Wednesday, October 8, 2008

ಮಹಾತ್ಮನೆಂದರೆ ಅದ್ಯಾಕೆ ಮುನಿಸು...

ಬಾಪೂಜಿ ನಿಮ್ಮ ಬಗ್ಗೆ ಏನೆಂದು ಮಾತನಾಡಿಕೊಳ್ಳಲಿ,ನಿಮ್ಮ ಬಗ್ಗೆ ಮಾತನಾಡುವುದಾಗಲಿ,ಹೆಸರು ಹೇಳುವುದಾಗಲಿ ಎಲ್ಲವೂ ಅಪರಾಧ ಎಂಬಂತೆ ಆಗಬಿಟ್ಟಿದೆ.ಅದ್ಯಾಕೋ ಯುವಪೀಳಿಗೆಗಂತೂ ಗಾಂಧಿ ಎಂಬ ಶಬ್ದ ಕೇಳಿದರೆ ಸಾಕು,ಯಾವ ಜನ್ಮಾಂತರದ ದ್ವೇಷವೇನೋ ಎಂಬ ತೆರನಾಗಿ ಉರಿದು ಬೀಳುತ್ತಾರೆ. ಪಾಪ ಅವರಿಗೇನು ಗೊತ್ತು ನೀವು ಬದುಕಿರುವಾಗಲೇ ಎಲ್ಲ ಒಳಿತು-ಕೆಡುಕುಗಳ ಮಾತುಗಳನ್ನು ಕೇಳಿ ಸೌಹಾರ್ದತೆಗಾಗಿ ಹೋರಾಡಿಯೇ ಹಿಂದು ಬಾಂಧವನಿಂದಲೇ ಹತ್ಯೆಗೊಳಗಾಗಬೇಕಾಯಿತೆಂದು.

ನಿಮ್ಮ ಹೆಸರೀಗ ಕೇವಲ ಸಿನಿಮಾ ಟಾಕೀಸಿನ ಮುಂಭಾಗದಲ್ಲಿ,ರಂಗಸ್ಥಳದ ಎದುರಿನ ನೆಲದ ಮೇಲೆ ಕುಳಿತುಕೊಳ್ಳುವವರು, ಕ್ಲಾಸಿಗೆ ಚಕ್ಕರ್ ಹೊಡೆಯದೇ ಇರುವವರು ಹೀಗೆ ಅಲ್ಲೆಲ್ಲಾ ನಿನ್ನ ಹೆಸರು ಬಳಕೆಯಾಗುತ್ತದೆ. ಇಂವ ದೊಡ್ಡ ಗಾಂಧಿ ಮೊಮ್ಮಗ,ಗಾಂಧಿ ಕ್ಲಾಸ್ ಹೀಗೆ ನಾಮವಿಶೇಷಣಗಳ ಹಣೆಪಟ್ಟಿ ಹಚ್ಚಲಾಗುತ್ತದೆ.

ಈ ದೇಶ ಇಬ್ಭಾಗವಾಗಲು,ಮುಸ್ಲಿಂರನ್ನು ಹೆಗಲ ಮೇಲೆ ಹೊತ್ತುಕೊಂಡು ಓಲೈಕೆ ಮಾಡಿಕೊಂಡು, ಅವರ ಉಳಿವಿಗಾಗಿಯೇ ಉಪವಾಸ, ಅಹಿಂಸೆ ಮಣ್ಣು ಬೂದಿ ಅಂತ ಬ್ಲ್ಯಾಕ್ ಮೇಲ್ ಮಾಡಿಯೇ ಭಾರತೀಯ ಹಿಂದೂಗಳ ಮೇಲೆ ಚಪ್ಪಡಿ ಎಳೆದ ಗಾಂಧಿಯ ಹೆಸರು ಹೇಳಬೇಡಿ.

ಆತ ದೊಡ್ಡ ಖದೀಮ ಭಗತ್ ನೇಣಿಗೆ ಏರುವ ಸಂದರ್ಭದಲ್ಲಿಯೂ ದುಂಡು ಮೇಜಿನ ಮಾತುಕತೆಯಲ್ಲಿ ತುಟಿ ಪಿಟಕ್ ಎನ್ನದೇ ಇದ್ದ ಪರಿಣಾಮ ಗಲ್ಲಿಗೇರುವಂತಾಯಿತು, ಭಾರತದ ಪ್ರಥಮ ಪ್ರಧಾನಿ ಸರ್ದಾರ ವಲ್ಲಭಬಾಯಿ ಪಟೇಲ್ ಆಗಬೇಕಾಗಿದ್ದು, ಅದನ್ನು ತಮ್ಮ ಆಪ್ತ ನೆಹರೂಗೆ ಒಪ್ಪಿಸಿದ್ದು ಹೀಗೆ ತಾತಾನ ಮೇಲೆ ಅನೇಕ ಗುರುತರವಾದ ಆಪಾದನೆಗಳಿವೆ.

ಅವೆಲ್ಲಕ್ಕಿಂತ ಹೆಚ್ಚಾಗಿ ತಾತಾ ನೀನೊಬ್ಬ ಕಟ್ಟಾ ಹಿಂದೂ,ಸಂಪ್ರದಾಯವಾದಿ,ಹೇ ರಾಮ್ ಮಂತ್ರ ಜಪಿಸುತ್ತಲೇ ಸರ್ವ ಧರ್ಮ ಸಮನ್ವಯಕ್ಕಾಗಿ ಹೋರಾಡಿದ ಅರೆ ಬೆತ್ತಲೆ ಫಕೀರ ಎಂಬುದು ಪೂರ್ವಾಗ್ರಹ ಪೀಡಿತ ಮನಸ್ಸಿನ ಆಳಕ್ಕೆ ಇಳಿಯುವುದೇ ಇಲ್ಲ. 1948ರ ಆಗೋಸ್ಟ್ 15ರಂದು ಅಮೃತಸರದಲ್ಲಿ ಸಿಖ್ ಸಮುದಾಯ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ 30 ಮುಸ್ಲಿಂ ಮಹಿಳೆಯರನ್ನು ಬಲವಂತದಿಂದ ಸುತ್ತುಗಟ್ಟಿ ನಗ್ನಗೊಳಿಸಿ ನೃತ್ಯಮಾಡುವಂತೆ ಮಾಡಿದ್ದರು.

ಅಷ್ಟೇ ಅಲ್ಲ ಆ ಗುಂಪಿನಲ್ಲಿದ್ದ ಒಬ್ಬಾಕೆಯನ್ನು ಎಲ್ಲರೆದುರೇ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಈ ಸುದ್ದಿ ಪಾಕಿಸ್ತಾನದ ಲಾಹೋರ್‌ಗೆ ತಲುಪಿದಾಗ ಅಲ್ಲಿನ ಗುರುದ್ವಾರದಲ್ಲಿ ಆಶ್ರಯಪಡೆದಿದ್ದ ಸಿಖ್‌ರ ಮೇಲೆ ದಾಳಿ ಮಾಡಿ ಹತ್ಯೆಗೈದರು, ಗುರುದ್ವಾರಕ್ಕೆ ಬೆಂಕಿ ಹಚ್ಚಿ ಎಲ್ಲರನ್ನು ಸುಟ್ಟು ಬೂದಿ ಮಾಡಿದರು. ಹೀಗೆ ಹೊತ್ತಿಕೊಂಡ ಬೆಂಕಿ ಕಿಡಿ ಪಾಣಿಪತ್‌ನಲ್ಲಿ ರಕ್ತದೊಕುಳಿ ಹರಿದಿತ್ತು.

ಆ ಸಂದರ್ಭದಲ್ಲಿಯೇ ಅಲ್ಲವೇ ತಾತ ನೀವು ಯಾವ ಅಂಗರಕ್ಷಕರ ಸಹಾಯವಿಲ್ಲದೇ ಬುಡ್ಡಿದೀಪ ಹಿಡಿದು ಮನೆ,ಮನೆಗೆ ಹೋಗಿ ಅಂಗಲಾಚಿ ಬೇಡಿಕೊಂಡಿರಿ,ದಯವಿಟ್ಟಿ ಹಿಂಸೆ ನಿಲ್ಲಿಸಿ,ಹೋಗಿ ಮುಸ್ಲಿಂರನ್ನು ತಬ್ಬಿಕೊಳ್ಳಿ,ಸೌಹಾರ್ದ ಕಾಪಾಡಿಕೊಳ್ಳಿ ಎಂದಾಗ. ಅವರೇನು ಸುಮ್ಮನಿದ್ದರೇ..ಏಯ್ ಅವರು ನಿನ್ನ ಹೆಂಡತಿಯನ್ನು ಕೆಡಿಸಿದ್ದಾರಾ?ನಿನ್ನ ಮಕ್ಕಳನ್ನು ಕೊಂದಿದ್ದಾರಾ ಅಂತ ಮುಖಕ್ಕೆ ಹೊಡೆದ ಪ್ರಶ್ನೆಗಳನ್ನು ಎಸೆದಿದ್ದರು. ಅದಕ್ಕೂ ಕೋಪ ಮಾಡಿಕೊಳ್ಳದ ತಾವು ಹೌದು ನನ್ನ ಹೆಂಡತಿಯನ್ನೇ ಕೆಡಿಸಿದ್ದು,ಇಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಂಗಸರು, ಸತ್ತ ಮಕ್ಕಳು ಎಲ್ಲಾ ನನ್ನವರೇ ಎಂದು ಹೇಳಿದ್ದೀರಿ.

ಬಳಿಕ ಒಬ್ಬೊರ ರುಂಡವನ್ನು ಮತ್ತೊಬ್ಬರು ಚೆಂಡಾಡುತ್ತಿದ್ದ ಜನರು ಶಾಂತ ಸ್ಥಿತಿಗೆ ಬಂದಿದ್ದು, ಹಾಗಾದರೆ ಇದು ನೀವು ಮಾಡಿದ ತಪ್ಪೇ? ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಮನಸ್ಥಿತಿಗೆ ನಿಮ್ಮ ಅಹಿಂಸೆ, ಕೋಮು ಸೌಹಾರ್ದತೆ ಬೇಡವಾಯಿತೇ? ಸ್ವತಃ ನಿಮ್ಮ ಮಗ ಹರಿಲಾಲ್ ಗಾಂಧಿಯೇ ಮುಸ್ಲಿಂ ಧರ್ಮಕ್ಕೆ ಮತಾಂತರನಾಗಿ ಮದುವೆಯಾದಾಗಲು ತಾವು ಸುಮ್ಮನಿದ್ದೀರಾ, ಆತನಿಗೆ ಹಿಂದೂ ಧರ್ಮಕ್ಕೆ ಮರು ಮತಾಂತರಗೊಳ್ಳುಂತೆ ಪಕ್ಕಾ ಹಿಂದೂವಿನಂತೆ ವರ್ತಿಸಿದ್ದೀರಲ್ಲವೇ ?ಜೀವಮಾನವ ಪೂರ್ತಿ ಅಹಿಂಸೆಯಲ್ಲಿ ಹೋರಾಟ ನಡೆಸಿದ ನಿಮ್ಮ ತತ್ವ,ಮಾತುಗಳು ಯಾರಿಗೂ ಪಥ್ಯವಾದಂತಿಲ್ಲ.

ಅಷ್ಟಾದರೂ ನಿಮ್ಮ ತ್ಯಾಗವೇ ಬೂಟಾಟಿಕೆ ಎಂಬಷ್ಟರ ಮಟ್ಟಿಗೆ ದೂರಲಾಗುತ್ತದೆ.ಅದಕ್ಕಾಗಿಯೇ ಅಲ್ಲವೇ ನಿಮಗೆ ನೊಬೆಲ್ ನೀಡಿಲ್ಲ,ಹೋಗಲಿ ಕನಿಷ್ಠ ಪಕ್ಷ ವಸಾಹತುಶಾಹಿಗಳ ಬೂಟುನೆಕ್ಕುವವರಿಗಾಗಿಯೇ ನೀಡುತ್ತಿದ್ದ 'ಸರ್' ಪದವಿಗೂ ನಿಮ್ಮನ್ನು ಉದ್ದೇಶಪೂರ್ವಕವಾಗಿ ಕೈ ಬಿಡಲಾಯಿತು. ಹೋಗಲಿ ನಿಮ್ಮ ಯೋಗ್ಯತೆ ಅದ್ಯಾವ ಜುಜುಬಿ ಪದವಿಗಳು. ನಿಮ್ಮಂತೆಯೇ ಅರಮನೆ, ಹಣ, ಅಂತಸ್ತು ಎಲ್ಲವನ್ನೂ ತ್ಯಾಗ ಮಾಡಿ ಬೀದಿಗೆ ಬಂದ ಗೌತಮ ಬುದ್ಧನನ್ನೇ ನಾವು ಇಲ್ಲಿಂದ ಓಡಿಸಿದವರಲ್ಲವೇ?ನಿಮ್ಮ ಗತಿಯೂ ಅದಕ್ಕಿಂತ ಭಿನ್ನವಾಗಲಾರದು ಎಂಬ ಸಂಶಯ ಕಾಡುತ್ತಿದೆ.

ಬೌದ್ಧಧರ್ಮ ಭಾರತದಿಂದ ಕಣ್ಮರೆಯಾದರೂ,ಬೇರೆಡೆ ಅಷ್ಟೇ ಪ್ರಭಾವಶಾಲಿಯಾಗಿ ತಳವೂರಿದೆ, ನೀವು ಹಾಗೇ ತಾತ ನಿಮ್ಮ ಅಹಿಂಸೆ, ಗ್ರಾಮಸ್ವರಾಜ್ಯ, ಸ್ವದೇಶಿ ಯಾರಿಗೂ ಬೇಡ, ನಿಮ್ಮ ಚಿಂತನೆ , ಆದರ್ಶಗಳತ್ತ ವಿದೇಶಿಗರು ಬೆರಗುಗಣ್ಣಿನಿಂದ ನೋಡಿ, ಅಪ್ಪಿಕೊಳ್ಳಲಾರಂಭಿಸಿದ್ದಾರೆ. ಇತಿಹಾಸದ ಪುಟಗಳಲ್ಲಿ ಏನೇನೂ ದಾಖಲಾಗುತ್ತವೆ. ಹಾಗೇ ತಾತಾ ನಿಮ್ಮ ಹೆಸರು ಕೂಡ ಬುದ್ಧನಂತೆ ಭಾರತದಿಂದ ಕಣ್ಣರೆಯಾದ ಗಾಂಧಿ, ಗಾಂಧಿ ತತ್ವ ಹೀಗೆ ದಾಖಲಾಗುತ್ತ ಹೋಗಬಹುದು.....!

No comments: