ಆದರೆ ನನಗೆ ಪಡುಕೋಣೆ ಜೊತೆ ಮರೆಯಲಾರದ ನಂಟಿದೆ. ಅಜ್ಜನ ಮನೆ ಇದೆ, ನನ್ನ ಹಲವಾರು ಬಾಲ್ಯ ಸ್ನೇಹಿತರಿದ್ದಾರೆ. ಅಜ್ಜ ಹೇಳುತ್ತಿದ್ದ ರೋಚಕ ಕಥೆಗಳ ನೆನಪಿದೆ. ನಾವು ಪಡುಕೋಣೆಗೆ ಹೋಗಬೇಕಿದ್ದರೆ ಮರವಂತೆಗೆ ಬಂದು ದೋಣಿ ದಾಟಿ ಪಡುಕೋಣೆ ತಲುಪಬೇಕಿತ್ತು. ಅದು ಬಿಟ್ಟರೆ ನಮ್ಮ ತ್ರಾಸಿಯಿಂದ ಹೋಗಿ ಕೂಗು ಹಾಕಿ ದೋಣಿಗಾಗಿ ಕಾದು ಪಡುಕೋಣೆ ತಲುಪಬೇಕಿತ್ತು. ನಾನು ಚಿಕ್ಕವನಿದ್ದಾಗ ಪಡುಕೋಣೆಗೆ ಹೋದಾಗ ಕೆಲವೆಡೆ ಸಂಕ (ಸಣ್ಣ ತೊರೆ ದಾಟಲು ಅಡ್ಡಲಾಗಿ ಹಾಕುತ್ತಿದ್ದ ಮರ) ದಾಟುವಾಗ ಎದೆ ಹೊಡೆದುಕೊಳ್ಳುತ್ತಿತ್ತು. ಯಾಕೆಂದರೆ ಆಯತಪ್ಪಿದ್ರೆ ನೀರಿಗೆ ಬೀಳುತ್ತೇನೆ ಎಂಬ ಭಯ. ಒಂದು ರೀತಿಯ ಪುಕ್ಕಲು. ಅಂತೂ ಧೈರ್ಯ ಮಾಡಿ ಕೊನೆಗೂ ಅದನ್ನು ದಾಟುತ್ತಿದ್ದೆ.ಕೆಲವೊಮ್ಮೆ ಮಧ್ಯಾಹ್ನದ ಉರಿ ಬಿಸಿಲಿನ ಸಮಯದಲ್ಲೂ ಇಡೀ ಊರೇ ನೀರವ ಮೌನ ಆವರಿಸಿದಂತೆ ಇರುತ್ತಿತ್ತು. ಆಗ ಅಪರೂಪಕ್ಕೊಮ್ಮೆ ಐಸ್ ಕ್ಯಾಂಡಿ ಅಂತ ಸೈಕಲ್ ದೂಡುತ್ತ ವ್ಯಕ್ತಿಯೊಬ್ಬ ಬರುತ್ತಿದ್ದ, ಆ ಕೂಗು ಕೇಳಿ ನಾವು ಗದ್ದೆ ಕಂಠದ ಮೇಲಿಂದ ಓಡಿಹೋಗಿ ಐಸ್ ಕ್ಯಾಂಡಿ ತಂದು ತಿನ್ನುತ್ತಿದ್ದೇವು. ಸಂಜೆ ಆಗುತ್ತಿದ್ದಂತೆ ಮತ್ತೆ ನೀರವ ಮೌನ, ಚೀರುಂಡೆಗಳ ಸದ್ದು, ವಿದ್ಯುತ್ ಇಲ್ಲ, ಟಿವಿ ಮಾತೇ ಇಲ್ಲ...ಮೊಬೈಲ್, ಇಂಟರ್ನೆಟ್ ಯಾವ ಸುಡುಗಾಡು ಇಲ್ಲದ ಕಾಲವದು. ಅಕ್ಕಪಕ್ಕದ ಮನೆಯಿಂದ ಆಗ ಕೇಳಿಬರುತ್ತಿದ್ದದ್ದು ಭಜನೆ, ಕೆಲವು ಮನೆಗಳಿಂದ ಯೇಸು ಪ್ರಾರ್ಥನೆ...7.30ಕ್ಕೆಲ್ಲ ಊಟ, ಕಾಡು ಹರಟೆ, ನಿದ್ದೆ. ಬೇಸಿಗೆ, ಚಳಿಗಾಲ ಖುಷಿ ಕೊಡುತ್ತಿದ್ದರೆ, ಮಳೆಗಾಲದ ನೆರೆ ಮಾತ್ರ ಪಡುಕೋಣೆಗೆ ಶಾಪದಂತೆ ಆಗಿತ್ತು. ಅಲ್ಲದೇ ಸೇತುವೆ ಇಲ್ಲದಿರುವುದು ಕೂಡಾ ದೊಡ್ಡ ತೊಂದರೆಯೇ ಆಗಿತ್ತು. ಯಾಕೆಂದರೆ ಹೆಚ್ಚಿನವರ ಬಳಿ ಸ್ವಂತದ ದೋಣಿ ಇಲ್ಲವಾಗಿತ್ತು. ಪಡುಕೋಣೆಯಿಂದ ಕುಂದಾಪುರ ಅಥವಾ ಹೊರಗೆ ಹೋಗಿದ್ದವರು ಸಂಜೆಯೊಳಗೆ ಮನೆಗೆ ಬರಬೇಕಾಗಿತ್ತು. ಇಲ್ಲದಿದ್ದರೆ ಮರವಂತೆಯಲ್ಲಿ ಬಹುಶಃ 9.30ರ ತನಕ ದೋಣಿ ದಾಟಿಸುತ್ತಿದ್ದರು. ಇದೀಗ ಸುಮಾರು ಹಲವು ದಶಕಗಳ ನಂತರ ಪಡುಕೋಣೆ ಮರವಂತೆ ವರಾಹಸ್ವಾಮಿ ದೇವಸ್ಥಾನ ಸಮೀಪದಿಂದ ಸೇತುವೆ ನಿರ್ಮಾಣವಾಗುತ್ತಿದೆ. ಆ ಮೂಲಕ ಪಡುಕೋಣೆ ಜನತೆಯ ಬೇಡಿಕೆಗೆ ಮನ್ನಣೆ ದೊರಕಿದಂತಾಗಿದೆ. ಈ ಸೇತುವೆ ನಿರ್ಮಾಣ ನನಗೆ ಪಡುಕೋಣೆಯಲ್ಲಿ ಕಳೆದ ದಿನಗಳ ನೆನಪಿಗೆ ಕಾರಣವಾಗಿದೆ.
Thursday, May 14, 2015
ಪಡುಕೋಣೆ ನನಗೆ ತುಂಬಾ ಇಷ್ಟ...ಅದೆಷ್ಟೋ ನೆನಪುಗಳು!
ಪಡುಕೋಣೆ ನನಗೆ ತುಂಬಾ ಇಷ್ಟ. ಹಾಗಂತ ಹೇಳಿದರೆ ಪಡುಕೋಣೆಯವರಿಗೆ ತುಸು ಕೋಪ ಬರಬಹುದು, ಅದಕ್ಕೆ ಕಾರಣ ಮಳೆಗಾಲದಲ್ಲಿ ಪಡುಕೋಣೆಯ ನದಿಪಾತ್ರದ ಸಮೀಪ ಇರುವ ಹಡವು ಗ್ರಾಮದವರ ಸ್ಥಿತಿ ತುಂಬಾ ಘೋರವಾದದ್ದು. ನನ್ನ ಅಮ್ಮನ ಮನೆ, ನನ್ನ ಅಜ್ಜನ ಮನೆ ಪಡುಕೋಣೆ. ಹಾಗಾಗಿ ಮಳೆಗಾಲದ ನೆರೆಗೆ ಅಲ್ಲಿನವರು ಪಾಡು ನಾನು ಕಣ್ಣಾರೆ ಕಂಡವನು. 1984ರಲ್ಲಿ ಬಂದ ದೊಡ್ಡ ನೆರೆಗೆ ಹಲವು ದಿನಗಳ ಕಾಲ ಮನೆ ಬಿಟ್ಟಿದ್ದರು. ನಾನು ಚಿಕ್ಕವನಿದ್ದಾಗ ಪಡುಕೋಣೆಯಲ್ಲಿ ಹಲವು ಸಮಯ ಕಳೆದಿದ್ದೆ. ಆ ಪುಟ್ಟ ಊರು ನಮಗೆ ಆಗ ತುಂಬಾ ಸುಂದರ. ಅಲ್ಲಿನ ವಿಶಾಲ ಗದ್ದೆಗಳು, ತಣ್ಣನೆ ಹರಿಯುತ್ತಿದ್ದ ಸೌಪರ್ಣಿಕಾ ನದಿ, ಅಜ್ಜ, ಅಜ್ಜಿ ಬೈದರೂ ಕದ್ದು ಮುಚ್ಚಿ ಈಜಾಡುತ್ತಿದ್ದದ್ದು, ಸಣ್ಣ, ಸಣ್ಣ ಹೊಳೆ ಸಾಲಿನಲ್ಲಿ ಗಾಳ ಹಾಕಿ ಕೂರುತ್ತಿದ್ದ ದಿನಗಳು ನನ್ನ ಕಣ್ಣ ಮುಂದೆ ಬರುತ್ತಿದೆ.
ಈಗ ಪಡುಕೋಣೆ ಎಂದ ಕೂಡಲೇ ಥಟ್ಟನೆ ನೆನಪಾಗೋದು ಬಹುತೇಕರಿಗೆ ನಟಿ ದೀಪಿಕಾ ಪಡುಕೋಣೆ. ಗೂಗಲ್ ಸರ್ಜ್ ಗೆ ಹೋಗಿ ಪಡುಕೋಣೆ ಅಂತ ಹಾಕಿದರೂ ಆಕೆಯದೇ ಫೋಟೊ ಬರುತ್ತೆ! ಆದರೆ ಆಕೆ ಪಡುಕೋಣೆಗೆ ಬಂದಿದ್ದಾಗಲಿ, ಪಡುಕೋಣೆ ಯಾವ ದಿಕ್ಕಿನಲ್ಲಿ ಇದೆ ಎಂದು ಆಕೆಗೆ ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ. ಆಕೆ ತಂದೆ ಪ್ರಕಾಶ್ ಪಡುಕೋಣೆಯನ್ನು ಉದ್ಯಮಿ ಸುರೇಶ್ ಪಡುಕೋಣೆ (ಮುಂಬೈ ಅಪೋಲೋ ಮಾಲೀಕ, ಸುಖ್ ಸಾಗರ್ ಸುರೇಶ್ ಪಡುಕೋಣೆ ಅಲ್ಲ) ಆಯೋಜಿಸಿದ್ದ ಕ್ರಿಕೆಟ್ ಮ್ಯಾಚ್ ಸಮಾರಂಭಕ್ಕೆ ಕರೆದಿದ್ದ ನೆನಪು ನನಗೆ. ಅದು ಹೊರತುಪಡಿಸಿದರೆ, ಅವರಿಗೂ ಪಡುಕೋಣೆಗೆ ಇರುವ ನಂಟು ಅಷ್ಟಕಷ್ಟೇ.
Saturday, August 27, 2011
ಹೆಗ್ಡೆಯವರ ರಾತ್ರಿ ಜೀವನ!; ಕುಮಾರಣ್ಣ ನೀವೆಷ್ಟು ಸಾಚಾ...?
ನಮ್ಮಲ್ಲೊಂದು ಗಾದೆ ಮಾತಿದೆ...ಕೋಲು ಕೊಟ್ಟು ಪೆಟ್ಟು ತಿನ್ನೋದು ಅಂತ. ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ಈಗ ಮತ್ತೊಮ್ಮೆ ಅದೇ ಕೆಲಸ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ತಡೆಗಾಗಿ ಅಣ್ಣಾ ಹಜಾರೆ ಪಟ್ಟು ಹಿಡಿದು ಉಪವಾಸ ಸತ್ಯಾಗ್ರಹ ಆರಂಭಿಸಿದಾಗಿನಿಂದಲೂ ಕೆಲವು ಕಾಂಗ್ರೆಸ್ ಮುಖಂಡರು ಅಂಡೆ ಪಿರ್ಕಿ ತರಹ ಮಾತನಾಡಿ ಮಾನ ಹರಾಜು ಹಾಕಿಕೊಂಡಿದ್ದಾರೆ. ಈಗ ಆ ಸಾಲಿಗೆ ಕುಮಾರಸ್ವಾಮಿಯೂ ಸೇರಿದಂತಾಗಿದೆ. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆಯವರು ರಾತ್ರಿ ಜೀವನಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಗೊತ್ತಾ? ಇವೆಲ್ಲ ಅವರ ದುಡಿಮೆಯಿಂದಲೇ ಸಾಧ್ಯನಾ? ಹಾಗಂತ ಅವರು ಅದಕ್ಕೆಲ್ಲ ಲೆಕ್ಕ ಕೊಡ್ತಾರಾ? ಕೆಲವೊಂದು ವಿಷಯದ ಬಗ್ಗೆ ನಾವು ಆಳವಾಗಿ ಚರ್ಚೆ ಮಾಡಲು ಹೋದ್ರೆ ಕೆಲವರಿಗೆ ಬೇಸರವಾಗುತ್ತದೆ...ಹೀಗೆ ಸುವರ್ಣ ವಾಹಿನಿ ಟಾರ್ಗೆಟ್ ಕಾರ್ಯಕ್ರಮದಲ್ಲಿ ಉಡಾಫೆಯಾಗಿ ಪ್ರಶ್ನಿಸುವ ಮೂಲಕ ಹೀರೋ ಆಗಲು ಹೋದ ಕುಮಾರಣ್ಣ ಇದೀಗ ಸಂತೋಷ್ ಹೆಗ್ಡೆಯವರು ಕೊಟ್ಟ ತಿರುಗೇಟು ಭರ್ಜರಿಯಾಗಿ ತಪರಾಕಿ ಬಾರಿಸಿಕೊಂಡಂತಾಗಿದೆ.
ಕುಮಾರಸ್ವಾಮಿಯವರೇ ನಾನು ಕಳೆದ 42 ವರ್ಷಗಳಿಂದ ಒಬ್ಬಳೇ ಹೆಂಡತಿ, ಒಂದೇ ಮನೆಯಲ್ಲಿ ಸಂಸಾರ ನಡೆಸುತ್ತಿದ್ದೇನೆ. ನನಗೆ ಎರಡನೇ (ರಾಧಿಕಾ ಕುರಿತು) ಮನೆ ಇಲ್ಲ. ಹಾಗಂತ ನೀವು ಹೆಗ್ಡೆಯವರ ರಾತ್ರಿ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ. ನಾನು ನನ್ನ ಕೆಲಸ ಮುಗಿಸಿ ನನ್ನ ಮನೆಗೆ ನೇರ ಹೋಗುತ್ತೇನೆ. ನೀವು ಇನ್ನೊಬ್ಬರ ಬಗ್ಗೆ ಟೀಕಿಸುವ ಮೊದಲು ನಿಮ್ಮ ನಡತೆಯನ್ನು ಸರಿಪಡಿಸಿಕೊಳ್ಳಿ ಎಂದು ಸಂತೋಷ್ ಹೆಗ್ಡೆ ನಗರದ ಫ್ರೀಡಂಪಾರ್ಕ್‌ನಲ್ಲಿ ಬಹಿರಂಗವಾಗಿಯೇ ಚಾಟಿ ಬೀಸಿದ್ದಾರೆ.
ನಿಜಕ್ಕೂ ಕುಮಾರಸ್ವಾಮಿಯವರಿಗೆ ಹೆಗ್ಡೆಯವರ ವಿರುದ್ಧ ಆ ರೀತಿ ಟೀಕಿಸುವ ಅಗತ್ಯವಾದರೂ ಏನಿತ್ತು? ಸಂತೋಷ್ ಹೆಗ್ಡೆಯವರು ರಾತ್ರಿ ಜೀವನಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಅಂತ ಗೊತ್ತಾ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಹುಳುಕನ್ನು ಇಟ್ಟುಕೊಂಡವರೇ ಎಂದು ತಮ್ಮನ್ನ ತಾವು ಸಮರ್ಥಿಸಿಕೊಳ್ಳುವ ಭರದಲ್ಲಿ ಯಾವ ರೀತಿ ಟೀಕಿಸಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದೇ ಹೋಯಿತಾ? ಹೆಗ್ಡೆಯವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಅಗತ್ಯವಾದರೂ ಕುಮಾರಸ್ವಾಮಿಗೆ ಇತ್ತಾ? ಕೇವಲ ಸಂಬಳದಿಂದಲೇ ಇವೆಲ್ಲವೂ ಸಾಧ್ಯನಾ ಎಂಬ ಬಾಲಿಶ ಪ್ರಶ್ನೆಯನ್ನು ಕೇಳುವ ಕುಮಾರಸ್ವಾಮಿಯವರಿಗೆ, ಅವರೊಬ್ಬ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಕೆಲಸ ಮಾಡಿ ನಿವೃತ್ತರಾದವರು, ಲೋಕಾಯುಕ್ತ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದವರು. ಹಾಗಂತ ಅವರಿಗೆ ರಾತ್ರಿ ಜೀವನವೊ, ಹಗಲು ಜೀವನವೋ ನಡೆಸದಿರುವಷ್ಟು ದರಿದ್ರತನ ಬಂದಿಲ್ಲ.
ಒಟ್ಟಿನಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿ ಕಾನೂನಿನ ಕಣ್ಣಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ದಾಖಲೆಗಳನ್ನು ಹೊರಹಾಕುತ್ತಿದ್ದ ಕುಮಾರಸ್ವಾಮಿಯೇ ಈಗ ಲೋಕಾಯುಕ್ತ ವರದಿಯಿಂದಾಗಿ ಕೋರ್ಟ್‌ನಲ್ಲಿ ಜಾಮೀನಿಗಾಗಿ ಅಲೆಯುವಂತಾಗಿದೆ. ಅಲ್ಲದೇ ಜನಲೋಕಪಾಲ್ ಮಸೂದೆಗೆ ಒತ್ತಾಯಿಸಿ ಬೀದಿಗಿಳಿದ ಹೆಗ್ಡೆಯವರು ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿರುವುದು ಇವೆಲ್ಲವೂ ಒಳಗೊಳಗೆ ರೋಷ ಹುಟ್ಟಿಸಿದ್ದಂತೂ ಸತ್ಯ ಎಂಬುದು ಸಾಬೀತಾಗಿದೆ.
ಯಾಕೆಂದರೆ ಯಾವುದೇ ನಿಟ್ಟಿನಲ್ಲಿ ನೋಡಿದರೂ ಕೂಡ ಕುಮಾರಸ್ವಾಮಿ ಸಂತೋಷ್ ಹೆಗ್ಡೆಯವರ ಬಗ್ಗೆ ಮಾಡಿದ ಟೀಕೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ದುಂದು ವೆಚ್ಚನೋ, ರಾತ್ರಿ ಜೀವನಾನೋ ಅದು ಅವರ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಜನಲೋಕಪಾಲ್ ಬಗ್ಗೆ ಮಾತನಾಡುತ್ತ ಈ ರೀತಿಯಾಗಿ ಹೆಗ್ಡೆಯವರ ವೈಯಕ್ತಿಕ ತೇಜೋವಧೆ ಮಾಡಲು ಹೊರಟಿರುವುದು ತಪ್ಪು. ಹಾಗಂತ ಈ ರಾಜಕಾರಣಿಗಳಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಬೇಕಾಗುತ್ತದೆ. ಬ್ರಹ್ಮಾಂಡ ಭ್ರಷ್ಟಾಚರ ಮಾಡಿದರೂ ಕೂಡ ತಮ್ಮನ್ನು ತಾವೇ ಸಮರ್ಥಿಸಿಕೊಳ್ಳುವ ಅಥವಾ ಅವರ ಭಟ್ಟಂಗಿಗಳಿಂದ ಹೊಗಳಿಸಿಕೊಳ್ಳುವ ಇಂತಹವರಿಂದ ಹೆಗ್ಡೆಯವರು ಏನಾದರೂ ಪಾಠ ಕಲಿಯಬೇಕಾಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಅಷ್ಟಕ್ಕೂ ಹೆಗ್ಡೆಯವರು ಮಾಡಿದ ತಪ್ಪಾದರೂ ಏನು? ಅಕ್ರಮ ಗಣಿಗಾರಿಕೆ ವರದಿಯಲ್ಲಿ ಇವರೆನ್ನೆಲ್ಲ ಇಂದ್ರ-ಚಂದ್ರ ಅಂತ ಹೊಗಳಿ ಇವರು ದೂರು ಕೊಟ್ಟವರ ವಿರುದ್ಧ ಮಾತ್ರವೇ ಉಲ್ಲೇಖಿಸಬೇಕಿತ್ತಾ?
ಅಣ್ಣಾ ಹಜಾರೆಯ ವಿರುದ್ಧವೂ ಕಾಂಗ್ರೆಸ್‌ನ ಮನೀಷ್ ತಿವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಬಾಯಿಗೆ ಬಂದಂತೆ ಹಲುಬಿದ್ದಾರೆ. ಅಣ್ಣಾ ಸ್ವತಃ ಭ್ರಷ್ಟ, ಅವರಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯಾವ ನೈತಿಕತೆ ಇದೆ ಎಂದು ತಿವಾರಿ ಪ್ರಶ್ನಿಸಿದ್ದರೆ, ಅಣ್ಣಾ ಹಜಾರೆ ಗಾಂಧಿವಾದಿಯಲ್ಲ, ಹಿಟ್ಲರ್‌ವಾದಿ ಎಂಬುದಾಗಿ ಬಿಕೆ ಅಣಿ ಮುತ್ತು ಉದುರಿಸಿದ್ದರು. ಒಟ್ಟಾರೆ ಇಂತಹ ಎಡಬಿಡಂಗಿ ರಾಜಕಾರಣಿಗಳು ಬಾಯಿಗೆ ಬಂದಂತೆ ಹಲುಬುವ ಮೂಲಕ ತಮ್ಮ ಮಾನವನ್ನು ತಾವೇ ಹರಾಜು ಹಾಕಿಕೊಂಡಿರುವುದಂತು ಸತ್ಯ. ಈಗಾಗಲೇ 20-20 ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲೇ ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸದೇ ವಚನಭ್ರಷ್ಟ ಎನಿಸಿಕೊಂಡು ಛೀ..ಥೂ ಎನಿಸಿಕೊಂಡಿದ್ದ ಕುಮಾರಸ್ವಾಮಿ, ಹೆಗ್ಡೆಯವರ ಮೇಲೆ ಕೆಸರೆರಚಲು ಹೋಗಿ ತಾವೇ ಉಗಿಸಿಕೊಂಡು ಇಂಗು ತಿಂದ ಮಂಗನಂತಾಗುವಂತಾಗಿದೆ.
ಇನ್ನೊಬ್ಬರ ಮೇಲೆ ವಾಗ್ದಾಳಿ ನಡೆಸುವ, ಟೀಕಿಸುವ ಈ ರಾಜಕಾರಣಿಗಳು ಎಷ್ಟು ಸಾಚಾ ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಅವರ ವೈಯಕ್ತಿಕ ಬದುಕು, ರಾಸಲೀಲೆ, ದುಂದು ವೆಚ್ಚ, ಐಶಾರಾಮಿ ಜೀವನ ಎಲ್ಲವೂ ನಗ್ನ ಸತ್ಯವಾಗಿ ಗೋಚರಿಸುತ್ತಿರುವಾಗ ತಮ್ಮನ್ನು ತಾವೇ ಸತ್ಯಹರಿಶ್ಚಂದ್ರರು ಎಂದು ಘೋಷಿಸಿಕೊಳ್ಳುವ ಈ ಪಡಪೋಶಿ ರಾಜಕಾರಣಿಗಳು ಎಲ್ಲರನ್ನ ಬೆತ್ತಲು ಮಾಡುತ್ತೇವೆ ಎಂದು ತಾವೇ ಜನಸಾಮಾನ್ಯರೆದುರು ಬೆತ್ತಲಾಗುತ್ತಿದ್ದಾರೆ...ಶೇಮ್...ಶೇಮ್....
Labels:
Bahumukhi,
Kumaraswamy,
ಕುಮಾರಸ್ವಾಮಿ,
ರಾತ್ರಿ ಜೀವನ,
ಲೋಕಾಯುಕ್ತ,
ಸಂತೋಷ್ ಹೆಗ್ಡೆ
Sunday, August 21, 2011
ಅಣ್ಣಾ ಹಜಾರೆ ಹೋರಾಟ ಮತ್ತು ಮಟ್ಟೆಣ್ಣವರ್ ಬಾಂಬ್!
ಹೌದು...ಸಾಮಾಜಿಕ ಕಾರ್ಯಕರ್ತ, ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಪ್ರಬಲ ಜನಲೋಕಪಾಲ್ ಮಸೂದೆ ಜಾರಿಯಾಗಬೇಕೆಂದು ಪಟ್ಟು ಹಿಡಿದು ಚಳವಳಿಗೆ ಧುಮುಕಿರುವುದು ನಿಜಕ್ಕೂ ಇದೊಂದು ಪವಾಡ, ಭಾರತದಲ್ಲಿ ಎರಡನೇ ಸ್ವಾತಂತ್ರ್ಯದ ಸಂಗ್ರಾಮದ ಕಿಚ್ಚು ಎಂಬಂತ ವಾತಾವರಣ ಸೃಷ್ಠಿಯಾಗಿದೆ ಎಂಬ ಮಾತಿನಲ್ಲಿ ಉತ್ಪ್ರೇಕ್ಷೆ ಇದೆ ಎಂದು ವಾದಿಸಬಹುದು. ಆದರೆ ಇದು ಸಹಜ ಯಾಕೆಂದರೆ ಭ್ರಷ್ಟಾಚಾರದ ಕಬಂಧ ಬಾಹು ಮಿತಿಮೀರಿ ಹೋಗಿದೆ. ಅಷ್ಟೇ ಅಲ್ಲ ಅದು ಅತಿ ಹೆಚ್ಚು ಬಾಧಿಸಿದ್ದು ಜನಸಾಮಾನ್ಯರನ್ನ. ತಳಮಟ್ಟದಿಂದ ಹಿಡಿದು ಉನ್ನತ ಮಟ್ಟದವರೆಗೂ ಭ್ರಷ್ಟಾಚಾರದ ವಿರಾಟ್ ರೂಪ ತೋರಿದೆ. ಸ್ವಾತಂತ್ರ್ಯ ನಂತರ ದೇಶದ, ನಮ್ಮ ಜನಪ್ರತಿನಿಧಿಗಳ ಪ್ರಗತಿಯ ಜತೆ, ಜತೆಯಾಗಿಯೇ ಭ್ರಷ್ಟಾಚಾರವೂ ಎಗ್ಗಿಲ್ಲದೆ ಬೆಳೆಯುವ ಮೂಲಕ ಅಟ್ಟಹಾಸಗೈಯುತ್ತಿರುವುದು ಎಲ್ಲರ ಕಣ್ಮುಂದೆ ಇರುವ ವಾಸ್ತವ. ಕೆಲ ವರ್ಷಗಳ ಹಿಂದಷ್ಟೇ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಗಿರೀಶ್ ಮಟ್ಟೆಣ್ಣವರ್ ಶಾಸಕರ ಭವನಕ್ಕೆ ಬಾಂಬ್ ಇಟ್ಟು ಸುದ್ದಿ ಮಾಡಿದ್ದರು. ಅದೊಂದು ಬಾಲಿಶ, ಹುಚ್ಚುತನದ ಪರಮಾವಧಿ ಎಂದು ನಾವು ವಾದಿಸಬಹುದು.
ಕಾನೂನಿನ ಪ್ರಕಾರ ಒಪ್ಪಲಾಗದಿದ್ದರೂ, ಈ ದೇಶದ ಹಿತ ಕಾಯುವ ಪ್ರತಿಯೊಬ್ಬನೊಳಗೂ ಭ್ರಷ್ಟಾಚಾರದ ವಿರುದ್ಧ ಒಳಗೆ ಅದುಮಿಕೊಂಡಿದ್ದ ಆಕ್ರೋಶದ ಫಲ ಅದಾಗಿತ್ತು. ಆದರೆ ಮಟ್ಟೆಣ್ಣ ಕೇವಲ ಸುದ್ದಿಯಷ್ಟೇ ಮಾಡಿದ್ದು ಬಿಟ್ಟರೆ ಅದರಲ್ಲಿ ಇನ್ಯಾವುದೇ ಕ್ರಾಂತಿ ನಡೆಯಲಿಲ್ಲ. ಅದು ಅವರಿಂದ ಸಾಧ್ಯವೂ ಆಗಿಲ್ಲ ಎಂಬುದು ಅಷ್ಟೇ ಸತ್ಯ.
ಇದೀಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಎಲ್ಲರೊಳಗೂ ಕುದಿಯುತ್ತಿದ್ದ ಭ್ರಷ್ಟಾಚಾರದ ವಿರುದ್ಧದ ಆಕ್ರೋಶಕ್ಕೆ ಅಣ್ಣಾ ಹಜಾರೆ ಒಂದು ಕಾರಣರಾಗಿದ್ದಾರೆ. ಅದಕ್ಕಾಗಿಯೇ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳು, ಯುವ ಸಮುದಾಯ, ಮಹಿಳೆಯರು, ಹಿರಿಯರು ಸಾಥ್ ನೀಡಿದ್ದಾರೆ. ವಿಪರ್ಯಾಸವೆಂದರೆ ಬರೇ ಕೋಮುವಾದದ ವಿರುದ್ಧ ಬಾಯ್ದೆರೆದು ಬೊಬ್ಬಿರಿಯುತ್ತಿದ್ದ ಸಾಹಿತಿಗಳು ಮತ್ತು ಬುದ್ಧಿಜೀವಿಗಳು ಮೌನಕ್ಕೆ ಶರಣಾಗಿದ್ದಾರೆ. ಬೆಂಗಳೂರಿನ ಫ್ರೀಡಂಪಾರ್ಕ್‌ನತ್ತ ಯಾವೊಬ್ಬ ಹಿರಿಯ ಸಾಹಿತಿಯೂ ತಲೆ ಹಾಕಿಲ್ಲ. ಧರಣಿ ನಡೆಸುತ್ತಿರುವವರಿಗೆ ನೈತಿಕ ಬೆಂಬಲವನ್ನೂ ಘೋಷಿಸಿಲ್ಲ! ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ, ನಿಷ್ಠೆಯಿಂದ ಕೆಲಸ ಮಾಡಿದ ಐಪಿಎಸ್ ಅಧಿಕಾರಿಯಾಗಲಿ ಅಥವಾ ಇನ್ಯಾವುದೇ ಅಧಿಕಾರಿಯನ್ನಾಗಲಿ ನಮ್ಮ ಸರ್ಕಾರಗಳು ಯಾವ ರೀತಿ ನಡೆಸಿಕೊಂಡಿವೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಎಲ್ಲದಕ್ಕಿಂತ ದುರಂತವೆಂದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುವವರನ್ನು ಜನಪ್ರತಿನಿಧಿಗಳು, ಸರ್ಕಾರ ವ್ಯವಸ್ಥಿತವಾಗಿ ಹೇಗೆ ಹತ್ತಿಕ್ಕುತ್ತೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಭ್ರಷ್ಟಾಚಾರ ತಡೆಗೆ ಪ್ರಬಲ ಕಾಯ್ದೆ ಬೇಕೆಂದು ಜನ ಬೀದಿಗಿಳಿದರೂ ಕೂಡ ನಮ್ಮನ್ನು ಆಳುವ ನಾಯಕರ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಕಳಂಕ. ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ, ಸಚಿವರಾದ ಕಪಿಲ್ ಸಿಬಲ್, ಪಿ.ಚಿದಂಬರಂ ಹೇಳಿಕೆಗಳನ್ನೇ ಗಮನಿಸಿ, ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಇವರು ಯಾರನ್ನ ಬೇಕಾದರೂ ಭ್ರಷ್ಟರನ್ನಾಗಿ ಮಾಡುತ್ತಾರೆ ಮತ್ತು ಅದನ್ನ ತಮ್ಮ ಮೂಗಿನ ನೇರಕ್ಕೆ ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಅಪದ್ಧಗಳಿಂದಾಗಿಯೇ ಯುಪಿಎ ತನ್ನ ಮೇಲೆ ತಾನೇ ಚಪ್ಪಡಿ ಎಳೆದುಕೊಂಡು ಅವಸಾನದತ್ತ ಸಾಗಲು ಹೊರಟಿದೆ. ಪ್ರಬಲ ಜನಲೋಕ ಪಾಲ್ ಮಸೂದೆ ಜಾರಿಗೆ ತರಲು ಯಾವ ಪಕ್ಷಗಳಿಗೂ ಇಚ್ಛಾಶಕ್ತಿ ಇಲ್ಲ. ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವ ಸಂದರ್ಭದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡುವುದಾಗಿ ಭರವಸೆ ನೀಡಿತ್ತು. ಆ ಕೆಲಸವನ್ನೂ ಮಾಡಿಲ್ಲ. ನಮ್ಮನ್ನಾಳುವ ಜನಪ್ರತಿನಿಧಿಗಳು ಏನನ್ನ ಮಾಡಬೇಕು ಅದನ್ನ ಮಾಡದೇ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದರಲ್ಲಿ ಮಹಾ ನಿಸ್ಸೀಮರು.
ಅಣ್ಣಾ ಹಜಾರೆಗೆ ದೇಶಾದ್ಯಂತ ಜನ ಬೆಂಬಲ ನೀಡುವುದನ್ನು ಕಂಡು ನಡುಗಿ ಹೋಗಿದ್ದರೂ ಕೂಡ, ಮತ್ತೊಂದೆಡೆ ಬಹುಶಃ ಅಣ್ಣಾ ಹೋರಾಟದ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಇದೆ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಪೆಕರುಪೆಕರಾಗಿ ಹೇಳಿಕೆ ಕೊಟ್ಟಿದ್ದರು. ರಾಜಕಾರಣಿಗಳ ನೈತಿಕ ದಿವಾಳಿತನಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾ? ಅಣ್ಣಾ ಏಕಾಂಗಿಯಾಗಿದ್ದರು, ಅವರಿಗೆ ಯಾವುದೇ ಸಂಘಟನೆಗಳಿರಲಿಲ್ಲ. ಕೆಲವೊಂದಷ್ಟು ಮಿತ್ರರು ಮಾತ್ರ ಇದ್ದರು. ಹಾಗಾದ್ರೆ ಅವರ ಆಂದೋಲನಕ್ಕೆ ಇಷ್ಟೊಂದು ಜನಬೆಂಬಲ ಸಿಕ್ಕಿದ್ದು ಹೇಗೆ ಎಂಬುದಾಗಿ ಪ್ರಶ್ನಿಸುವ ಕಾಂಗ್ರೆಸ್ ಮೊದಲು ತನ್ನನ್ನು ತಾನು ಪ್ರಶ್ನಿಸಿಕೊಳ್ಳಬೇಕು.
ಅಣ್ಣಾ ಹಜಾರೆ ಒಂದು ಕರೆಗೆ ಜನ ಯಾಕೆ ಇಷ್ಟೊಂದು ಪ್ರಮಾಣದಲ್ಲಿ ಬೆಂಬಲ ನೀಡುತ್ತಿದ್ದಾರೆ....ಇದು ಬಾಡಿಗೆ ಹಣ ಕೊಟ್ಟು ಕರೆತಂದ ಜನರಲ್ಲ, ಜನರೇ ಸ್ವಯಂ ಪ್ರೇರಿತರಾಗಿ ಬೀದಿಗಿಳಿದಿದ್ದಾರೆ. ಮತ್ತೆ ಇದು ಪ್ರಜಾತಂತ್ರದಲ್ಲಿ ಪ್ರಬಲ ಜನಲೋಕಪಾಲ್ ಕಾಯ್ದೆ ಜಾರಿಯಾಗಬೇಕು ಎಂಬುದು ಜನರ ಹಕ್ಕೊತ್ತಾಯವಾಗಿದೆ ಎಂಬುದನ್ನ ತಿಳಿದುಕೊಳ್ಳಬೇಕಾಗಿದೆ. ಹಾಗಂತ ಜನಲೋಕಪಾಲ್ ಜಾರಿಯಾದ ಕೂಡಲೇ ದೇಶ ಸಂಪೂರ್ಣ ಭ್ರಷ್ಟಾಚಾರ ಮುಕ್ತವಾಗುತ್ತೆ ಎಂದೇನಲ್ಲ. ಯಾಕೆಂದರೆ ಈ ದೇಶದಲ್ಲಿ ಸುಧಾರಣೆಯಾಗಬೇಕಾದದ್ದು ಇನ್ನೂ ಬಹಳಷ್ಟಿದೆ. ಚುನಾವಣಾ ವ್ಯವಸ್ಥೆ ಕೂಡ ಅಷ್ಟೇ ಮುಖ್ಯ. ಆಳುವ ವರ್ಗ ಎಷ್ಟು ಭ್ರಷ್ಟವಾಗಿದೆಯೋ, ನಾವು ಕೂಡ ಅಷ್ಚೇ ಭ್ರಷ್ಟರಾಗಿದ್ದೇವೆ.
ನಾವೇ ಎಂತಹವರನ್ನ ಆರಿಸಿ ಕಳುಹಿಸಿದ್ದೇವೆ ಎಂಬುದನ್ನ ಆತ್ಮಾವಲೋಕನ ಮಾಡಿಕೊಂಡರೆ ಚುನಾವಣಾ ವ್ಯವಸ್ಥೆ, ಬಗೆಹರಿಯದ ರೈತರ ಸಮಸ್ಯೆ, ಕೈಗಾರಿಕೆಯ ಹೆಸರಿನಲ್ಲಿ ಮಾಡುತ್ತಿರುವ ಲೂಟಿ, ರಾಜಕಾರಣಿಗಳ ಧನದಾಹ, ಭೂದಾಹದ ಬಗ್ಗೆ ತಿಳಿಯುತ್ತದೆ. ನೈತಿಕತೆಯನ್ನೇ ಮರೆತು ವರ್ತಿಸುತ್ತಿರುವ ಇಂತಹ ಜನವಿರೋಧಿ ಸರ್ಕಾರಕ್ಕೆ ಬೀದಿಗಿಳಿದು ಹೋರಾಟ ಮಾಡಲೇಬೇಕಾಗಿದೆ. ಆ ನಿಟ್ಟಿನಲ್ಲಾದರೂ ಅಣ್ಣಾ ಹಜಾರೆ ಹೋರಾಟ ಒಂದು ತಾರ್ಕಿಕ ಅಂತ್ಯ ಕಂಡು ಯಶಗಳಿಸಿದರೆ ಅದು ಪ್ರಜಾಪ್ರಭುತ್ವಕ್ಕೆ, ಜನಸಾಮಾನ್ಯರಿಗೆ ದೊರೆತ ನಿಜವಾದ ಜಯವಾಗಲಿದೆ...ಅಲ್ಲದೇ ಇತಿಹಾಸ ಮರೆತರೆ ಅದರ ಪರಿಣಾಮ ಏನು ಹಾಗೂ ಜನವಿರೋಧಿಯಾಗಿ ಉಡಾಫೆಯಿಂದ ನಡೆದುಕೊಂಡರೆ ಅದರ ಫಲಿತಾಂಶ ಏನಾಗಲಿದೆ ಎಂಬುದು ಅಣ್ಣಾ ಹಜಾರೆಯ ಈ ಹೋರಾಟ ರಾಜಕೀಯ ಪಕ್ಷಗಳಿಗೊಂದು ಪಾಠವಾಗಲಿದೆ.
Labels:
bhahumukhi,
ಅಣ್ಣಾ ಹಜಾರೆ,
ಜನಲೋಕಪಾಲ್ ಮಸೂದೆ,
ಬಹುಮುಖಿ,
ಮಟ್ಟೆಣ್ಣನವರ್
Sunday, December 5, 2010
ಜನರ ವಿಶ್ವಾಸಕ್ಕೆ ಕೊಳ್ಳಿ ಇಟ್ಟ ಭಂಡ ಸಿಎಂ ಯಡಿಯೂರಪ್ಪ!
ರಾಜ್ಯರಾಜಕಾರಣದಲ್ಲಿ ಮತ್ತೊಮ್ಮೆ ಭೂಗಳ್ಳತನದ ಆರೋಪ-ಪ್ರತ್ಯಾರೋಪ ಕೇಳಿ ಬರತೊಡಗಿದೆ. ಆದರೆ ಈಗಾಗಲೇ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿ ಶ್ಲಾಘನೀಯ ಕೆಲಸ ಕೈಗೊಂಡಿದ್ದು, ಸುಮಾರು ಮೂವತ್ತು ಸಾವಿರ ಕೋಟಿಗೂ ಹೆಚ್ಚು ಬೆಲೆ ಬಾಳುವ ಇಪ್ಪತ್ತು ಸಾವಿರ ಎಕರೆ ಭೂಗಳ್ಳತನವನ್ನು ಪತ್ತೆ ಹಚ್ಚಿದ್ದಾರೆ. ಅಷ್ಟೇ ಅಲ್ಲ ಭೂಗಳ್ಳರ ಜತೆ ಶಾಮೀಲಾದ ಮುನ್ನೂರು ಕಂದಾಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿತ್ತು.
ಈ ಲೂಟಿಯಲ್ಲಿ ಅತಿರಥ-ಮಹಾರಥ ಜನನಾಯಕರೇ ಪ್ರಮುಖ ಫಲಾನುಭವಿಗಳಾಗಿದ್ದಾರೆ. ಆದರೆ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿಯನ್ನು ಅಂದಿನ ಬಿಜೆಪಿ-ಜೆಡಿಎಸ್ ಸರಕಾರದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ರಚಿಸಿದ್ದರು. ವಿಪರ್ಯಾಸವೆಂದರೆ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ಅಧಿಕಾರದ ಗದ್ದುಗೆಗೆ ಏರಿ ಎರಡೂವರೆ ವರ್ಷ ಕಳೆದಿದೆ. ಈ ಸರಕಾರಕ್ಕೆ ನಿಜಕ್ಕೂ ಜನಪರ ಕಾಳಜಿ, ರಾಜಕೀಯ ಇಚ್ಛಾಶಕ್ತಿ ಇದ್ದಿದ್ದರೆ ಎ.ಟಿ.ರಾಮಸ್ವಾಮಿ ನೀಡಿದ್ದ ವರದಿಯ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳಬೇಕಿತ್ತು. ಆ ನಿಟ್ಟಿನಲ್ಲಾದರೂ ಘಟಾನುಘಟಿ ಭೂಗಳ್ಳರ ಕಳ್ಳಾಟಿಗೆ ಬಯಲಾಗುತ್ತಿತ್ತು. ಅಷ್ಟೇ ಅಲ್ಲ ಸಾವಿರಾರು ಕೋಟಿ ರೂ.ಬೆಲೆ ಬಾಳುವ ಭೂಮಿಯನ್ನು ವಶಪಡಿಸಿಕೊಳ್ಳಲು ದಿಟ್ಟ ಹೆಜ್ಜೆ ಇಡಬಹುದಿತ್ತು.
ಅದ್ಯಾಕೋ ಕಳೆದ ಐದು ದಶಕಗಳ ಕಾಲ (ಜನತಾ ಪರಿವಾರ ಹೊರತುಪಡಿಸಿ) ಕಾಂಗ್ರೆಸ್ಸಿಗರ ದ್ವೇಷದ, ಲೂಟಿಕೋರ ರಾಜಕಾರಣ ಕಂಡು ಬೇಸತ್ತಿದ್ದ ರಾಜ್ಯದ ಜನರಿಗೆ ಒಂದು ಬದಲಾವಣೆ ಕಾಣಬೇಕಿತ್ತು. ಹಾಗಾಗಿ ಈ ಹಿಂದಿನವರ ಹಾಗೇ ನಾವಲ್ಲ, ತತ್ವ, ಸಿದ್ದಾಂತ ಎಂದೆಲ್ಲ ಬೊಂಬಡ ಬಜಾಯಿಸಿ, ಹಸಿರು ಶಾಲು ಹೊದ್ದು ಅಧಿಕಾರದ ಗದ್ದುಗೆ ಏರಿದ್ದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಕೇವಲ ಎರಡೂವರೆ ವರ್ಷಗಳಲ್ಲಿಯೇ ಎಲ್ಲರೂ ನಿರೀಕ್ಷೆ ಹುಸಿಗೊಳಿಸಿ ಲೂಟಿಕೋರ, ಭ್ರಷ್ಟಚಾರದ ರಾಜಕಾರಣಕ್ಕೆ ಇಳಿದಿರುವುದು ದುರಂತ.
ಈಗ ಪ್ರತಿಪಕ್ಷಗಳು ಯಾವುದೇ ಆರೋಪ ಮಾಡಿದರೂ ನೀವು ಈ ಹಿಂದೆ ಏನು ಮಾಡಿದ್ದೀರಿ ಎಂದು ಬಾಯ್ಮುಚ್ಚಿಸುವ ರಾಜಕಾರಣ ಮಾಡುವ ಮೂಲಕ ತಾವು ಕೂಡ ಲೂಟಿ ಮಾಡಲು ಬಂದವರು. ನೀವು ಈ ಹಿಂದೆ ಮೇಯ್ದಿದ್ದೀರಿ. ನಾವೂ ಒಂದಿಷ್ಟು ಮೇಯುತ್ತೇವೆ ಎಂಬ ಧಾಟಿಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ನಡೆದುಕೊಳ್ಳುತ್ತಿದೆ. ರಾಜಕಾರಣಿಗಳ ಮಟ್ಟಿಗೆ ಮಾನ, ಮರ್ಯಾದೆ, ನೈತಿಕತೆ ಎಂಬ ಶಬ್ದವನ್ನು ಬಳಸುವುದೇ ಅಸಂಬದ್ಧ. ಯಾಕೆಂದರೆ ಪ್ರಸಕ್ತ ರಾಜಕಾರಣದಲ್ಲಿ ಆ ಶಬ್ದಗಳಿಗೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿರುವುದು ಪ್ರತಿದಿನವೂ ಸಾಬೀತಾಗುತ್ತಿದೆ.
ತಾವು ಕಾಂಗ್ರೆಸ್, ಜೆಡಿಎಸ್‌ಗಿಂತ ಭಿನ್ನ, ರಾಜ್ಯದ ಅಭಿವೃದ್ಧಿಯೇ ಮುಖ್ಯ ಎಂಬ ಇಚ್ಛಾಶಕ್ತಿ ಬಿಜೆಪಿಗೆ ಇದ್ದಿದ್ದರೆ. ಇಂತಹ ಲೂಟಿಗೆ ಇಳಿಯುತ್ತಿರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಸೇಡಿನ ರಾಜಕಾರಣಕ್ಕೂ ಇಳಿಯುತ್ತಿರಲಿಲ್ಲ. ಕಾಂಗ್ರೆಸ್ ವಂಶಪಾರಂಪರ್ಯ ರಾಜಕೀಯ ಮಾಡುತ್ತಿದೆ. ಅಪ್ಪ, ಮಕ್ಕಳು ಆಸ್ತಿ ಮಾಡಿದ್ದಾರೆ, ಲೂಟಿ ಮಾಡುತ್ತಿದ್ದಾರೆ ಎಂದೆಲ್ಲ ಅಬ್ಬರಿಸಿದ್ದ ಯಡ್ಡಿಯೇ ಈಗ ತಮ್ಮ ಕುಟುಂಬದ ಸಮಸ್ತ ಕಲ್ಯಾಣಕ್ಕೆ ಇಳಿದುಬಿಟ್ಟಿದ್ದಾರೆ. ಸಾಲದೆಂಬಂತೆ ಭೂ ಹಗರಣ ತನಿಖೆಯನ್ನು ಲೋಕಾಯುಕ್ತರು ನಡೆಸುತ್ತಿದ್ದರು ಕೂಡ ಮತ್ತೆ ನ್ಯಾ.ಪದ್ಮರಾಜ್ ನೇತೃತ್ವದ ಆಯೋಗ ರಚಿಸಿದ್ದಾರೆ.
ಅವೆಲ್ಲಕ್ಕಿಂತ ಅಸಹ್ಯ ಹುಟ್ಟಿಸುತ್ತಿರುವುದು ತಾವು ಕಳ್ಳರಾದರೂ ಕೂಡ ಇಡೀ ಭಾಜಪದ ಮುಖಂಡರು ಮುಖ್ಯಮಂತ್ರಿಯನ್ನು ಸೇರಿದಂತೆ ಎಲ್ಲರೂ ಸಮರ್ಥಿಸಿಕೊಳ್ಳುತ್ತಿರುವುದು. ಈ ಹಿಂದೆ ಭೂ ಹಗರಣದಲ್ಲಿ ಕಟ್ಟಾ ಸುಬ್ರಹ್ಮಣ್ಯ ವಿರುದ್ಧ ಆರೋಪ ಕೇಳಿಬಂದಾಗ ರಾಜೀನಾಮೆ ನೀಡಬೇಕೆಂಬ ಒತ್ತಡವನ್ನು ಪ್ರತಿಪಕ್ಷಗಳು ಹೇರಿದ್ದವು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಮಕ್ಕಳು ಮಾಡಿದ ತಪ್ಪಿಗೆ ಅಪ್ಪನಿಗೆ ಯಾಕೆ ಶಿಕ್ಷೆ ಎಂದು ಪ್ರಶ್ನಿಸಿದ್ದರು. ಏತನ್ಮಧ್ಯೆಯೇ ಖುದ್ದು ಮುಖ್ಯಮಂತ್ರಿಗಳೇ ತಮ್ಮ ಮಕ್ಕಳಿಗೆ, ಅಳಿಯನಿಗೆ ಭೂಮಿ ನೀಡಿದ ಆರೋಪದಲ್ಲಿ ತಾವೇ ಕುರ್ಚಿ ಕಳೆದುಕೊಳ್ಳುವ ಸಂದರ್ಭ ಎದುರಾದಾಗ ಕೋಟ್ಯಂತರ ರೂಪಾಯಿ ಪಕ್ಷದ ಹೈಕಮಾಂಡ್ ವರಿಷ್ಠರಿಗೆ ಕಪ್ಪ ನೀಡಿ ಮತ್ತೆ ವಿರಾಜಮಾನರಾಗಿದ್ದಾರೆ. ಇನ್ಮುಂದೆ ತನ್ನ ಕುಟುಂಬದ ಸದಸ್ಯರನ್ನು ದೂರು ಇಡುವುದಾಗಿಯೂ ಘೋಷಿಸಿದರು. ಈ ರಾದ್ಧಾಂತ ನಡೆಯುತ್ತಿರುವ ಬೆನ್ನಲ್ಲೇ ಲೋಕಾಯುಕ್ತರು ಐಟಿ-ಬಿಟಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಎಫ್ಐಆರ್ ದಾಖಲಿಸಿದ ಪರಿಣಾಮ ನಾಯ್ಡು ಏಕಾಏಕಿ ರಾಜೀನಾಮೆ ಸಲ್ಲಿಸಿದ್ದಾರೆ.
ಮಕ್ಕಳು ಮಾಡಿದ ತಪ್ಪಿಗೆ ಅಪ್ಪನಿಗೆ ಯಾಕೆ ಶಿಕ್ಷೆ? ಆರೋಪ ಮಾಡಿದ ಕೂಡಲೇ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದೆಲ್ಲ ಸಮರ್ಥನೆ, ಸಮಜಾಯಿಷಿ ನೀಡುತ್ತಿದ್ದರು. ಅಚ್ಚರಿ ಏನಪ್ಪಾ ಅಂದರೆ ಕಟ್ಟಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದಿರುವುದಾಗಿ ಬಿಜೆಪಿ ಮುಖಂಡರು ಸಾರುತ್ತಿದ್ದಾರೆ! ಅಷ್ಟಕ್ಕೂ ಸಾಲದೆಂಬಂತೆ ಎಫ್ಐಆರ್ ಮಾತ್ರ ಹಾಕಿರುವುದು ನಮಗೆ ನ್ಯಾಯಾಲಯದ ಮೇಲೆ ವಿಶ್ವಾಸ ಇರುವುದಾಗಿಯೂ ನಾಯ್ಡು ಮಹಾನುಭಾವ ಅತಿ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿರುವುದನ್ನು ಕೇಳಿದರೆ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ.
ರಾಜ್ಯ ರಾಜಕಾರಣದಲ್ಲಿ ಕಳೆದ ಐದು ದಶಕಗಳಲ್ಲಿ ರಾಜ್ಯದ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಹೊಡೆದ ಖದೀಮರು ಒಂದಲ್ಲ ಒಂದು ಕಾಲದಲ್ಲಿ ರಾಜ್ಯದ ಆಡಳಿತವನ್ನು ನಿಯಂತ್ರಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಸುತ್ತಮುತ್ತಲ ನೂರಾರು ಎಕರೆ, ಅರಣ್ಯ ಭೂಮಿ, ದರಖಾಸ್ತು ಜಮೀನು, ಗೋಮಾಳ, ಕೆರೆಕಟ್ಟೆಯನ್ನು ಒಂದೆಡೆ ಕಾಂಗ್ರೆಸ್ಸಿಗರು ಮತ್ತೊಂದೆಡೆ ಖೋಡೆ ಧಣಿಗಳ ಪಾಲಾಗಿದೆ. ಇಂತಹ ನುಂಗಣ್ಣಗಳನ್ನು ದೂರವಿಟ್ಟು ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದ ಗದ್ದುಗೆ ಏರಿಸಿದ್ದರ (ರೆಡ್ಡಿ ಬ್ರದರ್ಸ್ ಸೇರಿದಂತೆ ಹಲವರ ಮೇಲೆ ಭ್ರಷ್ಟಾಚಾರಾ, ಮೈನಿಂಗ್ ಮಾಫಿಯಾ, ಭೂ ಹಗರಣದ ಆರೋಪ) ಫಲಿತಾಂಶ ರಾಜ್ಯದ ಜನರಿಗೆ ಎರಡೂವರೆ ವರ್ಷಗಳಲ್ಲಿಯೇ ಜಗಜ್ಜಾಹೀರಾಗಿದೆ. ಬಿಹಾರದಲ್ಲಿ (ಲಾಲೂವಿನ ಗೂಂಡಾ ರಾಜ್ಯ ) ಜನಪರ ಆಡಳಿತ ನೋಡಿ ನಿತೀಶ್ ಕುಮಾರ್ ಅವರನ್ನು ಎರಡನೇ ಬಾರಿಗೆ ಮತದಾರರ ಆಯ್ಕೆ ಮಾಡಿದ್ದಾನೆ. ಕರ್ನಾಟಕದಲ್ಲಿ ಯಡಿಯೂರಪ್ಪ ಜನರ ವಿಶ್ವಾಸ, ಕನಸನ್ನು ನುಚ್ಚು ಮಾಡಿದ್ದಾರೆ. ಇದು ಇಬ್ಬರ ನಾಯಕರ ನಡುವೆ ಇರುವ ವ್ಯತ್ಯಾಸ ಅಷ್ಟೇ! ಹಾಗಾಗಿ ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಒಬ್ಬ ಭಂಡ, ಭ್ರಷ್ಟ, ಲಚ್ಚೆಗೆಟ್ಟ ಮುಖಂಡರಾಗಿ ಬಿಂಬಿತರಾಗಬಹುದೇ ಹೊರತು, ಜನಪರ ನಾಯಕನಾಗಿ ಅಲ್ಲ ಎಂಬುದನ್ನು ಮನಗಾಣಬೇಕಾಗಿದೆ....
Monday, August 17, 2009
ತಿರುವಳ್ಳುವರ್...ಸಾಕ್ರೆಟೀಸ್ ಮತ್ತು ನಮ್ಮ ಸ್ವಭಾವ
ಇದು ಸಾಮಾನ್ಯ ಎಂಬಂತೆ ನಾವೇ ಆಗಾಗ ಸಹೋದ್ಯೋಗಿಗಳಿಗೆ ಅಥವಾ ಹೆಚ್ಚಿನವರು ಒಂದಲ್ಲ ಒಂದು ಬಾರಿ ಇಂತಹ ಹೇಳಿಕೆಯನ್ನು ಕೇಳಿರುತ್ತೇವೆ ಇಲ್ಲ ನಾವೇ ಆಡಿರುತ್ತೇವೆ. ಯಾರಾದರೂ ಅವರ ಪಾಡಿಗೆ ಖುಷಿಯಿಂದ ಇದ್ದರೂ ಸಾಕು ಏನು...? ಬಹಳ ಖುಷಿಯಿಂದ ಇದ್ದ ಹಾಗೆ ಇದೆ...ಲಾಟರಿ ಏನಾದ್ರು ಬಂತಾ ಅಂತ . ಹಾಗಂತ ಜೋಲು ಮೋರೆ ಹಾಕಿ ಇರಿ...ಏನೋ ಆತ ಯಾವಾಗ್ಲೂ ಹಾಗೆ ತಲೆ ಮೇಲೆ ಆಕಾಶ ಬಿದ್ದವರ ತರ ಇರ್ತಾನೆ ಅಂದುಕೊಂಡು ಸುಮ್ಮನಾಗ್ತಾರೆ. ಮೂಲತಃ ಮನುಷ್ಯನ ಸ್ವಭಾವವೇ ತಿಕ್ಕಲುತನದ್ದು. ಯಾಕೆಂದರೆ ಜನ ಚಳವಳಿ ಮಾಡಿದರೂ ಟೀಕಿಸುತ್ತೇವೆ, ಮಾಡದಿದ್ದರೂ ವಟಗುಟ್ಟುತ್ತೇವೆ. ಅದಕ್ಕೆ ಇತ್ತೀಚೆಗೆ ತಿರುವಳ್ಳುವರ್-ಸರ್ವಜ್ಞ ಪ್ರತಿಮೆ ಸ್ಥಾಪನೆ ವೇಳೆ ಕನ್ನಡಪರ ಸಂಘಟೆಗಳು ವ್ಯಕ್ತಪಡಿಸಿದ ಪ್ರತಿಭಟನೆಗೆ ಪರ-ವಿರೋಧ ವ್ಯಕ್ತವಾಗಿದ್ದು ಕೂಡ ಒಂದು ಉದಾಹರಣೆ. ಡಿ.ಎಸ್.ನಾಗಭೂಷಣ್‌ರಂತವರು ಕೂಡ 'ಗಲಾಟೆ ಸಂಘಟನೆ'ಗಳು ಅಂತ ಹೇಳಿಕೆ ನೀಡಿದರು. ಪ್ರತಿ ನೆಲದಲ್ಲೂ ಹುಟ್ಟಿಕೊಂಡ ಚಳವಳಿಗಳು ಅವುಗಳು ಮೂಡಿಸಿದ್ದ ಛಾಪು ಕಡೆಗಣಿಸುವಂತಹದ್ದಲ್ಲ. ಈ ಬಗ್ಗೆ ಆತ್ಮೀಯರಾದ ದಿನೇಶ್ ಕುಮಾರ್ ಅವರು ತಮ್ಮ 'ದೇಸಿಮಾತು' ಬ್ಲಾಗ್‌ನಲ್ಲಿ ಉತ್ತಮವಾದ ಲೇಖನವೊಂದನ್ನು ಬರೆದಿದ್ದಾರೆ.
ಆದರೆ ನಾನು ಪರ-ವಿರೋಧದ ಹಿನ್ನೆಲೆ-ಮುನ್ನೆಲೆ ಬಗ್ಗೆ ಲೇಖನ ಮುಂದುವರಿಸಲಾರೆ. ಯಾಕೆಂದರೆ ಚೆನ್ನೈನಲ್ಲಿ ಪ್ರತಿಮೆ ಅನಾವರಣ ಸೇರಿದಂತೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ವೇಳೆ ಕೆಲವು ಮಾಧ್ಯಮಗಳು ಎಷ್ಟು ವಸ್ತುನಿಷ್ಠವಾಗಿ ವರದಿ ಮಾಡಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಮನುಷ್ಯ ಪ್ರತಿಯೊಂದಕ್ಕೂ ತಕರಾರು ತೆಗೆಯುತ್ತಿರುತ್ತಾನೆ, ಅದು ಹುಟ್ಟುಗುಣ ಎಂಬಂತೆ ಅದೊಂದು ಅಂಟು ಜಾಢ್ಯವಾಗಿದೆ. ಈ ಬಗ್ಗೆ ರಜನೀಶರ ಹಾಸ್ಯಮಿಶ್ರಿತ ಮಾತುಗಳಲ್ಲಿಯೇ ಹೇಳುವುದಾದರೆ.... ಬಾಲಿ ದ್ವೀಪದಲ್ಲಿ ಒಂದು ಪುರಾತನ ಗಾದೆ ಮಾತಿದೆಯಂತೆ, 'ನಿಮ್ಮ ಮನಸ್ಸು ಮುದದಿಂದ ಇದ್ದರೆ ನೀವು ಯಾವಾಗ ಬೇಕಾದರೂ ನೃತ್ಯವನ್ನು ಕಲಿಯಬಹುದು'.
ಆದರೆ ಮನುಷ್ಯ ಮೂಲತಃ ಮುದದಿಂದ ಇಲ್ಲ. ವಾಸ್ತವವಾಗಿ ದುಃಖವೆಂಬುದು ಒಂದು ಅಪವಾದದಂತಿರಬೇಕು, ಪ್ರಸನ್ನತೆ, ಪ್ರಫುಲ್ಲತೆ ಆತನ ಸಹಜ ಧರ್ಮವಾಗಿರಬೇಕು. ಅವನು ಯಾರೊಂದಿಗೂ 'ಇದೇನು ನೀವಿಂದು ಬಹಳ ಸಂತೋಷದಿಂದ ಇರುವಂತೆ ಕಾಣುತ್ತಿದೆಯಲ್ಲ?' ಎಂದು ಕೇಳುವ ಅಗತ್ಯ ಬರಬಾರದು ?ಆದರೆ ವಸ್ತು ಸ್ಥಿತಿ ಹಾಗಿಲ್ಲ. ಒಂದು ವೇಳೆ ನೀವು ನಿಮ್ಮಲ್ಲೇ ಹರ್ಷಿತರಾಗಿದ್ದರೆ, ಮುಗುಳು ನಗುತ್ತ, ಸಂತೋಷದಿಂದ ಇರುವಂತೆ ಕಂಡು ಬಂದರೆ...ಜನರು ನಿಮ್ಮನ್ನು ದುರುಗುಟ್ಟಿ ನೋಡುವರು. ನಿಮ್ಮಿಂದೇನೋ ತಪ್ಪಾಗಿ ಹೋಯಿತೆಂಬಂತೆ, ಏನಾಯಿತು...ಈತನಿಗೆ? ಅದೇಕೆ ಹಾಗೆ ನಗುತ್ತಾನೆ ? ಬಹಳ ಖುಷಿಯಿಂದ ಇದ್ದಿರುವಂತಿದೆ, ಕಾರಣವೇನೋ ತಿಳಿಯದು'?. ಆಗ, ಜನ ಕೇಳಿಯೇ ಕೇಳುತ್ತಾರೆ 'ಏನು ಸಮಚಾರ? ಬಹಳ ಖುಷಿಯಾಗಿದ್ದರಲ್ಲ ಅಂತ! ಸ್ವಸ್ಥವಾಗಿ, ಸುಖಿಯಾಗಿರಲು, ಅದಕ್ಕೆ ಕಾರಣ ಬೇರೆ ಬೇಕು. ಆದರೆ ದುಃಖಿತನಾಗಿ ಇರುವವನನ್ನು ಕಂಡಾಗ ಜನ ಹಾಗೆ ಕೇಳಲಾರರು. ಅಷ್ಟೇ ಅಲ್ಲ ಒಂದು ನಿಮಿಷ ನಿಂತು ಅವನ ಕಡೆ ನೋಡುವುದೂ ಇಲ್ಲ. ಅನ್ಯ ಮನಸ್ಕರಂತೆ ಇರುವುದು ನಮ್ಮ ಸಹಜ ಸ್ವಭಾವವೇನೋ ಎಂಬಂತೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡುತ್ತಾರೆ. ನಾವು ನಗುವುದನ್ನೇ ಮರೆತಿದ್ದೇವೆ, ನಮ್ಮ ಮುಗುಳ್ನಗು ಕಳೆದು ಹೋಗಿದೆ.
ಪ್ರತಿಯೊಂದು ಮಗುವು ಹುಟ್ಟುವಾಗ ತರುವ ಆ ಅನನ್ಯ ನಗು ಮಾಯವಾಗಿದೆ. ತಾನು ಸ್ವಸ್ಥನಾಗಿರಬೇಕಿದ್ದ ಆ ದಾರಿ ಮರೆತು ಹೋಗಿದೆ. ನಾವು ನಿರಾಸೆಯಿಂದ ಮೃತ್ಯುವಿನ ಕಡೆಗೆ ಮುಖ ಮಾಡಿಕೊಳ್ಳುವ ಸಂಕಲ್ಪ ಮಾಡಿರುತ್ತೇವೆ. ಏಕೆಂದರೆ ಹೀಗೆ ಮಾಡುವುದು ಅವರಿಗೆ ಬೇಕಿತ್ತು. ಅವರಿಗೆ ಇದರಿಂದ ಹಿತ. ಯಾವಾಗಲೂ ಜೋಲು ಮೋರೆಯಲ್ಲೇ ಇರುತ್ತೇವೆ. ವಿಧಾನ...ಕಾರ್ಯಗಳಲ್ಲಿ ನಮ್ಮ ವಾಸ್ತವಿಕ ರೂಪ ಒಂದು ನಕಲಿ ಮುಖವಾಡವನ್ನು ಧರಿಸಿರುತ್ತೇವೆ. ಸಮಾಜ ಕೂಡ ಅದನ್ನೇ ಅಪೇಕ್ಷಿಸುತ್ತದೆ. ನಾವು ಅತ್ಯಾನಂದದಿಂದ ರಸ್ತೆಯಲ್ಲಿ ಕುಣಿದಾಡುವುದನ್ನು ಯಾರೂ ಸಹಿಸಲಾರರು. ನೀವು ಹೃದಯ ತುಂಬಿ ನಗುವುದು ಯಾರಿಗೂ ಸಹಿಸದು. ಅಟ್ಟಹಾಸದಿಂದ ಗಹಗಹಿಸಿ ನಗುವುದನ್ನು ಯಾರೂ ಸೈರಿಸಲಾರರು. ನಿಮ್ಮ ಮನೆಯಲ್ಲೇ ನೀವು ಅಟ್ಟಹಾಸಗೈದರೂ ನೆರೆಹೊರೆಯವರು ಬಂದು ಬಾಗಿಲು ಬಡಿದು- ಇದೇನಿದು ಕೋಲಾಹಲ? ದಯವಿಟ್ಟು ನಿಲ್ಲಿಸಿ ನಾವೇನು ಇರಬೇಕೋ ಇಲ್ಲಾ ಮನೆಬಿಟ್ಟು ಹೋಗಬೇಕೋ..ನಿಮ್ಮ ಸಂಭ್ರಮದಲ್ಲಿ ನಮಗೆ ಮನೆಯಲ್ಲಿರಲು ಆಗುತ್ತಿಲ್ಲ' ಎಂದು ಆಕ್ಷೇಪಿಸುವರು.
ನೀವು ಜೋಲು ಮುಖದಿಂದ ಇದ್ದರೆ ಅವರಿಗೆ ಅಡ್ಡಿಯಿಲ್ಲ. ಜೋಲು ಮುಖದಿಂದ ಇರುವವರಿಗೆ ಜೋಲು ಮುಖದವರು ತುಂಬಾ ಇಷ್ಟ. ನಗುವವರನ್ನು ಕಂಡರೆ ಅವರಿಗೆ ಸಂಕಟವಾಗುತ್ತೆ. ಸಾಕ್ರೆಟೀಸ್‌ನಂತಹ ವ್ಯಕ್ತಿಗಳಿಗಿದ್ದ ತೊಂದರೆಯೇ ಇದು. ಅವರು ಅತ್ಯಂತ ಆನಂದದಿಂದ ಇರುವರು. ಮತ್ತು ಜನರಲ್ಲಿ ಎಚ್ಚರಿಕೆ ಮೂಡಿಸುತ್ತಿದ್ದರು. ಅವರ ಆನಂದ, ಎಚ್ಚರಿಕೆಯ ನಡೆ-ನುಡಿ ಕಂಡು ಜೋಲು ಮೋರೆಯವರ ಹೊಟ್ಟೆಯಲ್ಲಿ ಹಾಲಾಹಲ ಕಲಸಿದಂತಾಗುತ್ತಿತ್ತು. ಅವರ ಗುಂಪು, ಕೇಕೆ ಹಾಕುವವರನ್ನು ಸೈರಿಸಲಾಗದೆ. ಅವರನ್ನು ಕೊನೆಗಾಣಿಸಲೇಬೇಕಾಯಿತು!. ಏಕೆಂದರೆ ನಿಮ್ಮ ಮನದಲ್ಲಿ ಬಂಡಾಯದ ಸುಂಕನ್ನು ಹರಡುವರು, ನಾವೋ ಬಂಡಾಯವೆಂದರೆ ಹೆದರಿ ಸಾಯುವವರು! ಒಮ್ಮೆಯಾದರೂ ಒಬ್ಬ ವ್ಯಕ್ತಿ ವಿದ್ರೋಹದ ಪ್ರೇಮದಲ್ಲಿ ಬೀಳಬೇಕು. ಆಗ ಮಾತ್ರ ಅವನು ಸರಿಯಾದ ದಾರಿಗೆ ಬರಬಲ್ಲ.
ರಷ್ಯಾದ ಪುರಾತನ ಕಥೆಯೊಂದಿದೆ..ಚೇಮ್ ನಗರದ ಮಂದಿ ಯಾವಾಗಲೂ ಚಿಂತಾಕ್ರಾಂತರಾಗಿಯೇ ಇರುವವರಂತೆ. ಅವರಿಗೆ ಅದೇ ಅಭ್ಯಾಸ, ಅಷ್ಟೇ ಅಲ್ಲ ತಾವೇಕೆ ಇಷ್ಟು ಚಿಂತಿತರಾಗಿದ್ದೇವೆ ಎಂಬುದೇ ಅವರಿಗೆ ದೊಡ್ಡ ಚಿಂತೆಯಾಗಿತ್ತಂತೆ!. ಆಗ ನಗರದ ಅಧ್ಯಕ್ಷರಾಗಿದ್ದವರು ಚರ್ಚೆ ನಡೆಸಿ, ಕೊನೆಗೆ ಐರಾ ಎಂಬೊಬ್ಬ ತೀರ ಕಡುಬಡವನೊಬ್ಬನನ್ನು ಕರೆತಂದು ಅವನನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಯಿತಂತೆ. ಆತನಿಗೆ ಕೆಲಸ ಏನಪ್ಪಾ ಅಂದ್ರೆ...ಚೇಮ್ ನಗರ ವಾಸಿಗಳೆಲ್ಲರ ಪರವಾಗಿ ಆತನೊಬ್ಬನೇ ದಿನವಿಡೀ ಚಿಂತಿಸುವುದು...ಅದಕ್ಕೆ ಆತನಿಗೆ ವಾರಕ್ಕೆ 4ರೂಬಲ್ ಸಂಬಳ ಅಂತಲೂ ಘೋಷಿಸಲಾಯಿತು. ಆದರೆ ಈ ಯೋಜನೆ ತಲೆಕೆಳಗಾಯಿತು...!ಇಷ್ಟು ಕೇಳಿದ್ದೇ ತಡ ಐರಾನ ಸಂತೋಷಕ್ಕೆ ಪಾರವೇ ಇಲ್ಲ, ಆತ ತನ್ನ ಹುಟ್ಟೂರಾದ ರೂಥ್‌ಗೆ ಬಂದು ಬೀದಿ, ಬೀದಿ, ನೆಂಟರು, ನೆರೆಕೆರೆಯವರಿಗೆಲ್ಲ ತನಗೆ ಕೆಲಸ ಸಿಕ್ಕಿದ ಬಗ್ಗೆ ಖುಷಿಯಿಂದ ಹೇಳಿಕೊಂಡ. ಕೊನೆಗೆ ಅವನ ಬಾಯಿಂದ ಬಂದ ಮಾತೆಂದರೆ, 'ಇನ್ನು ನನಗೆ ಚಿಂತೆ ಇಲ್ಲ..ವಾರಕ್ಕೆ 4 ರೂಬಲ್ ಸಂಬಳ ಬರುತ್ತೆ'. ಆದರೆ ಆತನಿಗೆ ಕೊಟ್ಟ ಕೆಲಸ ಚಿಂತಿಸುವುದು...ಅದನ್ನೇ ಮರೆತು ಬಿಟ್ಟ!. ಈ ವಿಷಯ ಅಧ್ಯಕ್ಷರಿಗೆ ತಿಳಿಯುತ್ತಿದ್ದಂತೆಯೇ ಆತ ಕೆಲಸ ಕಳೆದುಕೊಂಡ!! ಅದೇ ರೀತಿ ನಮ್ಮ ಸ್ವಭಾವ ಕೂಡ...

Thursday, June 4, 2009
ತಮಿಳುನಾಡಿನಲ್ಲಿ ರಕ್ತಪಾತ ಆಗಲೇ ಇಲ್ಲಾ...!!
ರಾಜಪಕ್ಷೀಯಗಳು ಚುನಾವಣೆ ಸಂದರ್ಭದಲ್ಲಿ ತಮ್ಮ ಅನುಕೂಲ ಶಾಸ್ತ್ರಕ್ಕೆ ತಕ್ಕಂತೆ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆಂಬುದಕ್ಕೆ ತಮಿಳುನಾಡಿನಲ್ಲಿ ನಡೆದ ರಾಜಕೀಯ ಪ್ರಹಸನವೇ ಸಾಕ್ಷಿ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಅಂಡು ಸುಟ್ಟ ಬೆಕ್ಕಿನಂತಿದ್ದ ತಮಿಳುನಾಡಿನ ಪಕ್ಷಗಳು ನಂತರ ಮಾತ್ರ ಎಲ್‌ಟಿಟಿಇ ವಿಷಯದಲ್ಲಿ ಅವುಗಳು ನಡೆದುಕೊಂಡು ರೀತಿ ಮಾತ್ರ ಅಚ್ಚರಿ ಹುಟ್ಟಿಸುವಂಥದ್ದು. ಕಟ್ಟರ್ ಎಲ್‌ಟಿಟಿಇ ವಿರೋಧಿಯಾಗಿದ್ದ ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಕೂಡ, ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ರಾಜ್ಯ ಮಾತ್ರ ಏಕೈಕ ಪರಿಹಾರ ಮಾರ್ಗ ಎಂದು ಹೇಳಿಕೆ ನೀಡಿದರು. ಅದರ ಬೆನ್ನಲ್ಲೇ ಮತ್ತೊಂದು ಪ್ರಾದೇಶಿಕ ಪಕ್ಷವಾದ ಪಾಟಾಳ್ ಮಕ್ಕಳ್ ಕಚ್ಚಿ (ಪಿಎಂಕೆ) ಸಹ ಪ್ರತ್ಯೇಕ ರಾಜ್ಯ ಹೇಳಿಕೆಗೆ ಬೆಂಬಲ ಸೂಚಿಸಿತು.
ಆದರೆ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಆಡಳಿತಾರೂಢ ಡಿಎಂಕೆಯ 'ಪೆರಿಯಾರ್' ಎಂ.ಕರುಣಾನಿಧಿಯವರು ಶ್ರೀಲಂಕಾದಲ್ಲಿ ಕದನ ವಿರಾಮ ಘೋಷಿಸುವಂತೆ ಲಂಕಾ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ತಮಿಳುನಾಡು ಬಂದ್‌ಗೆ ಕರೆ ನೀಡಿದರು. ನಂತರ ತರಾತುರಿಯಲ್ಲಿ ಗೋಪಾಲಪುರಂನ ಮನೆಯಲ್ಲಿ ಬೆಳ್ಳಂಬೆಳಗ್ಗೆ ನಾಲ್ಕಾರು ಎಸಿಯ ತಣ್ಣನೆಯ ಗಾಳಿಯ ನಡುವೆ ಉಪವಾಸ ಸತ್ಯಾಗ್ರಹಕ್ಕೆ ಕೂತರು. ಅದು ಕಾಕತಾಳಿಯ ಎಂಬಂತೆ ಲಂಕಾ ಸರ್ಕಾರ ಕದನವಿರಾಮ ಘೋಷಿಸಿರುವುದಾಗಿ ಹೇಳಿಕೆ ನೀಡಿರುವುದರಿಂದ 1 ಗಂಟೆಗೆ ಉಪವಾಸ ಮುಗಿಸಿ, ತನ್ನ ಸತ್ಯಾಗ್ರಹಕ್ಕೆ ಸಂದ ಜಯ ಅಂತ ಬೀಗಿದರು.
ಅವೆಲ್ಲಕ್ಕಿಂತ ಹೆಚ್ಚಾಗಿ ಫಯರ್ ಬ್ರ್ಯಾಂಡ್ ಎಂದೇ ಬಿರುದಾಂಕಿತರಾಗಿರುವ ಎಂಡಿಎಂಕೆಯ ಮುಖ್ಯಸ್ಥ ವೈಕೋ, ಬಹಿರಂಗಸಭೆಯಲ್ಲಿ ಮಾತನಾಡುತ್ತ, ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್‌ಗೆ ಏನೇ ಅಪಾಯವಾದರು ಕೂಡ ತಮಿಳುನಾಡು ಹೊತ್ತಿ ಉರಿಯುತ್ತೆ ಎಂದು ಎಚ್ಚರಿಕೆ ನೀಡಿದ್ದರು. ಅದಕ್ಕೆ ತಮಿಳುರಾಷ್ಟ್ರೀಯ ಚಳವಳಿ ಹೋರಾಟಗಾರ ಪಿ.ನೆಡುಮಾರನ್ ಕೂಡ ಸಾಥ್ ನೀಡಿದ್ದರು.
ಆದರೆ ಪ್ರಭಾಕರನ್ ಸಾವಿನ ಸುದ್ದಿ ಟಿವಿ ಚಾನೆಲ್‌ಗಳಲ್ಲಿ ಬಿತ್ತರವಾಗುತ್ತಿದ್ದರೆ. ಚೆನ್ನೈನಲ್ಲಿದ್ದ ನಾವು ಮಧ್ನಾಹ್ನದ ಊಟಕ್ಕೂ ತತ್ವಾರ ಆಗಬಹುದು ಅಂತ ಹೆದರಿ ಕಂಗಾಲಾಗಿ ಅಂದು ಬೇಗ ಊಟಕ್ಕೆ ಹೋಗಿದ್ದೇವು. ಆದರೆ ಸಮೀಪದ ಐಸ್‌ಹೌಸ್ ಬಳಿ ಸ್ವಲ್ಪ ಗಲಾಟೆ ಆಗಿತ್ತು ಬಿಟ್ಟರೆ ಬೇರೇನೂ ಆಗಿರಲಿಲ್ಲವಾಗಿತ್ತು. ನಂತರ ಪ್ರಭಾಕರನ್ ಸಾವಿನ ಸುದ್ದಿಯನ್ನು ಶ್ರೀಲಂಕಾ ಸರ್ಕಾರ ಅಧಿಕೃತವಾಗಿ ಘೋಷಿದಾಗಲಂತೂ ನಾವೆಲ್ಲ ಗಾಬರಿಯಾಗಿ ಹೋಗಿದ್ದೇವು. ಆದರೆ ವೈಕೋ ಹೇಳಿಕೆಯ ರಕ್ತಪಾತವಾಗಲಿ, ಪುಟ್ಟ ಗಲಭೆಯೂ ನಡೆದಿರಲಿಲ್ಲ. ಆದರೆ ಕೆಲವು ಚಾನೆಲ್‌ಗಳಲ್ಲಿ ತಮಿಳುನಾಡು ಉದ್ವಿಗ್ನ ಅಂತ ಬ್ರೇಕಿಂಗ್ ನ್ಯೂಸ್ ಕೊಡುತ್ತಿದ್ದರೆ ಚೆನ್ನೈನಲ್ಲಿ ಸುದ್ದಿ ನೋಡುತ್ತಿದ್ದ ನಮಗೆ ನಗು ಬರುತ್ತಿತ್ತು. ಆದರೆ ಕಡಲೂರು ಸೇರಿದಂತೆ ಕೆಲವು ಕಡೆ ಸ್ವಲ್ಪ ಮಟ್ಟಿನ ಹಿಂಸಾಚಾರ ನಡೆದಿತ್ತು. ಅದನ್ನು ಹೊರತುಪಡಿಸಿದರೆ. ಎಲ್‌ಟಿಟಿಇ ಪ್ರಭಾಕರನ್ ಸಾವನ್ನಪ್ಪಿದರೆ ತಮಿಳುನಾಡು ಹೊತ್ತು ಉರಿಯುತ್ತೆ ಎಂಬ ರಾಜಕೀಯ ನಾಯಕರ ಹೇಳಿಕೆಯ ಹಿಂದಿನ ಸಂಚನ್ನು ಗಮನಿಸಬೇಕಾಗಿದೆ.
ಯಾಕೆಂದರೆ ಚುನಾವಣೆ ನಡೆಯುವ ಮೊದಲು ಏನಾದ್ರು ಎಲ್‌ಟಿಟಿಇ ನಾಯಕ ಪ್ರಭಾಕರನ್ ಹತ್ಯೆಯಾಗಿದ್ದರೆ, ನಿಜಕ್ಕೂ ತಮಿಳುನಾಡು ಹೊತ್ತಿ ಉರಿಯುತ್ತಿತ್ತು ಎಂಬುದರಲ್ಲಿ ಯಾವುದೇ ಸಂಶಯವಿರಲಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾವುದಾದರೊಂದು ಇಶ್ಯೂ ಬೇಕಾಗುವುದು ಖದೀಮ ರಾಜಕಾರಣಿಗಳಿಗೆ ಮಾತ್ರ. ಲಂಕಾದಲ್ಲಿ ಕದನ ವಿರಾಮ ನಿಲ್ಲಿಸುವಂತೆ ಬಂದ್‌ಗೆ ಕರೆ ನೀಡಿದ ಡಿಎಂಕೆ ಆಗಲಿ, ಪ್ರತ್ಯೇಕ ರಾಜ್ಯಬೇಕು ತಮಿಳರಿಗೆ ಅಂತ ಬೊಬ್ಬಿರಿದ ಎಐಎಡಿಎಂಕೆ ಆಗಲಿ, ವೈಕೋ, ನೆಡುಮಾರನ್ ಯಾರೂ ಕೂಡ ಸೊಲ್ಲೆ ಎತ್ತಿಲ್ಲ. ವೈಕೋ, ನೆಡುಮಾರನ್ ಮಾತ್ರ ಈಗಲೂ ಪ್ರಭಾಕರನ್ ಬದುಕಿಯೇ ಇದ್ದಾನೆ ಅಂತ ಲಬೋ, ಲಬೋ ಅಂತಿದ್ದಾರೆ.
ಕಳೆದ ಶನಿವಾರದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಕಾರ್ಯನಿರ್ವಾಹಕ ಸಂಪಾದಕ ಸುದರ್ಶನ್ ಅವರೊಂದಿಗೆ ಕಿಲ್ಲಿ ಎಂಬಾತನೊಂದಿಗೆ ನಡೆಸಿದ ಸಂದರ್ಶನದಲ್ಲಿ, ಎಲ್‌ಟಿಟಿಇಯ ವರಿಷ್ಠ ಪ್ರಭಾಕರನ್‌ಗೆ ವೈಕೋ ಮತ್ತು ನೆಡುಮಾರನ್‌ಗಿಂತ ದೊಡ್ಡ ಶತ್ರುವಿನ ಅಗತ್ಯವಿರಲಿಲ್ಲ ಅಂತ ಹೇಳಿದ್ದರು. ಅಲ್ಲದೇ ಎಲ್‌ಟಿಟಿಇಗೆ ಏನಾದ್ರೂ ಆದರೆ ತಮಿಳುನಾಡು ಹೊತ್ತಿ ಉರಿಯುತ್ತೆ, ಡಿಎಂಕೆ ನೆಲಕಚ್ಚುತ್ತೆ ಅಂತೆಲ್ಲಾ ಪ್ರಭಾಕರನ್ ಹಾಗೂ ನಟೇಶನ್‌ಗೆ ಸುಳ್ಳು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದ ಪ್ರಮುಖ ರೂವಾರಿಗಳೇ ಅವರಿಬ್ಬರು ಅಂತ ಆರೋಪಿಸಿದ್ದರು.
ನಿಜಕ್ಕೂ ತಮಿಳುನಾಡಿನ ರಾಜಕೀಯ ಪಕ್ಷಗಳು ಶ್ರೀಲಂಕಾದಲ್ಲಿನ ತಮಿಳರ ರಕ್ಷಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂಬುದು ಅಕ್ಷರಶ ಸತ್ಯ. ಶ್ರೀಲಂಕಾದಲ್ಲಿನ ತಮಿಳರು ಅತ್ತ ಎಲ್‌ಟಿಟಿಇ ಹಾಗೂ ಲಂಕಾ ಸರ್ಕಾರ ಎರಡರಿಂದಲೂ ಅನ್ಯಾಯಕ್ಕೊಳಗಿದ್ದರು. ಅವರ ಬಗ್ಗೆ ಧ್ವನಿ ಎತ್ತಬೇಕಾಗಿದ್ದ ತಮಿಳುನಾಡಿನ ರಾಜಕೀಯ ಪಕ್ಷಗಳು ಮಾತ್ರ ರಾಜಕೀಯ ಬೇಳೆ ಬೇಯಿಸಿಕೊಂಡು, ಪ್ರಭಾಕರನ್‌ನನ್ನು ಹೀರೋವನ್ನಾಗಿ ಬಿಂಬಿಸಲು ಹೊರಟರೆ ವಿನಃ ಬೇರೇನೂ ಮಾಡಿಲ್ಲ ಎಂಬುದಕ್ಕೆ ಲಂಕಾದಲ್ಲಿನ ತಮಿಳರ ಸ್ಥಿತಿಗತಿಯೇ ಅದಕ್ಕೆ ಸಾಕ್ಷಿ.
ರಾಜಕೀಯ ಮುಖಂಡರು,ಪಕ್ಷಗಳು ಸಂದರ್ಭಕ್ಕೆ ತಕ್ಕಂತೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದಕ್ಕೆ ತಮಿಳುನಾಡಿನ ರಾಜಕೀಯ ಪಕ್ಷ, ಮುಖಂಡರು ಇತ್ತೀಚಿಗಿನ ಜ್ವಲಂತ ಸಾಕ್ಷಿ. ಇದು ರಾಮಜನ್ಮಭೂಮಿ, ಸಿಖ್ ಹತ್ಯಾಕಾಂಡ, ಗೋದ್ರಾ ಹತ್ಯಾಕಾಂಡ, ನಂದಿಗ್ರಾಮ ಹಿಂಸಾರ, ಕೋಮುಗಲಭೆ ಇವೆಲ್ಲದರ ಹಿಂದೆ ಸೂಕ್ಷ್ಮವಾಗಿ ಗಮನಿಸಿ ರಾಜಕೀಯ ಢಾಳಾಗಿ ಕಾಣಿಸುತ್ತೆ....
Tuesday, January 27, 2009
ಶ್ರೀರಾಮಸೇನೆಯ 'ತಾಲಿಬಾನ್' ಸಂಸ್ಕೃತಿ...
ಮಂಗಳೂರಿನ ಎಮ್ನೇಶಿಯ ಪಬ್‌ನಲ್ಲಿ ಅಶ್ಲೀಲ ನರ್ತನ ಮಾಡುತ್ತಿದ್ದರು, ಅನೈತಿಕ ಚಟುವಟಿಕೆ ನಡೆಸುತ್ತಿದ್ದರು, ಇದು ದೇಶದ ಸಂಸ್ಕೃತಿಗೆ ಆದ ಅಪಚಾರ ಎಂದು ಆರೋಪಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಇದೀಗ ದೇಶವ್ಯಾಪಿ ಚರ್ಚೆಗೆ ಒಳಗಾಗಿದೆ. ಹೌದು, ಪಬ್‌ನಲ್ಲಿ ನರ್ತನ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ್ದು ಸರಿ ಎಂಬುದು ಹಲವರ ವಾದವಾದರೆ, ದೇಶದ ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲು ಅವರಿಗೆ ಅಧಿಕಾರ ಕೊಟ್ಟವರಾರು ಎಂದೂ ಮಹಿಳಾ ಸಂಘಟನೆಗಳು ಕಟುವಾಗಿ ಪ್ರಶ್ನಿಸಿವೆ. ಇದು ತಾಲಿಬಾನ್ ಸಂಸ್ಕೃತಿಯ ಪ್ರತಿರೂಪ ಎಂದು ಕೇಂದ್ರ ಸಚಿವ ರೇಣುಕ ಚೌಧುರಿ ಗಂಭೀರವಾಗಿ ಆರೋಪಿಸಿದ್ದಾರೆ.
ಪಬ್‌ನಲ್ಲಿ ಅಶ್ಲೀಲವಾಗಿ ನರ್ತಿಸುತ್ತಿದ್ದರು, ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಬರುತ್ತದೆ. ಈ ರೀತಿ ಮಾಡುವುದರಿಂದ ಯುವ ಪೀಳಿಗೆಗೆ ಎಚ್ಚರಿಕೆಯ ಸಂದೇಶ ಹೋಗುತ್ತದೆ. ಮತ್ತು ಇಂತಹ ಹೋರಾಟವನ್ನು ಮುಂದುವರಿಸುವುದಾಗಿಯೂ ಸೇನೆಯ 'ದಂಡಾಧಿಕಾರಿ' ಪ್ರಮೋದ್ ಮುತಾಲಿಕ್ ಸ್ಪಷ್ಟನೆಯನ್ನೂ ನೀಡಿದ್ದಾರೆ. ನಿಜಕ್ಕೂ ಪಬ್ ಮೇಲೆ ದಾಳಿ ಮಾಡುವುದರಿಂದ ಸಂಸ್ಕೃತಿಯ ರಕ್ಷಣೆ ಸಾಧ್ಯವೆ?ಅಲ್ಲಿ ಅರೆಬೆತ್ತಲೆ ನರ್ತನ ಮಾಡುತ್ತಿದ್ದರು ಇದರಿಂದ ನಮ್ಮ ಸಂಸ್ಕೃತಿಯೇ ಎಕ್ಕುಟ್ಟಿ ಹೋಗುತ್ತಿದೆ ಅಂತ ಲಬೋ, ಲಬೋ ಅಂತ ಬಡಿದುಕೊಳ್ಳುವುದರಲ್ಲಿ ಅರ್ಥವಿದೆಯಾ ?
ಮಂಗಳೂರಿನ ಪಬ್‌ನಲ್ಲಿ ಅರೆಬೆತ್ತಲೆ ನರ್ತನ ಮಾಡುತ್ತಿರುವುದರಿಂದ ಸಂಸ್ಕೃತಿ ಹಾಳಾಗುತ್ತದೆ ಎಂದು ಬೊಬ್ಬೆ ಹೊಡೆಯುತ್ತಿರುವ ಶ್ರೀರಾಮಸೇನೆ (ಇದನ್ನು ಸಂಘ-ಪರಿವಾರ ಕೂಡ ಅದನ್ನೇ ಮಾಡಿದೆ, ಈಗ ಬಿಜೆಪಿಯಿಂದ ಮುನಿಸಿಕೊಂಡು ಶ್ರೀರಾಮಸೇನೆ ಕಟ್ಟಿರುವ ಮುತಾಲಿಕ್ ಮೇಲೆ ಅಸಮಾಧಾನ ಇರುವುದರಿಂದಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ಗಟ್ಟಿಧ್ವನಿಯಲ್ಲಿ ಹೇಳಿದ್ದಾರೆ. ಅದೇ ಬಿಜೆಪಿ ಅಂಗಸಂಸ್ಥೆಗಳು ಮಾಡಿದ್ದರೆ ಅಂತಹ ಕ್ರಮಕ್ಕೆ ಶೀಘ್ರವೇ ಮುಂದಾಗುತ್ತಿದ್ದರೆ ಎಂಬುದು ಬೇರೆ ಪ್ರಶ್ನೆ. ಚರ್ಚ್ ದಾಳಿ ಪ್ರಕರಣದಲ್ಲಿ ಬಜರಂಗದಳದ ಮಹೇಂದ್ರ ಕುಮಾರ್ ಮಾಧ್ಯಮದಲ್ಲಿ ಘಟನೆಯ ಹೊಣೆ ಹೊತ್ತುಕೊಂಡು ಹೇಳಿಕೆ ನೀಡಿದ್ದರಿಂದ ಅವರು ತಲೆದಂಡ ಕೊಡಬೇಕಾಯಿತು ಅಷ್ಟೇ.)
ಇಂದು ಹಿಂದಿ, ತಮಿಳು, ಕನ್ನಡ ಸಿನಿಮಾಗಳಲ್ಲಿ ತೋರಿಸುವ ಅರೆನಗ್ನ ದೃಶ್ಯಗಳನ್ನು ನೋಡಿ ಯುವ ಪೀಳಿಗೆ ಹಳ್ಳಹಿಡಿದು ಹೋಗುವುದಿಲ್ಲವಾ?ಪ್ರತಿ ತಾಲೂಕುಗಳಲ್ಲಿ 'ಎ' (ಹೆಚ್ಚಾಗಿ ಮಲಯಾಳಂ ಭಾಷೆಯ) ಸಿನಿಮಾಗಳು ಪ್ರದರ್ಶನಗೊಳ್ಳುತ್ತದೆ, ಅಲ್ಲೆಲ್ಲ ಸಾಲು,ಸಾಲಾಗಿ ನಿಂತು ಸಿನಿಮಾ ನೋಡಿ ಬರುತ್ತಾರಲ್ಲ, ಅದರಿಂದ ಸಂಸ್ಕೃತಿಗೆ ಧಕ್ಕೆ ಬರುವುದಿಲ್ಲವಾ? ಹೋಗಲಿ ಹಿಂದಿ, ಇಂಗ್ಲಿಷ್ ಕೆಲವು ಸಿನಿಮಾಗಳಲ್ಲಿ ಮೈಮೇಲೆ ಬಟ್ಟೆ ಎಲ್ಲಿದೆ ಎಂದು ಹುಡುಕಬೇಕಾಗುತ್ತೆ.... ಅದನ್ನು ಬಾಯಿ ಚಪ್ಪರಿಸಿಕೊಂಡು, ಸಿಳ್ಳೆ ಹಾಕಿ ನೋಡುವ ನಾವು ಅದರಿಂದ ಸಂಸ್ಕೃತಿಗೆ ಅಪಚಾರ ಅಗುವುದಿಲ್ಲವಾ? ಇವತ್ತು ಸೈಬರ್ ಸೆಂಟರ್‌ಗಳಲ್ಲಿ ನಡೆಯುತ್ತಿರುವ ಸೈಬರ್ ಸೆಕ್ಸ್ ಬಗ್ಗೆ ನೀವ್ಯಾಕೆ ಸುಮ್ಮನಿದ್ದೀರಿ ಸೇನೆಯವರೇ ? ಪಬ್‌ಗೆ ಹೋಗುವುದರಿಂದ, ಅವರನ್ನು ನೋಡುವುದರಿಂದ ಉಳಿದವರು ಹಾಳಾಗುತ್ತಾರೆಂಬ ಧೋರಣೆ ಇದೆಯಲ್ಲ ಅದೇ ದೊಡ್ಡ ವಿಪರ್ಯಾಸದ್ದು. ನಾವು ನೆಟ್ಟಗಿದ್ದರೆ ಅದ್ಯಾಕೆ ಹಾಗಾಗುತ್ತೆ, ಹೋಗಲಿ ಒಬ್ಬರನ್ನು ನೋಡಿ ಹಾಳಾಗುವುದು, ಹೇಳಿದ್ದನ್ನು ಕೇಳಿ ಹಾಳಾಗುವುದು,ಒಳ್ಳೆಯದಾಗುವುದು ಅಂತ ಆದರೆ... ರಾಮಾಯಣ, ಮಹಾಭಾರತ ಸಿರಿಯಲ್ ನೋಡಿ ಅದೆಷ್ಟು ಮಂದಿ ಶ್ರೀರಾಮ, ಧರ್ಮರಾಯ ಆಗಬೇಕಿತ್ತು. ಯಾರು ಆಗಿಲ್ವಲ್ಲಾ.
ಧರ್ಮದ ರಕ್ಷಣೆ, ಸಂಸ್ಕೃತಿಯ ರಕ್ಷಣೆ ಮಾಡಲು ಶ್ರೀರಾಮಸೇನೆಗೆ ಗುತ್ತಿಗೆ ನೀಡಿದ್ದಾರಾ? ಹೋಗಲಿ ಸಾಹಿತ್ಯಗಳಲ್ಲಿ ಎಷ್ಟು ಅಶ್ಲೀಲ ಇಲ್ಲ, ಅವೆಲ್ಲ ಓದಿದವನು ಹಾಳಾಗಬೇಕಲ್ಲ....ಹಾಗಾದರೆ ತಾಲಿಬಾನ್ ಹುಡುಗಿಯರಿಗೆ ಶಾಲೆಗೆ ಹೋಗಬೇಡಿ, ಪುರುಷರು ಗಡ್ಡ ಬೋಳಿಸಿಕೊಳ್ಳಬೇಡಿ ಎಚ್ಚರ ಎಂದು ಫರ್ಮಾನು ಹೊರಡಿಸುತ್ತೆ....ಅದು ಮಾಡುವುದು ಸಂಸ್ಕೃತಿ ಮತ್ತು ಧರ್ಮದ ಹೆಸರಲ್ಲಿ. ನೀವು ಕೂಡ ಅದನ್ನೇ ಮಾಡುತ್ತೀರಲ್ಲ ಏನಾದರು ವ್ಯತ್ಯಾಸ ಇದೆ ಅನ್ನಿಸುತ್ತಾ ?ನೀವು ಧರ್ಮದ ರಕ್ಷಣೆ....ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಮಾಡುತ್ತೀರಿ ಎಂದು ಸಮರ್ಥನೆ ನೀಡುತ್ತೀರಿ ಎಂದಾದರೆ...ತಾಲಿಬಾನಿಗಳು ಅದನ್ನೇ ಹೇಳುತ್ತಾರಲ್ಲ. ಅವರ ದೃಷ್ಟಿಯಲ್ಲಿ ಅದು ಪವಿತ್ರ ಕೆಲಸ !! ಪಬ್ ಸಂಸ್ಕೃತಿಯಿಂದ ಯುವ ಪೀಳಿಗೆ ಕೆಟ್ಟ ಹಾದಿ ಹಿಡಿಯುತ್ತೆ, ಅದನ್ನು ನಾವು ನಿಲ್ಲಿಸುತ್ತೇವೆ ಸಂಸ್ಕೃತಿಯನ್ನು ರಕ್ಷಿಸುತ್ತೇವೆ ಎಂಬ ವಾದ ಇದೆಯಲ್ಲ.... ಸಿನಿಮಾದಲ್ಲಿ ಹೀರೋ ನೂರು ಜನರನ್ನು ಹೊಡೆದು ಸಮಾಜದ ಉದ್ದಾರಕ್ಕೆ ಹೊರಟ ಹಾಗೇ...ಅಷ್ಟೇ ಬಾಲಿಶವಾದದ್ದು......

Subscribe to:
Posts (Atom)