Wednesday, February 13, 2008

''ಪ್ರೇಮಲೋಕ'' ದ ವಿಸ್ಮಯ..!!


ಅಲ್ಲಿ ಎಲ್ಲವೂ ಇದೆ, ಕೊಂಚ ಮುನಿಸು, ಕೊಂಚ ಜಗಳ, ಈರ್ಷ್ಯೆ, ಮತ್ಸರ, ಬಾಹುಕತೆ, ಧಾರಾಳತನ, ಸ್ನೇಹಪರತೆ, ಹೃದಯ ವೈಶಾಲ್ಯತೆ, ನಿಷ್ಕಲ್ಮಶವಾದ ಹಾಗೂ ವಂಚನೆ, ಮದುವೆ, ವಿಚ್ಛೇದನ ಹೀಗೆ ಎಲ್ಲವೂ, ಇದೆ ಅಲ್ಲವೇ ''ಪ್ರೇಮಲೋಕ''..ಪ್ರೀತಿ ಕುರುಡು ಎಂಬ ಮಾತೊಂದಿದೆ, ಪ್ರೀತಿಯೇ ಹಾಗೆ ಅದು ಜಾತಿ, ಅಂತಸ್ತು, ವಯಸ್ಸು ಎಲ್ಲವನ್ನೂ ದಾಟಿ ಪ್ರೇಮಾಲಾಪದಲ್ಲಿ ಅವೆಲ್ಲವೂ ಕೊಚ್ಚಿಹೋಗಿ ಅಲ್ಲಿ ಪ್ರೇಮದ ಅಮೃತಧಾರೆ ಹರಿಯುತ್ತಿರುತ್ತದೆ.....

ವಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪಕ್ಕನೆ ನೆನಪಿಗೆ ಬಂದದ್ದೇ , ಯಶೋಧರ ಚರಿತೆ...ಇತಿಹಾಸ ಹಾಗೂ ಪುರಾಣ ಸೇರಿದಂತೆ ಕನ್ನಡದ ಕಾವ್ಯ ಪರಂಪರೆಯಲ್ಲಿ ಇಂತಹ ಅದ್ಭುತ ಪ್ರೇಮಕಾವ್ಯಗಳು ಹೇರಳವಾಗಿವೆ. ಪ್ರೀತಿ ಕುರುಡು ಮತ್ತು ಅದು ಎಲ್ಲವನ್ನೂ ಮೀರಿ ಹೇಗೆ ಪ್ರೇಮಪಾಶದೊಳಕ್ಕೆ ಬಂಧಿಯಾಗುತ್ತಾರೆ ಎಂಬುದಕ್ಕೆ ಕನ್ನಡದ ರನ್ನತ್ರಯರಲ್ಲಿ ಒಬ್ಬನಾದ ಜನ್ನ ಕವಿಯ ಯಶೋಧರ ಚರಿತೆ ಉತ್ತಮ ಪ್ರೇಮ ಕಾವ್ಯವಾಗಿದೆ.

ಜನ್ನ ಕವಿ ರಚಿಸಿದ ಯಶೋಧರ ಚರಿತೆ ಸಂಕಲ್ಪ ಹಿಂಸೆ ಕೃತಿಯ ಕೇಂದ್ರ ಬಿಂದುವಾದರೂ ಕೂಡಾ ಅದು ಈಗಲೂ ಕಾಡುವ ಸುಂದರವಾದ ಪ್ರೇಮ ಕಥನ...ಯಶೋಧರ ರಾಜನ (ಯಕ್ಷಗಾನದ ಖ್ಯಾತ ಭಾಗವತರಾದ ದಿ.ಪಿ.ಕಾಳಿಂಗ ರಾವ್ ಅವರ ಅಮೃತಮತಿ ಯಕ್ಷಗಾನವೂ ಕೂಡ ಬಹಳಷ್ಟು ಹೆಸರು ಗಳಿಸಿತ್ತಲ್ಲದೆ, ಕಾಳಿಂಗ ರಾವ್ ಅವರ ಕಂಚಿನ ಕಂಠದಿಂದ ಹೊರಹೊಮ್ಮುತ್ತಿದ್ದ ಅದರಲ್ಲಿನ ರೂಪಕ ರಾಗಗಳು ಕೇಳುಗರ ಮತ್ತೇರಿಸುತ್ತಿತ್ತು, ಆ ಪದಗಳು ಈಗಲೂ ಕಿವಿಯಲ್ಲಿ ರಿಂಗಣಿಸುತ್ತದೆ)
ಪತ್ನಿ, ರಾಣಿ ಅಮೃತಮತಿ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದ ಆಕೆಗೆ ಸಕಲ ಐಶ್ವರ್ಯವೂ ಇದ್ದಿತ್ತು. ಆದರೆ ಅಂತಹ ಚೆಲುವಿನ ಅಮೃತಮತಿಗೆ, ಅರಮನೆಯ ಪಕ್ಕದಿಂದ ತೇಲಿಬರುತ್ತಿದ್ದ ಕೊಳಲನಾದ ಆಕೆಯ ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸುತ್ತದೆ. ರಾಗದ ಜಾಡನ್ನು ಹಿಡಿದು ಅರಸುತ್ತ ಬಂದ ಆಕೆಗೆ ಕಾಣಸಿಕ್ಕಿದ್ದು, ಅರಮನೆಯ ಮಾವುತ.

ರೂಪದಿಂದ ಚೆಲುವನಲ್ಲದ್ದರೂ ಆತನ ಕೊಳಲಿನಿಂದ ಹೊರಹೊಮ್ಮುವ ರಾಗ ಅಮೃತಮತಿಯನ್ನು ಬಿಟ್ಟುಬಿಡದೆ ಕಾಡುತ್ತೇ, ಈ ನಾದಕ್ಕೆ ಸೋತ ರಾಣಿ ಅಮೃತಮತಿ ಮಾವುತನಿಗೆ ಮನಸ್ಸು ಮತ್ತು ದೇಹವನ್ನೂಪ್ಪಿಸುತ್ತಾಳೆ. ಹೀಗೆ ಮಾವುತನೊಂದಿಗೆ ಅಮೃತಮತಿ ಪ್ರೇಮ ಸಲ್ಲಾಪ ನಿರಂತರವಾಗಿ ನಡೆಯುತ್ತಿರುತ್ತದೆ. ಒಮ್ಮೆ ರಾಜ ಅಮೃತಮತಿಯನ್ನು ಹಿಂಬಾಲಿಸಿ ಬಂದಾಗ, ಆತ ಕಂಡದ್ದು, ಮಾವುತನ ತೋಳತೆಕ್ಕೆಯಲ್ಲಿ ಬಂಧಿಯಾಗಿದ್ದ ರಾಣಿ ಅಮೃತಮತಿಯನ್ನ!!, ಆ ಕ್ಷಣದಲ್ಲೇ ಆಕೆಯನ್ನು ಕೊಲ್ಲಬೇಕೆಂದು ಸಂಕಲ್ಪಿಸುತ್ತಾನೆ, ಆದರೆ ಜಿನ ಧರ್ಮ ಆತನನ್ನ ತಡೆಯುತ್ತೆ, ಆಕೆಯ ವಿಷಯ ತಿಳಿದೂ ಯಶೋಧರ ಸುಮ್ಮನಿರುತ್ತಾನೆ.

ಆದರೆ ರಾಜನ ತಾಯಿ ರಾಜಮಾತೆ ಚಂದ್ರಮತಿಗೆ ಮಗನ ಬೇಗುದಿ ತಿಳಿಯುತ್ತೆ, ಸಂಕಲ್ಪ ಹಿಂಸೆಯನ್ನು ನಿವಾರಿಸಲು ಹಿಟ್ಟಿನ ಕೋಳಿ ಬಲಿ ಕೊಡಲು ನಿರ್ಧರಿಸುತ್ತಾರೆ. ಆದರೆ ಬಲಿಕೊಡುವ ಸಂದರ್ಭದಲ್ಲಿ ಹಿಟ್ಟಿನ ಕೋಳಿ ಒಳಗೆ ಸೇರಿಕೊಂಡಿದ್ದ ಪ್ರೇತಾತ್ಮವೊಂದು ಜೀವತಳೆದು ಕಿರುಚಿಕೊಳ್ಳುತ್ತದೆ. ಅದು ಮತ್ತೆ ಸಂಕಲ್ಪ ಹಿಂಸೆಯಾಗಿ ಕಾಡತೊಡಗುತ್ತದೆ. ಮುಂದೆ ಯಶೋಧರ ಮತ್ತು ಚಂದ್ರಮತಿ ಪಶು-ಪಕ್ಷಿ ನಾನಾ ವಿಧದಲ್ಲಿ ಜನ್ಮವೆತ್ತಿ , ಅಂತಿಮವಾಗಿ ಅಭಯ ರುಚಿ ಹಾಗೂ ಅಭಯಮತಿ ಎಂಬ ಅಣ್ಣ-ತಂಗಿಯರಾಗಿ ಹುಟ್ಟುತ್ತಾರೆ.

ಅದೇ ರೀತಿ ಜನ್ನನ ಅನಂತನಾಥ ಪುರಾಣ, 13ನೇ ಶತಮಾನದ ದೇವ ಕವಿಯ ಕುಸುಮಾವಳಿ, ನೇಮಿಚಂದ್ರನ ಲೀಲಾವತಿ, ಬಾಣನ ಕಾದಂಬರಿ, ಸುವಿಂಧುವಿನ ವಾಸವದತ್ತೆ, ಬೌದ್ಧ ಸಾಹಿತ್ಯದ ಮಣಿಚೋರ ಜಾತಕ, ಶುಭೆಯ ಕಥೆ, ಮಹಾಭಾರತದಲ್ಲಿನ ನಳದಮಯಂತಿ, ಕನಕದಾಸರ ಮೋಹನ ತರಂಗಿಣಿ ಸೇರಿದಂತೆ ದೇಶಿಯ ಮತ್ತು ಪೌರಾತ್ಯ ಸಾಹಿತ್ಯಗಳ ಕಾವ್ಯ ಪ್ರಪಂಚದಲ್ಲಿ ಇಂತಹ ಹಲವಾರು ಪ್ರೇಮ ಕಾವ್ಯಗಳು ದೊರೆಯುತ್ತದೆ.