Wednesday, September 3, 2008

'ವಲಸೆ ರಾಜಕಾರಣ'ದ ದೊಂಬರಾಟ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟವನ್ನು ಗಮನಿಸಿದರೆ ನೈತಿಕತೆ, ಮೌಲ್ಯ, ತತ್ವ ಸಿದ್ಧಾಂತದ ಪದಗಳೆಲ್ಲ ಸವಕಲಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಬಹುಶಃ ನೈತಿಕತೆ ಮತ್ತು ತತ್ವದ ಪ್ರಶ್ನೆಗೆ ಬಂದಾಗ ಆ ಪರಿಧಿಯೊಳಗೆ ಎಲ್ಲರೂ ತಾನೇ ತಾನಾಗಿ ಸೇರಿಕೊಳ್ಳುತ್ತೇವೆ. ಹೇಳುವುದು ಒಂದು ಮಾಡುವುದು ಇನ್ನೊಂದು ಅಂತ ಆದ ಮೇಲೆ ಅಲ್ಲಿ ನೈತಿಕತೆಗೆ ಯಾವ ಅರ್ಥ ಉಳಿಯಿತು.

ಇದೀಗ ಕರ್ನಾಟಕ ರಾಜ್ಯಕಾರಣದಲ್ಲಿ ಇತ್ತೀಚೆಗೆ ಆಡಳಿತರೂಢ ಭಾರತೀಯ ಜನತಾ ಪಕ್ಷ ನಡೆಸುತ್ತಿರುವ ಆಪರೇಶನ್ ಕಮಲ ನಿಜಕ್ಕೂ ರಾಜಕೀಯ ಅಧಃಪತನದ ಸಂಕೇತ. ಈ ಹಿಂದೆಂದೂ ಇಂತಹ ಕೀಳು ಮಟ್ಟದ ರಾಜಕೀಯ ನಡೆದಿಲ್ಲ ಎಂಬುದನ್ನು ಮನಗಾಣುವ ಮೂಲಕ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬ ಏಕಾಏಕಿ ಅಧಿಕಾರದ ಬೆನ್ನತ್ತಿ, ರಾಜೀನಾಮೆ ಎಸೆದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾನೆಂದರೆ ಅದು ಎಷ್ಟರ ಮಟ್ಟಿಗೆ ಸಂವಿಧಾನ ಬದ್ಧವಾದದ್ದು ಎಂದು ಪ್ರಶ್ನಿಸಿಕೊಳ್ಳ ಬೇಕಾ ಗಿದೆ.

ಅವೆಲ್ಲಕ್ಕಿಂತ ಮುಖ್ಯವಾಗಿ ಒಂದು ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಯನ್ನು ಕ್ಷೇತ್ರದ ಲಕ್ಷಾಂತರ ಮಂದಿ ಮತದಾರರು ತಮ್ಮ ಒಮ್ಮತಾಭಿಪ್ರಾಯದ ಮತ ಚಲಾಯಿಸಿ ಆಯ್ಕೆ ಮಾಡುತ್ತಾರೆ. ಹಾಗಾದರೆ ಮತದಾರರ ನೀಡಿದ ತೀರ್ಪನ್ನು ಧಿಕ್ಕರಿಸಿ, ನೀವು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೀರಿ ಎಂದಾದರೆ ಅದು ಮತದಾರರಿಗೆ ಮಾಡಿದ ಮಹಾದ್ರೋಹವಲ್ಲದೆ ಇನ್ನೇನು !

ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ, ಕಾನೂನಿನ ಕಣ್ಣಿಗೆ ಮಣ್ಣೆರೆಚುವುದರಲ್ಲಿ ನಾವು ಸಿದ್ಧಹಸ್ತರಲ್ಲವೆ, ಆ ನಿಟ್ಟಿನಲ್ಲಿ ಕಾನೂನಿನ ಸುಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ,ಮತ್ತೊಂದು ಪಕ್ಷಕ್ಕೆ ಸೇರ್ಪಡೆ ಗೊಂಡು, ಅಧಿಕಾರ, ಸ್ಥಾನವನ್ನು ಅಲಂಕರಿಸುವುದು. ಮತ್ತೆ ಆ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ರಾಜಕಾರಣಿಗಳ ಲೆಕ್ಕಚಾರ.

ಇಲ್ಲಿ ಕ್ಷೇತ್ರದ ಮತದಾರರನಿಗೆ ಯಾವ ಬೆಲೆಯೂ ಇಲ್ಲ,ನೈತಿಕತೆ ಅಂತೂ ಕೇಳುವುದೇ ಬೇಡ. ಇಂತಹದ್ದೊಂದು ವಲಸೆ ರಾಜಕಾರ ಣಕ್ಕೆ ಬಿಜೆಪಿ ಚಾಲನೆ ನೀಡಿದೆ. ಆ ಮೂಲಕ ತನ್ನ ಸರ್ಕಾರವನ್ನು ಭದ್ರಪಡಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವರು ಕೂಡ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಆದರೆ ರಾಜ್ಯದಲ್ಲಿ ಬಿಜೆಪಿಯ ಆಪರೇಶನ್ ಕಮಲದ ಬಗ್ಗೆ ಆಕ್ಷೇಪಿಸುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ, ಇತ್ತೀಚೆಗಷ್ಟೇ ಕೇಂದ್ರ ದ ಆಡಳಿತರೂಢ ಯುಪಿಎ ಅಣುಒಪ್ಪಂದದ ವಿಚಾರದಲ್ಲಿ ಶಾಸಕರನ್ನು ಖರೀಸಿತ್ತಲ್ಲ ಎಂದು ಬಾಯಿ ಮುಚ್ಚಿಸಬಹುದು. ಇಲ್ಲವೇ ಅಂದು ಪ್ರಧಾನಿ ಹುದ್ದೆ ಅಲಂಕರಿಸಲು ಪಿ.ವಿ.ನರಸಿಂಹರಾವ್‌ಗೂ ಕೂಡ ಜೆಎಂಎಂ ಇದೇ ತೆರನಾಗಿ ಲಂಚ ಸ್ವೀಕರಿಸಿಯೇ ಬೆಂಬಲ ನೀಡಿತ್ತು ಎಂಬ ಸಮಜಾಯಿಷಿ ನೀಡಬಹುದು.

ರಾಜಕಾರಣದಲ್ಲಿ ಇಂತಹ ಅಪಸವ್ಯ ನಡೆಯುತ್ತಿದ್ದಾದರು ಕೂಡ, ರಾಜ್ಯರಾಜಕಾರಣದ ಮಟ್ಟಿಗೆ ಸಾರಸಗಟಾಗಿ ಜನರಿಂದ ಆಯ್ಕೆ ಯಾದ ಶಾಸಕರು ಜನರ ಆಶಯಕ್ಕೆ ವಿರುದ್ಧವಾಗಿ ರಾಜೀನಾಮೆ ನೀಡಿ ವಿರೋಧ ಪಕ್ಷವನ್ನು ಸೇರಿ ಅಲ್ಲಿ ಅಧಿಕಾರ,ಹುದ್ದೆಯನ್ನು ಅಲಂಕರಿಸುತ್ತಿರುವುದು ಕೀಳು ರಾಜಕೀಯದ ಪರಮಾವಧಿಯಾಗಿದೆ. ರಾಜಕಾರಣಿಗಳ ಇಂತಹ ಎಡಬಿಡಂಗಿತನಗಳಿಗೆ ಕ್ಷೇತ್ರದ ಪ್ರಜ್ಞಾವಂತ ಮತದಾರರೇ ತಕ್ಕ ಬುದ್ಧಿ ಕಲಿಸಬೇಕಾಗಿದೆ.

No comments: