ಕನ್ನಡ ಸಾಹಿತ್ಯಲೋಕದಲ್ಲಿ ನಾನು ಇಷ್ಟಪಡುವ ಕೆಲವೇ ಕೆಲವು ಪ್ರಮುಖರಲ್ಲಿ ಸಾಹಿತಿ, ಕಥೆಗಾರ ಎಂ.ವ್ಯಾಸರು ಒಬ್ಬರಾಗಿದ್ದಾರೆ. ಅವರು ಕನ್ನಡ ಸಾಹಿತ್ಯಲೋಕದಲ್ಲಿ ತೆರೆಮರೆಯಲ್ಲಿದ್ದರೂ ಕೂಡ, ಅಪಾರ ಅಭಿಮಾನಿಗಳನ್ನು ಪಡೆದುಕೊಂಡವರು. ತಮ್ಮ ವಿಭಿನ್ನ ಶೈಲಿಯ ಕಥೆಗಳ ಮೂಲಕ ಸಾಹಿತ್ಯ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದವರು ವ್ಯಾಸರು. ಕನ್ನಡದ ದೈನಿಕಗಳಾದ ಪ್ರಜಾವಾಣಿ, ಕನ್ನಡಪ್ರಭ , ಉದಯವಾಣಿ, ವಿಜಯಕರ್ನಾಟಕ ಸೇರಿದಂತೆ ಹೆಚ್ಚಿನ ಪತ್ರಿಕೆ, ವಾರ ಪತ್ರಿಕೆ, ಮಾಸಿಕಗಳಲ್ಲಿ ಅವರ ಕಥೆಗಳು ಆಗಾಗ ಪ್ರಕಟವಾಗುತ್ತಿರುತ್ತದೆ.
ನಾನು ಕೂಡ ಅವರ ಅಭಿಮಾನಿಯಾಗಿದ್ದೆ. ಉಷಾಕಿರಣ ಪತ್ರಿಕೆಯಲ್ಲಿದ್ದಾಗ ಬೆಂಗಳೂರಿನಿಂದ ಮಂಗಳೂರಿಗೆ ನಾನು ವರ್ಗಾವಣೆಗೊಂಡಿದ್ದೆ. ಆ ಸಂದರ್ಭದಲ್ಲಿ ಕಾಸರಗೋಡಿನ (ರೂಮ್‌ಮೇಟ್) ಪತ್ರಕರ್ತ ಮಿತ್ರ ಬಾಲಮುರಳಿ ಒತ್ತಾಯದ ಮೂಲಕ ವ್ಯಾಸರು ಲೇಖನ ಬರೆಯಲು ಆರಂಭಿಸಿದ್ದರು. ಅವರ ಬರಹ ಮತ್ತು ಕಥೆಗಳೆರಡೂ ಕೂಡ ವಿಭಿನ್ನ ಶೈಲಿಯವು. ಆಳವಾದ ಚಿಂತನೆಯ ಬರಹಗಳನ್ನು ವ್ಯಾಸರು ತಮ್ಮದೇ ರೂಪದಲ್ಲಿ ಅಕ್ಷರಕ್ಕಿಳಿಸುತ್ತಾರೆ. ಕಾಸರಗೋಡಿನ ಮಣ್ಣಿಪ್ಪಾಡಿಯ ಪ್ರಶಾಂತವಾದ ವಾತಾವರಣದ ತೋಟದಲ್ಲಿನ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುವ ವ್ಯಾಸರು ತುಂಬಾ ಮೌನಿ, ಏಕಾಂತ ಜೀವಿ.
ಅವರು ಎಲ್ಲಾ ಪತ್ರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ, ಯುವ ಬರಹಗಾರರ ಲೇಖನ ಓದಿ, ಅವರನ್ನು ಪ್ರೋತ್ಸಾಹಿಸುವ ವ್ಯಾಸರು ಕನ್ನಡ ಸಾಹಿತ್ಯ ವಲಯದ ಅಪರೂಪದ ವ್ಯಕ್ತಿ. ಈಗಾಗಲೇ ಸುಮಾರು 300 ಕ್ಕಿಂತಲೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಹೆಚ್ಚಿನ ಸಾಹಿತಿಗಳು ಪ್ರಶಸ್ತಿ, ಸನ್ಮಾನ ಅಂತ ರಾಜಕಾರಣಿಗಳ ಚುಂಗು ಹಿಡಿದು ಓಡಾಡುತ್ತಿದ್ದರೆ, ವ್ಯಾಸರು ಮಾತ್ರ ಅದ್ಯಾವ ಗೊಡವೆಗೂ ಹೋಗದವರು. ಈವರೆಗೂ ಅವರನ್ನು ಕನ್ನಡ ಸಾಹಿತ್ಯಲೋಕ ಗಂಭೀರವಾಗಿ ಪರಿಗಣಿಸದೆ ಇರುವುದು ವಿಪರ್ಯಾಸ. ವೇದಿಕೆ, ಹಾರ, ಸನ್ಮಾನ ಅಂದರೆ ಮಾರು ದೂರ ಸರಿಯುವ ವ್ಯಾಸರಿಗೆ ಯುವ ಬರಹಗಾರರು, ಮಿತ್ರರೆಂದರೆ ಪಂಚಪ್ರಾಣ.
ತುಂಬಾ ಭಾವುಕ ಸ್ವಭಾವದ ಅವರು ತಮ್ಮ ಕಥೆಗಳ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಕಂಬನಿ, ಕೃತ ಅವರ ಕಥಾ ಸಂಕಲನಗಳು, ಸುಳಿ, ಕ್ಷೇತ್ರ ಅವರ ಕವನ ಸಂಕಲನಗಳಾಗಿವೆ.ವ್ಯಾಸರ ಕಥೆಗಳ ಚುಂಬಕ ಶಕ್ತಿಯ ಶೈಲಿ ಹೇಗಿರುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ಮಯೂರದಲ್ಲಿ ಪ್ರಕಟವಾದ "ಕೆಂಡ'' ಕಥೆಯ ಕೆಲವು ಸಾಲುಗಳನ್ನು ಓದಿ. ಮೌನದಲ್ಲೇ ಮಾತುಗಳು ಹುಟ್ಟುತ್ತವೆ. ಅದನ್ನು ನಿನ್ನ ಮಾವ ಧ್ಯಾನ ಅನ್ನುತ್ತಿದ್ದರು.
ಕಥೆಯೊಂದು ಮನಸ್ಸಿನಲ್ಲಿ ಹುಟ್ಟಿಕೊಂಡರೆ ಸಾಕು,
ಮೌನ ಮುನಿಯಂತಾಗಿ ಬಿಡುತ್ತಿದ್ದರು.
ದಿನಗಟ್ಟಲೆ ಅವರು ವರ್ತಮಾನದಿಂದ ಅದೃಶ್ಯರಾಗಿ ಬಿಡುತ್ತಿದ್ದರು.
ನನಗೆ ಮೌನ ಅಭ್ಯಾಸವಾಗಿ ಬಿಟ್ಟಿತ್ತು.
ಧ್ಯಾನದ ಮೌನವಲ್ಲ, ಶವದ ಮೌನ. ಸ್ಮಶಾನ ಮೌನ.
ನೀನು ಈ ಗೂಡಿನಲ್ಲಿ ಹೇಗಿದ್ದೆ ? ಬಹಳ ತಡವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ.
ಈವರೆಗೆ ಪ್ರಕಟವಾಗಿರುವ ವ್ಯಾಸರ ಕಥೆ, ಕವನಗಳೆಲ್ಲವೂ ಮೂರಕ್ಷರದ್ದು, ಅದು ಅವರ ವಿಶೇಷತೆ. ಮಿತ್ರ ಮುರಳಿಯೊಂದಿಗೆ ಅವರನ್ನು ಭೇಟಿಯಾಗಿ ಬಂದ ಮೇಲೆ ಊರಿಗೆ ಹೋದಾಗಲೆಲ್ಲ, ಹಿರಿಯ ಜೀವದೊಂದಿಗೆ ಒಂದಿಷ್ಟು ಹೊತ್ತು ಕಳೆದು ಬರುವುದು ರೂಢಿ. ಅವರೊಂದಿಗೆ ಮಾತನಾಡುವಾಗೆಲ್ಲ ನನಗೆ ತೇಜಸ್ವಿ, ಖಾಸನೀಸರ ನೆನಪು ಆಗಾಗ ಕಾಡುತ್ತಿರುತ್ತೆ. ತೇಜಸ್ವಿಯೂ ಪ್ರಶಸ್ತಿ, ಸನ್ಮಾನಗಳಿಂದ ದೂರ ಉಳಿದವರು, ಖಾಸನೀಸರಂತೂ ಹದಿನೇಳು ವರ್ಷಗಳ ಕಾಲ ಪಾರ್ಕಿನ್‌ಸನ್ ಖಾಯಿಲೆಯಲ್ಲಿ ನರಳಿ ಇಹಲೋಕ ತ್ಯಜಿಸಿದ್ದರು. ಆದರೆ ಅವರ ಕಥೆಗಳಲ್ಲಿ ಮಾತ್ರ ಖಾಸನೀಸ ಇನ್ನೂ ಜೀವಂತವಾಗಿದ್ದಾರೆ.
ಇತ್ತೀಚೆಗೆ ಮತ್ತೊಬ್ಬ ಪತ್ರಕರ್ತ ಮಿತ್ರ ಹರೀಶ್ ಆದೂರ್ ಸಂದೇಶವೊಂದನ್ನು ಕಳುಹಿಸಿದ್ದ, ಮೂಡುಬಿದಿರೆಯ ತಮ್ಮ ಮನೆಯಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಇಟ್ಟುಕೊಂಡಿದ್ದೇನೆ. ಕಾರ್ಯಕ್ರಮದಲ್ಲಿ ವ್ಯಾಸರು ಭಾಗವಹಿಸುತ್ತಿದ್ದಾರೆ ಅಗತ್ಯವಾಗಿ ಬರಬೇಕೆಂದು ವಿನಂತಿಸಿಕೊಂಡಿದ್ದ. ಅನಿವಾರ್ಯ ಕಾರಣಗಳಿಂದ ಹೋಗಲಾಗಿಲ್ಲ. ಸಭೆ, ಸಮಾರಂಭದಿಂದ ದೂರ ಉಳಿಯುವ ವ್ಯಾಸರು ಯುವ ಬರಹಗಾರನ ಒತ್ತಾಯಕ್ಕೆ ಮಣಿದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ತುಂಬಾ ಸಂತೋಷ ನೀಡಿತ್ತು. ಜತೆಗೆ ಆದೂರ್‌ನಂತಹ ಮಿತ್ರರ ಸಾಹಿತ್ಯ ಚಟುವಟಿಕೆಗಳು ಶ್ಲಾಘನೀಯ.
ಆ ನೆಲೆಯಲ್ಲಿ ತಮ್ಮ ಪಾಡಿಗೆ ತಾವು ಕೃಷಿಯೊಂದಿಗೆ, ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಮೌನ ಹಕ್ಕಿ ವ್ಯಾಸರಿಗೆ ಅಕ್ಷರಗಳ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಕೋರುವೆ.