Wednesday, October 8, 2008

ಅಸ್ಪ್ರಶ್ಯ ಬುದ್ಧ ...!!


ಮನುಷ್ಯ, ಮನುಷ್ಯರ ನಡುವಿನ ಕ್ರೌರ್ಯ, ಅಸಮಾನತೆ, ಘರ್ಷಣೆಗಳಿಂದ ಸಮಾಜದ ಜನರು ತೊಳಲಾಡುತ್ತಿದ್ದ ಸಂದರ್ಭದಲ್ಲಿಯೇ ಗೌತಮ ಬುದ್ಧ, ಮಹಾವೀರ, ಯೇಸು, ಬಸವಣ್ಣ, ಗಾಂಧಿಯಂತಹ ವ್ಯಕ್ತಿಗಳು ಜನಸಮುದಾಯದ ನಡುವೆ ಹೊಗೆಯಾಡುತ್ತಿದ್ದ ವೈರುಧ್ಯಗಳ ವಿರುದ್ಧ ಸಮರ ಸಾರಿದ್ದರು. ಬುದ್ಧನ ಕಾಲದ ಸಂದರ್ಭದಲ್ಲಿ ಭಾರತ ಜಾತಿ, ಅಸಮಾನತೆ, ಅಸ್ಪ್ರಶ್ಯತೆಗಳಿಂದ ನರಳುತ್ತಿತ್ತು. ಅದೂ ಅಲ್ಲದೇ ಹಿಂದೂ ಎನಿಸಿಕೊಂಡು,ಶೂದ್ರ ಜನಾಂಗದವರು ಅಕ್ಷರಶಃ ಪ್ರಾಣಿಗಳಂತೆ ಸಮಾಜದಲ್ಲಿ ಬದುಕುತ್ತಿದ್ದ ಸ್ಥಿತಿ. ಸಂಸ್ಕೃತ ಶ್ಲೋಕಗಳನ್ನು ಶೂದ್ರನಾದವ ಕೇಳಿಸಿಕೊಳ್ಳಲೇ ಬಾರದು ಎಂಬಂತಹ ಫರ್ಮಾನು ಇತ್ತು.


ಇಂತಹ ಅಮಾನವೀಯ ಕಟ್ಟು-ಕಟ್ಟಳೆಗಳಿಂದ ಹಿಂದೂ ಸಮಾಜ ರೋಗಗ್ರಸ್ಥವಾಗಿತ್ತು.ಆ ಸಂದರ್ಭದಲ್ಲಿ ಅದೊಂದು ಬದಲಾವಣೆಗಾಗಿ ಹಿಂದುಳಿದ ಸಮುದಾಯ ಹಾತೊರೆಯುತ್ತಿತ್ತು. ಅಸಮಾನತೆ, ಜಾತಿ, ದೇವರು, ದಿಂಡರು, ಮೂಢನಂಬಿಕೆಗಳಿಂದ ನರಳುತ್ತಿದ್ದ ಜನಸಾಮಾನ್ಯರ ಬದುಕಿಗೆ ಜ್ಞಾನದ ಬೆಳಕಾಗಿ ಆವಿರ್ಭವಿಸಿದಾತ ಗೌತಮ ಬುದ್ಧ. ಅ.9 ಆತನ ಜನ್ಮ ಜಯಂತಿಯಾಗಿದ್ದು, ಅಹಿಂಸೆ ಎಂಬ ಮಹಾನ್ ಮಂತ್ರದ ಮೂಲಕ ಸಮಾಜದಲ್ಲಿನ ಕ್ರೌರ್ಯ, ಮೌಢ್ಯಗಳ ವಿರುದ್ಧ ಹೋರಾಡಿದ ದಿವ್ಯ ಚೇತನ ಬುದ್ಧ.


ದ್ವೇಷದ ದಳ್ಳುರಿ, ಜಿಹಾದ್, ಧರ್ಮ, ಜಾತಿಯ ಅಮಲಿನಲ್ಲಿ ರಕ್ತದ ಕೋಡಿ ಹರಿಸುತ್ತಿರುವ ಈ ಸಂದರ್ಭದಲ್ಲಿ ಬುದ್ಧ ಮತ್ತೆ, ಮತ್ತೆ ನೆನಪಾಗುತ್ತಾನೆ. ಬುದ್ಧ ಸಂದೇಶ ಈಗಲೂ ಪ್ರಸ್ತುತ ಎಂಬ ಆಶಯದೊಂದಿಗೆ ಈ ಲೇಖನ.


ಲುಂಬಿನಿಯಲ್ಲಿ ಜನ್ಮತಳೆದ ಸಿದ್ದಾರ್ಥ (ಗೌತಮ)ಅರಮನೆಯಿಂದ ಹೊರಬಂದು ರಥ ಪ್ರಯಾಣದ ಸಂದರ್ಭದಲ್ಲಿ ವೃದ್ದರನ್ನು,ಶವ ಯಾತ್ರೆಯಂತಹ ಘಟನೆಗಳನ್ನು ನೋಡಿದ ಬಳಿಕ ಚಂಚಲ ಚಿತ್ತನಾದ ಆತನಿಗೆ ಈ ಎಲ್ಲಾ ಬೆಳವಣಿಗಳು ಆತನನ್ನು ಅಂತರ್ಮುಖಿಯನ್ನಾಗಿಸಿ, ಅರಮನೆ ತ್ಯಜಿಸುವಂತೆ ಮಾಡಿತ್ತು ಎಂಬುದು ಪ್ರಚಲಿತ ಇತಿಹಾಸ. ಆದರೆ ಗೌತಮ ನಿಜಕ್ಕೂ ಅಂತಹ ಸನ್ನಿವೇಶಗಳನ್ನು ಕಂಡು ಮಧ್ಯರಾತ್ರಿಯಲ್ಲಿ ಅರಮನೆ ತೊರೆದು ಸಮಾಜೋದ್ಧಾರಕ್ಕೆ ಹೊರಟಿದ್ದನೇ ಎಂಬುದು ಪ್ರಶ್ನೆ.


ಇತಿಹಾಸದ ಪುರಾವೆಗಳು ಇಂದಿಗೂ ನೈಜ ಸತ್ಯವನ್ನು ಬಿಚ್ಚಿಟ್ಟಿಲ್ಲ ಎಂಬುದಕ್ಕೆ ಇಂದಿಗೂ ಜನಮಾನಸದ ಮನಸ್ಸುಗಳನ್ನು ಆಕ್ರಮಿಸಿ ನಡೆಸುತ್ತಿರುವ ಘಟನೆಗಳೇ ಸಾಕ್ಷಿ. ಅದಕ್ಕೆ ಪೂರಕವೆಂಬಂತೆ ಸತ್ಯವನ್ನು ತಿರುಚಿ ಬರೆದಿರುವ ಇತಿಹಾಸಗಳೇ ಇಂದು ನಮ್ಮನ್ನ ಅಧಃಪತನದತ್ತ ತಳ್ಳುತ್ತಿದೆ ಎಂಬುದನ್ನು ಮನಗಾಣಬೇಕಾಗಿದೆ. ಸಿದ್ದಾರ್ಥ ಅಂದು ಅರಮನೆ ತೊರೆದದ್ದು ಶಾಕ್ಯ ಮತ್ತು ಕೋಲಿ ರಾಜ್ಯಗಳ ನಡುವೆ ಉದ್ಭವಿಸಿದ ರೋಹಿಣಿ ನದಿ ನೀರಿನ ಹಂಚಿಕೆ ವಿಷಯವೇ ಪ್ರಮುಖವಾಗಿತ್ತು.


ನಿಸರ್ಗದ ಸಂಪತ್ತನ್ನು ಸಕಲ ಜೀವಿಗಳು ಸಮಾನವಾಗಿ ಪಡೆಯಬೇಕು,ಅದು ರಕ್ತಪಾತದಿಂದ ಅಲ್ಲ,ಯುದ್ಧವಿಲ್ಲದೆ ಅಹಿಂಸೆಯ ಮೂಲಕ ನದಿ ನೀರನ್ನು ಪಡೆಯಬೇಕು ಎಂಬ ನಿಲುವು ತಳೆದಿದ್ದ. ಈ ಧೋರಣೆ ಆತನನ್ನು ಶಾಕ್ಯ ರಾಜ್ಯದಿಂದ ಬಹಿಷ್ಕಾರಕ್ಕೆ ಒಳಗಾಗುವ ಮೂಲಕ ಅರಮನೆ ತ್ಯಜಿಸಿ ಮನುಕುಲದ ಕಲ್ಯಾಣಕ್ಕಾಗಿ ಹೋರಾಟ ನಡೆಸಿ ಬುದ್ಧನಾಗಿದ್ದ.


ಆ ಕಾರಣಕ್ಕಾಗಿಯೇ ಬುದ್ಧ ಯಾವತ್ತೂ ದೇವರ-ದಿಂಡಿರು,ಮೌಢ್ಯತೆಗಳಿಂದ ಜನರನ್ನು ಸೆಳೆಯಲಿಲ್ಲ. ಅಸಮಾನತೆಯನ್ನು ತೊಡೆದು, ಜಾತಿಯನ್ನು ಧಿಕ್ಕರಿಸಿ ಮುಂದುವರಿಯುವ ಮೂಲಕ ಜನಮಾನಸದಲ್ಲಿ ಭದ್ರ ನೆಲೆ ಕಂಡುಕೊಂಡಿದ್ದ. ಆವಾಗಲೂ ಬುದ್ಧ ತಾನೊಬ್ಬ ಚಿಕಿತ್ಸಕ ಎಂದೇ ಹೇಳುತ್ತಿದ್ದ. ಹಾಗಂತ ಗೌತಮ ಯಾವುದೇ ಔಷಧವನ್ನು ನೀಡುವ ವೈದ್ಯನಾಗಿರಲಿಲ್ಲ, ಆತ ಜಾಗೃತಿ ಬಗ್ಗೆ ಹೇಳುತ್ತಿದ್ದ ಚಿಕಿತ್ಸಕನಾಗಿದ್ದ. ಮೊದಲು ನೀವು ಜಾಗೃತರಾಗಿ, ಬೋಧಪೂರ್ಣರಾಗಿ ಎಂದೇ ಹೇಳುತ್ತಿದ್ದ.


ತಪ್ಪುಗಳೆಲ್ಲವನ್ನೂ ಸರಿಪಡಿಸಲಿರುವ ವಿಧಾನ ಒಂದೇ ಅದ್ಯಾವುದೆಂದರೆ, ಬೋಧಪೂರ್ಣರಾಗುವುದು, ಜಾಗೃತಿಯಿಂದ ಇರುವುದು ಎಂದರ್ಥ. ಹಾಗಂತ ಬುದ್ಧ ಯಾರನ್ನೂ ಬಲವಂತದಿಂದ ಯಾರನ್ನೂ ತನ್ನೆಡೆಗೆ ಸೆಳೆದಿರಲಿಲ್ಲ . ಆ ಕಾರಣದಿಂದಾಗಿ ಭಾರತದಲ್ಲಿ ಬೌದ್ಧ ಧರ್ಮ ಉಚ್ರಾಯ ಸ್ಥಿತಿ ಕಂಡಿತ್ತು. (ಹಾಗಾದರೆ ಇಂದು ಭಾರತದಿಂದಲೇ ಬೌದ್ಧ ಧರ್ಮ ಕಣ್ಮರೆಯಾದದ್ದು ಹ್ಯಾಗೆ ಎಂಬುದು ಮತ್ತೊಂದು ದುರಂತ ಇತಿಹಾಸ.)


ಆ ನಿಟ್ಟಿನಲ್ಲಿ ಧರ್ಮಾಂಧತೆ, ಮತಾಂಧತೆ, ಜೆಹಾದ್‌ನ ಕಬಂಧಬಾಹುಗಳು ಸಮಾಜದಲ್ಲಿ ರುದ್ರನರ್ತನಗೈಯುವ ಮೂಲಕ ಅಮಾಯಕರ ಆಪೋಶನ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ,ದುಷ್ಟ ಬುದ್ಧಿಯ ಜನರೇ ಹೆಚ್ಚುತ್ತಿರುವ ಸಮಯದಲ್ಲಿ, ದ್ವೇಷಾಗ್ನಿಯ ಕಿಚ್ಚು ಹಚ್ಚಿ ಮುಗ್ದ ಜನರ ಶೋಷಣೆ ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ಬುದ್ಧನ ಅಹಿಂಸೆಯ ತತ್ವ,ಸಾಂಗತ್ಯ ಹೆಚ್ಚು ಪ್ರಸ್ತುತವಾಗಿದೆ.


ಆದರೆ ದ್ವೇಷದಿಂದ, ಕೋವಿಯಿಂದ, ಬಾಂಬ್‌ನಿಂದ, ಜೆಹಾದ್‌ನಿಂದಲೇ ನಾವು ನಮ್ಮ ಹೋರಾಟವನ್ನು ಜಯಗಳಿಸುತ್ತೇವೆ ಎಂಬ ಹುಂಬ ಮನಸ್ಸುಗಳೇ ಹೆಚ್ಚುತ್ತಿರುವ ಸಮಯದಲ್ಲಿ ಬುದ್ಧ ಎಷ್ಟು ಪ್ರಸ್ತುತನಾಗಬಲ್ಲ....?!

1 comment:

ಸಂಭವಾಮಿ ಯುಗೇ ಯುಗೇ said...

ಲೇಖನ ಚೆನ್ನಾಗಿದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ