Saturday, October 20, 2007

ದೇಶ ವಿಭಜನೆ ಮತ್ತು ಸಾದತ್ ಮಂಟೋ



ಭಾರತ - ಪಾಕಿಸ್ತಾನ ದೇಶ ವಿಭಜನೆ ಹಾಗೂ ಆ ಸಂದರ್ಭದಲ್ಲಿನ ವಿಪ್ಲವ, ಹಿಂಸಾಚಾರ, ಸಾವು, ನೋವುಗಳು ಎರಡೂ ದೇಶಗಳ ನಡುವಿನ ಬಾಂಧವ್ಯಕ್ಕೆ ಕೊಳ್ಳಿ ಇಟ್ಟಿತ್ತು. ಆ ನೋವಿನ, ದ್ವೇಷ, ಅಸಹನೆಯ ನಡುವೆ ಈಗಲೂ ನಮ್ಮನ್ನು ಕಾಡುತ್ತಿರುವವ ಭಾರತದಲ್ಲಿ ಮುಸ್ಲಿಮನಾಗಿ ಹುಟ್ಟಿ, ಪಾಕಿಸ್ತಾನದಲ್ಲಿ ಮೃತ್ಯುವಶವಾದ ಲೇಖಕ ಸಾದತ್ ಹಸನ್ ಮಂಟೋ ಆತನ ಕುರಿತ ಜೀವನ ಯಾತ್ರೆಯ ತುಣುಕು ಇಲ್ಲಿದೆ......

ದೇಶ ವಿಭಜನೆಯ ನಂತರ ಲಾಹೋರ್ ಮಂಟೋಗೆ ಜೀವನ ನಡೆಸುವ ಅವಕಾಶವನ್ನೇ ನೀಡಲಿಲ್ಲ. ಹೆಂಡತಿ, ಮೂರು ಮಂದಿ ಹೆಣ್ಣು ಮಕ್ಕಳ ಸಂಸಾರ ರಥ ನಡೆಯಬೇಕಿತ್ತು. ಇಂತಹ ಜಂಜಡಗಳ ನಡುವೆ ಸಾದತ್ ಕುಡಿತದ ದಾಸನಾಗಿಬಿಟ್ಟಿದ್ದ. ಆತನಿಗೆ ಬದುಕಲು ತಿಳಿದಿರುವ ಏಕೈಕ ಕೆಲಸವೆಂದರೆ ಬರವಣಿಗೆ ಮಾತ್ರ. ಬದುಕಲು ಕೊನೆಗೂ ಆತ ಹಗಲು ರಾತ್ರಿ ಬರೆಯತೊಡಗಿದ.

ಹೀಗೆ ಅನೇಕ ಕಥೆ, ನಾಟಕ, ಕಾದಂಬರಿ, ಪ್ರಬಂಧಗಳನ್ನು ಬರೆದ. ಕೆಲವೊಮ್ಮೆ ಪತ್ರಿಕಾ ಕಚೇರಿಯಲ್ಲಿ ಕುಳಿತೆ ಬರೆದು ಕೊಡುತ್ತಿದ್ದ ಸಾದತ್‌ಗೆ ದೊರೆಯುತ್ತಿದ್ದ ಸಂಭಾವನೆ 30 ರೂಪಾಯಿ. ಆದರೆ ಆ ಹಣ ಆತನ ಕುಡಿತಕ್ಕೆ ಸಾಲುತ್ತಿರಲಿಲ್ಲವಾಗಿತ್ತು. ವರ್ಷಗಳ ಕಾಲ ಇದೇ ರೀತಿ ಎರಡು ತುಂಡು ಬ್ರೆಡ್ ಮತ್ತು ಕುಡಿತ, ಬರಹಗಳಲ್ಲಿ ಜೀವಿಸತೊಡಗಿದ ಮಂಟೋಗೆ ಆಘಾತ ಕಾಡಿತ್ತು.

ಆತ ಬರೆದ ಕಥೆಗಳಲ್ಲಿ ಪ್ರೇಮ, ಲೈಂಗಿಕತೆ, ಸೂಳೆಗಾರಿಕೆಯ ಅಂಶಗಳಿವೆ ಎಂಬುದಾಗಿ ಆರೋಪಿಸಿ ಒಂದರ ಮೇಲೊಂದರಂತೆ 5 ಕೇಸುಗಳನ್ನು ದಾಖಲಿಸಲಾಯಿತು. ಇದರಿಂದ ಮಂಟೋ ಅಕ್ಷರಶಃ ಮಾನಸಿಕವಾಗಿ ರೋಸಿ ಹೋಗಿದ್ದ. 1955 ಜನವರಿ 18 ರಂದು ಮುಂಜಾನೆ ಸಾದತ್ ಮೂಗಿನಿಂದ ರಕ್ತಸ್ರಾವವಾಗ ತೊಡಗಿತ್ತು. ಆ ಸಂದರ್ಭದಲ್ಲಿ ಆತ ಶರಾಬಿಗಾಗಿ ಅಂಗಲಾಚುತ್ತಿದ್ದ.ಮಂಟೋ ತೀರಿಹೋದಾಗ ಆತನ ವಯಸ್ಸು 44. ಅವನು ಭಾರತ ಬಿಟ್ಟು ಹೋದ ಮೇಲೆ ಲಾಹೋರಿನಲ್ಲಿ ಏಳು ವರ್ಷ ಕಳೆದಿದ್ದ.

ಆ ಏಳು ವರ್ಷಗಳು ಆತನ ಪಾಲಿಗೆ ಹಾವು - ಏಣಿಯಂತೆ ಜೀವಿತಾವಧಿ ಕಳೆದಿದ್ದ. ಮಂಟೋ ಪ್ರತಿಭೆಗೆ ಮನ್ನಣೆ ನೀಡಿದ್ದು ಮುಂಬೈ ಹಿಂದಿ ಚಿತ್ರರಂಗ. ಶಿಸ್ತಿನ ಸಿಪಾಯಿಯಂತಿದ್ದ ತಂದೆಯ 2ನೇ ಹೆಂಡತಿಯ ಕೊನೆಯ ಮಗನಾಗಿ 1912ರಲ್ಲಿ ಪಂಜಾಬ್‌ ಲೂಧಿಯಾನದ ಸಾಮ್ರಾಲದಲ್ಲಿ ಜನಿಸಿದ್ದ. ಈತನಿಗೆ 11 ಜನ ಸಹೋದರ, ಸಹೋದರಿಯರು. ಮಲತಾಯಿಯ ಪ್ರೀತಿರಹಿತ ಕುಟುಂಬದಲ್ಲಿ, ತಂದೆಯ ಭಯದಲ್ಲಿಯೇ ಮಂಟೋ ಬೆಳೆದಿದ್ದ. ಮಂಟೋ ಅಮೃತಸರದ ರಾತ್ರಿಗಳನ್ನು ಪೋಲಿಗಳ ಸಹವಾಸದಲ್ಲೇ ಕಳೆಯುತ್ತಾ ಮೆಟ್ರಿಕ್‌ನಲ್ಲಿ 2ಬಾರಿ ನಪಾಸಾಗಿ, 3ನೇ ಸಲ ಉತ್ತೀರ್ಣನಾದರೂ, ಆ ಸೋಲು ಆತನನ್ನು ಕೊನೆಯವರೆಗೂ ಬಿಟ್ಟಿರಲಿಲ್ಲ.1937ರಲ್ಲಿ ಸಿನಿಮಾ ಮಾಸಿಕವೊಂದರ ಪತ್ರಕರ್ತನಾಗಿ ಮುಂಬೈಗೆ ಬಂದ ಸಾದತ್, ತಾರೆಯರ, ಚೆಲುವೆಯರ, ಸೂಳೆಯರ ಮತ್ತು ವಂಚಕರಿಂದ ತುಂಬಿದ್ದ ಚಿತ್ರಲೋಕವನ್ನು ಕಂಡ.

ಆ ಬಳಿಕ ಸುಮಾರು ಎಂಟು ಸಿನಿಮಾ ಕಥೆ ಬರೆದ. ಮುಂದಕ್ಕೆ 2ನೇ ವಿಶ್ವಯುದ್ಧದ ಸಮಯದಲ್ಲಿ ದೆಹಲಿ ಆಕಾಶವಾಣಿ ಬರಹಗಾರನಾಗಿ ದುಡಿದು ಅಲ್ಲಿಂದ ಹೊರಬಿದ್ದಿದ್ದ. ಚಿತ್ರರಂಗ ಸಾದತ್‌ಗೆ ಹಣ, ಕೀರ್ತಿ, ಹೆಸರು ತಂದುಕೊಟ್ಟಿತ್ತಾದರೂ, ಪ್ರೀತಿಯಿಲ್ಲದೆ ಕಳೆದ ಅವನ ತಳಮಳ ಮಾತ್ರ ಮುಂದುವರಿದೇ ಇತ್ತು. ಇಂತಹ ಸಂದರ್ಭದಲ್ಲಿ ಬಾಂಬೆ ಟಾಕೀಸಿನಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಮುಸ್ಲಿಂ ಪ್ರತಿಭೆಗಳ ವಿರುದ್ಧ ಅಶೋಕ್ ಕುಮಾರ್ (ಬಾಂಬೆ ಟಾಕೀಸಿನ ದಾದಾಮೋನಿ ಅಶೋಕ್)ಗೆ ಬೆದರಿಕೆ ಪತ್ರಗಳು ಬರತೊಡಗಿದವು.

ಆ ಬಳಿಕ ಮಂಟೋ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿದ. ಅಶೋಕ್‌ ಹಾಗೂ ಆತನ ಮುಂಬೈ ಸ್ನೇಹಿತರು ಬಹಳಷ್ಟು ಒತ್ತಾಯ ಮಾಡಿದರೂ ಕೂಡ ಮಂಟೋ ಲಾಹೋರಿನತ್ತ ಪ್ರಯಾಣಿಸುತ್ತಾನೆ. 1948ರ ಜನವರಿಯಲ್ಲಿ, ಅದಾಗಲೇ ಹೆಂಡತಿ, 3ಹೆಣ್ಣು ಮಕ್ಕಳು ಲಾಹೋರಿಗೆ ಹೋಗಿ ನೆಲೆಸಿದ್ದರು. ಆ ಸಮಯದಲ್ಲಿ ಅದು ಪಾಕಿಸ್ತಾನವಾಗಿರಲಿಲ್ಲ. ಸಾದತ್ ಕೊನೆಯವರೆಗೂ ಮುಂಬೈ ಸೆಳೆತದಿಂದ ಹೊರಬಂದಿರಲಿಲ್ಲ. ಲಾಹೋರ್ - ಪಾಕಿಸ್ತಾನ ಅವನಿಗೆಂದೂ ಸ್ವಂತ ನೆಲ ಅನಿಸಲೇ ಇಲ್ಲ. ತ್ರಿಶಂಕು ಮನಸ್ಥಿತಿಯಲ್ಲೇ ಆತ ಕೊನೆಯುಸಿರೆಳೆದಿದ್ದ.......