Sunday, December 5, 2010

ಜನರ ವಿಶ್ವಾಸಕ್ಕೆ ಕೊಳ್ಳಿ ಇಟ್ಟ ಭಂಡ ಸಿಎಂ ಯಡಿಯೂರಪ್ಪ!


ರಾಜ್ಯರಾಜಕಾರಣದಲ್ಲಿ ಮತ್ತೊಮ್ಮೆ ಭೂಗಳ್ಳತನದ ಆರೋಪ-ಪ್ರತ್ಯಾರೋಪ ಕೇಳಿ ಬರತೊಡಗಿದೆ. ಆದರೆ ಈಗಾಗಲೇ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿ ಶ್ಲಾಘನೀಯ ಕೆಲಸ ಕೈಗೊಂಡಿದ್ದು, ಸುಮಾರು ಮೂವತ್ತು ಸಾವಿರ ಕೋಟಿಗೂ ಹೆಚ್ಚು ಬೆಲೆ ಬಾಳುವ ಇಪ್ಪತ್ತು ಸಾವಿರ ಎಕರೆ ಭೂಗಳ್ಳತನವನ್ನು ಪತ್ತೆ ಹಚ್ಚಿದ್ದಾರೆ. ಅಷ್ಟೇ ಅಲ್ಲ ಭೂಗಳ್ಳರ ಜತೆ ಶಾಮೀಲಾದ ಮುನ್ನೂರು ಕಂದಾಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿತ್ತು.

ಈ ಲೂಟಿಯಲ್ಲಿ ಅತಿರಥ-ಮಹಾರಥ ಜನನಾಯಕರೇ ಪ್ರಮುಖ ಫಲಾನುಭವಿಗಳಾಗಿದ್ದಾರೆ. ಆದರೆ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿಯನ್ನು ಅಂದಿನ ಬಿಜೆಪಿ-ಜೆಡಿಎಸ್ ಸರಕಾರದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ರಚಿಸಿದ್ದರು. ವಿಪರ್ಯಾಸವೆಂದರೆ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ಅಧಿಕಾರದ ಗದ್ದುಗೆಗೆ ಏರಿ ಎರಡೂವರೆ ವರ್ಷ ಕಳೆದಿದೆ. ಈ ಸರಕಾರಕ್ಕೆ ನಿಜಕ್ಕೂ ಜನಪರ ಕಾಳಜಿ, ರಾಜಕೀಯ ಇಚ್ಛಾಶಕ್ತಿ ಇದ್ದಿದ್ದರೆ ಎ.ಟಿ.ರಾಮಸ್ವಾಮಿ ನೀಡಿದ್ದ ವರದಿಯ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳಬೇಕಿತ್ತು. ಆ ನಿಟ್ಟಿನಲ್ಲಾದರೂ ಘಟಾನುಘಟಿ ಭೂಗಳ್ಳರ ಕಳ್ಳಾಟಿಗೆ ಬಯಲಾಗುತ್ತಿತ್ತು. ಅಷ್ಟೇ ಅಲ್ಲ ಸಾವಿರಾರು ಕೋಟಿ ರೂ.ಬೆಲೆ ಬಾಳುವ ಭೂಮಿಯನ್ನು ವಶಪಡಿಸಿಕೊಳ್ಳಲು ದಿಟ್ಟ ಹೆಜ್ಜೆ ಇಡಬಹುದಿತ್ತು.

ಅದ್ಯಾಕೋ ಕಳೆದ ಐದು ದಶಕಗಳ ಕಾಲ (ಜನತಾ ಪರಿವಾರ ಹೊರತುಪಡಿಸಿ) ಕಾಂಗ್ರೆಸ್ಸಿಗರ ದ್ವೇಷದ, ಲೂಟಿಕೋರ ರಾಜಕಾರಣ ಕಂಡು ಬೇಸತ್ತಿದ್ದ ರಾಜ್ಯದ ಜನರಿಗೆ ಒಂದು ಬದಲಾವಣೆ ಕಾಣಬೇಕಿತ್ತು. ಹಾಗಾಗಿ ಈ ಹಿಂದಿನವರ ಹಾಗೇ ನಾವಲ್ಲ, ತತ್ವ, ಸಿದ್ದಾಂತ ಎಂದೆಲ್ಲ ಬೊಂಬಡ ಬಜಾಯಿಸಿ, ಹಸಿರು ಶಾಲು ಹೊದ್ದು ಅಧಿಕಾರದ ಗದ್ದುಗೆ ಏರಿದ್ದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಕೇವಲ ಎರಡೂವರೆ ವರ್ಷಗಳಲ್ಲಿಯೇ ಎಲ್ಲರೂ ನಿರೀಕ್ಷೆ ಹುಸಿಗೊಳಿಸಿ ಲೂಟಿಕೋರ, ಭ್ರಷ್ಟಚಾರದ ರಾಜಕಾರಣಕ್ಕೆ ಇಳಿದಿರುವುದು ದುರಂತ.

ಈಗ ಪ್ರತಿಪಕ್ಷಗಳು ಯಾವುದೇ ಆರೋಪ ಮಾಡಿದರೂ ನೀವು ಈ ಹಿಂದೆ ಏನು ಮಾಡಿದ್ದೀರಿ ಎಂದು ಬಾಯ್ಮುಚ್ಚಿಸುವ ರಾಜಕಾರಣ ಮಾಡುವ ಮೂಲಕ ತಾವು ಕೂಡ ಲೂಟಿ ಮಾಡಲು ಬಂದವರು. ನೀವು ಈ ಹಿಂದೆ ಮೇಯ್ದಿದ್ದೀರಿ. ನಾವೂ ಒಂದಿಷ್ಟು ಮೇಯುತ್ತೇವೆ ಎಂಬ ಧಾಟಿಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ನಡೆದುಕೊಳ್ಳುತ್ತಿದೆ. ರಾಜಕಾರಣಿಗಳ ಮಟ್ಟಿಗೆ ಮಾನ, ಮರ್ಯಾದೆ, ನೈತಿಕತೆ ಎಂಬ ಶಬ್ದವನ್ನು ಬಳಸುವುದೇ ಅಸಂಬದ್ಧ. ಯಾಕೆಂದರೆ ಪ್ರಸಕ್ತ ರಾಜಕಾರಣದಲ್ಲಿ ಆ ಶಬ್ದಗಳಿಗೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿರುವುದು ಪ್ರತಿದಿನವೂ ಸಾಬೀತಾಗುತ್ತಿದೆ.

ತಾವು ಕಾಂಗ್ರೆಸ್, ಜೆಡಿಎಸ್‌ಗಿಂತ ಭಿನ್ನ, ರಾಜ್ಯದ ಅಭಿವೃದ್ಧಿಯೇ ಮುಖ್ಯ ಎಂಬ ಇಚ್ಛಾಶಕ್ತಿ ಬಿಜೆಪಿಗೆ ಇದ್ದಿದ್ದರೆ. ಇಂತಹ ಲೂಟಿಗೆ ಇಳಿಯುತ್ತಿರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಸೇಡಿನ ರಾಜಕಾರಣಕ್ಕೂ ಇಳಿಯುತ್ತಿರಲಿಲ್ಲ. ಕಾಂಗ್ರೆಸ್ ವಂಶಪಾರಂಪರ್ಯ ರಾಜಕೀಯ ಮಾಡುತ್ತಿದೆ. ಅಪ್ಪ, ಮಕ್ಕಳು ಆಸ್ತಿ ಮಾಡಿದ್ದಾರೆ, ಲೂಟಿ ಮಾಡುತ್ತಿದ್ದಾರೆ ಎಂದೆಲ್ಲ ಅಬ್ಬರಿಸಿದ್ದ ಯಡ್ಡಿಯೇ ಈಗ ತಮ್ಮ ಕುಟುಂಬದ ಸಮಸ್ತ ಕಲ್ಯಾಣಕ್ಕೆ ಇಳಿದುಬಿಟ್ಟಿದ್ದಾರೆ. ಸಾಲದೆಂಬಂತೆ ಭೂ ಹಗರಣ ತನಿಖೆಯನ್ನು ಲೋಕಾಯುಕ್ತರು ನಡೆಸುತ್ತಿದ್ದರು ಕೂಡ ಮತ್ತೆ ನ್ಯಾ.ಪದ್ಮರಾಜ್ ನೇತೃತ್ವದ ಆಯೋಗ ರಚಿಸಿದ್ದಾರೆ.

ಅವೆಲ್ಲಕ್ಕಿಂತ ಅಸಹ್ಯ ಹುಟ್ಟಿಸುತ್ತಿರುವುದು ತಾವು ಕಳ್ಳರಾದರೂ ಕೂಡ ಇಡೀ ಭಾಜಪದ ಮುಖಂಡರು ಮುಖ್ಯಮಂತ್ರಿಯನ್ನು ಸೇರಿದಂತೆ ಎಲ್ಲರೂ ಸಮರ್ಥಿಸಿಕೊಳ್ಳುತ್ತಿರುವುದು. ಈ ಹಿಂದೆ ಭೂ ಹಗರಣದಲ್ಲಿ ಕಟ್ಟಾ ಸುಬ್ರಹ್ಮಣ್ಯ ವಿರುದ್ಧ ಆರೋಪ ಕೇಳಿಬಂದಾಗ ರಾಜೀನಾಮೆ ನೀಡಬೇಕೆಂಬ ಒತ್ತಡವನ್ನು ಪ್ರತಿಪಕ್ಷಗಳು ಹೇರಿದ್ದವು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಮಕ್ಕಳು ಮಾಡಿದ ತಪ್ಪಿಗೆ ಅಪ್ಪನಿಗೆ ಯಾಕೆ ಶಿಕ್ಷೆ ಎಂದು ಪ್ರಶ್ನಿಸಿದ್ದರು. ಏತನ್ಮಧ್ಯೆಯೇ ಖುದ್ದು ಮುಖ್ಯಮಂತ್ರಿಗಳೇ ತಮ್ಮ ಮಕ್ಕಳಿಗೆ, ಅಳಿಯನಿಗೆ ಭೂಮಿ ನೀಡಿದ ಆರೋಪದಲ್ಲಿ ತಾವೇ ಕುರ್ಚಿ ಕಳೆದುಕೊಳ್ಳುವ ಸಂದರ್ಭ ಎದುರಾದಾಗ ಕೋಟ್ಯಂತರ ರೂಪಾಯಿ ಪಕ್ಷದ ಹೈಕಮಾಂಡ್ ವರಿಷ್ಠರಿಗೆ ಕಪ್ಪ ನೀಡಿ ಮತ್ತೆ ವಿರಾಜಮಾನರಾಗಿದ್ದಾರೆ. ಇನ್ಮುಂದೆ ತನ್ನ ಕುಟುಂಬದ ಸದಸ್ಯರನ್ನು ದೂರು ಇಡುವುದಾಗಿಯೂ ಘೋಷಿಸಿದರು. ಈ ರಾದ್ಧಾಂತ ನಡೆಯುತ್ತಿರುವ ಬೆನ್ನಲ್ಲೇ ಲೋಕಾಯುಕ್ತರು ಐಟಿ-ಬಿಟಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಎಫ್ಐಆರ್ ದಾಖಲಿಸಿದ ಪರಿಣಾಮ ನಾಯ್ಡು ಏಕಾಏಕಿ ರಾಜೀನಾಮೆ ಸಲ್ಲಿಸಿದ್ದಾರೆ.

ಮಕ್ಕಳು ಮಾಡಿದ ತಪ್ಪಿಗೆ ಅಪ್ಪನಿಗೆ ಯಾಕೆ ಶಿಕ್ಷೆ? ಆರೋಪ ಮಾಡಿದ ಕೂಡಲೇ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದೆಲ್ಲ ಸಮರ್ಥನೆ, ಸಮಜಾಯಿಷಿ ನೀಡುತ್ತಿದ್ದರು. ಅಚ್ಚರಿ ಏನಪ್ಪಾ ಅಂದರೆ ಕಟ್ಟಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದಿರುವುದಾಗಿ ಬಿಜೆಪಿ ಮುಖಂಡರು ಸಾರುತ್ತಿದ್ದಾರೆ! ಅಷ್ಟಕ್ಕೂ ಸಾಲದೆಂಬಂತೆ ಎಫ್ಐಆರ್ ಮಾತ್ರ ಹಾಕಿರುವುದು ನಮಗೆ ನ್ಯಾಯಾಲಯದ ಮೇಲೆ ವಿಶ್ವಾಸ ಇರುವುದಾಗಿಯೂ ನಾಯ್ಡು ಮಹಾನುಭಾವ ಅತಿ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿರುವುದನ್ನು ಕೇಳಿದರೆ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ.

ರಾಜ್ಯ ರಾಜಕಾರಣದಲ್ಲಿ ಕಳೆದ ಐದು ದಶಕಗಳಲ್ಲಿ ರಾಜ್ಯದ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಹೊಡೆದ ಖದೀಮರು ಒಂದಲ್ಲ ಒಂದು ಕಾಲದಲ್ಲಿ ರಾಜ್ಯದ ಆಡಳಿತವನ್ನು ನಿಯಂತ್ರಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಸುತ್ತಮುತ್ತಲ ನೂರಾರು ಎಕರೆ, ಅರಣ್ಯ ಭೂಮಿ, ದರಖಾಸ್ತು ಜಮೀನು, ಗೋಮಾಳ, ಕೆರೆಕಟ್ಟೆಯನ್ನು ಒಂದೆಡೆ ಕಾಂಗ್ರೆಸ್ಸಿಗರು ಮತ್ತೊಂದೆಡೆ ಖೋಡೆ ಧಣಿಗಳ ಪಾಲಾಗಿದೆ. ಇಂತಹ ನುಂಗಣ್ಣಗಳನ್ನು ದೂರವಿಟ್ಟು ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದ ಗದ್ದುಗೆ ಏರಿಸಿದ್ದರ (ರೆಡ್ಡಿ ಬ್ರದರ್ಸ್ ಸೇರಿದಂತೆ ಹಲವರ ಮೇಲೆ ಭ್ರಷ್ಟಾಚಾರಾ, ಮೈನಿಂಗ್ ಮಾಫಿಯಾ, ಭೂ ಹಗರಣದ ಆರೋಪ) ಫಲಿತಾಂಶ ರಾಜ್ಯದ ಜನರಿಗೆ ಎರಡೂವರೆ ವರ್ಷಗಳಲ್ಲಿಯೇ ಜಗಜ್ಜಾಹೀರಾಗಿದೆ. ಬಿಹಾರದಲ್ಲಿ (ಲಾಲೂವಿನ ಗೂಂಡಾ ರಾಜ್ಯ ) ಜನಪರ ಆಡಳಿತ ನೋಡಿ ನಿತೀಶ್ ಕುಮಾರ್ ಅವರನ್ನು ಎರಡನೇ ಬಾರಿಗೆ ಮತದಾರರ ಆಯ್ಕೆ ಮಾಡಿದ್ದಾನೆ. ಕರ್ನಾಟಕದಲ್ಲಿ ಯಡಿಯೂರಪ್ಪ ಜನರ ವಿಶ್ವಾಸ, ಕನಸನ್ನು ನುಚ್ಚು ಮಾಡಿದ್ದಾರೆ. ಇದು ಇಬ್ಬರ ನಾಯಕರ ನಡುವೆ ಇರುವ ವ್ಯತ್ಯಾಸ ಅಷ್ಟೇ! ಹಾಗಾಗಿ ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಒಬ್ಬ ಭಂಡ, ಭ್ರಷ್ಟ, ಲಚ್ಚೆಗೆಟ್ಟ ಮುಖಂಡರಾಗಿ ಬಿಂಬಿತರಾಗಬಹುದೇ ಹೊರತು, ಜನಪರ ನಾಯಕನಾಗಿ ಅಲ್ಲ ಎಂಬುದನ್ನು ಮನಗಾಣಬೇಕಾಗಿದೆ....