Wednesday, September 3, 2008

ವಂಡಾರು ಕಂಬಳ ಮತ್ತು ನರಬಲಿ...

ನಮ್ಮ ಊರಿನ ಹಿರಿಯರು ಆಗಾಗ ಗಾದೆ ಮಾತೊಂದನ್ನು ಹೇಳುತ್ತಿರುತ್ತಾರೆ, ಅದೇನೆಂದರೆ ' ಹಿಂದಿನ ಕಾಲವಲ್ಲ-ವಂಡಾರು ಕಂಬಳವಲ್ಲ' ಅಂತ. ಈಗಿನ ಕೆಟ್ಟು ಹೋದ ಪರಿಸ್ಥಿತಿಗೆ ರೋಸಿಹೋದ ಹಿರಿಯ ತಲೆಗಳು ಆಗಾಗ ಈ ಗಾದೆಯನ್ನು ಹೇಳುತ್ತಿ ರುತ್ತಾರೆ. ಆದರೆ ಆ ಗಾದೆ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ.

ಮಂಗಳೂರು, ಉಡುಪಿ, ಕುಂದಾಪುರ, ಮೂಡಲಕಟ್ಟೆ, ಪುತ್ತೂರುಗಳಲ್ಲಿ ಕಂಬಳ ಒಂದು ವಿಶೇಷವಾದ ಸಾಂಪ್ರದಾಯಿಕ ಕ್ರೀಡೆ ಯಾಗಿದೆ. ಈ ಭಾಗಗಳಲ್ಲಿ ಹಬ್ಬ ಹರಿದಿನಗಳು ಹೇಗೋ, ಹಾಗೇ ಕಂಬಳ ಕೂಡ ಪ್ರಮುಖವಾದದ್ದು. ನಾನೀಗ ಹೇಳ ಹೊರಟಿ ರುವುದು ಕುಂದಾಪುರದಿಂದ ಸುಮಾರು 15ಕಿ.ಮೀ.ದೂರದಲ್ಲಿರುವ ವಂಡಾರು ಎಂಬ ಊರಿನ ಕಂಬಳದ ಬಗ್ಗೆ. ಇದಕ್ಕೆ ಕ್ರಿ.ಶ. 1200ರ ಆಳುಪರ ಜರ್ಕೆಯ ಶಾಸನದಲ್ಲಿ ಕೆಲವು ವಿವರಗಳು ಲಭ್ಯವಾಗುತ್ತದೆ.

ಇದು ಉಡುಪಿ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಕಂಬಳಗದ್ದೆಯಾಗಿದೆ. ಇದು ಅಂದಾಜು 10 ಎಕರೆ ವಿಸ್ತಿರ್ಣ ಹೊಂದಿದೆ. ಈ ಕಂಬಳಗದ್ದೆ ಬಗ್ಗೆ ಬಹಳಷ್ಟು ಐತಿಹ್ಯಗಳಿವೆ. ಆ ಕಾಲದಲ್ಲಿ ಇದನ್ನು ಮನುಷ್ಯರು ಬೀಜ ಬಿತ್ತಿ ಬೆಳೆ ತೆಗೆಯುತ್ತಿರಲಿಲ್ಲವಂತೆ, ದೇವತೆ ಗಳು ರಾತ್ರಿ-ಬೆಳಗಾಗುವುದರೊಳಗೆ ನೇಜಿ ಮಾಡಿ ಮುಗಿಸುತ್ತಿದ್ದರಂತೆ !.

ವಂಡಾರಿನ ಈ ಕಂಬಳ ಗದ್ದೆ ಹೆಗ್ಗಡೆ ಮನೆತನದ್ದು, ಅವರ ಮನೆಯ ಪಕ್ಕ ನಿಗಳೇಶ್ವರನ (ಮೊಸಳೆ) ಗುಡಿ ಇದೆ. ಈ ಗುಡಿಯಲ್ಲಿ ಲಿಂಗಾರಾಧನೆ ನಡೆಯುತ್ತದೆ, ಇಲ್ಲಿ ಬಂಟರೇ ಅರ್ಚಕರಾಗಿದ್ದು, ಕಂಬಳದ ದಿನ ಮಾತ್ರ ಪೂಜೆ-ಪುನಸ್ಕಾರ ನಡೆಯುತ್ತದೆ. ವಂಡಾ ರಿನಲ್ಲಿರುವ ನಿಗಳನ ಗುಡಿಯ ಗರ್ಭಗುಡಿಯ ಕೆಳಗೆ ನಿಗಳನ ಬಾವಿ ಇದ್ದು, ಇದನ್ನು ನೂರಾರು ವರ್ಷಗಳ ಹಿಂದೆಯೇ ಮುಚ್ಚಿದ್ದರು. ಆ ಬಾವಿಯನ್ನು ಯಾಕೆ ಮುಚ್ಚಿದರು ಎಂಬುದು ಈಗಲೂ ಜನಜನಿತವಾಗಿರುವ ಐತಿಹ್ಯ ಹೀಗಿದೆ...

ವಂಡಾರು ಕಂಬಳಕ್ಕೆ ಜಿಲ್ಲೆಯ ಸುತ್ತಮುತ್ತಲಿನಿಂದ ಕೋಣಗಳನ್ನು ಶೃಂಗರಿಸಿ ಡೋಲು, ಬಾಜಭಜಂತ್ರಿ ಮೂಲಕ ಕರೆ ತರುತ್ತಿದ್ದರು, ಅಲ್ಲಿಯೇ ದೊಡ್ಡ ಜಾತ್ರೆಯೇ ನೆರೆದಿರುತ್ತಿದ್ದು, ಕಂಬಳ ನಡೆಯುವ ಹಿಂದಿನ ದಿನ ಎಲ್ಲೆಡೆಯಿಂದ ಕೋಣಗಳನ್ನು ತಂದು ಕಟ್ಟಿಹಾಕಿ, ದಿನಬೆಳಗು ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ರಾತ್ರಿ ನಿದ್ದೆಹೋದ ಸಂದರ್ಭ ಹೆಗ್ಗಡೆಯವರ ಮನೆಯಲ್ಲಿ ನಿದ್ದೆ ಹೋದವರೊಬ್ಬರ ಕಾಲಿಗೆ ಬಳ್ಳಿ ಹಾಕಲಾಗುತ್ತದೆ. ಹಾಗೇ ಯಾರ ಕಾಲಿಗೆ ಬಳ್ಳಿ ಬೀಳುತ್ತಿತ್ತೋ ಅವರನ್ನು ನಸುಕಿನಲ್ಲಿಯೇ ಎತ್ತಿ ನಿಗಳನ (ಮೊಸಳೆ) ಬಾವಿಗೆ ಹಾಕಲಾಗುತ್ತಿತ್ತು. ಅಂದರೆ ನರಬಲಿ ಕೊಡಲಾಗುತ್ತಿತ್ತು !!

ಹೀಗೆ ಇದು ನಿರಂತರ ಪ್ರತಿ ಬಾರಿಯ ಕಂಬಳದ ಮುನ್ನ ನಿಗಳನಿಗೆ ನರಬಲಿ ನಡೆಯುತ್ತಿತ್ತು. ಏತನ್ಮಧ್ಯೆ ಒಮ್ಮೆ ಹಾಗೆ ಕಾಲಿಗೆ ಬಳ್ಳಿ ಹಾಕಿದ ವ್ಯಕ್ತಿಯನ್ನು ನಿಗಳನಿಗೆ ಬಲಿ ಕೊಡಲಾಯಿತಂತೆ, ಆದರೆ ನಿಗಳನಿಗೆ ಬಲಿಯಾದ ವ್ಯಕ್ತಿ ಹೆಗ್ಗಡೆ ಮನೆಯ ಆಳು ಎಂಬುದು ನಂತರ ತಿಳಿಯಿತಂತೆ. ಆ ದಿನದಿಂದ ನಿಗಳನಿಗೆ ನರಬಲಿ ಕೊಡುವ ಸಂಪ್ರದಾಯವನ್ನು ನಿಲ್ಲಿಸಲಾಯಿತಂತೆ.

ಹೀಗೆ ಬಹಳಷ್ಟು ಇತಿಹಾಸವನ್ನು ಹೊಂದಿರುವ ವಂಡಾರು ಕಂಬಳ ಗದ್ದೆಯನ್ನು ನೀವೊಮ್ಮೆ ನೋಡಬೇಕು(ಜನವರಿಯಿಂದ ಮಾ ರ್ಚ್ ತಿಂಗಳ ನಡುವೆ ನಡೆಯುತ್ತದೆ), ಅದೇ ರೀತಿ ಡೈನೋಸಾರಸ್ಸ್ ರೂಪದ ನಿಗಳನ ಗುಡಿಯನ್ನು ಕಾಣಬೇಕು. ಅಲ್ಲದೇ ಇಲ್ಲಿ ಪ್ರತಿ 12ವರ್ಷಗಳಿಗೊಮ್ಮೆ ಪಟ್ಟದ ಹೆಗ್ಗಡೆವರಿಗೆ ಆಗುವ ಉತ್ಸವ ಪಟ್ಟೋತ್ಸವ ನಡೆಯುತ್ತಿತ್ತು.

ಅದು ಕಳೆದ ಒಂದು ಶತಮಾನದಿಂದ ನಿಂತು ಹೋಗಿದೆ,ಈಗ ಕಾಶಿಯಿಂದ ತಂದ ಮೂರ್ತಿಗೆ ಸಾಂಕೇತಿಕವಾಗಿ ಪಟ್ಟದ ಉತ್ಸವ ನಡೆಯುತ್ತದೆ. ಹೀಗೆ ವಂಡಾರು ಕಂಬಳದ ಗದ್ದೆಗೆ ಅಣ್ಣ-ತಮ್ಮ ಒಟ್ಟಿಗೆ ಇಳಿಯುವಂತಿಲ್ಲ,ಪಟ್ಟದ ಹೆಗ್ಗಡೆಯವರು ಗದ್ದೆಗೆ ಪೂರ್ಣ ಸುತ್ತು ಬರುವಂತಿಲ್ಲ,

ವಂಡಾರು ಕಂಬಳದ ದಿನ ಕೋಟೇಶ್ವರದ ಕೆರೆ ನೀರು ಕೆಸರಾಗುವುದು, ಕಂಬಳದ ಗದ್ದೆ ಪಾಲಾಗುವಂತಿಲ್ಲ, ಇಲ್ಲಿ ಒಬ್ಬಳೇ ಹೆಣ್ಣು ಮಗಳು ಹುಟ್ಟುವುದು, ಆ ಹೆಣ್ಣಿನ ಮಗನೇ ಪಟ್ಟದ ಹೆಗ್ಗಡೆಯವರಾಗಿ ಕಂಬಳವನ್ನು ನಡೆಸುತ್ತಾರೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ವಂಡಾರು ಕಂಬಳ ಮತ್ತು ಅಲ್ಲಿನ ವೈಭವವನ್ನು ನೀವೂ ಒಮ್ಮೆ ಕಣ್ಣಾರೆ ನೋಡಬೇಕು...ಇದು ಜೂಜಿಗಾಗಿ ನಡೆಯುವ ಕಂಬಳವಲ್ಲ...

3 comments:

jomon varghese said...

ಮಾಹಿತಿಪೂರ್ಣ ಲೇಖನ. ಒಳ್ಳೆಯ ಬರಹ ಕೂಡ.

nagendra said...

pratikriye nididdakke malehanige thanks.

N.Trasi

ದಿನೇಶ್ ಕುಮಾರ್ ಎಸ್.ಸಿ. said...

ನಾಗೇಂದ್ರ ಅವರೇ,
ತಿಂಗಳಾಗ್ತಾ ಬಂತು ನಿಮ್ಮ ಬ್ಲಾಗ್ ಅಪಡೇಟ್ ಆಗಿ. ಬೇಗ ಇನ್ನೇನಾದರೂ ಬರೀರಿ.
ಕೆಲಸದ ಒತ್ತಡದಲ್ಲಿ ಮುಳುಗಿ ಹೋಗಿದ್ದೀರೋ ಹೇಗೆ?
ಹೊಸ ಬರೆಹದ ನಿರೀಕ್ಷೆಯಲ್ಲಿದ್ದೇನೆ.