.

ಅವರಿಗೆ ಮೊಮ್ಮಕ್ಕಳ ಮೇಲೆ ಅಗಾಧವಾದ ಪ್ರೀತಿ, ಅದರಲ್ಲೂ ಅವರ ಚಿಕ್ಕ ಮೊಮ್ಮಗನ ಮೇಲೆ ಪ್ರಾಣವೇ ಇಟ್ಟುಕೊಂಡಿದ್ದರು. ಒಮ್ಮೆ ಮಿತ್ರ ಮುರಳಿ ಹತ್ತಿರ ವ್ಯಾಸರಿಗೆ ಸಣ್ಣ ಮೊಮ್ಮಗನ ಮೇಲೆ ಅಷ್ಟೊಂದು ವ್ಯಾಮೋಹ ಯಾಕೆ ಎಂದು ಕೇಳಿದ್ದಕ್ಕೆ, ಆತನ ಮುಖ ಅವರ ತಂದೆಯನ್ನು ಹೋಲುವ ಕಾರಣ ಎಂದು ತಿಳಿಸಿದ್ದ. ವ್ಯಾಸರ ತಂದೆಯನ್ನು ರಾಜಕೀಯ ದ್ವೇಷದಿಂದಾಗಿ ನಟ್ಟನಡು ರಸ್ತೆಯಲ್ಲಿ ಕೊಚ್ಚಿ ಕೊಂದಿದ್ದರು. ವ್ಯಾಸರು ಅದನ್ನು ಕಣ್ಣಾರೆ ಕಂಡವರು.

ವ್ಯಾಸರು ಯಾವುದೇ ರಾಜಕೀಯ, ಪಕ್ಷ, ಸಿದ್ದಾಂತಗಳ ಬಗ್ಗೆ ಅಂಟಿಕೊಂಡಿರಲಿಲ್ಲವಾಗಿತ್ತು. ಒಂಟಿತನವನ್ನು,ಮೌನವನ್ನು ಪ್ರೀತಿಸುತ್ತಿದ್ದ ವ್ಯಾಸರಿಗೆ ಸಿಟ್ಟು ಮಾತ್ರ ತುಂಬಾನೇ ಇತ್ತು, ಆದರೆ ಅದನ್ನು ಯಾರ ಎದುರು ತೋರ್ಪಡಿಸುತ್ತಿರಲಿಲ್ಲ, ನಾನು ಆಗಾಗ ಮನೆಗೆ ಹೋಗುತ್ತಿದ್ದಾಗ, ಮನೆಯಲ್ಲಿ ಇವರು ಏನಾದರು ಹೇಳುತ್ತಿರುವಾಗ ಪತ್ನಿ ಅಡ್ಡ ಮಾತನಾಡಿದ ಸಂದರ್ಭ ಅವರ ಮುಖದಲ್ಲಿ ತುಂಬಾ ಕೋಪವನ್ನು ಕಂಡಿದ್ದೆ.

ಅವರಲ್ಲಿ ದುರಂತ ಘಟನೆಗಳನ್ನು ಹೇಳಿದಾಗ ತುಂಬಾ ನೊಂದುಕೊಳ್ಳುತ್ತಿದ್ದರು, ಮತ್ತು ಆ ಘಟನೆಯ ಸುತ್ತ ಕಥಾಹಂದರವನ್ನು ಕಟ್ಟುತ್ತಿದ್ದರು. ರಾತ್ರಿ, ಮಧ್ಯರಾತ್ರಿ ಅವರ ಮನಸ್ಸಿನಲ್ಲಿ ಯಾವಾಗ ಕಥೆ ರೂಪು ತಾಳುತ್ತೊ ಆವಾಗೆಲ್ಲ ಎದ್ದು ಬರೆಯಲು ಕುಳಿತುಕೊಳ್ಳುತ್ತಿದ್ದರು, ಹೆಂಡತಿ ಆಗಾಗ ಟೀ ಪೂರೈಸುತ್ತಿದ್ದರು. ಅವರ ಶಬ್ದ ಜೋಡಣೆ ತುಂಬಾ ವಿಶೇಷವಾದದ್ದು, ಅವರ, ಕಥೆ, ಕವನದ ಹಾಗೆ, ಅವರು ಮಿತ್ರರಿಗೆ ಬರೆಯುತ್ತಿದ್ದ ಪತ್ರಗಳೂ ಕಥೆಯಂತೆ ಇರುತ್ತಿದ್ದವು.

ಕಳೆದ ನಲ್ವತ್ತು ವರ್ಷಗಳಿಂದ ಸಣ್ಣ ಕಥಾ ಪ್ರಪಂಚದಲ್ಲಿ ತಮ್ಮದೆ ಛಾಪನ್ನು ಮೂಡಿಸಿದ್ದ ವ್ಯಾಸರನ್ನು ಕನ್ನಡ ಸಾರಸ್ವತ ಲೋಕ ಅವರನ್ನು ಗುರುತಿಸದೆ ಜಾಣ ಕುರುಡತನ ತೋರಿಸಿತ್ತು! ಮನುಷ್ಯನ ಸ್ವಾರ್ಥ, ದ್ವೇಷಗಳ ಬಗ್ಗೆ ತುಂಬಾ ಮಾತನಾಡುತ್ತಿದ್ದರು, ಆಗಾಗ ಪತ್ರ ಬರೆಯುತ್ತಿದ್ದ ವ್ಯಾಸರು ತುಂಬಾ ಆಪ್ತರಾಗಿದ್ದರು, ನನ್ನಂತಹ ನೂರಾರು ಆಪ್ತವಲಯಗಳನ್ನು ಸೃಷ್ಟಿಕೊಂಡಿದ್ದ ವ್ಯಾಸರು ಸದ್ದಿಲ್ಲದೆ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದ್ದಾರೆ. ಇದೀಗ ಅವರೇ ಸೃಷ್ಟಿಸಿದ ಶಂಕರಿಗುಡ್ಡ, ಶಂಕರಿನದಿಗಳು ಕಥೆಯಾದ ಹಾಗೇ ವ್ಯಾಸರ ಕಥೆಗಳು ಸಾಹಿತ್ಯಲೋಕದಲ್ಲಿ 'ಜೀವ'ಪಡೆಯಬೇಕಾಗಿದೆ....

No comments: