Monday, January 7, 2008

ಮುನಿಯಾಲ್ ಎಂಬ ' ಅಲೆಮಾರಿ '


ನಾವು ಎಲ್ಲರೊಂದಿಗೂ ಬೆರೆಯುತ್ತಾ, ಹರಟೆ ಹೊಡೆಯುತ್ತಿರುತ್ತೇವೆ. ಆದರೆ ಎಲ್ಲರಿಗೂ ಎಲ್ಲಾ ವಿಷಯಗಳಲ್ಲೂ ಆಸಕ್ತಿಯಾಗಲಿ, ಕೇಳುವ ವ್ಯವಧಾನ ಇರುವುದಿಲ್ಲ. ಹಾಗೆಯೇ ಪತ್ರಕರ್ತ ರಾದವ ರಿಗೆ ಪ್ರತಿಕ್ಷೇತ್ರದ ಬಗ್ಗೆ ಕುತೂಹಲ, ಆಸಕ್ತಿ ಇರಬೇಕಾಗುತ್ತದೆ. ಆ ಕಾರಣಕ್ಕಾಗಿಯೇ ಕೆಲವರು ಬಹಳಷ್ಟು ಆತ್ಮೀಯರಾಗುತ್ತಾರೆ.

ನಾವು ಒಂದೇ ವಿಷಯಕ್ಕೆ ಗಂಟು ಬಿದ್ದು ಮಿತ್ರರೊಡನೆ ಕೊರೆಯುತ್ತಿದ್ದರೆ ಅದೂ ಒಂದು ರೀತಿಯಲ್ಲಿ ಬೋರು ಹೊಡೆಸುತ್ತದೆ. ಅದನ್ನು ಬಿಟ್ಟು ಬೇರೆ ವಿಷಯಕ್ಕೆ ಹೊರಳಿದಾಗ ಹೋ... ಯಾಕ್ರಿ ಸುಮ್ಮನೆ ಸಾಹಿತ್ಯ, ವಿಜ್ಞಾನ, ವಿಸ್ಮಯ ಅಂತ ತಲೆ ತಿಂತೀರಾ ಅನ್ನೋ ಅಸಡ್ಡೆಯೂ ಅಷ್ಟೇ ರೇಜಿಗೆ ಹುಟ್ಟಿಸುತ್ತದೆ. ಅದಕ್ಕಾಗಿ ನನಗೆ ಮುನಿಯಾಲ್ ಗಣೇಶ್ ಶೆಣೈಯಂತಹ ಹಿರಿಯರ ವ್ಯಕ್ತಿತ್ವ ತುಂಬಾ ಖುಷಿ ಕೊಡುತ್ತದೆ.

ಬೆಂಗಳೂರಿನ ಕಾಂಕ್ರೀಟ್ ಕಾಡುಗಳ ಮಧ್ಯೆ ನೆಲೆಸಿದ್ದ ಮುನಿಯಾಲರು ಆ ಜಂಡವೇ ಬೇಡ ಎಂದು ಕುಂದಾಪುರ ತಾಲೂಕಿನ ಗಾವಳಿಯ ಸ್ವಂತ ಜಮೀನಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಪತ್ರಕರ್ತರಾಗಿ, ಸಾಹಿತಿಯಾಗಿ, ಅಲೆಮಾರಿ, ಪುಸ್ತಕ ವ್ಯಾಪಾರಿ, ಪ್ರಕಾಶಕ ಹೀಗೆ ಎಲ್ಲವೂ ಆಗಿರುವ ಮುನಿಯಾ ಲರು ' ಬಹುಮುಖಿ ' ವ್ಯಕ್ತಿತ್ವ ಹೊಂದಿದವರು.

ಅವರೊಡನೆ ಮಾತನಾಡಿದ ಯಾರಿಗಾದರೂ ಬೇಜಾರು ಅಥವಾ ಬೋರು ಅನ್ನಿಸುವುದಿಲ್ಲ. ಗಾವ ಳಿಯ ಕುಗ್ರಾಮದಿಂದ ಹಿಡಿದು ಚೀನಾ, ಟಿಬೇಟ್, ಬೌದ್ಧ, ಜೈನ, ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಎಡ, ಬಲ, ಆಯುರ್ವೇದ ಎಲ್ಲ ವಿಚಾರಗಳ ಕುರಿತು ಬಹು ಸ್ವಾರಸ್ಯವಾಗಿ ವಾಗ್ಝರಿಯನ್ನು ಹರಿಸುತ್ತಾರೆ.

ಅಂತಹ ಮಾತು, ಚರ್ಚೆ ಮೌಲ್ಯಯುತವಾಗಿರುತ್ತದೆ. ಸ್ವತಃ ಪುಸ್ತಕ ವ್ಯಾಪಾರಿಗಳಾಗಿರುವ ಅವರು ಈಗಾಗಲೇ ದೇಶದ ಹಲವಾರು ಭಾಗಗಳಿಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ ಹಲವಾರು ವಿಷಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. 20ಕ್ಕೂ ಅಧಿಕ ಪುಸ್ತಕ ಬರೆದಿದ್ದಾರೆ.


50ರ ಆಸುಪಾಸಿನಲ್ಲಿರುವ ಮುನಿಯಾಲರ ಅಲೆಮಾರಿ ಬದುಕು ಮಾತ್ರ ನಿಂತಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಸ್ವಭಾವದ ಅವರು ಮಾನಸ ಸರೋವರ, ಕೈಲಾಸ ಪರ್ವತ, ಸಿಕ್ಕಿಂ, ಲಕ್ಷದ್ವೀಪ, ಚಂದ್ರಕಣಿ ಪಾಸ್ ಹೀಗೆ ಎಲ್ಲೆಂದರಲ್ಲಿ ಅಲೆದಾಡುತ್ತಿರುತ್ತಾರೆ. ಮತ್ತು ಅದನ್ನು ಅಷ್ಟೇ ಅಂದವಾಗಿ ಅಕ್ಷರರೂಪಕ್ಕಿಳಿಸಿ ಸಾಹಿತ್ಯಾಸಕ್ತರಿಗೆ ಉಣಬಡಿಸುತ್ತಾರೆ.

ವಿಜ್ಞಾನದ ಬಗ್ಗೆ, ಮಕ್ಕಳ ಸಾಹಿತ್ಯದ ಬಗ್ಗೆ ಪ್ರತಿಯೊಂದು ವಿಷಯದ ಕುರಿತು ಮಾತನಾಡುತ್ತಾರೆ. ಇದೀಗ ಇತ್ತೀಚೆಗೆ ಸಿಕ್ಕಿಂ ರಾಜ್ಯಕ್ಕೆ ಭೇಟಿ ನೀಡಿರುವುದಾಗಿ ಹೇಳಿದ್ದ ಅವರು ಅಲ್ಲಿನ ಜನಾಂಗವೊಂದರ ಕುರಿತು ಮಾಹಿತಿ ಕಲೆ ಹಾಕಿರುವುದಾಗಿ ತಿಳಿಸಿದ್ದರು. ಜೀವವಿದ್ದರೂ ಸದಾ ಕಾಲ ಒಂದಲ್ಲ ಒಂದು ಬಗೆಯ ಅಶಾಂತಿಯಿಂದ ತೊಳಲಾಡುವವರಿಗೆ ಅನಂತ ಪ್ರಕೃತಿಯ ಮಡಿಲಲ್ಲಿ ನೆಮ್ಮದಿ ಸಿಗುವ ಸಾಧ್ಯತೆ ಇದ್ದರೆ ಅದು ಹಿಮಾಲಯ ಎಂದೆನ್ನುವ ಮುನಿಯಾಲರ ಹಿಮಾಲಯ ಚಾರಣದ ಅದ್ಭುತ ಕಥನವೇ ಚಂದ್ರಕಣಿ ಪಾಸ್.

ಅದೇ ರೀತಿ ದಟ್ಟವಾದ ಮಂಜು ಮುಸುಕಿದ ಕಣಿವೆಗಳಲ್ಲಿ ರಕ್ತ ಹೆಪ್ಪುಗಟ್ಟಿಸುವ ಚಳಿಗಾಳಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಎತ್ತರದ ಶಿಖರವೇರಿದ ರೋಮಾಂಚನ ವಿವರ ಅವರ ಮಂಜು ಮುಸುಕಿದ ಕಣಿವೆಗಳ ರೋಮಾಂಚಕಾರಿ ವಿವರಗಳು ಈ ಪುಸ್ತಕದಲ್ಲಿ ಲಭ್ಯ.

ನೀವು ಯಾವುದೇ ಊರಿಗೆ ಪ್ರವಾಸ, ಚಾರಣ ಹೋಗಬೇಕಿದ್ದರೂ ಅವರಲ್ಲಿ ಸುಲಭವಾದ ಉಪಾ ಯ ಮತ್ತು ಸಲಹೆಗಳನ್ನು ಸೂಚಿಸಬಲ್ಲರು. ಅಂತಹ ಸ್ಥಳಗಳನ್ನು ನೋಡಬೇಕೆಂಬ ಕುತೂಹಲ ಇದ್ದರೂ ಕೂಡ ನೀವು ಅವರನ್ನು ಸಂಪರ್ಕಿಸಿದರೂ (9448869963) ಸಾಕು. ಮುಂದೆ ನಿಮಗೆ ಬೇಕಾದ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ. ಈಗ ಹೇಳಿ ಇಂತಹ ವ್ಯಕ್ತಿತ್ವ ಬೋರು ಹಿಡಿಸುತ್ತದೆಯಾ ಅಂತ......