Sunday, August 17, 2008

ಕೆಂಪುಕೋಟೆ ಚೀನಾದ ಮುಖವಾಡ....

ನಾ ಬೀಜಿಂಗ್‌ನಲ್ಲಿ ಆರಂಭಿಸಿದ ಒಲಿಂಪಿಕ್ ಗೇಮ್ಸ್‌‌ನ ತಯಾರಿ,ಉದ್ಘಾಟನಾ ಸಮಾರಂಭದ ಅದ್ದೂರಿ ಜಗತ್ತನ್ನೇ ನಿಬ್ಬೆರಗಾಗಿಸಿ ದ್ದಂತೂ ಸುಳ್ಳಲ್ಲ. ಉದ್ಘಾಟನಾ ಸಮಾರಂಭದ ಕಾರ್ಯಕ್ರಮವಂತೂ ಮೈನವಿರೇಳಿಸಿದ್ದವು,ಜಾಗತಿಕವಾಗಿ ಶಕ್ತಿ ಪ್ರದರ್ಶನ ಮಾಡಲು ಹೊರಟ ಕಮ್ಯೂನಿಷ್ಟ್ ದೇಶ ತನ್ನ ಮೇಲಿನ ಅಪವಾದದ ಕೊಳೆಯನ್ನು ತೆಗೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಂತೂ ಸತ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೂ 'ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ' ಎಂಬ ಗಾದೆಯಂತೆ ಒಲಿಂಪಿಕ್ ಉದ್ಘಾಟನಾ ಸಮಾರಂಭದಲ್ಲಿಯೂ ಅದರ ಮುಖವಾಡ ಕಳಚಿಬಿದ್ದಿದೆ.ಒಲಿಂಪಿಕ್ ಉದ್ಘಾಟನೆ ದಿನದಂದು ಪುಟ್ಟ ಬಾಲಕಿಯೊಬ್ಬಳು ಹಾಡೊಂದನ್ನು ಹಾಡಿದ್ದಳು, ಅದನ್ನು ಟಿವಿಗಳಲ್ಲಿ ಕೋಟ್ಯಂತರ ಜನರು ವೀಕ್ಷಿಸಿದ್ದರು.

ಬಳಿಕ ಬೀಜಿಂಗ್ ರೇಡಿಯೋಗೆ ಸಂದರ್ಶನ ನೀಡಿದ್ದ ಚೀನಾದ ಸಂಗೀತ ನಿರ್ದೇಶಕ ಜಾಂಗ್ ಯಿಮೂವ್,ಆಘಾತಕಾರಿ ಸುದ್ದಿಯೊಂದನ್ನು ಹೊರಗೆಡಹಿದ್ದರು. ನಿಜಕ್ಕೂ ಆ ದಿನ ಸಂಗೀತ ಹಾಡಿದಾಕೆ ಮಿಯೋಕೆ ಎಂಬಾಕೆ,ಆದರೆ ಆಕೆಯ ಹಲ್ಲು ಸ್ವಲ್ಪ ಉಬ್ಬಾಗಿದ್ದರಿಂದ ಕೊನೆಯ ಕ್ಷಣದ ಬದಲಾವಣೆ ಎಂಬಂತೆ,ಹಾಡು ಮಾತ್ರ ಮಿಯೋಕೆಯದ್ದು,ಎದುರುಗಡೆ ನಿಂತಿದ್ದು ಯಾಂಗ್ ಪೇಯಿ ಎಂಬ ಚೆಂದದ ಬಾಲಕಿ.

ಆದರೆ ಇದನ್ನು ಕಮ್ಯೂನಿಷ್ಟ್ ಸರ್ಕಾರ ತಾನು ಮಾಡಿದ್ದೇ ಸರಿ ಎಂಬುದಾಗಿ ಸಮರ್ಥಿಸಿಕೊಂಡಿದೆ. ಮಿಯೋಕೆ ತಂದೆ ಮಾತ್ರ ಕಣ್ಣೀರು ಸುರಿಸಿದ್ದರು,ತನ್ನ ಮಗಳ ಹಾಡನ್ನು ಕೋಟ್ಯಂತರ ಜನ ಆಲಿಸಿದ್ದಾರೆ,ಆದರೆ ಆಕೆ ಅಂದ ಇಲ್ಲ ಎಂಬ ಒಂದೇ ಕಾರಣಕ್ಕೆ ಷೋಕಿಗಾಗಿ ಹೊರಪ್ರಪಂಚದ ಕಣ್ಣಿಗೆ ಕಾಣಲು ಮತ್ತೊಬ್ಬಾಕೆಯನ್ನು ಉತ್ಸವ ಮೂರ್ತಿಯಾಗಿ ನಿಲ್ಲಿಸಿದ್ದರು ಎಂದು !!

ಹೊರ ಪ್ರಪಂಚಕ್ಕೆ ತಾನೊಂದು ಸುಭಗ ದೇಶ ಎಂದು ತೋರಿಸಿಕೊಳ್ಳಲು ಹೊರಟ ಚೀನಾದ ಕೀಳುಮಟ್ಟದ ಆಲೋಚನೆ ಮತ್ತು ಕ್ರಮದ ಚಿಕ್ಕ ಉದಾಹರಣೆ ಇದಾಗಿದೆ. ಚೀನಾ ಮತ್ತು ಅಮೆರಿಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಮೆರಿಕ ಕೂಡ ಅಷ್ಟೇ ಭಯೋತ್ಪಾದನೆ ವಿರುದ್ಧ ,ನ್ಯೂಕ್ಲಿಯರ್ ವಿರುದ್ಧ,ಮಾನವಹಕ್ಕುಗಳ ಉಲ್ಲಂಘನೆ ವಿರುದ್ಧ ಗುಟುರು ಹಾಕುವ ದೊಡ್ಡಣ್ಣನ ಸಣ್ಣತನ ಮಾತ್ರ ಜಗಜ್ಜಾಹೀರು.

ನಮ್ಮ ದೇಶದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಮಗಳು ಇತ್ತೀಚೆಗಷ್ಟೇ ಅಧಿಕೃತವಾಗಿ ಅಮೆರಿಕ ನಡೆಸಿರುವ ಮಾನವಹಕ್ಕು ಉಲ್ಲಂಘನೆಯ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿರುವ ಬಗ್ಗೆ ವರದಿಯಾಗಿತ್ತು. ಅಲ್ಲದಿದ್ದರೂ ಸಾಮ್ರಾಜ್ಯಶಾಹಿ ಯಾಗಿರುವ ಅಮೆರಿಕ ಉಳಿದೆಲ್ಲ ದೇಶಗಳಿಗೂ ಹಿತೋಪದೇಶ ನೀಡುತ್ತೇ, ಆದರೆ ತಾನು ಮಾತ್ರ ಮಾಡುವ ಲುಚ್ಚಾ ಕೆಲಸ ಗಳಿಂದಾಗಿ ಲಕ್ಷಾಂತರ ಅಮಾಯಕರ ಬಲಿ ತೆಗೆದುಕೊಂಡಿದೆ, ಅದೆಷ್ಟೋ ದೇಶಗಳಲ್ಲಿ ಭಯೋತ್ಪಾದನೆ, ಗೂಂಡಾಗಿರಿ ಸೃಷ್ಟಿಸಿದೆ(ಒಸಾಮ ಬಿನ್ ಲಾಡೆನ್ ಕೂಡ ಅಮೆರಿಕ ಸಾಕಿ-ಸಲುಹಿತ ಕೂಸು ಎಂಬುದನ್ನು ಮರೆಯಬೇಡಿ).

ಆರ್ಥಿಕ ಅಲ್ಲೋಲ - ಕಲ್ಲೋಲ ಮಾಡುವ ಮೂಲಕ ತನ್ನ ಅಂಗೈಯಲ್ಲಿಟ್ಟುಕೊಂಡಿದೆ. ತನ್ನೆಲ್ಲಾ ತಪ್ಪುಗಳನ್ನು ಮುಚ್ಚಿ,ಬೇರೆಯವರತ್ತ ಕೈ ತೋರಿಸುವ ಅಮೆರಿಕದ ಚಾಳಿ ಎಗ್ಗಿಲ್ಲದೆ ಮುಂದುವರಿದಿದೆ. ಆದೇ ತೆರನಾದ ಮುಖವಾಡ ಹೊಂದಿರುವ ಚೀನಾ ಕೂಡ ಕಡಿಮೆಯಿಲ್ಲ,1999ರಲ್ಲಿ ಲೀ ಹೊಂಗ್‌‌ಚೀ ಎಂಬಾತ ಫಾಲುನ್ ಗೊಂಗ್ ಎಂಬ ಧಾರ್ಮಿಕ ಪಂಥವನ್ನು ಹುಟ್ಟು ಹಾಕುತ್ತಾನೆ. ಅದು ನೋಡ,ನೋಡುತ್ತಿದ್ದಂತೆಯೇ ಚೀನಾದಾದ್ಯಂತ ಹೊಸ ಅಲೆಯನ್ನೇ ಎಬ್ಬಿಸುತ್ತೆ,ಆತನದ್ದು ಕೇವಲ ಐದು ವಿಧಗಳ ಧ್ಯಾನ ಪದ್ಧತಿ(ಬೌದ್ಧಿಸಂ ಮಾದರಿ)ಯಾಗಿತ್ತು.

ಇದರಲ್ಲಿ ಚೀನಾ ಕಮ್ಯೂನಿಷ್ಟ್ ಪಾರ್ಟಿಯ(ಸಿಸಿಪಿ)ಸದಸ್ಯರೇ ಲಕ್ಷಾಂತರ ಸಂಖ್ಯೆಯಲ್ಲಿ ಅವನ ಅನುಯಾಯಿಗಳಾಗ ತೊಡಗಿದರು. ಇದರಿಂದ ಬೆಚ್ಚಿ ಬಿದ್ದ ಚೀನಾ,ಓಹ್ ಇದು ತನ್ನ ಬುಡಕ್ಕೆ ಬರುತ್ತದೆ ಎಂಬು ಅಸೂಯೆಯಿಂದ,ಪಾಲುನ್ ಅನುಯಾಯಿಗಳನ್ನು ಕಂಡ,ಕಂಡಲ್ಲಿ ಮಕ್ಕಳು,ಮಹಿಳೆಯರು,ಪುರುಷರು ಎಂಬ ಭೇದಭಾವ ಇಲ್ಲದೆ,ಬೆತ್ತಲಾಗಿಸಿ ಚಿತ್ರ ಹಿಂಸೆ ನೀಡತೊಡಗಿತ್ತು.

ದಿನದಿಂದ ದಿನಕ್ಕೆ ಆತನ ಅನುಯಾಯಿಗಳ ಸಂಖ್ಯೆ ಏರುತ್ತಿದ್ದಂತೆಯೇ,ಚೀನಾ ನಾಗರಿಕ ವ್ಯವಹಾರಗಳ ಸಚಿವಾಲಯ ಅಧಿಕೃತ ಆದೇಶ ವೊಂದನ್ನು ಹೊರಡಿಸುತ್ತದೆ, ಪಾಲುನ್ ಒಂದು ಅಧಿಕೃತವಾದ ಸಂಸ್ಥೆಯಲ್ಲ,ಅದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು,ಜನರಲ್ಲಿ ಮೂಢನಂಬಿಕೆಗಳನ್ನು ಬೆಳೆಸುತ್ತಿದ್ದು,ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ ಎಂದು ಹೇಳಿ,ಫಾಲುನ್ ಅನ್ನು ನಿಷೇಧಿಸುತ್ತದೆ.

ಅಲ್ಲದೇ ಅದರ ಸ್ಥಾಪಕ ಲೀ ಅವರ ಬಂಧನಕ್ಕೆ ವಾರೆಂಟ್ ಹೊರಡಿಸಿದೆ.ಇದೀಗ ಲೀ ಅಮೆರಿಕದಲ್ಲಿದ್ದಾರೆ. ಚೀನಾ ಎಷ್ಟೇ ಚಿತ್ರಹಿಂಸೆ, ನಿಷೇಧ ಹೇರಿದರೂ ಕೂಡ ಇದೀಗ ಚೀನಾದ್ಯಂತ ಸುಮಾರು 70ಮಿಲಿಯನ್ ಮಂದಿ ಲೀ ಅನುಯಾಯಿಗಳಿದ್ದಾರೆ. ಆದರೆ ಪಾಲುನ್ ವರದಿ ಪ್ರಕಾರ ಪ್ರಪಂಚದ 80ದೇಶಗಳಲ್ಲಿ ಒಟ್ಟು 100ಮಿಲಿಯನ್ ಬೆಂಬಲಿಗರನ್ನು ಹೊಂದಿರುವುದಾಗಿ ಹೇಳಿದೆ.

ಲೀ ವಿರುದ್ಧ ಬಂಧನದ ಆದೇಶ ಹೊರಡಿಸಿದ ನಂತರವೂ ಆತ ಯುಎಸ್‌ನಿಂದ ಪ್ರಕಟಣೆಯೊಂದನ್ನು ನೀಡಿದರು,ನಮ್ಮದು ಧ್ಯಾನ ಸಂಸ್ಥೆ ಯಾಗಿದೆ, ಜನರಿಗೆ ನೈತಿಕ ಸ್ಥೈರ್ಯ ಮತ್ತು ಮಾನಸಿಕ ಉನ್ನತಿ ಬಗ್ಗೆ ಹೇಳಲಾಗುತ್ತಿಯೇ ಹೊರತು ನಾವು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಲ್ಲ, ಅಲ್ಲದೇ ನಾನು ಯಾವುದೇ ರಾಜಕೀಯ ಸಂಘಟನೆಯನ್ನೂ ಕಟ್ಟುತ್ತಿಲ್ಲ ಎಂದು ತಿಳಿಸಿದರು.

ಆದರೂ ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಚೀನಾ ಮಾತ್ರ ಲೀ ಬೆಂಬಲಿಗರನ್ನು ಹುಡುಕಿ,ಹುಡುಕಿ ಚಿತ್ರ ಹಿಂಸೆ ನೀಡುತ್ತಿದೆ, ಮಾನವಹಕ್ಕುಗಳ ಕೂಗಿಗೂ ಬೆಲೆ ಇಲ್ಲದಂತಾಗಿದೆ. ಒಂದು ವರದಿ ಪ್ರಕಾರ 2002ರಲ್ಲಿ ಚೀನಾ ಸರ್ಕಾರ ಪಾಲುನ್‌ನ ಸುಮಾರು 1600 ಅನುಯಾಯಿಗಳನ್ನು ಚಿತ್ರ ಹಿಂಸೆ ನೀಡಿ ಹತ್ಯೆಗೈದಿದೆ.

ಕೆಲವರು ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೆಲ್ಲವೂ ಪೊಲೀಸ್ ಕಸ್ಟಡಿಯಲ್ಲೇ ನಡೆದ ಘಟನೆ ಯಾಗಿದೆ. (ಅಮೆರಿಕ ಕೂಡ ಓಶೋ ರಜನೀಶ್ ಬಗ್ಗೆ ಇದೇ ರೀತಿ ಮಾಡಿತ್ತು,ಅವರು ಹೋದಲ್ಲೆಲ್ಲಾ ಅನುಯಾಯಿಗಳದ್ದೇ ಹಿಂಡು, ಅಮೆರಿಕದಲ್ಲಿ ಅವರ ಪ್ರಭಾವ ಹೆಚ್ಚಾಗುತ್ತಿದ್ದುದನ್ನು ನೋಡಿಯೇ ಅವರಿಗೆ ಥೇಲಿಯಂ ಎಂಬ ವಿಷಯುಕ್ತ ಚುಚ್ಚು ಮದ್ದು ನೀಡಿ ವ್ಯವಸ್ಥಿತವಾಗಿ ಸಾವಿನ ದವಡೆಗೆ ನೂಕಿತ್ತು!)

ಇದೀಗ ತನ್ನೆಲ್ಲಾ ಹುಳುಕುಗಳನ್ನು ಮುಚ್ಚಿ ಹಾಕಲು,ಜಗತ್ತಿಗೆ ತಾನೊಬ್ಬ ಬಲಿಷ್ಠ,ಸಜ್ಜನ ಎಂಬ ಫೋಸು ನೀಡಲು ಒಲಿಂಪಿಕ್ ಗೇಮ್ಸ್‌ನ ಅಬ್ಬರದಲ್ಲಿದೆ. ಆದರೆ ಕೆಂಪುಕೋಟೆಯೊಳಗೆ ನಡೆಯುತ್ತಿರುವ ಮಾರಣಹೋಮದ ಬಗ್ಗೆ ಧ್ವನಿ ಎತ್ತುವವರಾರು....

No comments: