Thursday, February 21, 2008

ಜೋಧಾ ಯಾರು?


ಇತಿಹಾಸದಲ್ಲಿನ ವಿಷಯಗಳೇ ಹೆಚ್ಚು ಬಾರಿ ವಿವಾದಕ್ಕೆ ಒಳಗಾಗುವುದು, ಅದು ನಿರಂತರ, ಯಾಕೆಂದರೆ ಇತಿಹಾಸ ಅಂದರೆ ಇತಿ-ಹೀಗೆ, ಹಾಸ-ಆಗಿತ್ತು ಎಂಬುದಾಗಿ ಅರ್ಥ. ಆದರೆ ಭಾರತದ ಇತಿಹಾಸದಲ್ಲಿ ನೈಜ ಇತಿಹಾಸ ಕೂಡ ಸಮಾಧಿಯಾಗಿದೆ. ಎಡ ಪಂಥೀಯ, ಬಲುಪಂಥೀಯ ಇತಿಹಾಸಕಾರರ ದೃಷ್ಟಿಕೋನಗಳಿಂದ ಲಭ್ಯವಿರುವ ಇತಿಹಾಸಗಳು ಒಂದೊಂದು ಕಥೆ ಹೇಳುತ್ತವೆ, ನಾವು ಯಾವುದನ್ನು ನಂಬಬೇಕು ಎಂಬ ಗೊಂದಲ ಮಾತ್ರ ನಮಗೆ ಉಳಿಯುವಂತಾದ್ದು.

ರಾಮನೂ ಸುಳ್ಳು, ರಾಮಾಯಣನೂ ಸುಳ್ಳು, ರಾಮ ಸೇತು ಸುಳ್ಳು, ಟಿಪ್ಪು ಕನ್ನಡ ವಿರೋಧಿ, ಅಲ್ಲ ಆತ ಕನ್ನಡ ಪರ, ಕೃಷ್ಣ ದೇವರಾಯನ ಕಾಲದಲ್ಲಿ ಬೀದಿ, ಬೀದಿಗಳಲ್ಲಿ ಚಿನ್ನಾಭರಣ ಮಾರಲಾಗುತ್ತಿತ್ತು, ಇಲ್ಲ ಅವೆಲ್ಲ ಸುಳ್ಳು, ಅವರೆಲ್ಲ ಪುಕ್ಕಲು ರಾಜರಾಗಿ ದ್ದರು, ಪುಲಕೇಶಿ ಪುಕ್ಕಲು ರಾಜನಾಗಿದ್ದ, ತಾಜ್ ಮಹಲ್ ಹಿಂದೂಗಳ ಶಿವ ದೇವಾಲಯವಾಗಿತ್ತು....ಹೀಗೆ ಇತಿಹಾಸದ ಎಲ್ಲವೂ ವಾದ-ವಿವಾದಗಳಿಗೆ ಎಡೆಯಾಗುತ್ತಲೇ ಇರುತ್ತದೆ.

ಇದೀಗ ವಿವಾದಕ್ಕೆ ಗ್ರಾಸವಾಗಿರುವುದು ಜೋಧಾ-ಅಕ್ಬರ್ ಐತಿಹಾಸಿಕ ಕಥೆಯ ಸಿನಿಮಾ. ಈ ಚಿತ್ರದಲ್ಲಿ ಜೋಧಾಳನ್ನು ಅಕ್ಬರನ ಪತ್ನಿಯನ್ನಾಗಿ ಚಿತ್ರಿಸಲಾಗಿದೆ. ಆದರೆ ರಜಪೂತ ಕೆಲವು ಸಂಘಟನೆಗಳು, ಜೋಧಾ ಅಕ್ಬರನ ಪತ್ನಿಯಲ್ಲ, ಪುತ್ರ ಸಲೀಂ(ಜಹಾಂ ಗೀರ್)ನ ಪತ್ನಿ ಎಂಬುದಾಗಿ ಆರೋಪಿಸುತ್ತಿದ್ದಾರೆ.ಆದರೆ ಇತಿಹಾಸ ಪುಟಗಳಲ್ಲಿ ದಾಖಲಾಗಿರುವ ಅಂಶಗಳನ್ನ ಗಮನಿಸಿ:

1542 ಅಕ್ಟೋಬರ್ 1 ರಂದು ಅಂಬರದ ರಾಜ ಬಾರಾಮಲ್‌‌ನ ಪ್ರಥಮ ಪುತ್ರಿಯಾಗಿ ಜನಿಸಿದವಳು ಹೀರಾ ಕುನ್ವರಿ (ಜೋಧಾ) ಇದು ಆಕೆಯ ಮೊದಲ ಹೆಸರು. 1562 ಜನವರಿ 20ರಂದು ಮೊಗಲ್ ದೊರೆ ಅಕ್ಬರ್ ಜೈಪುರ್ ಸಮೀಪದ ಸಾಂಭಾರ್ ಎಂಬಲ್ಲಿ ಹೀರಾ ಕುನ್ವರ್‌‌ಳನ್ನು ಮದುವೆಯಾಗಿದ್ದ. ನಂತರ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ ಬಳಿಕ ಹಿರಾ ಹೆಸರನ್ನು ಮಾರಿಮ್ ಉಜ್ ಜಮಾನಿ ಎಂಬುದಾಗಿ ಬದಲಾಯಿಸಲಾಗಿತ್ತು.

ಈಕೆ ಅಕ್ಬರನ ಆಸ್ಥಾನಕವಿಗಳಲ್ಲಿ ಒಬ್ಬನಾಗಿದ್ದ ಭಗವಾನ್‌‌ದಾಸ್ ತಂಗಿ. ಜೋಧಾ ಅಕ್ಬರನ ಮೂವರು ರಾಣಿಯರಲ್ಲಿ ಒಬ್ಬಳಗಾ ಗಿದ್ದಳು, ಮತ್ತು ಪ್ರಥಮ ರಜಪೂತ ಪತ್ನಿಯಾಗಿದ್ದಳು. 1586ರಲ್ಲಿ ಜಮಾನಿ (ಜೋಧಾ) ಯುವರಾಜ ಸಲೀಂ (ನಂತರದ ಹೆಸರು ಜಹಾಂಗೀರ್) ಮದುವೆ ಏರ್ಪಾಡು ಮಾಡಿ, ಮಾನ್‌‌ಸಿಂಗ್‌‌ನ ತಂಗಿ ಮಾನ್ಮಥಿಯೊಂದಿಗೆ ವಿವಾಹ ನಡೆಸಲಾಗುತ್ತದೆ. ಹೀರಾ(ಜೋಧಾ) 1611ರಲ್ಲಿ ಸಾವನ್ನಪ್ಪಿದ್ದಳು.

ಆಕೆಗಾಗಿ ಜಹಾಂಗೀರ್ 1611ರಲ್ಲಿ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿ ಬಳಿಯ ಫತೆಪುರ್ ಸಿಕ್ರಿಯಲ್ಲಿ ಸ್ಮಾರಕವನ್ನು ಕಟ್ಟಿಸಿದ್ದ. ಆದರೆ ಗೊಂದಲ ಆರಂಭವಾಗಿದ್ದು, ಅಕ್ಬರನ ಜೀವನಚರಿತ್ರೆಯ ಅಕ್ಬರ್‌‌ನಾಮಾದಲ್ಲಾಗಲಿ, ಜಹಾಂಗೀರ್‌‌ನ ತುಜ್ಕ್ ಎ ಜಹಾಂಗೀರಿಯಲ್ಲಾಗಲಿ ಎಲ್ಲೂ ಜೋಧಾಬಾಯ್ ಎಂಬ ಹೆಸರು ನಮೂದಾಗಿಲ್ಲ, ಎಲ್ಲೆಡೆ ಮಾರಿಮ್ ಉಜ್ ಜಮಾನಿ ಅಂತಲೇ ಉಲ್ಲೇಖಿಸಲಾಗಿದೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಪ್ರೊ.ಶಿರನ್ ಮಾನ್ವಿ ಅವರ ಪ್ರಕಾರ, 18-19ನೇ ಶತಮಾನದ ಇತಿಹಾಸಕಾರರು ಪ್ರಥಮವಾಗಿ ಜೋಧಾಬಾಯ್ ಹೆಸರನ್ನು ನಮೂದಿಸಿದ್ದರು ಎನ್ನುತ್ತಾರೆ.

ಪಾಟ್ನಾ ಖುದಾ ಭಕ್ಷ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ, ಇತಿಹಾಸ ತಜ್ಞ ಇಮ್ತಿಯಾಜ್ ಅಹ್ಮದ್ ಅವರು, ಅಕ್ಬರನ ಪತ್ನಿ ಜೋಧಾ ಎಂಬುದಾಗಿ ಪ್ರಥಮವಾಗಿ ನೌಕಾಪಡೆಯ ಕಿರಿಯ ಅಧಿಕಾರಿ ಕರ್ನಲ್ ಜೆಮ್ಸ್ ಟೋಡ್ ಅವರು ಅನ್ನಾಲ್ಸ್ ಅಂಡ್ ಆಂಟಿಕ್ವಿಟಿಸ್ ಆಫ್ ರಾಜಸ್ಥಾನ್ ಪುಸ್ತಕದಲ್ಲಿ ಉಲ್ಲೇಖಿಸಿದ್ದರು. ಆದರೆ ಟೋಡ್ ಒಬ್ಬ ಇತಿಹಾಸಕಾರನಲ್ಲ, ಜನಪದ ಸಾಹಿತ್ಯದ ಅಂಶ ಪಡೆದು ದಾಖಲಿಸಿದ್ದಾನೆ ಎಂಬುದಾಗಿ ಹೇಳುತ್ತಾರೆ.

ಅಲ್ಲದೇ ಮೊಗಲ್ ಎ ಅಜಾಮ್ ಎಂಬ ಸಿನಿಮಾದ ಬಳಿಕ ಜೋಧಾ-ಅಕ್ಬರ್ ಹೆಸರು ಹೆಚ್ಚು ಜನಪ್ರಿಯವಾಯಿತು. ಜೋಧಾ ಬಾ ಯ್ ಎಂಬುದು ಅಕ್ಬರನ ರಜಪೂತ ರಾಣಿಯ ಹೆಸರಲ್ಲ, ಇದು ಜಹಾಂಗೀರನ ಪತ್ನಿಯ ಎಂಬುದು ಎಂ.ಎನ್.ಫಾರುಕಿ ವಾದ. ಜೋಧಾ ಬಾಯ್ ಅಥವಾ ಜೋಧಿ ಬೀಬಿ ಉದಯ ಸಿಂಗ್‌‌ನ ಪುತ್ರಿ ಮತ್ತು ಜಹಾಂಗೀರನ ಪತ್ನಿ ,ಖುರ್ರಮ್‌‌ನ (ಷಹಜಹಾನ್) ತಾ ಯಿ ಎಂಬುದು ಇತಿಹಾಸಕಾರ ಗೋಸಾಯ್ ವಿವರಣೆ.ಜಹಾಂಗೀರ್ ಜನಿಸಿದ್ದು 1569 ಅಗೋಸ್ಟ್ 31 ರಲ್ಲಿ, ಜೋಧಾ ಜನಿಸಿದ್ದು, 1542ರಲ್ಲಿ ಈ ಅಂಕಿ-ಅಂಶದ ಪ್ರಕಾರ ನೋಡಿದರೂ ಜೋಧಾ ಜಹಾಂಗೀರ್‌‌ಗಿಂತ 27ವರ್ಷ ಹಿರಿಯವಳು.

ಆದರೂ ಇತಿಹಾಸಕಾರರಲ್ಲಿ ಅನೇಕರೂ ಜೋಧಾಬಾಯ್ ಅಕ್ಬರನ ಪತ್ನಿ ಎಂಬುದಾಗಿಯೇ ದಾಖಲಿಸಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು ಎಂದು ನಿರ್ಧರಿಸುವುದು ಇನ್ನೂ ಗೊಂದಲದ ವಿಷಯವಾಗಿದೆ.

ಅಮೆರಿಕಕ್ಕೆ ಸಿಂಹಸ್ವಪ್ನವಾದ ಕ್ಯಾಸ್ಟ್ರೋ


ಕ್ಯೂಬಾದ ಕ್ರಾಂತಿಕಾರಿ ಫಿಡಲ್ ಕ್ಯಾಸ್ಟ್ರೋ ಅವರು (ಫೆ19) ಅಧಿಕೃತವಾಗಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕ್ಯಾಸ್ಟ್ರೋ ಅವರ ಜೀವನಗಾಥೆಯೇ ರೋಮಾಂಚಕವಾದದ್ದು, 1926,ಆಗೋಸ್ಟ್ 13ರಂದು ಶ್ರೀಮಂತ ಮನೆತನದಲ್ಲಿ ಹುಟ್ಟಿದ ಫಿಡಲ್ ಕ್ಯಾಥೋಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಬಳಿಕ ಹವಾನ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದರು.

ಬೇಸ್ ಬಾಲ್ ಆಟಗಾರನಾಗಿದ್ದ ಕ್ಯಾಸ್ಟ್ರೋ, ಅಮೆರಿಕ ನಡೆಸುವ ಲೀಗ್‌‌ ಪಂದ್ಯಾಟದಲ್ಲಿ ಮಹತ್ತರವಾದದ್ದನ್ನು ಸಾಧಿಸಬೇಕು ಎನ್ನುವ ಕನಸು ಕಂಡಿದ್ದರು.

ಆದರೆ ನಂತರ ಅವರು ಕ್ರಾಂತಿಕಾರಿ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸುವಂತಾಯಿತು. ದ್ವೀಪಪ್ರದೇಶವಾದ ಕ್ಯೂಬಾ ದಲ್ಲಿನ ವಸಾಹತುಶಾಹಿ ವ್ಯವಸ್ಥೆ ಹಾಗೂ ಸರ್ವಾಧಿಕಾರಿ ಪುಲ್‌‌ಜೆನ್ಸಿಯೋ ಬಾಟಿಸ್ತಾ ವಿರುದ್ಧ ಚೆಗವೇರಾ (ಲ್ಯಾಟಿನ್ ಅಮೆರಿಕದ ಲ್ಲಿನ ಗೆರಿಲ್ಲಾ ಯುದ್ಧದ ಕ್ರಾಂತಿಕಾರಿ), ರೌಲ್ ಕ್ಯಾಸ್ಟ್ರೋ , ಫಿಡೆಲ್, ಕ್ಯಾಮಿಲಿಯೋ (1959ರಲ್ಲಿ ವಿಮಾನದುರಂತದಲ್ಲಿ ಬಲಿ), ಫ್ರ್ಯಾಂಕ್ ಪಾಯಸ್ ನೇತೃತ್ವದ ತಂಡ ಕೇವಲ 82 ಜನರ ಗುಂಪಿನೊಂದಿಗೆ ಸಶಸ್ತ್ರ ಹೋರಾಟಕ್ಕೆ ಧುಮುಕಿದ್ದರು.

ಈ ವಿಶ್ವದ ಮಹಾನ್ ಪ್ರಜಾಪ್ರಭುತ್ವ ದೇಶ, ಮಾನವ ಹಕ್ಕುಗಳ ಏಕೈಕ ಸಂರಕ್ಷಕ , ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ಹೋರಾಡುವ ದೇಶ ಎಂದು ಬಾಯಿಬಡಿದುಕೊಳ್ಳುತ್ತಿರುವ ರಕ್ತಪಿಪಾಸು, ಅಮೆರಿಕ ಇಂತಹ ಗೋ ಮುಖ ವ್ಯಾಘ್ರತನ, ಕಪಟ ನಾಟಕದ ಮೂಲಕ ಅದು ಎಸಗಿರುವ ಅಪರಾಧಗಳ ಪಟ್ಟಿಯೇ ಆಘಾತಕಾರಿಯಾದದ್ದು.ಅಮೆರಿಕದ ರಕ್ತಪಿಪಾಸು, ಸಾಮ್ರಾಜ್ಯಶಾಹಿ ಕಬಂಧಬಾಹುವಿಗೆ ವೆನಿಜುಲಾ, ಪೆರಾಗ್ವೆ, ಕೋಸೋರಿಕಾ, ಅರ್ಜೈಂಟೀನಾ, ಬೊಲಿವಿಯಾ, ವಿಯೆಟ್ನಾಂ, ಕಾಂಬೋಡಿಯಾ, ಚಿಲಿ, ಸಾಲ್ವೋಡಾರ್, ಲಿಬಿಯಾ, ಲೆಬನಾನ್, ಕ್ಯೂಬಾ, ಇರಾನ್, ಇರಾಕ್, ಅಷ್ಟೇ ಅಲ್ಲ ನಮ್ಮ ದೇಶದಲ್ಲೂ ವಿಚ್ಛಿದ್ರಕಾರಿ ಶಕ್ತಿಗಳಿಗೆ ಹಾಗೂ ಪ್ರತ್ಯೇಕವಾದಿಗಳಿಗೆ, ಕಟ್ಟಾ ಎಡಪಂಥಿ ಮತ್ತು ಬಲಪಂಥಿಯ ಸಂಘಟನೆಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಸದಾ ದೇಶದಲ್ಲಿ ಅರಾಜಕತೆಯನ್ನು ಹುಟ್ಟುಹಾಕುವಲ್ಲಿ ನಿಸ್ಸೀಮವಾಗಿದೆ.

ಅಮೆರಿಕದ ಸಾಮ್ರಾಜ್ಯಶಾಹಿತನಕ್ಕೆ ಅದು ನಡೆಸಿದ ಕುಟಿಲ ರಾಜನೀತಿಯಿಂದಾಗಿ ಲಕ್ಷಾಂತರ ಮಂದಿ ಹತರಾಗಿದ್ದಾರೆ, ಮಾನವಹಕ್ಕು ಉಲ್ಲಂಘನೆ, ಅಂತಾರಾಷ್ಟ್ರೀಯ ಭಯೋತ್ಪಾದನೆ ಎಂದು ಬೊಬ್ಬಿರುವ ಅಮೆರಿಕದ ಎಸಗಿರುವ ಕರ್ಮಕಾಂಡಕ್ಕೆ ಅದ್ಯಾವ ಶಿಕ್ಷೆಗೆ ಒಳಪಡಿಸಬೇಕು.ಇಂತಹ ಸಾಮ್ರಾಜ್ಯಶಾಹಿ ದೇಶದ ಅಬ್ಬರ, ಕೊಲೆ ಪ್ರಯತ್ನವನ್ನೆಲ್ಲಾ ಮೆಟ್ಟಿನಿಂತು ಸೆಡ್ಡು ಹೊಡೆದ ಏಕೈಕ ವ್ಯಕ್ತಿಯೆಂದರೆ ಫಿಡಲ್ ಕ್ಯಾಸ್ಟ್ರೋ. ಕ್ಯೂಬಾವನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆ ಇಂದಿಗೂ ನೆರವೇರಿಲ್ಲ.

ಕ್ಯಾಸ್ಟ್ರೋವನ್ನು ಹತ್ಯೆಗೈಯಲು ಅಮೆರಿಕದ ಸಿಐಎ ಸುಮಾರು 600ಕ್ಕೂ ಅಧಿಕ ಬಾರಿ ಪ್ರಯತ್ನಿಸಿತ್ತು!!.ಆದರೂ ಕ್ಯಾಸ್ಟ್ರೋ ಅವೆಲ್ಲ ಅಪಾಯದಿಂದ ಪಾರಾಗಿ ಅಮೆರಿಕದ ನಿದ್ದೆಗೆಡಿಸಿದ ಕ್ರಾಂತಿಕಾರಿಯಾಗಿದ್ದರು. 50 ವರ್ಷಗಳ ಕಾಲ ಕ್ಯೂಬಾವನ್ನು ಕೆಚ್ಚೆದೆಯಿಂದ ಮುನ್ನೆಡಿಸಿದ ಕ್ಯಾಸ್ಟ್ರೋ ದೇಶದಲ್ಲಿ ಸಾಕ್ಷರತೆ, ಮನೆ, ಆರೋಗ್ಯ ಎಲ್ಲವೂ ಅಭಿವೃದ್ಧಿ ಪಥದಲ್ಲಿದ್ದರೂ ಕೂಡ, ಇಂದಿಗೂ ಕ್ಯೂಬಾ ಆರ್ಥಿಕವಾಗಿ ತುಂಬಾ ದುರ್ಬಲವಾಗಿದೆ, ಮತ್ತೊಂದೆಡೆ ಸ್ವಾತಂತ್ರ್ಯಕ್ಕಾಗಿ ಹಪಹಪಿಸುವವರ ಸಂಖ್ಯೆಯೂ ಕಡಿಮೆಯಾಗಿಲ್ಲ.

ಇದೆ ವಿಷಯದಲ್ಲಿ ಫಿಡೆಲ್ ಅವರನ್ನು ಹಳಿಯುವವರೂ ಬಹಳಷ್ಟು ಮಂದಿ ಇದ್ದಾರೆ. ಫಿಡೆಲ್ ಸರ್ವಾಧಿಕಾರತನದಿಂದಾಗಿ ಕ್ಯೂಬಾ ವನ್ನು ಆರ್ಥಿಕ ದುಸ್ಥಿತಿಗೆ ತಳ್ಳಿದ್ದಾರೆ ಎಂಬುದಾಗಿ ಆಪಾದಿಸಲಾಗುತ್ತಿದೆ. ಆದರೆ ಅಮೆರಿಕದಂತಹ ರಕ್ತ ಪಿಪಾಸು ದೇಶಕ್ಕೆ ಸಿಂಹ ಸ್ವಪ್ನವಾಗಿ ಒಂದು ದೇಶವನ್ನು ಸತತ 50 ವರ್ಷಗಳ ಕಾಲ ಮುನ್ನೆಡೆಸುವುದು ಸುಲಭದ ಮಾತಲ್ಲ. ಕ್ಯಾಸ್ಟ್ರೋ ಇನ್ನೊಬ್ಬ ನಾಯ ಕನನ್ನು ಬೆಳೆಸದಿರಬಹುದು. ಆತ ತನ್ನ ದೇಶದ ಜನರಿಗಾಗಿ ಹಾಗೂ ಜನರು ಈತನಿಗೆ ನೀಡಿದ ಬೆಂಬಲ ಮಾತ್ರ ಅಮೋಘವಾದದ್ದು.

ಸಮಾಜವಾದಿ, ಸಾಮ್ರಾಜ್ಯಶಾಹಿ ಅರ್ಥಹೀನ ಎನಿಸಿಕೊಂಡರೂ ಕೂಡ ,ಅಮೆರಿಕದಂತಹ ದೇಶ ಸೋಗಿನ ಮಾತು ಹಾಗೂ ಬಲವಂತದ ಆಕ್ರಮಣ, ಕುಯುಕ್ತಿಯಿಂದಾಗಿ ಇಂದು ನೂರಾರು ದೇಶಗಳು ಆಂತರಿಕ ಕಲಹದಿಂದ ಹೊತ್ತಿ ಉರಿಯುತ್ತಿವೆ ಎಂಬುದನ್ನು ಗಮನಿಸಬೇಕು. ಅದು ಪಕ್ಕಾ ವ್ಯಾವಹಾರಿಕವಾಗಿ ವರ್ತಿಸುತ್ತಿದೆ. ಕ್ಯೂಬಾ ಫಿಡೆಲ್ ಅವರ ಸರ್ವಾಧಿಕಾರದಿಂದ ನರಳಿದರೆ, ಅಮೆರಿಕದ ಸಾಮ್ರಾಜ್ಯಶಾಹಿ ವ್ಯವಸ್ಥೆಗೆ ನೂರಾರು ದೇಶಗಳು ಬಲಿಪಶುವಾಗಿದೆಯಲ್ಲ ಅದಕ್ಕೆ ಏನೆನ್ನೋಣ ?.

ಫಿಡೆಲ್, ಚೆಗುವೆರಾ, ರೌಲ್ ಅವರು ಸಣ್ಣ ಗುಂಪಿನೊಂದಿಗೆ ಸಂಘಟಿಸಿದ ಗೆರಿಲ್ಲಾ ಪಡೆಯ ಯುದ್ಧ ಹಾಗೂ ಜನತೆಯ ಸಹಕಾ ರದಿಂದ ಕ್ಯೂಬಾದ ಸರ್ವಾಧಿಕಾರಿ ಬತಿಸ್ತಾ ಅವರಿಂದ 1959 ಜನವರಿ 1ರಂದು ಮುಕ್ತಿಗೊಳಿಸಿತ್ತು. ಫಿಡೆಲ್ ಸತತ 15 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. 1960ರಲ್ಲಿ ಫಿಡೆಲ್ ದೇಶದ ಅಧಿಕಾರದ ಗದ್ದುಗೆ ಏರಿದ ಮೇಲೆ ಅಮೆರಿಕದ ಸಹಾಯವನ್ನು ತಿರಸ್ಕರಿಸಿದ್ದರು. ತದನಂತರ ಅಮೆರಿಕದ ಕ್ಯೂಬಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಸಕ್ಕರೆಯನ್ನು ನಿಷೇಧಿಸಿತ್ತು.

ಈ ಸಂದರ್ಭದಲ್ಲಿ ಎಲ್ಲ ರೀತಿಯಿಂದಲೂ ಸಹಾಯ ನೀಡಿದ್ದು ರಷ್ಯಾ.ಇಂದು ಹೆಚ್ಚು ಕಡಿಮೆ ಜಗತ್ತಿನ ಅನೇಕ ದೇಶಗಳು ಅಮೆರಿಕದ ದಾಸರಾಗಿವೆ. ಜಾಗತೀಕರಣದ ಹೆಸರಲ್ಲಿ ಅದಾಗಲೇ ತಳವೂರಿ, ತನಗೆ ಬೇಕಾದ ಹಾಗೆ ವರ್ತಿಸುವುದು ಅಮೆರಿಕಕ್ಕೆ ಚೆನ್ನಾಗಿ ಗೊತ್ತು. ಅಮೆರಿಕವೇ ಬೆಳೆಸಿದ ಭಯೋತ್ಪಾದನೆ ಇಂದು ಆ ದೇಶವನ್ನು ಬಲಿ ತೆಗೆಯಲು ಹೊರಟಿದೆ. ಸಿಐಎ ಪ್ರಪಂಚದಲ್ಲಿ ನಡೆಸಿದ ಸಂಚುಗಳ ಜಗಜ್ಜಾಹೀರಾಗಿವೆ.

ಅಮೆರಿಕ ಎಕ್ಸಪಿರಿಯನ್ಸ್ ಬ್ಲಾಗ್‌‌ನಲ್ಲಿ ಫಿಡೆಲ್ ಕ್ಯಾಸ್ಟ್ರೋ ಕುರಿತ ಬರಹಕ್ಕೆ ಕ್ಯಾಲಿಫೋರ್ನಿಯಾದಿಂದ ಪ್ರತಿಕ್ರಿಯಿಸಿದ ಓದುಗರೊ ಬ್ಬರ ಪ್ರತಿಕ್ರಿಯೆಯನ್ನು ಇಲ್ಲಿ ಬಳಸಿಕೊಂಡಿದ್ದೇನೆ.
( I have gone to Cuba 4 different times under licensed travel. My experiences completely flew in the face of what I expected from what I now know as U.S. propaganda. The results of the revolution are powerful and wonderful. Cuba is a place where you can experience a society without racism. The population is literate, nearly 100% -- much higher than ours. Education is free -- tuition, books, and a stipend -- for all levels, including medical school, law school, art school, whatever. Even adults who want to change careers re-enter the university mid-life, free. I experienced freedom of religion -- Fidel is open to all things,

as long as they are not against the values of social justice that are the heart of the revolution. Your approach at PBS has been slanted against what I have come to know is the truth. Cuba is, however, a threat to the U.S. way of doing business in the world -- the threat of a good idea, said one international scholar.Cuba IS actually an ownership society -- everyone has a home, there are no homeless. They pay the government 10% of their income toward ownership. Of course, there is economic poverty, the result, they believe, of our 40+ years of blockade and economic warfare.

We refuse to let them pay reparation for the land they nationalized -- all other nations have done so, and now have business partnerships on the island. The bottom line -- that Cuba has the lowest infant mortality rate and the highest literacy rate in the Western Hemisphere -- speaks well for Fidel. Of course he is strong. He is brilliant, idealistic, charismatic, a leader loved by many worldwide... when the U.S. stops sending millions of $s to fund mercenaries on the island to work against the revolution, then Cubans will be able to have greater political freedoms. They now have human rights (education, jobs, food, shelter, health care) -- now they wait for greater political rights, when the playing field of their sovereignty is respected.)
G.R.A.Encinitas, California


Wednesday, February 13, 2008

''ಪ್ರೇಮಲೋಕ'' ದ ವಿಸ್ಮಯ..!!


ಅಲ್ಲಿ ಎಲ್ಲವೂ ಇದೆ, ಕೊಂಚ ಮುನಿಸು, ಕೊಂಚ ಜಗಳ, ಈರ್ಷ್ಯೆ, ಮತ್ಸರ, ಬಾಹುಕತೆ, ಧಾರಾಳತನ, ಸ್ನೇಹಪರತೆ, ಹೃದಯ ವೈಶಾಲ್ಯತೆ, ನಿಷ್ಕಲ್ಮಶವಾದ ಹಾಗೂ ವಂಚನೆ, ಮದುವೆ, ವಿಚ್ಛೇದನ ಹೀಗೆ ಎಲ್ಲವೂ, ಇದೆ ಅಲ್ಲವೇ ''ಪ್ರೇಮಲೋಕ''..ಪ್ರೀತಿ ಕುರುಡು ಎಂಬ ಮಾತೊಂದಿದೆ, ಪ್ರೀತಿಯೇ ಹಾಗೆ ಅದು ಜಾತಿ, ಅಂತಸ್ತು, ವಯಸ್ಸು ಎಲ್ಲವನ್ನೂ ದಾಟಿ ಪ್ರೇಮಾಲಾಪದಲ್ಲಿ ಅವೆಲ್ಲವೂ ಕೊಚ್ಚಿಹೋಗಿ ಅಲ್ಲಿ ಪ್ರೇಮದ ಅಮೃತಧಾರೆ ಹರಿಯುತ್ತಿರುತ್ತದೆ.....

ವಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪಕ್ಕನೆ ನೆನಪಿಗೆ ಬಂದದ್ದೇ , ಯಶೋಧರ ಚರಿತೆ...ಇತಿಹಾಸ ಹಾಗೂ ಪುರಾಣ ಸೇರಿದಂತೆ ಕನ್ನಡದ ಕಾವ್ಯ ಪರಂಪರೆಯಲ್ಲಿ ಇಂತಹ ಅದ್ಭುತ ಪ್ರೇಮಕಾವ್ಯಗಳು ಹೇರಳವಾಗಿವೆ. ಪ್ರೀತಿ ಕುರುಡು ಮತ್ತು ಅದು ಎಲ್ಲವನ್ನೂ ಮೀರಿ ಹೇಗೆ ಪ್ರೇಮಪಾಶದೊಳಕ್ಕೆ ಬಂಧಿಯಾಗುತ್ತಾರೆ ಎಂಬುದಕ್ಕೆ ಕನ್ನಡದ ರನ್ನತ್ರಯರಲ್ಲಿ ಒಬ್ಬನಾದ ಜನ್ನ ಕವಿಯ ಯಶೋಧರ ಚರಿತೆ ಉತ್ತಮ ಪ್ರೇಮ ಕಾವ್ಯವಾಗಿದೆ.

ಜನ್ನ ಕವಿ ರಚಿಸಿದ ಯಶೋಧರ ಚರಿತೆ ಸಂಕಲ್ಪ ಹಿಂಸೆ ಕೃತಿಯ ಕೇಂದ್ರ ಬಿಂದುವಾದರೂ ಕೂಡಾ ಅದು ಈಗಲೂ ಕಾಡುವ ಸುಂದರವಾದ ಪ್ರೇಮ ಕಥನ...ಯಶೋಧರ ರಾಜನ (ಯಕ್ಷಗಾನದ ಖ್ಯಾತ ಭಾಗವತರಾದ ದಿ.ಪಿ.ಕಾಳಿಂಗ ರಾವ್ ಅವರ ಅಮೃತಮತಿ ಯಕ್ಷಗಾನವೂ ಕೂಡ ಬಹಳಷ್ಟು ಹೆಸರು ಗಳಿಸಿತ್ತಲ್ಲದೆ, ಕಾಳಿಂಗ ರಾವ್ ಅವರ ಕಂಚಿನ ಕಂಠದಿಂದ ಹೊರಹೊಮ್ಮುತ್ತಿದ್ದ ಅದರಲ್ಲಿನ ರೂಪಕ ರಾಗಗಳು ಕೇಳುಗರ ಮತ್ತೇರಿಸುತ್ತಿತ್ತು, ಆ ಪದಗಳು ಈಗಲೂ ಕಿವಿಯಲ್ಲಿ ರಿಂಗಣಿಸುತ್ತದೆ)
ಪತ್ನಿ, ರಾಣಿ ಅಮೃತಮತಿ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದ ಆಕೆಗೆ ಸಕಲ ಐಶ್ವರ್ಯವೂ ಇದ್ದಿತ್ತು. ಆದರೆ ಅಂತಹ ಚೆಲುವಿನ ಅಮೃತಮತಿಗೆ, ಅರಮನೆಯ ಪಕ್ಕದಿಂದ ತೇಲಿಬರುತ್ತಿದ್ದ ಕೊಳಲನಾದ ಆಕೆಯ ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸುತ್ತದೆ. ರಾಗದ ಜಾಡನ್ನು ಹಿಡಿದು ಅರಸುತ್ತ ಬಂದ ಆಕೆಗೆ ಕಾಣಸಿಕ್ಕಿದ್ದು, ಅರಮನೆಯ ಮಾವುತ.

ರೂಪದಿಂದ ಚೆಲುವನಲ್ಲದ್ದರೂ ಆತನ ಕೊಳಲಿನಿಂದ ಹೊರಹೊಮ್ಮುವ ರಾಗ ಅಮೃತಮತಿಯನ್ನು ಬಿಟ್ಟುಬಿಡದೆ ಕಾಡುತ್ತೇ, ಈ ನಾದಕ್ಕೆ ಸೋತ ರಾಣಿ ಅಮೃತಮತಿ ಮಾವುತನಿಗೆ ಮನಸ್ಸು ಮತ್ತು ದೇಹವನ್ನೂಪ್ಪಿಸುತ್ತಾಳೆ. ಹೀಗೆ ಮಾವುತನೊಂದಿಗೆ ಅಮೃತಮತಿ ಪ್ರೇಮ ಸಲ್ಲಾಪ ನಿರಂತರವಾಗಿ ನಡೆಯುತ್ತಿರುತ್ತದೆ. ಒಮ್ಮೆ ರಾಜ ಅಮೃತಮತಿಯನ್ನು ಹಿಂಬಾಲಿಸಿ ಬಂದಾಗ, ಆತ ಕಂಡದ್ದು, ಮಾವುತನ ತೋಳತೆಕ್ಕೆಯಲ್ಲಿ ಬಂಧಿಯಾಗಿದ್ದ ರಾಣಿ ಅಮೃತಮತಿಯನ್ನ!!, ಆ ಕ್ಷಣದಲ್ಲೇ ಆಕೆಯನ್ನು ಕೊಲ್ಲಬೇಕೆಂದು ಸಂಕಲ್ಪಿಸುತ್ತಾನೆ, ಆದರೆ ಜಿನ ಧರ್ಮ ಆತನನ್ನ ತಡೆಯುತ್ತೆ, ಆಕೆಯ ವಿಷಯ ತಿಳಿದೂ ಯಶೋಧರ ಸುಮ್ಮನಿರುತ್ತಾನೆ.

ಆದರೆ ರಾಜನ ತಾಯಿ ರಾಜಮಾತೆ ಚಂದ್ರಮತಿಗೆ ಮಗನ ಬೇಗುದಿ ತಿಳಿಯುತ್ತೆ, ಸಂಕಲ್ಪ ಹಿಂಸೆಯನ್ನು ನಿವಾರಿಸಲು ಹಿಟ್ಟಿನ ಕೋಳಿ ಬಲಿ ಕೊಡಲು ನಿರ್ಧರಿಸುತ್ತಾರೆ. ಆದರೆ ಬಲಿಕೊಡುವ ಸಂದರ್ಭದಲ್ಲಿ ಹಿಟ್ಟಿನ ಕೋಳಿ ಒಳಗೆ ಸೇರಿಕೊಂಡಿದ್ದ ಪ್ರೇತಾತ್ಮವೊಂದು ಜೀವತಳೆದು ಕಿರುಚಿಕೊಳ್ಳುತ್ತದೆ. ಅದು ಮತ್ತೆ ಸಂಕಲ್ಪ ಹಿಂಸೆಯಾಗಿ ಕಾಡತೊಡಗುತ್ತದೆ. ಮುಂದೆ ಯಶೋಧರ ಮತ್ತು ಚಂದ್ರಮತಿ ಪಶು-ಪಕ್ಷಿ ನಾನಾ ವಿಧದಲ್ಲಿ ಜನ್ಮವೆತ್ತಿ , ಅಂತಿಮವಾಗಿ ಅಭಯ ರುಚಿ ಹಾಗೂ ಅಭಯಮತಿ ಎಂಬ ಅಣ್ಣ-ತಂಗಿಯರಾಗಿ ಹುಟ್ಟುತ್ತಾರೆ.

ಅದೇ ರೀತಿ ಜನ್ನನ ಅನಂತನಾಥ ಪುರಾಣ, 13ನೇ ಶತಮಾನದ ದೇವ ಕವಿಯ ಕುಸುಮಾವಳಿ, ನೇಮಿಚಂದ್ರನ ಲೀಲಾವತಿ, ಬಾಣನ ಕಾದಂಬರಿ, ಸುವಿಂಧುವಿನ ವಾಸವದತ್ತೆ, ಬೌದ್ಧ ಸಾಹಿತ್ಯದ ಮಣಿಚೋರ ಜಾತಕ, ಶುಭೆಯ ಕಥೆ, ಮಹಾಭಾರತದಲ್ಲಿನ ನಳದಮಯಂತಿ, ಕನಕದಾಸರ ಮೋಹನ ತರಂಗಿಣಿ ಸೇರಿದಂತೆ ದೇಶಿಯ ಮತ್ತು ಪೌರಾತ್ಯ ಸಾಹಿತ್ಯಗಳ ಕಾವ್ಯ ಪ್ರಪಂಚದಲ್ಲಿ ಇಂತಹ ಹಲವಾರು ಪ್ರೇಮ ಕಾವ್ಯಗಳು ದೊರೆಯುತ್ತದೆ.


Wednesday, January 23, 2008

ಉತ್ತರಿಸಲಾಗದ ಪ್ರಶ್ನೆ !!



1958-59 ರಲ್ಲಿ ನಡೆದ ಘಟನೆ ಇದು, ಬೆಳ್ತಂಗಡಿ ತಾಲೂಕಿನ ಜಮೀನ್ದಾರರೊಬ್ಬರ ಮನೆಯನ್ನು ಮುರಿದು ಬೆಲೆಬಾಳುವ ಬಂಗಾ ರ, ಬೆಳ್ಳಿ ಸೇರಿದಂತೆ ನಗದನ್ನು ಅಪಹರಿಸಲಾಗಿತ್ತು.ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಅದಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಬಂಧಿಸಿದ್ದರು. ಕಳವು ಮಾಡಿದ ಚಿನ್ನಾಭರಣಗಳನ್ನು ಊರಿನ ಪಟೇಲರು ಹಣ ಕೊಟ್ಟು ಖರೀದಿಸಿರುವುದಾಗಿ ಬಾಯ್ಬಿಟ್ಟಿದ್ದರು. ನಂತರದಲ್ಲಿ ಪಟೇಲರಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ 4ಮಂದಿಯ ಮೇಲೆ ದೂರು ದಾಖಲಿಸಿ, ಅವರನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಯಿತು. ನಾನಾಗ ಅಲ್ಲಿನ ಮ್ಯಾಜಿಸ್ಟ್ರೇಟ್ ಆಗಿದ್ದೆ. ಪ್ರಕರಣದ ವಿಚಾರಣೆ ನಡೆಸಿ ಪಟೇಲರಿಗೆ ಜಾಮೀನು ನೀಡಿ, ಉಳಿದ ಮೂವರಿಗೆ ಜೈಲು ಶಿಕ್ಷೆ ವಿಧಿಸಿದ್ದೆ. ಅವರನ್ನು ಕೋರ್ಟ್ ಹಿಂಭಾಗದಲ್ಲಿ ಇದ್ದ ಜೈಲು ಕಂಬಿಯ ಹಿಂದೆ ತಳ್ಳಲಾಯಿತು. ಆದರೆ ಕೆಲವೆ ದಿನಗಳಲ್ಲಿ ಈ ಕಳ್ಳರು ಜೈಲಿನ ಸರಳುಗಳನ್ನು ಎಕ್ಸೋ ಬ್ಲೇಡ್‌‌ನಿಂದ ಕತ್ತರಿಸಿ ಪರಾರಿಯಾಗಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರ ಕೈಗೆ ಇಬ್ಬರು ಮತ್ತೆ ಸಿಕ್ಕಿಬಿದ್ದಿದ್ದರು. ಒಬ್ಬ ಮಾತ್ರ ತಲೆತಪ್ಪಿಸಿಕೊಂಡಿದ್ದ. ಇದರಿಂದಾಗಿ 2-3ಬಾರಿ ವಿಚಾರಣೆಯನ್ನು ಮುಂದೂಡಲಾಯಿತು.ಸ್ವಲ್ಪ ಸಮಯದ ಬಳಿಕ ಮೂರನೇ ಕಳ್ಳನನ್ನೂ ಸೆರೆಹಿಡಿದು,ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ವಿಚಾರಣೆ ಬಳಿಕ ಅವರವರ ಹಿನ್ನೆಲೆ ತಿಳಿದುಕೊಂಡು ಇಬ್ಬರಿಗೆ ಜಾಮೀನು ನೀಡಿ, ಮೂರನೇ ವ್ಯಕ್ತಿಗೆ ಜಾಮೀನು ತಿರಸ್ಕರಿಸಲಾಯಿತು.

ಆ ಸಂದರ್ಭದಲ್ಲಿ ಕಟಕಟೆಯಲ್ಲಿ ನಿಂತಿದ್ದ ಮೂರನೇ ಆರೋಪಿ, ಕಾನೂನು ಬಡವ-ಶ್ರೀಮಂತರಿಗೆ ಒಂದೇ ರೀತಿಯಾಗಿರಬೇಕು, ಪಟೇಲರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದೀರಿ, ಅವರಿಗೂ ಜಾಮೀನು ನಿರಾಕರಿಸಬೇಕಿತ್ತು ಎಂದು ವಕಾಲತ್ತು ಮಾಡಿದ್ದ. ಆಗ ನನ್ನ ತಾಳ್ಮೆ ಕೆಟ್ಟು ಹೋಗಿ ಸಿಟ್ಟಿನಿಂದ ಕೂಗಿ, ಸಾಕೋ ನಿನ್ನ ಕಾನೂನು, ನಿನ್ನನ್ನು ಜಾಮೀನಿನ ಮೇಲೆ ಬಿಡಲಾಗುವುದಿಲ್ಲ ಎಂದೆ.ಆಗ ಆತ, ಸರ್....ಕೋರ್ಟ್‌‌ನಲ್ಲಿ ಕಾನೂನು ಮಾತನಾಡದೇ ಬೇರೆ ಎಲ್ಲಿ ಸಾರ್ ಕಾನೂನು ಮಾತಾಡಬೇಕು ? (If I cannot speak law in the court where else can i) ಎಂದು ಪ್ರಶ್ನಿಸಿದ್ದ !!.

ಇದು ಆದೂರು ವೆಂಕಟ ರಾವ್ ಅವರ "Memoirs of judge" ಪುಸ್ತಕದಲ್ಲಿನ ಒಂದು (The unanswerable Question) ಅಧ್ಯಾಯದ ಕಥನ, ಹೀಗೆ 30 ಅಧ್ಯಾಯಗಳ ಈ ಪುಸ್ತಕದಲ್ಲಿ ರಾವ್ ಅವರು, ನ್ಯಾಯಾಧೀಶರಾಗಿದ್ದ ಸಂದರ್ಭ ನಡೆದ ಮರೆಯಲಾರದ ಘಟನೆಗಳನ್ನು ಚಿಕ್ಕ-ಚೊಕ್ಕದಾಗಿ ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟಿದ್ದಾರೆ.

ನಿಮಗೆಲ್ಲಾದರು ಈ ಪುಸ್ತಕ ಕಣ್ಣಿಗೆ ಕಾಣಿಸಿದರೆ ಓದಿ, ಇದರಲ್ಲಿ ನಿಟ್ಟೂರು ಶ್ರೀನಿವಾಸರಾಯರು, ನ್ಯಾಯಮೂರ್ತಿ ಮಳಿಮಠ, ಮುಖ್ಯನ್ಯಾಯಮೂರ್ತಿ ಕೆ.ಗೋವಿಂದ ಭಟ್, ಲೋಕಾಯುಕ್ತದಲ್ಲಿ ಹೆಸರುಗಳಿಸಿದ ವೆಂಕಟಾಚಲಯ್ಯ, ಜಗನ್ನಾಥ್ ಶೆಟ್ಟಿ, ಚಂದ್ರ ಚೂಡಾ ಮುಂತಾದವರೊಂದಿಗಿನ ಸ್ಮರಣಿ ಗಳಿಗೆಗಳನ್ನು, ಅವರ ಔದಾರ್ಯವನ್ನು ಬರಹದಲ್ಲಿ ಅನಾವರಣಗೊಳಿಸಿದ್ದಾರೆ.ಲೇಖರ ಪರಿಚಯ: ಆದೂರು ವೆಂಕಟ ರಾವ್ ಅವರು 1926ರಲ್ಲಿ ತಂಜಾವೂರಲ್ಲಿ ಜನಿಸಿದ್ದರು.

ಇವರ ತಂದೆ-ತಾಯಿ ದಕ್ಷಿಣ ಕನ್ನಡ ಮೂಲದವರು. ಎಸ್‌‌ಎಸ್‌‌ಎಲ್‌‌ಸಿ ಹಾಗೂ ಬಿಎಸ್ಸಿ ಪದವಿಗಳನ್ನು ಮಂಗಳೂರಿನಲ್ಲಿ ಪಡೆದಿದ್ದ ಅವರು, ಕಾನೂನು ಪದವಿಯನ್ನು ಮದ್ರಾಸ್‌‌ ಯೂನಿರ್ವಸಿಟಿಯಲ್ಲಿ ಪಡೆದಿದ್ದರು. 1954ರಿಂದ ಮಂಗಳೂರು, ಕುಂದಾಪುರ, ಬಿ.ಸಿ.ರೋಡ್, ಪುತ್ತೂರು,ಕೊಳ್ಳೇಗಾಲ, ಚಾಮರಾಜನಗರ, ವೀರಾಜಪೇಟೆ, ಮೈಸೂರು ಮುಂತಾದೆಡೆ ನ್ಯಾಯಾಧೀಶರಾಗಿದ್ದರು. 1981ರಲ್ಲಿ ನಿವೃತ್ತರಾಗಿದ್ದರು.

Wednesday, January 16, 2008

ಶಾಸಕರೊಬ್ಬರ ಅಜ್ಞಾತವಾಸ ಕಥನ....

ಇದು ಜನಪ್ರತಿನಿಧಿಯೊಬ್ಬರ ಬದುಕಿನ ಚಿತ್ರಣ. ಅಧಿಕಾರ, ರಾಜಕೀಯ ,ಮೋಹ ಎಷ್ಟರಮಟ್ಟಿಗೆ ಅವರ ಜೀವನದಲ್ಲಿ ಹಾಸು ಹೊಕ್ಕಾಗಿರುತ್ತದೆ ಎನ್ನುವುದಕ್ಕೆ ಇಲ್ಲಿರುವ ಮಾಜಿ ಶಾಸಕ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯರೊಬ್ಬರ ಬದಕಿನ ಚಿತ್ರಣನ್ನ ಓದಿ....ಕುಂದಾಪುರ ತಾಲೂಕಿನ ಹೈಕಾಡಿಯಲ್ಲಿ ಇರುವ ಹಾಲಿ ವಿಧಾನ ಪರಿಷತ್ ಸದಸ್ಯ, ಮಾಜಿ ಶಾಸಕ ಪ್ರತಾಪ್ ಚಂದ್ರ ಶೆಟ್ಟಿ ಅವರ ಮನೆಗೆ ಕಾಲಿಟ್ಟಾಗ ಗೌಜಿ, ಗದ್ದಲಗಳಿಲ್ಲದೆ ಪ್ರಶಾಂತವಾಗಿತ್ತು.

ಅಲ್ಲಿ ಮೊದಲಿನಂತೆ ದಂಡು ಇರಲಿಲ್ಲ, ಅರ್ಧ ತಾಸಿನ ಬಳಿಕ ನಿದ್ದೆಯಿಂದ ಎದ್ದು ಬಂದ ಅವರು ಏನು ಎಂದು ವಿಚಾರಿಸಿದಾಗ, ವಿಷಯ ತಿಳಿಸಿ ವಿವರಕ್ಕಾಗಿ ಕಾದರೆ ಯಾವ ಮಾತನ್ನೂ ಆಡಲೂ ಅವರು ಸಿದ್ದರಿರಲಿಲ್ಲ. ಇದು ಕಳೆದ ಐದಾರು ವರ್ಷಗಳ ಕಠಿಣ ವೃತವೇನೋ ಎಂಬಂತೆ ಪಾಲಿಸಿಕೊಂಡು ಬಂದಿದ್ದಾರೆ. ಹಾಗಂತ ಆಪ್ತ ಕಾರ್ಯಕರ್ತರಲ್ಲಿ ಸಮಾಲೋಚನೆ, ಮಾತುಕತೆ ನಡೆಸುತ್ತಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌‌ನ ಭದ್ರಕೋಟೆಯಾಗಿತ್ತು.

ಈ ಕ್ಷೇತ್ರವನ್ನು ಸುಮಾರು 16ವರ್ಷಗಳ ಕಾಲ ಆಳಿದವರು ಕೊಳ್ಕೆಬೈಲ್ ಪ್ರತಾಪ್‌‌ಚಂದ್ರ ಶೆಟ್ಟಿಯವರು. 1983ರಲ್ಲಿ ರಾಜಕೀಯ ರಂಗ ಪ್ರವೇಶಿಸಿದ್ದ ಪ್ರತಾಪರು ಸಹಜವಾಗಿಯೇ ತನ್ನ ಪ್ರತಾಪವನ್ನು ತೋರ್ಪಡಿಸಿದ್ದರು. ಇವರ ಹಿಂದೆ ಕಾರ್ಯಕರ್ತರ ದಂಡೆ ನೆರೆದಿರುತ್ತಿತ್ತು. ರಾಜಕೀಯದಲ್ಲಿ ಚಾಣಾಕ್ಷ ಎಂಬ ಬಿರುದು ಇತ್ತು. ಎಲ್ಲವನ್ನೂ ಕುಳಿತಲ್ಲೇ ಮಾಡಿಸಿಕೊಳ್ಳಬಲ್ಲ ತಾಕತ್ತು ಅವರಿಗಿದ್ದಿತ್ತು. ಅದೇ ರೀತಿಯಾಗಿ ವಿಧಾನಸಭೆಯಲ್ಲೂ ಅವರ ಧ್ವನಿಗೆ ಬೆಲೆಯೂ ಇದ್ದಿತ್ತು.

ಆದರೆ ಅವರಿಗೆ ಕಾರ್ಯಕರ್ತರೆಡೆಗಿದ್ದ ಕುರುಡು ವ್ಯಾಮೋಹ ಅವರನ್ನು 1999ರಲ್ಲಿ ನಡೆದ ಚುನಾವಣೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಕೇವಲ ಒಂದು ಸಾವಿರ ಮತಗಳ ಅಂತರದಿಂದ ಅವರದ್ದೇ ಊರಿನ ದಾಯಾದಿ, ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಎದುರು ಪರಾಜಯ ಹೊಂದಿದ್ದರು.1999ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ಸಚಿವರಾಗುತ್ತಿದ್ದರು. ಅದು ಕೊನೆಗೂ ಈಡೇರಲಿಲ್ಲ. ಈ ವಿಷಯದಲ್ಲಿ ತಾಲೂಕಿಗೆ ಸಚಿವ ಸ್ಥಾನದ ಅದೃಷ್ಟವೇ ಇಲ್ಲ ಎಂಬಂತಾಗಿ ಬಿಟ್ಟಿದೆ.

ಬಹುಶಃ ಯಾವ ಶಾಸಕರೂ ಈ ಪರಿಯಲ್ಲಿ ನೊಂದುಕೊಂಡ ಇತಿಹಾಸ ಇರಲಿಕ್ಕಿಲ್ಲ. ಆದರೆ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ತನ್ನನ್ನು ಗೆಲ್ಲಬಲ್ಲ ಇನ್ನೊಬ್ಬ ವ್ಯಕ್ತಿ ಕ್ಷೇತ್ರದಲ್ಲಿ ಯಾರಿದ್ದಾರೆ ಎಂಬ ಬಲವಾದ ನಂಬಿಕೆಯಲ್ಲಿದ್ದ ಅವರಿಗೆ ಈ ಸೋಲು ಯಾವ ಪರಿ ಅಜ್ಞಾತವಾಸಕ್ಕೆ ನೂಕಿ ಬಿಟ್ಟಿತ್ತೆಂದರೆ, ಆ ಸಂದರ್ಭದಲ್ಲಿ ಮೌನಕ್ಕೆ ಶರಣಾದ ಅವರಲ್ಲಿ ಹಿಂದಿನ ಗೆಟಪ್ಪು ಹೊರಟು ಹೋಗಿತ್ತು. ಅತೀ ಆತ್ಮೀಯರಷ್ಟೇ ಅವರಲ್ಲಿಗೆ ಬಂದು ಹೋಗುತ್ತಿದ್ದದ್ದು ಬಿಟ್ಟರೆ, ಪಕ್ಷದ ಕಾರ್ಯಕರ್ತರನ್ನು ದೂರವಿಟ್ಟರು.

ದೂರವಾಣಿ ಕರೆಗಳಿಗೂ ಅವರು ಮನೆಯಲ್ಲಿ ಇದ್ದೂ ಇಲ್ಲ ಎಂಬ ಉತ್ತರ ಸಿಗುತ್ತಿತ್ತು. ಸಾರ್ವಜನಿಕವಾಗಿ ಕಾಣಿಸುವುದೇ ಅಪರೂ ಪವಾಯಿತು. ಗಾಢ ಆಲೋಚನೆಯಲ್ಲಿ ಮಗ್ನರಾಗತೊಡಗಿದ ಪ್ರತಾಪರನ್ನು 2003ರಲ್ಲಿ ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.ಆದರೂ ಮಾಜಿ ಶಾಸಕ ಎಂಬ ಶಾಕ್‌ನಿಂದ ಆವಾಗಲೂ ಹೊರಬರಲು ಸಿದ್ಧರಿರಲಿಲ್ಲ.

ಇತ್ತೀಚೆಗಷ್ಟೇ ಕೆಲವು ಸಮಾರಂಭಗಳಲ್ಲಿ ಅವರ ಮುಖ ಕಾಣಿಸತೊಡಗಿದೆ.ಪದವಿ ಶಿಕ್ಷಣ ಮುಗಿದ ಬಳಿಕ ಪ್ರತಾಪರು ಆಯ್ದು ಕೊಂಡ ಕ್ಷೇತ್ರ ಬ್ಯಾಂಕಿಂಗ್. ತಂದೆ ಹುಯ್ಯಾರು ಹಿರಿಯಣ್ಣ ಪಟೇಲ್ ನಿಧನರಾದ ಬಳಿಕ ಮೈಸೂರಿನ ಬ್ಯಾಂಕಿ (ಆ ಸಂದರ್ಭದಲ್ಲಿ ಈಗಿನ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಕೂಡ ಬ್ಯಾಂಕ್‌‌ ಕೆಲಸದಲ್ಲಿ ಜತೆಗಿದ್ದರು)ನಲ್ಲಿ ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಹಾಲಾಡಿಗೆ ಬಂದಿದ್ದರು.

1983ರಲ್ಲಿ ಪ್ರತಾಪರು ಜನತಾದಳದ ಮಾಣಿಗೋಪಾಲ್ ಅವರನ್ನು ಸೋಲಿಸುವ ಮೂಲಕ ಪ್ರಥಮಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆ ನಂತರದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಂತವರು ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್. ಇಂದಿಗೂ ಪ್ರತಾಪ್‌‌ಗೆ ಬಲಗೈಯಾಗಿರುವವರು ಆಸ್ಕರ್ ಮಾತ್ರ1985 ರಲ್ಲಿ ಅಪ್ಪಣ್ಣ ಹೆಗ್ಡೆ, 1989ರಲ್ಲಿ ಗೋವರ್ಧನ್, 1994ರಲ್ಲಿ ಎ.ಜಿ.ಕೊಡ್ಗಿ ವಿರುದ್ಧ ಜಯಗಳಿಸಿದ್ದರು.

1999ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರ ಎದುರು ಪರಾಭವ ಹೊಂದಿದ್ದರು. ಇದೀಗ ಆಧ್ಯಾತ್ಮಿಕ ಹಾಗೂ ಕೃಷಿ ಪುಸ್ತಕಗಳನ್ನು ಆಳವಾಗಿ ಓದುವುದರಲ್ಲಿ ಮಗ್ನರಾಗಿದ್ದಾರೆ. ಯೋಗದ ಬಗ್ಗೆ ಒಲವು ಹೊಂದಿದ್ದು ಮುಂದಿನ ರಾಜಕೀಯ ತಂತ್ರಗಾರಿಕೆಯಲ್ಲಿ ಮಗ್ನರಾಗಿದ್ದಾರೆ....

ಗೋಡ್ಸೆ ಎಂಬ ಹೀರೋ !!!



ಸಾಗರದ ಹೆಗ್ಗೋಡಿನ ಶಿಲ್ಪಿ ಹಿರಿಯರಾದ ದಿ.ಕೆ.ವಿ.ಸುಬ್ಬಣ್ಣನವರು ಸಮಾಜ ಮತ್ತು ಜನತಂತ್ರದ ಕುರಿತು ಬರೆದ ಲೇಖನದಲ್ಲಿ, ಗಾಂಧಿ ನಾಯಕತ್ವದ ಪ್ರಸ್ತುತ ಸ್ವಾತಂತ್ರ್ಯ ಹೋರಾಟದ 30 ವರ್ಷಗಳು ಇತಿಹಾಸದ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ಅವಧಿಯಾಗಿದೆ. ಪ್ರಾಚೀನ ಹಾಗೂ ಆಧುನಿಕತೆ ಬಹು ಭದ್ರವಾಗಿ ಬೆಸೆದುಕೊಂಡಿರುವ ಕೊಂಡಿಕಾಲ ಅದು.

ಆ ಕಾಲದಲ್ಲಿ ಗಾಂಧಿ ಮಾರ್ಗದರ್ಶನ ದೊರೆಯದೆ ಹೋಗಿದ್ದರೆ ಈ ದೇಶ ಈಗಿರುವ ಹಾಗೆ ಉಳಿಯುತ್ತಿರಲಿಲ್ಲ. ನಿಶ್ಚಿತವಾಗಿ ಒಂದೋ ಪಾಕಿಸ್ತಾನ ಮಾದರಿಯಂತೆ ಭಾರತ ಹಿಂದೂ ರಾಷ್ಟ್ರವಾಗಿರುತ್ತಿತ್ತು, ಅಥವಾ ಆಧುನಿಕ ಚೀನಾದ ಹಾಗೆ, ತನ್ನ ಪೂರ್ತಿ ಪರಂಪರೆಗಳನ್ನು ಪೂರ್ಣ ತುಂಡರಸಿ ಆಧುನಿಕವನ್ನಪ್ಪಿಕೊಂಡಿರುತ್ತಿತ್ತು. ಆದರೆ ಭಾರತ ಹಾಗಾಗದೆ ಎರಡೂ ದಾರಿ ಬಿಟ್ಟು ತನ್ನದೆ ಹಾದಿಯಲ್ಲಿ ಬೆಳೆದು ನಿಂತಿರುವುದು ಮಹತ್ವವಾದ ಅಂಶವಾಗಿದೆ.


ಈ ಮಾತನ್ನು ಪ್ರಸ್ತಾಪಿಸಲು ಪ್ರಮುಖ ಕಾರಣ ಇಂದು ಗಾಂಧಿಯ ತತ್ವಗಳಾಗಲಿ, ಗ್ರಾಮಸ್ವರಾಜ್ಯದ ಕಲ್ಪನೆಯಾಗಲಿ ಯಾವುದೂ ಯಾರಿಗೂ ಬೇಕಾಗಿಲ್ಲ. ಅದರಲ್ಲೂ ಗಾಂಧಿ,ಗಾಂಧಿ ಎಂದು ಜಪಿಸುತ್ತಿದ್ದ ಕಾಂಗ್ರೆಸ್ಸೂ ಕೂಡ ನೈತಿಕ ಬಲವನ್ನು ಕಳೆದುಕೊಂಡಿದೆ. ಶಾಂತಿಮಂತ್ರ ಜಪಿಸಿದ್ದ ಗಾಂಧಿ ನಾಡು ಗುಜರಾತ್‌‌ನಲ್ಲಿ ರಕ್ತದೋಕುಳಿ ಹರಿದಿದೆ.

ಯಾವ ಹಿಂದು-ಮುಸ್ಲಿಂರ ಏಕತೆಗಾಗಿ ಹೋರಾಡಿ ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದರೊ, ಅಂತಹ ಗಾಂಧಿಯ ಅಹಿಂಸಾ ತತ್ವ ಗುಜರಾತ್‌‌ನಲ್ಲಿ ಗಾಳಿಗೆ ತೂರಿಹೋಗಿದೆ. ಗಾಂಧಿಯ ಒಂದೇ ಒಂದು ಕರೆಗೆ ಲಕ್ಷಾಂತರ ಜನ ಒಗೊಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ್ದರು, ದೇಶಾದ್ಯಂತ ಸಂಚರಿಸಿ ಪ್ರತಿಯೊಂದು ಸ್ಥಿತಿಗತಿಯ ಕುರಿತು ಕೂಲಂಕಷ ಅಧ್ಯಯನ ನಡೆಸಿದ್ದ ಗಾಂಧಿ ಇಂದು ಯುವ ಮನಸ್ಸಿನಿಂದ ದೂರವಾಗಿದ್ದಾರೆ.

ಗಾಂಧಿ ನುಡಿದಂತೆ ಬದುಕಿನಲ್ಲಿ ನಡೆದ ಸಾಧಕ, ಆದರೆ ನಮ್ಮ ರಾಜಕೀಯ ಪುಡಾರಿಗಳಿಗೆ ಅಂತಹ ಮನೋಬಲ ಇದೆಯೇ, ಕೇವಲ ಅಧಿಕಾರದ ಗದ್ದುಗೆಗಾಗಿ ಗಾಂಧಿ, ಅಹಿಂಸೆ, ಜಾತ್ಯತೀತ ಎಂದೆಲ್ಲ ಬೊಗಳೆ ಬಿಟ್ಟು ಕುರ್ಚಿಯನ್ನು ಹಿಡಿದರೆ ವಿನಃ ಬೇರೆನೂ ಆಗಿಲ್ಲ. ಇತ್ತೀಚೆಗೆ ಆಂಧ್ರದ ತಾಡಂಪಲ್ಲಿಗುಡಂ ಪಟ್ಟಣದ ಬಿಜೆಪಿ ಮುಖಂಡ ಆರ್‌‌ಎಸ್‌‌ಎಸ್ ನಾಯಕ ಶ್ಯಾಂಪ್ರಸಾದ್ ಮುಖರ್ಜಿ ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು ಸ್ಥಾಪಿಸಿರುವುದು ಗಾಂಧಿ ಬಗ್ಗೆ ಇಷ್ಟೆಲ್ಲಾ ಪೀಠಿಕೆಗೆ ಕಾರಣ.

ಕೋಮುದ್ವೇಷದ ಜ್ವಾಲಾಗ್ನಿ ಮಹಾತ್ಮ ಗಾಂಧಿಯನ್ನು ನಾಥೂರಾಂ ಗೋಡ್ಸೆಯ ಮೂಲಕ ಬಲಿ ತೆಗೆದುಕೊಂಡಿತ್ತು. ಇಂದು ಯಾರು ಆದರ್ಶವಾಗಬೇಕಿತ್ತು. ಅವರಾರು ಮಾದರಿಯಾಗುತ್ತಿಲ್ಲ. ಭಯೋತ್ಪಾದಕ, ಪಂಜಾಬ್ ಪ್ರತ್ಯೇಕತವಾದಿ ಖಾಲ್ಸಾ ಉಗ್ರಗಾಮಿ ಸಂಘಟನೆಯ ಬಿಂದ್ರನ್‌‌ವಾಲೆಯನ್ನು ಸಿಖ್ ಸಮುದಾಯ ವೀರತ್ವ ಏರಿಸಿದೆ, ಅದರಂತೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಂತಕರಾದ ಸತ್ವಂತ್ ಸಿಂಗ್ ಮತ್ತು ಕೇಹರ್ ಸಿಂಗ್‌‌ಗೂ ಕೂಡ ಸಿಖ್ ಸಮುದಾಯ ವೀರಪುರುಷರು ಎಂಬ ಪಟ್ಟ ನೀಡಿ ಉನ್ನತ ಮಟ್ಟಕ್ಕೇರಿಸಿದೆ.

ಅದೇ ತೆರನಾಗಿ ಪೆರಿಯಾರ್, ದ್ರಾವಿಡ್ ಚಳವಳಿ ಎಂದೆಲ್ಲ ಕ್ರಾಂತಿ ಎಬ್ಬಿಸಿದ್ದ ತಮಿಳುನಾಡಿನ ಜನ ಚಿತ್ರನಟಿ ಖುಷ್ಬೂ, ಜಯಲಲಿತಾ ಅವರಂತವರಿಗೆ ದೇವಾಲಯ ಕಟ್ಟಿವೆ. ವಿಪರ್ಯಾಸ ಎಂಬಂತೆ ತಮಿಳುನಾಡಿನ ಜನರಿಂದ ಆರಾಧಿಸಲ್ಪಟ್ಟ ಖುಷ್ಬೂಗೆ, ಲೈಂಗಿಕತೆ ಬಗ್ಗೆ ಹೇಳಿಕೆ ನೀಡಿದ್ದಕ್ಕೆ, ದೇವಾಲಯದಲ್ಲಿ ಪಾದರಕ್ಷೆ ಹಾಕಿ ಪ್ರವೇಶಿಸಿದ್ದಕ್ಕೆ ಕೋರ್ಟ್ ಮೆಟ್ಟಿಲು ಹತ್ತಿಸಿದ್ದಾರೆ.ಎರಡು ದಶಕಗಳ ಕಾಲ ಕಾಡಿನ ರಾಜನಾಗಿ ಮೆರೆದ ನರಹಂತಕ ವೀರಪ್ಪನ್‌‌ನ್ನು ಗೋಪಿನಾಥಂನಲ್ಲಿ ಪ್ರತಿಮೆ ಪೂಜಿಸುತ್ತಿದ್ದಾರೆ.

ಬಹುಶಃ ಇನ್ನು ಮುಂದೆ ಈ ಪಟ್ಟಿಯಲ್ಲಿ ಉಗ್ರಗಾಮಿ ಸಂಘಟನೆಯ ಒಸಾಮ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ, ಎಲ್‌‌ಟಿಟಿಇಯ ಪ್ರಭಾಕರನ್....ಹೀಗೆ ಎಂಥೆಂತಹ ಮಹಾನುಭಾವರ ಸೇರ್ಪಡೆಯಾಗಲಿಕ್ಕಿದೆಯೋ ಹೇ ರಾಮ್.....!!!....

Monday, January 7, 2008

ಮುನಿಯಾಲ್ ಎಂಬ ' ಅಲೆಮಾರಿ '


ನಾವು ಎಲ್ಲರೊಂದಿಗೂ ಬೆರೆಯುತ್ತಾ, ಹರಟೆ ಹೊಡೆಯುತ್ತಿರುತ್ತೇವೆ. ಆದರೆ ಎಲ್ಲರಿಗೂ ಎಲ್ಲಾ ವಿಷಯಗಳಲ್ಲೂ ಆಸಕ್ತಿಯಾಗಲಿ, ಕೇಳುವ ವ್ಯವಧಾನ ಇರುವುದಿಲ್ಲ. ಹಾಗೆಯೇ ಪತ್ರಕರ್ತ ರಾದವ ರಿಗೆ ಪ್ರತಿಕ್ಷೇತ್ರದ ಬಗ್ಗೆ ಕುತೂಹಲ, ಆಸಕ್ತಿ ಇರಬೇಕಾಗುತ್ತದೆ. ಆ ಕಾರಣಕ್ಕಾಗಿಯೇ ಕೆಲವರು ಬಹಳಷ್ಟು ಆತ್ಮೀಯರಾಗುತ್ತಾರೆ.

ನಾವು ಒಂದೇ ವಿಷಯಕ್ಕೆ ಗಂಟು ಬಿದ್ದು ಮಿತ್ರರೊಡನೆ ಕೊರೆಯುತ್ತಿದ್ದರೆ ಅದೂ ಒಂದು ರೀತಿಯಲ್ಲಿ ಬೋರು ಹೊಡೆಸುತ್ತದೆ. ಅದನ್ನು ಬಿಟ್ಟು ಬೇರೆ ವಿಷಯಕ್ಕೆ ಹೊರಳಿದಾಗ ಹೋ... ಯಾಕ್ರಿ ಸುಮ್ಮನೆ ಸಾಹಿತ್ಯ, ವಿಜ್ಞಾನ, ವಿಸ್ಮಯ ಅಂತ ತಲೆ ತಿಂತೀರಾ ಅನ್ನೋ ಅಸಡ್ಡೆಯೂ ಅಷ್ಟೇ ರೇಜಿಗೆ ಹುಟ್ಟಿಸುತ್ತದೆ. ಅದಕ್ಕಾಗಿ ನನಗೆ ಮುನಿಯಾಲ್ ಗಣೇಶ್ ಶೆಣೈಯಂತಹ ಹಿರಿಯರ ವ್ಯಕ್ತಿತ್ವ ತುಂಬಾ ಖುಷಿ ಕೊಡುತ್ತದೆ.

ಬೆಂಗಳೂರಿನ ಕಾಂಕ್ರೀಟ್ ಕಾಡುಗಳ ಮಧ್ಯೆ ನೆಲೆಸಿದ್ದ ಮುನಿಯಾಲರು ಆ ಜಂಡವೇ ಬೇಡ ಎಂದು ಕುಂದಾಪುರ ತಾಲೂಕಿನ ಗಾವಳಿಯ ಸ್ವಂತ ಜಮೀನಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಪತ್ರಕರ್ತರಾಗಿ, ಸಾಹಿತಿಯಾಗಿ, ಅಲೆಮಾರಿ, ಪುಸ್ತಕ ವ್ಯಾಪಾರಿ, ಪ್ರಕಾಶಕ ಹೀಗೆ ಎಲ್ಲವೂ ಆಗಿರುವ ಮುನಿಯಾ ಲರು ' ಬಹುಮುಖಿ ' ವ್ಯಕ್ತಿತ್ವ ಹೊಂದಿದವರು.

ಅವರೊಡನೆ ಮಾತನಾಡಿದ ಯಾರಿಗಾದರೂ ಬೇಜಾರು ಅಥವಾ ಬೋರು ಅನ್ನಿಸುವುದಿಲ್ಲ. ಗಾವ ಳಿಯ ಕುಗ್ರಾಮದಿಂದ ಹಿಡಿದು ಚೀನಾ, ಟಿಬೇಟ್, ಬೌದ್ಧ, ಜೈನ, ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಎಡ, ಬಲ, ಆಯುರ್ವೇದ ಎಲ್ಲ ವಿಚಾರಗಳ ಕುರಿತು ಬಹು ಸ್ವಾರಸ್ಯವಾಗಿ ವಾಗ್ಝರಿಯನ್ನು ಹರಿಸುತ್ತಾರೆ.

ಅಂತಹ ಮಾತು, ಚರ್ಚೆ ಮೌಲ್ಯಯುತವಾಗಿರುತ್ತದೆ. ಸ್ವತಃ ಪುಸ್ತಕ ವ್ಯಾಪಾರಿಗಳಾಗಿರುವ ಅವರು ಈಗಾಗಲೇ ದೇಶದ ಹಲವಾರು ಭಾಗಗಳಿಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ ಹಲವಾರು ವಿಷಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. 20ಕ್ಕೂ ಅಧಿಕ ಪುಸ್ತಕ ಬರೆದಿದ್ದಾರೆ.


50ರ ಆಸುಪಾಸಿನಲ್ಲಿರುವ ಮುನಿಯಾಲರ ಅಲೆಮಾರಿ ಬದುಕು ಮಾತ್ರ ನಿಂತಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಸ್ವಭಾವದ ಅವರು ಮಾನಸ ಸರೋವರ, ಕೈಲಾಸ ಪರ್ವತ, ಸಿಕ್ಕಿಂ, ಲಕ್ಷದ್ವೀಪ, ಚಂದ್ರಕಣಿ ಪಾಸ್ ಹೀಗೆ ಎಲ್ಲೆಂದರಲ್ಲಿ ಅಲೆದಾಡುತ್ತಿರುತ್ತಾರೆ. ಮತ್ತು ಅದನ್ನು ಅಷ್ಟೇ ಅಂದವಾಗಿ ಅಕ್ಷರರೂಪಕ್ಕಿಳಿಸಿ ಸಾಹಿತ್ಯಾಸಕ್ತರಿಗೆ ಉಣಬಡಿಸುತ್ತಾರೆ.

ವಿಜ್ಞಾನದ ಬಗ್ಗೆ, ಮಕ್ಕಳ ಸಾಹಿತ್ಯದ ಬಗ್ಗೆ ಪ್ರತಿಯೊಂದು ವಿಷಯದ ಕುರಿತು ಮಾತನಾಡುತ್ತಾರೆ. ಇದೀಗ ಇತ್ತೀಚೆಗೆ ಸಿಕ್ಕಿಂ ರಾಜ್ಯಕ್ಕೆ ಭೇಟಿ ನೀಡಿರುವುದಾಗಿ ಹೇಳಿದ್ದ ಅವರು ಅಲ್ಲಿನ ಜನಾಂಗವೊಂದರ ಕುರಿತು ಮಾಹಿತಿ ಕಲೆ ಹಾಕಿರುವುದಾಗಿ ತಿಳಿಸಿದ್ದರು. ಜೀವವಿದ್ದರೂ ಸದಾ ಕಾಲ ಒಂದಲ್ಲ ಒಂದು ಬಗೆಯ ಅಶಾಂತಿಯಿಂದ ತೊಳಲಾಡುವವರಿಗೆ ಅನಂತ ಪ್ರಕೃತಿಯ ಮಡಿಲಲ್ಲಿ ನೆಮ್ಮದಿ ಸಿಗುವ ಸಾಧ್ಯತೆ ಇದ್ದರೆ ಅದು ಹಿಮಾಲಯ ಎಂದೆನ್ನುವ ಮುನಿಯಾಲರ ಹಿಮಾಲಯ ಚಾರಣದ ಅದ್ಭುತ ಕಥನವೇ ಚಂದ್ರಕಣಿ ಪಾಸ್.

ಅದೇ ರೀತಿ ದಟ್ಟವಾದ ಮಂಜು ಮುಸುಕಿದ ಕಣಿವೆಗಳಲ್ಲಿ ರಕ್ತ ಹೆಪ್ಪುಗಟ್ಟಿಸುವ ಚಳಿಗಾಳಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಎತ್ತರದ ಶಿಖರವೇರಿದ ರೋಮಾಂಚನ ವಿವರ ಅವರ ಮಂಜು ಮುಸುಕಿದ ಕಣಿವೆಗಳ ರೋಮಾಂಚಕಾರಿ ವಿವರಗಳು ಈ ಪುಸ್ತಕದಲ್ಲಿ ಲಭ್ಯ.

ನೀವು ಯಾವುದೇ ಊರಿಗೆ ಪ್ರವಾಸ, ಚಾರಣ ಹೋಗಬೇಕಿದ್ದರೂ ಅವರಲ್ಲಿ ಸುಲಭವಾದ ಉಪಾ ಯ ಮತ್ತು ಸಲಹೆಗಳನ್ನು ಸೂಚಿಸಬಲ್ಲರು. ಅಂತಹ ಸ್ಥಳಗಳನ್ನು ನೋಡಬೇಕೆಂಬ ಕುತೂಹಲ ಇದ್ದರೂ ಕೂಡ ನೀವು ಅವರನ್ನು ಸಂಪರ್ಕಿಸಿದರೂ (9448869963) ಸಾಕು. ಮುಂದೆ ನಿಮಗೆ ಬೇಕಾದ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ. ಈಗ ಹೇಳಿ ಇಂತಹ ವ್ಯಕ್ತಿತ್ವ ಬೋರು ಹಿಡಿಸುತ್ತದೆಯಾ ಅಂತ......