Sunday, November 30, 2008

ಉಗ್ರರ ದಾಳಿ ಮತ್ತು ಲಜ್ಜೆಗೆಟ್ಟ ರಾಜಕಾರಣಿಗಳು....

ಆರ್ಥಿಕ ವಹಿವಾಟಿನ ಬೆನ್ನಲುಬಾಗಿರುವ ವಾಣಿಜ್ಯ ನಗರಿ ಮುಂಬೈಯಲ್ಲಿ 1993ರಲ್ಲಿ ಖತರ್‌ನಾಕ್ ಉಗ್ರರು ಸರಣಿ ಬಾಂಬ್ ಸ್ಫೋಟದ ದಾಳಿ ನಡೆಸಿದ್ದರು. ಈ ಸ್ಫೋಟ ಸಂಭವಿಸಿ 15ವರ್ಷಗಳಾಗುತ್ತ ಬಂತು. ಆ ಘಟನೆಯಿಂದ ಆರಂಭಿಸಿ ಈವರೆಗೂ ದೇಶಾದ್ಯಂತ ಉಗ್ರರು ಅಮಾಯಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಲೇ ತಮ್ಮ ದುಷ್ಕೃತ್ಯದ ಅಟ್ಟಹಾಸವನ್ನು ಮುಂದುವರಿಸಿದ್ದಾರೆ. ಪ್ರತಿ ಸಂದರ್ಭದಲ್ಲೂ ನಮ್ಮ ಲಜ್ಜೆಗೆಟ್ಟ ರಾಜಕಾರಣಿಗಳು ಇಂತಹದ್ದೊಂದು ಘಟನೆ ನಡೆಯಬಾರದಿತ್ತು, ಕೆಲವು ತಿಂಗಳ ಹಿಂದೆಯೇ ಗುಪ್ತಚರ ಇಲಾಖೆಗೆ ಮಾಹಿತಿ ದೊರಕಿತ್ತು, ಇನ್ನು ಮುಂದೆ ಇಂತಹ ಘಟನೆ ಸಂಭವಿಸಿದಂತೆ ಎಚ್ಚರ ವಹಿಸುತ್ತೇವೆ ಎಂಬಂತಹ ಎಡಬಿಡಂಗಿತನದ ಹೇಳಿಕೆ ನೀಡುತ್ತಲೇ ನಪುಂಸಕ ರಾಜಕಾರಣಿಗಳು ಐಷಾರಾಮವಾಗಿ ಕಾಲ ಕಳೆಯುತ್ತಿರುವುದನ್ನು ನೋಡಿದರೆ ಅಹಸ್ಯ ಮೂಡಿಸುತ್ತೆ.

ಅಮೆರಿಕದ ಪ್ರಮುಖ ವಾಣಿಜ್ಯ ಕೇಂದ್ರವಾದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 2001 ಸೆಪ್ಟೆಂಬರ್ 11ರಂದು ಉಗ್ರರು ದಾಳಿ ನಡೆಸುವ ಮೂಲಕ ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡ ದೇಶವೇ ಬೆಚ್ಚಿ ಬಿದ್ದಿತ್ತು. ಹಾಗಂತ ಆ ದೇಶದ ರಾಜಕಾರಣಿಗಳು, ಅಧ್ಯಕ್ಷರು ಪಡಪೋಷಿತನ ತೋರಿಸಿಲ್ಲ, ಆ ಘಟನೆಯ ಬಳಿಕ ಅಲ್ ಕೈದಾ, ತಾಲಿಬಾನ್ ಎಷ್ಟೇ ಗಂಟಲು ಹರಿದುಕೊಂಡರು ಕೂಡ ಅಮೆರಿಕದ ಕೂದಲನ್ನು ಎರಡನೇ ಬಾರಿ ಕೊಂಕಿಸಲು ಸಾಧ್ಯವಾಗಿಲ್ಲ.

ಅವೆಲ್ಲಕ್ಕಿಂತ ಚಿಂತಿಗೀಡು ಮಾಡುವ ವಿಷಯ ಏನೆಂದರೆ, ಕಳೆದ ಎರಡು-ಮೂರು ವರ್ಷಗಳಿಂದ ಉಗ್ರರು ಲೀಲಾಜಾಲವಾಗಿ ಸ್ಫೋಟ ಕೃತ್ಯವನ್ನು ಎಸಗುತ್ತಲೇ ಇದ್ದರೂ ಕೂಡ, ಜನಸಾಮಾನ್ಯರಿಗೆ ವ್ಯವಸ್ಥಿತ ರಕ್ಷಣೆ ನೀಡಲು ಇನ್ನೂ ಸಾಧ್ಯವಾಗಿಲ್ಲ. ತಾಜ್, ಒಬೆರಾಯ್ ಹಾಗೂ ನಾರಿಮನ್ ಹೌಸ್‌ಗಳೊಳಗೆ ನುಗ್ಗಿದ ಉಗ್ರರು ಮನಬಂದಂತೆ ಗುಂಡಿನ ಸುರಿಮಳೆಗೆರೆದಿದ್ದಾರೆ. ಈ ಘಟನೆ ನ.27ರ ರಾತ್ರಿ 9.30ಕ್ಕೆ, ಘಟನೆ ನಡೆದಾಗ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಅವರು ಕೇರಳದಲ್ಲಿದ್ದರು. ವಿಷಯ ತಿಳಿದ ಮುಂಬೈಗೆ ವಾಪಸಾಗಿ, ರಾತ್ರಿ 11ಗಂಟೆಗೆ ನರಸತ್ತ ಗೃಹಸಚಿವ ಶಿವರಾಜ್ ಪಾಟೀಲ್ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಸುಮಾರು 200ಎನ್‌ಎಸ್‌ಜಿ ಕಮಾಂಡೋಗಳನ್ನು ಕಳುಹಿಸುವಂತೆ ಮನವಿ ಮಾಡಿದ್ದರು.

ಅಷ್ಟರಲ್ಲಿ ಹಲವಾರು ಮಂದಿ ಎನ್ಎಸ್‌ಜಿ ಕಮಾಂಡೋಗಳು ನಿದ್ರೆಗೆ ಶರಣಾಗಿದ್ದರು, ಎನ್ಎಸ್‌ಜಿಗೆ ವಿಷಯ ತಿಳಿಯುತ್ತಿದ್ದಂತೆಯೇ ಎಲ್ಲೂ ಪೂರ್ವ ತಯಾರಿಯೊಂದಿಗೆ ತಯಾರಾಗುವಾಗ, ಐಎಲ್-76ವಿಮಾನ ಇಂಧನ ತುಂಬಿಸಿಕೊಂಡು ಬರುವಾಗ ರಾತ್ರಿ 2ಗಂಟೆ ಕಳೆದಿತ್ತು! ಆ ಬಳಿಕ ದೆಹಲಿಗೆ ಆಗಮಿಸಿ, ಬಸ್ ಏರುವ ಹೊತ್ತಿಗೆ ಬೆಳಗಿನ ಜಾವ 5.25, ನಂತರ ಎರಡು ತಂಡಗಳಾಗಿ ತಾಜ್, ಒಬೆರಾಯ್‌ನಲ್ಲಿ ಕಾರ್ಯಾಚರಣೆಗೆ ತೊಡಗಿದಾಗ ಸಮಯ 7 ಗಂಟೆ. ಅಂದರೆ ಘಟನೆ ನಡೆದು 10ಗಂಟೆಯ ಬಳಿಕ ಕಾರ್ಯಾಚರಣೆ ಆರಂಭವಾಗಿತ್ತು. ನಮ್ಮ ರಕ್ಷಣಾ ವ್ಯವಸ್ಥೆಯ ಕಥೆ ಯುದ್ದ ಕಾಲೇ ಶಸ್ತ್ರಾಸ್ತ್ರಭ್ಯಾಸ ಎಂಬಂತಾಗಿದೆ. ಇಲ್ಲಿ ನಾನು ಎನ್‌ಎಸ್‌ಜಿಯನ್ನು ತೆಗಳುತ್ತಿಲ್ಲ. ಏನೇ ಆದರು ಶಂಖದಿಂದ ತೀರ್ಥ ಎಂಬಂತೆ, ದೆಹಲಿಯಿಂದ ಕಮಾಂಡೋ ಪಡೆ ಆಗಮಿಸಿ ಉಗ್ರರನ್ನು ಸದೆಬಡಿಯುವುದರೊಳಗೆ ಅವರೇನು ಕಡಲೆ ತಿನ್ನುತ್ತ ಕೂತಿರುತ್ತಾರಾ? ಅದೇ ರೀತಿ ಇತ್ತೀಚೆಗಷ್ಟೇ ಹುಬ್ಬಳ್ಳಿ ಸಮೀಪದ ಕಿರು ಸೇತುವೆಯೊಂದರ ಬಳಿ ಬಾಂಬ್ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂದೇಶ ರವಾನಿಸಲಾಗಿತ್ತು, ಆದರೆ ಬಾಂಬ್ ನಿಷ್ಕ್ರಿಯ ದಳ ಇರುವುದು ಬೆಂಗಳೂರಿನಲ್ಲಿ. ಅವರು ತಯಾರಿ ನಡೆಸಿ ಆ ಸ್ಥಳ ತಲುಪುವಾಗ ರಾತ್ರಿ 8ಗಂಟೆ ಕಳೆದಿತ್ತು!!...

ಇಷ್ಟೆಲ್ಲಾ ಸ್ಫೋಟ, ದಾಳಿ ನಡೆಯುತ್ತಿದ್ದರೂ ಕೂಡ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ, ಮಾಧ್ಯಮಗಳ ಮೂಲಕ ಹೇಳಿಕೆ ನೀಡುವುದು ಮತ್ತೆ ಸುಮ್ಮನಾಗುವುದು. ಮತ್ತೊಂದು ಅಂತಹುದೇ ದಾಳಿ ನಡೆದಾಗ ಮತ್ತೆ ಎಚ್ಚೆತ್ತುಕೊಳ್ಳುವುದು. ಹೀಗೆ ನಡೆದರೆ ಇನ್ನು ಮುಂದೆ ಎಲ್ಲಿಯೂ ನೆಮ್ಮದಿಯಿಂದ ತಿರುಗಾಡಲು ಸಾಧ್ಯವಿಲ್ಲದಂತಾಗುವ ಪರಿಸ್ಥಿತಿ ದೂರವಿಲ್ಲ ಎಂದೇ ಹೇಳಬೇಕಾಗುತ್ತದೆ. ಆಹಾ ಸೆಕ್ಯುಲರ್ ಇಂಡಿಯಾ, ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ದೈನೇಸಿ ಸ್ಥಿತಿ ನೋಡಿ, ಭಯೋತ್ಪಾದನೆ, ದೇಶದ್ರೋಹದಂತಹ ಬೀಭತ್ಸ ಘಟನೆ ಎಲ್ಲೆಂದರಲ್ಲಿ ರಣಕೇಕೆ ಹಾಕುತ್ತಿದ್ದರೆ, ದರಿದ್ರ ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಲೇ ಅಮಾಯಕರ ರಕ್ತಹೀರುವ ಉಗ್ರರ ಕೃತ್ಯಕ್ಕೆ ಇವರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದೇ ಹೇಳಬೇಕು. ಅದಿಲ್ಲದಿದ್ದರೆ ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾಯ್ದೆಯೊಂದನ್ನು ಜಾರಿಗೆ ತರಬೇಕು ಎಂಬ ಕೂಗಿಗೆ ಕಿವುಡರಂತೆ, ಈಗ ಇರುವ ನಮ್ಮ ಕಾನೂನೇ ಉಗ್ರರನ್ನು ಸದೆಬಡಿಯಲು ಬಲಿಷ್ಠವಾಗಿದೆ ಎಂಬ ಪೌರುಷದ ಮಾತುಗಳನ್ನಾಡುತ್ತಿದ್ದಾರೆ.
ಪೋಟಾ ಬೇಡ, ಟಾಡಾ ಬೇಡ, ಫೆಡರಲ್ ಏಜೆನ್ಸಿ ಬೇಡ ಎಂದೆನ್ನುವ ಈ ಕಚ್ಚೆಹರುಕ ರಾಜಕಾರಣಿಗಳಿಗೆ ಮಾತ್ರ ಎನ್ಎಸ್‌ಜಿ ಬ್ಲಾಕ್ ಕಮಾಂಡೋಗಳ ಭದ್ರಕೋಟೆಯ ರಕ್ಷಣೆ ಬೇಕು. ಅಲ್ಲದೇ ಈ ಮೊದಲು ಉಗ್ರರು ನಡೆಸುತ್ತಿರುವ ದಾಳಿಯ ವೈಖರಿಯೇ ಬದಲಾಗಿದೆ ಎಂದ ಮೇಲೆ ನಮ್ಮ ಒಬಿರಾಯನ ಕಾಲದ ರಕ್ಷಣಾ ವ್ಯವಸ್ಥೆ ಹಾಗೂ ಎಡಬಿಡಂಗಿ ಹೇಳಿಕೆ ನೀಡುತ್ತಲೇ ಕಾಲ ಕಳೆಯುತ್ತಿದ್ದರೆ ಜನಸಾಮಾನ್ಯರ ಗತಿ ಏನು? ಹಾಗೇ ಸ್ಫೋಟ ಕೃತ್ಯದ ಪ್ರಾಯಶ್ಚಿತ್ತ ಎಂಬಂತೆ ಗೃಹಸಚಿವ, ಮುಖ್ಯಮಂತ್ರಿ ತಲೆದಂಡದಿಂದ ಅದ್ಯಾವ ಪುರುಷಾರ್ಥ ಸಾಧ್ಯ.....

Wednesday, October 8, 2008

ಅಸ್ಪ್ರಶ್ಯ ಬುದ್ಧ ...!!


ಮನುಷ್ಯ, ಮನುಷ್ಯರ ನಡುವಿನ ಕ್ರೌರ್ಯ, ಅಸಮಾನತೆ, ಘರ್ಷಣೆಗಳಿಂದ ಸಮಾಜದ ಜನರು ತೊಳಲಾಡುತ್ತಿದ್ದ ಸಂದರ್ಭದಲ್ಲಿಯೇ ಗೌತಮ ಬುದ್ಧ, ಮಹಾವೀರ, ಯೇಸು, ಬಸವಣ್ಣ, ಗಾಂಧಿಯಂತಹ ವ್ಯಕ್ತಿಗಳು ಜನಸಮುದಾಯದ ನಡುವೆ ಹೊಗೆಯಾಡುತ್ತಿದ್ದ ವೈರುಧ್ಯಗಳ ವಿರುದ್ಧ ಸಮರ ಸಾರಿದ್ದರು. ಬುದ್ಧನ ಕಾಲದ ಸಂದರ್ಭದಲ್ಲಿ ಭಾರತ ಜಾತಿ, ಅಸಮಾನತೆ, ಅಸ್ಪ್ರಶ್ಯತೆಗಳಿಂದ ನರಳುತ್ತಿತ್ತು. ಅದೂ ಅಲ್ಲದೇ ಹಿಂದೂ ಎನಿಸಿಕೊಂಡು,ಶೂದ್ರ ಜನಾಂಗದವರು ಅಕ್ಷರಶಃ ಪ್ರಾಣಿಗಳಂತೆ ಸಮಾಜದಲ್ಲಿ ಬದುಕುತ್ತಿದ್ದ ಸ್ಥಿತಿ. ಸಂಸ್ಕೃತ ಶ್ಲೋಕಗಳನ್ನು ಶೂದ್ರನಾದವ ಕೇಳಿಸಿಕೊಳ್ಳಲೇ ಬಾರದು ಎಂಬಂತಹ ಫರ್ಮಾನು ಇತ್ತು.


ಇಂತಹ ಅಮಾನವೀಯ ಕಟ್ಟು-ಕಟ್ಟಳೆಗಳಿಂದ ಹಿಂದೂ ಸಮಾಜ ರೋಗಗ್ರಸ್ಥವಾಗಿತ್ತು.ಆ ಸಂದರ್ಭದಲ್ಲಿ ಅದೊಂದು ಬದಲಾವಣೆಗಾಗಿ ಹಿಂದುಳಿದ ಸಮುದಾಯ ಹಾತೊರೆಯುತ್ತಿತ್ತು. ಅಸಮಾನತೆ, ಜಾತಿ, ದೇವರು, ದಿಂಡರು, ಮೂಢನಂಬಿಕೆಗಳಿಂದ ನರಳುತ್ತಿದ್ದ ಜನಸಾಮಾನ್ಯರ ಬದುಕಿಗೆ ಜ್ಞಾನದ ಬೆಳಕಾಗಿ ಆವಿರ್ಭವಿಸಿದಾತ ಗೌತಮ ಬುದ್ಧ. ಅ.9 ಆತನ ಜನ್ಮ ಜಯಂತಿಯಾಗಿದ್ದು, ಅಹಿಂಸೆ ಎಂಬ ಮಹಾನ್ ಮಂತ್ರದ ಮೂಲಕ ಸಮಾಜದಲ್ಲಿನ ಕ್ರೌರ್ಯ, ಮೌಢ್ಯಗಳ ವಿರುದ್ಧ ಹೋರಾಡಿದ ದಿವ್ಯ ಚೇತನ ಬುದ್ಧ.


ದ್ವೇಷದ ದಳ್ಳುರಿ, ಜಿಹಾದ್, ಧರ್ಮ, ಜಾತಿಯ ಅಮಲಿನಲ್ಲಿ ರಕ್ತದ ಕೋಡಿ ಹರಿಸುತ್ತಿರುವ ಈ ಸಂದರ್ಭದಲ್ಲಿ ಬುದ್ಧ ಮತ್ತೆ, ಮತ್ತೆ ನೆನಪಾಗುತ್ತಾನೆ. ಬುದ್ಧ ಸಂದೇಶ ಈಗಲೂ ಪ್ರಸ್ತುತ ಎಂಬ ಆಶಯದೊಂದಿಗೆ ಈ ಲೇಖನ.


ಲುಂಬಿನಿಯಲ್ಲಿ ಜನ್ಮತಳೆದ ಸಿದ್ದಾರ್ಥ (ಗೌತಮ)ಅರಮನೆಯಿಂದ ಹೊರಬಂದು ರಥ ಪ್ರಯಾಣದ ಸಂದರ್ಭದಲ್ಲಿ ವೃದ್ದರನ್ನು,ಶವ ಯಾತ್ರೆಯಂತಹ ಘಟನೆಗಳನ್ನು ನೋಡಿದ ಬಳಿಕ ಚಂಚಲ ಚಿತ್ತನಾದ ಆತನಿಗೆ ಈ ಎಲ್ಲಾ ಬೆಳವಣಿಗಳು ಆತನನ್ನು ಅಂತರ್ಮುಖಿಯನ್ನಾಗಿಸಿ, ಅರಮನೆ ತ್ಯಜಿಸುವಂತೆ ಮಾಡಿತ್ತು ಎಂಬುದು ಪ್ರಚಲಿತ ಇತಿಹಾಸ. ಆದರೆ ಗೌತಮ ನಿಜಕ್ಕೂ ಅಂತಹ ಸನ್ನಿವೇಶಗಳನ್ನು ಕಂಡು ಮಧ್ಯರಾತ್ರಿಯಲ್ಲಿ ಅರಮನೆ ತೊರೆದು ಸಮಾಜೋದ್ಧಾರಕ್ಕೆ ಹೊರಟಿದ್ದನೇ ಎಂಬುದು ಪ್ರಶ್ನೆ.


ಇತಿಹಾಸದ ಪುರಾವೆಗಳು ಇಂದಿಗೂ ನೈಜ ಸತ್ಯವನ್ನು ಬಿಚ್ಚಿಟ್ಟಿಲ್ಲ ಎಂಬುದಕ್ಕೆ ಇಂದಿಗೂ ಜನಮಾನಸದ ಮನಸ್ಸುಗಳನ್ನು ಆಕ್ರಮಿಸಿ ನಡೆಸುತ್ತಿರುವ ಘಟನೆಗಳೇ ಸಾಕ್ಷಿ. ಅದಕ್ಕೆ ಪೂರಕವೆಂಬಂತೆ ಸತ್ಯವನ್ನು ತಿರುಚಿ ಬರೆದಿರುವ ಇತಿಹಾಸಗಳೇ ಇಂದು ನಮ್ಮನ್ನ ಅಧಃಪತನದತ್ತ ತಳ್ಳುತ್ತಿದೆ ಎಂಬುದನ್ನು ಮನಗಾಣಬೇಕಾಗಿದೆ. ಸಿದ್ದಾರ್ಥ ಅಂದು ಅರಮನೆ ತೊರೆದದ್ದು ಶಾಕ್ಯ ಮತ್ತು ಕೋಲಿ ರಾಜ್ಯಗಳ ನಡುವೆ ಉದ್ಭವಿಸಿದ ರೋಹಿಣಿ ನದಿ ನೀರಿನ ಹಂಚಿಕೆ ವಿಷಯವೇ ಪ್ರಮುಖವಾಗಿತ್ತು.


ನಿಸರ್ಗದ ಸಂಪತ್ತನ್ನು ಸಕಲ ಜೀವಿಗಳು ಸಮಾನವಾಗಿ ಪಡೆಯಬೇಕು,ಅದು ರಕ್ತಪಾತದಿಂದ ಅಲ್ಲ,ಯುದ್ಧವಿಲ್ಲದೆ ಅಹಿಂಸೆಯ ಮೂಲಕ ನದಿ ನೀರನ್ನು ಪಡೆಯಬೇಕು ಎಂಬ ನಿಲುವು ತಳೆದಿದ್ದ. ಈ ಧೋರಣೆ ಆತನನ್ನು ಶಾಕ್ಯ ರಾಜ್ಯದಿಂದ ಬಹಿಷ್ಕಾರಕ್ಕೆ ಒಳಗಾಗುವ ಮೂಲಕ ಅರಮನೆ ತ್ಯಜಿಸಿ ಮನುಕುಲದ ಕಲ್ಯಾಣಕ್ಕಾಗಿ ಹೋರಾಟ ನಡೆಸಿ ಬುದ್ಧನಾಗಿದ್ದ.


ಆ ಕಾರಣಕ್ಕಾಗಿಯೇ ಬುದ್ಧ ಯಾವತ್ತೂ ದೇವರ-ದಿಂಡಿರು,ಮೌಢ್ಯತೆಗಳಿಂದ ಜನರನ್ನು ಸೆಳೆಯಲಿಲ್ಲ. ಅಸಮಾನತೆಯನ್ನು ತೊಡೆದು, ಜಾತಿಯನ್ನು ಧಿಕ್ಕರಿಸಿ ಮುಂದುವರಿಯುವ ಮೂಲಕ ಜನಮಾನಸದಲ್ಲಿ ಭದ್ರ ನೆಲೆ ಕಂಡುಕೊಂಡಿದ್ದ. ಆವಾಗಲೂ ಬುದ್ಧ ತಾನೊಬ್ಬ ಚಿಕಿತ್ಸಕ ಎಂದೇ ಹೇಳುತ್ತಿದ್ದ. ಹಾಗಂತ ಗೌತಮ ಯಾವುದೇ ಔಷಧವನ್ನು ನೀಡುವ ವೈದ್ಯನಾಗಿರಲಿಲ್ಲ, ಆತ ಜಾಗೃತಿ ಬಗ್ಗೆ ಹೇಳುತ್ತಿದ್ದ ಚಿಕಿತ್ಸಕನಾಗಿದ್ದ. ಮೊದಲು ನೀವು ಜಾಗೃತರಾಗಿ, ಬೋಧಪೂರ್ಣರಾಗಿ ಎಂದೇ ಹೇಳುತ್ತಿದ್ದ.


ತಪ್ಪುಗಳೆಲ್ಲವನ್ನೂ ಸರಿಪಡಿಸಲಿರುವ ವಿಧಾನ ಒಂದೇ ಅದ್ಯಾವುದೆಂದರೆ, ಬೋಧಪೂರ್ಣರಾಗುವುದು, ಜಾಗೃತಿಯಿಂದ ಇರುವುದು ಎಂದರ್ಥ. ಹಾಗಂತ ಬುದ್ಧ ಯಾರನ್ನೂ ಬಲವಂತದಿಂದ ಯಾರನ್ನೂ ತನ್ನೆಡೆಗೆ ಸೆಳೆದಿರಲಿಲ್ಲ . ಆ ಕಾರಣದಿಂದಾಗಿ ಭಾರತದಲ್ಲಿ ಬೌದ್ಧ ಧರ್ಮ ಉಚ್ರಾಯ ಸ್ಥಿತಿ ಕಂಡಿತ್ತು. (ಹಾಗಾದರೆ ಇಂದು ಭಾರತದಿಂದಲೇ ಬೌದ್ಧ ಧರ್ಮ ಕಣ್ಮರೆಯಾದದ್ದು ಹ್ಯಾಗೆ ಎಂಬುದು ಮತ್ತೊಂದು ದುರಂತ ಇತಿಹಾಸ.)


ಆ ನಿಟ್ಟಿನಲ್ಲಿ ಧರ್ಮಾಂಧತೆ, ಮತಾಂಧತೆ, ಜೆಹಾದ್‌ನ ಕಬಂಧಬಾಹುಗಳು ಸಮಾಜದಲ್ಲಿ ರುದ್ರನರ್ತನಗೈಯುವ ಮೂಲಕ ಅಮಾಯಕರ ಆಪೋಶನ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ,ದುಷ್ಟ ಬುದ್ಧಿಯ ಜನರೇ ಹೆಚ್ಚುತ್ತಿರುವ ಸಮಯದಲ್ಲಿ, ದ್ವೇಷಾಗ್ನಿಯ ಕಿಚ್ಚು ಹಚ್ಚಿ ಮುಗ್ದ ಜನರ ಶೋಷಣೆ ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ಬುದ್ಧನ ಅಹಿಂಸೆಯ ತತ್ವ,ಸಾಂಗತ್ಯ ಹೆಚ್ಚು ಪ್ರಸ್ತುತವಾಗಿದೆ.


ಆದರೆ ದ್ವೇಷದಿಂದ, ಕೋವಿಯಿಂದ, ಬಾಂಬ್‌ನಿಂದ, ಜೆಹಾದ್‌ನಿಂದಲೇ ನಾವು ನಮ್ಮ ಹೋರಾಟವನ್ನು ಜಯಗಳಿಸುತ್ತೇವೆ ಎಂಬ ಹುಂಬ ಮನಸ್ಸುಗಳೇ ಹೆಚ್ಚುತ್ತಿರುವ ಸಮಯದಲ್ಲಿ ಬುದ್ಧ ಎಷ್ಟು ಪ್ರಸ್ತುತನಾಗಬಲ್ಲ....?!

ಎಲ್ಲಿ ಹೋಯಿತು ವಿಶ್ವಮಾನವತವಾದ

ಎಲ್ಲೆಂದರಲ್ಲಿ ಬಾಂಬು ಸ್ಫೋಟ
ಅಮಾಯಕರ ನೋವು, ಕಿರುಚಾಟ
ಸಾಲು, ಸಾಲು ಶವಗಳ ಯಾತ್ರೆ
ಎಲ್ಲಿ ಹೋಯಿತು ಬುದ್ಧನ ಅಹಿಂಸೆ

ಜಾತಿ-ಧರ್ಮ-ಜೆಹಾದ್ ಹೆಸರಲ್ಲಿ
ನಡೆದಿದೆ ಮುಗ್ದ ಜನರ ಮಾರಣಹೋಮ
ದಗದಹಿಸುತ್ತಿದೆ ದ್ವೇಷದ ಅಗ್ನಿಕುಂಡು
ಎಲ್ಲಿ ಹೋಯಿತು ಗಾಂಧಿಯ ಶಾಂತಿಮಂತ್ರ

ಮತ-ಮತಾಂತರಗಳ ಕಿತ್ತಾಟ
ಮಸೀದಿ, ಮಂದಿರ, ಚರ್ಚ್ ಧ್ವಂಸ
ನಲುಗಿದೆ ಹೋಗಿದೆ ಕೋಮುಸೌಹಾರ್ದ
ಎಲ್ಲಿ ಹೋಯಿತು ವಿಶ್ವಮಾನವತವಾದ

ಬಾಂಬು, ತ್ರಿಶೂಲಗಳ ಅಟ್ಟಹಾಸ
ಹರಡಿದೆ ಎಲ್ಲೆಡೆ ಕೋಮುದ್ವೇಷ
ಮರೆಯಾಗಿದೆ ಬುದ್ಧ-ಗಾಂಧಿ ಸಂದೇಶ
ಎಲ್ಲಿ ಹೋಯಿತು ಪ್ರೀತಿ-ವಿಶ್ವಾಸ

ಫ್ಯಾಸಿಸಮ್ V/s ಹಿಂದೂಯಿಸಂ

ರಾಜ್ಯದಲ್ಲಿ ಪ್ರಾರ್ಥನಾ ಮಂದಿರ, ಚರ್ಚ್‌ಗಳ ಮೇಲೆ ದಾಳಿ ನಡೆದ ಬಳಿಕ ಗುಲ್ಬರ್ಗಾದ ಸ್ವಾಮಿಯೊಬ್ಬರು ಈ ದೇಶದಲ್ಲಿರುವ ಮುಸ್ಲಿಂ, ಕ್ರೈಸ್ತರನ್ನು ನಾಶಮಾಡಲು ಹಿಂದೂಗಳ ಕೈ ಬಲಪಡಿಸಬೇಕಾಗಿದೆ ಎಂಬುದಾಗಿ ಬಹಿರಂಗವಾಗಿ ಫರ್ಮಾನು ಹೊರಡಿಸಿದ್ದರು. ಅದ್ಯಾವ ಘನಂದಾರಿಯಾಗಿ (ಅವರು ಉಪ್ಪು-ಖಾರ ತಿಂದವರು, ಈ ರೀತಿ ಮತಾಂತರ ಮಾಡುತ್ತಿದ್ದರೇ ಮತ್ತೇನು ಶೋಭಾನೆ ಹಾಡಬೇಕಾ ಅಂತ ನೀವು ಕೇಳಬಹುದು) ಮೈಮೇಲೆ ಖಾವಿ ಬಟ್ಟೆ ಧರಿಸಿದರೋ, ಧರ್ಮಗುರುಗಳಲ್ಲಿ ದ್ವೇಷ, ಸಿಟ್ಟು, ಕೆಡಕು ಇರಬಾರದು ಎಂದು ಹೇಳುತ್ತಾರೆ. ಅದರೆ ಈ ಸ್ವಾಮಿಗಳು ಆಕ್ರೋಶದಿಂದ ನುಡಿಯುವ ಮಾತು ಕೇಳಿದರೆ ಆಶ್ಚರ್ಯವಾಗುತ್ತದೆ.

ಯಾವುದೇ ಧರ್ಮದ ಮುಲ್ಲಾಗಳಿರಲಿ, ಪಾದ್ರಿ, ಪುರೋಹಿತ, ಸ್ವಾಮಿ ಎಲ್ಲಾ ಧರ್ಮಗಳು ಸಾರುವುದು ಒಂದೇ, ದೇವನೊಬ್ಬ ನಾಮ ಹಲವು ಎಂದೆಲ್ಲಾ ಅಣಿಮುತ್ತು ಉದುರಿಸಿ, ಈ ರೀತಿ ಬೆಂಕಿ ಹಚ್ಚಲು ಕೈ ಬಲಪಡಿಸಿ ಎಂದರೆ, ಜೀವ ತೆಗೆಯುವವರನ್ನು ಯಾರಾದರೂ ದೈವತ್ವಕ್ಕೆ, ಸ್ವಾಮಿ ಎಂದೆಲ್ಲಾ ಕರೆಯಿಸಿಕೊಳ್ಳಲು ಅರ್ಹರಾಗುತ್ತಾರಾ ಎಂಬುದು ಪ್ರಶ್ನೆ.

ಅಷ್ಡೇ ಅಲ್ಲ ಹಿಂದುಳಿದ ಜಾತಿಯ ಜನರನ್ನು ಆಮಿಷ ಒಡ್ಡಿ ಮತಾಂತರ ಮಾಡುತ್ತಿರುವುದು ಸತ್ಯ. ನ್ಯೂಲೈಫ್‌ನಂತಹ ಸಂಘಟನೆಗಳ ಕೆಲವು ಉದ್ದೇಶಗಳಲ್ಲಿ ಅದು ಒಂದಾಗಿದೆ. ಅದಕ್ಕೆ ಆಡಳಿತರೂಢ ಪಕ್ಷಗಳು ಕಠಿಣವಾದ ಕಾನೂನನ್ನು ಜಾರಿಗೆ ತರಬೇಕು. ಅವೆಲ್ಲಕ್ಕಿಂತ ಮುಖ್ಯವಾದ ಪ್ರಶ್ನೆಯೆಂದರೆ. ಹಿಂದೂ ನಾವೆಲ್ಲ ಒಂದು, ನಮಗಿರುವುದು ಒಂದೇ ಹಿಂದು ದೇಶ ಎಂದೆಲ್ಲ ಹಿಂದು ಧರ್ಮವನ್ನು ಗುತ್ತಿಗೆ ಹಿಡಿದವರಂತೆ ಮಾತನಾಡುವವರು ಕೂಡ ಮತಾಂಧರಂತೆ ವರ್ತಿಸುತ್ತಿದ್ದಾರೆ.

ಅದಕ್ಕೊಂದು ಸಣ್ಣ ಉದಾಹರಣೆ ನೀಡುತ್ತೇನೆ, ಕಳೆದ ಎರಡು ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಪ್ರಸಿದ್ಧ ಮಂದಾರ್ತಿ ದೇವಾಲಯದಲ್ಲಿ ಒಂದು ಪ್ರಕರಣ ನಡೆಯಿತು. ಅಲ್ಲಿನ ಯಕ್ಷಗಾನ ಮೇಳದಲ್ಲಿ ಬಿಲ್ಲವ ಜಾತಿಯವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ, ಹಾಗೇನಾದರು ಅವರು ಗೆಜ್ಜೆ ಕಟ್ಟಿ ಕುಣಿದರೆ ದೇವಿ ಮುನಿದುಕೊಳ್ಳುತ್ತಾಳೆ, ಅಷ್ಟೇ ಅಲ್ಲ ಅವರು ಸಾಯುತ್ತಾರೆ ಎಂದೆಲ್ಲಾ ಬೊಬ್ಬೆ ಹೊಡೆದರು. ಸಾಕಷ್ಟು ಹೋರಾಟ, ಪ್ರತಿಭಟನೆ ನಡೆಯಿತು. ಅಲ್ಲಿನ ಇತಿಹಾಸವನ್ನು ಕೂಡ ವ್ಯವಸ್ಥಿತವಾಗಿ ತಿರುಚುವ ಕೆಲಸವನ್ನೂ ಮಾಡಲಾಗಿತ್ತು.

ಆದರೆ ಮಂದಾರ್ತಿ ದೇವಸ್ಥಾನಕ್ಕೆ ಅತಿ ಹೆಚ್ಚಿನ ಭಕ್ತರು, ಹರಕೆ ನೀಡುವುದು ಬಿಲ್ಲವ(ಬಂಟ,ಮೊಗವೀರ ಸೇರಿದಂತೆ) ಜನಾಂಗದವರೇ, ಹೆಚ್ಚಿನ ಯಕ್ಷಗಾನ ಆಡಿಸುವುದೂ ಕೂಡ ಬಿಲ್ಲವರೇ, ಆದರೆ ಗೆಜ್ಜೆ ಕಟ್ಟಿ ಕುಣಿಯಲು ಮಾತ್ರ ಸಾಧ್ಯವಿಲ್ಲವಂತೆ !ದೇವರಿಗೆ ಬಿಲ್ಲವರ ಹರಕೆ, ಹಣ ಆಗುತ್ತದೆ ಎಂದಾದ ಮೇಲೆ, ಅದೇ ದೇವರಿಗೆ ಯಕ್ಷಗಾನದಲ್ಲಿ ಬಿಲ್ಲವ ಜಾತಿಯವನೊಬ್ಬ ಗೆಜ್ಜೆಕಟ್ಟಿ ಕುಣಿದರೆ ಆಗುವ ನಷ್ಟವಾದರೂ ಏನಿತ್ತು.

ಅದಕ್ಕಾಗಿಯೇ ಹಗಲಿರುಳು ವಿರೋಧ ವ್ಯಕ್ತಪಡಿಸಿದವರೂ ಕೂಡ ಹಿಂದೂಗಳೇ...ಕೊನೆಗೂ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಇಬ್ಬರು ಬಿಲ್ಲವರು ಗೆಜ್ಜೆಕಟ್ಟಿ ಮಂದಾರ್ತಿ ದೇವಾಲಯದ ಎದುರು ಯಕ್ಷಗಾನದಲ್ಲಿ ಹೆಜ್ಜೆ ಹಾಕಿದರು. ಯಾವ ದೇವಿಯೂ ಮುನಿಸಿಕೊಳ್ಳಲಿಲ್ಲ, ಅವರು ಸಾಯಲೂ ಇಲ್ಲ. ಈ ಕುತ್ಸಿತ ಮನೋಭಾವದ ಮನುವಾದಿಗಳು ಮಾತ್ರ ಕೆಳಗೆ ಬಿದ್ದರೂ ಮೂಗು ಮೇಲೆ ಎಂಬಂತೆ, ಗೆಜ್ಜೆ ಕಟ್ಟಿ ಕುಣಿದ ಬಿಲ್ಲವರ ಮನೆಯಲ್ಲಿ ಸಾವು ಸಂಭವಿಸಿದೆ ಎಂಬಂತಹ ಕಪೋಲಕಲ್ಪಿತ ಸುದ್ದಿಗಳನ್ನು ಹಬ್ಬಿಸತೊಡಗಿದ್ದರು.

ಅದೇ ರೀತಿ ಮತಾಂತರ, ದಾಳಿ ನಡೆದಾಗ ಬೊಬ್ಬೆ ಹೊಡೆಯುವ ಉಡುಪಿ ಪೇಜಾವರಶ್ರೀಗಳು ಕೂಡ ಮೊದಲು ಉಡುಪಿ ಮಠದಲ್ಲಿ ಬ್ರಾಹ್ಮಣೇತರರನ್ನು ನೋಡುವ ದೃಷ್ಟಿಕೋನ ಹೇಗಿದೆ, ಇಲ್ಲಿ ಒಳಗೆ ಪ್ರವೇಶವಿಲ್ಲ,ಬಾವಿಯನ್ನು ಮುಟ್ಟಬೇಡಿ ಎಂಬಂತಹ ನಾಮಫಲಕಗಳು ಇಂದಿಗೂ ದೇವಾಲಯಗಳಲ್ಲಿ ರಾರಾಜಿಸುತ್ತಿದೆ.

ನಾಗಮಂಡಲಗಳಲ್ಲಿ ನಡೆಯುವ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲೂ ಪ್ರತ್ಯೇಕ ಊಟದ ವ್ಯವಸ್ಥೆ,ಇಂದಿಗೂ ಉಳಿದು ಬಂದಿರುವ ಮನು ಸಿದ್ದಾಂತದ ಮಡಿ-ಮೈಲಿಗೆ ದಲಿತರು ಸೇರಿದಂತೆ ಇನ್ನುಳಿದ ಕೆಳಜಾತಿಗಳನ್ನು ನಮ್ಮ ಹಿಂದು ಧರ್ಮ ನೋಡುವ ದೃಷ್ಟಿಕೋನದ ಬಗ್ಗೆ ನೀವೇ ಯಾಕೆ ಧ್ವನಿ ಎತ್ತುತ್ತಿಲ್ಲ. ಕೇವಲ ತ್ರಿಶೂಲ, ಲಾಠಿ ಹಿಡಿದು ಜೈ ಭಾರತ್ ಮಾತಾ ಕೀ ಅಂತ ರಕ್ತದೋಕುಳಿ ಹರಿಸಲು ಮಾತ್ರ ಹಿಂದೂ-ನಾವೆಲ್ಲ ಒಂದು ಅಂತ ಬೊಬ್ಬೆ ಹೊಡೆಯುವುದರಲ್ಲಿ ಅದ್ಯಾವ ಪುರುಷಾರ್ಥ ಅಡಗಿದೆ.

ಬಲವಂತದ ಮತಾಂತರ, ದಾಳಿ, ಭಯೋತ್ಪಾದನೆಯನ್ನು ನಾವೆಲ್ಲ ಖಂಡಿಸೋಣ, ಹಾಗೇ ಹಿಂದು ಧರ್ಮದೊಳಗಿನ ಅಸಮಾನತೆ, ಜಾತಿ, ಅಸ್ಪಶ್ರ್ಯತೆ ಬಗ್ಗೆಯೂ ತಿಳಿದು ಮಾತನಾಡಿದರೆ ವಾಸ್ತವದ ಅರಿವಾಗುತ್ತದೆ. ಹಿಂದುಳಿದ ವರ್ಗದ ಜನಗಳು ಯಾಕೆ ಅಮಿಷಕ್ಕೆ ಒಳಗಾಗಿ ಮತಾಂತರವಾಗುತ್ತಿದ್ದಾರೆ ಎಂಬ ಕುರಿತು ಮೊದಲು ಅರಿತುಕೊಳ್ಳಬೇಕು...

ಮಹಾತ್ಮನೆಂದರೆ ಅದ್ಯಾಕೆ ಮುನಿಸು...

ಬಾಪೂಜಿ ನಿಮ್ಮ ಬಗ್ಗೆ ಏನೆಂದು ಮಾತನಾಡಿಕೊಳ್ಳಲಿ,ನಿಮ್ಮ ಬಗ್ಗೆ ಮಾತನಾಡುವುದಾಗಲಿ,ಹೆಸರು ಹೇಳುವುದಾಗಲಿ ಎಲ್ಲವೂ ಅಪರಾಧ ಎಂಬಂತೆ ಆಗಬಿಟ್ಟಿದೆ.ಅದ್ಯಾಕೋ ಯುವಪೀಳಿಗೆಗಂತೂ ಗಾಂಧಿ ಎಂಬ ಶಬ್ದ ಕೇಳಿದರೆ ಸಾಕು,ಯಾವ ಜನ್ಮಾಂತರದ ದ್ವೇಷವೇನೋ ಎಂಬ ತೆರನಾಗಿ ಉರಿದು ಬೀಳುತ್ತಾರೆ. ಪಾಪ ಅವರಿಗೇನು ಗೊತ್ತು ನೀವು ಬದುಕಿರುವಾಗಲೇ ಎಲ್ಲ ಒಳಿತು-ಕೆಡುಕುಗಳ ಮಾತುಗಳನ್ನು ಕೇಳಿ ಸೌಹಾರ್ದತೆಗಾಗಿ ಹೋರಾಡಿಯೇ ಹಿಂದು ಬಾಂಧವನಿಂದಲೇ ಹತ್ಯೆಗೊಳಗಾಗಬೇಕಾಯಿತೆಂದು.

ನಿಮ್ಮ ಹೆಸರೀಗ ಕೇವಲ ಸಿನಿಮಾ ಟಾಕೀಸಿನ ಮುಂಭಾಗದಲ್ಲಿ,ರಂಗಸ್ಥಳದ ಎದುರಿನ ನೆಲದ ಮೇಲೆ ಕುಳಿತುಕೊಳ್ಳುವವರು, ಕ್ಲಾಸಿಗೆ ಚಕ್ಕರ್ ಹೊಡೆಯದೇ ಇರುವವರು ಹೀಗೆ ಅಲ್ಲೆಲ್ಲಾ ನಿನ್ನ ಹೆಸರು ಬಳಕೆಯಾಗುತ್ತದೆ. ಇಂವ ದೊಡ್ಡ ಗಾಂಧಿ ಮೊಮ್ಮಗ,ಗಾಂಧಿ ಕ್ಲಾಸ್ ಹೀಗೆ ನಾಮವಿಶೇಷಣಗಳ ಹಣೆಪಟ್ಟಿ ಹಚ್ಚಲಾಗುತ್ತದೆ.

ಈ ದೇಶ ಇಬ್ಭಾಗವಾಗಲು,ಮುಸ್ಲಿಂರನ್ನು ಹೆಗಲ ಮೇಲೆ ಹೊತ್ತುಕೊಂಡು ಓಲೈಕೆ ಮಾಡಿಕೊಂಡು, ಅವರ ಉಳಿವಿಗಾಗಿಯೇ ಉಪವಾಸ, ಅಹಿಂಸೆ ಮಣ್ಣು ಬೂದಿ ಅಂತ ಬ್ಲ್ಯಾಕ್ ಮೇಲ್ ಮಾಡಿಯೇ ಭಾರತೀಯ ಹಿಂದೂಗಳ ಮೇಲೆ ಚಪ್ಪಡಿ ಎಳೆದ ಗಾಂಧಿಯ ಹೆಸರು ಹೇಳಬೇಡಿ.

ಆತ ದೊಡ್ಡ ಖದೀಮ ಭಗತ್ ನೇಣಿಗೆ ಏರುವ ಸಂದರ್ಭದಲ್ಲಿಯೂ ದುಂಡು ಮೇಜಿನ ಮಾತುಕತೆಯಲ್ಲಿ ತುಟಿ ಪಿಟಕ್ ಎನ್ನದೇ ಇದ್ದ ಪರಿಣಾಮ ಗಲ್ಲಿಗೇರುವಂತಾಯಿತು, ಭಾರತದ ಪ್ರಥಮ ಪ್ರಧಾನಿ ಸರ್ದಾರ ವಲ್ಲಭಬಾಯಿ ಪಟೇಲ್ ಆಗಬೇಕಾಗಿದ್ದು, ಅದನ್ನು ತಮ್ಮ ಆಪ್ತ ನೆಹರೂಗೆ ಒಪ್ಪಿಸಿದ್ದು ಹೀಗೆ ತಾತಾನ ಮೇಲೆ ಅನೇಕ ಗುರುತರವಾದ ಆಪಾದನೆಗಳಿವೆ.

ಅವೆಲ್ಲಕ್ಕಿಂತ ಹೆಚ್ಚಾಗಿ ತಾತಾ ನೀನೊಬ್ಬ ಕಟ್ಟಾ ಹಿಂದೂ,ಸಂಪ್ರದಾಯವಾದಿ,ಹೇ ರಾಮ್ ಮಂತ್ರ ಜಪಿಸುತ್ತಲೇ ಸರ್ವ ಧರ್ಮ ಸಮನ್ವಯಕ್ಕಾಗಿ ಹೋರಾಡಿದ ಅರೆ ಬೆತ್ತಲೆ ಫಕೀರ ಎಂಬುದು ಪೂರ್ವಾಗ್ರಹ ಪೀಡಿತ ಮನಸ್ಸಿನ ಆಳಕ್ಕೆ ಇಳಿಯುವುದೇ ಇಲ್ಲ. 1948ರ ಆಗೋಸ್ಟ್ 15ರಂದು ಅಮೃತಸರದಲ್ಲಿ ಸಿಖ್ ಸಮುದಾಯ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ 30 ಮುಸ್ಲಿಂ ಮಹಿಳೆಯರನ್ನು ಬಲವಂತದಿಂದ ಸುತ್ತುಗಟ್ಟಿ ನಗ್ನಗೊಳಿಸಿ ನೃತ್ಯಮಾಡುವಂತೆ ಮಾಡಿದ್ದರು.

ಅಷ್ಟೇ ಅಲ್ಲ ಆ ಗುಂಪಿನಲ್ಲಿದ್ದ ಒಬ್ಬಾಕೆಯನ್ನು ಎಲ್ಲರೆದುರೇ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಈ ಸುದ್ದಿ ಪಾಕಿಸ್ತಾನದ ಲಾಹೋರ್‌ಗೆ ತಲುಪಿದಾಗ ಅಲ್ಲಿನ ಗುರುದ್ವಾರದಲ್ಲಿ ಆಶ್ರಯಪಡೆದಿದ್ದ ಸಿಖ್‌ರ ಮೇಲೆ ದಾಳಿ ಮಾಡಿ ಹತ್ಯೆಗೈದರು, ಗುರುದ್ವಾರಕ್ಕೆ ಬೆಂಕಿ ಹಚ್ಚಿ ಎಲ್ಲರನ್ನು ಸುಟ್ಟು ಬೂದಿ ಮಾಡಿದರು. ಹೀಗೆ ಹೊತ್ತಿಕೊಂಡ ಬೆಂಕಿ ಕಿಡಿ ಪಾಣಿಪತ್‌ನಲ್ಲಿ ರಕ್ತದೊಕುಳಿ ಹರಿದಿತ್ತು.

ಆ ಸಂದರ್ಭದಲ್ಲಿಯೇ ಅಲ್ಲವೇ ತಾತ ನೀವು ಯಾವ ಅಂಗರಕ್ಷಕರ ಸಹಾಯವಿಲ್ಲದೇ ಬುಡ್ಡಿದೀಪ ಹಿಡಿದು ಮನೆ,ಮನೆಗೆ ಹೋಗಿ ಅಂಗಲಾಚಿ ಬೇಡಿಕೊಂಡಿರಿ,ದಯವಿಟ್ಟಿ ಹಿಂಸೆ ನಿಲ್ಲಿಸಿ,ಹೋಗಿ ಮುಸ್ಲಿಂರನ್ನು ತಬ್ಬಿಕೊಳ್ಳಿ,ಸೌಹಾರ್ದ ಕಾಪಾಡಿಕೊಳ್ಳಿ ಎಂದಾಗ. ಅವರೇನು ಸುಮ್ಮನಿದ್ದರೇ..ಏಯ್ ಅವರು ನಿನ್ನ ಹೆಂಡತಿಯನ್ನು ಕೆಡಿಸಿದ್ದಾರಾ?ನಿನ್ನ ಮಕ್ಕಳನ್ನು ಕೊಂದಿದ್ದಾರಾ ಅಂತ ಮುಖಕ್ಕೆ ಹೊಡೆದ ಪ್ರಶ್ನೆಗಳನ್ನು ಎಸೆದಿದ್ದರು. ಅದಕ್ಕೂ ಕೋಪ ಮಾಡಿಕೊಳ್ಳದ ತಾವು ಹೌದು ನನ್ನ ಹೆಂಡತಿಯನ್ನೇ ಕೆಡಿಸಿದ್ದು,ಇಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಂಗಸರು, ಸತ್ತ ಮಕ್ಕಳು ಎಲ್ಲಾ ನನ್ನವರೇ ಎಂದು ಹೇಳಿದ್ದೀರಿ.

ಬಳಿಕ ಒಬ್ಬೊರ ರುಂಡವನ್ನು ಮತ್ತೊಬ್ಬರು ಚೆಂಡಾಡುತ್ತಿದ್ದ ಜನರು ಶಾಂತ ಸ್ಥಿತಿಗೆ ಬಂದಿದ್ದು, ಹಾಗಾದರೆ ಇದು ನೀವು ಮಾಡಿದ ತಪ್ಪೇ? ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಮನಸ್ಥಿತಿಗೆ ನಿಮ್ಮ ಅಹಿಂಸೆ, ಕೋಮು ಸೌಹಾರ್ದತೆ ಬೇಡವಾಯಿತೇ? ಸ್ವತಃ ನಿಮ್ಮ ಮಗ ಹರಿಲಾಲ್ ಗಾಂಧಿಯೇ ಮುಸ್ಲಿಂ ಧರ್ಮಕ್ಕೆ ಮತಾಂತರನಾಗಿ ಮದುವೆಯಾದಾಗಲು ತಾವು ಸುಮ್ಮನಿದ್ದೀರಾ, ಆತನಿಗೆ ಹಿಂದೂ ಧರ್ಮಕ್ಕೆ ಮರು ಮತಾಂತರಗೊಳ್ಳುಂತೆ ಪಕ್ಕಾ ಹಿಂದೂವಿನಂತೆ ವರ್ತಿಸಿದ್ದೀರಲ್ಲವೇ ?ಜೀವಮಾನವ ಪೂರ್ತಿ ಅಹಿಂಸೆಯಲ್ಲಿ ಹೋರಾಟ ನಡೆಸಿದ ನಿಮ್ಮ ತತ್ವ,ಮಾತುಗಳು ಯಾರಿಗೂ ಪಥ್ಯವಾದಂತಿಲ್ಲ.

ಅಷ್ಟಾದರೂ ನಿಮ್ಮ ತ್ಯಾಗವೇ ಬೂಟಾಟಿಕೆ ಎಂಬಷ್ಟರ ಮಟ್ಟಿಗೆ ದೂರಲಾಗುತ್ತದೆ.ಅದಕ್ಕಾಗಿಯೇ ಅಲ್ಲವೇ ನಿಮಗೆ ನೊಬೆಲ್ ನೀಡಿಲ್ಲ,ಹೋಗಲಿ ಕನಿಷ್ಠ ಪಕ್ಷ ವಸಾಹತುಶಾಹಿಗಳ ಬೂಟುನೆಕ್ಕುವವರಿಗಾಗಿಯೇ ನೀಡುತ್ತಿದ್ದ 'ಸರ್' ಪದವಿಗೂ ನಿಮ್ಮನ್ನು ಉದ್ದೇಶಪೂರ್ವಕವಾಗಿ ಕೈ ಬಿಡಲಾಯಿತು. ಹೋಗಲಿ ನಿಮ್ಮ ಯೋಗ್ಯತೆ ಅದ್ಯಾವ ಜುಜುಬಿ ಪದವಿಗಳು. ನಿಮ್ಮಂತೆಯೇ ಅರಮನೆ, ಹಣ, ಅಂತಸ್ತು ಎಲ್ಲವನ್ನೂ ತ್ಯಾಗ ಮಾಡಿ ಬೀದಿಗೆ ಬಂದ ಗೌತಮ ಬುದ್ಧನನ್ನೇ ನಾವು ಇಲ್ಲಿಂದ ಓಡಿಸಿದವರಲ್ಲವೇ?ನಿಮ್ಮ ಗತಿಯೂ ಅದಕ್ಕಿಂತ ಭಿನ್ನವಾಗಲಾರದು ಎಂಬ ಸಂಶಯ ಕಾಡುತ್ತಿದೆ.

ಬೌದ್ಧಧರ್ಮ ಭಾರತದಿಂದ ಕಣ್ಮರೆಯಾದರೂ,ಬೇರೆಡೆ ಅಷ್ಟೇ ಪ್ರಭಾವಶಾಲಿಯಾಗಿ ತಳವೂರಿದೆ, ನೀವು ಹಾಗೇ ತಾತ ನಿಮ್ಮ ಅಹಿಂಸೆ, ಗ್ರಾಮಸ್ವರಾಜ್ಯ, ಸ್ವದೇಶಿ ಯಾರಿಗೂ ಬೇಡ, ನಿಮ್ಮ ಚಿಂತನೆ , ಆದರ್ಶಗಳತ್ತ ವಿದೇಶಿಗರು ಬೆರಗುಗಣ್ಣಿನಿಂದ ನೋಡಿ, ಅಪ್ಪಿಕೊಳ್ಳಲಾರಂಭಿಸಿದ್ದಾರೆ. ಇತಿಹಾಸದ ಪುಟಗಳಲ್ಲಿ ಏನೇನೂ ದಾಖಲಾಗುತ್ತವೆ. ಹಾಗೇ ತಾತಾ ನಿಮ್ಮ ಹೆಸರು ಕೂಡ ಬುದ್ಧನಂತೆ ಭಾರತದಿಂದ ಕಣ್ಣರೆಯಾದ ಗಾಂಧಿ, ಗಾಂಧಿ ತತ್ವ ಹೀಗೆ ದಾಖಲಾಗುತ್ತ ಹೋಗಬಹುದು.....!

Wednesday, September 3, 2008

ವಂಡಾರು ಕಂಬಳ ಮತ್ತು ನರಬಲಿ...

ನಮ್ಮ ಊರಿನ ಹಿರಿಯರು ಆಗಾಗ ಗಾದೆ ಮಾತೊಂದನ್ನು ಹೇಳುತ್ತಿರುತ್ತಾರೆ, ಅದೇನೆಂದರೆ ' ಹಿಂದಿನ ಕಾಲವಲ್ಲ-ವಂಡಾರು ಕಂಬಳವಲ್ಲ' ಅಂತ. ಈಗಿನ ಕೆಟ್ಟು ಹೋದ ಪರಿಸ್ಥಿತಿಗೆ ರೋಸಿಹೋದ ಹಿರಿಯ ತಲೆಗಳು ಆಗಾಗ ಈ ಗಾದೆಯನ್ನು ಹೇಳುತ್ತಿ ರುತ್ತಾರೆ. ಆದರೆ ಆ ಗಾದೆ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ.

ಮಂಗಳೂರು, ಉಡುಪಿ, ಕುಂದಾಪುರ, ಮೂಡಲಕಟ್ಟೆ, ಪುತ್ತೂರುಗಳಲ್ಲಿ ಕಂಬಳ ಒಂದು ವಿಶೇಷವಾದ ಸಾಂಪ್ರದಾಯಿಕ ಕ್ರೀಡೆ ಯಾಗಿದೆ. ಈ ಭಾಗಗಳಲ್ಲಿ ಹಬ್ಬ ಹರಿದಿನಗಳು ಹೇಗೋ, ಹಾಗೇ ಕಂಬಳ ಕೂಡ ಪ್ರಮುಖವಾದದ್ದು. ನಾನೀಗ ಹೇಳ ಹೊರಟಿ ರುವುದು ಕುಂದಾಪುರದಿಂದ ಸುಮಾರು 15ಕಿ.ಮೀ.ದೂರದಲ್ಲಿರುವ ವಂಡಾರು ಎಂಬ ಊರಿನ ಕಂಬಳದ ಬಗ್ಗೆ. ಇದಕ್ಕೆ ಕ್ರಿ.ಶ. 1200ರ ಆಳುಪರ ಜರ್ಕೆಯ ಶಾಸನದಲ್ಲಿ ಕೆಲವು ವಿವರಗಳು ಲಭ್ಯವಾಗುತ್ತದೆ.

ಇದು ಉಡುಪಿ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಕಂಬಳಗದ್ದೆಯಾಗಿದೆ. ಇದು ಅಂದಾಜು 10 ಎಕರೆ ವಿಸ್ತಿರ್ಣ ಹೊಂದಿದೆ. ಈ ಕಂಬಳಗದ್ದೆ ಬಗ್ಗೆ ಬಹಳಷ್ಟು ಐತಿಹ್ಯಗಳಿವೆ. ಆ ಕಾಲದಲ್ಲಿ ಇದನ್ನು ಮನುಷ್ಯರು ಬೀಜ ಬಿತ್ತಿ ಬೆಳೆ ತೆಗೆಯುತ್ತಿರಲಿಲ್ಲವಂತೆ, ದೇವತೆ ಗಳು ರಾತ್ರಿ-ಬೆಳಗಾಗುವುದರೊಳಗೆ ನೇಜಿ ಮಾಡಿ ಮುಗಿಸುತ್ತಿದ್ದರಂತೆ !.

ವಂಡಾರಿನ ಈ ಕಂಬಳ ಗದ್ದೆ ಹೆಗ್ಗಡೆ ಮನೆತನದ್ದು, ಅವರ ಮನೆಯ ಪಕ್ಕ ನಿಗಳೇಶ್ವರನ (ಮೊಸಳೆ) ಗುಡಿ ಇದೆ. ಈ ಗುಡಿಯಲ್ಲಿ ಲಿಂಗಾರಾಧನೆ ನಡೆಯುತ್ತದೆ, ಇಲ್ಲಿ ಬಂಟರೇ ಅರ್ಚಕರಾಗಿದ್ದು, ಕಂಬಳದ ದಿನ ಮಾತ್ರ ಪೂಜೆ-ಪುನಸ್ಕಾರ ನಡೆಯುತ್ತದೆ. ವಂಡಾ ರಿನಲ್ಲಿರುವ ನಿಗಳನ ಗುಡಿಯ ಗರ್ಭಗುಡಿಯ ಕೆಳಗೆ ನಿಗಳನ ಬಾವಿ ಇದ್ದು, ಇದನ್ನು ನೂರಾರು ವರ್ಷಗಳ ಹಿಂದೆಯೇ ಮುಚ್ಚಿದ್ದರು. ಆ ಬಾವಿಯನ್ನು ಯಾಕೆ ಮುಚ್ಚಿದರು ಎಂಬುದು ಈಗಲೂ ಜನಜನಿತವಾಗಿರುವ ಐತಿಹ್ಯ ಹೀಗಿದೆ...

ವಂಡಾರು ಕಂಬಳಕ್ಕೆ ಜಿಲ್ಲೆಯ ಸುತ್ತಮುತ್ತಲಿನಿಂದ ಕೋಣಗಳನ್ನು ಶೃಂಗರಿಸಿ ಡೋಲು, ಬಾಜಭಜಂತ್ರಿ ಮೂಲಕ ಕರೆ ತರುತ್ತಿದ್ದರು, ಅಲ್ಲಿಯೇ ದೊಡ್ಡ ಜಾತ್ರೆಯೇ ನೆರೆದಿರುತ್ತಿದ್ದು, ಕಂಬಳ ನಡೆಯುವ ಹಿಂದಿನ ದಿನ ಎಲ್ಲೆಡೆಯಿಂದ ಕೋಣಗಳನ್ನು ತಂದು ಕಟ್ಟಿಹಾಕಿ, ದಿನಬೆಳಗು ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ರಾತ್ರಿ ನಿದ್ದೆಹೋದ ಸಂದರ್ಭ ಹೆಗ್ಗಡೆಯವರ ಮನೆಯಲ್ಲಿ ನಿದ್ದೆ ಹೋದವರೊಬ್ಬರ ಕಾಲಿಗೆ ಬಳ್ಳಿ ಹಾಕಲಾಗುತ್ತದೆ. ಹಾಗೇ ಯಾರ ಕಾಲಿಗೆ ಬಳ್ಳಿ ಬೀಳುತ್ತಿತ್ತೋ ಅವರನ್ನು ನಸುಕಿನಲ್ಲಿಯೇ ಎತ್ತಿ ನಿಗಳನ (ಮೊಸಳೆ) ಬಾವಿಗೆ ಹಾಕಲಾಗುತ್ತಿತ್ತು. ಅಂದರೆ ನರಬಲಿ ಕೊಡಲಾಗುತ್ತಿತ್ತು !!

ಹೀಗೆ ಇದು ನಿರಂತರ ಪ್ರತಿ ಬಾರಿಯ ಕಂಬಳದ ಮುನ್ನ ನಿಗಳನಿಗೆ ನರಬಲಿ ನಡೆಯುತ್ತಿತ್ತು. ಏತನ್ಮಧ್ಯೆ ಒಮ್ಮೆ ಹಾಗೆ ಕಾಲಿಗೆ ಬಳ್ಳಿ ಹಾಕಿದ ವ್ಯಕ್ತಿಯನ್ನು ನಿಗಳನಿಗೆ ಬಲಿ ಕೊಡಲಾಯಿತಂತೆ, ಆದರೆ ನಿಗಳನಿಗೆ ಬಲಿಯಾದ ವ್ಯಕ್ತಿ ಹೆಗ್ಗಡೆ ಮನೆಯ ಆಳು ಎಂಬುದು ನಂತರ ತಿಳಿಯಿತಂತೆ. ಆ ದಿನದಿಂದ ನಿಗಳನಿಗೆ ನರಬಲಿ ಕೊಡುವ ಸಂಪ್ರದಾಯವನ್ನು ನಿಲ್ಲಿಸಲಾಯಿತಂತೆ.

ಹೀಗೆ ಬಹಳಷ್ಟು ಇತಿಹಾಸವನ್ನು ಹೊಂದಿರುವ ವಂಡಾರು ಕಂಬಳ ಗದ್ದೆಯನ್ನು ನೀವೊಮ್ಮೆ ನೋಡಬೇಕು(ಜನವರಿಯಿಂದ ಮಾ ರ್ಚ್ ತಿಂಗಳ ನಡುವೆ ನಡೆಯುತ್ತದೆ), ಅದೇ ರೀತಿ ಡೈನೋಸಾರಸ್ಸ್ ರೂಪದ ನಿಗಳನ ಗುಡಿಯನ್ನು ಕಾಣಬೇಕು. ಅಲ್ಲದೇ ಇಲ್ಲಿ ಪ್ರತಿ 12ವರ್ಷಗಳಿಗೊಮ್ಮೆ ಪಟ್ಟದ ಹೆಗ್ಗಡೆವರಿಗೆ ಆಗುವ ಉತ್ಸವ ಪಟ್ಟೋತ್ಸವ ನಡೆಯುತ್ತಿತ್ತು.

ಅದು ಕಳೆದ ಒಂದು ಶತಮಾನದಿಂದ ನಿಂತು ಹೋಗಿದೆ,ಈಗ ಕಾಶಿಯಿಂದ ತಂದ ಮೂರ್ತಿಗೆ ಸಾಂಕೇತಿಕವಾಗಿ ಪಟ್ಟದ ಉತ್ಸವ ನಡೆಯುತ್ತದೆ. ಹೀಗೆ ವಂಡಾರು ಕಂಬಳದ ಗದ್ದೆಗೆ ಅಣ್ಣ-ತಮ್ಮ ಒಟ್ಟಿಗೆ ಇಳಿಯುವಂತಿಲ್ಲ,ಪಟ್ಟದ ಹೆಗ್ಗಡೆಯವರು ಗದ್ದೆಗೆ ಪೂರ್ಣ ಸುತ್ತು ಬರುವಂತಿಲ್ಲ,

ವಂಡಾರು ಕಂಬಳದ ದಿನ ಕೋಟೇಶ್ವರದ ಕೆರೆ ನೀರು ಕೆಸರಾಗುವುದು, ಕಂಬಳದ ಗದ್ದೆ ಪಾಲಾಗುವಂತಿಲ್ಲ, ಇಲ್ಲಿ ಒಬ್ಬಳೇ ಹೆಣ್ಣು ಮಗಳು ಹುಟ್ಟುವುದು, ಆ ಹೆಣ್ಣಿನ ಮಗನೇ ಪಟ್ಟದ ಹೆಗ್ಗಡೆಯವರಾಗಿ ಕಂಬಳವನ್ನು ನಡೆಸುತ್ತಾರೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ವಂಡಾರು ಕಂಬಳ ಮತ್ತು ಅಲ್ಲಿನ ವೈಭವವನ್ನು ನೀವೂ ಒಮ್ಮೆ ಕಣ್ಣಾರೆ ನೋಡಬೇಕು...ಇದು ಜೂಜಿಗಾಗಿ ನಡೆಯುವ ಕಂಬಳವಲ್ಲ...

'ವಲಸೆ ರಾಜಕಾರಣ'ದ ದೊಂಬರಾಟ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟವನ್ನು ಗಮನಿಸಿದರೆ ನೈತಿಕತೆ, ಮೌಲ್ಯ, ತತ್ವ ಸಿದ್ಧಾಂತದ ಪದಗಳೆಲ್ಲ ಸವಕಲಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಬಹುಶಃ ನೈತಿಕತೆ ಮತ್ತು ತತ್ವದ ಪ್ರಶ್ನೆಗೆ ಬಂದಾಗ ಆ ಪರಿಧಿಯೊಳಗೆ ಎಲ್ಲರೂ ತಾನೇ ತಾನಾಗಿ ಸೇರಿಕೊಳ್ಳುತ್ತೇವೆ. ಹೇಳುವುದು ಒಂದು ಮಾಡುವುದು ಇನ್ನೊಂದು ಅಂತ ಆದ ಮೇಲೆ ಅಲ್ಲಿ ನೈತಿಕತೆಗೆ ಯಾವ ಅರ್ಥ ಉಳಿಯಿತು.

ಇದೀಗ ಕರ್ನಾಟಕ ರಾಜ್ಯಕಾರಣದಲ್ಲಿ ಇತ್ತೀಚೆಗೆ ಆಡಳಿತರೂಢ ಭಾರತೀಯ ಜನತಾ ಪಕ್ಷ ನಡೆಸುತ್ತಿರುವ ಆಪರೇಶನ್ ಕಮಲ ನಿಜಕ್ಕೂ ರಾಜಕೀಯ ಅಧಃಪತನದ ಸಂಕೇತ. ಈ ಹಿಂದೆಂದೂ ಇಂತಹ ಕೀಳು ಮಟ್ಟದ ರಾಜಕೀಯ ನಡೆದಿಲ್ಲ ಎಂಬುದನ್ನು ಮನಗಾಣುವ ಮೂಲಕ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬ ಏಕಾಏಕಿ ಅಧಿಕಾರದ ಬೆನ್ನತ್ತಿ, ರಾಜೀನಾಮೆ ಎಸೆದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾನೆಂದರೆ ಅದು ಎಷ್ಟರ ಮಟ್ಟಿಗೆ ಸಂವಿಧಾನ ಬದ್ಧವಾದದ್ದು ಎಂದು ಪ್ರಶ್ನಿಸಿಕೊಳ್ಳ ಬೇಕಾ ಗಿದೆ.

ಅವೆಲ್ಲಕ್ಕಿಂತ ಮುಖ್ಯವಾಗಿ ಒಂದು ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಯನ್ನು ಕ್ಷೇತ್ರದ ಲಕ್ಷಾಂತರ ಮಂದಿ ಮತದಾರರು ತಮ್ಮ ಒಮ್ಮತಾಭಿಪ್ರಾಯದ ಮತ ಚಲಾಯಿಸಿ ಆಯ್ಕೆ ಮಾಡುತ್ತಾರೆ. ಹಾಗಾದರೆ ಮತದಾರರ ನೀಡಿದ ತೀರ್ಪನ್ನು ಧಿಕ್ಕರಿಸಿ, ನೀವು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೀರಿ ಎಂದಾದರೆ ಅದು ಮತದಾರರಿಗೆ ಮಾಡಿದ ಮಹಾದ್ರೋಹವಲ್ಲದೆ ಇನ್ನೇನು !

ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ, ಕಾನೂನಿನ ಕಣ್ಣಿಗೆ ಮಣ್ಣೆರೆಚುವುದರಲ್ಲಿ ನಾವು ಸಿದ್ಧಹಸ್ತರಲ್ಲವೆ, ಆ ನಿಟ್ಟಿನಲ್ಲಿ ಕಾನೂನಿನ ಸುಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ,ಮತ್ತೊಂದು ಪಕ್ಷಕ್ಕೆ ಸೇರ್ಪಡೆ ಗೊಂಡು, ಅಧಿಕಾರ, ಸ್ಥಾನವನ್ನು ಅಲಂಕರಿಸುವುದು. ಮತ್ತೆ ಆ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ರಾಜಕಾರಣಿಗಳ ಲೆಕ್ಕಚಾರ.

ಇಲ್ಲಿ ಕ್ಷೇತ್ರದ ಮತದಾರರನಿಗೆ ಯಾವ ಬೆಲೆಯೂ ಇಲ್ಲ,ನೈತಿಕತೆ ಅಂತೂ ಕೇಳುವುದೇ ಬೇಡ. ಇಂತಹದ್ದೊಂದು ವಲಸೆ ರಾಜಕಾರ ಣಕ್ಕೆ ಬಿಜೆಪಿ ಚಾಲನೆ ನೀಡಿದೆ. ಆ ಮೂಲಕ ತನ್ನ ಸರ್ಕಾರವನ್ನು ಭದ್ರಪಡಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವರು ಕೂಡ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಆದರೆ ರಾಜ್ಯದಲ್ಲಿ ಬಿಜೆಪಿಯ ಆಪರೇಶನ್ ಕಮಲದ ಬಗ್ಗೆ ಆಕ್ಷೇಪಿಸುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ, ಇತ್ತೀಚೆಗಷ್ಟೇ ಕೇಂದ್ರ ದ ಆಡಳಿತರೂಢ ಯುಪಿಎ ಅಣುಒಪ್ಪಂದದ ವಿಚಾರದಲ್ಲಿ ಶಾಸಕರನ್ನು ಖರೀಸಿತ್ತಲ್ಲ ಎಂದು ಬಾಯಿ ಮುಚ್ಚಿಸಬಹುದು. ಇಲ್ಲವೇ ಅಂದು ಪ್ರಧಾನಿ ಹುದ್ದೆ ಅಲಂಕರಿಸಲು ಪಿ.ವಿ.ನರಸಿಂಹರಾವ್‌ಗೂ ಕೂಡ ಜೆಎಂಎಂ ಇದೇ ತೆರನಾಗಿ ಲಂಚ ಸ್ವೀಕರಿಸಿಯೇ ಬೆಂಬಲ ನೀಡಿತ್ತು ಎಂಬ ಸಮಜಾಯಿಷಿ ನೀಡಬಹುದು.

ರಾಜಕಾರಣದಲ್ಲಿ ಇಂತಹ ಅಪಸವ್ಯ ನಡೆಯುತ್ತಿದ್ದಾದರು ಕೂಡ, ರಾಜ್ಯರಾಜಕಾರಣದ ಮಟ್ಟಿಗೆ ಸಾರಸಗಟಾಗಿ ಜನರಿಂದ ಆಯ್ಕೆ ಯಾದ ಶಾಸಕರು ಜನರ ಆಶಯಕ್ಕೆ ವಿರುದ್ಧವಾಗಿ ರಾಜೀನಾಮೆ ನೀಡಿ ವಿರೋಧ ಪಕ್ಷವನ್ನು ಸೇರಿ ಅಲ್ಲಿ ಅಧಿಕಾರ,ಹುದ್ದೆಯನ್ನು ಅಲಂಕರಿಸುತ್ತಿರುವುದು ಕೀಳು ರಾಜಕೀಯದ ಪರಮಾವಧಿಯಾಗಿದೆ. ರಾಜಕಾರಣಿಗಳ ಇಂತಹ ಎಡಬಿಡಂಗಿತನಗಳಿಗೆ ಕ್ಷೇತ್ರದ ಪ್ರಜ್ಞಾವಂತ ಮತದಾರರೇ ತಕ್ಕ ಬುದ್ಧಿ ಕಲಿಸಬೇಕಾಗಿದೆ.