Sunday, June 29, 2008

ರಜನೀಶ್‌‌ರ ಶೂನ್ಯ ನಾವೆ.....

ಓಶೋ ರಜನೀಶ್ ಮಾತು ಎಷ್ಟು ಸುಂದರವೋ, ಅವರ ತರ್ಕಬದ್ದವಾದ ಬರಹವೂ ಅಷ್ಟೇ ಆಪ್ತವಾಗುತ್ತವೆ. ಆದರೆ ರಜನೀಶ್ ಬಗ್ಗೆ ಒಂದು ವರ್ಗ ತೀವ್ರವಾಗಿ ವಿರೋಧಿಸುತ್ತದೆ, ಆತ ಸೆಕ್ಸ್ ಗುರು, ಲೈಂಗಿಕತೆ ಬಗ್ಗೆ ಮಾತನಾಡುತ್ತಾನೆ ಹೀಗೆ ಆರೋಪಗಳು ಪುಂಖಾನುಪುಂಖವಾಗಿ ಹೊರಬೀಳುತ್ತವೆ. ಆದರೆ ರಜನೀಶ್ ರಾಜಕಾರಣಿ, ಪಂಡಿತ, ಪುರೋಹಿತ, ಮುಲ್ಲಾ, ಪಾದ್ರಿ ಹೀಗೆ ಎಲ್ಲದರ ಬಗ್ಗೆಯೂ ಟೀಕಿಸಿ ಮಾತನಾಡಿದ್ದಾರೆ.

ಯಾವುದೇ ಕಟ್ಟುಪಾಡಿಗೆ ಒಳಗಾಗಿ ಮತಾಂಧರಂತೆ, ಒಂದು ವರ್ಗದ ವಕ್ತಾರರಂತೆ ಅವರು ಮಾತನಾಡಿಲ್ಲ ಆ ಕಾರಣಕ್ಕಾಗಿಯೇ ಅವರು ಇಷ್ಟವಾಗುತ್ತಾರೆ. ರಜನೀಶ್ ಚಾಂಗ್ ತ್ಸು ಅವರ ಹಿನ್ನೆಲೆಯನ್ನಿಟ್ಟುಕೊಂಡು ಮಾತನಾಡಿದ ಶೂನ್ಯ ನಾವೆಯಲ್ಲಿನ ಒಂದು ಅಂಶವನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಯಾಕೆಂದರೆ ರಜನೀಶ್ ಯಾವುದರ ಬಗ್ಗೆಯೇ ಮಾತನಾಡಲಿ, ಅದು ನಮ್ಮನ್ನು ಅಷ್ಟು ಆಕರ್ಷಿಸುತ್ತದೆ. ಇವತ್ತಿನ ಸ್ಥಿತಿಗತಿ, ನಮ್ಮ ಕಾರ್ಯದ ಒತ್ತಡ, ನಾವು ಆ ಸನ್ನಿವೇಶದ ನಡುವೆ ಸಿಕ್ಕಿಬೀಳುತ್ತಿರುವುದನ್ನು ನೋಡಿದರೆ, ರಜನೀಶ್ ಅವರು ಈ ಮಾತು ಸತ್ಯ ಎನ್ನಿಸುತ್ತದೆ....

ಅವರ ಪ್ರಕಾರ ಮನುಷ್ಯ ಅನುಪಯುಕ್ತನಾಗಿರಬೇಕು, ಅರೇ ಇದೇನಪ್ಪಾ, ಎಲ್ಲರೂ ಕ್ರಿಯಾಶೀಲರಾಗಿ ಅಂದರೆ ಈತ ರಜನೀಶರ ಅನುಪಯುಕ್ತರಾಗಿರಿಯನ್ನೇ ಬಹಳ ಖುಷಿಕೊಡುವ ವಿಚಾರ ಎಂದು ಬರೆಯುತ್ತಿದ್ದಾರಲ್ಲಪ್ಪ ಅಂತ ಹುಬ್ಬುಗಟ್ಟಿಕ್ಕಬೇಡಿ. ಅದನ್ನು ಅವರು ಒಂದು ಕಥೆಯ ಮೂಲಕ ವಿವರಿಸುತ್ತಾರೆ. ಒಂದು ನಗರದಲ್ಲಿನ ಯುವಕರನ್ನು ಬಲಾತ್ಕಾರವಾಗಿ ಸೇನೆಗೆ ಸೇರಿಸಲ್ಪಟ್ಟಿದ್ದರಂತೆ. ಏಕೆಂದರೆ ಅವರೆಲ್ಲರೂ ಉಪಯುಕ್ತರು. ಆದರೆ ಒಬ್ಬ ಗೂನು ಬೆನ್ನಿನವನನ್ನು ಮಾತ್ರ ಸೇರಿಸಿಕೊಂಡಿಲ್ಲ.

ಈತ ಅನುಪಯುಕ್ತ ಎಂದು ಬಿಟ್ಟುಬಿಟ್ಟಿದ್ದರು. ನೀವು ಗೂನು ಬೆನ್ನಿನವನಂತಿರಿ, ಏಕೆಂದರೆ ಇವರ ದೃಷ್ಟಿಯಲ್ಲಿ ಉಪಯುಕ್ತರು ಸದಾ ಗೊಂದಲಕ್ಕೆ ಒಳಗಾಗುವವರು. ಜಗತ್ತು ನಿಮ್ಮನ್ನು ಬಳಸಿಕೊಳ್ಳುವುದು, ಪ್ರತಿಯೊಬ್ಬರು ನಿಮ್ಮನ್ನು ಉಪಯೋಗಿಸಲು ಸಿದ್ದರಾಗಿರುವರು, ಹಸ್ತಕ್ಷೇಪ ಮಾಡುತ್ತಲೇ ಇರುತ್ತಾರೆ, ನಿಮ್ಮನ್ನಾಳಲು ಸದಾ ಸಿದ್ದರಾಗಿರುತ್ತಾರೆ. ನೀವು ಅಪ್ರಯೋಜಕರಾಗಿದ್ದಾಗ ನಿಮ್ಮನ್ನು ಜನ ಮರೆತೇ ಬಿಡುತ್ತಾರೆ.

ನಿಮ್ಮನ್ನು ನಿಮ್ಮ ಮೌನದಲ್ಲಿರಲು ಬಿಡುವರು. ಅವರು ನಿಮ್ಮ ಬಗ್ಗೆ ಚಿಂತೆ ಮಾಡುವುದಿಲ್ಲ. ಆ ಕಾರಣಕ್ಕಾಗಿಯೇ ರಜನೀಶ್ ಆ ಮಾತನ್ನು ಬಹಳ ಒತ್ತಿ ಹೇಳಿದ್ದಾರೆ. ಎಚ್ಚರಿಕೆಯಿಂದಿರಿ ಮತ್ತು ಬಲು ಉಪಯುಕ್ತರಾಗದಿರಿ. ಹೀಗಿರದಿದ್ದರೆ ಎಲ್ಲರೂ ನಿಮ್ಮನ್ನು ಶೋಷಣೆ ಮಾಡುವರು. ನಂತರ ಇವರು ನಿಮ್ಮನ್ನು ನಿರ್ವಹಿಸುವರು, ನಿಯಂತ್ರಿಸುವರು, ಮತ್ತಾಗ ನೀವು ಗೊಂದಲಕ್ಕೆ ಒಳಗಾಗುವಿರಿ.

ಯಾಕೆಂದರೆ ನೀವೀಗ ರಾಜಕೀಯದಲ್ಲಿನ ದೊಂಬರಾಟವನ್ನು ಗಮನಿಸಿ ರಜನೀಶ್ ಮಾತುಗಳು ಸತ್ಯ ಎನಿಸುತ್ತದೆ. ಅಲ್ಲಿ 20-30ವರ್ಷ ಕತ್ತೆ (? ) ದುಡಿದ ಹಾಗೇ ದುಡಿದು ತಮಗೆ ಉನ್ನತ ಹುದ್ದೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತಾರೆ, ಆದರೆ ಕೊನೆಗೆ ಅವರನ್ನು ಹೇಳದೇ ಕೇಳದೆ ಒಂದೋ (ಸಿಂಧ್ಯಾ ತರ, ಅವರೇನೂ ಬಿಎಸ್ಪಿಗಾಗಿ ಹೆಚ್ಚು ದುಡಿಯಲಿಲ್ಲ ಬಿಡಿ) ಮೂಲೆಗುಂಪು ಮಾಡುತ್ತಾರೆ, ಇಲ್ಲ ಕಿತ್ತೊಗೆಯುತ್ತಾರೆ.

ಜೆಡಿಎಸ್‌, ಕಾಂಗ್ರೆಸ್, ಬಿಜೆಪಿ ಹೀಗೆ ಮೂಲೆಗುಂಪು ಮಾಡಿದ ಉದಾಹರಣೆ ಬಹಳಷ್ಟಿದೆ. ಆದರೆ ನಿರುಪಯುಕ್ತತೆಯಲ್ಲಿ ಅದರದ್ದೇ ಆದ ಉಪಯುಕ್ತತತೆ ಇದೆ ಎಂಬುದು ರಜನೀಶ್ ಅಭಿಮತ. ಇದೊಂದು ಜೀವಂತ ಅಂಶ ನೀವಿದನ್ನು ಪೂರ್ಣವಾಗಿ ಬಿಟ್ಟು ಬಿಟ್ಟರೆ ಆಗ ಯಾವುದೂ ಸಹ ಉಪಯುಕ್ತವಲ್ಲ, ನಿಷ್ಪ್ರಯೋಜಕ ವಸ್ತುಗಳು ಇರುವುದರಿಂದಲೇ ಉಪಯುಕ್ತ ವಸ್ತುಗಳು ಇರುವುದು.ಆದರೆ ಜಗತ್ತಿನಲ್ಲಿ ಏನಾಗುತ್ತಿದೆ ನೋಡಿ, ವಿನೋದದ ಎಲ್ಲಾ ಚಟುವಟಿಕೆಗಳನ್ನೂ ನಾವು ಇಲ್ಲವಾಗಿಸಿದ್ದೇವೆ.

ಏಕೆಂದರೆ ನಮ್ಮ ಅನಿಸಿಕೆ, ಆಗ ನಮ್ಮಲ್ಲಿಯ ಶಕ್ತಿಯನ್ನು ಪೂರ್ತಿ ಉಪಯೋಗಕರವಾದುದಕ್ಕೆ ವಿನಿಯೋಗಿಸಬಹುದು ಎಂದು. ಆದರೆ ಕೆಲಸವಿಂದು ಬೇಸರ ತರುವಂತಾಗಿದೆ, ನಾವಿಂದು ವಿರುದ್ಧ ಧ್ರುವದೆಡೆಗೆ ಸಾಗಲೇಬೇಕಾಗಿದೆ...ನಿಮ್ಮ ಸುತ್ತಲಿನ ಯಶಸ್ವಿ ವ್ಯಕ್ತಿಗಳನ್ನು ನೋಡಿ, ರಾಜಕಾರಣಿಗಳು, ಧನವಂತರು, ಬೃಹತ್ ಕೈಗಾರಿಕೋದ್ಯಮಿಗಳನ್ನು ಏನಾಗುತ್ತಿದೆ ಅವರಿಗೆ? ಅವರು ಸಂಗ್ರಹಿಸಿರುವ ವಸ್ತುಗಳನ್ನು ನೋಡಬೇಡಿ, ನೇರವಾಗಿ ಅವರನ್ನು ನೋಡಿ.

ನೀವೇನಾದರು ಅವರ ಬಳಿ ಇರುವ ವಸ್ತುಗಳನ್ನು ನೋಡಿದರೆ ಮೋಸ ಹೋಗುವಿರಿ, ವಸ್ತುಗಳಿಗೆ ಅಲ್ಸರ್ ಬರುವುದಿಲ್ಲ, ಕಾರುಗ ಳಿಗೆ ಹೃದಯಾಘಾತವಾಗುವುದಿಲ್ಲ, ಮನೆಗಳನ್ನು ಆಸ್ಪತ್ರೆಗೆ ಸೇರಿಸುವುದಿಲ್ಲ. ಅದಕ್ಕೆ ನೀವು ವಸ್ತುಗಳನ್ನು ನೋಡಬೇಡಿ ಎನ್ನುವ ರಜನೀಶ್, ಈ ವಸ್ತುಗಳ ಮಧ್ಯೆ ಇರುವ ಮನುಷ್ಯನನ್ನು ನೋಡಿ ಎಂದೆನ್ನುತ್ತಾರೆ, ಯಾಕೆಂದರೆ ಆಗ ನಿಮಗೆ ಕಾಣುವುದು ಆತನ ಮತ್ಸರ, ಬಡತನ, ಮುಖವಾಡದ ಬದುಕು, ಆಗ ಭಿಕ್ಷುಕ ಕೂಡ ಈತನಿಗಿಂತ ಮೇಲಾಗಿ ಕಾಣಿಸುತ್ತಾನೆ. ಈತನಿಗಿಂತ ಶ್ರೀಮಂತ ಆತನಾಗುತ್ತಾನೆ. ಬಡವನ ಜೀವನ ಶ್ರೀಮಂತನ ಜೀವನಕ್ಕಿಂತ ಶ್ರೀಮಂತವಾಗಿರುತ್ತದೆ.... ಈಗ ಹೇಳಿ ರಜನೀಶ್ ಮಾತು ಎಲ್ಲೋ ಒಂದೆಡೆ ನಿಜವೆನಿಸುವುದಿಲ್ಲವೇ......

ಎಡಪಕ್ಷಗಳ ''ಎಡ''ಬಿಡಂಗಿತನ....


ಕಾರ್ಮಿಕರ, ರೈತರ, ಶೋಷಿತರ ಧ್ವನಿಯಾಗಿದ್ದ ಕಮ್ಯೂನಿಷ್ಟ್ ಪಕ್ಷ ಯಾವ ಹಾದಿ ಹಿಡಿದಿದೆ. ಅಧಿಕಾರದ ಗದ್ದುಗೆ ಏರಲು ಎಲ್ಲಾ ಪಕ್ಷಗಳಿಗೂ ಒಂದೊಂದು ಅಜೆಂಡಾ ಇದ್ದಂತೆ, ಎಡಪಕ್ಷಗಳು ಕಾರ್ಮಿಕ, ರೈತ ಸಮಸ್ಯೆಗಳ ಅಜೆಂಡಾ ಮುಂದಿಟ್ಟು ಅಧಿಕಾರ ಪಡೆದು ಅದು ಸಾಧಿಸಿದ್ದಾದರು ಏನನ್ನು?. ಸತತವಾಗಿ ಕೆಂಪುಕೋಟೆಯನ್ನು ಭದ್ರಪಡಿಸಿ ಕೊಂಡಿರುವ ಪಶ್ಚಿಮಬಂಗಾಲದಲ್ಲಿ ರೈತರ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಗಮನ ಹರಿಸಿದರೆ, ಎಡಪಕ್ಷಗಳ ತತ್ವ ಸಿದ್ದಾಂತಗಳು ಗಾಳಿಗೆ ತೂರಿ ಹೋಗಿದೆ ಎಂಬುದರಲ್ಲಿ ಯಾವ ಅನುಮಾನವಿಲ್ಲ.
ಜಾಗತೀಕರಣದ ಪ್ರಬಲ ವಿರೋಧಿಯಾಗಿರುವ ಎಡಪಕ್ಷದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಆಧುನಿ ಕತೆಯ ಹರಿಕಾರರಾಗಲು ಹೊರಟಿದ್ದಾರೆ. ತಾವು ಅಭಿವೃದ್ದಿ ವಿರೋಧಿಗಳಲ್ಲ, ಹಳೇ ಸಿದ್ದಾಂತಕ್ಕೆ ಜೋತು ಬಿದ್ದರೆ ಪ್ರಗತಿ ಸಾಧ್ಯವಿಲ್ಲ ಎಂದು ವಿಶ್ಲೇಷಣೆಗಿಳಿದ ಬುದ್ಧದೇವ್, ಪ್ರಗತಿಯ ಹರಿಕಾರರಾಗಲು ಹೋಗಿ ರೈತರ ಜನಸಾಮಾನ್ಯರ ಬದುಕನ್ನು ಬೀದಿಪಾಲು ಮಾಡಿಬಿಟ್ಟಿದ್ದಾರೆ.
ಪಶ್ಚಿಮಬಂಗಾಳದಲ್ಲಿ 1947 ರಿಂದ 2000ವರೆಗೆ ಅಭಿವೃದ್ಧಿ ಹೆಸರಿನಲ್ಲಿ 47ಲಕ್ಷ ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಇದ ರಿಂದ ಸುಮಾರು 70 ಲಕ್ಷ ಜನರು ತೊಂದರೆ ಅನುಭವಿಸುವಂತಾಗಿದೆ. ಇದರಲ್ಲಿ 36ಲಕ್ಷ ಜನ ವಾಸಿಸಲು ಜಾಗವಿಲ್ಲದೆ ಪರದಾಡುವಂತಾದರೆ, 34 ಲಕ್ಷ ಜನ ಹೊಟ್ಟೆಪಾಡಿಗಾಗಿ ಇದ್ದ ಸಾಗುವಳಿ ಭೂಮಿಯನ್ನೂ ಕಿತ್ತುಕೊಂಡಿದ್ದರು! ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಈ ರೀತಿ ಕೈಗಾರಿಕಾ ಹೆಸರಿನಲ್ಲಿ ಭೂಮಿ ಕಳೆದುಕೊಂಡವರು ಸರಾಸರಿ 60ಮಿಲಿಯನ್ ಮಂದಿ!
ಅದರಲ್ಲಿ ಶೇ.10ರಷ್ಟು ಭಾಗ ಪಶ್ಚಿಮಬಂಗಾಳದ ರೈತರು. ಹೀಗೆ ಭೂಮಿ ಕಳೆದುಕೊಂಡವರಲ್ಲಿ ಶೇ.20 ಬುಡಕಟ್ಟು ಜನಾಂಗ, ಶೇ.30 ದಲಿತರು, ಇನ್ನುಳಿದ ಶೇ.20 ಅತ್ಯಂತ ಕಡು ಬಡವರು, ಮೀನು ಹಿಡಿಯುವವರು ಮತ್ತು ಕೂಲಿ ಕಾರ್ಮಿಕರು. ಇವರಾರು ಧ್ವನಿ ಎತ್ತಲು ಶಕ್ತರಾಗದ ಜನ!!
1951-1955ರವರೆಗೆ ನಡೆದ ಅಭಿವೃದ್ದಿ ಕಾರ್ಯದಲ್ಲಿ ಭೂರಹಿತವಾದ ಶೇ.28ರಷ್ಟು ಜನರಿಗೆ ಪುನರ್ವಸತಿ ಕಲ್ಪಿಸಿಕೊಡಲಾಗಿತ್ತು. ಅದರಂತೆ ಒರಿಸ್ಸಾ ಶೇ.33ರಷ್ಟು, ಗೋವಾ ಶೇ.34, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪುನರ್ವಸತಿ ಕಲ್ಪಿಸಿಕೊಟ್ಟ ರಾಜ್ಯ ಪಶ್ಚಿಮಬಂಗಾಳ(ಕೇವಲ ಶೇ.9), ಮತ್ತೊಂದು ರಾಜ್ಯ ಕೇರಳ(ಶೇ.13), ಇವೆರಡೂ ರಾಜ್ಯಗಳು ರೈತರ ಮತ್ತು ಕಾರ್ಮಿಕರ ಪರ ಎಂದು ಅಧಿಕಾರದ ಗದ್ದುಗೆ ಏರಿದ್ದರೂ ಸಹ ಇವರು ರೈತರ ಬಗ್ಗೆ ತೋರಿದ ಕಾಳಜಿ ಎಷ್ಟರ ಮಟ್ಟಿಗೆ ಇದೆ ಎಂಬುದು ಈ ಅಂಕಿ-ಅಂಶಗಳಿಂದ ಸಾಬೀತಾಗುತ್ತದೆ.!! ರೈತರ ಬದುಕಿನ ಬಗ್ಗೆ, ಅವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಪಶ್ಚಿಮಬಂಗಾಳದಲ್ಲಿ ಒತ್ತಡ ಬಿದ್ದಿದ್ದರೆ ಅದು ಮಾನವ ಹಕ್ಕುಗಳ ಕಾರ್ಯಕರ್ತರಿಂದ.
ಸಿಂಗೂರ್‌ನಲ್ಲಿ ಭೂಮಿ ಕಳೆದುಕೊಂಡವರ ರೈತರಿಗೆ ಪುನರ್ವಸತಿ ಕಲ್ಪಿಸಿಕೊಡುವ ಬಗ್ಗೆ ಪಶ್ಚಿಮಬಂಗಾಳ ಸರಕಾರ ಆಶ್ವಾಸನೆ ನೀಡಿದೆ. ಆದರೆ 70 ಲಕ್ಷ ಜನರಿಂದ ಜಾಗ ಕಿತ್ತುಕೊಂಡಿದ್ದರೂ ಸಹ ಅವರ ಹೊಟ್ಟೆಪಾಡಿಗಾಗಲಿ, ಪುನರ್ವಸತಿ ಕುರಿತಾಗಲಿ ಸರಕಾರ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ!.ಪಶ್ಚಿಮಬಂಗಾಳ ಹೆಚ್ಚಿನ ಭೂಮಿಯನ್ನು ವಶಪಡಿಸಿಕೊಳ್ಳುವ ಮೂಲಕ ಖಾಸಗಿ ಬಂಡವಾಳ ಹೂಡಿಕೆದಾರರಿಗೆ ಅವಕಾಶ ಮಾಡಿಕೊಡುತ್ತಿದೆ ವಿನಃ ಜನಸಾಮಾನ್ಯರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಸುಮಾರು 250 ರೈತರು ಬೆಳೆದಿರುವ 997 ಹೆಕ್ಟೇರ್ ಕೃಷಿ ಭೂಮಿಯನ್ನು ಸಿಂಗೂರ್‌ನಲ್ಲಿ ವಶಪಡಿಸಿಕೊಂಡಿತ್ತು. ಆದರೆ ಆ ಭೂಮಿಯನ್ನು ನೋಂದಾಯಿಸಿರಲಿಲ್ಲ, ಆ ನಿಟ್ಟಿನಲ್ಲಿ ಅವರಾರಿಗೂ ಪರಿಹಾರವೂ ಇಲ್ಲ, ಪುನರ್ವಸತಿಗೆ ಅವಕಾಶವೂ ಇಲ್ಲ. ಹೀಗೆ ಕೃಷಿ ಭೂಮಿ ಕಳೆದುಕೊಂಡ ಒಂದು ಸಾವಿರ ಕುಟುಂಬಗಳು ವಿವಿಧ ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದೆ. ಕೃಷಿ ಮಾಡುತ್ತಿರುವ ರೈತರು ದಿನದ ಸಂಬಳಕ್ಕಾಗಿ ದುಡಿಯುವವರು, ಶೇ.50ಕ್ಕಿಂತಲೂ ಹೆಚ್ಚಿನ ಜನರಿಗೆ ಕೆಲಸವಿಲ್ಲ. ಅವರೆಲ್ಲ ಬಡತನ ರೇಖೆಗಿಂತ ಕೆಳಗಿರುವವರು.
ಹೆಚ್ಚಿನವರು ತಮ್ಮ ಮಕ್ಕಳನ್ನು ಶಾಲೆಯಿಂದ ಬಲವಂತವಾಗಿ ಬಿಡಿಸಿ, ಕೆಲಸ ಮಾಡಲು ಕಳುಹಿಸುತ್ತಿದ್ದಾರೆ. ಅದಕ್ಕಿಂತಲೂ ಆಘಾತಕಾರಿ ಅಂಶ ಆದಾಯ ಗಳಿಕೆಗಾಗಿ ಹೆಚ್ಚಿನವರು ಪಾತಕ ಕೃತ್ಯ ಮತ್ತು ವೇಶ್ಯಾವಾಟಿಕೆಗೆ ಇಳಿದುಬಿಟ್ಟಿದ್ದಾರೆ!! ಇವೆಲ್ಲದರ ಪರಿಣಾಮ ಪಶ್ಚಿಮಬಂಗಾಳ ಸರಕಾರ ಈಗ ಕರಾಳ ನೋವನ್ನು ಅನುಭವಿಸುತ್ತಿದೆ. ಇತ್ತೀಚೆಗಷ್ಟೇ ಪಶ್ಚಿಮಬಂಗಾಳದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನ ಎಡಪಕ್ಷಗಳನ್ನು ತಿರಸ್ಕರಿಸಿದ್ದಾರೆ.
ಜೂನ್ 29ರ ಟೈಮ್ಸ್ ಆಫ್ ಇಂಡಿಯಾದಲ್ಲಿ ಖ್ಯಾತ ಲೇಖಕಿ ಮಹಾಶ್ವೇತ ದೇವಿಯವರು ಕಾರೋಲ್ ಅಂದ್ರಾದೆ ಅವರಿಗೆ ನೀಡಿದ ಸಂದರ್ಶನದಲ್ಲಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಅವರು ಗುಜರಾತ್‌ನ ನರೇಂದ್ರ ಮೋದಿಗಿಂತ ಕಡೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತ್ಯತೀತ, ರೈತ ಪರ ಮುಖವಾಡದ ಎಡಪಕ್ಷ ಮೂಲಭೂತವಾದಿಗಳ ಒತ್ತಡಕ್ಕೆ ಮಣಿದೇ ತಸ್ಲೀಮಾ ನಸ್ರೀನ್‌ಳಿಗೆ ರಕ್ಷಣೆ ನೀಡಲಾಗದೆ ಕೋಲ್ಕತಾದಿಂದ ಹೊರಗಟ್ಟಿದೆ.
ಪಶ್ಚಿಮಬಂಗಾಳದ ನಂದಿಗ್ರಾಮದಲ್ಲಿ ನಡೆದ ಹಿಂಸೆ, ಅತ್ಯಾಚಾರ ಭಯಾನಕ ಹುಟ್ಟಿಸುವಂತಾದದ್ದು, ಆ ಕಾರಣಕ್ಕಾಗಿಯೇ ಪಶ್ಚಿಮಬಂಗಾಳದ ಹೃದಯಭಾಗದಂತಿರುವ ನಂದಿಗ್ರಾಮ ಮತ್ತು ಸಿಂಗೂರ್‌ನಲ್ಲಿ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಎಡಪಕ್ಷವನ್ನು ಜನ ತಿರಸ್ಕರಿಸಿದ್ದಾರೆ.
ನಿಜಕ್ಕೂ ಪಶ್ಚಿಮಬಂಗಾಳ ಸರಕಾರಕ್ಕೆ ಆಡಳಿತದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಹಾಶ್ವೇತ ದೇವಿ ಹೇಳಿರುವ ಮಾತಿನಲ್ಲಿ ಯಾವುದೇ ಹುರುಳಿಲ್ಲದಿಲ್ಲ. ಅಲ್ಲದೇ ಗುಜರಾತ್‌ನಲ್ಲಿ ಕೋಮು ಹಿಂಸಾಚಾರ ನಡೆದ ಬಳಿಕ ತಾನು ಅಹಮದಾಬಾದ್, ಬರೋಡಾ ಮತ್ತು ಸೂರತ್‌ಗೆ ಭೇಟಿ ನೀಡಿದ್ದೆ, ಅಲ್ಲಿ ಉತ್ತಮವಾದ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿದೆ, ವಿದ್ಯುತ್ ವ್ಯವಸ್ಥೆ ಮಾದರಿಯಾಗಿದೆ. ಅದೇ ಪಶ್ಚಿಮಬಂಗಾಳವನ್ನು ಒಮ್ಮೆ ನೋಡಿ, ರಸ್ತೆ ಇಲ್ಲ, ಆರೋಗ್ಯ ಕೇಂದ್ರ, ವಿದ್ಯುತ್ ಏನೂಂದ್ರೆ ಏನೂ ಇಲ್ಲ ಇಲ್ಲಿ ಎಂದು ದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಅಣುಒಪ್ಪಂದದಲ್ಲಿಯೂ ಖ್ಯಾತೆ ತೆಗೆಯುತ್ತಿರುವ ಎಡಪಕ್ಷಗಳು ಯಾವ, ಸಿದ್ದಾಂತ, ತಾತ್ವಿಕ ನೆಲೆಗಟ್ಟಿನ ಮೇಲೆ ಹೋರಾಟ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದೇ ಜನರಲ್ಲಿ ಗೊಂದಲ ಹುಟ್ಟಿಸುತ್ತಿದ್ದರೆ, ಮತ್ತೊಂದೆಡೆ ಎಡಪಕ್ಷಗಳ ಧೋರಣೆ ಕಾರ್ಮಿಕ ವರ್ಗ ಸೇರಿದಂತೆ ಜನಸಾಮಾನ್ಯರಲ್ಲೂ ರೇಜಿಗೆ ಹುಟ್ಟಿಸಿದೆ. ಎಡಪಕ್ಷಗಳು ಎತ್ತ ಸಾಗುತ್ತಿವೆ.....

Tuesday, May 27, 2008

ಹೂ ಕಿಲ್ಡ್ ಗಾಂಧಿ.....


ಸ್ವಾತಂತ್ರ್ಯ ಚಳವಳಿಗಾರರಲ್ಲಿ ನನ್ನನ್ನ ಬಹುವಾಗಿ ಕಾಡಿದ ವ್ಯಕ್ತಿ ''ವೀರ ಸಾವರ್‌‌ಕರ್'', ಪಿಯುಸಿಯಲ್ಲಿ ಇತಿಹಾಸ ಓದುವಾಗ ಸಾವರ್‌‌ಕರ್ ಹೋರಾಟದ ಬಗ್ಗೆ ಅಭಿಮಾನ, ಮೆಚ್ಚುಗೆ ತುಂಬಿತ್ತು. ಆ ಸಂದರ್ಭದಲ್ಲಿ ಆರ್‌ಎಸ್‌‌ಎಸ್‌ನ ಶಿವರಾಮು ಅವರು ಬರೆದ ''ಆತ್ಮಾಹುತಿ' ಪುಸ್ತಕ ಓದಿದ ಮೇಲಂತೂ ಎಂತಹ ವ್ಯಕ್ತಿಯಾದರು ಸಾವರ್‌ಕರ್ ದೇಶಪ್ರೇಮದ ಬಗ್ಗೆ ಅಪಸ್ವರ ಎತ್ತುವಂತಿಲ್ಲ. ಆದರೆ ಯಾವಾಗ ಅಟಲ್‌‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌‌ಡಿಎ ಸರಕಾರ ಸಂಸತ್ ಭವನದಲ್ಲಿ ಗಾಂಧಿ ಫೋಟೋದ ಮುಂಭಾಗ ಸಾವರ್‌‌ಕರ್ ಪೋಟೋ ತೂಗು ಹಾಕಿದರೋ ಆಗ ಪ್ರತಿಭಟನೆ ಭುಗಿಲೆದ್ದಿತು.
ಗಾಂಧಿ ಹತ್ಯೆ ಸಂಚು ರೂಪಿಸಿದ ಸಾವರ್‌‌ಕರ್‌‌ರಂತಹವರಿಗೆ ಅಲ್ಲಿ ಸ್ಥಾನ ನೀಡುವುದು ರಾಷ್ಟ್ರಪಿತನಿಗೆ ಮಾಡಿದ ಅವಮಾನ ಎಂಬುದಾಗಿ ಬಿಜೆಪಿಯನ್ನು ಹೊರತುಪಡಿಸಿ ಎಲ್ಲಾ ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ 50 ವರ್ಷಗಳ ಕಾಲ ಕರಿನೀರ ಶಿಕ್ಷೆಯನ್ನು ಅನುಭವಿಸಿದ ವೀರ ಸಾವರ್‌‌ಕರ್ ನಿಜಕ್ಕೂ ವೀರರೇ ? ಅವರು ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಬ್ರಿಟಿಷರಲ್ಲಿ ಗೋಗರೆದಿದ್ದರು....ಹೀಗೆ ಒಂದೊಂದೆ ಅಂಶಗಳು ತಿಳಿಯತೊಡಗಿದಾಗ ಸಾವರ್‌‌ಕರ್ ಕುರಿತ ಪರ-ವಿರೋಧದ ಪುಸ್ತಕಗಳನ್ನು ಜಾಲಾಡತೊಡಗಿದ್ದೆ.ಆ ನಿಟ್ಟಿನಲ್ಲಿ ಕನ್ನಡದ ಪ್ರಮುಖ ಲೇಖಕ, ಅನುವಾದದಲ್ಲಿ ಸಿದ್ಧಹಸ್ತರಾಗಿರುವ ರವಿ ಬೆಳೆಗೆರೆಯವರು ಇದೀಗ 95ರ ವಯೋವೃದ್ದ ಮನೋಹರ್ ಮಳಗಾಂವ್‌‌ಕರ್ ಅವರು ಬರೆದಿರುವ ''ಹೂ ಕಿಲ್ಡ್ ಗಾಂಧಿ'' ಪುಸ್ತಕದ ಅನುವಾದವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಬೆಳೆಗರೆಯವರು ಈ ಮೊದಲು ಬರೆದ ಗಾಂಧಿ ಮತ್ತು ಹತ್ಯೆ ಸಾಕಷ್ಟು ಚರ್ಚೆಗೆ ಈಡಾಗಿತ್ತು. ಇದೀಗ ಸಾವರ್‌ಕರ್‌‌ಗೆ ಸಂಬಂಧಿಸಿದ ಪುಸ್ತಕದ ಬಿಡುಗಡೆಗೆ ಮುನ್ನವೇ ಅವರು ಹಾಯ್‌‌ಬೆಂಗಳೂರು ಇತ್ತೀಚೆಗಿನ ಸಂಚಿಕೆಯಲ್ಲಿ, ತಾನು ಪುಸ್ತಕ ಅನುವಾದದಲ್ಲಿ ತೊಡಗಿದಾಗ, ನನಗೆ ಹೊಸದಾದ ಗೋಡ್ಸೆ, ಅಪ್ಟೆ ಕಾಣಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ.ಅದಕ್ಕೂ ಮೊದಲು ನಾನು ಉದಾಹರಿಸ ಹೊರಟಿರುವುದು ಕನ್ನಡದ ಹಿರಿಯ ಲೇಖಕರು ಆಗಿರುವ ಕೋ.ಚೆನ್ನಬಸಪ್ಪ ಅವರು ''ಗಾಂಧಿ ಹಂತಕರು ಯಾರು'' ಎಂಬ ಪುಸ್ತಕ ಕೂಡ ಈಗ ಮಾರುಕಟ್ಟೆಯಲ್ಲಿದೆ.ಚೆನ್ನಬಸಪ್ಪ ಅವರು ಗಾಂಧೀಜಿ ಹತ್ಯೆ ಸೇರಿದಂತೆ ಸಾವರ್‌‌ಕರ್ ಅವರು ದಯಾಭಿಕ್ಷೆ ಬೇಡಿದ ಪತ್ರದ ನಕಲನ್ನೂ ಕೂಡ ಪುಸ್ತಕದಲ್ಲಿ ದಾಖಲಿಸಿದ್ದಾರೆ.ಸಾವರ್‌‌ಕರ್‌‌ರನ್ನು ತನ್ನ ಗುರುವೆಂದೇ ನಂಬಿದ್ದ ಗೋಡ್ಸೆಯ ಮೇಲೆ ಅವರಿಗೆ ಅಪಾರ ಪ್ರೀತಿ, ಆದರೂ ಸಾವರ್‌‌ಕರ್ ಅವರು ಗಾಂಧಿ ಹತ್ಯೆಯ ವಿಚಾರಣೆ ವೇಳೆ ತನಗೆ ಗೋಡ್ಸೆ ಪರಿಚಯವೇ ಇಲ್ಲವೆಂಬಂತೆ ನಟಿಸುವ ಮೂಲಕ, ಚಾಣಾಕ್ಷತನದಿಂದ ತಮ್ಮ ಮೇಲಿನ ಆರೋಪದಿಂದ ಬಚಾವಾಗಿದ್ದರು ಎಂದು ಸಾಕ್ಷ್ಯಾಧಾರಗಳ ಸಹಿತ ವಿವರಿಸಿದ್ದಾರೆ.ಭಾಷಾಂತರದಲ್ಲಿ ಸಿದ್ಧಹಸ್ತರಾಗಿರುವ ರವಿಬೆಳೆಗೆರೆಯವರ ಪುಸ್ತಕ ಬಿಡುಗಡೆಯಾದ ಮೇಲೆ ಅದು ಪಡೆಯುವ ಪ್ರಚಾರ,ಚರ್ಚೆ ಬಹುಶಃ ಚೆನ್ನಬಸಪ್ಪ ಅವರ ಹೊತ್ತಗೆ ದೊರೆತಿಲ್ಲ ಎಂಬುದು ಸತ್ಯ.
ಆ ನಿಟ್ಟಿನಲ್ಲಿ ನಾನು ಕೂಡ ಮನೋಹರ್ ಮಳ್‌ಗಾಂವ್‌‌ಕರ್ ಅವರ ಇಂಗ್ಲಿಷ್ ಆವೃತ್ತಿಯನ್ನು ಬೆಳೆಗೆರೆ ಕನ್ನಡಕ್ಕೆ ತರ್ಜುಮೆ ಮಾಡಿ ಬಿಡುಗಡೆಗೊಳಿಸುವುದನ್ನು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ.ಆದರೂ ಮೇ 28ಕ್ಕೆ ಸಾವರ್‌‌ಕರ್ ಅವರ ಜನ್ಮ ಜಯಂತಿ ಆ ಹಿನ್ನೆಲೆಯಲ್ಲಿ ಚೆನ್ನಬಸಪ್ಪ ಅವರು ಬರೆದಿರುವ ಪುಸ್ತಕದ ಅಂಶವನ್ನು ದಾಖಲಿಸುತ್ತ ಗಾಂಧಿ ಹತ್ಯೆ ಬಗೆಗಿನ ಮತ್ತೊಂದು ಮುಖದ ಪರಿಚಯವಾಗುವ ನಿಟ್ಟಿನಲ್ಲಿ ಈ ಬರಹ....
ಮಹಾತ್ಮನ ಹತ್ಯಾಕಾಂಡ: ಗಾಂಧಿ ಹತ್ಯೆಗೆ ತಾನೊಬ್ಬನೆ ಕಾರಣ ಅದರಲ್ಲಿ ಮತ್ತ್ಯಾರೂ ಭಾಗಿಯಾಗಿಲ್ಲ ಎಂದು ನಾಥೂರಾಮ್ ನ್ಯಾಯಾಲಯದಲ್ಲಿ ''ಕೊನೆಯ''ವರೆಗೂ ವಾದಿಸಿದ್ದ. ಸಾವರ್‌‌ಕರರು ತಮಗೆ ನಾಥೂರಾಮ್ ಯಾರೆಂಬ ಬಗ್ಗೆ ಸರಿಯಾಗಿ ತಿಳಿದಿಲ್ಲ ಎಂದು ವಿಚಾರಣೆ ವೇಳೆ ವಾದಿಸಿದ್ದರು. ಅಲ್ಲದೇ ಗಾಂಧಿ ಹತ್ಯೆ ವಿಚಾರಣೆ ವೇಳೆ ಒಂದು ದಿನವೂ ನಾಥೂರಾಮನನ್ನು ಕಣ್ಣೆತ್ತಿ ನೋಡಿರಲಿಲ್ಲ!! 1930ರಿಂದ 1948ರವರೆಗಿನ ಗಳಸ್ಯ ಕಂಠಸ್ಯ ಗೆಳೆತನ ಈ ರೀತಿ ಅಪರಿಚಿತವಾಗಲು ಕಾರಣವೇನು ?.ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲೂ ಗಾಂಧಿ ಮೇಲೆ ನಾಲ್ಕೈದು ಬಾರಿ ಹತ್ಯಾ ಪ್ರಯತ್ನಗಳು ನಡೆದಿದ್ದವು.
ಆದರೆ ಆಫ್ರಿಕಾದ ''ಸ್ಮಟ್ಸ್'' ಆಡಳಿತ ಗಾಂಧಿ ಕೊಲೆಯನ್ನು ತಪ್ಪಿಸಿತ್ತು. ಭಾರತದಲ್ಲಿ ಆಗಿನ ಬ್ರಿಟಿಷ್ ಆಡಳಿತ ಗಾಂಧಿಗೆ ಪ್ರಾಣಾ ಪಾಯವಾಗದಂತೆ ರಕ್ಷಿಸಿಕೊಂಡು ಬಂದಿತ್ತು. ಆದರೆ ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯ ಬಂದ ಆರು ತಿಂಗಳಲ್ಲಿ ಅವರ ಪ್ರಾಣ ರಕ್ಷಣೆ ಮಾಡಲಾರದೆ ಹಿಂದೂಗಳ ಕೈಯಲ್ಲೇ ಹತರಾಗಿದ್ದರು. ಆಗ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕಡು ವಿರೋಧಿ ವಿನ್ಸೆಂಟ್ ಚರ್ಚಿಲ್ ಕೂಡ, ನಾವು ಗಾಂಧಿ ಪ್ರಾಣವನ್ನು 30ವರ್ಷ ರಕ್ಷಿಸಿದ್ದೇವು, ಸ್ವತಂತ್ರ (ಗಾಂಧಿ ಹತ್ಯೆ ನಡೆಯಲೇಬೇಕಾದದ್ದು ಎಂಬುದಕ್ಕೆ ಇಂದು ಬಹುತೇಕ ಸಹಮತ ಇದೆ!!) ಭಾರತ ಒಂದು ವರ್ಷ ಕೂಡ ಅವರನ್ನು ರಕ್ಷಿಸಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದರು.ನಾಥೂರಾಮ ಗೋಡ್ಸೆ ನಾನೇ ಗಾಂಧಿ ಹತ್ಯೆ ಮಾಡಿದ್ದ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆದರೂ ಮತ್ಯಾಕೆ ಗಾಂಧಿ ಹತ್ಯೆಯ ಕುರಿತು ಕೆದಕಬೇಕು ಎಂಬ ಪ್ರಶ್ನೆ ಉದ್ಭವಿಸಿಬಹುದು.
ಹೌದು, ಗಾಂಧಿ ಹತ್ಯೆಯನ್ನು ಮಾಡಿಸಿದವರು ಯಾರು?!ಯಾರು ಶಿಕ್ಷಾರ್ಹರು ಎಂಬುದು ನ್ಯಾಯಾಲಯದ ಮುಂದಿದ್ದ ಪ್ರಶ್ನೆ ಯಾಗಿತ್ತು. ಒಂದು ವೇಳೆ ನಾಥೂರಾಮ್ ಗೋಡ್ಸೆ ಒಬ್ಬನೇ ಆರೋಪಿತನಾಗಿದ್ದರೆ ದೋಷಾರೋಪಣೆಯನ್ನು ಓದಿ ಹೇಳಿ ಅವನ ತಪ್ಪೊಪ್ಪಿಗೆಯ ಹೇಳಿಕೆಯನ್ನು ನ್ಯಾಯಾಧೀಶರು ದಾಖಲಿಸಿ ಅವನು ದೋಷಿ ಎಂದು ತೀರ್ಪು ನೀಡುವುದಕ್ಕೆ ಯಾವ ಕಷ್ಟವೂ ಇರುತ್ತಿರಲಿಲ್ಲ.ಆದರೆ ಆ ಸಂದರ್ಭದಲ್ಲಿ ಸಂಗ್ರಹಿಸಿದ ದಾಖಲೆ, ಮಾಹಿತಿ ಆಧಾರದ ಮೇಲೆ ವೀರ ಸಾವರ್‌‌ಕರ್ ಗಾಂಧಿ ಹತ್ಯೆಯ ಪಿತೂರಿಯಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ನೆರವಾಗಿದ್ದರು ಎಂಬ ಅಂಶ ತನಿಖಾಧಿಕಾರಿ ನಗರವಾಲಾರಿಗೆ ಮನವರಿಕೆ ಆಗಿತ್ತು. ಹತ್ಯೆ ನಡೆಸಿದ ಆರೋಪಿಗಳೊಂದಿಗೆ ಅವರಿಗೆ ಸಂಪೂರ್ಣ ಸಂಪರ್ಕವಿತ್ತು.
ನಿಕಟ ಪರಿಚಯ, ಬೆಂಬಲ ಇತ್ತೆಂದು ಮಾಹಿತಿ ಸಂಗ್ರಹಿಸಿದ್ದರು.ಅವರನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಿ ಬಂಧಿಸುವುದೇ ಬೇಡವೇ ಎಂಬ ಬಗ್ಗೆ ಮುಂಬೈ ಗೃಹಮಂತ್ರಿ ಮೊರಾರ್ಜಿ ದೇಸಾಯಿ ಜತೆ ಸಮಾಲೋಚಿನೆ ನಡೆಸಿ, ಸಾವರ್‌‌ಕರರು ಕಳೆದ ಶತಮಾನದ ಆದಿಯಲ್ಲಿ ಅಪ್ರತಿಮ ಸಾಹಸ ಮಾಡಿದ್ದರು ಎಂಬುದರಲ್ಲಿ ಸಂಶಯ ಇಲ್ಲ, ಆ ಪ್ರಯತ್ನದಲ್ಲಿ ಅಂಡಮಾನ್ ದ್ವೀಪದಲ್ಲಿ ದೀರ್ಘಾವಧಿಯ ಸೆರೆಮನೆವಾಸ ಅನುಭವಿಸಿದ್ದರು. ಅವರು ಬರೆದ ಭಾರತೀಯ ಪ್ರಥಮ ಸ್ವಾತಂತ್ರ್ಯ ಸಮರ(1857) ಆಗ ಪ್ರಸಿದ್ಧವಾಗಿದ್ದು, ಸಾವಿರಾರು ದೇಶಪ್ರೇಮಿಗಳಿಗೆ ಸ್ಫೂರ್ತಿ ನೀಡಿತ್ತು.
ಈ ಹಿನ್ನೆಲೆಯಲ್ಲಿ ವೀರ ಸಾವರ್‌‌ಕರರು ಹಿಂದೆ ದೇಶಕ್ಕಾಗಿ ಬಹಳ ತ್ಯಾಗ ಮಾಡಿದ್ದಾರೆ ಅವರನ್ನು ವಿಚಾರಣೆಗೆ ಗುರಿ ಪಡಿಸುವದೇ ಎಂದು ನಗರವಾಲ್ ಕೇಳಿದ್ದರು. ಅದಕ್ಕೆ ಮೊರಾರ್ಜಿ ದೇಸಾಯಿ, ಅವರು ಈ ಹಿಂದೆ ಮಾಡಿದ ತ್ಯಾಗ ಇಂದು ಮಾಡಿರುವ ಕೃತ್ಯದಿಂದ ಅಳಿಸಿ ಹೋಗಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಮೊರಾರ್ಜಿ ಆದೇಶ ನೀಡಿದ್ದರು. ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಕೂಡ ವಿಚಾರಣೆಗೆ ಅನುಮತಿ ನೀಡಿದ್ದರು.1948 ಜನವರಿ 15 ಮತ್ತು 17ರಂದು ನಾಥೂರಾಮ್ ಗೋಡ್ಸೆ, ನಾರಾಯಣ ಅಪ್ಟೆ, ಬಡಗೆ ಸಾವರ್‌ಕರ್ ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಹೊರಬರುವ ಸಂದರ್ಭದಲ್ಲಿ ''ಯಶಸ್ವಿಯಾಗಿ ಹಿಂದಿರುಗಿ ಬನ್ನಿ''ಎಂದು ಸಾವರ್‌‌ಕರರು ಆಶೀರ್ವದಿಸಿದ್ದರು ಎಂದು ಸಾಕ್ಷ್ಯ ಹೇಳಲಾಗಿತ್ತು. ಆದರೆ ವಿಚಾರಣೆ ವೇಳೆ ಸಾವರ್‌‌ಕರರು ತರ್ಕಬದ್ಧವಾಗಿ ವಾದ ಮಂಡಿಸಿ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದರು.
ದೀರ್ಘ ವಿಚಾರಣೆಯ ನಂತರ ಅವರನ್ನು ಸಂಶಯದ ಸೌಲಭ್ಯ(Benefit of Doubt)ಆಧಾರದ ಮೇಲೆ ಖುಲಾಸೆ ಮಾಡಲಾ ಗಿತ್ತು.ಸಾವರ್‌ಕರ್ ಹೊರತಾಗಿ ಉಳಿದ ಐದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಗೋಡ್ಸೆ ಮತ್ತು ನಾರಾಯಣ ಅಪ್ಟೆಗೆ ಗಲ್ಲು ಶಿಕ್ಷೆ ವಿಧಿಸಿ, ರಾಮಕೃಷ್ಣ ಕರಕರೆ, ಮದನಲಾಲ ಪಹ್ವಾ, ಶಂಕರ ಕ್ರಿಸ್ಟಯ್ಯ, ಗೋಪಾಲ ಗೋಡ್ಸೆ,ಡಾ.ಪರಚುರೆಗೆ ಜೀವಾವಧಿ ಶಿಕ್ಷೆ ನೀಡಲಾಯಿತು.ಇದೀಗ ಮುಖ್ಯವಾದದ್ದೆಂದರೆ ಗಾಂಧಿ ಹತ್ಯೆಯ ಹಿಂದಿನ ಪ್ರೇರಣೆ ಯಾವುದು ? ಹಿಂದು-ಮುಸ್ಲಿಂ ಐಕ್ಯತೆ ಪ್ರಶ್ನೆ, ದೇಶ ವಿಭಜನೆಗೆ ಪ್ರಬಲ ವಿರೋಧಿಯಾಗಿದ್ದವರು ಗಾಂಧೀಜಿ.
ನನ್ನ ಹೆಣವನ್ನು ತುಳಿದು ದಾಟಿ ದೇಶವನ್ನು ವಿಭಜಿಸಬೇಕಾದೀತು ಎಂಬ ಗಾಂಧಿ ಮಾತಿನ ವಿರುದ್ಧ ಗೋಡ್ಸೆ ಕೆಂಡಮಂಡಲನಾಗಿ, ದೇಶ ಇಬ್ಭಾಗವಾದ ಬಳಿಕ ಗಾಂಧಿ ಇನ್ನು ಬದುಕಿರಬಾರದು, ಅವರಿನ್ನೂ ಬದಕಿಯೇ ಇದ್ದಾರೆ, ಅವರನ್ನು ಮುಗಿಸಬೇಕು ಎಂದು ಘೋಷಿಸಿದ್ದ. ಮತ ಧರ್ಮದ ಆಧಾರದ ಮೇಲೆ ರಾಷ್ಟ್ರ, ರಾಜ್ಯ ನಿರ್ಮಾಣ ಸಾಧುವಲ್ಲ ಎಂದು ವಾದಿಸಿದವರು ಗಾಂಧೀಜಿ.
ಆದರೆ ಮತೀಯ ಆಧಾರದ ಮೇಲೆ ದ್ವಿ ರಾಷ್ಟ್ರ ಸಿದ್ದಾಂತವನ್ನು ಪ್ರತಿಪಾದಿಸಿದವರು ಸಾವರ್‌ಕರ್ !!. ಅವರ ಈ ಸಿದ್ದಾಂತ ಅವ ಲಂಬಿಸಿಯೇ ಜಿನ್ನಾ ಪಾಕಿಸ್ತಾನದ ಹಕ್ಕು ಸಾಧಿಸಿದ್ದು, ಹಾಗಾದರೆ ಸಾವರ್‌‌ಕರ್, ಗೋಡ್ಸೆಯ ರಾಜಕೀಯ ಸಿದ್ದಾಂತ ಏನು?. ಸಾವರ್‌‌ಕರಿಸಂ ತತ್ವದ ಪ್ರಕಾರ ನಡೆಯುವ ವಧೆ, ಹತ್ಯೆ ಕ್ಷಮಾರ್ಹ ಅವರ ತತ್ವಕ್ಕೆ ಆಧಾರವಾಗಿ ಜರ್ಮನಿಯಲ್ಲಿ ಆರ್ಯರಿಗೂ, ಯಹೂದಿ ಜನಾಂಗದವರಿಗೂ ಆದ ನರಮೇಧ ಉದಾಹರಿಸುತ್ತಾರೆ, ಇದೇ ತತ್ವವನ್ನು ಡಾ.ಹೆಗ್ಡೆವಾರ್ ವಿರಚಿತ With Nation ಹಾಗೂ ಗುರೂಜಿ ಗೋಲ್ವಾಲ್ಕರ್ ಅವರು Bunch of Thought's ಅವರ ಪಾಲಿಗೆ ಗೀತೋಪದೇಶವಾಗಿದೆ. ಜರ್ಮನಿಯೇ ಅವರ ಆದರ್ಶ ದೇಶ, ಹಿಟ್ಲರನೇ ಅವರ ಆದರ್ಶ ನಾಯಕ!! ಇಂತಹ ಅಪಸವ್ಯಗಳೇ ಪಾಕಿಸ್ತಾನ ಸ್ಥಾಪನೆಗೆ ಕಾರಣ, ಈ ದ್ವೇಷದ ಜ್ವಾಲಾಗ್ನಿ ಗಾಂಧಿಯನ್ನು ಬಲಿತೆಗೆದುಕೊಂಡ ನಂತರ ಅದು ಅಲ್ಲಿಗೆ ಮುಗಿದು ಹೋಗಿಲ್ಲ...
ಇದು ಗುಜರಾತಿನಲ್ಲಿನ ನರಮೇಧ..ಬಾಬರಿ ಮಸೀದಿ ಧ್ವಂಸದೊಂದಿಗೆ ಮುಂದುವರಿದಿದೆ, ಸಾವರ್‌‌ಕರಿಸಂನ ಈ ತತ್ವ ಅನಾಹುತ ಕ್ಕೆ ಕಾರಣವಾಗಿದೆ, ಹಾಗಾದರೆ ಭಾರತದ ಇಬ್ಭಾಗಕ್ಕೆ ಕಾರಣ್ಯಾರು ಗಾಂಧಿ ಅಥವಾ ಸಾವರ್‌ಕರರೇ...?ನಾನೇಕೆ ಗಾಂಧಿಯನ್ನು ಕೊಂದೆ ಎಂಬ ಪುಸ್ತಕ ಓದಿದ ಬಹುತೇಕರು ಗಾಂಧಿ ದೇಶದ್ರೋಹಿಯಾಗಿ-ಗೋಡ್ಸೆ ಮಹಾನ್ ದೇಶಭಕ್ತ ಎಂದು ಬೊಬ್ಬಿರಿ ಯುವುದು ಹಾಸ್ಯಾಸ್ಪದ. ಧೀರ-ವೀರ ಎಂದು ಖ್ಯಾತಿ ಗಳಿಸಿದ ವಿನಾಯಕ ದಾಮೋದರ ಸಾವರ್‌ಕರ್ ಅಂಡಮಾನ್ ಜೈಲಿನಲ್ಲಿದ್ದಾಗ 1911ರಲ್ಲಿ ಭಾರತ ಸರಕಾರಕ್ಕೆ ಕ್ಷಮಾ ಯಾಚನಾ ಪತ್ರ ಕಳುಹಿಸಿದ್ದರು !!.
ಪತ್ರದ ಉಲ್ಲೇಖ- ''ಕೊನೆಯದಾಗಿ, 1911ರಲ್ಲಿ ನಾನು ಕಳುಹಿಸಿದ ಕ್ಷಮಾಯಾಚನಾ ಮನವಿ ಪತ್ರವನ್ನು ತಾವು ಪರಾಂಬರಿಸಿ ಕೊಂಡು ಇಂಡಿಯಾ ಸರಕಾರಕ್ಕೆ ಅದನ್ನು ಮಂಜೂರಾತಿಗಾಗಿ ಕಳುಹಿಸಿಕೊಡಬೇಕೆಂದು ಘನವೆತ್ತ ತಮಗೆ ನೆನಪು ಮಾಡ ಬಹು ದೇ?....ಹೀಗೆ ಸಾಗುವ ''ವೀರ''ಸಾವರ್‌‌ಕರರ ಪತ್ರ ನನ್ನ ಮುಂದಿನ ಭವಿಷ್ಯ ನಡತೆ ಪರಿವರ್ತನೆಯಾಗುತ್ತದೆ,ನನ್ನನ್ನು ಜೈಲಿನಲ್ಲಿ ಇಡುವುದರಿಂದ,ಬಿಡುವುದರಿಂದಾಗುವ ಯಾವ ಒಳಿದು ಆಗಲಾರದು. ಆದ್ದರಿಂದ ಉಡಾಳ ಮಗ ಸರಕಾರದ ಮಾತೃ ಮಂದಿರದ ಬಾಗಿಲಿಗಲ್ಲದೆ ಮತ್ತೆಲ್ಲಿಗೆ ಹೋದಾನು!! ತಾವು ಈ ಕೆಲವು ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುವಿರೆಂದು ನಂಬುತ್ತೇನೆ.
ಸಹಿ
ವಿ.ಡಿ.ಸಾವರ್‌‌ಕರ
ಬಳಿಕ 5-01-1924ರಲ್ಲಿ ಮುಂಬೈ ಸರಕಾರ, ವಿನಾಯಕ ದಾಮೋದರ ಸಾವರ್‌‌‌ಕರ್ ಅವರನ್ನು ಬಿಡುಗೊಳಿಸಲು ನಿರ್ಧರಿಸಿರು ವುದಾಗಿ ಪತ್ರ ಮುಖೇನ ತಿಳಿಸಿ, 1898ರ ಕ್ರಿಮಿನಲ್ ಪ್ರೊಸಿಜರ್ ಕೋಡ್ ಸೆಕ್ಷನ್ 401ರ ಪ್ರಕಾರ, ಆಡಳಿತ ಮಂಡಳಿಯ ಮುಖ್ಯ ಸ್ಥರಾದ ರಾಜ್ಯಪಾಲರು ದ್ವೀಪಾಂತರ ಶಿಕ್ಷೆಗೆ ಗುರಿಯಾಗಿರುವ ವಿ.ಡಿ.ಸಾವರ್‌‌ಕರ್‌‌ರ ಇನ್ನು ಉಳಿದಿರುವ ಶಿಕ್ಷೆಯನ್ನು ಮನ್ನಾ ಮಾಡಲಾಗಿದೆ ಎಂದು ಆದೇಶ ನೀಡಲಾಗಿದೆ.
ಶಿರಗಾಂವ 9ನೇ ಮೇ 1925.

Thursday, May 8, 2008

ಚಂದಮಾಮನಿಗೆ ಅರವತ್ತು......

ಬಹುತೇಕ ಮಂದಿ ಚಂದಮಾಮದಲ್ಲಿನ ವಿಕ್ರಮ ಮತ್ತು ಬೇತಾಳ, ನೀತಿ ಕಥೆಗಳನ್ನು ಓದಿಯೇ ಆಡುಗೂಲ ಜ್ಜಿಯ ಕಥೆಯೆಡೆಗೊಂದು ಮೋಹ ಬೆಳೆಸಿಕೊಂಡಿರುವುದು. ಆ ಕಾಲಕ್ಕೆ ನಮಗೆ ಚಂದಮಾಮ, ಬಾಲಮಿತ್ರಿ ನಮ್ಮ ಬಾಲ್ಯದ ಸಂಗಾತಿಯಾಗಿದ್ದವು. ನಾವೆಲ್ಲ ಓದುತ್ತಾ, ಓದುತ್ತಾ ಬೆಳೆದ ಚಂದಮಾಮನಿಗೆ ಈಗ 60ರ ಸಂಭ್ರಮ..
ಅಬ್ಬಾ ಚಂದಮಾಮಕ್ಕೆ ಅರವತ್ತು ವರ್ಷಗಳು ತುಂಬಿತೆಂದರೆ, ನಮ್ಮ ಕಣ್ಣುಗಳೇ ಇಷ್ಟಗಲ ತೆರೆದುಕೊಳ್ಳು ತ್ತದೆ. ಇತ್ತೀಚೆಗಷ್ಟೇ ಮುಂಬೈಯಲ್ಲಿ ಚಂದಮಾಮದ 60ನೇ (61ವರ್ಷ) ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ, ನಾನು ಚಿಕ್ಕವನಿದ್ದಾಗ ಪಾಶ್ಚಾತ್ಯ ಕಾಮಿಕ್ಸ್‌‌ನೆಡೆಗೆ ಮೋಹಿತನಾಗಿದ್ದೆ.
ಆದರೆ ನನ್ನ ಪೋಷಕರು ನನಗೆ ಚಂದಮಾಮದ ರುಚಿ ಹತ್ತಿಸಿದ ಮೇಲೆ ನನಗೆ ಬಾಲ್ಯದಲ್ಲಿ ಅದೇ ನನ್ನ ಸಂ ಗಾತಿಯಾಗಿತ್ತು. ಆದರೆ ಈಗ ನನಗೆ ಸಮಯದ ಒತ್ತಡ ಇರುವುದರಿಂದ ಓದಲಾಗುತ್ತಿಲ್ಲ, ಆದರೂ ಚಂದ ಮಾಮವನ್ನ ನನ್ನ ಮೊಮ್ಮಕ್ಕಳಿಗೆ ಪರಿಚಯಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದರು. ಹೌದು ಈಗ ಚಂದಮಾಮನ ನೆನಪು-ನೇವರಿಕೆ ನಮ್ಮಿಂದ ನಿಧಾನಕ್ಕೆ ತೆರೆ-ಮರೆಗೆ ಸರಿಯತೊಡಗಿದೆ.
ಆ ಜಾಗದಲ್ಲಿ ಹ್ಯಾರಿ ಪಾಟರ್ ಬಂದು ಕುಳಿತಿದ್ದಾನೆ. ಯಾರು ಎಷ್ಟೇ ಬಾಯಿ ಬಡಿದಕೊಂಡರೂ ಚಂದಮಾಮ, ಬಾಲಮಿತ್ರ, ಈಸೋಪನ ಕಥೆಗಳು, ಅಕ್ಬರ್-ಬೀರ್‌‌ಬಲ್‌ ಕಥೆಗಳ ಮುಂದೆ ಹ್ಯಾರಿ ಪಾಟರ್ ಅನ್ನು ನಿವಾಳಿಸಿ ಒಗೆಯಬೇಕು.
1947ರ ಜುಲೈ ತಿಂಗಳಿನಲ್ಲಿ ನಾಗಿ ರೆಡ್ಡಿ ಮತ್ತು ಅವರ ಆಪ್ತಮಿತ್ರ ಚಕ್ರಪಾಣಿಯವರು ಜತೆಗೂಡಿ ಚಂದಮಾ ಮನನ್ನು ಹುಟ್ಟು ಹಾಕಿದ್ದರು. ಚಂದಮಾಮ ಎರಡು ಬಣ್ಣಗಳಲ್ಲಿ ಪ್ರಪ್ರಥಮವಾಗಿ ಹೊರಬಿದ್ದ 64ಪುಟಗಳ ಸಂಚಿಕೆಯ ಬೆಲೆ 6ಅನ್ನಾ (ಅಂದರೆ 37 ಪೈಸೆ), 1947ರ ಜುಲೈಯಲ್ಲಿ 6 ಸಾವಿರ ಪ್ರತಿಯನ್ನು ಅಚ್ಚು ಹಾಕಿಸಲಾಗಿತ್ತಂತೆ. ಅದನ್ನು ಅಂಚೆ ಕಚೇರಿ ಮೂಲಕ ಕಳುಹಿಸುವ ಏರ್ಪಾಟು ಮಾಡಲಾಗಿತ್ತು.
ಹೀಗೆ ನಿರಂತರವಾಗಿ ಮಾಸಿಕ ಪ್ರಕಟಣೆ ಕಂಡ ಚಂದಮಾಮ 1998ರಲ್ಲಿ ನೌಕರರ ವಿವಾದದಿಂದಾಗಿ ಪ್ರಕ ಟಣೆ ನಿಂತುಹೋಗಿತ್ತು.ನಂತರ ಮತ್ತೆ ಪ್ರಕಟಣೆಯನ್ನು ಆರಂಭಿಸಲಾಗಿತ್ತು, ಪ್ರಥಮವಾಗಿ ಚಂದಮಾಮ ಚೆ ನ್ನೈಯಲ್ಲಿ ಆರಂಭಗೊಂಡಿದ್ದು, ತೆಲುಗು ಮತ್ತು ತಮಿಳು ಭಾಷೆಯಲ್ಲಿ, ನಂತರ ನಾಲ್ಕು ವರ್ಷಗಳ ಬಳಿಕ ಆರು ಭಾಷೆಗಳಲ್ಲಿ ಪ್ರಕಟಣೆ ಕಾಣಲು ಆರಂಭಿಸಿದ ಚಂದಮಾಮ ನಂತರ ಏಕಕಾಲದಲ್ಲಿ ಇಂಗ್ಲೀಷ್, ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ ಅದರಲ್ಲೂ ಚಂದಮಾಮದ ಹೆಗ್ಗಳಿಕೆ ಯಾವುದೆಂದರೆ ಪ್ರಪ್ರಥಮವಾಗಿ ಸಿಂಥಿ, ಗುರುಮುಖಿ, ಸಿಂಹಳ ವಿದೇಶ ಭಾಷೆಗಳಲ್ಲಿಯೂ ಪ್ರಕಟವಾಗತೊಡಗಿತು.
1978ರಲ್ಲಿ ಸಂಸ್ಕೃತ ಭಾಷೆಯಲ್ಲಿಯೂ ಚಂದಮಾಮವನ್ನು ಆರಂಭಿಸಲಾಗಿತ್ತು. 2004ರಲ್ಲಿ ಮಕ್ಕಳಿಗಾಗಿ ಬುಡಕಟ್ಟು ಭಾಷೆಯಲ್ಲಿ ಪ್ರಕಟಣೆ ಆರಂಭಿಸಿದ ಕೀರ್ತಿಗೆ ಭಾಜನವಾದದ್ದೂ ಚಂದಮಾಮ. 1981ರಲ್ಲಿ ಅಂಧರಿ ಗಾಗಿ ಬ್ರೈಲ್ ಎಡಿಷನ್ ಅನ್ನು ಹೊರ ತರಲು ಆರಂಭಿಸಿತ್ತು. ಆ ಮಟ್ಟದಲ್ಲಿ ಬೆಳೆದ ಹೆಮ್ಮೆ ಚಂದಮಾಮ ಕಾಮಿ ಕ್ಸ್‌‌ನದ್ದು.
ಹೀಗೆ ಚಂದಮಾಮ ತನ್ನ ಅರವತ್ತು ಸಂವತ್ಸರಗಳ ಯಶೋಗಾಥೆಯಲ್ಲಿ ಏರಿದ ಎತ್ತರ ಮಾತ್ರ ಆಗಾಧ ವಾದದ್ದು, 2003ರಲ್ಲಿ ಸಿಂಗಾಪುರದಲ್ಲಿ ಇಂಗ್ಲಿಷ್-ತಮಿಳ್ (ಸಿಂಗಾಪುರದಲ್ಲಿ ಅಂಬುಲಿಮಾಮಾ ಎಂಬ ಹೆಸರಿನಲ್ಲಿ ಪ್ರಕಟಣೆ ಕಾಣುತ್ತಿದ್ದು, ಇದನ್ನು ಅಲ್ಲಿನ ತಮಿಳು ಟಿಚರ್ಸ್ ಯೂನಿಯನ್ ಪುಸ್ತಕ ಹೊರತರುವ ಜವಾಬ್ದಾರಿ ವಹಿಸಿಕೊಂಡಿದೆ). ಭಾಷೆಯಲ್ಲಿ, ಉತ್ತರ ಅಮೆರಿಕದಲ್ಲಿ ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ಗುಜರಾತಿ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ.
ಸುಮಾರು 3 ಲಕ್ಷಕ್ಕೂ ಅಧಿಕ ಓದುಗರನ್ನು ಪಡೆದಿರುವ ಚಂದಮಾಮ, ಅಂದಾಜು ಏಳು ಲಕ್ಷ ಪ್ರಸಾರ ಸಂಖ್ಯೆ ಯನ್ನು ಹೊಂದಿದೆ. ಅಲ್ಲದೇ ಚಂದಮಾಮ ದೀರ್ಘಕಾಲ ಪ್ರಕಟಣೆ ಕಂಡ ಮಕ್ಕಳ ಮ್ಯಾಗಜೀನ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಲ್ಲದೆ, 2002ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲೂ ದಾಖಲೆ ಬರೆದಿದೆ. ಆದರೂ ನಮ್ಮನ್ನೆಲ್ಲ ಸಾಹಿತ್ಯದೆಡೆಗೆ ದೂಡಿದ, ಅರವತ್ತು ವರ್ಷಗಳನ್ನು ಪೂರೈಸಿದ ಚಂದಮಾಮಕ್ಕೊಂದು ಶುಭ ಹಾರೈಕೆ......

Sunday, May 4, 2008

ಆಶ್ವಾಸನೆಗಳ ಭರವಸೆಯಲ್ಲಿ ಕೊಚ್ಚಿಹೋದ ಮತದಾರ !!

ಕರ್ನಾಟಕ ರಾಜ್ಯ ರಾಜಕಾರಣದಲ್ಲೀಗ ಮತದಾರರಿಗೆ ಭರವಸೆಗಳ ಸುಗ್ಗಿ ಕಾಲ...ಶತಾಯಗತಾಯ ಅಧಿಕಾರದ ಗದ್ದುಗೆ ಏರಲೇ ಬೇಕೆಂಬ ಹಂಬಲ ಚುನಾವಣಾ ಅಖಾಡದಲ್ಲಿರುವವರದ್ದಾದರೆ, ರಾಜ್ಯದ ಸೂತ್ರವನ್ನು ಹಿಡಿಯುವಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಇನ್ನಿಲ್ಲದ ಪೈಪೋಟಿ ನಡೆಯುತ್ತಿದೆ.

ಭರ್ಜರಿ ಪ್ರಚಾರದೊಂದಿಗೆ ಮತದಾರರ 'ಬೇಟೆಗೆ' ಇಳಿದಿರುವ ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ ಮೊದಲಿಗೆ ರೈತರನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇಂದಿರಾ ಆವಾಜ್ ಯೋಜನೆಯಡಿಯಲ್ಲಿ ರೈತರ ಸಾಲ ಮನ್ನಾ, ಪ್ರತಿ ಹಸಿರು ಕಾರ್ಡ್ ಹೊಂದಿರುವವರಿಗೆ 2ರೂ.ಗೆ ಅಕ್ಕಿ, ಕಲರ್ ಟಿವಿ, ಹಸಿರು ಕಾರ್ಡ್‌‌ದಾರರಿಗೆ ಯಶಸ್ವಿನಿ ಯೋಜನೆ ವಿಸ್ತರಣೆ, ನಿರುದ್ಯೋಗಿಗಳಿಗೆ 2ವರ್ಷ ತರಬೇತಿ, ಮಾಸಿಕ ಭತ್ಯೆ ಸೇರಿದಂತೆ ಇನ್ನಿತರ ಭರವಸೆ ನೀಡಿದೆ.

ಕೇಂದ್ರ ಸರಕಾರ ಕೂಡ ಈ ಬಾರಿ ಬಜೆಟ್‌‌ನಲ್ಲಿ ರೈತರ 60ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಘೋ ಷಿಸಿದೆ. ಇವೇ ಅಸ್ತ್ರಗಳನ್ನು ಬಳಸಿಕೊಂಡು ಕಾಂಗ್ರೆಸ್, ರಾಜ್ಯದಲ್ಲಿಯೂ ರೈತರನ್ನ ಗಮನದಲ್ಲಿಟ್ಟು ಕೊಂಡು, ಅಕ್ಕಿ. ಟಿವಿಗಳ ಆಮಿಷದ ಮೂಲಕ ಮತದಾರರನ್ನು ಸೆಳೆಯಲು ಹೊರಟಿದೆ. ಆ ಕಾರಣಕ್ಕಾಗಿಯೇ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರು ರಾಜ್ಯರಾಜಕಾರಣದಲ್ಲಿ ಪಾಂಚಜನ್ಯ
ಮೊಳಗಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಲಿಂಗಾಯಿತ ಮತ್ತು ಒಕ್ಕಲಿಗ ಮತ ಮತ್ತು ಹಿಂದುಳಿದ ಮತಗಳೇ ನಿರ್ಣಾಯಕವಾ ಗಿದ್ದರಿಂದ, ದೇವೇಗೌಡರಿಗೆ ಎದುರಾಳಿಯಾಗಿ ಕೃಷ್ಣರನ್ನು ಅಖಾಡಕ್ಕೆ ಇಳಿಸಲಾಗಿದೆ. ಎಸ್.ಎಂ.ಅವರು ತಮ್ಮ ಅಧಿಕಾರಾವಧಿಯಲ್ಲಿ ಹೈಟೆಕ್ ಮಂತ್ರ ಜಪಿಸುತ್ತಿದ್ದರು. ಈಗ ಅಕ್ಕಿ, ಅನ್ನ ದಾಸೋಹ, ರೈತರ ಪರ ಮುಖವಾಡದೊಂದಿಗೆ ಪ್ರಚಾರಕ್ಕೆ ಇಳಿದಿದ್ದಾರೆ.

ಆದರೆ ಇದೇ ಎಸ್.ಎಂ.ಕೃಷ್ಣರ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ತಲೆದೋರಿದ ಬಿಕ್ಕಟ್ಟು, ಬರಗಾಲದಿಂದಾಗಿ ಕಂಗೆಟ್ಟ ಸುಮಾರು ನೂರಾರು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಸೌಜನ್ಯಕ್ಕಾದರೂ ಭೇಟಿ ನೀಡಿದ್ದೀರಾ ಎಂಬ ಮಾತನ್ನು ಮಾಧ್ಯಮದವರು ಕೇಳಿದಾಗ, ಅದಕ್ಕೆ ಉಡಾಫೆಯ ಉತ್ತರ ನೀಡಿದ್ದರು. ತೆಂಗಿನ ಮರಗಳಿಗೆ ತಗುಲಿದ ನುಸಿ ರೋಗ ನಿವಾರಣೆ ಹೆಸರಲ್ಲಿ ಕೋಟ್ಯಂತರ ರೂಪಾಯಿ ಗುಳುಂ ಮಾಡಲಾಗಿತ್ತು.

ನುಸಿರೋಗದಿಂದ ತತ್ತರಿಸಿದ ರೈತರು ''ನೀರಾ'' ತೆಗೆಯಲು ಮುಂದಾದವರ ಮೇಲೆ ಗೋಲಿಬಾರ್ ನಡೆಸಿದ್ದು ಕೃಷ್ಣ ನೇತೃತ್ವದ ಸರಕಾರ. ಈಗ ಅಧಿಕಾರದ ಗದ್ದುಗೆಗಾಗಿ ರೈತರನ್ನ ಮುಂದಿಟ್ಟುಕೊಂಡು ಮತಯಾಚನೆಗೆ ಹೊರಟಿದ್ದಾರೆ.ಆಶ್ವಾಸನೆಗಳು ಕೊಡಲು ಹಣ ಕೊಡಬೇಕೆಂದಿಲ್ಲ, ಮತ್ತು ಆಶ್ವಾಸನೆ ನೀಡುವುದು ಅಪರಾಧವೂ ಅಲ್ಲ!!

ಕಳೆದ ಚುನಾವಣೆಯಲ್ಲೂ ಧರಂಸಿಂಗ್ ಅಧಿಕಾರಕ್ಕೆ ಏರುವ ಮುನ್ನು ನಿರುದ್ಯೋಗಿಗಳಿಗೆ ಭತ್ಯೆಯ ಆಶ್ವಾಸನೆ ನೀಡಿತ್ತು. ಬಳಿಕ ಮೈತ್ರಿ ಸರಕಾರ ರಚನೆಗೊಂಡಾಗ ಅದರ ಮಾತೇ ಇಲ್ಲ, ಆಗ ನಮ್ಮನ್ನು ನೀವು ಪೂರ್ಣಪ್ರಮಾಣದಲ್ಲಿ ಬೆಂಬಲಿಸಿಲ್ಲದ ಕಾರಣ ಆಶ್ವಾಸನೆ ಈಡೇರಿಕೆ ಮಾಡಲು ಸಾಧ್ಯವಿಲ್ಲ ಎಂದು ಧರಂ ಗರಂ ಆಗಿ ಹೇಳಿದ್ದರು.ಅಷ್ಟಕ್ಕೂ ಟಿವಿ, 2 ರೂ.ಅಕ್ಕಿ, ಸಾಲ ಮನ್ನಾ ಅಂತ ಸಾಲು, ಸಾಲು ಪಟ್ಟಿ ನೀಡುತ್ತಾರೆ, ಹಾಗಂತ ಅವರ ಆಸ್ತಿಯ ಹಣ ಸುರಿದು ಸಾಲ ಮನ್ನಾ, ಟಿವಿ ಖರೀದಿ ಮಾಡುವುದಿಲ್ಲ, ಅವೆಲ್ಲವೂ ಮತ್ತೆ ಸರಕಾರ ಬೊಕ್ಕಸಕ್ಕೆ ಖೋತಾ!!.

ಅಧಿಕಾರದ ಗದ್ದುಗೆ ಏರುವ ಮುನ್ನಾ ನೂರೆಂಟು ಆಶ್ವಾಸನೆ ಕೊಟ್ಟು, ಬಳಿಕ ಅಧಿಕಾರಕ್ಕೆ ಏರಿ ಆಶ್ವಾಸನೆ ಈಡೇರಿಸಿದರೂ ಅದು ಜನಸಾಮಾನ್ಯರಿಗೆ ಹೊರೆಯಾಗುತ್ತ ಹೋಗುತ್ತದೆ. ಕಳೆದ 50ವರ್ಷಗಳಿಂದ ಕಾಂಗ್ರೆ ಸ್ ದೇಶವನ್ನು ಲೂಟಿ ಮಾಡಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ಕೇವಲ 20 ತಿಂಗಳ ಅಧಿಕಾರದ ಅವಧಿ ಯಲ್ಲೇ ಕಾಂಗ್ರೆಸ್ ಅನ್ನು ಮೀರಿ ಬೆಳೆದಿದೆ ಎನ್ನುವುದಕ್ಕೆ ಈ ಬಾರಿ ಚುನಾವಣೆಯಲ್ಲಿ ಅದರ ನಿಲುವು ಗಮನಿಸಿದರೆ ತಿಳಿಯುತ್ತದೆ. ಲ್ಯಾಂಡ್ ಮಾಫಿಯಾ, ಗಣಿ ದೊರೆಗಳಿಗೆ ಮಣೆ ಹಾಕುವ ಮೂಲಕ ಕೋಟ್ಯಾಧೀಶ್ವರರು ಜನಪ್ರತಿನಿಧಿಗಳಾಗಲು ಹೊರಟಿದ್ದಾರೆ.

ಹಾಗಾದರೆ ಇವರಿಗೆಲ್ಲಾ ಜನಸೇವೆಯ ಮೇಲೆ ಅಷ್ಟೊಂದು ಕಾಳಜಿಯಾ ಅಥವಾ ಅವರ ಸ್ವ ರಕ್ಷಣೆಗಾಗಿ ಅಧಿಕಾರದ ಬೆನ್ನತ್ತಿ ಹೊರಟಿದ್ದಾರೋ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ.ಅಪ್ಪ-ಮಕ್ಕಳ ಪಕ್ಷ ಕಳ್ಳರದ್ದು, ಭೂ ಕಬಳಿಕೆ ಮಾಡುತ್ತಾರೆ ಎಂದೆಲ್ಲಾ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದ ಬಿಜೆಪಿಯ ಯಡಿಯೂರಪ್ಪ ಅವರು ಭ್ರಷ್ಟರಿಗೆ, ಕ್ರಿಮಿನಲ್, ಭೂ ಕಳ್ಳರಿಗೆ ರೆಡ್ ಕಾರ್ಪೆಟ್ ಹಾಸಿ ಪಕ್ಷದಲ್ಲಿ ಸೀಟು ಕೊಟ್ಟಿದ್ದಾರೆ.

ಅಷ್ಟೇ ಅಲ್ಲಾ ಬಿಜೆಪಿ ಕೂಡ ಕಾಂಗ್ರೆಸ್ ಪ್ರಣಾಳಿಕೆಯಂತೆ ರೈತರಿಗೆ ಉಚಿತ ವಿದ್ಯುತ್, ಕಲರ್ ಟಿವಿ, ಬಡವರಿಗೆ 2ರೂ.ಅಕ್ಕಿ, ಆಶ್ರಯ, ಇಂದಿರಾ ಅವಾಜ್ ಗೃಹ ಸಾಲಮನ್ನಾ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.ಯಾವ ಪಕ್ಷದಲ್ಲೂ ಸಿದ್ದಾಂತ, ನೈತಿಕತೆ ಉಳಿದಿಲ್ಲ, ಭರವಸೆಗಳ ಮೂಟೆಯೊಂದಿಗೆ ಮತದಾರರ ಮುಂದೆ ಕೈಮುಗಿಯುವ ಜನಪ್ರತಿನಿಧಿಗಳು ಅಧಿಕಾರದ ಗದ್ದುಗೆ ಏರಿದ ಮೇಲೆ ''ಕೈ'' ಕೊಡುವ ಚಾಳಿಯನ್ನು ಮತದಾರರ ನೋಡಿ,ನೋಡಿ ಸುಸ್ತಾಗಿದ್ದಾನೆ.

ಈಗಾಗಲೇ ರಾಜ್ಯದಲ್ಲಿ ಕೋಟ್ಯಂತರ ರೂಪಾಯಿಯ ಮದ್ಯ, ನಗದು, ಸೀರೆ, ಬಟ್ಟೆಗಳನ್ನು ವಶಪಡಿಸಿಕೊಳ್ಳ ಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಖರ್ಗೆಯ ಹೆಲಿಕ್ಯಾಪ್ಟರ್, ದೇವೇಗೌಡರ ಕಾರು, ಯಡಿಯೂರಪ್ಪನವರ ಕಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಬಿಹಾರ, ಉತ್ತರ ಪ್ರದೇಶ ಚುನಾವಣೆ ಗೂಂಡಾಗಿರಿಯಿಂದ ನಲುಗುತ್ತಿರುವುದನ್ನು ಕೇಳಿದ್ದೇವೆ.

ಆದರೆ ಈ ಬಾರಿ ಚುನಾವಣಾ ಆಯೋಗ ಎಷ್ಟೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಅಕ್ರಮಗಳಿಗೆ ಕಡಿವಾಣ ಹಾಕುವುದು ತುಸು ಕಠಿಣವೇ ಆಗಬಹುದಾದ ಲಕ್ಷಣ ಗೋಚರಿಸತೊಡಗಿದೆ.ವೈಯಕ್ತಿಕ ಪ್ರತಿಷ್ಠೆ, ಅಸಮಾ ಧಾನ, ಪಿತೂರಿ, ಸ್ವಾರ್ಥಗಳ ಸರಮಾಲೆ ಮೂಲಕ ರಾಜ್ಯ ರಾಜಕೀಯದ ಚದುರಂಗದಾಟದಲ್ಲಿ
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್ಪಿ, ಬಿಎಸ್ಪಿ, ಸಿಪಿಐಎಂ ಅಖಾಡ ಇಳಿದಿದ್ದರೆ, ತ್ರಿಶಂಕು ಸ್ಥಿತಿಯಲ್ಲಿರುವ ಮತದಾರನಿಗೆ ಸುಭಗರನ್ನು ಗುರುತಿಸಿ ಆರಿಸುವುದೇ ಒಂದು ದೊಡ್ಡ ಸವಾಲಾಗಿ ಬಿಟ್ಟಿದೆ..........

Monday, April 28, 2008

ಸಂಜೀವ್ ಗಾಂಧಿ ಯಾರು ?!

ಕೆಲವೊಂದು ವಿಚಾರಗಳು ಅನಾವಶ್ಯಕ ಎಂದೆನಿಸಿದರೂ ಕೂಡ, ಕೆಲವೊಮ್ಮೆ ಆಗಾಗ ವಿವಾದಗಳನ್ನು ಹುಟ್ಟು ಹಾಕುತ್ತಲೇ ಇರುತ್ತದೆ, ಇಂದಿಗೂ ಸುಭಾಶ್ಚಂದ್ರ ಬೋಸ್ ಅವರ ಸಾವಿನ ಪ್ರಕರಣ, ಲಾಲ್ ಬಹದ್ದೂರ್ ಶಾಸ್ತ್ರಿಗಳ ನಿಧನ, ಗಾಂಧಿ ನಿಲುವಿನ ಬಗ್ಗೆ, ಸಂಜಯ್ ಗಾಂಧಿ ಬಲಿ, ಸಾವರ್‌‌ಕರ್ ದೇಶಪ್ರೇಮ ಹೀಗೆ....

ಅದರಲ್ಲೂ ಗಾಂಧಿ ಕುಟುಂಬದ ಬಗ್ಗೆ ನೆಹರೂ ಕುರಿತು, ಇಂದಿರಾ ಬಗ್ಗೆ ಈಗಾಗಲೇ ಸಾಕಷ್ಟು ವಾದ-ವಿವಾದಗಳು ನಡೆಯುತ್ತಲೇ ಇದೆ, ಇತ್ತೀಚೆಗೆ ನನ್ನ ಎದುರಿಗೆ ಧುತ್ತನೇ ಸಂಜಯ್ ಗಾಂಧಿ ಬಗ್ಗೆ ಪ್ರಶ್ನೆ ಎಸೆದಾಕೆ ರಶ್ಮಿ ಪೈ, ಆಕೆ ಗಾಂಧಿ ಕುಟುಂಬದ ತಲೆಮಾರಿನ ಹೆಸರನ್ನು ನೋಡುತ್ತಿದ್ದಾಗ, ಅಲ್ಲಿ ಸಂಜಯ್ ಗಾಂಧಿ ಮುಂದೆ ಮೊಹಮ್ಮದ್ ಯೂನುಸ್ ಅಂತ ದಾಖಲಿಸಲಾಗಿತ್ತು. ಸಂಜಯ್‌‌‌ಗೂ - ಯೂನುಸ್‌‌ಗೂ ಏನು ಸಂಬಂಧ, ಇದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಯಾವ ಸಂಬಂಧ ಎಂಬಂತೆ, ಇದರ ಹಿಂದಿನ ರಹಸ್ಯ ಈಗಾಗಲೇ ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ.

ಆದರೂ ಆ ಹೆಸರಿನ ಹಿಂದಿನ ಇರುವ ರಹಸ್ಯವಾದರು ಏನು, ಹಾಗಾದರೆ ಯಾವ ಸಂಬಂಧ....ಎಂಬುದಕ್ಕಿಂತ ಸ್ವಲ್ಪ ವಿವರವಾಗಿ ನೆಹರು ವಂಶದ ಬಗ್ಗೆ ರಾವ್ ಅವರು ದಾಖಲಿಸಿದ ವಿವರಗಳನ್ನು ಓದುತ್ತಾ ಹೋದರೆ ನಿಮಗೆ ತಿಳಿಯುತ್ತೆ...ಇಂದಿಗೂ ಸಂಜಯ್ ಗಾಂಧಿಯನ್ನು ತಾಯಿ ಇಂದಿರಾಳೇ ಕೊಲೆ ಮಾಡಿಸಿದ್ದಾರೆ, ಆತನ ಬಳಿ ಇದ್ದ ರಿಸ್ಟ್ ವಾಚ್ ಏನಾಯಿತು ಎಂಬಂತಹ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದಿರುವಂತೆ ಇವತ್ತಿಗೂ ಅಂತಹ 'ಚಿದಂಬರ ರಹಸ್ಯ'ದೆಡೆಗೊಂದು ಕುತೂಹಲ ಎಲ್ಲರಲ್ಲಿಯೂ ಇದೆ.ಕೆ.ಎನ್.ರಾವ್ ಅವರು ಬರೆದ ' ನೆಹರು ವಂಶ ' ಪುಸ್ತಕದಲ್ಲಿ ಅವರೇ ಬರೆದಿರುವಂತೆ, ಜವಾಹರಲಾಲ್ ನೆಹರು ಅವರ ಏಕೈಕ ಪುತ್ರಿ ಇಂದಿರಾ ಪ್ರಿಯದರ್ಶಿನಿ ನೆಹರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ.

ಕಮಲ ನೆಹರು ಇಂದಿರಾ ತಾಯಿ, ಆಕೆ ತೀರಿಕೊಂಡಿದ್ದು ಸ್ವಿಡ್ಜ್‌‌ರ್‌‌ಲ್ಯಾಂಡ್‌‌ನಲ್ಲಿ. ನೆಹರು ಪ್ರೀತಿಯ ಮಗಳು ಇಂದಿರಾಳ ಮದುವೆ ಗೆ ಮಾತ್ರ ಕಮಲ ನೆಹರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು,ಯಾಕೆ ಫಿರೋಜ್ ಜತೆಗಿನ ಮದುವೆಗೆ ವಿರೋಧ ವ್ಯಕ್ತಪಡಿ ಸಲಾ ಯಿತು, ಫಿರೋಜ್ ಯಾರು? ಆತ ಕಿರಾಣಿ ಅಂಗಡಿ ವರ್ತಕನ ಮಗನಾಗಿದ್ದ, ವೈನ್ ಸಪ್ಲೈಯ್‌‌ರ್ ಮಗನಾಗಿದ್ದ ಹೀಗೆ ನಾನಾ ರೀತಿಯಲ್ಲಿ ಫಿರೋಜ್‌‌ನನ್ನು ಗುರುತಿಸಲಾಗಿತ್ತು. ರಾಜೀವ್ ಅಜ್ಜನ ಹೆಸರು ಪಂಡಿತ್ ಜವಾಹರಲಾಲ್ ನೆಹರು, ಎಲ್ಲರಿಗೂ ತಿಳಿದಿರುವಂತೆ ಇಬ್ಬರು ಅಜ್ಜಂದಿರು ಇರುತ್ತಾರೆ, ಒಂದು ತಂದೆಯ ತಂದೆ, ಇನ್ನೊಂದು ತಾಯಿಯ ತಂದೆ.

ಹೆಚ್ಚಿನ ಸಮಾಜದಲ್ಲಿ ತಂದೆಯ ತಂದೆಗೆ ಹೆಚ್ಚಿನ ಸ್ಥಾನಮಾನ. ಹಾಗಾದರೆ ರಾಜೀವ್ ಅಜ್ಜನ ಹೆಸರೇನು ಎಂಬುದಾಗಿ ಕೆ. ಎನ್. ರಾವ್ ನೆಹರು ವಂಶ ಪುಸ್ತಕದ ಲೇಖನದಲ್ಲಿ ಪ್ರಶ್ನಿಸುತ್ತಾರೆ. ನಿಜಕ್ಕೂ ರಾಜೀವ್ ಗಾಂಧಿ ಮತ್ತೊಬ್ಬ ಅಜ್ಜ(ತಂದೆಯ ತಂದೆ) ಮುಸ್ಲಿಂ, ಆತ ಗುಜರಾತ್ ಜುನಾಗಢ್ ಪ್ರದೇಶದ 'ಜಂಟಲ್‌‌ಮೆನ್" ಆಗಿದ್ದರು.ಅವರ ಹೆಸರು ನವಾಬ್ ಖಾನ್ ಅವರು ಮದುವೆ ಯಾಗಿದ್ದು ಪಾರ್ಸಿ ಮಹಿಳೆಯನ್ನ, ವಿವಾಹದ ನಂತರ ಆಕೆಯನ್ನು ಇಸ್ಲಾಂಗೆ ಮತಾಂತರಿಸಲಾಯಿತು.

ಹೀಗೆ ಸಾಗುವ ನೆಹರು ವಂಶ ಪುರಾಣ ಕಥನ, ರಾಜೀವ್ ತಂದೆ ಫಿರೋಜ್, ಇಂದಿರಾ ಗಾಂಧಿಯನ್ನು ಮದುವೆಯಾಗುವ ಮುನ್ನ ಫಿರೋಜ್ ಖಾನ್ ಆಗಿದ್ದರು. ಫಿರೋಜ್ ತಾಯಿ ಕುಟುಂಬದ ಹೆಸರು ಗಾಂಡಿ, ಈ ಹೆಸರನ್ನು ಇಂದಿರಾ ಮದುವೆ ಬಳಿಕ ಗಾಂಧಿ ಎಂದು ಬದಲಾಯಿಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧಿ!!.ಚಂಚಲ ಚಿತ್ತದ ಇಂದಿರಾಗೆ ಆಪ್ತರಾಗುತ್ತ ಹೋದವರು ಫಿರೋಜ್ ಖಾನ್, ಬಳಿಕ ಆಕೆಯನ್ನು ಲಂಡನ್‌‌ನ ಮಸೀದಿಯಲ್ಲಿ ವಿವಾಹವಾಗಿದ್ದರು.

ಇದು ನೆಹರುಗೆ ನುಂಗಲಾರದ ತುಪ್ಪವಾಗಿತ್ತು.ಫಿರೋಜ್ ಮದುವೆಯ ಬಳಿಕ ಇಂದಿರಾ ಹೆಸರು ಕೂಡ ಮೈಮುನಾ ಬೇಗಂ ಎಂ ದಾಗಿತ್ತು, ಅಷ್ಟೇ ಅಲ್ಲ ಆಕೆ ಮುಸ್ಲಿಂರಂತೆಯೇ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದರು. ಫಿರೋಜ್ ಇಂದಿರಾಗಾಂಧಿಯನ್ನು ಲಂಡನ್ ಮಸೀದಿಯಲ್ಲಿ ಮದುವೆಯಾಗಿದ್ದು, ನೆಹರು ಅವರನ್ನು ಕೆಂಡಮಂಡಲರನ್ನಾಗಿಸಿತ್ತು. ಆದರೆ ಅವರಿಬ್ಬರು ಭಾರತಕ್ಕೆ ಹಿಂದಿರುಗಿದ ಕೂಡಲೇ ವೈದಿಕ ಸಂಪ್ರದಾಯದಲ್ಲಿ ಮದುವೆಯಾದಂತೆ ಎಲ್ಲ ಪತ್ರಿಕೆಗಳಲ್ಲೂ ಫೋಟೋ ಪ್ರಕಟಿಸಲಾಗಿತ್ತು. (ಈ ಮೊದಲೇ ಅವರಿಬ್ಬರು ಲಂಡನ್ ಮಸೀದಿಯಲ್ಲಿ ಮದುವೆಯಾದ ಫೋಟೋವನ್ನು ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯೊಂದು ಪ್ರಕಟಿಸಿತ್ತು).

ಇಂತಹ ಸಂಗತಿಗಳನ್ನೇ ನೆಹರು ರಹಸ್ಯವಾಗಿಡುವಲ್ಲಿ ತುಂಬಾ ಮುತುವರ್ಜಿ ವಹಿಸುತ್ತಿದ್ದರು, ಅದರಂತೆಯೇ ಫಿರೋಜ್-ಇಂದಿರಾ ಪುತ್ರರಾದ ರಾಜೀವ್, ಸಂಜಯ್ ಬಗೆಗೂ ಅನುಮಾನದ ಹುತ್ತಗಳು ಸುತ್ತುತ್ತಲೇ ಇವೆ.ಇಂದಿರೆಯ ಆಡಳಿತ ಅವಧಿಯಲ್ಲಿ ಸಂಜಯ್ ರಾಜಕೀಯ ಶಕ್ತಿಯನ್ನು ದುರ್ಬಳಕೆ ಮಾಡಿಕೊಂಡಿದ್ದ. ಅಲ್ಲದೇ ಕಾರು ಕದ್ದು ಸಿಕ್ಕಿ ಬಿದ್ದ ಸಂಜಯ್‌‌ನನ್ನು ರಕ್ಷಿಸಲು ಇಂದಿರಾ ಮತ್ತು ಸಹೋದ್ಯೋಗಿಗಳು ಇನ್ನಿಲ್ಲದಂತೆ ಶ್ರಮಿಸಿದ್ದರು.ಸಂಜಯ್ ಗಾಂಧಿ ನಿಜವಾದ ಹೆಸರು ಸಂಜೀವ್ ಗಾಂಧಿ, ಈತ ಯುಕೆಯಲ್ಲಿ ಕಾರು ಕದ್ದು ಸಿಕ್ಕಿ ಬಿದ್ದಿದ್ದು, ಅಲ್ಲಿ ಆತನ ಪಾಸ್‌‌ಫೋರ್ಟ್ ಅನ್ನು ವಶಪಡಿಸಿಕೊಂಡಿದ್ದರು.

ನಂತರ ಯುಕೆಯಲ್ಲಿ ಭಾರತದ ರಾಯಭಾರಿಯಾಗಿದ್ದ ನೆಹರು ಆಪ್ತಮಿತ್ರ ಕೃಷ್ಣಮೆನನ್ ಅವರು ಸಂಜಯ್ ಎಂಬ ಹೆಸರಲ್ಲಿ ಹೊಸ ಪಾಸ್‌‌ಫೋರ್ಟ್ ಮಾಡಿಕೊಟ್ಟಿದ್ದರು.ಎಲ್ಲಕ್ಕಿಂತ ಹೆಚ್ಚಾಗಿ ಸಂಜಯ್ ಇಂದಿರಾಗಾಂಧಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ, ಅಲ್ಲದೇ ಪರೋಕ್ಷವಾಗಿ ಸರಕಾರವನ್ನೇ ಹಿಡಿತಲ್ಲಿ ಇಟ್ಟುಕೊಂಡಿದ್ದ, ಆತ ರಾಷ್ಟ್ರವನ್ನು ತನ್ನ ಸ್ವಂತದ ಆಸ್ತಿ ಎಂಬಂತೆ ವರ್ತಿಸುತ್ತಿದ್ದ. ಅಷ್ಟಾಗಿಯೂ ಇಂದಿರೆ ಪುತ್ರ ವ್ಯಾಮೋಹಕ್ಕೆ ಒಳಗಾಗಿ ಗಾಂಧಾರಿಯಂತೆ ಕಣ್ಣಿದ್ದು ಕುರುಡರಾಗಿದ್ದರು.ಇದಕ್ಕೆಲ್ಲಾ ಅಸ್ತ್ರ ಎಂಬಂತೆ ಸಂಜಯ್ ತಾಯಿ ಇಂದಿರೆಯನ್ನು ಅಂಗೈಯಲ್ಲಿಟ್ಟ ಬುಗುರಿಯಂತೆ ತಿರುಗುಸುತ್ತಿದ್ದ, ಮತ್ತೆ ಪದೇ, ಪದೇ ಅದೇ ಮಾತನ್ನು ಕೇಳುತ್ತಿದ್ದ ಹೇಳು ನನ್ನ ನಿಜವಾದ ಅಪ್ಪ ಯಾರು ಅಂತ ??

ಇಂದಿರಾ ಪತಿ ಫಿರೋಜ್ ಖಾನ್‌‌ ಅವರನ್ನು ಪ್ರಧಾನಿ ನಿವಾಸ ತೀನ್‌‌‌ಮೂರ್ತಿ ಭವನದೊಳಗೆ ಕಾಲಿಡದಂತೆ ನೆಹರು ಕಟ್ಟಪ್ಪಣೆ ಹೊರಡಿಸಿದ್ದರು. ಇಂತಹ ಜಂಜಾಟಗಳ ನಡುವೆ ಇಂದಿರಾ ಮತ್ತು ಫಿರೋಜ್ ಕಾನೂನು ಬದ್ಧವಾಗಿ ಅಲ್ಲದಿದ್ದರೂ ಅವರು ಪ್ರತ್ಯೇಕವಾಗಿಯೇ ವಾಸಿಸತೊಡಗಿದ್ದರು. 1960ರಲ್ಲಿ ಫಿರೋಜ್ ಸಾವನ್ನಪ್ಪಿದ್ದರು ಕೂಡ ಈ ಸಾವು ಕೂಡ ಇಂದಿಗೂ ನಿಗೂಢವಾಗಿಯೇ ಉಳಿದಿದೆ.ಸಂಜಯ್ ಗಾಂಧಿ ಫಿರೋಜ್ ಗಾಂಧಿ ಮಗನಲ್ಲ ಆತ ಮತ್ತೊಬ್ಬ ಮುಸ್ಲಿಂ ಜಂಟಲ್ ಮೆನ್ ಆಗಿದ್ದ ಮೊಹಮ್ಮದ್ ಯೂನಿಸ್ ಪುತ್ರ ಎಂಬ ವಾಸ್ತವ ಸಂಗತಿ ಸಂಜಯ್ ತಿಳಿದುಹೋಗಿತ್ತು.

ಅಲ್ಲದೇ ಯೂನಿಸ್‌‌ಗೆ ಸಂಜಯ್ ಸಿಖ್ ಯುವತಿ ಮೇನಕಳಾನ್ನು ಮದುವೆಯಾಗುವುದು ಇಷ್ಟ ಇಲ್ಲವಾಗಿತ್ತು. ಅಷ್ಟರಲ್ಲಾಗಲೇ ಸಂಜಯ್ ಕರ್ನಲ್ ಆನಂದ್ ಎಂಬವರ ಮಗಳನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ, ಆಕೆಯನ್ನೇ ಮದುವೆಯಾಗ ಬೇಕು ಎಂದು ಕರ್ನಲ್ ಸಂಜಯ್‌ಗೆ ಬೆದರಿಕೆ ಕೂಡ ಒಡ್ಡಿದ್ದರು. ಆದರೆ ಸಂಜಯ್ ಮೇನಕಳನ್ನು ವರಿಸಿಬಿಟ್ಟಿದ್ದ.

ಸಂಜಯ್ ಮುಸ್ಲಿಂ ಯುವತಿಯನ್ನೇ ಮದುವೆಯಾಗಬೇಕು ಎಂದು ಹಂಬಲಿಸಿದ್ದರು. ಸಂಜಯ್ ವಿಮಾನ ಅಪಘಾತದಲ್ಲಿ ತೀರಿ ಕೊಂಡಾಗ ಯೂನುಸ್ ವೇದನೆಗೊಳಗಾಗಿರುವುದಾಗಿ ಯೂನುಸ್ ತಮ್ಮ ವ್ಯಕ್ತಿ,ಮೋಹ ಮತ್ತು ರಾಜಕೀಯ ಎಂಬ ಪುಸ್ತಕದಲ್ಲಿ ದಾಖಲಿಸಿರುವುದಾಗಿ ನೆಹರು ಅವರ ದೀರ್ಘಕಾಲದ ಖಾಸಗಿ ಕಾರ್ಯದರ್ಶಿಯಾಗಿದ್ದ ಎಂ.ಒ.ಮಥಾಯ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.ಹೀಗೆ ನೆಹರು ಕಾಲದ ನೆನಪು (ರಿಮಿನಿಸೆಸ್ಸ್ ಆಫ್ ದಿ ನೆಹರು ಏಜ್ ) ಎಂಬ ಪುಸ್ತಕದಲ್ಲಿ ಎಸ್.ಒ.ಮಥಾಯ್ ಅವರು ಇಂತಹ ಹಲವಾರ ರಹಸ್ಯಗಳನ್ನು ಹೊರಗೆಡಹಿದ್ದರು. ಆದರೆ ಭಾರತ ಸರಕಾರ ಆ ಪುಸ್ತಕವನ್ನು ನಿಷೇಧಿಸಿತ್ತು!!.

Thursday, April 3, 2008

ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ

ಇತ್ತೀಚೆಗೆ ಜೈತ್ರಯಾತ್ರೆ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬೆಳಗಾವಿ ಯಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ರಾಷ್ಟ್ರೀಯ ಪಕ್ಷಗಳು ದ್ವಂದ್ವ ನೀತಿ ಅನುಸರಿಸುತ್ತವೆ.ಕೇಂದ್ರದಿಂದ ನ್ಯಾಯ ಸಿಗುವುದಿಲ್ಲ. ರಾಜ್ಯಕ್ಕೆ ತಕ್ಕ ಗೌರವ ಸಲ್ಲಬೇಕಾದರೆ ತಮಿಳುನಾಡನ್ನು ಮಾದರಿಯಾಗಿಟ್ಟುಕೊಂಡು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸ ಬೇಕು ಎಂಬುದಾಗಿ ಹೇಳಿದ್ದರು.

ಆದರೆ ರಾಜಕೀಯವಾಗಿ ಕುಮಾರಸ್ವಾಮಿಯವರ ಹೇಳಿಕೆಯನ್ನು ತಿರಸ್ಕರಿಸಬಹುದು ಅಥವಾ ಅವರ ವಿಶ್ವಾಸ ದ್ರೋಹವನ್ನೇ ನೆಪವಾಗಿಟ್ಟುಕೊಂಡು ಹಂಗಿಸಬಹುದು. ನಾವು ಅವೆರಡನ್ನೂ ಬಿಟ್ಟು ರಾಜ್ಯದ ವಿಷಯವನ್ನು ಗಮದಲ್ಲಿಟ್ಟುಕೊಂಡರೆ, ಕುಮಾರಸ್ವಾಮಿಯವರು ಹೇಳಿದ ಮಾತಿನಲ್ಲಿ ಸತ್ಯಾಂಶ ಇದೆ. ಅಲ್ಲದೇ 1996ರ ಬಳಿಕ ಹಲವು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸಿರುವುದನ್ನು ಮನಗಾಣಬೇಕಾಗಿದೆ.

1960ರಲ್ಲಿ ಹಿಂದಿ ವಿರೋಧಿ ಚಳವಳಿಯೊಂದಿಗೆ ಜನ್ಮತಳೆದ ಡಿಎಂಕೆ ಜನಪ್ರಿಯವಾಗುವುದರೊಂದಿಗೆ ರಾಜ ಕೀಯವಾಗಿ ಬಹಳಷ್ಟು ಪ್ರಬಲವಾಯಿತು. 1967ರಲ್ಲಿ ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಬಲವನ್ನು ಕುಗ್ಗಿಸುವ ಮೂಲಕ ಡಿಎಂಕೆಯ ಸಿಎನ್ ಅಣ್ಣಾದೊರೈ ಪ್ರಥಮ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದರು. ಅಣ್ಣಾ ಮರಣಾ ನಂತರ 1969ರಲ್ಲಿ ಕರುಣಾನಿಧಿ ಮುಖ್ಯಮಂತ್ರಿ ಗಾದಿಗೆ ಏರಿದ್ದರು.

ಬಳಿಕ ಕಾಂಗ್ರೆಸ್ ತೊರೆದು ಡಿಎಂಕೆ ಸೇರಿದ್ದ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಎಂ.ಜಿ.ರಾಮಚಂದ್ರನ್(ಎಂಜಿಆರ್) ಕರುಣಾನಿಧಿ ನಡುವಿನ ವಿರಸದಿಂದಾಗಿ 1972ರಲ್ಲಿ ಎಡಿಎಂಕೆ(ನಂತರ ಎಐಎಡಿಎಂಕೆ ಆಗಿದ್ದು) ಅನ್ನು ಹುಟ್ಟು ಹಾಕುವ ಮೂಲಕ ಡಿಎಂಕೆಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಬೆಳೆದಿದೆ. ಇಂದು ತಮಿಳುನಾಡಿನ ಡಿಎಂಕೆ ಕೇಂದ್ರದಲ್ಲಿ ಬಲವಾಗಿ ಧ್ವನಿ ಎತ್ತುವಷ್ಟು ಶಕ್ತವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ತಮಿಳುನಾಡಿನಲ್ಲಿ ಪ್ರತಿ ಮನೆಯಲ್ಲೂ ಗ್ಯಾಸ್ ಸಿಲೆಂಡರ್ (ಪ್ರತಿಮನೆಯಲ್ಲಿ ಟಿವಿ)ಇದೆ, ಇಲ್ಲಿನ ರೈಲು ವ್ಯವಸ್ಥೆ, ಪ್ಲೈ ಒವರ್, ಬಸ್ ಟಿಕೇಟ್ ದರ, ವಿದ್ಯುತ್ ದರ ಎಲ್ಲವೂ ಜನಪರವಾಗಿದೆ.

ಇದು ಸಾಧ್ಯವಾಗಿದ್ದು ಪ್ರಾದೇಶಿಕ ಪಕ್ಷಗಳ ಹೋರಾಟದ ಫಲ. ಅದೇ ರೀತಿಯಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತಕ್ಕೆ ಸೆಡ್ಡು ಹೊಡೆದು 1982 ಮಾರ್ಚ್ 29ರಂದು ತೆಲುಗು ಸಿನಿಮಾರಂಗದ ಖ್ಯಾತ ಚಿತ್ರನಟ ಎನ್.ಟಿ.ರಾಮರಾವ್(ಎನ್‌ಟಿಆರ್) ತೆಲುಗು ದೇಶಂ ಪಕ್ಷವನ್ನು ಸ್ಥಾಪಿಸಿದರು.1984ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 35ಸೀಟುಗಳನ್ನು ಪಡೆದಿತ್ತು. 1999-2004ರಲ್ಲಿ ನಡೆದ 13ನೇ ಲೋಕಸಭಾ ಚುನಾವಣೆಯಲ್ಲೇ ಅದು ನಾಲ್ಕನೇ (29ಸೀಟುಗಳನ್ನು ಗಳಿಸಿತ್ತು) ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ನಂತರ 1996ರಲ್ಲಿ ಚಂದ್ರಬಾಬು ನಾಯ್ಡು ಅವರು ಅಧಿಕಾರಕ್ಕೆ ಬಂದ ಮೇಲೆ ಆಂಧ್ರಪ್ರದೇಶ, ಹೈದರಾಬಾದ್ ಹೆಸರು ಜಾಗತಿಕವಾಗಿ ಬೆಳೆಯಿತು. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ 1969ರಲ್ಲಿ ಕಾಂಗ್ರೆಸ್‌‌ಗೆ ಸೇರ್ಪಡೆಗೊಂಡಿದ್ದ ರಾಮಕೃಷ್ಣ ಹೆಗಡೆಯವರು, ನಂತರದಲ್ಲಿ 1975ರ ತುರ್ತುಪರಿಸ್ಥಿತಿಯಿಂದ ರೋಸಿಹೋದ ಅವರು, ಜನತಾ ಪಕ್ಷವನ್ನು ಸೇರಿದ್ದರು.

ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ಸೇವೇ ಸಲ್ಲಿಸಿದ್ದ, ರಾಮಕೃಷ್ಣ ಹೆಗಡೆ 1983ರಲ್ಲಿ ಬಿಜೆಪಿ ಮತ್ತು ಎಡಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿಯಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ, ಸಾರ್ವಜನಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೀಗೆ ಪ್ರಮುಖ ನಿರ್ಧಾರಗಳು ಜನಪರವಾಗಿದ್ದವು.

ಅಲ್ಲದೆ ಮೌಲ್ಯಾಧಾರಿತ ರಾಜಕಾರಣಿ ಎಂದೆ ಹೆಸರು ಪಡೆದಿದ್ದರು(ಹಗರಣಗಳ ವಿವಾದಗಳಲ್ಲಿ ಸಿಲುಕಿದ್ದು ಕೂಡ ಅಷ್ಟೇ ವಿಪರ್ಯಾಸ) ನಂತರ ಆರೋಪ, ಅಧಿಕಾರ, ಒಳರಾಜಕೀಯ, ಹಗರಣಗಳಿಂದ 1986ರಲ್ಲಿ ರಾಜೀನಾಮೆ ನೀಡಿದ ಹೆಗಡೆ, ನಂತರ ಮತ್ತೆ ಅಧಿಕಾರಕ್ಕೆ ಬಂದ ಅವರು 1988ರವರೆಗೆ ಮುಖ್ಯಮಂತ್ರಿ ಯಾಗಿದ್ದರು. ಬಳಿಕ ರಾಷ್ಟ್ರೀಯ ನವನಿರ್ಮಾಣ ವೇದಿಕೆ,ನಂತರ ಲೋಕಶಕ್ತಿಯನ್ನು ಹುಟ್ಟುಹಾಕಿದರು ಕೂಡ ಅದು ದುರ್ಬಲಗೊಂಡಿತ್ತು.

ಆದರೆ ಇಂದು ಜನತಾಪಕ್ಷ ಒಡೆದು, ಒಡೆದು ಅವುಗಳೇ ತಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದಿಕೊಂಡಿರುವುದು ಹಾಗೂ ಸಮಾಜವಾದಿಗಳಾಗಿ, ಕಾಂಗ್ರೆಸ್ ವಿರೋಧಿ ಧೋರಣೆ ಹೊಂದಿದ್ದ ನಾಯಕರುಗಳೇ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ದುರಂತವಲ್ಲದೆ ಇನ್ನೇನು. ಇವತ್ತು ಕರ್ನಾಟಕದ ಪ್ರತಿಯೊಂದು ಸಮಸ್ಯೆಗೂ ನಮ್ಮ ರಾಜಕಾರಣಿಗಳು ಕೇಂದ್ರದಲ್ಲಿ ಹ್ಯಾಪು ಮೋರೆ ಹಾಕಿಕೊಳ್ಳವಂತಾಗಿದೆ.

ಅದೇ ತಮಿಳುನಾಡು ವಿಷಯಕ್ಕೆ ಬನ್ನಿ ಕಾವೇರಿ ವಿವಾದ, ಹೊಗೇನಕಲ್ ವಿವಾದ, ವಿದ್ಯುತ್ ಸರಬರಾಜು ಯಾವುದೇ ಇರಲಿ ತನ್ನ ರಾಜ್ಯದ ಹಿತಾಸಕ್ತಿಯನ್ನು ಬಲಿಗೊಡುವುದಿಲ್ಲ, ಅದ್ಯಾಕೆ ಇತ್ತೀಚೆಗೆ ಮಧುರೈಯಲ್ಲಿ ಸಾಂಪ್ರದಾಯಿಕ ಹೆಸರಲ್ಲಿ ನಡೆಯುವ ಜಲ್ಲಿಕಾಟ್ಟು (ಗೂಳಿಕಾಳಗ)ಗೆ ಸ್ವತಃ ಸರಕಾರವೇ ಸರ್ವೊಚ್ಛನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿ, ಅದರಿಂದ ಯಾರಿಗೂ ಜೀವಹಾನಿ ಇಲ್ಲ, ಜಲ್ಲಿಕಾಟ್ಟುಗೆ ಕೆಲವು ಶತಮಾನಗಳ ಇತಿಹಾಸ ಇದೆ ಎಂಬುದಾಗಿ ಸಮರ್ಥಿಸಿಕೊಂಡಿತ್ತು.

ಆದರೂ ನ್ಯಾಯಾಲಯ ಷರತ್ತನ್ನು ವಿಧಿಸಿ ಗೂಳಿಕಾಳಗಕ್ಕೆ ಅನುಮತಿ ನೀಡಿತ್ತಾದರೂ, ಇಬ್ಬರು ಪ್ರಾಣಕಳೆದು ಕೊಂಡಿದ್ದರು.ಇಂದು ತಮಿಳುನಾಡಿನಲ್ಲಿ ಡಿಎಂಕೆ (ದ್ರಾವಿಡ ಮುನ್ನೇತ್ರಾ ಕಜಗಂ), ಎಐಡಿಎಂಕೆ (ಅಣ್ಣಾ ದ್ರಾವಿಡ ಮುನ್ನೇತ್ರಾ ಕಜಗಂ), ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಪಕ್ಷ, ರಾಷ್ಟ್ರೀಯ ತೆಲಂಗಾಣ ಪಕ್ಷ, ಇಂಡಿಯಾ ಫಾರ್ವರ್ಡ್ ಬ್ಲಾಕ್ (ಪಶ್ಚಿಮಬಂಗಾಳ), ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಮೇಘಾಲಯ,ಪಶ್ಚಿಮಬಂಗಾಲ),

ಅಸ್ಸೋಮ್ ಗಣ ಪರಿಷತ್ (ಅಸ್ಸಾಂ), ಬಿಜು ಜನತಾದಳ (ಒರಿಸ್ಸಾ), ಇಂಡಿಯನ್ ಫೆಡರಲ್ ಡೆಮೋಕ್ರೆಟಿಕ್ ಪಾರ್ಟಿ(ಕೇರಳ), ಇಂಡಿಯನ್ ನ್ಯಾಶನಲ್ ಲೋಕದಳ (ಹರಿಯಾಣ),ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಕೇರಳ),ಜನತಾದಳ (ಬಿಹಾರ,ಜಾರ್ಖಂಡ್,ನಾಗಾಲ್ಯಾಂಡ್) ರಾಷ್ಟ್ರೀಯ ಜನತಾದಳ (ಬಿಹಾರ್,ಜಾರ್ಖಂಡ್),ಸಮಾಜವಾದಿ ಪಕ್ಷ (ಮಧ್ಯಪ್ರದೇಶ, ಉತ್ತರಪ್ರದೇಶ, ಉತ್ತರಖಂಡ), ಶಿವಸೇನೆ(ಮಹಾರಾಷ್ಟ್ರ),ಯುನೈಟೆಡ್ ಗೋವನ್ಸ್ ಡೆಮೋಕ್ರೆಟಿಕ್ ಪಾರ್ಟಿ(ಗೋವಾ)ಇವು ಪ್ರಮುಖ ಪ್ರಾದೇಶಿಕ ಪಕ್ಷಗಳು.

ತಮಿಳುನಾಡಿನಲ್ಲಂತೂ ಜನ ಒಮ್ಮೆ ಕರುಣಾನಿಧಿಯವರನ್ನು ಅಧಿಕಾರದ ಗದ್ದುಗೆ ಏರಿಸಿದರೆ, ಮತ್ತೊಮ್ಮೆ ಎಐಎಡಿಎಂಕೆ ಜಯಲಲಿತಾ ಅವರನ್ನು, ಹೀಗೆ ಕಳೆದ 40ವರ್ಷಗಳಿಂದ ಪ್ರಾದೇಶಿಕ ಪಕ್ಷಗಳೇ ಇಲ್ಲಿ ಪ್ರಾಬಲ್ಯ ಪಡೆದಿದೆ. ಯಾವುದೇ ರಾಷ್ಟ್ರೀಯ ಪಕ್ಷಗಳು ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ. ಉತ್ತರಪ್ರದೇಶದಲ್ಲಿಯೂ ಬಹುಜನ್ ಸಮಾಜ ಪಕ್ಷ ಗಟ್ಟಿಯಾಗಿ ನೆಲೆಯೂರಿದೆ, ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ, ತೆಲಂಗಾಣ ರಾಷ್ಟ್ರ ಸಮಿತಿ ಬಲವರ್ಧಿಸಿಕೊಂಡಿವೆ.

ಕರ್ನಾಟಕದ ಜನ ಹೆಸರಿಗಷ್ಟೇ ಬುದ್ಧಿವಂತರಾಗಿದ್ದೇವೆ. ರಾಷ್ಟ್ರೀಯ ಪಕ್ಷಗಳಲ್ಲಿನ ರಾಜಕೀಯ ನಾಯಕರಿಗೆ ಇಚ್ಛಾಶಕ್ತಿಯ ಕೊರತೆ ತುಂಬಿಕೊಂಡಿದ್ದರೆ, ಕೇವಲ ಭರವಸೆಗಳ ಮೂಟೆಯೊಂದಿಗೆ ಅಧಿಕಾರದ ಗದ್ದುಗೆ ಏರುವುದು ಮಾತ್ರ ಮುಖ್ಯವಾಗಿದೆ ವಿನಃ ಜನಪರ ಕಾಳಜಿ ಬೇಕಾಗಿಲ್ಲ ಎನ್ನುವುದಕ್ಕೆ ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಬಗೆಹರಿಯದೆ ಇರುವ ಸಮಸ್ಯೆಗಳೇ ಸಾಕ್ಷಿ. ಕರ್ನಾಟಕದ ಸಮಸ್ಯೆಯನ್ನು ಪಟ್ಟು ಹಿಡಿದು ಮಾಡಿಸಿಕೊಳ್ಳಲಿಕ್ಕಾದರೂ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ, ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆಯಂತೆ, ಅಂತಹ ನಾಯಕರು ಮತ್ತು ಮತದಾರರು ಯಾರು...!!