Saturday, March 15, 2008

ಚಂಡೆ - ಮದ್ದಳೆ ಗುಂಗಿನಲ್ಲಿ....


ಆ ದಿನಗಳಲ್ಲಿ ರಿಕ್ಷಾದಲ್ಲಿ ಮೈಕ್ ಕಟ್ಟಿಕೊಂಡು, ಇಂದು ರಾತ್ರಿ ಒಂಬತ್ತುವರೆಗೆ ಸರಿಯಾಗಿ ಒಂದೇ ಒಂದು ಆಟ (ಯಕ್ಷಗಾನ), ಪ್ರಿಯ ಯಕ್ಷಗಾನ ಪ್ರೇಮಿಗಳೇ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ ಎಂದು ಕೂಗುತ್ತ, ಸಾಗುವ ರಿಕ್ಷಾದ ಹಿಂದೆ, ಆತ ಬಿಸಾಕುವ ಪ್ಯಾಂಪ್ಲೆಟ್ ಹೆಕ್ಕಲು ಓಡುತ್ತಿದ್ದೆವು.


ಹೀಗೆ ಕೂಗುತ್ತ ಸಾಗುವಾಗಲೇ, ಮನೆಯಲ್ಲಿ ಅಡುಗೆ, ಬೇರೆ, ಬೇರೆ ಕೆಲಸಗಳೆಲ್ಲ ಜಟಾಪಟಾ ಮುಗಿಯುತ್ತಿ ದ್ದವು, ಯಾಕೆಂದರೆ ಒಂಬತ್ತುವರೆಗೆ ಸರಿಯಾಗಿ ಯಕ್ಷಗಾನ ನೋಡಲು ಹೋಗಬೇಕಲ್ಲ ಅದಕ್ಕೆ. ಯಕ್ಷಗಾನದ ಚೌಕಿಯಿಂದ ಕರಿಮುಖದವಗೆ ಗಣಾಧಿಪತಿ....ಎಂದು ಗಣಪತಿ ಪೂಜೆ ಆರಂಭಗೊಂಡು ಚಂಡೆ-ಮದ್ದಳೆ ಸದ್ದು ಕಿವಿಗೆ ಬೀಳುವ ಮುನ್ನ ಹರುಕು-ಮುರುಕು ಚಾಪೆಯೊಂದಿಗೆ ಪಸ್ಟ್ ಕ್ಲಾಸ್ ( ರಂಗಸ್ಥಳದ ಎದುರುಭಾಗದ ನೆಲ)ನಲ್ಲಿ ಕುಳಿತಿರುತ್ತಿದ್ದೆವು.


ಜಾತ್ರೆ ಎಂಬಂತೆ ಜನ ಹಿಂಡು, ಹಿಂಡಾಗಿ ಬಂದು ಕೂರುತ್ತಿದ್ದರು. ಮಕ್ಕಳು, ಹೆಂಗಸರು, ಮುದುಕರು, ಎಲ್ಲರೂ ಬಂದು ಚಾಪೆ, ವಸ್ತ್ರ ಹಾಕಿಕೊಂಡು ಕಣ್ಣಲ್ಲಿ, ಕಣ್ಣಿಟ್ಟು ಯಕ್ಷಗಾನ ವೀಕ್ಷಿಸುತ್ತಿದ್ದರು. ನಮಗೆ ಆರಂಭದಲ್ಲಿ ಭಾರೀ ಉತ್ಸಾಹ, ಸುಮಾರು 11 ಗಂಟೆ ಸುಮಾರಿಗೆ ನಮ್ಮ ಗಾಡಿ ಪ್ಯಾಚ್ (ನಿದ್ರೆ) ಆಗಿರುತ್ತಿತ್ತು.

ಮಧ್ಯರಾತ್ರಿ 12ರ ನಂತರ ರಂಗಸ್ಥಳ ಪ್ರವೇಶಿಸುವ ರಾಕ್ಷಸ, ಒಡ್ಡೋಲಗ ಪ್ರವೇಶದ ಸಂದ ರ್ಭದಲ್ಲಿ ಚಂಡೆಯ ಹೊಡೆತದ ಅಬ್ಬರ, ಭಾಗವತರ ಆರ್ಭಟ, ರಾಕ್ಷಸನ ಕಿರುಚಾಟ, ಬೆಳಕಿನ ಸರ್ಕಸ್‌‌ ಆರಂಭಗೊಂಡ ಕೂಡಲೇ ಮನೆಯಿಂದ ಬಂದಿದ್ದ ಹಿರಿಯರು, ಏಯ್ ಮಕ್ಕಳೇ ಏಳಿ, ಏಳಿ, ರಾಕ್ಷಸ, ರಾಕ್ಷಸ ಅಂತ ಇವರೂ ಬೊಬ್ಬೆ ಹೊಡೆಯುವುದರಿಂದ ನಾವು ದಿಗಿಲುಗೊಂಡು ನಿದ್ದೆಗಣ್ಣಲ್ಲೇ ಎದ್ದು ಕೂರುತ್ತಿದ್ದೇವು.

ಮತ್ತೆ ಯಕ್ಷಗಾನ ವೀಕ್ಷಣೆ. ಅಷ್ಟು ವೇಳೆಗೆ ನಮಗೆ ಒಂದು ಸುತ್ತಿನ ನಿದ್ದೆ ಆಗಿರುತ್ತದೆ. ಆದರೆ ನಮ್ಮಂತೆ ಬರುವ ಉಳಿದ ಹುಡುಗರು ಪಾಳಿ ಎಂಬಂತೆ ಅವರು ನಿದ್ದೆಗೆ ಶರಣಾಗಿರುತ್ತಿದ್ದರು. ಆಗ ನಾವು ಅವರ ಬಾಯಿಗೆ ಕಾಗದವನ್ನು ಬೀಡಿಯಂತೆ ಸುರುಳಿ ಸುತ್ತಿ ಇಡುತ್ತಿದ್ದೇವು. ಕೆಲವೊಮ್ಮೆ ಬೆಂಕಿ ಹಚ್ಚಿ ನಂದಿಸಿ, ಬಾಯಿಗೆ ಇಟ್ಟಾಗ ಅದು ಬೀಡಿಯಂತೆ ಹೊಗೆಯುಳುತ್ತಿತ್ತು. ಅಲ್ಲಿ ಯಕ್ಷಗಾನ ನಡೆಯುತ್ತಿದ್ದರೆ, ಇಲ್ಲಿ ನಮ್ಮದೇ ಒಂದು ಮೇಳ. ಕೆಲ ಸಂದರ್ಭದಲ್ಲಿ ದೊಡ್ಡವರಿಂದ ಬಾಯಿಗೆ ಬಂದಂತೆ ಬೈಗುಳ ತಿಂದದ್ದು (!!) ಇದೆ.

ಮಧ್ಯರಾತ್ರಿಯಲ್ಲಿ ಚಂಡೆ ಮದ್ದಳೆ ಸದ್ದಿನೊಂದಿಗೆ, ಮಲಗಿದವರಿಂದಲೂ ''ಸದ್ದು'' ಹೊರಡುತ್ತಿದ್ದು, ಆದರೆ ಅದು ಚಂಡೆ ಸದ್ದಿನೊಂದಿಗೆ ಮಿಳಿತವಾಗಿ ಹೋಗುತ್ತಿತ್ತು...... !! ದೇವಿ ಮಹಾತ್ಮೆ, ರಾಮಾಯಣ, ಮಹಾಭಾರತ, ಗದಾಯುದ್ಧ, ಭೀಷ್ಮ ವಿಜಯ, ರತಿ ಕಲ್ಯಾಣ, ಮಹಾಮಂತ್ರಿ ದುಷ್ಟಬುದ್ಧಿ, ನಳದಮಯಂತಿ, ಶಬರಿಮಲೆ ಅಯ್ಯಪ್ಪ, ಸಂಪೂರ್ಣ ಕುರುಕ್ಷೇತ್ರ, ವಿಜಯಶ್ರೀ, ರಾಮ ನಿರ್ಯಾಣ, ಶರಸೇತು ಬಂಧನ, ವಿಭೀಷಣ ನೀತಿ, ಲಂಕಾ ದಹನ, ಲವ-ಕುಶ ಕಾಳಗ, ಕೃಷ್ಣಾರ್ಜುನ, ಕೃಷ್ಣಗಾರುಡಿ, ಸುಭದ್ರೆ ಕಲ್ಯಾಣ, ಸೀತಾ ಕಲ್ಯಾಣ ಹೀಗೆ ಸಾಲು,ಸಾಲು ಯಕ್ಷಗಾನ ನೋಡುತ್ತಿದ್ದೆವು.

ಹಳ್ಳಿಗರಿಗಂತೂ ಯಕ್ಷಗಾನದ ಮೂಲಕವೇ ಎಲ್ಲಾ ಪುರಾಣ ಕಥೆಗಳು ಬಾಯಿಪಾಠವಾಗುವಷ್ಟರ ಮಟ್ಟಿಗೆ ಯಕ್ಷಗಾನದ ಪ್ರಸಂಗಗಳು ಚಿರಪರಿಚಿತವಾಗಿದ್ದವು. ಒಮ್ಮೆ ನಮ್ಮೂರ ಸಮೀಪದ ಅರಾಟೆ ಎಂಬಲ್ಲಿ ಬಯಲಾಟ ನಡೆಯುತ್ತಿದ್ದಾಗ, 1 ಗಂಟೆ ರಂಗಸ್ಥಳ ಪ್ರವೇಶಿಸಿದ ರಾಜನ ವೇಷಧಾರಿ ಇದೇನಾಶ್ಚರ್ಯ ಎಂದು ಗಂಭೀರವಾಗಿ ನುಡಿದಾಗ, ಎದುರು ಸಾಲಿನಲ್ಲಿ ಕುಳಿತು ನಿದ್ದೆಗಣ್ಣಲ್ಲಿದ್ದ ವ್ಯಕ್ತಿಯೊಬ್ಬರು ದಡಬಡಿಸಿ, ಏನಿಲ್ಲಾ ಸುಮ್ಮನೆ ಒಂದು ಗಳಿಗೆ ಆಟ ನೋಡಿಕೊಂಡು ಹೋಗುವಾ ಅಂತ ಬಂದೆ ಅಂದಾಗ,ಪಕ್ಕದಲ್ಲೇ ಕುಳಿತಿದ್ದವರು,

ಆಯ್ಯೋ ಆಚಾರ್ಯರೆ (ವೃತ್ತಿಯಲ್ಲಿ ಅವರು ಬಡಗಿ ನಮ್ಮಲ್ಲಿ ಆಚಾರ್ಯರು ಎನ್ನುತ್ತೇವೆ,ಯಕ್ಷಗಾನದಲ್ಲಿ ಇದೇನು ಆಶ್ಚರ್ಯ ಎಂದಿದ್ದು, ಇವರಿಗೆ ಏನು ಆಚಾರ್ರೇ ಎಂದು ಕೇಳಿಸಿತ್ತು!!!) ಅವರು ನಿಮ್ಮನ್ನು ಕರೆದ್ದಲ್ಲ, ಸ್ವಲ್ಪ ಕಣ್ಣು ಬಿಟ್ಟು ನೋಡಿ ಎಂದಾಗ ನಕ್ಕಿದ್ದೇ, ನಕ್ಕಿದ್ದು.

ಇದು ಸುಮಾರು 20 ವರ್ಷಗಳ ಹಿಂದಿನ ಕಥೆ. ಆ ಸಂದರ್ಭಗಳಲ್ಲಿ ಮಂದರ್ತಿ ಮೇಳ, ಸಾಲಿಗ್ರಾಮ, ಧರ್ಮ ಸ್ಥಳ, ಕಟೀಲು, ಮಾರಣಕಟ್ಟೆ, ಸಿಗಂಧೂರೇಶ್ವರಿ, ಮಂಗಳಾದೇವಿ, ಗರಡಿ-ಮೇಳ ಪ್ರಸಿದ್ಧವಾಗಿದ್ದವು. ಕಾಳಿಂಗ ನಾವಡ, ಸುಬ್ರಹ್ಮಣ್ಯ ಧಾರೇಶ್ವರ, ದಿನೇಶ್ ಅಮ್ಮಣ್ಣಾಯ, ನೆಬ್ಬೂರ್, ಕಡತೋಕರ ಭಾಗವತಿಕೆ ಕೇಳುವುದೇ ಒಂದು ವಿಶಿಷ್ಟ ಅನುಭವ ನೀಡುತ್ತಿತ್ತು.

ಕುಂಬ್ಳೆ ಸುಂದರ ರಾವ್, ಮಲ್ಪೆ ರಾಮದಾಸ ಸಾಮಗರು, ವಾಸುದೇವ ಸಾಮಗ, ದೇರಾಜೆ ಸೀತಾರಾಮಯ್ಯ, ಗೋವಿಂದ ಭಟ್, ನಾರಾಯಣ ಹೆಗ್ಡೆ, ಶೇಣಿ ಗೋಪಾಲಕೃಷ್ಣ ಮುಂತಾದ ಹಿರಿಯರ ಅರ್ಥಗರ್ಭಿತ ಮಾತು ಗಳು ಇಂದಿಗೂ ಚಿರಸ್ಮರಣೀಯ.ಇತ್ತೀಚೆಗೆ ಊರಿನಲ್ಲಿ ಯಕ್ಷಗಾನ ನೋಡುವ ಅವಕಾಶ ಬಂದೊದಗಿತ್ತು.

ನಮ್ಮ ಮನೆಯ ಸಮೀಪವೇ ಯಕ್ಷಗಾನ ಬಯಲಾಟ ಇದ್ದಿತ್ತು. 10ಗಂಟೆ ಸುಮಾರಿಗೆ ಯಕ್ಷಗಾನದತ್ತ ಹೆಜ್ಜೆ ಹಾಕಿದ್ದೆ, ರಂಗಸ್ಥಳದ ಮುಂಭಾಗದಲ್ಲಿ ಬೆರಳೆಣಿಕೆಯ ಜನ ನಿಂತಿದ್ದರು. 12ಗಂಟೆಯಾಗುವ ಹೊತ್ತಿಗೆ ಒಬ್ಬೊ ಬ್ಬರೆ ಮನೆಯತ್ತ ದಾಪುಗಾಲು ಹಾಕತೊಡಗಿದ್ದರು. ಕೊನೆಗೆ ಉಳಿದದ್ದು ರಂಗಸ್ಥಳದಲ್ಲಿ ಕುಣಿಯುವವರು ಮತ್ತು ಚೌಕಿಯಲ್ಲಿದ್ದವರು ಮಾತ್ರ. ಆಗ ನನಗೆ ಹಳೆಯ ನೆನಪುಗಳೆಲ್ಲ ಕಾಡಿದವು.

ಆ ಸಂದರ್ಭದಲ್ಲಿ ಯಕ್ಷಗಾನಕ್ಕೆ ಜನಜಾತ್ರೆ, ರಾತ್ರಿಯಿಂದ ಬೆಳಿಗ್ಗಿನ ಜಾವದವರೆಗೆ ಯಾರೂ ಕದಲುತ್ತಿರಲಿಲ್ಲ, ಅಷ್ಟು ಆಸಕ್ತಿಯಿಂದ ನೋಡುತ್ತಿದ್ದರು. ಹಾಗಂತ ಇತ್ತೀಚೆಗೆ ಸಿನಿಮಾ ಕಥೆ ಆಧಾರಿತ ಯಕ್ಷಗಾನ ಪ್ರಸಂಗಗಳು ಟೆಂಟ್ ಮೇಳಗಳಲ್ಲಿ ಯಶಸ್ವಿ ನೂರನೇ ಪ್ರಯೋಗ ಅಂತ ಕಾಣುತ್ತೇವೆ ಹಾಗೂ ಮಂದರ್ತಿ, ಕಟೀಲು, ಧರ್ಮಸ್ಥಳ ಮೇಳಗಳನ್ನು ಹರಕೆ ರೂಪದಲ್ಲಿ ಆಡಿಸುತ್ತಾರೆ.

ಮಂದರ್ತಿಯ ನಾಲ್ಕು ಮೇಳಗಳೂ 2017ರವರೆಗೂ ಬುಕ್ಕಿಂಗ್ ಆಗಿದೆ. ಇದನ್ನು ಕೂಡ ಹರಕೆ ಹೊತ್ತ ಮನೆ ಮಂದಿ, ನೆಂಟರು ನೋಡಬೇಕಷ್ಟೇ ವಿನಃ ಈ ಹಿಂದಿನ ಆಸಕ್ತಿ, ಕುತೂಹಲ ಇಂದು ಜನರಲ್ಲಿ ಉಳಿದಿಲ್ಲ ಎನ್ನುವುದಂತೂ ಸತ್ಯ..



ರಾಜ್ಯರಾಜಕೀಯದ 'ತ್ರಿಶಂಕು ಸ್ಥಿತಿ'


ಬೆಂಗಳೂರು: ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವುದು ಖಚಿತವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಾಜಕಾರಣದಲ್ಲೀಗ ಬಿರುಸಿನ ಚಟುವಟಿಕೆ ನಡೆಯತೊಡಗಿದೆ. ಎಲ್ಲವೂ ಸರಿಯಾಗಿದೆ ಎಂಬಷ್ಠರಲ್ಲಿ ಯೇ ಕಾಂಗ್ರೆಸ್ ಹೈಕಮಾಂಡ್ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರನ್ನು ರಾಜ್ಯ ರಾಜಕಾರಣದ ಪಡಸಾಲೆಗೆ ಎಳೆದುತಂದಿದೆ.

ಕೃಷ್ಣ ಅವರು ರಾಜ್ಯ ರಾಜಕೀಯ ಆಗಮಿಸುತ್ತಾರೆ ಎಂಬ ಸುದ್ದಿ ಹಬ್ಬುತ್ತಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅಸಮಾಧಾನ ವ್ಯಕ್ತಪಡಿಸಿದ್ದರು. ಡಿ.ಕೆ.ಶಿವಕುಮಾರ್ ಗುಂಪಿಗೆ ಕೃಷ್ಣರ ಆಗಮನ ಮಹತ್ವದೆನಿಸಿದ್ದರೂ ಕೂಡ ಕಾಂಗ್ರೆಸ್‌‌ನ ಬಹುತೇಕ ಮುಖಂಡರಿಗೆ ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಿದೆ. ಅದರ ಪರಿಣಾಮ ಎಂಬಂತೆ ಮೈಸೂರಿನಲ್ಲಿ ಖರ್ಗೆ ನೇತೃತ್ವದಲ್ಲಿ ನಡೆಯಲಿರುವ ರಾಜ್ಯದ ಉದ್ದಗಲಕ್ಕೂ ಜನಜಾಗೃತಿ ಮೂಡಿಸಲು ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆದರೆ ಎಸ್.ಎಂ.ಕೃಷ್ಣ ಅವರನ್ನು ಆಹ್ವಾನಿಸದೆ ಆಮಂತ್ರಣ ಪತ್ರದಿಂದ ಅವರ ಹೆಸರನ್ನು ಕೈ ಬಿಡಲಾಗಿದೆ. ಇದರಿಂದ ಕಾಂಗ್ರೆಸ್ ಗುಂಪುಗಾರಿಕೆ ಮತ್ತೊಮ್ಮೆ ಬಯಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ರಾಹುಲ್ ಗಾಂಧಿಯನ್ನು ಹೆಚ್ಚಾಗಿ ಪ್ರಚಾರಕ್ಕೆ ಬಳಸಿಕೊಳ್ಳತೊಡಗಿದೆ. ಅದರ ಫಲಿತಾಂಶ ಎಂಬಂತೆ ಗುಜರಾತ್, ಹಿಮಾಚಲ ಪ್ರದೇಶಗಳಲ್ಲಿ ರಾಹುಲ್ ರೋಡ್ ಶೋ ಯಾವುದೇ ಫಲ ಕೊಟ್ಟಿಲ್ಲ.

ಆದರೂ ಒರಿಸ್ಸಾದಿಂದ ಡಿಸ್ಕವರ್ ಇಂಡಿಯಾ ಪ್ರವಾಸ ಆರಂಭಿಸಿರುವ ರಾಹುಲ್ ಕರ್ನಾಟಕಕ್ಕೂ ಆಗಮಿಸು ತ್ತಿದ್ದಾರೆ. ಆದರೆ ಜನರು ರಾಹುಲ್‌‌ಗೆ ಹೆಚ್ಚಿನ ಮಹತ್ವ ನೀಡುವುದು ಅನುಮಾನವೇ, ಇಂದಿರಾ, ರಾಜೀವ್‌‌ಗಾಂಧಿ ರೋಡ್ ಶೋಗಳಿಗೆ ಜನ ಮುಗಿ ಬೀಳುತ್ತಿದ್ದರು, ಹಾಗೂ ನಿಮ್ಮದು ಯಾವುದಕ್ಕೆ ಮತ ಅಂತ ಕೇಳಿದರೆ 'ಕೈ'ಎನ್ನುತ್ತಿದ್ದರು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ!! ಕಾಂಗ್ರೆಸ್ ಪಕ್ಷಕ್ಕೆ ಸಿದ್ಧರಾಮಯ್ಯ, ಎಂ.ಪಿ.ಪ್ರಕಾಶ್‌‌ರಂತಹ ಘಟಾನುಘ ಟಿಗಳು ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್ ಬಲಶಾಲಿಯಾಗಿದೆ ಎಂಬ ಅಂಶ ಮೇಲ್ನೋಟಕ್ಕೆ ಕಂಡು ಬಂದರೂ ಕೂಡ, ರಾಜ್ಯ ರಾಜಕಾರಣದಲ್ಲಿನ ಸೂಕ್ಷ್ಯ ಎಳೆಗಳನ್ನು ಅವಲೋಕಿಸುತ್ತ ಹೋದರೆ, ಕಾಂಗ್ರೆಸ್‌‌ನಲ್ಲಿ ಒಗ್ಗಟ್ಟು ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಅಲ್ಲದೇ ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರ ಅಸ್ತು ಎಂದ ಮೇಲೆ ಕೆಲವು ಮುಖಂಡರಿಗೆ ದಿಕ್ಕೇ ತೋಚದಂತಾ ಗಿದೆ. ಈ ಸ್ಥಿತಿ ಕೇವಲ ಕಾಂಗ್ರೆಸ್‌‌ಗೆ ಮಾತ್ರವಲ್ಲ,ಬಹುತೇಕ ಪಕ್ಷದಲ್ಲಿನ ಮುಖಂಡರು ಹಲವು ವರ್ಷಗಳ ಕಾಲ ಒಂದೇ ಕ್ಷೇತ್ರದಲ್ಲಿ ಪಾಳೆಗಾರರಂತೆ ಸ್ಪರ್ಧಿಸಿ ಗೆಲ್ಲುತ್ತಿದ್ದರು. ಆ ಅವಕಾಶ ಈ ಬಾರಿ ಕೈ ತಪ್ಪಿ ಹೋಗುವ ಮೂಲಕ ಅವರ ಅಸ್ತಿತ್ವಕ್ಕೆ ಕೊಡಲಿಯೇಟು ಬಿದ್ದಂತಾಗಿರುವುದರಿಂದ ಈ ಬಾರಿಯ ಚುನಾವಣೆ ಅಖಾಡ ಮತ್ತಷ್ಟು ರಂಗೇರಲಿದೆ.

ಇನ್ನು ಭಾರತೀಯ ಜನತಾ ಪಕ್ಷ ಅನುಕಂಪ, ಹಿಂದುತ್ವದ ಅಜೆಂಡಾದ ಮೇಲೆ ಮುನ್ನುಗ್ಗಲು ಪ್ರಯತ್ನಿಸಿದರೂ ಕೂಡ ಯಾವುದೇ ಫಲ ನೀಡದ ಕಾರಣ ಇದೀಗ ಬಿಜೆಪಿ ತನ್ನ ವರಸೆಯನ್ನು ಬದಲಾಯಿಸಿ, ಗಲಭೆ, ದತ್ತ ಪೀಠಗಳೆಲ್ಲವನ್ನು ಬದಿಗೊತ್ತಿ-ರೈತಪರ, ಶಾಸ್ತ್ರೀಯ ಸ್ಥಾನಮಾನ, ಭ್ರಷ್ಠಾಚಾರ ಅಜೆಂಡಾವನ್ನು ಮುಂದಿಟ್ಟು ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧವಾಗಿದೆ.

ಜೆಡಿಎಸ್ ಕಾಂಗ್ರೆಸ್-ಬಿಜೆಪಿಯನ್ನು ಸಮಾನ ಶತ್ರುಗಳೆಂದು ದೂರ ಸರಿದಿದ್ದು (ಕೆಟ್ಟ ಮೇಲೆ ಬುದ್ಧ ಬಂತು ಎಂಬ ಗಾದಿ ಮಾತಿನಂತೆ)ತಮ್ಮ ಸರಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟು ಮತದಾರರ ಬಳಿ ಹೋಗುವುದಾಗಿ ಹೇಳಿದೆ. ಇನ್ನು ಬಿಎಸ್ಪಿ, ಸಮಾಜವಾದಿ,ಸಿಪಿಐಎಂ ಮುಂತಾದವುಗಳು ಕಣದಲ್ಲಿವೆ.

ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷವಾಗಲಿ,ಪ್ರಾದೇಶಿಕ ಪಕ್ಷದಲ್ಲಾಗಲಿ ಹೇಳಿಕೊಳ್ಳುವಂತಹ ಒಬ್ಬನೇ ಒಬ್ಬ ಡೈನಾಮಿಕ್ ರಾಜಕಾರಣಿ ಇದ್ದಾರೆಯೇ ಎಂಬುದು ಮತದಾರರ ಮುಂದಿರುವ ಪ್ರಶ್ನೆ. ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾ ವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಆದರೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಈ ಬಾರಿಯೂ ಯಾವ ಪಕ್ಷಕ್ಕೂ ಬಹುಮತ ದೊರೆಯಲಾರದು ಎಂಬ ಅಂಶ ನಿಚ್ಚಳವಾಗತೊಡಗಿದೆ....

ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರ ಸಚಿವ ಸಂಪುಟ ಅನಮೋದನೆ ನೀಡಿರುವ ಹಿನ್ನೆಲೆಯಲ್ಲಿ ಕ್ಷೇತ್ರಗಳನ್ನು ಕಳೆದುಕೊಳ್ಳಲಿರುವವರಲ್ಲಿ ಪ್ರಮುಖರಾಗಿ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(ಗುರುಮಿಠಕಲ್), ಎಂ.ಪಿ.ಪ್ರಕಾಶ್(ಹೂವಿನ ಹಡಗಲಿ), ಡಿ.ಕೆ.ಶಿವಕುಮಾರ್ (ಸಾತನೂರು), ಟಿ.ಬಿ.ಜಯಚಂದ್ರ (ಕಳ್ಳಂಬೆಳ್ಳ), ಡಾ.ಜಿ.ಪರಮೇಶ್ವರ(ಮಧುಗಿರಿ), ಎನ್.ಎಸ್. ಬೋಸರಾಜು (ಮಾನ್ವಿ),

ಗುರುಪಾದಪ್ಪ ನಾಗಮಾರಪಲ್ಲಿ (ಔರಾದ್), ಕೃಷ್ಣಬೈರೇಗೌಡ (ವೇಮಗಲ್). ಸಿ.ಚನ್ನಿಗಪ್ಪ (ಕೊರಟಗೇರಿ), ಡಿ.ಮಂಜುನಾಥ್ (ಹಿರಿಯೂರು), ಅಲಂಗೂರು ಶ್ರೀನಿವಾಸ್(ಮುಳಬಾಗಿಲು), ಕೆ.ಎನ್.ರಾಜಣ್ಣ (ಬೆ ಳ್ಳಾವಿ), ನಾಗರಾಜಯ್ಯ (ಹುಲಿಯೂರುದುರ್ಗ), ಸಂತೋಷ್ ಲಾಡ್ (ಸಂಡೂರು), ಅಮರೇಗೌಡ ಬಯ್ಯಾಪುರ (ಲಿಂಗಸೂರು), ವೈಜನಾಥ್ ಪಾಟೀಲ್(ಚಿಂಚೋಳಿ).

ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ (ಮಾಯಾಕೊಂಡ), ಪಕ್ಷೇತರ ಶಾಸಕರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ (ಬ್ರಹ್ಮಾವರ), ಎಚ್. ಆಂಜನೇಯ (ಭರಮಸಾಗರ), ನಾಗಮಣಿ ನಾಗೇಗೌಡ ಕಿರಗಾವಲ). ಅಲ್ಲದೇ, ದಾವಣಗೆರೆ, ರಾಯಚೂರು, ಬಳ್ಳಾರಿಯಲ್ಲಿ ತಲಾ ಒಂದೊಂದು ವಿಧಾನಸಭಾ ಕ್ಷೇತ್ರಗಳು ಜಾಸ್ತಿಯಾಗಲಿದ್ದು, ಮಂಗಳೂರು, ಚಿಕ್ಕಮಗಳೂರು, ಉಡುಪಿ, ಮಂಡ್ಯ, ಕೋಲಾರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಮಡಿಕೇರಿ, ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಒಂದೊಂದು ಹಾಗೂ ತುಮಕೂರು ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳು ಕಡಿಮೆ ಆಗಲಿದೆ.


Tuesday, March 4, 2008

ಮಹಿಳೆಯರು ಎಷ್ಟು ಸುರಕ್ಷಿತ.... ?!



ಹೆಣ್ಣಿಗೆ ಭಾರತೀಯ ಸಮಾಜದಲ್ಲಿ ಅದೆಷ್ಟು ಗೌರವ, ಪೂಜನೀಯ ಸ್ಥಾನ, ಆಕೆ ಪ್ರೀತಿಯ ತಾಯಿ, ಅಕ್ಕ, ತಂಗಿ, ಪ್ರಿಯೆ, ಪ್ರಿಯತಮೆ ಹೀಗೆ ಎಲ್ಲ ಸ್ಥಾನವನ್ನೂ ಅಲಂಕರಿಸುತ್ತಾಳೆ. ಆದರೆ ಪುರುಷ ಪ್ರಧಾನ (!!) ವ್ಯವಸ್ಥೆಯಲ್ಲಿ ಇಂದಿಗೂ ಹೆಣ್ಣು ಅನುಭವಿಸುತ್ತಿರುವ ಯಾತನೆ, ನೋವುಗಳಿಗೆ ಪರಿಹಾರ ಸಿಕ್ಕಿದೆಯೇ ಎಂಬ ಬಗ್ಗೆ ಮಹಿಳಾ ದಿನಾಚರಣೆ (ಮಾ.8) ಅಂಗವಾಗಿ ಒಂದು ಬರಹ ಇಲ್ಲಿದೆ...

ಹೆಣ್ಣು ನಾಲ್ಕು ಗೋಡೆ ಮಧ್ಯೆಯೇ ವಾಸಿಸಬೇಕಾದವಳಲ್ಲ, ಆಕೆಗೂ ಸ್ವಾತಂತ್ರ್ಯ, ಹಕ್ಕು, ಸ್ಥಾನಮಾನದ ಅಗತ್ಯ ಇದೆ ಎಂಬಂತಹ ಮಾತುಗಳು ಬಹಳ ಹಿಂದಕ್ಕೆ ಹೋಗಿವೆ. ಅಂತಹ ವಾತಾವರಣ ಬಹಳಷ್ಟು ಕಡಿಮೆಯಾಗಿದೆ. ಇಂದು ಮಹಿಳೆಯರು ನಾಲ್ಕು ಗೋಡೆಯನ್ನು ಯಶಸ್ವಿಯಾಗಿ ದಾಟಿ ಮುಖ್ಯವಾಹಿನಿಗೆ ಬಂದಿದ್ದಾರೆ. ಸ್ವಾತಂತ್ರ್ಯ, ಹಕ್ಕು ಎಲ್ಲವೂ ದೊರೆತಿದೆ ಎಂಬಂತಹ ನಿಟ್ಟುಸಿರುವ ಬಿಡುವ ವಾತಾವರಣ ಭಾರತದಲ್ಲಿ (ಸ್ಥಳೀಯವಾಗಿಯಾಗಲಿ) ಸೃಷ್ಟಿಯಾಗಿದೆಯೇ ಎಂಬುದನ್ನು ವಿಶ್ಲೇಷಿಸಬೇಕಾಗಿದೆ.

ಇಂದು ಸ್ವಾತಂತ್ರ್ಯ, ಹಕ್ಕುಗಳಿಗಿಂತ ಮಹಿಳೆಯರ ಪಾಲಿಗೆ ಬೇರೆಯದೆ ತೆರನಾದ ಸಮಸ್ಯೆಗಳು ಆವರಿಸಿಕೊಂಡು ಬಿಟ್ಟಿದೆ ಎನ್ನು ವುದಕ್ಕೆ ನಾಗರಿಕ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನೇ ಗಮನಿಸಿದರೆ ಸಾಕು, ಹೆಚ್ಚಿಗೆ ಏನು ಹೇಳಬೇಕಾದ ಅವಶ್ಯಕತೆ ಇಲ್ಲ..

ಘಟನೆ 1 : ನನ್ನ ಮೇಲೆ ಆಸಿಡ್ ದಾಳಿ ನಡೆಸಿದ ಪತಿ ಈಗ ನನ್ನ ಕಣ್ಣ ಮುಂದೆಯೇ ಆರಾಮವಾಗಿದ್ದಾನೆ. ಅವನ ವಿಕೃತಿಗೆ ನನ್ನ ಬದುಕೇ ಬಲಿಯಾಯಿತು. ಆ ಬಗ್ಗೆ ಆತನಿಗೆ ಯಾವುದೇ ಅಳುಕಿಲ್ಲ. ಈ ಘಟನೆ ನಂತರ ನನಗೆ ಯಾರು ಮನೆಯನ್ನು ಬಾಡಿಗೆಗೆ ನೀಡಲಿಲ್ಲ. ಹತ್ತಾರು ಮನೆಗಳ ಬಾಗಿಲು ಬಡಿದರೂ ಮನೆ ಸಿಗಲಿಲ್ಲ, ನನಗೆ ಮನೆ ನೀಡದಿರಲು ಕಾರಣವಾದರೂ ಏನು ಎಂದು ಅಲವತ್ತುಕೊಂಡಾಕೆ ಗಂಡನ ಆಸಿಡ್ ದಾಳಿಗೆ ತುತ್ತಾದ ನತದೃಷ್ಟೆ ಶಾಂತಿ. ನನ್ನ ಮೇಲೆ ಆಸಿಡ್ ದಾಳಿ ನಡೆಸಿದ ಆರೋಪಿಗಳಿಗೆ ಒಂಬತ್ತು ವರ್ಷ ಕಳೆದರೂ ಶಿಕ್ಷೆಯಾಗಿಲ್ಲ ಎಂದು ಕಣ್ಣೀರು ಸುರಿಸಿದಾಕೆ ಹಸೀನಾ.


ಇವರೆಲ್ಲ ಇತ್ತೀಚೆಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ವತಿಯಿಂದ ನಡೆದ ಆಸಿಡ್ ದಾಳಿ ರಾಷ್ಟ್ರೀಯ ವಿಚಾರಣ ಸಂಕಿರಣದಲ್ಲಿ ಭಾಗವಹಿಸಿ ವಿಕೃತ ಪುರುಷನ ಕ್ರೌರ್ಯಕ್ಕೆ ಬಲಿಯಾದ ನೋವಿನ ಘಟನೆಯ ಸುರುಳಿಯನ್ನು ಬಿಚ್ಚಿಟ್ಟಿದ್ದರು.


ಘಟನೆ 2: ಒಬ್ಬಂಟಿ ಆದಿವಾಸಿ ಮಹಿಳೆಯನ್ನು ಅಸ್ಸಾಂನ ಗುವಾಹಟಿಯಲ್ಲಿ ಹಾಡಹಗಲೇ ಎಲ್ಲರೆದುರಲ್ಲೇ ಬೆತ್ತಲೆಗೊಳಿಸಿ ಅಟ್ಟಾಡಿ ಸುತ್ತಿರುವ ಪುರುಷನ ಅಮಾನವೀಯ ಕ್ರೌರ್ಯದ ದೃಶ್ಯವನ್ನು ಸಿಎನ್‌‌ಎನ್ ಹಾಗೂ ಟೈಮ್ಸ್ ಮಾಧ್ಯಮಗಳು ಪದೇ, ಪದೇ ತೋರಿಸು ತ್ತಿದ್ದವು. ಒಬ್ಬ ಮಹಿಳೆಯನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಆಕೆಯನ್ನು ಗೋಳುಹೊಯ್ದುಕೊಳ್ಳುವುದು ಇದು ನಾಗರಿಕ ಸಮಾಜದ ಲಕ್ಷಣಗಳಾ ??,


ಬಳಿಕ ಆಯೋಗ, ದೂರು-ದುಮ್ಮಾನಗಳು ಅಂತ ಗಮನಸೆಳೆದಾಗ ಮುಖ್ಯಮಂತ್ರಿಗಳು ಆಕೆಗೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಆರೋಪಿಗಳನ್ನು ಬಂಧಿಸಿದರು.ಮಾನ ಎಲ್ಲರಿಗೂ ಒಂದೇ, ಆಕೆಯ ದಯನೀಯ ಸ್ಥಿತಿಯನ್ನು ಕೋಟ್ಯಂತರ ಮಂದಿ ವೀಕ್ಷಿಸಿದ್ದರು. ಹಾಗೆ ಹೋದ ಮಾನ ಪರಿಹಾರ ಕೊಟ್ಟರೆ ಮತ್ತೆ ವಾಪಸು ಬರುತ್ತದೆಯಾ... ಯಾವ ಪರಿಹಾರ ಆಕೆಯ ಮಾನಸಿಕ ನೋವು, ಯಾತನೆಗಳನ್ನು ನೀಗಿಸುತ್ತದೆ..


ಅದರಂತೆಯೇ ಹೊಸ ವರ್ಷದ ಅಮಲಿನಲ್ಲಿ ಮುಂಬೈಯಲ್ಲಿ ಪಡ್ಡೆಗಳು ನಡೆಸಿದ ಮಹಿಳೆಯರ ಮೇಲಿನ ಚುಡಾಯಿಸುವ ಘಟನೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಗೋವಾ ಕಡಸ ಕಿನಾರೆಯಲ್ಲೂ ಅದೇ ತೆರನಾದ ಘಟನೆ ನಡೆಯಿತು. ವಿದೇ ಶಿ ಮಹಿಳೆ ಮೇಲೆ ಅತ್ಯಾಚಾರ ನಡೆಸಲಾಯಿತು. ಹೀಗೆ ಸಾಲು,ಸಾಲಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅಮಾನವೀಯ ಕೃತ್ಯಕ್ಕೆ ಸರಿಯಾದ ಕಾನೂನಾದರೂ ಬಂದಿದೆಯಾ.


ವರದಕ್ಷಿಣೆ ಹಿಂಸೆಗೆ ಬಲಿಯಾಗುವವರ ಸಂಖ್ಯೆ ಇಂದಿಗೂ ಮುಂದುವರಿದಿದೆ.ಭಾರತದಲ್ಲಿ ನಡೆಯುತ್ತಿರುವ ಆಸಿಡ್ ದಾಳಿ ಪ್ರಕರಣ ಗಳಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ. ಈವರೆಗೆ 58 ಪ್ರಕರಣಗಳು ನಡೆದಿವೆ. ಹೀಗೆ ಪುರುಷನ ವಿಕೃತಿಯ ದಾಳಿಗೆ ಸಿಲುಕಿದವರಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ಆಸಿಡ್ ದಾಳಿಯಿಂದ ಬದುಕುಳಿದ ಯುವತಿಯರು, ಮಹಿಳೆಯರು ನರಕಯಾತನೆ ಅನುಭವಿಸುತ್ತಿದ್ದಾರೆ.


ಇದೀಗ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಮಹಿಳಾ ಆಯೋಗ (ರಾತ್ರಿ ಪಾಳಿ ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ ನೀಡುವ ಬಗ್ಗೆ) ಐಟಿ-ಬಿಟಿ, ಕಾಲ್ ಸೆಂಟರ್, ಬಿಪಿಒಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ಕುರಿತು ವಿಶೇಷ ಕಾನೂನು ಜಾರಿಗೆ ತರಲು ಆಗ್ರಹಿಸುವುದಾಗಿ ಹೇಳಿದೆ. ಆದರೆ ಇತ್ತೀಚೆಗಷ್ಟೇ ಬಿಪಿಒ ಉದ್ಯೋಗಿ ಪ್ರತಿಭಾ ಹತ್ಯೆ ಕುರಿತು ಸರ್ವೊಚ್ಛನ್ಯಾಯಾಲಯ, ಮಹಿಳಾ ಸಿಬ್ಬಂದಿಯ ರಕ್ಷಣೆ ಕುರಿತು ಹೊಣೆಯನ್ನು ಕಂಪೆನಿ ಅಥವಾ ಸಾರಿಗೆ ಸೌಲಭ್ಯವನ್ನು ಒದಗಿಸುವ ಸಂಸ್ಥೆ ಹೊರಬೇಕೆ ಎಂಬುದಾಗಿ ಪ್ರಶ್ನಿಸಿತ್ತು. ( ಈ ಬಗ್ಗೆ ಸ್ಪಷ್ಟ ನಿಲುವು ನೀಡುವಂತೆ ಸುಪ್ರೀಂಕೋರ್ಟ್‌‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಆಯೋಗ ಹೇಳಿದೆ) ಹಾಗಾದರೆ ಮಹಿಳೆಯರ ಬದುಕಿಗೆ ರಕ್ಷಣೆ ನೀಡುವವರು ಯಾರು...,


Wednesday, February 27, 2008

ಬಾವಡಿ ಜಲಪಾತಕ್ಕೊಂದು ಸುತ್ತು...

ಮನಸ್ಸು ಒಮ್ಮೊಮ್ಮೆ ಲಂಗು ಲಗಾಮಿಲ್ಲದೆ ಓಡತೊಡಗಲು ಆರಂಭಿಸಿದಾಗ ಅದಕ್ಕೊಂದು ಬ್ರೇಕ್ ನೀಡಲು ಆಗಾಗ ಚಾರಣ, ಪಿಕ್‌‌ನಿಕ್ ಅಂತ ಸುತ್ತಾಡುತ್ತಿರುವುದೇ ತುಂಬಾ ಖುಷಿಯ ವಿಷಯವಾಗಿತ್ತು. ಕೊಲ್ಲೂರಿನ ಅರಸಿನ ಗುಂಡಿ ಜಲಪಾತ, ಬೆಳ್ಕಲ್‌ನ ಗೋವಿಂದ ತೀರ್ಥ, ಕೊಡಚಾದ್ರಿ ಬೆಟ್ಟ ಏರಿ ಇಳಿದು, ಕುಣಿದು ಕುಪ್ಪಳಿಸುತ್ತಿದ್ದೆವು.

ಜಲಪಾತಗಳಿಗೆ ಹಲವು ಬಾರಿ ಭೇಟಿ ಕೊಟ್ಟಾಗಲು ಆದೊಂದು ಥರ ದಿವ್ಯ ಆನಂದ ದೊರೆಯುತ್ತಿತ್ತು. ಕೊಲ್ಲೂರು ಸುತ್ತಮುತ್ತ ಪ್ರದೇಶವೇ ತುಂಬಾ ಆಹ್ಲಾದಕರವಾದದ್ದು. ಹೀಗೆ ನಾನು ಮತ್ತು ಕಿರಿಯ ಪತ್ರಕರ್ತ ಮಿತ್ರ ರಾಘವೇಂದ್ರ ಪಡುಕೋಣೆ ಕೊಲ್ಲೂರು ಭೇಟಿ ನಿರಂತರವಾಗಿದ್ದ ಸಂದರ್ಭದಲ್ಲಿ, ಅಲ್ಲಿನ ಸ್ಥಳೀಯ ರಮೇಶ್ ಗಾಣಿಗರು ಒಂದು ದಿನ ನೀವು ಅರಸಿನ ಗುಂಡಿ, ಬೆಳ್ಕಲ್ ಅಂತ ಪದೇ, ಪದೇ ಸುತ್ತಿದ್ದಲ್ಲೇ ಸುತ್ತುತ್ತೀರಿ, ಇಲ್ಲಿಯೇ ಮತ್ತೊಂದು ಜಲಪಾತ ಇದೆ ಅದನ್ನ ನೋಡಿದಿರಾ ಅಂತ ಪ್ರಶ್ನಿಸಿದ್ದರು.

ಅರೆ, ಇದ್ಯಾವುದಪ್ಪಾ ನಮ್ಮ ಲಿಸ್ಟ್‌‌ನಿಂದ ಜಾರಿಕೊಂಡ ಜಲಪಾತ ಅಂತ ಎಷ್ಟೇ ಭಾಗಾಕಾರ ಗುಣಕಾರ ಮಾಡಿದರೂ ಉತ್ತರ ದೊರೆಯದಿದ್ದಾಗ ,ಕೊನೆಗೆ ಅವರು, ಮಾಸ್ತಿಕಟ್ಟೆ ಸಮೀಪವೇ ಮಣ್ಣುರಸ್ತೆ ಇದೆಯಲ್ಲ ಅಲ್ಲಿಂದ ನೇರಕ್ಕೆ ಹೋದರೆ ನಿಮಗೆ ಬಾವಡಿ ಅಂತ ಊರು ಸಿಗುತ್ತೆ ಅಲ್ಲೇ ಒಂದೊಳ್ಳೆ ಜಲಪಾತ ಇದೆ ಒಮ್ಮೆ ಹೋಗುವ ಅಂತ ಹೇಳಿದ್ದರು.


ಗಾಣಿಗರು ಆ ವಿಚಾರ ಹೇಳಿದ ಮೇಲೆ ತಲೆಯಲ್ಲಿ ಜಲಪಾತ ನೋಡುವ ಹಂಬಲ ಜಾಸ್ತಿಯಾಗತೊಡಗಿತ್ತು. ನಮ್ಮ,ನಮ್ಮ ಕೆಲಸದ ಒತ್ತಡ ಅಲ್ಲಿಗೆ ಹೋಗಲು ಕಾಲ ಕೂಡಿ ಬರಲೇ ಇಲ್ಲ.

ಆದರೆ ನನ್ನ ಮನದೊಳಗೆ ಅದು ಕಾಡುತ್ತಲೇ ಇತ್ತು. ಕೊನೆಗೊಂದು ದಿನ ಹಿರಿಯರು, ಪತ್ರಕರ್ತ ಮಿತ್ರರಾದ ಶ್ರೀಪತಿ ಹಕ್ಲಾಡಿ ಇಬ್ಬರೆ ಸೇರಿ ಕೊಲ್ಲೂರಿನ (ದೇವಾಲಯಕ್ಕಿಂತ 1ಕಿ.ಮಿ.ಮೊದಲೇ ಈ ನಿಲ್ದಾಣ ಇದೆ) ಮಾಸ್ತಿಕಟ್ಟೆಯಲ್ಲಿ ಇಳಿದು ಕಾಲಿಗೆ ಚಕ್ರಕಟ್ಟಿಕೊಂಡವರ ಥರ ನಡೆಯತೊಡಗಿದೆವು, ಮುಂದೆ, ಮುಂದೆ ಹೋದಾಗ ದಟ್ಟಾರಣ್ಯದಲ್ಲಿ ಮರಗಳನ್ನು ಬಿಟ್ಟರೆ ಮನುಷ್ಯರೆಲ್ಲೂ ಕಾಣಿಸುತ್ತಲೆ ಇಲ್ಲ, ದಾರಿ ಮೊದಲೇ ಗೊತ್ತಿಲ್ಲ, ಯಾರಲ್ಲಿ ಕೇಳುವುದು, ಅಲ್ಲೊಂದು ದನ ಮೇಯುತ್ತಿತ್ತಾದರೂ ಅದಕ್ಕೆ ಮಾತು ಬರುವುದಿಲ್ಲವಲ್ಲ ಅಂತ ತಮಾಷೆ ಮಾಡುತ್ತ ಅಂದಾಜಿಗೆ ಗುಂಡು ಹೊಡೆದಂತೆ ನಡೆಯುತ್ತಾ ಸಾಗಿದೆವು.

ಸುಮಾರು ಏಳೆಂಟು ಕಿ.ಮಿ.ಕ್ರಮಿಸಿದ ನಂತರ ಆ ಅಭಯಾರಣ್ಯದೊಳಗೊಂದು ಮನೆ ಕಾಣಿಸಿತು, ಅಯ್ಯಬ್ಬಾ ಅಂತ ನಿಟ್ಟುಸಿರು ಬಿಟ್ಟು ಆ ಪ್ರದೇಶಕ್ಕೆ ತಲುಪಿದೆವು, (ಅಲ್ಲಿ ನಾಲ್ಕಾರು ಮನೆಗಳಿದ್ದವು, ನಮಗೆ ಆಶ್ಚರ್ಯ ವಾಗಿದ್ದು ಯಾವುದೆಂದರೆ, ಈ ಅಭಯಾರಣ್ಯದಲ್ಲಿ ಇವರು ಇಷ್ಟು ವರ್ಷ ಹೇಗೆ ಕಳೆದಿರಬಹುದು ಅಂತ, ಅವರ ಜೀವನದ ಬಗ್ಗೆ, ಅಕ್ಕಿ,ಸಾಮಾನು ಖರೀದಿ ಕುರಿತು ವಿಚಾರಿಸಿದಾಗ ಹೇಳಿದರು, ಏನೇ ಬೇಕಿದ್ದರೂ ಹತ್ತು ಕಿ.ಮಿ.ನಡೆದು ಕೊಲ್ಲೂರಿಗೆ ಬರಬೇಕಂತೆ.

ಆ ಕಾರಣಕ್ಕಾಗಿಯೇ ಮಕ್ಕಳು ಅರ್ಧಂಬರ್ಧ ಓದು ಮುಗಿಸಿ, ಹೋಟೆಲುಗಳಲ್ಲಿ ದುಡಿಯುತ್ತಿರುವುದಾಗಿ ತಿಳಿಸಿದರು. ರಾತ್ರಿ ಆನೆ, ಹುಲಿಗಳ ಕಾಟ ಜೀವ ಕೈಯಲ್ಲಿ ಹಿಡಿದು ಬದುಕು ಸಾಗಿಸಬೇಕು ಎಂದು ಸಂಕ್ಷಿಪ್ತ ವಿವರ ನೀಡಿದ್ದರು) ಆದಾಗಲೇ ಮಧ್ನಾಹ್ನ 2ಗಂಟೆ ದಾಟಿತ್ತು. ಮನೆಯಲ್ಲಿದ್ದವರು ಗಂಜಿ ಊಟ ಪೂರೈಸಿ, ಎಲೆ ಅಡಿಕೆ ತಿನ್ನುತ್ತಿದ್ದರು.

ನಾವು ಹೋಗುತ್ತಲೇ ಆತ್ಮೀಯತೆಯಿಂದ ನಮ್ಮನ್ನು ಬರಮಾಡಿಕೊಂಡು ವಿಚಾರಿಸತೊಡಗಿದರು. (ಆ ಸಂದ ರ್ಭದಲ್ಲಿ ನಕ್ಸಲೀಯರ ಹಾವಳಿ, ಓಡಾಟ ಆರಂಭವಾಗಿದ್ದರಿಂದ ನಮ್ಮನ್ನು ಅನುಮಾನದ ಮೇಲೆ ಮಾತನಾಡಿ ಸಿತೊಡಗಿದ್ದರು) ನಂತರ ಅವರಲ್ಲಿ ಈ ಊರಿಗೆ ಏನು ಹೆಸರು ಅಂತ ಕೇಳಿದೆವು, ಇದು ಬಾವಡಿ ಅಂದಾಗ, ಓಹ್ ಸರಿಯಾದ ಜಾಗಕ್ಕೆ ಬಂದಿದ್ದೆವು ಅಂತ ಒಳಗೊಳಗೆ ಖುಷಿಪಟ್ಟೆವು.

ಜಲಪಾತ (ಆದರೆ ಅವರಿಗೆ ಜಲಪಾತ ಅಂದರೆ ಪಕ್ಕನೆ ತಿಳಿಯಬೇಕಲ್ಲ, ನೀರು ಬೀಳುತ್ತದೆಯಂತಲ್ಲ ಅಂತ ಕೇಳಿದ್ದೇವು) ಇದೆಯಲ್ಲ ಎಲ್ಲಿ ಎಂದಾಗ, ನಮ್ಮ ಮನೆಯಿಂದ ಸ್ವಲ್ಪವೇ ದೂರದಲ್ಲಿ ನಾನೇ ನಿಮಗೆ ತೋರಿಸು ತ್ತೇನೆ ಎಂದು ನಮ್ಮ ಜತೆ ಬಂದಿದ್ದರು. ಹದಿನೈದು-ಇಪ್ಪತ್ತು ನಿಮಿಷಗಳ ಬಳಿಕ ನೋಡಿ ಇದೆ ಬಾವಡಿ ಜಲಪಾತ ಎಂದು ತೋರಿಸಿ, ನೋಡಿ ಇನ್ನು ನೀವುಂಟು ಜತೆಗೆ ಜಲಪಾತ ಇದೆ ಅಂತ ಹೊರಟು ಹೋಗಿದ್ದರು.

ತಿಂಗಳಾಗಿದ್ದರಿಂದ ಜಲಧಾರೆಯ ರಭಸ ಕಡಿಮೆ ಇದ್ದಿದ್ದರೂ ಕೂಡ ನಮಗೆ ತುಂಬಾ ಸಂತೋಷವಾಗಿತ್ತು, ಬೃಹದಾಕಾರದ ಬಂಡೆಯ ಎಡೆಯಿಂದ ಬಳಕುತ್ತ ನೆಲಕ್ಕೆ ಬಂದಪ್ಪಳಿಸುವ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಂಡಿದ್ದೆವು, ಸಂಜೆ ಅಲ್ಲಿಂದ ಹೊರಟು ಮನೆಯವರಿಗೆ ಕೃತಜ್ಞತೆ ಹೇಳಿ ಊರಿನತ್ತ ಪ್ರಯಾಣ ಬೆಳೆಸಿದ್ದೆವು...



Thursday, February 21, 2008

ಜೋಧಾ ಯಾರು?


ಇತಿಹಾಸದಲ್ಲಿನ ವಿಷಯಗಳೇ ಹೆಚ್ಚು ಬಾರಿ ವಿವಾದಕ್ಕೆ ಒಳಗಾಗುವುದು, ಅದು ನಿರಂತರ, ಯಾಕೆಂದರೆ ಇತಿಹಾಸ ಅಂದರೆ ಇತಿ-ಹೀಗೆ, ಹಾಸ-ಆಗಿತ್ತು ಎಂಬುದಾಗಿ ಅರ್ಥ. ಆದರೆ ಭಾರತದ ಇತಿಹಾಸದಲ್ಲಿ ನೈಜ ಇತಿಹಾಸ ಕೂಡ ಸಮಾಧಿಯಾಗಿದೆ. ಎಡ ಪಂಥೀಯ, ಬಲುಪಂಥೀಯ ಇತಿಹಾಸಕಾರರ ದೃಷ್ಟಿಕೋನಗಳಿಂದ ಲಭ್ಯವಿರುವ ಇತಿಹಾಸಗಳು ಒಂದೊಂದು ಕಥೆ ಹೇಳುತ್ತವೆ, ನಾವು ಯಾವುದನ್ನು ನಂಬಬೇಕು ಎಂಬ ಗೊಂದಲ ಮಾತ್ರ ನಮಗೆ ಉಳಿಯುವಂತಾದ್ದು.

ರಾಮನೂ ಸುಳ್ಳು, ರಾಮಾಯಣನೂ ಸುಳ್ಳು, ರಾಮ ಸೇತು ಸುಳ್ಳು, ಟಿಪ್ಪು ಕನ್ನಡ ವಿರೋಧಿ, ಅಲ್ಲ ಆತ ಕನ್ನಡ ಪರ, ಕೃಷ್ಣ ದೇವರಾಯನ ಕಾಲದಲ್ಲಿ ಬೀದಿ, ಬೀದಿಗಳಲ್ಲಿ ಚಿನ್ನಾಭರಣ ಮಾರಲಾಗುತ್ತಿತ್ತು, ಇಲ್ಲ ಅವೆಲ್ಲ ಸುಳ್ಳು, ಅವರೆಲ್ಲ ಪುಕ್ಕಲು ರಾಜರಾಗಿ ದ್ದರು, ಪುಲಕೇಶಿ ಪುಕ್ಕಲು ರಾಜನಾಗಿದ್ದ, ತಾಜ್ ಮಹಲ್ ಹಿಂದೂಗಳ ಶಿವ ದೇವಾಲಯವಾಗಿತ್ತು....ಹೀಗೆ ಇತಿಹಾಸದ ಎಲ್ಲವೂ ವಾದ-ವಿವಾದಗಳಿಗೆ ಎಡೆಯಾಗುತ್ತಲೇ ಇರುತ್ತದೆ.

ಇದೀಗ ವಿವಾದಕ್ಕೆ ಗ್ರಾಸವಾಗಿರುವುದು ಜೋಧಾ-ಅಕ್ಬರ್ ಐತಿಹಾಸಿಕ ಕಥೆಯ ಸಿನಿಮಾ. ಈ ಚಿತ್ರದಲ್ಲಿ ಜೋಧಾಳನ್ನು ಅಕ್ಬರನ ಪತ್ನಿಯನ್ನಾಗಿ ಚಿತ್ರಿಸಲಾಗಿದೆ. ಆದರೆ ರಜಪೂತ ಕೆಲವು ಸಂಘಟನೆಗಳು, ಜೋಧಾ ಅಕ್ಬರನ ಪತ್ನಿಯಲ್ಲ, ಪುತ್ರ ಸಲೀಂ(ಜಹಾಂ ಗೀರ್)ನ ಪತ್ನಿ ಎಂಬುದಾಗಿ ಆರೋಪಿಸುತ್ತಿದ್ದಾರೆ.ಆದರೆ ಇತಿಹಾಸ ಪುಟಗಳಲ್ಲಿ ದಾಖಲಾಗಿರುವ ಅಂಶಗಳನ್ನ ಗಮನಿಸಿ:

1542 ಅಕ್ಟೋಬರ್ 1 ರಂದು ಅಂಬರದ ರಾಜ ಬಾರಾಮಲ್‌‌ನ ಪ್ರಥಮ ಪುತ್ರಿಯಾಗಿ ಜನಿಸಿದವಳು ಹೀರಾ ಕುನ್ವರಿ (ಜೋಧಾ) ಇದು ಆಕೆಯ ಮೊದಲ ಹೆಸರು. 1562 ಜನವರಿ 20ರಂದು ಮೊಗಲ್ ದೊರೆ ಅಕ್ಬರ್ ಜೈಪುರ್ ಸಮೀಪದ ಸಾಂಭಾರ್ ಎಂಬಲ್ಲಿ ಹೀರಾ ಕುನ್ವರ್‌‌ಳನ್ನು ಮದುವೆಯಾಗಿದ್ದ. ನಂತರ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ ಬಳಿಕ ಹಿರಾ ಹೆಸರನ್ನು ಮಾರಿಮ್ ಉಜ್ ಜಮಾನಿ ಎಂಬುದಾಗಿ ಬದಲಾಯಿಸಲಾಗಿತ್ತು.

ಈಕೆ ಅಕ್ಬರನ ಆಸ್ಥಾನಕವಿಗಳಲ್ಲಿ ಒಬ್ಬನಾಗಿದ್ದ ಭಗವಾನ್‌‌ದಾಸ್ ತಂಗಿ. ಜೋಧಾ ಅಕ್ಬರನ ಮೂವರು ರಾಣಿಯರಲ್ಲಿ ಒಬ್ಬಳಗಾ ಗಿದ್ದಳು, ಮತ್ತು ಪ್ರಥಮ ರಜಪೂತ ಪತ್ನಿಯಾಗಿದ್ದಳು. 1586ರಲ್ಲಿ ಜಮಾನಿ (ಜೋಧಾ) ಯುವರಾಜ ಸಲೀಂ (ನಂತರದ ಹೆಸರು ಜಹಾಂಗೀರ್) ಮದುವೆ ಏರ್ಪಾಡು ಮಾಡಿ, ಮಾನ್‌‌ಸಿಂಗ್‌‌ನ ತಂಗಿ ಮಾನ್ಮಥಿಯೊಂದಿಗೆ ವಿವಾಹ ನಡೆಸಲಾಗುತ್ತದೆ. ಹೀರಾ(ಜೋಧಾ) 1611ರಲ್ಲಿ ಸಾವನ್ನಪ್ಪಿದ್ದಳು.

ಆಕೆಗಾಗಿ ಜಹಾಂಗೀರ್ 1611ರಲ್ಲಿ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿ ಬಳಿಯ ಫತೆಪುರ್ ಸಿಕ್ರಿಯಲ್ಲಿ ಸ್ಮಾರಕವನ್ನು ಕಟ್ಟಿಸಿದ್ದ. ಆದರೆ ಗೊಂದಲ ಆರಂಭವಾಗಿದ್ದು, ಅಕ್ಬರನ ಜೀವನಚರಿತ್ರೆಯ ಅಕ್ಬರ್‌‌ನಾಮಾದಲ್ಲಾಗಲಿ, ಜಹಾಂಗೀರ್‌‌ನ ತುಜ್ಕ್ ಎ ಜಹಾಂಗೀರಿಯಲ್ಲಾಗಲಿ ಎಲ್ಲೂ ಜೋಧಾಬಾಯ್ ಎಂಬ ಹೆಸರು ನಮೂದಾಗಿಲ್ಲ, ಎಲ್ಲೆಡೆ ಮಾರಿಮ್ ಉಜ್ ಜಮಾನಿ ಅಂತಲೇ ಉಲ್ಲೇಖಿಸಲಾಗಿದೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಪ್ರೊ.ಶಿರನ್ ಮಾನ್ವಿ ಅವರ ಪ್ರಕಾರ, 18-19ನೇ ಶತಮಾನದ ಇತಿಹಾಸಕಾರರು ಪ್ರಥಮವಾಗಿ ಜೋಧಾಬಾಯ್ ಹೆಸರನ್ನು ನಮೂದಿಸಿದ್ದರು ಎನ್ನುತ್ತಾರೆ.

ಪಾಟ್ನಾ ಖುದಾ ಭಕ್ಷ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ, ಇತಿಹಾಸ ತಜ್ಞ ಇಮ್ತಿಯಾಜ್ ಅಹ್ಮದ್ ಅವರು, ಅಕ್ಬರನ ಪತ್ನಿ ಜೋಧಾ ಎಂಬುದಾಗಿ ಪ್ರಥಮವಾಗಿ ನೌಕಾಪಡೆಯ ಕಿರಿಯ ಅಧಿಕಾರಿ ಕರ್ನಲ್ ಜೆಮ್ಸ್ ಟೋಡ್ ಅವರು ಅನ್ನಾಲ್ಸ್ ಅಂಡ್ ಆಂಟಿಕ್ವಿಟಿಸ್ ಆಫ್ ರಾಜಸ್ಥಾನ್ ಪುಸ್ತಕದಲ್ಲಿ ಉಲ್ಲೇಖಿಸಿದ್ದರು. ಆದರೆ ಟೋಡ್ ಒಬ್ಬ ಇತಿಹಾಸಕಾರನಲ್ಲ, ಜನಪದ ಸಾಹಿತ್ಯದ ಅಂಶ ಪಡೆದು ದಾಖಲಿಸಿದ್ದಾನೆ ಎಂಬುದಾಗಿ ಹೇಳುತ್ತಾರೆ.

ಅಲ್ಲದೇ ಮೊಗಲ್ ಎ ಅಜಾಮ್ ಎಂಬ ಸಿನಿಮಾದ ಬಳಿಕ ಜೋಧಾ-ಅಕ್ಬರ್ ಹೆಸರು ಹೆಚ್ಚು ಜನಪ್ರಿಯವಾಯಿತು. ಜೋಧಾ ಬಾ ಯ್ ಎಂಬುದು ಅಕ್ಬರನ ರಜಪೂತ ರಾಣಿಯ ಹೆಸರಲ್ಲ, ಇದು ಜಹಾಂಗೀರನ ಪತ್ನಿಯ ಎಂಬುದು ಎಂ.ಎನ್.ಫಾರುಕಿ ವಾದ. ಜೋಧಾ ಬಾಯ್ ಅಥವಾ ಜೋಧಿ ಬೀಬಿ ಉದಯ ಸಿಂಗ್‌‌ನ ಪುತ್ರಿ ಮತ್ತು ಜಹಾಂಗೀರನ ಪತ್ನಿ ,ಖುರ್ರಮ್‌‌ನ (ಷಹಜಹಾನ್) ತಾ ಯಿ ಎಂಬುದು ಇತಿಹಾಸಕಾರ ಗೋಸಾಯ್ ವಿವರಣೆ.ಜಹಾಂಗೀರ್ ಜನಿಸಿದ್ದು 1569 ಅಗೋಸ್ಟ್ 31 ರಲ್ಲಿ, ಜೋಧಾ ಜನಿಸಿದ್ದು, 1542ರಲ್ಲಿ ಈ ಅಂಕಿ-ಅಂಶದ ಪ್ರಕಾರ ನೋಡಿದರೂ ಜೋಧಾ ಜಹಾಂಗೀರ್‌‌ಗಿಂತ 27ವರ್ಷ ಹಿರಿಯವಳು.

ಆದರೂ ಇತಿಹಾಸಕಾರರಲ್ಲಿ ಅನೇಕರೂ ಜೋಧಾಬಾಯ್ ಅಕ್ಬರನ ಪತ್ನಿ ಎಂಬುದಾಗಿಯೇ ದಾಖಲಿಸಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು ಎಂದು ನಿರ್ಧರಿಸುವುದು ಇನ್ನೂ ಗೊಂದಲದ ವಿಷಯವಾಗಿದೆ.

ಅಮೆರಿಕಕ್ಕೆ ಸಿಂಹಸ್ವಪ್ನವಾದ ಕ್ಯಾಸ್ಟ್ರೋ


ಕ್ಯೂಬಾದ ಕ್ರಾಂತಿಕಾರಿ ಫಿಡಲ್ ಕ್ಯಾಸ್ಟ್ರೋ ಅವರು (ಫೆ19) ಅಧಿಕೃತವಾಗಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕ್ಯಾಸ್ಟ್ರೋ ಅವರ ಜೀವನಗಾಥೆಯೇ ರೋಮಾಂಚಕವಾದದ್ದು, 1926,ಆಗೋಸ್ಟ್ 13ರಂದು ಶ್ರೀಮಂತ ಮನೆತನದಲ್ಲಿ ಹುಟ್ಟಿದ ಫಿಡಲ್ ಕ್ಯಾಥೋಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಬಳಿಕ ಹವಾನ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದರು.

ಬೇಸ್ ಬಾಲ್ ಆಟಗಾರನಾಗಿದ್ದ ಕ್ಯಾಸ್ಟ್ರೋ, ಅಮೆರಿಕ ನಡೆಸುವ ಲೀಗ್‌‌ ಪಂದ್ಯಾಟದಲ್ಲಿ ಮಹತ್ತರವಾದದ್ದನ್ನು ಸಾಧಿಸಬೇಕು ಎನ್ನುವ ಕನಸು ಕಂಡಿದ್ದರು.

ಆದರೆ ನಂತರ ಅವರು ಕ್ರಾಂತಿಕಾರಿ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸುವಂತಾಯಿತು. ದ್ವೀಪಪ್ರದೇಶವಾದ ಕ್ಯೂಬಾ ದಲ್ಲಿನ ವಸಾಹತುಶಾಹಿ ವ್ಯವಸ್ಥೆ ಹಾಗೂ ಸರ್ವಾಧಿಕಾರಿ ಪುಲ್‌‌ಜೆನ್ಸಿಯೋ ಬಾಟಿಸ್ತಾ ವಿರುದ್ಧ ಚೆಗವೇರಾ (ಲ್ಯಾಟಿನ್ ಅಮೆರಿಕದ ಲ್ಲಿನ ಗೆರಿಲ್ಲಾ ಯುದ್ಧದ ಕ್ರಾಂತಿಕಾರಿ), ರೌಲ್ ಕ್ಯಾಸ್ಟ್ರೋ , ಫಿಡೆಲ್, ಕ್ಯಾಮಿಲಿಯೋ (1959ರಲ್ಲಿ ವಿಮಾನದುರಂತದಲ್ಲಿ ಬಲಿ), ಫ್ರ್ಯಾಂಕ್ ಪಾಯಸ್ ನೇತೃತ್ವದ ತಂಡ ಕೇವಲ 82 ಜನರ ಗುಂಪಿನೊಂದಿಗೆ ಸಶಸ್ತ್ರ ಹೋರಾಟಕ್ಕೆ ಧುಮುಕಿದ್ದರು.

ಈ ವಿಶ್ವದ ಮಹಾನ್ ಪ್ರಜಾಪ್ರಭುತ್ವ ದೇಶ, ಮಾನವ ಹಕ್ಕುಗಳ ಏಕೈಕ ಸಂರಕ್ಷಕ , ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ಹೋರಾಡುವ ದೇಶ ಎಂದು ಬಾಯಿಬಡಿದುಕೊಳ್ಳುತ್ತಿರುವ ರಕ್ತಪಿಪಾಸು, ಅಮೆರಿಕ ಇಂತಹ ಗೋ ಮುಖ ವ್ಯಾಘ್ರತನ, ಕಪಟ ನಾಟಕದ ಮೂಲಕ ಅದು ಎಸಗಿರುವ ಅಪರಾಧಗಳ ಪಟ್ಟಿಯೇ ಆಘಾತಕಾರಿಯಾದದ್ದು.ಅಮೆರಿಕದ ರಕ್ತಪಿಪಾಸು, ಸಾಮ್ರಾಜ್ಯಶಾಹಿ ಕಬಂಧಬಾಹುವಿಗೆ ವೆನಿಜುಲಾ, ಪೆರಾಗ್ವೆ, ಕೋಸೋರಿಕಾ, ಅರ್ಜೈಂಟೀನಾ, ಬೊಲಿವಿಯಾ, ವಿಯೆಟ್ನಾಂ, ಕಾಂಬೋಡಿಯಾ, ಚಿಲಿ, ಸಾಲ್ವೋಡಾರ್, ಲಿಬಿಯಾ, ಲೆಬನಾನ್, ಕ್ಯೂಬಾ, ಇರಾನ್, ಇರಾಕ್, ಅಷ್ಟೇ ಅಲ್ಲ ನಮ್ಮ ದೇಶದಲ್ಲೂ ವಿಚ್ಛಿದ್ರಕಾರಿ ಶಕ್ತಿಗಳಿಗೆ ಹಾಗೂ ಪ್ರತ್ಯೇಕವಾದಿಗಳಿಗೆ, ಕಟ್ಟಾ ಎಡಪಂಥಿ ಮತ್ತು ಬಲಪಂಥಿಯ ಸಂಘಟನೆಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಸದಾ ದೇಶದಲ್ಲಿ ಅರಾಜಕತೆಯನ್ನು ಹುಟ್ಟುಹಾಕುವಲ್ಲಿ ನಿಸ್ಸೀಮವಾಗಿದೆ.

ಅಮೆರಿಕದ ಸಾಮ್ರಾಜ್ಯಶಾಹಿತನಕ್ಕೆ ಅದು ನಡೆಸಿದ ಕುಟಿಲ ರಾಜನೀತಿಯಿಂದಾಗಿ ಲಕ್ಷಾಂತರ ಮಂದಿ ಹತರಾಗಿದ್ದಾರೆ, ಮಾನವಹಕ್ಕು ಉಲ್ಲಂಘನೆ, ಅಂತಾರಾಷ್ಟ್ರೀಯ ಭಯೋತ್ಪಾದನೆ ಎಂದು ಬೊಬ್ಬಿರುವ ಅಮೆರಿಕದ ಎಸಗಿರುವ ಕರ್ಮಕಾಂಡಕ್ಕೆ ಅದ್ಯಾವ ಶಿಕ್ಷೆಗೆ ಒಳಪಡಿಸಬೇಕು.ಇಂತಹ ಸಾಮ್ರಾಜ್ಯಶಾಹಿ ದೇಶದ ಅಬ್ಬರ, ಕೊಲೆ ಪ್ರಯತ್ನವನ್ನೆಲ್ಲಾ ಮೆಟ್ಟಿನಿಂತು ಸೆಡ್ಡು ಹೊಡೆದ ಏಕೈಕ ವ್ಯಕ್ತಿಯೆಂದರೆ ಫಿಡಲ್ ಕ್ಯಾಸ್ಟ್ರೋ. ಕ್ಯೂಬಾವನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆ ಇಂದಿಗೂ ನೆರವೇರಿಲ್ಲ.

ಕ್ಯಾಸ್ಟ್ರೋವನ್ನು ಹತ್ಯೆಗೈಯಲು ಅಮೆರಿಕದ ಸಿಐಎ ಸುಮಾರು 600ಕ್ಕೂ ಅಧಿಕ ಬಾರಿ ಪ್ರಯತ್ನಿಸಿತ್ತು!!.ಆದರೂ ಕ್ಯಾಸ್ಟ್ರೋ ಅವೆಲ್ಲ ಅಪಾಯದಿಂದ ಪಾರಾಗಿ ಅಮೆರಿಕದ ನಿದ್ದೆಗೆಡಿಸಿದ ಕ್ರಾಂತಿಕಾರಿಯಾಗಿದ್ದರು. 50 ವರ್ಷಗಳ ಕಾಲ ಕ್ಯೂಬಾವನ್ನು ಕೆಚ್ಚೆದೆಯಿಂದ ಮುನ್ನೆಡಿಸಿದ ಕ್ಯಾಸ್ಟ್ರೋ ದೇಶದಲ್ಲಿ ಸಾಕ್ಷರತೆ, ಮನೆ, ಆರೋಗ್ಯ ಎಲ್ಲವೂ ಅಭಿವೃದ್ಧಿ ಪಥದಲ್ಲಿದ್ದರೂ ಕೂಡ, ಇಂದಿಗೂ ಕ್ಯೂಬಾ ಆರ್ಥಿಕವಾಗಿ ತುಂಬಾ ದುರ್ಬಲವಾಗಿದೆ, ಮತ್ತೊಂದೆಡೆ ಸ್ವಾತಂತ್ರ್ಯಕ್ಕಾಗಿ ಹಪಹಪಿಸುವವರ ಸಂಖ್ಯೆಯೂ ಕಡಿಮೆಯಾಗಿಲ್ಲ.

ಇದೆ ವಿಷಯದಲ್ಲಿ ಫಿಡೆಲ್ ಅವರನ್ನು ಹಳಿಯುವವರೂ ಬಹಳಷ್ಟು ಮಂದಿ ಇದ್ದಾರೆ. ಫಿಡೆಲ್ ಸರ್ವಾಧಿಕಾರತನದಿಂದಾಗಿ ಕ್ಯೂಬಾ ವನ್ನು ಆರ್ಥಿಕ ದುಸ್ಥಿತಿಗೆ ತಳ್ಳಿದ್ದಾರೆ ಎಂಬುದಾಗಿ ಆಪಾದಿಸಲಾಗುತ್ತಿದೆ. ಆದರೆ ಅಮೆರಿಕದಂತಹ ರಕ್ತ ಪಿಪಾಸು ದೇಶಕ್ಕೆ ಸಿಂಹ ಸ್ವಪ್ನವಾಗಿ ಒಂದು ದೇಶವನ್ನು ಸತತ 50 ವರ್ಷಗಳ ಕಾಲ ಮುನ್ನೆಡೆಸುವುದು ಸುಲಭದ ಮಾತಲ್ಲ. ಕ್ಯಾಸ್ಟ್ರೋ ಇನ್ನೊಬ್ಬ ನಾಯ ಕನನ್ನು ಬೆಳೆಸದಿರಬಹುದು. ಆತ ತನ್ನ ದೇಶದ ಜನರಿಗಾಗಿ ಹಾಗೂ ಜನರು ಈತನಿಗೆ ನೀಡಿದ ಬೆಂಬಲ ಮಾತ್ರ ಅಮೋಘವಾದದ್ದು.

ಸಮಾಜವಾದಿ, ಸಾಮ್ರಾಜ್ಯಶಾಹಿ ಅರ್ಥಹೀನ ಎನಿಸಿಕೊಂಡರೂ ಕೂಡ ,ಅಮೆರಿಕದಂತಹ ದೇಶ ಸೋಗಿನ ಮಾತು ಹಾಗೂ ಬಲವಂತದ ಆಕ್ರಮಣ, ಕುಯುಕ್ತಿಯಿಂದಾಗಿ ಇಂದು ನೂರಾರು ದೇಶಗಳು ಆಂತರಿಕ ಕಲಹದಿಂದ ಹೊತ್ತಿ ಉರಿಯುತ್ತಿವೆ ಎಂಬುದನ್ನು ಗಮನಿಸಬೇಕು. ಅದು ಪಕ್ಕಾ ವ್ಯಾವಹಾರಿಕವಾಗಿ ವರ್ತಿಸುತ್ತಿದೆ. ಕ್ಯೂಬಾ ಫಿಡೆಲ್ ಅವರ ಸರ್ವಾಧಿಕಾರದಿಂದ ನರಳಿದರೆ, ಅಮೆರಿಕದ ಸಾಮ್ರಾಜ್ಯಶಾಹಿ ವ್ಯವಸ್ಥೆಗೆ ನೂರಾರು ದೇಶಗಳು ಬಲಿಪಶುವಾಗಿದೆಯಲ್ಲ ಅದಕ್ಕೆ ಏನೆನ್ನೋಣ ?.

ಫಿಡೆಲ್, ಚೆಗುವೆರಾ, ರೌಲ್ ಅವರು ಸಣ್ಣ ಗುಂಪಿನೊಂದಿಗೆ ಸಂಘಟಿಸಿದ ಗೆರಿಲ್ಲಾ ಪಡೆಯ ಯುದ್ಧ ಹಾಗೂ ಜನತೆಯ ಸಹಕಾ ರದಿಂದ ಕ್ಯೂಬಾದ ಸರ್ವಾಧಿಕಾರಿ ಬತಿಸ್ತಾ ಅವರಿಂದ 1959 ಜನವರಿ 1ರಂದು ಮುಕ್ತಿಗೊಳಿಸಿತ್ತು. ಫಿಡೆಲ್ ಸತತ 15 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. 1960ರಲ್ಲಿ ಫಿಡೆಲ್ ದೇಶದ ಅಧಿಕಾರದ ಗದ್ದುಗೆ ಏರಿದ ಮೇಲೆ ಅಮೆರಿಕದ ಸಹಾಯವನ್ನು ತಿರಸ್ಕರಿಸಿದ್ದರು. ತದನಂತರ ಅಮೆರಿಕದ ಕ್ಯೂಬಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಸಕ್ಕರೆಯನ್ನು ನಿಷೇಧಿಸಿತ್ತು.

ಈ ಸಂದರ್ಭದಲ್ಲಿ ಎಲ್ಲ ರೀತಿಯಿಂದಲೂ ಸಹಾಯ ನೀಡಿದ್ದು ರಷ್ಯಾ.ಇಂದು ಹೆಚ್ಚು ಕಡಿಮೆ ಜಗತ್ತಿನ ಅನೇಕ ದೇಶಗಳು ಅಮೆರಿಕದ ದಾಸರಾಗಿವೆ. ಜಾಗತೀಕರಣದ ಹೆಸರಲ್ಲಿ ಅದಾಗಲೇ ತಳವೂರಿ, ತನಗೆ ಬೇಕಾದ ಹಾಗೆ ವರ್ತಿಸುವುದು ಅಮೆರಿಕಕ್ಕೆ ಚೆನ್ನಾಗಿ ಗೊತ್ತು. ಅಮೆರಿಕವೇ ಬೆಳೆಸಿದ ಭಯೋತ್ಪಾದನೆ ಇಂದು ಆ ದೇಶವನ್ನು ಬಲಿ ತೆಗೆಯಲು ಹೊರಟಿದೆ. ಸಿಐಎ ಪ್ರಪಂಚದಲ್ಲಿ ನಡೆಸಿದ ಸಂಚುಗಳ ಜಗಜ್ಜಾಹೀರಾಗಿವೆ.

ಅಮೆರಿಕ ಎಕ್ಸಪಿರಿಯನ್ಸ್ ಬ್ಲಾಗ್‌‌ನಲ್ಲಿ ಫಿಡೆಲ್ ಕ್ಯಾಸ್ಟ್ರೋ ಕುರಿತ ಬರಹಕ್ಕೆ ಕ್ಯಾಲಿಫೋರ್ನಿಯಾದಿಂದ ಪ್ರತಿಕ್ರಿಯಿಸಿದ ಓದುಗರೊ ಬ್ಬರ ಪ್ರತಿಕ್ರಿಯೆಯನ್ನು ಇಲ್ಲಿ ಬಳಸಿಕೊಂಡಿದ್ದೇನೆ.
( I have gone to Cuba 4 different times under licensed travel. My experiences completely flew in the face of what I expected from what I now know as U.S. propaganda. The results of the revolution are powerful and wonderful. Cuba is a place where you can experience a society without racism. The population is literate, nearly 100% -- much higher than ours. Education is free -- tuition, books, and a stipend -- for all levels, including medical school, law school, art school, whatever. Even adults who want to change careers re-enter the university mid-life, free. I experienced freedom of religion -- Fidel is open to all things,

as long as they are not against the values of social justice that are the heart of the revolution. Your approach at PBS has been slanted against what I have come to know is the truth. Cuba is, however, a threat to the U.S. way of doing business in the world -- the threat of a good idea, said one international scholar.Cuba IS actually an ownership society -- everyone has a home, there are no homeless. They pay the government 10% of their income toward ownership. Of course, there is economic poverty, the result, they believe, of our 40+ years of blockade and economic warfare.

We refuse to let them pay reparation for the land they nationalized -- all other nations have done so, and now have business partnerships on the island. The bottom line -- that Cuba has the lowest infant mortality rate and the highest literacy rate in the Western Hemisphere -- speaks well for Fidel. Of course he is strong. He is brilliant, idealistic, charismatic, a leader loved by many worldwide... when the U.S. stops sending millions of $s to fund mercenaries on the island to work against the revolution, then Cubans will be able to have greater political freedoms. They now have human rights (education, jobs, food, shelter, health care) -- now they wait for greater political rights, when the playing field of their sovereignty is respected.)
G.R.A.Encinitas, California


Wednesday, February 13, 2008

''ಪ್ರೇಮಲೋಕ'' ದ ವಿಸ್ಮಯ..!!


ಅಲ್ಲಿ ಎಲ್ಲವೂ ಇದೆ, ಕೊಂಚ ಮುನಿಸು, ಕೊಂಚ ಜಗಳ, ಈರ್ಷ್ಯೆ, ಮತ್ಸರ, ಬಾಹುಕತೆ, ಧಾರಾಳತನ, ಸ್ನೇಹಪರತೆ, ಹೃದಯ ವೈಶಾಲ್ಯತೆ, ನಿಷ್ಕಲ್ಮಶವಾದ ಹಾಗೂ ವಂಚನೆ, ಮದುವೆ, ವಿಚ್ಛೇದನ ಹೀಗೆ ಎಲ್ಲವೂ, ಇದೆ ಅಲ್ಲವೇ ''ಪ್ರೇಮಲೋಕ''..ಪ್ರೀತಿ ಕುರುಡು ಎಂಬ ಮಾತೊಂದಿದೆ, ಪ್ರೀತಿಯೇ ಹಾಗೆ ಅದು ಜಾತಿ, ಅಂತಸ್ತು, ವಯಸ್ಸು ಎಲ್ಲವನ್ನೂ ದಾಟಿ ಪ್ರೇಮಾಲಾಪದಲ್ಲಿ ಅವೆಲ್ಲವೂ ಕೊಚ್ಚಿಹೋಗಿ ಅಲ್ಲಿ ಪ್ರೇಮದ ಅಮೃತಧಾರೆ ಹರಿಯುತ್ತಿರುತ್ತದೆ.....

ವಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪಕ್ಕನೆ ನೆನಪಿಗೆ ಬಂದದ್ದೇ , ಯಶೋಧರ ಚರಿತೆ...ಇತಿಹಾಸ ಹಾಗೂ ಪುರಾಣ ಸೇರಿದಂತೆ ಕನ್ನಡದ ಕಾವ್ಯ ಪರಂಪರೆಯಲ್ಲಿ ಇಂತಹ ಅದ್ಭುತ ಪ್ರೇಮಕಾವ್ಯಗಳು ಹೇರಳವಾಗಿವೆ. ಪ್ರೀತಿ ಕುರುಡು ಮತ್ತು ಅದು ಎಲ್ಲವನ್ನೂ ಮೀರಿ ಹೇಗೆ ಪ್ರೇಮಪಾಶದೊಳಕ್ಕೆ ಬಂಧಿಯಾಗುತ್ತಾರೆ ಎಂಬುದಕ್ಕೆ ಕನ್ನಡದ ರನ್ನತ್ರಯರಲ್ಲಿ ಒಬ್ಬನಾದ ಜನ್ನ ಕವಿಯ ಯಶೋಧರ ಚರಿತೆ ಉತ್ತಮ ಪ್ರೇಮ ಕಾವ್ಯವಾಗಿದೆ.

ಜನ್ನ ಕವಿ ರಚಿಸಿದ ಯಶೋಧರ ಚರಿತೆ ಸಂಕಲ್ಪ ಹಿಂಸೆ ಕೃತಿಯ ಕೇಂದ್ರ ಬಿಂದುವಾದರೂ ಕೂಡಾ ಅದು ಈಗಲೂ ಕಾಡುವ ಸುಂದರವಾದ ಪ್ರೇಮ ಕಥನ...ಯಶೋಧರ ರಾಜನ (ಯಕ್ಷಗಾನದ ಖ್ಯಾತ ಭಾಗವತರಾದ ದಿ.ಪಿ.ಕಾಳಿಂಗ ರಾವ್ ಅವರ ಅಮೃತಮತಿ ಯಕ್ಷಗಾನವೂ ಕೂಡ ಬಹಳಷ್ಟು ಹೆಸರು ಗಳಿಸಿತ್ತಲ್ಲದೆ, ಕಾಳಿಂಗ ರಾವ್ ಅವರ ಕಂಚಿನ ಕಂಠದಿಂದ ಹೊರಹೊಮ್ಮುತ್ತಿದ್ದ ಅದರಲ್ಲಿನ ರೂಪಕ ರಾಗಗಳು ಕೇಳುಗರ ಮತ್ತೇರಿಸುತ್ತಿತ್ತು, ಆ ಪದಗಳು ಈಗಲೂ ಕಿವಿಯಲ್ಲಿ ರಿಂಗಣಿಸುತ್ತದೆ)
ಪತ್ನಿ, ರಾಣಿ ಅಮೃತಮತಿ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದ ಆಕೆಗೆ ಸಕಲ ಐಶ್ವರ್ಯವೂ ಇದ್ದಿತ್ತು. ಆದರೆ ಅಂತಹ ಚೆಲುವಿನ ಅಮೃತಮತಿಗೆ, ಅರಮನೆಯ ಪಕ್ಕದಿಂದ ತೇಲಿಬರುತ್ತಿದ್ದ ಕೊಳಲನಾದ ಆಕೆಯ ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸುತ್ತದೆ. ರಾಗದ ಜಾಡನ್ನು ಹಿಡಿದು ಅರಸುತ್ತ ಬಂದ ಆಕೆಗೆ ಕಾಣಸಿಕ್ಕಿದ್ದು, ಅರಮನೆಯ ಮಾವುತ.

ರೂಪದಿಂದ ಚೆಲುವನಲ್ಲದ್ದರೂ ಆತನ ಕೊಳಲಿನಿಂದ ಹೊರಹೊಮ್ಮುವ ರಾಗ ಅಮೃತಮತಿಯನ್ನು ಬಿಟ್ಟುಬಿಡದೆ ಕಾಡುತ್ತೇ, ಈ ನಾದಕ್ಕೆ ಸೋತ ರಾಣಿ ಅಮೃತಮತಿ ಮಾವುತನಿಗೆ ಮನಸ್ಸು ಮತ್ತು ದೇಹವನ್ನೂಪ್ಪಿಸುತ್ತಾಳೆ. ಹೀಗೆ ಮಾವುತನೊಂದಿಗೆ ಅಮೃತಮತಿ ಪ್ರೇಮ ಸಲ್ಲಾಪ ನಿರಂತರವಾಗಿ ನಡೆಯುತ್ತಿರುತ್ತದೆ. ಒಮ್ಮೆ ರಾಜ ಅಮೃತಮತಿಯನ್ನು ಹಿಂಬಾಲಿಸಿ ಬಂದಾಗ, ಆತ ಕಂಡದ್ದು, ಮಾವುತನ ತೋಳತೆಕ್ಕೆಯಲ್ಲಿ ಬಂಧಿಯಾಗಿದ್ದ ರಾಣಿ ಅಮೃತಮತಿಯನ್ನ!!, ಆ ಕ್ಷಣದಲ್ಲೇ ಆಕೆಯನ್ನು ಕೊಲ್ಲಬೇಕೆಂದು ಸಂಕಲ್ಪಿಸುತ್ತಾನೆ, ಆದರೆ ಜಿನ ಧರ್ಮ ಆತನನ್ನ ತಡೆಯುತ್ತೆ, ಆಕೆಯ ವಿಷಯ ತಿಳಿದೂ ಯಶೋಧರ ಸುಮ್ಮನಿರುತ್ತಾನೆ.

ಆದರೆ ರಾಜನ ತಾಯಿ ರಾಜಮಾತೆ ಚಂದ್ರಮತಿಗೆ ಮಗನ ಬೇಗುದಿ ತಿಳಿಯುತ್ತೆ, ಸಂಕಲ್ಪ ಹಿಂಸೆಯನ್ನು ನಿವಾರಿಸಲು ಹಿಟ್ಟಿನ ಕೋಳಿ ಬಲಿ ಕೊಡಲು ನಿರ್ಧರಿಸುತ್ತಾರೆ. ಆದರೆ ಬಲಿಕೊಡುವ ಸಂದರ್ಭದಲ್ಲಿ ಹಿಟ್ಟಿನ ಕೋಳಿ ಒಳಗೆ ಸೇರಿಕೊಂಡಿದ್ದ ಪ್ರೇತಾತ್ಮವೊಂದು ಜೀವತಳೆದು ಕಿರುಚಿಕೊಳ್ಳುತ್ತದೆ. ಅದು ಮತ್ತೆ ಸಂಕಲ್ಪ ಹಿಂಸೆಯಾಗಿ ಕಾಡತೊಡಗುತ್ತದೆ. ಮುಂದೆ ಯಶೋಧರ ಮತ್ತು ಚಂದ್ರಮತಿ ಪಶು-ಪಕ್ಷಿ ನಾನಾ ವಿಧದಲ್ಲಿ ಜನ್ಮವೆತ್ತಿ , ಅಂತಿಮವಾಗಿ ಅಭಯ ರುಚಿ ಹಾಗೂ ಅಭಯಮತಿ ಎಂಬ ಅಣ್ಣ-ತಂಗಿಯರಾಗಿ ಹುಟ್ಟುತ್ತಾರೆ.

ಅದೇ ರೀತಿ ಜನ್ನನ ಅನಂತನಾಥ ಪುರಾಣ, 13ನೇ ಶತಮಾನದ ದೇವ ಕವಿಯ ಕುಸುಮಾವಳಿ, ನೇಮಿಚಂದ್ರನ ಲೀಲಾವತಿ, ಬಾಣನ ಕಾದಂಬರಿ, ಸುವಿಂಧುವಿನ ವಾಸವದತ್ತೆ, ಬೌದ್ಧ ಸಾಹಿತ್ಯದ ಮಣಿಚೋರ ಜಾತಕ, ಶುಭೆಯ ಕಥೆ, ಮಹಾಭಾರತದಲ್ಲಿನ ನಳದಮಯಂತಿ, ಕನಕದಾಸರ ಮೋಹನ ತರಂಗಿಣಿ ಸೇರಿದಂತೆ ದೇಶಿಯ ಮತ್ತು ಪೌರಾತ್ಯ ಸಾಹಿತ್ಯಗಳ ಕಾವ್ಯ ಪ್ರಪಂಚದಲ್ಲಿ ಇಂತಹ ಹಲವಾರು ಪ್ರೇಮ ಕಾವ್ಯಗಳು ದೊರೆಯುತ್ತದೆ.