Sunday, August 21, 2011

ಅಣ್ಣಾ ಹಜಾರೆ ಹೋರಾಟ ಮತ್ತು ಮಟ್ಟೆಣ್ಣವರ್ ಬಾಂಬ್!


ಹೌದು...ಸಾಮಾಜಿಕ ಕಾರ್ಯಕರ್ತ, ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಪ್ರಬಲ ಜನಲೋಕಪಾಲ್ ಮಸೂದೆ ಜಾರಿಯಾಗಬೇಕೆಂದು ಪಟ್ಟು ಹಿಡಿದು ಚಳವಳಿಗೆ ಧುಮುಕಿರುವುದು ನಿಜಕ್ಕೂ ಇದೊಂದು ಪವಾಡ, ಭಾರತದಲ್ಲಿ ಎರಡನೇ ಸ್ವಾತಂತ್ರ್ಯದ ಸಂಗ್ರಾಮದ ಕಿಚ್ಚು ಎಂಬಂತ ವಾತಾವರಣ ಸೃಷ್ಠಿಯಾಗಿದೆ ಎಂಬ ಮಾತಿನಲ್ಲಿ ಉತ್ಪ್ರೇಕ್ಷೆ ಇದೆ ಎಂದು ವಾದಿಸಬಹುದು. ಆದರೆ ಇದು ಸಹಜ ಯಾಕೆಂದರೆ ಭ್ರಷ್ಟಾಚಾರದ ಕಬಂಧ ಬಾಹು ಮಿತಿಮೀರಿ ಹೋಗಿದೆ. ಅಷ್ಟೇ ಅಲ್ಲ ಅದು ಅತಿ ಹೆಚ್ಚು ಬಾಧಿಸಿದ್ದು ಜನಸಾಮಾನ್ಯರನ್ನ. ತಳಮಟ್ಟದಿಂದ ಹಿಡಿದು ಉನ್ನತ ಮಟ್ಟದವರೆಗೂ ಭ್ರಷ್ಟಾಚಾರದ ವಿರಾಟ್ ರೂಪ ತೋರಿದೆ. ಸ್ವಾತಂತ್ರ್ಯ ನಂತರ ದೇಶದ, ನಮ್ಮ ಜನಪ್ರತಿನಿಧಿಗಳ ಪ್ರಗತಿಯ ಜತೆ, ಜತೆಯಾಗಿಯೇ ಭ್ರಷ್ಟಾಚಾರವೂ ಎಗ್ಗಿಲ್ಲದೆ ಬೆಳೆಯುವ ಮೂಲಕ ಅಟ್ಟಹಾಸಗೈಯುತ್ತಿರುವುದು ಎಲ್ಲರ ಕಣ್ಮುಂದೆ ಇರುವ ವಾಸ್ತವ. ಕೆಲ ವರ್ಷಗಳ ಹಿಂದಷ್ಟೇ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಗಿರೀಶ್ ಮಟ್ಟೆಣ್ಣವರ್ ಶಾಸಕರ ಭವನಕ್ಕೆ ಬಾಂಬ್ ಇಟ್ಟು ಸುದ್ದಿ ಮಾಡಿದ್ದರು. ಅದೊಂದು ಬಾಲಿಶ, ಹುಚ್ಚುತನದ ಪರಮಾವಧಿ ಎಂದು ನಾವು ವಾದಿಸಬಹುದು.

ಕಾನೂನಿನ ಪ್ರಕಾರ ಒಪ್ಪಲಾಗದಿದ್ದರೂ, ಈ ದೇಶದ ಹಿತ ಕಾಯುವ ಪ್ರತಿಯೊಬ್ಬನೊಳಗೂ ಭ್ರಷ್ಟಾಚಾರದ ವಿರುದ್ಧ ಒಳಗೆ ಅದುಮಿಕೊಂಡಿದ್ದ ಆಕ್ರೋಶದ ಫಲ ಅದಾಗಿತ್ತು. ಆದರೆ ಮಟ್ಟೆಣ್ಣ ಕೇವಲ ಸುದ್ದಿಯಷ್ಟೇ ಮಾಡಿದ್ದು ಬಿಟ್ಟರೆ ಅದರಲ್ಲಿ ಇನ್ಯಾವುದೇ ಕ್ರಾಂತಿ ನಡೆಯಲಿಲ್ಲ. ಅದು ಅವರಿಂದ ಸಾಧ್ಯವೂ ಆಗಿಲ್ಲ ಎಂಬುದು ಅಷ್ಟೇ ಸತ್ಯ.

ಇದೀಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಎಲ್ಲರೊಳಗೂ ಕುದಿಯುತ್ತಿದ್ದ ಭ್ರಷ್ಟಾಚಾರದ ವಿರುದ್ಧದ ಆಕ್ರೋಶಕ್ಕೆ ಅಣ್ಣಾ ಹಜಾರೆ ಒಂದು ಕಾರಣರಾಗಿದ್ದಾರೆ. ಅದಕ್ಕಾಗಿಯೇ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳು, ಯುವ ಸಮುದಾಯ, ಮಹಿಳೆಯರು, ಹಿರಿಯರು ಸಾಥ್ ನೀಡಿದ್ದಾರೆ. ವಿಪರ್ಯಾಸವೆಂದರೆ ಬರೇ ಕೋಮುವಾದದ ವಿರುದ್ಧ ಬಾಯ್ದೆರೆದು ಬೊಬ್ಬಿರಿಯುತ್ತಿದ್ದ ಸಾಹಿತಿಗಳು ಮತ್ತು ಬುದ್ಧಿಜೀವಿಗಳು ಮೌನಕ್ಕೆ ಶರಣಾಗಿದ್ದಾರೆ. ಬೆಂಗಳೂರಿನ ಫ್ರೀಡಂಪಾರ್ಕ್‌ನತ್ತ ಯಾವೊಬ್ಬ ಹಿರಿಯ ಸಾಹಿತಿಯೂ ತಲೆ ಹಾಕಿಲ್ಲ. ಧರಣಿ ನಡೆಸುತ್ತಿರುವವರಿಗೆ ನೈತಿಕ ಬೆಂಬಲವನ್ನೂ ಘೋಷಿಸಿಲ್ಲ! ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ, ನಿಷ್ಠೆಯಿಂದ ಕೆಲಸ ಮಾಡಿದ ಐಪಿಎಸ್ ಅಧಿಕಾರಿಯಾಗಲಿ ಅಥವಾ ಇನ್ಯಾವುದೇ ಅಧಿಕಾರಿಯನ್ನಾಗಲಿ ನಮ್ಮ ಸರ್ಕಾರಗಳು ಯಾವ ರೀತಿ ನಡೆಸಿಕೊಂಡಿವೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಎಲ್ಲದಕ್ಕಿಂತ ದುರಂತವೆಂದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುವವರನ್ನು ಜನಪ್ರತಿನಿಧಿಗಳು, ಸರ್ಕಾರ ವ್ಯವಸ್ಥಿತವಾಗಿ ಹೇಗೆ ಹತ್ತಿಕ್ಕುತ್ತೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಭ್ರಷ್ಟಾಚಾರ ತಡೆಗೆ ಪ್ರಬಲ ಕಾಯ್ದೆ ಬೇಕೆಂದು ಜನ ಬೀದಿಗಿಳಿದರೂ ಕೂಡ ನಮ್ಮನ್ನು ಆಳುವ ನಾಯಕರ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಕಳಂಕ. ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ, ಸಚಿವರಾದ ಕಪಿಲ್ ಸಿಬಲ್, ಪಿ.ಚಿದಂಬರಂ ಹೇಳಿಕೆಗಳನ್ನೇ ಗಮನಿಸಿ, ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಇವರು ಯಾರನ್ನ ಬೇಕಾದರೂ ಭ್ರಷ್ಟರನ್ನಾಗಿ ಮಾಡುತ್ತಾರೆ ಮತ್ತು ಅದನ್ನ ತಮ್ಮ ಮೂಗಿನ ನೇರಕ್ಕೆ ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಅಪದ್ಧಗಳಿಂದಾಗಿಯೇ ಯುಪಿಎ ತನ್ನ ಮೇಲೆ ತಾನೇ ಚಪ್ಪಡಿ ಎಳೆದುಕೊಂಡು ಅವಸಾನದತ್ತ ಸಾಗಲು ಹೊರಟಿದೆ. ಪ್ರಬಲ ಜನಲೋಕ ಪಾಲ್ ಮಸೂದೆ ಜಾರಿಗೆ ತರಲು ಯಾವ ಪಕ್ಷಗಳಿಗೂ ಇಚ್ಛಾಶಕ್ತಿ ಇಲ್ಲ. ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವ ಸಂದರ್ಭದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡುವುದಾಗಿ ಭರವಸೆ ನೀಡಿತ್ತು. ಆ ಕೆಲಸವನ್ನೂ ಮಾಡಿಲ್ಲ. ನಮ್ಮನ್ನಾಳುವ ಜನಪ್ರತಿನಿಧಿಗಳು ಏನನ್ನ ಮಾಡಬೇಕು ಅದನ್ನ ಮಾಡದೇ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದರಲ್ಲಿ ಮಹಾ ನಿಸ್ಸೀಮರು.

ಅಣ್ಣಾ ಹಜಾರೆಗೆ ದೇಶಾದ್ಯಂತ ಜನ ಬೆಂಬಲ ನೀಡುವುದನ್ನು ಕಂಡು ನಡುಗಿ ಹೋಗಿದ್ದರೂ ಕೂಡ, ಮತ್ತೊಂದೆಡೆ ಬಹುಶಃ ಅಣ್ಣಾ ಹೋರಾಟದ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಇದೆ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಪೆಕರುಪೆಕರಾಗಿ ಹೇಳಿಕೆ ಕೊಟ್ಟಿದ್ದರು. ರಾಜಕಾರಣಿಗಳ ನೈತಿಕ ದಿವಾಳಿತನಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾ? ಅಣ್ಣಾ ಏಕಾಂಗಿಯಾಗಿದ್ದರು, ಅವರಿಗೆ ಯಾವುದೇ ಸಂಘಟನೆಗಳಿರಲಿಲ್ಲ. ಕೆಲವೊಂದಷ್ಟು ಮಿತ್ರರು ಮಾತ್ರ ಇದ್ದರು. ಹಾಗಾದ್ರೆ ಅವರ ಆಂದೋಲನಕ್ಕೆ ಇಷ್ಟೊಂದು ಜನಬೆಂಬಲ ಸಿಕ್ಕಿದ್ದು ಹೇಗೆ ಎಂಬುದಾಗಿ ಪ್ರಶ್ನಿಸುವ ಕಾಂಗ್ರೆಸ್ ಮೊದಲು ತನ್ನನ್ನು ತಾನು ಪ್ರಶ್ನಿಸಿಕೊಳ್ಳಬೇಕು.

ಅಣ್ಣಾ ಹಜಾರೆ ಒಂದು ಕರೆಗೆ ಜನ ಯಾಕೆ ಇಷ್ಟೊಂದು ಪ್ರಮಾಣದಲ್ಲಿ ಬೆಂಬಲ ನೀಡುತ್ತಿದ್ದಾರೆ....ಇದು ಬಾಡಿಗೆ ಹಣ ಕೊಟ್ಟು ಕರೆತಂದ ಜನರಲ್ಲ, ಜನರೇ ಸ್ವಯಂ ಪ್ರೇರಿತರಾಗಿ ಬೀದಿಗಿಳಿದಿದ್ದಾರೆ. ಮತ್ತೆ ಇದು ಪ್ರಜಾತಂತ್ರದಲ್ಲಿ ಪ್ರಬಲ ಜನಲೋಕಪಾಲ್ ಕಾಯ್ದೆ ಜಾರಿಯಾಗಬೇಕು ಎಂಬುದು ಜನರ ಹಕ್ಕೊತ್ತಾಯವಾಗಿದೆ ಎಂಬುದನ್ನ ತಿಳಿದುಕೊಳ್ಳಬೇಕಾಗಿದೆ. ಹಾಗಂತ ಜನಲೋಕಪಾಲ್ ಜಾರಿಯಾದ ಕೂಡಲೇ ದೇಶ ಸಂಪೂರ್ಣ ಭ್ರಷ್ಟಾಚಾರ ಮುಕ್ತವಾಗುತ್ತೆ ಎಂದೇನಲ್ಲ. ಯಾಕೆಂದರೆ ಈ ದೇಶದಲ್ಲಿ ಸುಧಾರಣೆಯಾಗಬೇಕಾದದ್ದು ಇನ್ನೂ ಬಹಳಷ್ಟಿದೆ. ಚುನಾವಣಾ ವ್ಯವಸ್ಥೆ ಕೂಡ ಅಷ್ಟೇ ಮುಖ್ಯ. ಆಳುವ ವರ್ಗ ಎಷ್ಟು ಭ್ರಷ್ಟವಾಗಿದೆಯೋ, ನಾವು ಕೂಡ ಅಷ್ಚೇ ಭ್ರಷ್ಟರಾಗಿದ್ದೇವೆ.

ನಾವೇ ಎಂತಹವರನ್ನ ಆರಿಸಿ ಕಳುಹಿಸಿದ್ದೇವೆ ಎಂಬುದನ್ನ ಆತ್ಮಾವಲೋಕನ ಮಾಡಿಕೊಂಡರೆ ಚುನಾವಣಾ ವ್ಯವಸ್ಥೆ, ಬಗೆಹರಿಯದ ರೈತರ ಸಮಸ್ಯೆ, ಕೈಗಾರಿಕೆಯ ಹೆಸರಿನಲ್ಲಿ ಮಾಡುತ್ತಿರುವ ಲೂಟಿ, ರಾಜಕಾರಣಿಗಳ ಧನದಾಹ, ಭೂದಾಹದ ಬಗ್ಗೆ ತಿಳಿಯುತ್ತದೆ. ನೈತಿಕತೆಯನ್ನೇ ಮರೆತು ವರ್ತಿಸುತ್ತಿರುವ ಇಂತಹ ಜನವಿರೋಧಿ ಸರ್ಕಾರಕ್ಕೆ ಬೀದಿಗಿಳಿದು ಹೋರಾಟ ಮಾಡಲೇಬೇಕಾಗಿದೆ. ಆ ನಿಟ್ಟಿನಲ್ಲಾದರೂ ಅಣ್ಣಾ ಹಜಾರೆ ಹೋರಾಟ ಒಂದು ತಾರ್ಕಿಕ ಅಂತ್ಯ ಕಂಡು ಯಶಗಳಿಸಿದರೆ ಅದು ಪ್ರಜಾಪ್ರಭುತ್ವಕ್ಕೆ, ಜನಸಾಮಾನ್ಯರಿಗೆ ದೊರೆತ ನಿಜವಾದ ಜಯವಾಗಲಿದೆ...ಅಲ್ಲದೇ ಇತಿಹಾಸ ಮರೆತರೆ ಅದರ ಪರಿಣಾಮ ಏನು ಹಾಗೂ ಜನವಿರೋಧಿಯಾಗಿ ಉಡಾಫೆಯಿಂದ ನಡೆದುಕೊಂಡರೆ ಅದರ ಫಲಿತಾಂಶ ಏನಾಗಲಿದೆ ಎಂಬುದು ಅಣ್ಣಾ ಹಜಾರೆಯ ಈ ಹೋರಾಟ ರಾಜಕೀಯ ಪಕ್ಷಗಳಿಗೊಂದು ಪಾಠವಾಗಲಿದೆ.

No comments: