Thursday, May 14, 2015

ಪಡುಕೋಣೆ ನನಗೆ ತುಂಬಾ ಇಷ್ಟ...ಅದೆಷ್ಟೋ ನೆನಪುಗಳು!

ಪಡುಕೋಣೆ ನನಗೆ ತುಂಬಾ ಇಷ್ಟ. ಹಾಗಂತ ಹೇಳಿದರೆ ಪಡುಕೋಣೆಯವರಿಗೆ ತುಸು ಕೋಪ ಬರಬಹುದು, ಅದಕ್ಕೆ ಕಾರಣ ಮಳೆಗಾಲದಲ್ಲಿ ಪಡುಕೋಣೆಯ ನದಿಪಾತ್ರದ ಸಮೀಪ ಇರುವ ಹಡವು ಗ್ರಾಮದವರ ಸ್ಥಿತಿ ತುಂಬಾ ಘೋರವಾದದ್ದು. ನನ್ನ ಅಮ್ಮನ ಮನೆ, ನನ್ನ ಅಜ್ಜನ ಮನೆ ಪಡುಕೋಣೆ. ಹಾಗಾಗಿ ಮಳೆಗಾಲದ ನೆರೆಗೆ ಅಲ್ಲಿನವರು ಪಾಡು ನಾನು ಕಣ್ಣಾರೆ ಕಂಡವನು. 1984ರಲ್ಲಿ ಬಂದ ದೊಡ್ಡ ನೆರೆಗೆ ಹಲವು ದಿನಗಳ ಕಾಲ ಮನೆ ಬಿಟ್ಟಿದ್ದರು. ನಾನು ಚಿಕ್ಕವನಿದ್ದಾಗ ಪಡುಕೋಣೆಯಲ್ಲಿ ಹಲವು ಸಮಯ ಕಳೆದಿದ್ದೆ. ಆ ಪುಟ್ಟ ಊರು ನಮಗೆ ಆಗ ತುಂಬಾ ಸುಂದರ. ಅಲ್ಲಿನ ವಿಶಾಲ ಗದ್ದೆಗಳು, ತಣ್ಣನೆ ಹರಿಯುತ್ತಿದ್ದ ಸೌಪರ್ಣಿಕಾ ನದಿ, ಅಜ್ಜ, ಅಜ್ಜಿ ಬೈದರೂ ಕದ್ದು ಮುಚ್ಚಿ ಈಜಾಡುತ್ತಿದ್ದದ್ದು, ಸಣ್ಣ, ಸಣ್ಣ ಹೊಳೆ ಸಾಲಿನಲ್ಲಿ ಗಾಳ ಹಾಕಿ ಕೂರುತ್ತಿದ್ದ ದಿನಗಳು ನನ್ನ ಕಣ್ಣ ಮುಂದೆ ಬರುತ್ತಿದೆ.
ಈಗ ಪಡುಕೋಣೆ ಎಂದ ಕೂಡಲೇ ಥಟ್ಟನೆ ನೆನಪಾಗೋದು ಬಹುತೇಕರಿಗೆ ನಟಿ ದೀಪಿಕಾ ಪಡುಕೋಣೆ. ಗೂಗಲ್ ಸರ್ಜ್ ಗೆ ಹೋಗಿ ಪಡುಕೋಣೆ ಅಂತ ಹಾಕಿದರೂ ಆಕೆಯದೇ ಫೋಟೊ ಬರುತ್ತೆ! ಆದರೆ ಆಕೆ ಪಡುಕೋಣೆಗೆ ಬಂದಿದ್ದಾಗಲಿ, ಪಡುಕೋಣೆ ಯಾವ ದಿಕ್ಕಿನಲ್ಲಿ ಇದೆ ಎಂದು ಆಕೆಗೆ ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ. ಆಕೆ ತಂದೆ ಪ್ರಕಾಶ್ ಪಡುಕೋಣೆಯನ್ನು ಉದ್ಯಮಿ ಸುರೇಶ್ ಪಡುಕೋಣೆ (ಮುಂಬೈ ಅಪೋಲೋ ಮಾಲೀಕ, ಸುಖ್ ಸಾಗರ್ ಸುರೇಶ್ ಪಡುಕೋಣೆ ಅಲ್ಲ) ಆಯೋಜಿಸಿದ್ದ ಕ್ರಿಕೆಟ್ ಮ್ಯಾಚ್ ಸಮಾರಂಭಕ್ಕೆ ಕರೆದಿದ್ದ ನೆನಪು ನನಗೆ. ಅದು ಹೊರತುಪಡಿಸಿದರೆ, ಅವರಿಗೂ ಪಡುಕೋಣೆಗೆ ಇರುವ ನಂಟು ಅಷ್ಟಕಷ್ಟೇ.
ಆದರೆ ನನಗೆ ಪಡುಕೋಣೆ ಜೊತೆ ಮರೆಯಲಾರದ ನಂಟಿದೆ. ಅಜ್ಜನ ಮನೆ ಇದೆ, ನನ್ನ ಹಲವಾರು ಬಾಲ್ಯ ಸ್ನೇಹಿತರಿದ್ದಾರೆ. ಅಜ್ಜ ಹೇಳುತ್ತಿದ್ದ ರೋಚಕ ಕಥೆಗಳ ನೆನಪಿದೆ. ನಾವು ಪಡುಕೋಣೆಗೆ ಹೋಗಬೇಕಿದ್ದರೆ ಮರವಂತೆಗೆ ಬಂದು ದೋಣಿ ದಾಟಿ ಪಡುಕೋಣೆ ತಲುಪಬೇಕಿತ್ತು. ಅದು ಬಿಟ್ಟರೆ ನಮ್ಮ ತ್ರಾಸಿಯಿಂದ ಹೋಗಿ ಕೂಗು ಹಾಕಿ ದೋಣಿಗಾಗಿ ಕಾದು ಪಡುಕೋಣೆ ತಲುಪಬೇಕಿತ್ತು. ನಾನು ಚಿಕ್ಕವನಿದ್ದಾಗ ಪಡುಕೋಣೆಗೆ ಹೋದಾಗ ಕೆಲವೆಡೆ ಸಂಕ (ಸಣ್ಣ ತೊರೆ ದಾಟಲು ಅಡ್ಡಲಾಗಿ ಹಾಕುತ್ತಿದ್ದ ಮರ) ದಾಟುವಾಗ ಎದೆ ಹೊಡೆದುಕೊಳ್ಳುತ್ತಿತ್ತು. ಯಾಕೆಂದರೆ ಆಯತಪ್ಪಿದ್ರೆ ನೀರಿಗೆ ಬೀಳುತ್ತೇನೆ ಎಂಬ ಭಯ. ಒಂದು ರೀತಿಯ ಪುಕ್ಕಲು. ಅಂತೂ ಧೈರ್ಯ ಮಾಡಿ ಕೊನೆಗೂ ಅದನ್ನು ದಾಟುತ್ತಿದ್ದೆ.
ಕೆಲವೊಮ್ಮೆ ಮಧ್ಯಾಹ್ನದ ಉರಿ ಬಿಸಿಲಿನ ಸಮಯದಲ್ಲೂ ಇಡೀ ಊರೇ ನೀರವ ಮೌನ ಆವರಿಸಿದಂತೆ ಇರುತ್ತಿತ್ತು. ಆಗ ಅಪರೂಪಕ್ಕೊಮ್ಮೆ ಐಸ್ ಕ್ಯಾಂಡಿ ಅಂತ ಸೈಕಲ್ ದೂಡುತ್ತ ವ್ಯಕ್ತಿಯೊಬ್ಬ ಬರುತ್ತಿದ್ದ, ಆ ಕೂಗು ಕೇಳಿ ನಾವು ಗದ್ದೆ ಕಂಠದ ಮೇಲಿಂದ ಓಡಿಹೋಗಿ ಐಸ್ ಕ್ಯಾಂಡಿ ತಂದು ತಿನ್ನುತ್ತಿದ್ದೇವು. ಸಂಜೆ ಆಗುತ್ತಿದ್ದಂತೆ ಮತ್ತೆ ನೀರವ ಮೌನ, ಚೀರುಂಡೆಗಳ ಸದ್ದು, ವಿದ್ಯುತ್ ಇಲ್ಲ, ಟಿವಿ ಮಾತೇ ಇಲ್ಲ...ಮೊಬೈಲ್, ಇಂಟರ್ನೆಟ್ ಯಾವ ಸುಡುಗಾಡು ಇಲ್ಲದ ಕಾಲವದು. ಅಕ್ಕಪಕ್ಕದ ಮನೆಯಿಂದ ಆಗ ಕೇಳಿಬರುತ್ತಿದ್ದದ್ದು ಭಜನೆ, ಕೆಲವು ಮನೆಗಳಿಂದ ಯೇಸು ಪ್ರಾರ್ಥನೆ...7.30ಕ್ಕೆಲ್ಲ ಊಟ, ಕಾಡು ಹರಟೆ, ನಿದ್ದೆ. ಬೇಸಿಗೆ, ಚಳಿಗಾಲ ಖುಷಿ ಕೊಡುತ್ತಿದ್ದರೆ, ಮಳೆಗಾಲದ ನೆರೆ ಮಾತ್ರ ಪಡುಕೋಣೆಗೆ ಶಾಪದಂತೆ ಆಗಿತ್ತು. ಅಲ್ಲದೇ ಸೇತುವೆ ಇಲ್ಲದಿರುವುದು ಕೂಡಾ ದೊಡ್ಡ ತೊಂದರೆಯೇ ಆಗಿತ್ತು. ಯಾಕೆಂದರೆ ಹೆಚ್ಚಿನವರ ಬಳಿ ಸ್ವಂತದ ದೋಣಿ ಇಲ್ಲವಾಗಿತ್ತು. ಪಡುಕೋಣೆಯಿಂದ ಕುಂದಾಪುರ ಅಥವಾ ಹೊರಗೆ ಹೋಗಿದ್ದವರು ಸಂಜೆಯೊಳಗೆ ಮನೆಗೆ ಬರಬೇಕಾಗಿತ್ತು. ಇಲ್ಲದಿದ್ದರೆ ಮರವಂತೆಯಲ್ಲಿ ಬಹುಶಃ 9.30ರ ತನಕ ದೋಣಿ ದಾಟಿಸುತ್ತಿದ್ದರು. ಇದೀಗ ಸುಮಾರು ಹಲವು ದಶಕಗಳ ನಂತರ ಪಡುಕೋಣೆ ಮರವಂತೆ ವರಾಹಸ್ವಾಮಿ ದೇವಸ್ಥಾನ ಸಮೀಪದಿಂದ ಸೇತುವೆ ನಿರ್ಮಾಣವಾಗುತ್ತಿದೆ. ಆ ಮೂಲಕ ಪಡುಕೋಣೆ ಜನತೆಯ ಬೇಡಿಕೆಗೆ ಮನ್ನಣೆ ದೊರಕಿದಂತಾಗಿದೆ. ಈ ಸೇತುವೆ ನಿರ್ಮಾಣ ನನಗೆ ಪಡುಕೋಣೆಯಲ್ಲಿ ಕಳೆದ ದಿನಗಳ ನೆನಪಿಗೆ ಕಾರಣವಾಗಿದೆ.

2 comments:

ವಿ.ರಾ.ಹೆ. said...

ಒಂದು ವಾರದ ಹಿಂದೆ ಮರವಂತೆಗೆ ಬಂದಾಗ ಅಲ್ಲಿ ಸೇತುವೆ ನಿರ್ಮಾಣವಾಗುತ್ತಿದ್ದುದ್ದನ್ನು ನೋಡಿದೆ. ಎಷ್ಟೋ ದಿನಗಳ ಬೇಡಿಕೆ ಈಗ ಸಾಕಾರವಾಗುತ್ತಿದೆ ಅಂತ ಅಲ್ಲಿನ ಜನ ಹೇಳುತ್ತಿದ್ದರು.

ವಿ.ರಾ.ಹೆ. said...
This comment has been removed by the author.