Monday, August 17, 2009

ತಿರುವಳ್ಳುವರ್...ಸಾಕ್ರೆಟೀಸ್ ಮತ್ತು ನಮ್ಮ ಸ್ವಭಾವ

ಇದು ಸಾಮಾನ್ಯ ಎಂಬಂತೆ ನಾವೇ ಆಗಾಗ ಸಹೋದ್ಯೋಗಿಗಳಿಗೆ ಅಥವಾ ಹೆಚ್ಚಿನವರು ಒಂದಲ್ಲ ಒಂದು ಬಾರಿ ಇಂತಹ ಹೇಳಿಕೆಯನ್ನು ಕೇಳಿರುತ್ತೇವೆ ಇಲ್ಲ ನಾವೇ ಆಡಿರುತ್ತೇವೆ. ಯಾರಾದರೂ ಅವರ ಪಾಡಿಗೆ ಖುಷಿಯಿಂದ ಇದ್ದರೂ ಸಾಕು ಏನು...? ಬಹಳ ಖುಷಿಯಿಂದ ಇದ್ದ ಹಾಗೆ ಇದೆ...ಲಾಟರಿ ಏನಾದ್ರು ಬಂತಾ ಅಂತ . ಹಾಗಂತ ಜೋಲು ಮೋರೆ ಹಾಕಿ ಇರಿ...ಏನೋ ಆತ ಯಾವಾಗ್ಲೂ ಹಾಗೆ ತಲೆ ಮೇಲೆ ಆಕಾಶ ಬಿದ್ದವರ ತರ ಇರ್ತಾನೆ ಅಂದುಕೊಂಡು ಸುಮ್ಮನಾಗ್ತಾರೆ. ಮೂಲತಃ ಮನುಷ್ಯನ ಸ್ವಭಾವವೇ ತಿಕ್ಕಲುತನದ್ದು. ಯಾಕೆಂದರೆ ಜನ ಚಳವಳಿ ಮಾಡಿದರೂ ಟೀಕಿಸುತ್ತೇವೆ, ಮಾಡದಿದ್ದರೂ ವಟಗುಟ್ಟುತ್ತೇವೆ. ಅದಕ್ಕೆ ಇತ್ತೀಚೆಗೆ ತಿರುವಳ್ಳುವರ್-ಸರ್ವಜ್ಞ ಪ್ರತಿಮೆ ಸ್ಥಾಪನೆ ವೇಳೆ ಕನ್ನಡಪರ ಸಂಘಟೆಗಳು ವ್ಯಕ್ತಪಡಿಸಿದ ಪ್ರತಿಭಟನೆಗೆ ಪರ-ವಿರೋಧ ವ್ಯಕ್ತವಾಗಿದ್ದು ಕೂಡ ಒಂದು ಉದಾಹರಣೆ. ಡಿ.ಎಸ್.ನಾಗಭೂಷಣ್‌ರಂತವರು ಕೂಡ 'ಗಲಾಟೆ ಸಂಘಟನೆ'ಗಳು ಅಂತ ಹೇಳಿಕೆ ನೀಡಿದರು. ಪ್ರತಿ ನೆಲದಲ್ಲೂ ಹುಟ್ಟಿಕೊಂಡ ಚಳವಳಿಗಳು ಅವುಗಳು ಮೂಡಿಸಿದ್ದ ಛಾಪು ಕಡೆಗಣಿಸುವಂತಹದ್ದಲ್ಲ. ಈ ಬಗ್ಗೆ ಆತ್ಮೀಯರಾದ ದಿನೇಶ್ ಕುಮಾರ್ ಅವರು ತಮ್ಮ 'ದೇಸಿಮಾತು' ಬ್ಲಾಗ್‌ನಲ್ಲಿ ಉತ್ತಮವಾದ ಲೇಖನವೊಂದನ್ನು ಬರೆದಿದ್ದಾರೆ.

ಆದರೆ ನಾನು ಪರ-ವಿರೋಧದ ಹಿನ್ನೆಲೆ-ಮುನ್ನೆಲೆ ಬಗ್ಗೆ ಲೇಖನ ಮುಂದುವರಿಸಲಾರೆ. ಯಾಕೆಂದರೆ ಚೆನ್ನೈನಲ್ಲಿ ಪ್ರತಿಮೆ ಅನಾವರಣ ಸೇರಿದಂತೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ವೇಳೆ ಕೆಲವು ಮಾಧ್ಯಮಗಳು ಎಷ್ಟು ವಸ್ತುನಿಷ್ಠವಾಗಿ ವರದಿ ಮಾಡಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಮನುಷ್ಯ ಪ್ರತಿಯೊಂದಕ್ಕೂ ತಕರಾರು ತೆಗೆಯುತ್ತಿರುತ್ತಾನೆ, ಅದು ಹುಟ್ಟುಗುಣ ಎಂಬಂತೆ ಅದೊಂದು ಅಂಟು ಜಾಢ್ಯವಾಗಿದೆ. ಈ ಬಗ್ಗೆ ರಜನೀಶರ ಹಾಸ್ಯಮಿಶ್ರಿತ ಮಾತುಗಳಲ್ಲಿಯೇ ಹೇಳುವುದಾದರೆ.... ಬಾಲಿ ದ್ವೀಪದಲ್ಲಿ ಒಂದು ಪುರಾತನ ಗಾದೆ ಮಾತಿದೆಯಂತೆ, 'ನಿಮ್ಮ ಮನಸ್ಸು ಮುದದಿಂದ ಇದ್ದರೆ ನೀವು ಯಾವಾಗ ಬೇಕಾದರೂ ನೃತ್ಯವನ್ನು ಕಲಿಯಬಹುದು'.

ಆದರೆ ಮನುಷ್ಯ ಮೂಲತಃ ಮುದದಿಂದ ಇಲ್ಲ. ವಾಸ್ತವವಾಗಿ ದುಃಖವೆಂಬುದು ಒಂದು ಅಪವಾದದಂತಿರಬೇಕು, ಪ್ರಸನ್ನತೆ, ಪ್ರಫುಲ್ಲತೆ ಆತನ ಸಹಜ ಧರ್ಮವಾಗಿರಬೇಕು. ಅವನು ಯಾರೊಂದಿಗೂ 'ಇದೇನು ನೀವಿಂದು ಬಹಳ ಸಂತೋಷದಿಂದ ಇರುವಂತೆ ಕಾಣುತ್ತಿದೆಯಲ್ಲ?' ಎಂದು ಕೇಳುವ ಅಗತ್ಯ ಬರಬಾರದು ?ಆದರೆ ವಸ್ತು ಸ್ಥಿತಿ ಹಾಗಿಲ್ಲ. ಒಂದು ವೇಳೆ ನೀವು ನಿಮ್ಮಲ್ಲೇ ಹರ್ಷಿತರಾಗಿದ್ದರೆ, ಮುಗುಳು ನಗುತ್ತ, ಸಂತೋಷದಿಂದ ಇರುವಂತೆ ಕಂಡು ಬಂದರೆ...ಜನರು ನಿಮ್ಮನ್ನು ದುರುಗುಟ್ಟಿ ನೋಡುವರು. ನಿಮ್ಮಿಂದೇನೋ ತಪ್ಪಾಗಿ ಹೋಯಿತೆಂಬಂತೆ, ಏನಾಯಿತು...ಈತನಿಗೆ? ಅದೇಕೆ ಹಾಗೆ ನಗುತ್ತಾನೆ ? ಬಹಳ ಖುಷಿಯಿಂದ ಇದ್ದಿರುವಂತಿದೆ, ಕಾರಣವೇನೋ ತಿಳಿಯದು'?. ಆಗ, ಜನ ಕೇಳಿಯೇ ಕೇಳುತ್ತಾರೆ 'ಏನು ಸಮಚಾರ? ಬಹಳ ಖುಷಿಯಾಗಿದ್ದರಲ್ಲ ಅಂತ! ಸ್ವಸ್ಥವಾಗಿ, ಸುಖಿಯಾಗಿರಲು, ಅದಕ್ಕೆ ಕಾರಣ ಬೇರೆ ಬೇಕು. ಆದರೆ ದುಃಖಿತನಾಗಿ ಇರುವವನನ್ನು ಕಂಡಾಗ ಜನ ಹಾಗೆ ಕೇಳಲಾರರು. ಅಷ್ಟೇ ಅಲ್ಲ ಒಂದು ನಿಮಿಷ ನಿಂತು ಅವನ ಕಡೆ ನೋಡುವುದೂ ಇಲ್ಲ. ಅನ್ಯ ಮನಸ್ಕರಂತೆ ಇರುವುದು ನಮ್ಮ ಸಹಜ ಸ್ವಭಾವವೇನೋ ಎಂಬಂತೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡುತ್ತಾರೆ. ನಾವು ನಗುವುದನ್ನೇ ಮರೆತಿದ್ದೇವೆ, ನಮ್ಮ ಮುಗುಳ್ನಗು ಕಳೆದು ಹೋಗಿದೆ.

ಪ್ರತಿಯೊಂದು ಮಗುವು ಹುಟ್ಟುವಾಗ ತರುವ ಆ ಅನನ್ಯ ನಗು ಮಾಯವಾಗಿದೆ. ತಾನು ಸ್ವಸ್ಥನಾಗಿರಬೇಕಿದ್ದ ಆ ದಾರಿ ಮರೆತು ಹೋಗಿದೆ. ನಾವು ನಿರಾಸೆಯಿಂದ ಮೃತ್ಯುವಿನ ಕಡೆಗೆ ಮುಖ ಮಾಡಿಕೊಳ್ಳುವ ಸಂಕಲ್ಪ ಮಾಡಿರುತ್ತೇವೆ. ಏಕೆಂದರೆ ಹೀಗೆ ಮಾಡುವುದು ಅವರಿಗೆ ಬೇಕಿತ್ತು. ಅವರಿಗೆ ಇದರಿಂದ ಹಿತ. ಯಾವಾಗಲೂ ಜೋಲು ಮೋರೆಯಲ್ಲೇ ಇರುತ್ತೇವೆ. ವಿಧಾನ...ಕಾರ್ಯಗಳಲ್ಲಿ ನಮ್ಮ ವಾಸ್ತವಿಕ ರೂಪ ಒಂದು ನಕಲಿ ಮುಖವಾಡವನ್ನು ಧರಿಸಿರುತ್ತೇವೆ. ಸಮಾಜ ಕೂಡ ಅದನ್ನೇ ಅಪೇಕ್ಷಿಸುತ್ತದೆ. ನಾವು ಅತ್ಯಾನಂದದಿಂದ ರಸ್ತೆಯಲ್ಲಿ ಕುಣಿದಾಡುವುದನ್ನು ಯಾರೂ ಸಹಿಸಲಾರರು. ನೀವು ಹೃದಯ ತುಂಬಿ ನಗುವುದು ಯಾರಿಗೂ ಸಹಿಸದು. ಅಟ್ಟಹಾಸದಿಂದ ಗಹಗಹಿಸಿ ನಗುವುದನ್ನು ಯಾರೂ ಸೈರಿಸಲಾರರು. ನಿಮ್ಮ ಮನೆಯಲ್ಲೇ ನೀವು ಅಟ್ಟಹಾಸಗೈದರೂ ನೆರೆಹೊರೆಯವರು ಬಂದು ಬಾಗಿಲು ಬಡಿದು- ಇದೇನಿದು ಕೋಲಾಹಲ? ದಯವಿಟ್ಟು ನಿಲ್ಲಿಸಿ ನಾವೇನು ಇರಬೇಕೋ ಇಲ್ಲಾ ಮನೆಬಿಟ್ಟು ಹೋಗಬೇಕೋ..ನಿಮ್ಮ ಸಂಭ್ರಮದಲ್ಲಿ ನಮಗೆ ಮನೆಯಲ್ಲಿರಲು ಆಗುತ್ತಿಲ್ಲ' ಎಂದು ಆಕ್ಷೇಪಿಸುವರು.
ನೀವು ಜೋಲು ಮುಖದಿಂದ ಇದ್ದರೆ ಅವರಿಗೆ ಅಡ್ಡಿಯಿಲ್ಲ. ಜೋಲು ಮುಖದಿಂದ ಇರುವವರಿಗೆ ಜೋಲು ಮುಖದವರು ತುಂಬಾ ಇಷ್ಟ. ನಗುವವರನ್ನು ಕಂಡರೆ ಅವರಿಗೆ ಸಂಕಟವಾಗುತ್ತೆ. ಸಾಕ್ರೆಟೀಸ್‌ನಂತಹ ವ್ಯಕ್ತಿಗಳಿಗಿದ್ದ ತೊಂದರೆಯೇ ಇದು. ಅವರು ಅತ್ಯಂತ ಆನಂದದಿಂದ ಇರುವರು. ಮತ್ತು ಜನರಲ್ಲಿ ಎಚ್ಚರಿಕೆ ಮೂಡಿಸುತ್ತಿದ್ದರು. ಅವರ ಆನಂದ, ಎಚ್ಚರಿಕೆಯ ನಡೆ-ನುಡಿ ಕಂಡು ಜೋಲು ಮೋರೆಯವರ ಹೊಟ್ಟೆಯಲ್ಲಿ ಹಾಲಾಹಲ ಕಲಸಿದಂತಾಗುತ್ತಿತ್ತು. ಅವರ ಗುಂಪು, ಕೇಕೆ ಹಾಕುವವರನ್ನು ಸೈರಿಸಲಾಗದೆ. ಅವರನ್ನು ಕೊನೆಗಾಣಿಸಲೇಬೇಕಾಯಿತು!. ಏಕೆಂದರೆ ನಿಮ್ಮ ಮನದಲ್ಲಿ ಬಂಡಾಯದ ಸುಂಕನ್ನು ಹರಡುವರು, ನಾವೋ ಬಂಡಾಯವೆಂದರೆ ಹೆದರಿ ಸಾಯುವವರು! ಒಮ್ಮೆಯಾದರೂ ಒಬ್ಬ ವ್ಯಕ್ತಿ ವಿದ್ರೋಹದ ಪ್ರೇಮದಲ್ಲಿ ಬೀಳಬೇಕು. ಆಗ ಮಾತ್ರ ಅವನು ಸರಿಯಾದ ದಾರಿಗೆ ಬರಬಲ್ಲ.

ರಷ್ಯಾದ ಪುರಾತನ ಕಥೆಯೊಂದಿದೆ..ಚೇಮ್ ನಗರದ ಮಂದಿ ಯಾವಾಗಲೂ ಚಿಂತಾಕ್ರಾಂತರಾಗಿಯೇ ಇರುವವರಂತೆ. ಅವರಿಗೆ ಅದೇ ಅಭ್ಯಾಸ, ಅಷ್ಟೇ ಅಲ್ಲ ತಾವೇಕೆ ಇಷ್ಟು ಚಿಂತಿತರಾಗಿದ್ದೇವೆ ಎಂಬುದೇ ಅವರಿಗೆ ದೊಡ್ಡ ಚಿಂತೆಯಾಗಿತ್ತಂತೆ!. ಆಗ ನಗರದ ಅಧ್ಯಕ್ಷರಾಗಿದ್ದವರು ಚರ್ಚೆ ನಡೆಸಿ, ಕೊನೆಗೆ ಐರಾ ಎಂಬೊಬ್ಬ ತೀರ ಕಡುಬಡವನೊಬ್ಬನನ್ನು ಕರೆತಂದು ಅವನನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಯಿತಂತೆ. ಆತನಿಗೆ ಕೆಲಸ ಏನಪ್ಪಾ ಅಂದ್ರೆ...ಚೇಮ್ ನಗರ ವಾಸಿಗಳೆಲ್ಲರ ಪರವಾಗಿ ಆತನೊಬ್ಬನೇ ದಿನವಿಡೀ ಚಿಂತಿಸುವುದು...ಅದಕ್ಕೆ ಆತನಿಗೆ ವಾರಕ್ಕೆ 4ರೂಬಲ್ ಸಂಬಳ ಅಂತಲೂ ಘೋಷಿಸಲಾಯಿತು. ಆದರೆ ಈ ಯೋಜನೆ ತಲೆಕೆಳಗಾಯಿತು...!ಇಷ್ಟು ಕೇಳಿದ್ದೇ ತಡ ಐರಾನ ಸಂತೋಷಕ್ಕೆ ಪಾರವೇ ಇಲ್ಲ, ಆತ ತನ್ನ ಹುಟ್ಟೂರಾದ ರೂಥ್‌ಗೆ ಬಂದು ಬೀದಿ, ಬೀದಿ, ನೆಂಟರು, ನೆರೆಕೆರೆಯವರಿಗೆಲ್ಲ ತನಗೆ ಕೆಲಸ ಸಿಕ್ಕಿದ ಬಗ್ಗೆ ಖುಷಿಯಿಂದ ಹೇಳಿಕೊಂಡ. ಕೊನೆಗೆ ಅವನ ಬಾಯಿಂದ ಬಂದ ಮಾತೆಂದರೆ, 'ಇನ್ನು ನನಗೆ ಚಿಂತೆ ಇಲ್ಲ..ವಾರಕ್ಕೆ 4 ರೂಬಲ್ ಸಂಬಳ ಬರುತ್ತೆ'. ಆದರೆ ಆತನಿಗೆ ಕೊಟ್ಟ ಕೆಲಸ ಚಿಂತಿಸುವುದು...ಅದನ್ನೇ ಮರೆತು ಬಿಟ್ಟ!. ಈ ವಿಷಯ ಅಧ್ಯಕ್ಷರಿಗೆ ತಿಳಿಯುತ್ತಿದ್ದಂತೆಯೇ ಆತ ಕೆಲಸ ಕಳೆದುಕೊಂಡ!! ಅದೇ ರೀತಿ ನಮ್ಮ ಸ್ವಭಾವ ಕೂಡ...

3 comments:

Bhuvan said...

ಇದು ವ್ಯಾಪಾರಿ ಪ್ರಪಂಚ ತ್ರಾಸಿಯವರೇ. ನಮ್ಮನ್ನು ನೋಡಿ ಮೆಚ್ಚುವವರಿಗಿಂತ ಹಲುಬುವವರೇ ಹೆಚ್ಚು. ಇನ್ನು ಪ್ರಾಮಾಣಿಕ ನಗು ಎಲ್ಲಿಂದ ಬರಬೇಕು?

Raj Karanth said...

ಬೇರೆಯವರ ನಗುವನ್ನು ಇತರರು ಸಹಿಸುವುದಿಲ್ಲ ಎಂಬ ವಾಸ್ತವವನ್ನು ಮನಕ್ಕೆ ಮುಟ್ಟುವಂತೆ ವಿವರಿಸಿದ್ದಕ್ಕೆ ಧನ್ಯವಾದಗಳು. ರಶ್ಯಾ ಕಥೆ ಚೆನ್ನಾಗಿದೆ. -ಹಾರಿಕಾ

Unknown said...

trasi 2010 ra