ಅಮೆರಿಕದ ಪ್ರಮುಖ ವಾಣಿಜ್ಯ ಕೇಂದ್ರವಾದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 2001 ಸೆಪ್ಟೆಂಬರ್ 11ರಂದು ಉಗ್ರರು ದಾಳಿ ನಡೆಸುವ ಮೂಲಕ ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡ ದೇಶವೇ ಬೆಚ್ಚಿ ಬಿದ್ದಿತ್ತು. ಹಾಗಂತ ಆ ದೇಶದ ರಾಜಕಾರಣಿಗಳು, ಅಧ್ಯಕ್ಷರು ಪಡಪೋಷಿತನ ತೋರಿಸಿಲ್ಲ, ಆ ಘಟನೆಯ ಬಳಿಕ ಅಲ್ ಕೈದಾ, ತಾಲಿಬಾನ್ ಎಷ್ಟೇ ಗಂಟಲು ಹರಿದುಕೊಂಡರು ಕೂಡ ಅಮೆರಿಕದ ಕೂದಲನ್ನು ಎರಡನೇ ಬಾರಿ ಕೊಂಕಿಸಲು ಸಾಧ್ಯವಾಗಿಲ್ಲ.
ಅವೆಲ್ಲಕ್ಕಿಂತ ಚಿಂತಿಗೀಡು ಮಾಡುವ ವಿಷಯ ಏನೆಂದರೆ, ಕಳೆದ ಎರಡು-ಮೂರು ವರ್ಷಗಳಿಂದ ಉಗ್ರರು ಲೀಲಾಜಾಲವಾಗಿ ಸ್ಫೋಟ ಕೃತ್ಯವನ್ನು ಎಸಗುತ್ತಲೇ ಇದ್ದರೂ ಕೂಡ, ಜನಸಾಮಾನ್ಯರಿಗೆ ವ್ಯವಸ್ಥಿತ ರಕ್ಷಣೆ ನೀಡಲು ಇನ್ನೂ ಸಾಧ್ಯವಾಗಿಲ್ಲ. ತಾಜ್, ಒಬೆರಾಯ್ ಹಾಗೂ ನಾರಿಮನ್ ಹೌಸ್‌ಗಳೊಳಗೆ ನುಗ್ಗಿದ ಉಗ್ರರು ಮನಬಂದಂತೆ ಗುಂಡಿನ ಸುರಿಮಳೆಗೆರೆದಿದ್ದಾರೆ. ಈ ಘಟನೆ ನ.27ರ ರಾತ್ರಿ 9.30ಕ್ಕೆ, ಘಟನೆ ನಡೆದಾಗ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಅವರು ಕೇರಳದಲ್ಲಿದ್ದರು. ವಿಷಯ ತಿಳಿದ ಮುಂಬೈಗೆ ವಾಪಸಾಗಿ, ರಾತ್ರಿ 11ಗಂಟೆಗೆ ನರಸತ್ತ ಗೃಹಸಚಿವ ಶಿವರಾಜ್ ಪಾಟೀಲ್ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಸುಮಾರು 200ಎನ್‌ಎಸ್‌ಜಿ ಕಮಾಂಡೋಗಳನ್ನು ಕಳುಹಿಸುವಂತೆ ಮನವಿ ಮಾಡಿದ್ದರು.
ಅಷ್ಟರಲ್ಲಿ ಹಲವಾರು ಮಂದಿ ಎನ್ಎಸ್‌ಜಿ ಕಮಾಂಡೋಗಳು ನಿದ್ರೆಗೆ ಶರಣಾಗಿದ್ದರು, ಎನ್ಎಸ್‌ಜಿಗೆ ವಿಷಯ ತಿಳಿಯುತ್ತಿದ್ದಂತೆಯೇ ಎಲ್ಲೂ ಪೂರ್ವ ತಯಾರಿಯೊಂದಿಗೆ ತಯಾರಾಗುವಾಗ, ಐಎಲ್-76ವಿಮಾನ ಇಂಧನ ತುಂಬಿಸಿಕೊಂಡು ಬರುವಾಗ ರಾತ್ರಿ 2ಗಂಟೆ ಕಳೆದಿತ್ತು! ಆ ಬಳಿಕ ದೆಹಲಿಗೆ ಆಗಮಿಸಿ, ಬಸ್ ಏರುವ ಹೊತ್ತಿಗೆ ಬೆಳಗಿನ ಜಾವ 5.25, ನಂತರ ಎರಡು ತಂಡಗಳಾಗಿ ತಾಜ್, ಒಬೆರಾಯ್‌ನಲ್ಲಿ ಕಾರ್ಯಾಚರಣೆಗೆ ತೊಡಗಿದಾಗ ಸಮಯ 7 ಗಂಟೆ. ಅಂದರೆ ಘಟನೆ ನಡೆದು 10ಗಂಟೆಯ ಬಳಿಕ ಕಾರ್ಯಾಚರಣೆ ಆರಂಭವಾಗಿತ್ತು. ನಮ್ಮ ರಕ್ಷಣಾ ವ್ಯವಸ್ಥೆಯ ಕಥೆ ಯುದ್ದ ಕಾಲೇ ಶಸ್ತ್ರಾಸ್ತ್ರಭ್ಯಾಸ ಎಂಬಂತಾಗಿದೆ. ಇಲ್ಲಿ ನಾನು ಎನ್‌ಎಸ್‌ಜಿಯನ್ನು ತೆಗಳುತ್ತಿಲ್ಲ. ಏನೇ ಆದರು ಶಂಖದಿಂದ ತೀರ್ಥ ಎಂಬಂತೆ, ದೆಹಲಿಯಿಂದ ಕಮಾಂಡೋ ಪಡೆ ಆಗಮಿಸಿ ಉಗ್ರರನ್ನು ಸದೆಬಡಿಯುವುದರೊಳಗೆ ಅವರೇನು ಕಡಲೆ ತಿನ್ನುತ್ತ ಕೂತಿರುತ್ತಾರಾ? ಅದೇ ರೀತಿ ಇತ್ತೀಚೆಗಷ್ಟೇ ಹುಬ್ಬಳ್ಳಿ ಸಮೀಪದ ಕಿರು ಸೇತುವೆಯೊಂದರ ಬಳಿ ಬಾಂಬ್ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂದೇಶ ರವಾನಿಸಲಾಗಿತ್ತು, ಆದರೆ ಬಾಂಬ್ ನಿಷ್ಕ್ರಿಯ ದಳ ಇರುವುದು ಬೆಂಗಳೂರಿನಲ್ಲಿ. ಅವರು ತಯಾರಿ ನಡೆಸಿ ಆ ಸ್ಥಳ ತಲುಪುವಾಗ ರಾತ್ರಿ 8ಗಂಟೆ ಕಳೆದಿತ್ತು!!...
ಇಷ್ಟೆಲ್ಲಾ ಸ್ಫೋಟ, ದಾಳಿ ನಡೆಯುತ್ತಿದ್ದರೂ ಕೂಡ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ, ಮಾಧ್ಯಮಗಳ ಮೂಲಕ ಹೇಳಿಕೆ ನೀಡುವುದು ಮತ್ತೆ ಸುಮ್ಮನಾಗುವುದು. ಮತ್ತೊಂದು ಅಂತಹುದೇ ದಾಳಿ ನಡೆದಾಗ ಮತ್ತೆ ಎಚ್ಚೆತ್ತುಕೊಳ್ಳುವುದು. ಹೀಗೆ ನಡೆದರೆ ಇನ್ನು ಮುಂದೆ ಎಲ್ಲಿಯೂ ನೆಮ್ಮದಿಯಿಂದ ತಿರುಗಾಡಲು ಸಾಧ್ಯವಿಲ್ಲದಂತಾಗುವ ಪರಿಸ್ಥಿತಿ ದೂರವಿಲ್ಲ ಎಂದೇ ಹೇಳಬೇಕಾಗುತ್ತದೆ. ಆಹಾ ಸೆಕ್ಯುಲರ್ ಇಂಡಿಯಾ, ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ದೈನೇಸಿ ಸ್ಥಿತಿ ನೋಡಿ, ಭಯೋತ್ಪಾದನೆ, ದೇಶದ್ರೋಹದಂತಹ ಬೀಭತ್ಸ ಘಟನೆ ಎಲ್ಲೆಂದರಲ್ಲಿ ರಣಕೇಕೆ ಹಾಕುತ್ತಿದ್ದರೆ, ದರಿದ್ರ ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಲೇ ಅಮಾಯಕರ ರಕ್ತಹೀರುವ ಉಗ್ರರ ಕೃತ್ಯಕ್ಕೆ ಇವರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದೇ ಹೇಳಬೇಕು. ಅದಿಲ್ಲದಿದ್ದರೆ ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾಯ್ದೆಯೊಂದನ್ನು ಜಾರಿಗೆ ತರಬೇಕು ಎಂಬ ಕೂಗಿಗೆ ಕಿವುಡರಂತೆ, ಈಗ ಇರುವ ನಮ್ಮ ಕಾನೂನೇ ಉಗ್ರರನ್ನು ಸದೆಬಡಿಯಲು ಬಲಿಷ್ಠವಾಗಿದೆ ಎಂಬ ಪೌರುಷದ ಮಾತುಗಳನ್ನಾಡುತ್ತಿದ್ದಾರೆ.
ಪೋಟಾ ಬೇಡ, ಟಾಡಾ ಬೇಡ, ಫೆಡರಲ್ ಏಜೆನ್ಸಿ ಬೇಡ ಎಂದೆನ್ನುವ ಈ ಕಚ್ಚೆಹರುಕ ರಾಜಕಾರಣಿಗಳಿಗೆ ಮಾತ್ರ ಎನ್ಎಸ್‌ಜಿ ಬ್ಲಾಕ್ ಕಮಾಂಡೋಗಳ ಭದ್ರಕೋಟೆಯ ರಕ್ಷಣೆ ಬೇಕು. ಅಲ್ಲದೇ ಈ ಮೊದಲು ಉಗ್ರರು ನಡೆಸುತ್ತಿರುವ ದಾಳಿಯ ವೈಖರಿಯೇ ಬದಲಾಗಿದೆ ಎಂದ ಮೇಲೆ ನಮ್ಮ ಒಬಿರಾಯನ ಕಾಲದ ರಕ್ಷಣಾ ವ್ಯವಸ್ಥೆ ಹಾಗೂ ಎಡಬಿಡಂಗಿ ಹೇಳಿಕೆ ನೀಡುತ್ತಲೇ ಕಾಲ ಕಳೆಯುತ್ತಿದ್ದರೆ ಜನಸಾಮಾನ್ಯರ ಗತಿ ಏನು? ಹಾಗೇ ಸ್ಫೋಟ ಕೃತ್ಯದ ಪ್ರಾಯಶ್ಚಿತ್ತ ಎಂಬಂತೆ ಗೃಹಸಚಿವ, ಮುಖ್ಯಮಂತ್ರಿ ತಲೆದಂಡದಿಂದ ಅದ್ಯಾವ ಪುರುಷಾರ್ಥ ಸಾಧ್ಯ.....