Wednesday, October 8, 2008

ಫ್ಯಾಸಿಸಮ್ V/s ಹಿಂದೂಯಿಸಂ

ರಾಜ್ಯದಲ್ಲಿ ಪ್ರಾರ್ಥನಾ ಮಂದಿರ, ಚರ್ಚ್‌ಗಳ ಮೇಲೆ ದಾಳಿ ನಡೆದ ಬಳಿಕ ಗುಲ್ಬರ್ಗಾದ ಸ್ವಾಮಿಯೊಬ್ಬರು ಈ ದೇಶದಲ್ಲಿರುವ ಮುಸ್ಲಿಂ, ಕ್ರೈಸ್ತರನ್ನು ನಾಶಮಾಡಲು ಹಿಂದೂಗಳ ಕೈ ಬಲಪಡಿಸಬೇಕಾಗಿದೆ ಎಂಬುದಾಗಿ ಬಹಿರಂಗವಾಗಿ ಫರ್ಮಾನು ಹೊರಡಿಸಿದ್ದರು. ಅದ್ಯಾವ ಘನಂದಾರಿಯಾಗಿ (ಅವರು ಉಪ್ಪು-ಖಾರ ತಿಂದವರು, ಈ ರೀತಿ ಮತಾಂತರ ಮಾಡುತ್ತಿದ್ದರೇ ಮತ್ತೇನು ಶೋಭಾನೆ ಹಾಡಬೇಕಾ ಅಂತ ನೀವು ಕೇಳಬಹುದು) ಮೈಮೇಲೆ ಖಾವಿ ಬಟ್ಟೆ ಧರಿಸಿದರೋ, ಧರ್ಮಗುರುಗಳಲ್ಲಿ ದ್ವೇಷ, ಸಿಟ್ಟು, ಕೆಡಕು ಇರಬಾರದು ಎಂದು ಹೇಳುತ್ತಾರೆ. ಅದರೆ ಈ ಸ್ವಾಮಿಗಳು ಆಕ್ರೋಶದಿಂದ ನುಡಿಯುವ ಮಾತು ಕೇಳಿದರೆ ಆಶ್ಚರ್ಯವಾಗುತ್ತದೆ.

ಯಾವುದೇ ಧರ್ಮದ ಮುಲ್ಲಾಗಳಿರಲಿ, ಪಾದ್ರಿ, ಪುರೋಹಿತ, ಸ್ವಾಮಿ ಎಲ್ಲಾ ಧರ್ಮಗಳು ಸಾರುವುದು ಒಂದೇ, ದೇವನೊಬ್ಬ ನಾಮ ಹಲವು ಎಂದೆಲ್ಲಾ ಅಣಿಮುತ್ತು ಉದುರಿಸಿ, ಈ ರೀತಿ ಬೆಂಕಿ ಹಚ್ಚಲು ಕೈ ಬಲಪಡಿಸಿ ಎಂದರೆ, ಜೀವ ತೆಗೆಯುವವರನ್ನು ಯಾರಾದರೂ ದೈವತ್ವಕ್ಕೆ, ಸ್ವಾಮಿ ಎಂದೆಲ್ಲಾ ಕರೆಯಿಸಿಕೊಳ್ಳಲು ಅರ್ಹರಾಗುತ್ತಾರಾ ಎಂಬುದು ಪ್ರಶ್ನೆ.

ಅಷ್ಡೇ ಅಲ್ಲ ಹಿಂದುಳಿದ ಜಾತಿಯ ಜನರನ್ನು ಆಮಿಷ ಒಡ್ಡಿ ಮತಾಂತರ ಮಾಡುತ್ತಿರುವುದು ಸತ್ಯ. ನ್ಯೂಲೈಫ್‌ನಂತಹ ಸಂಘಟನೆಗಳ ಕೆಲವು ಉದ್ದೇಶಗಳಲ್ಲಿ ಅದು ಒಂದಾಗಿದೆ. ಅದಕ್ಕೆ ಆಡಳಿತರೂಢ ಪಕ್ಷಗಳು ಕಠಿಣವಾದ ಕಾನೂನನ್ನು ಜಾರಿಗೆ ತರಬೇಕು. ಅವೆಲ್ಲಕ್ಕಿಂತ ಮುಖ್ಯವಾದ ಪ್ರಶ್ನೆಯೆಂದರೆ. ಹಿಂದೂ ನಾವೆಲ್ಲ ಒಂದು, ನಮಗಿರುವುದು ಒಂದೇ ಹಿಂದು ದೇಶ ಎಂದೆಲ್ಲ ಹಿಂದು ಧರ್ಮವನ್ನು ಗುತ್ತಿಗೆ ಹಿಡಿದವರಂತೆ ಮಾತನಾಡುವವರು ಕೂಡ ಮತಾಂಧರಂತೆ ವರ್ತಿಸುತ್ತಿದ್ದಾರೆ.

ಅದಕ್ಕೊಂದು ಸಣ್ಣ ಉದಾಹರಣೆ ನೀಡುತ್ತೇನೆ, ಕಳೆದ ಎರಡು ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಪ್ರಸಿದ್ಧ ಮಂದಾರ್ತಿ ದೇವಾಲಯದಲ್ಲಿ ಒಂದು ಪ್ರಕರಣ ನಡೆಯಿತು. ಅಲ್ಲಿನ ಯಕ್ಷಗಾನ ಮೇಳದಲ್ಲಿ ಬಿಲ್ಲವ ಜಾತಿಯವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ, ಹಾಗೇನಾದರು ಅವರು ಗೆಜ್ಜೆ ಕಟ್ಟಿ ಕುಣಿದರೆ ದೇವಿ ಮುನಿದುಕೊಳ್ಳುತ್ತಾಳೆ, ಅಷ್ಟೇ ಅಲ್ಲ ಅವರು ಸಾಯುತ್ತಾರೆ ಎಂದೆಲ್ಲಾ ಬೊಬ್ಬೆ ಹೊಡೆದರು. ಸಾಕಷ್ಟು ಹೋರಾಟ, ಪ್ರತಿಭಟನೆ ನಡೆಯಿತು. ಅಲ್ಲಿನ ಇತಿಹಾಸವನ್ನು ಕೂಡ ವ್ಯವಸ್ಥಿತವಾಗಿ ತಿರುಚುವ ಕೆಲಸವನ್ನೂ ಮಾಡಲಾಗಿತ್ತು.

ಆದರೆ ಮಂದಾರ್ತಿ ದೇವಸ್ಥಾನಕ್ಕೆ ಅತಿ ಹೆಚ್ಚಿನ ಭಕ್ತರು, ಹರಕೆ ನೀಡುವುದು ಬಿಲ್ಲವ(ಬಂಟ,ಮೊಗವೀರ ಸೇರಿದಂತೆ) ಜನಾಂಗದವರೇ, ಹೆಚ್ಚಿನ ಯಕ್ಷಗಾನ ಆಡಿಸುವುದೂ ಕೂಡ ಬಿಲ್ಲವರೇ, ಆದರೆ ಗೆಜ್ಜೆ ಕಟ್ಟಿ ಕುಣಿಯಲು ಮಾತ್ರ ಸಾಧ್ಯವಿಲ್ಲವಂತೆ !ದೇವರಿಗೆ ಬಿಲ್ಲವರ ಹರಕೆ, ಹಣ ಆಗುತ್ತದೆ ಎಂದಾದ ಮೇಲೆ, ಅದೇ ದೇವರಿಗೆ ಯಕ್ಷಗಾನದಲ್ಲಿ ಬಿಲ್ಲವ ಜಾತಿಯವನೊಬ್ಬ ಗೆಜ್ಜೆಕಟ್ಟಿ ಕುಣಿದರೆ ಆಗುವ ನಷ್ಟವಾದರೂ ಏನಿತ್ತು.

ಅದಕ್ಕಾಗಿಯೇ ಹಗಲಿರುಳು ವಿರೋಧ ವ್ಯಕ್ತಪಡಿಸಿದವರೂ ಕೂಡ ಹಿಂದೂಗಳೇ...ಕೊನೆಗೂ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಇಬ್ಬರು ಬಿಲ್ಲವರು ಗೆಜ್ಜೆಕಟ್ಟಿ ಮಂದಾರ್ತಿ ದೇವಾಲಯದ ಎದುರು ಯಕ್ಷಗಾನದಲ್ಲಿ ಹೆಜ್ಜೆ ಹಾಕಿದರು. ಯಾವ ದೇವಿಯೂ ಮುನಿಸಿಕೊಳ್ಳಲಿಲ್ಲ, ಅವರು ಸಾಯಲೂ ಇಲ್ಲ. ಈ ಕುತ್ಸಿತ ಮನೋಭಾವದ ಮನುವಾದಿಗಳು ಮಾತ್ರ ಕೆಳಗೆ ಬಿದ್ದರೂ ಮೂಗು ಮೇಲೆ ಎಂಬಂತೆ, ಗೆಜ್ಜೆ ಕಟ್ಟಿ ಕುಣಿದ ಬಿಲ್ಲವರ ಮನೆಯಲ್ಲಿ ಸಾವು ಸಂಭವಿಸಿದೆ ಎಂಬಂತಹ ಕಪೋಲಕಲ್ಪಿತ ಸುದ್ದಿಗಳನ್ನು ಹಬ್ಬಿಸತೊಡಗಿದ್ದರು.

ಅದೇ ರೀತಿ ಮತಾಂತರ, ದಾಳಿ ನಡೆದಾಗ ಬೊಬ್ಬೆ ಹೊಡೆಯುವ ಉಡುಪಿ ಪೇಜಾವರಶ್ರೀಗಳು ಕೂಡ ಮೊದಲು ಉಡುಪಿ ಮಠದಲ್ಲಿ ಬ್ರಾಹ್ಮಣೇತರರನ್ನು ನೋಡುವ ದೃಷ್ಟಿಕೋನ ಹೇಗಿದೆ, ಇಲ್ಲಿ ಒಳಗೆ ಪ್ರವೇಶವಿಲ್ಲ,ಬಾವಿಯನ್ನು ಮುಟ್ಟಬೇಡಿ ಎಂಬಂತಹ ನಾಮಫಲಕಗಳು ಇಂದಿಗೂ ದೇವಾಲಯಗಳಲ್ಲಿ ರಾರಾಜಿಸುತ್ತಿದೆ.

ನಾಗಮಂಡಲಗಳಲ್ಲಿ ನಡೆಯುವ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲೂ ಪ್ರತ್ಯೇಕ ಊಟದ ವ್ಯವಸ್ಥೆ,ಇಂದಿಗೂ ಉಳಿದು ಬಂದಿರುವ ಮನು ಸಿದ್ದಾಂತದ ಮಡಿ-ಮೈಲಿಗೆ ದಲಿತರು ಸೇರಿದಂತೆ ಇನ್ನುಳಿದ ಕೆಳಜಾತಿಗಳನ್ನು ನಮ್ಮ ಹಿಂದು ಧರ್ಮ ನೋಡುವ ದೃಷ್ಟಿಕೋನದ ಬಗ್ಗೆ ನೀವೇ ಯಾಕೆ ಧ್ವನಿ ಎತ್ತುತ್ತಿಲ್ಲ. ಕೇವಲ ತ್ರಿಶೂಲ, ಲಾಠಿ ಹಿಡಿದು ಜೈ ಭಾರತ್ ಮಾತಾ ಕೀ ಅಂತ ರಕ್ತದೋಕುಳಿ ಹರಿಸಲು ಮಾತ್ರ ಹಿಂದೂ-ನಾವೆಲ್ಲ ಒಂದು ಅಂತ ಬೊಬ್ಬೆ ಹೊಡೆಯುವುದರಲ್ಲಿ ಅದ್ಯಾವ ಪುರುಷಾರ್ಥ ಅಡಗಿದೆ.

ಬಲವಂತದ ಮತಾಂತರ, ದಾಳಿ, ಭಯೋತ್ಪಾದನೆಯನ್ನು ನಾವೆಲ್ಲ ಖಂಡಿಸೋಣ, ಹಾಗೇ ಹಿಂದು ಧರ್ಮದೊಳಗಿನ ಅಸಮಾನತೆ, ಜಾತಿ, ಅಸ್ಪಶ್ರ್ಯತೆ ಬಗ್ಗೆಯೂ ತಿಳಿದು ಮಾತನಾಡಿದರೆ ವಾಸ್ತವದ ಅರಿವಾಗುತ್ತದೆ. ಹಿಂದುಳಿದ ವರ್ಗದ ಜನಗಳು ಯಾಕೆ ಅಮಿಷಕ್ಕೆ ಒಳಗಾಗಿ ಮತಾಂತರವಾಗುತ್ತಿದ್ದಾರೆ ಎಂಬ ಕುರಿತು ಮೊದಲು ಅರಿತುಕೊಳ್ಳಬೇಕು...

No comments: